ಮಂಕಿಪಾಕ್ಸ್ ಜ್ವರ ತಡೆಗಟ್ಟುವುದು ಹೇಗೆ? ಚಿಕಿತ್ಸೆ ಹೇಗೆ?

ಮಂಕಿಪಾಕ್ಸ್ ಜ್ವರ ಬಂದು ಒಂದೆರಡು ದಿನಗಳ ಬಳಿಕ ದೇಹದಲ್ಲಿ ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳಬಹುದು. ಜ್ವರ ತನ್ನಿಂತಾನೇ ಗುಣವಾಗುತ್ತದೆ. ಆದರೆ ಮಧುಮೇಹ ರೋಗಿಗಳು, ಸ್ಟಿರಾಯ್ಡ್ ಬಳಸುವವರು, ಅಸ್ತಮಾ ರೋಗಿಗಳು, ಇಳಿ ವಯಸ್ಸಿನ ರೋಗಿಗಳು, 8 ವರ್ಷದ ಕೆಳಗಿನ ಮಕ್ಕಳು, ಕ್ಯಾನ್ಸರ್ ರೋಗಿಗಳು, ಅಂಗಾಂಗ ಕಸಿ ಮಾಡಿಸಿದವರು, ಕಿಡ್ನಿ ವೈಫಲ್ಯ ಇರುವವರು, ಹೆಚ್ಚಿನ ಮುಂಜಾಗ್ರತೆ ವಹಿಸಬೇಕು.

monkey-pox

ಮಂಕಿಪಾಕ್ಸ್ ಎಂಬುದು ಮಂಕಿಪಾಕ್ಸ್ ವೈರಾಣುವಿನಿಂದ ಹರಡುವ ರೋಗವಾಗಿದ್ದು ಇತ್ತೀಚೆಗೆ ಬಹಳಷ್ಟು ಸದ್ದು ಮಾಡುತ್ತಿದೆ. ಇದೊಂದು ಆರ್ಥೊಪಾಕ್ಸ್ ಎಂಬ ಪ್ರಭೇದಕ್ಕೆ ಸೇರಿದ ವೈರಾಣು ಆಗಿದ್ದು, ಇದೇ ಪ್ರಭೇದಕ್ಕೆ ಸೇರಿದ ವಾರಿಯೋಲಾ ವೈರಾಣುವಿನಿಂದ ಸ್ಮಾಲ್ ಪಾಕ್ಸ್ (ಸ್ಮಾಲ್ ಮಜತ್ತು) ಅಥವಾ ಸಿಡುಬು ರೋಗ ಬರುತ್ತದೆ. ಸಿಡುಬು ರೋಗದಂತೆ ಹೋಲುವ ಈ ವೈರಾಣು ಸೋಂಕು ಅದರಷ್ಟು ತೀವ್ರವಾಗಿ ರೋಗಿಗಳನ್ನು ಕಾಡುವುದಿಲ್ಲ. ಆದರೆ ಜ್ವರ, ಸುಸ್ತು, ಮೈ ಕೈ ನೋವು ಮತ್ತು ಮೈ ಮೇಲೆ ಕೆಂಪು ಗುಳ್ಳೆಗಳು…ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತದೆ.

ಆಫ್ರಿಕಾ ಮತ್ತು ಪಾಶ್ಚಿಮಾತ್ಯ…ರಾಷ್ಟ್ರಗಳಲ್ಲಿ ಕಂಡು ಬಂದಿರುವ ಈ ಸೋಂಕಿಗೆ ನೈಜೀರಿಯಾ ಮತ್ತು ಕಾಂಗೋದಲ್ಲಿ ಕಳೆದ ವಾರ ಒಟ್ಟು ಹತ್ತು ಮಂದಿ ಸಾವಿಗೀಡಾಗಿದ್ದಾರೆ ಮತ್ತು ವಿಶ್ವ ಸಂಸ್ಥೆ ವರದಿಗಳ ಪ್ರಕಾರ ಸುಮಾರು 20 ದೇಶಗಳಿಗೆ ವ್ಯಾಪಿಸಿದೆ ಎಂದೂ ತಿಳಿದು ಬಂದಿದೆ. ಕಾಂಗೋ ದೇಶವೊಂದರಲ್ಲಿಯೇ ಸುಮಾರು ಐನೂರಕ್ಕೂ ಹೆಚ್ಚು ಮಂದಿಯಲ್ಲಿ ಈ ರೋಗ ಕಾಣಿಸಿಕೊಂಡಿದ್ದು, ಕಾಡಿನಲ್ಲಿ ಮಂಗ, ಬಾವಲಿ, ದಂಶಕಗಳ ಕಳೇವರವನ್ನು ತರಲು ಹೋದವರಲ್ಲಿ ಈ ಸೋಂಕು ಕಂಡು ಬಂದಿದೆ ಎಂದೂ ವರದಿಯಾಗಿದೆ.

ರೋಗದ ಲಕ್ಷಣಗಳು ಏನು?

ಆರಂಭದಲ್ಲಿ ಜ್ವರ, ತಲೆನೋವು, ಸ್ನಾಯುಗಳಲ್ಲಿ, ಸೆಳೆತ ಹಾಗೂ ಸೋಂಕು, ಬೆನ್ನು ನೋವು, ಚಳಿ, ಆಯಾಸ, ಸುಸ್ತು ಕಾಣಿಸಿಕೊಳ್ಳುತ್ತದೆ. ಎಲ್ಲಾ ವೈರಾಣು ಜ್ವರದಲ್ಲಿರುವಂತಹಾ ಲಕ್ಷಣಗಳು ಇಲ್ಲಿಯೂ ಕಂಡುಬರುತ್ತದೆ. ದೇಹದಲ್ಲಿನ ದುಗ್ಧರಸಗ್ರಂಥಿಗಳು ಊದಿಕೊಂಡು ಮುಟ್ಟಿದಾಗ ನೋವು ಇರುತ್ತದೆ. ಸ್ಮಾಲ್ ಫಾಕ್ಸ್ ಅಥವಾ ಸಿಡುಬು ರೋಗದಲ್ಲಿ ದುಗ್ಧರಸ ಗ್ರಂಥಿಗಳು ಊದಿಕೊಳ್ಳುವುದಿಲ್ಲ. ಈ ಮಂಕಿ ಫಾಕ್ಸ್ ವೈರಾಣುಗಳು ದೇಹಕ್ಕೆ ಸೇರಿದ ಬಳಿಕ 7 ರಿಂದ 14 ದಿನಗಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಜ್ವರ ಬಂದು ಒಂದೆರಡು ದಿನಗಳ ಬಳಿಕ ದೇಹದಲ್ಲಿ ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳಬಹುದು. ಮೊದಲು ಮುಖದಲ್ಲಿ ಕಂಡು ಬರುತ್ತದೆ ಬಳಿಕ ನಿಧಾನವಾಗಿ ದೇಹದ ಇತರ ಭಾಗಗಳಾದ ಕುತ್ತಿಗೆ, ಹೊಟ್ಟೆ, ತೊಡೆ, ಬೆನ್ನುಗಳಿಗೆ ಹರಡುತ್ತದೆ. ಈ ರೋಗದ ಲಕ್ಷಣಗಳು 2 ರಿಂದ 4 ವಾರಗಳ ವರೆಗೂ ವಿಸ್ತರಿಸಬಹುದು. ಈ ಗುಳ್ಳೆಗಳು ಒಡೆದು, ಒಣಗಿ ಹಿಳ್ಳೆಗಳಾಗಿ ಬಿದ್ದು ಹೋಗುತ್ತದೆ. ಆಫ್ರಿಕಾ ದೇಶದಲ್ಲಿ ಪ್ರತಿ ಹತ್ತರಲ್ಲಿ ಒಬ್ಬರು ಈ ರೋಗ ಬಂದ ಬಳಿಕ ಸಾವನ್ನಪ್ಪಿದ್ದಾರೆ ಎಂದೂ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಹೇಗೆ ಹರಡುತ್ತದೆ?

ಇದೊಂದು ಸಾಂಕ್ರಾಮಿಕ ರೋಗವಾಗಿದ್ದು, ಸೋಂಕಿತ ವ್ಯಕ್ತಿಯ ಸ್ಪರ್ಶದಿಂದ ಇನ್ನೊಬ್ಬನಿಗೆ ನೇರವಾಗಿ ಹರಡುತ್ತದೆ, ಅದೇ ರೀತಿ ಸೋಂಕಿತ ಪ್ರಾಣಿಗಳಿಂದ ಮನುಷ್ಯನಿಗೆ ಹರಡುವ ಸಾಧ್ಯತೆಯೂ ಇರುತ್ತದೆ. ಅದೇ ರೀತಿ ಸೋಂಕಿತ ವ್ಯಕ್ತಿ ಬಳಸಿದ ಬಟ್ಟೆ ಬರೆ ಪಾತ್ರೆಗಳ ಬಳಕೆಯಿಂದಲೂ ವೈರಾಣು ಹರಡುವ ಸಾಧ್ಯತೆ ಇರುತ್ತದೆ. ತಾಯಿಯಿಂದ ಮಕ್ಕಳಿಗೆ ಪ್ಲಾಸೆಂಟಾದ ಮುಖಾಂತರ ಹರಡಬಹುದು ಹಾಗೂ ಎದೆ ಹಾಲಿನಿಂದಲೂ ಹರಡಬಹುದು. ಶಂಕಿತ, ಸೋಂಕಿತ ಪ್ರಾಣಿಗಳು ಮನುಷ್ಯನನ್ನು ಕಡಿದಾಗ ತರಚಿದಾಗಲೂ ವೈರಾಣು ಮನುಷ್ಯನ ದೇಹಕ್ಕೆ ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ. ಸೋಂಕಿತ ವ್ಯಕ್ತಿಯ ದೇಹದ ಗುಳ್ಳೆಗಳಿಂದ ಒಸರುವ ದ್ರವ್ಯಗಳಿಂದಲೂ ವೈರಾಣು ಹರಡುವ ಸಾದ್ಯತೆ ಇರುತ್ತದೆ. ದೈಹಿಕ ಸಂಪರ್ಕದಿಂದಲೂ ವೈರಾಣು ನೇರವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಕೆಮ್ಮುವಾಗ, ಸೀನುವಾಗ ವೈರಾಣು ನೇರವಾಗಿ ಒಬ್ಬನಿಂದ ಇನ್ನೊಬ್ಬನಿಗೆ ಹರಡುತ್ತದೆ.

ತಡೆಗಟ್ಟುವುದು ಹೇಗೆ?

1) ಸಂಶಯಿತ ಸೋಂಕಿತ ವ್ಯಕ್ತಿಗಳನ್ನು ಇತರರಿಂದ ಬೇರೆ ಇರಿಸಿ ಚಿಕಿತ್ಸೆ ನೀಡಬೇಕು.

2) ಸೋಂಕಿತ ವ್ಯಕ್ತಿಯ ಸ್ಪರ್ಶ ಸಂಪರ್ಕ ಇರದಂತೆ ಮಾಡಬೇಕು.

3) ಸೋಂಕಿತ, ಶಂಕಿತ ವ್ಯಕ್ತಿಗಳನ್ನು ದೂರವಿಡಬೇಕು. ಅಥವಾ ಏಕಾಂತದಲ್ಲಿರಿಸಿ ಚಿಕಿತ್ಸೆ ನೀಡಬೇಕು.

4) ಶಂಕಿತ ಸೋಂಕಿತ ವ್ಯಕ್ತಿಗಳನ್ನು ಅಕಸ್ಮಾತ್ ಸ್ಪರ್ಶಿಸಿದಲ್ಲಿ ತಕ್ಷಣವೇ ಸೋಪಿನ ದ್ರಾವಣದಿಂದ ಚೆನ್ನಾಗಿ ಕೈ ತೊಳೆಯಬೇಕು. ಆಲ್ಕೋಹಾಲ್ ಮಿಶ್ರಿತ ಕೈತೊಳೆಯುವ ದ್ರಾವಣ ಬಳಸಬೇಕು.

5) ಶಂಕಿತ, ಸೋಂಕಿತ ರೋಗಿಗೆ ಚಿಕಿತ್ಸೆ ನೀಡಬೇಕಾದಲ್ಲಿ ದೇಹವನ್ನು ರಕ್ಷಿಸುವ ಕವಚವನ್ನು ಧರಿಸಿ ಚಿಕಿತ್ಸೆ ನೀಡತಕ್ಕದು.

ಚಿಕಿತ್ಸೆ ಹೇಗೆ?

ಹೆಚ್ಚಿನ ಎಲ್ಲಾ ಮಂಕಿಪಾಕ್ಸ್ ಜ್ವರ ತನ್ನಿಂತಾನೇ ಗುಣವಾಗುತ್ತದೆ. ಆದರೆ ಮಧುಮೇಹ ರೋಗಿಗಳು, ಸ್ಟಿರಾಯ್ಡ್ ಬಳಸುವವರು, ಅಸ್ತಮಾ ರೋಗಿಗಳು, ಇಳಿ ವಯಸ್ಸಿನ ರೋಗಿಗಳು, 8 ವರ್ಷದ ಕೆಳಗಿನ ಮಕ್ಕಳು, ಕ್ಯಾನ್ಸರ್ ರೋಗಿಗಳು, ಅಂಗಾಂಗ ಕಸಿ ಮಾಡಿಸಿದವರು, ಕಿಡ್ನಿ ವೈಫಲ್ಯ ಇರುವವರು, ಹೆಚ್ಚಿನ ಮುಂಜಾಗ್ರತೆ ವಹಿಸಬೇಕು. ಇಂತಹ ವ್ಯಕ್ತಿಗಳಿಗೆ ಒಳರೋಗಿಯಾಗಿ ಚಿಕಿತ್ಸೆ ನೀಡಬೇಕಾಗುತ್ತದೆ. ಗರ್ಭಿಣಿ ಹೆಂಗಸರು ಮತ್ತು ಎದೆ ಹಾಲು ಉಣಿಸುವ ತಾಯಂದಿರಲ್ಲಿ ಹೆಚ್ಚು ಮುತುವರ್ಜಿ ವಹಿಸಬೇಕು. ರೋಗದ ಲಕ್ಷಣಗಳಿಗೆ ಅನುಗುಣವಾಗಿ ಜ್ವರದ ಔಷಧಿ, ನೋವು ನಿವಾರಕ ಔಷಧಿ ಮತ್ತು ಸುಸ್ತು ನಿವಾರಣಾ ಔಷಧಿ ನೀಡಿ ಚಿಕಿತ್ಸೆ ನೀಡಲಾಗುತ್ತದೆ. ಎಲ್ಲಿ ಹೇಗೆ ಯಾವಾಗ ಚಿಕಿತ್ಸೆ ಎಂಬುದನ್ನು ವೈದ್ಯರೇ ನಿರ್ಧರಿಸುತ್ತಾರೆ.

ಕೊನೆಮಾತು

ಮಂಕಿಪಾಕ್ಸ್ ಜ್ವರ ಮೊದಲಬಾರಿಗೆ ಡೆನ್ಮಾರ್ಕ್‍ನ ಕೋಪನ್ ಹೇಗನ್ ನಗರದಲ್ಲಿ 1958ರಲ್ಲಿ ಮಂಗಗಳಲ್ಲಿ ಕಂಡು ಬಂದಿತ್ತು. ಸಂಶೋಧನೆಗಾಗಿ ಇರಿಸಿದ್ದ ಮಂಗಗಳ ಮಂದೆಯಲ್ಲಿ ಸಿಡುಬು ರೋಗದ ರೀತಿಯ ಕಾಯಿಲೆ ಎಂದೂ ಎರಡು ಬಾರಿ ಕಂಡು ಬಂದ ಕಾರಣದಿಂದ ಈ ರೋಗಕ್ಕೆ ಮಂಕಿ ಪಾಕ್ಸ್ ಜ್ವರ ಎಂದು ನಾಮಕರಣ ಮಾಡಲಾಯಿತು ಮತ್ತು ವೈರಾಣುವಿಗೆ ಮಂಕಿ ಪಾಕ್ಸ್ ವೈರಸ್ ಎಂದೂ ಕರೆಯಲಾಗಿತ್ತು. ಮನುಷ್ಯರಲ್ಲಿ ಮೊದಲ ಬಾರಿ 1970ರಲ್ಲಿ ಕಾಂಗೋ ರಿಪಬ್ಲಿಕ್ ದೇಶದಲ್ಲಿ ಮಂಕಿಪಾಕ್ಸ್ ಜ್ವರ ಕಂಡುಬಂದಿತ್ತು. ನಂತರ ದಕ್ಷಿಣ ಮತ್ತು ಪಶ್ಚಿಮ ಆಫ್ರಿಕದ ದೇಶಗಳಾದ ಕ್ಯಾಮರೂನ್, ನೈಜಿರಿಯಾ, ಗಬಾನ್ ಮುಂತಾದ ಕಡೆ ಕಂಡು ಬಂದಿತ್ತು. ನಂತರದ ದಿನಗಳಲ್ಲಿ ಅಮೆರಿಕಾ, ಇಂಗ್ಲೆಂಡ್, ಇಸ್ರೆಲ್, ಸಿಂಗಾಪುರಗಳಲ್ಲೂ ಈ ಜ್ವರ ಕಂಡು ಬಂದಿತ್ತು.

ಅಂತಾರಾಷ್ಟ್ರೀಯ ಪ್ರಯಾಣ ಮತ್ತು ಪ್ರಾಣಿಗಳ ರಫ್ತುಗಳಿಂದಾಗಿ ವೈರಾಣು ಆಫ್ರಿಕಾದಿಂದ ಇತರ ದೇಶಗಳಿಗೆ ಹರಡಿರಬಹುದು ಎಂದೂ ಅಂದಾಜಿಸಲಾಯಿತು. ಈ ವೈರಾಣುಗಳು ಎಲ್ಲಿ ಬದುಕುತ್ತದೆ ಮತ್ತು ವಂಶಾಭಿವೃದ್ಧಿ ಮಾಡುತ್ತದೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆಫ್ರಿಕಾ ರೂಡೆಂಟ್ಸ್ ದಂಶಕ ಇಲಿ, ಹೆಗ್ಗಣ ಮತ್ತು ಮಂಗಗಳಲ್ಲಿ ಈ ವೈರಾಣು ಹೆಚ್ಚಾಗಿ ವಾಸಿಸುತ್ತದೆ ಮತ್ತು ಅಲ್ಲಿಂದ ಮನುಷ್ಯನಿಗೆ ಬರುತ್ತದೆ ಎಂದು ಅಂದಾಜಿಸಲಾಗಿದೆ. ಸಿಡುಬು ರೋಗಕ್ಕೆ ಬಳಸುವ ಲಸಿಕೆಯನ್ನು ಈ ಮಂಕಿ ಪಾಕ್ಸ್ ರೋಗಕ್ಕೆ ಬಳಸಬಹುದಾಗಿದೆ ಮತ್ತು ಶೇಕಡಾ 85% ಪರಿಪಕ್ವತೆ ಹೊಂದಿದೆ ಎಂದು ತಿಳಿದು ಬಂದಿದೆ. 2019ರಲ್ಲಿ ಮಂಕಿಪಾಕ್ಸ್ ರೋಗಕ್ಕೆ ಲಸಿಕೆ ಕಂಡು ಹಿಡಿಯಲಾಗಿದ್ದು, ಸಮರ್ಪಕವಾಗಿ ಬಳಸಿದಲ್ಲಿ ನೂರು ಶೇಕಡಾ ರಕ್ಷಣೆ ನೀಡುತ್ತದೆ.

ಟೆಕಾವಿರಿಮಟ್ ಎಂಬ ವೈರಾಣು ನಿವಾರಕ ಔಷಧಿ ಬಳಸಿದಲ್ಲಿ ವೈರಾಣುವಿನ ತೀವ್ರತೆಯನ್ನು ತಗ್ಗಿಸಲು ಸಾಧ್ಯವಾಗುತ್ತದೆ ಎಂದೂ ಅಧ್ಯಯನದಿಂದ ತಿಳಿದುಬಂದಿದೆ. ಸಮರ್ಪಕ ಚಿಕಿತ್ಸೆ ಸಕಾಲದಲ್ಲಿ ನೀಡಿದರೆ 80 ರಿಂದ 90 ರಷ್ಟು ಮಂದಿ ಸಂಪೂರ್ಣ ಗುಣಮುಖವಾಗುತ್ತಾರೆ. ಚಿಕಿತ್ಸೆ ನೀಡದೆ ಇದ್ದ ಪಕ್ಷದಲ್ಲಿ 8 ರಿಂದ 10ಶೇಕಡಾ ಮಂದಿಯಲ್ಲಿ ಮಾರಣಾಂತಿಕವಾಗಲೂ ಬಹುದು ಎಂದು ವಿಶ್ವ ಸಂಸ್ಥೆ ಎಚ್ಚರಿಕೆ ನೀಡಿದೆ. ಒಟ್ಟಿನಲ್ಲಿ ಮೊದಲೇ ಕೋವಿಡ್ ವೈರಾಣುವಿನ ಆರ್ಭಟದಿಂದ ಹೈರಾಣಾಗಿರುವ ಮನುಷ್ಯನಿಗೆ ಹೊಸದಾಗಿ ಒಕ್ಕರಿಸಿದ ಈ ಮಂಕಿ ಪಾಕ್ಸ್ ಜ್ವರ ಹೊಸ ತಲೆ ನೋವಾಗಿ ಕಾಡುತ್ತಿರುವುದಂತೂ ನಿಜ. ಸಕಾಲದಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಿ ರೋಗ ಹರಡದಂತೆ ಮಾಡುವುದರಲ್ಲಿಯೇ ಜಾಣತನ ಅಡಗಿದೆ.

dr-muralee-mohan

ಡಾ|| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತ ಚಿಕಿತ್ಸಾಲಯ
ಹೊಸಂಗಡಿ, ಮಂಜೇಶ್ವರ
ಮೊ: 9845135787
Email: drmuraleemohan@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!