ನಮ್ಮ ಭಾವನೆ – ನಮ್ಮ ಸಾಧನೆ
ಗಾಳಿ, ಬೆಂಕಿ ಮತ್ತು ನೀರು ಈ ಮೂರು ರೌದ್ರಾವತಾರ ತಾಳಿದರೆ ಜನರ ಸ್ಥಿತಿ ಮತ್ತು ಈ ಜಗದ ಪರಿಸ್ಥಿತಿ ಅಂಧಕಾರದತ್ತ ಹೋಗುತ್ತದೆ. ನಾವೆಷ್ಟೇ ಬುದ್ದಿವಂತರಾದರು ನಮ್ಮನ್ನು ಮೀರಿಸುವ ಬುದ್ದಿದಾತ, ಸೂತ್ರದಾತ ಎಂಬ ಕಾಣದ ವಿಸ್ಮಯವೊಂದು ಅಂದಿನಿಂದ ಇಂದಿನವರೆಗೆ ಬೇರೆ ಬೇರೆ ರೂಪಗಳಲ್ಲಿ ಕಂಡುಬಂದಿದೆ ಮತ್ತು ಮುಂದೆಯೂ ತನ್ನ ಇರುವಿಕೆಯನ್ನು ಖಚಿತಪಡಿಸಿದೆ. ಈ ಖಚಿತತೆ ತಿಳಿದುಕೊಳ್ಳುವುದಕ್ಕೆ ಯಾವುದೇ ವಿಶೇಷವಾದ ಡಿಗ್ರಿ ಬೇಡ, ವಿಷಯ ಹರಡಿಸುವ ಸೋಶಿಯಲ್ ಮಿಡಿಯಾದಂತ ಪ್ರಚಾರಿಸುವ ತಂತ್ರಗಳು ಬೇಡ.
ನಿಮ್ಮ ಬಾಸ್ ಮೂರ್ಖ ಎಂದು ನೀವು ಭಾವಿಸಿದರೆ ಮತ್ತು ನಿಮ್ಮ ಭಾವನೆ ತಿಳಿದು ಬದಲಾಗಿ ಅವನು ಹೆಚ್ಚು ಬುದ್ಧಿವಂತನಾಗಿದ್ದರೆ ನಿಮಗೆ ಕೆಲಸ ಇರುವುದಿಲ್ಲ ಎಂಬ ಮಾತೊಂದನ್ನು ಕೇಳಿದ್ದು ಕೆಲವೊಮ್ಮೆ ನೆನಪು ತರಿಸುವುದುಂಟು.
ಇಂದು ಜಗತ್ತಿನದ್ಯಾಂತ ಉತ್ತಮ ಸಂಬಂಧಗಳು ಮರೀಚಿಕೆಯತ್ತ ಹೋಗುತ್ತಿರುವುದು ನಮ್ಮ ದಿನ ನಿತ್ಯದ ಆಗು ಹೋಗುಗಳ ನೋಡುವಿಕೆಯಲ್ಲಿ ಕಂಡು ಬರುತ್ತಿದೆ. ಒಂದೆಡೆಯಿಂದ ನಾವು ನಮ್ಮ ಸಂಪರ್ಕ ಸೇತುವೆ ಗಟ್ಟಿಯಾಗಿದೆ ಎಂಬ ಭಾವನೆಯಲ್ಲಿದ್ದೇವೆ ಆದರೆ, ಅಸಂಪರ್ಕವನ್ನು ಈ ಸೇತುವೆಗಳು ಅಸಾಧಾರಣವಾಗಿ ಬೆಳೆಸುತ್ತಿದೆ ಎಂಬುದನ್ನು ಮರೆಯಬಾರದು.
ಇತ್ತೀಚೆಗೆ ಜಗತ್ತಿನಲ್ಲಿಕಂಡುಬರುವ ಬಹುತೇಕ ತೊಂದರೆಗಳಿಗೆ ದೊಡ್ಡ ಕಾರಣವೆಂದರೆ ಅತೀ ಮೂರ್ಖ ಮತ್ತು ಅತೀ ಬುದ್ಧಿವಂತ ಜನರು ಗಾಳಿಮಾತುಗಳಿಗೆ ವೇಗವಾಗಿ ಸ್ಪಂದಿಸುತ್ತಿರುವುದು. ಅಸ್ಪಷ್ಟ ಮತ್ತು ಅನುಮಾನಗಳಿಗೆ ಕೊನೆಯೆಲ್ಲಿ ಎಂಬುದು ಈ ಎರಡು ಪಂಗಡಕ್ಕೂ ಯಕ್ಷಪ್ರಶ್ನೆಯಾಗಿದೆ. ವಿಶೇಷವೆಂದರೆ ಪ್ರಾಥಮಿಕ ತಿಳುವಳಿಕೆಯು ಇವರನ್ನು ತಿದ್ದದೆ ಇರುವುದು.
ಸ್ವಂತ ಸುಖವೊಂದು ಎಲ್ಲವೂ ಆಗಿರುವುದಕ್ಕೆ ಸಾಧ್ಯವಿಲ್ಲ. ಅದು ಬರೀ ಟೊಳ್ಳು ಸುಖ ನೀಡಿತೇ ಹೊರತು ಗಟ್ಟಿ ಅನುಭವ ನೀಡದು. ಪ್ರಪಂಚದಲ್ಲಿ ಸ್ವರ್ಗವು ಕಂಡುಬರುತ್ತದೆ ಹಾಗೆ ನರಕವೂ ಕಂಡುಬರುತ್ತದೆ. ತಮ್ಮದಲ್ಲದ ತಪ್ಪಿಗೆ ನರಕಯಾತನೆ ಪಡೆಯುತ್ತಿರುವ ಅನೇಕ ಮಂದಿ ನಮ್ಮ ನಿಮ್ಮೊಂದಿಗಿದ್ದಾರೆ ಅವರನ್ನು ಉತ್ತಮ ಸಮಾಜ ಕಾರ್ಯಚಟುವಟಿಕೆಗಳಿಗೆ ಯಾವುದಾದರೂ ಒಂದು ರೀತಿಯಲ್ಲಿ ತರುವ ಬಗ್ಗೆ ಹೊಸ ಚಿಂತನೆಯನ್ನು ನಾವು ಹುಟ್ಟುಹಾಕಬೇಕಿದೆ. ಉತ್ತಮ ಸ್ವಾರ್ಥರಹಿತ ಜನರಿಂದ ಮಾರ್ಗದರ್ಶನವೂ, ನಮ್ಮ ನಿಮ್ಮೆಲ್ಲರ ಪ್ರೀತಿ ಧಾರೆಯೂ ಈ ಜನರೊಂದಿಗೆ ಬೆರೆತಾಗ ಅದು ಕಷ್ಟಸಾಧ್ಯವಲ್ಲ.
ಉ. ದೇವರಾಯ ಪ್ರಭು