ಮದ್ಯವೆ ಸರ್ಕಾರಕ್ಕೆ ಮುಖ್ಯ ಆದಾಯದ ಮೂಲವೇ?

ಮದ್ಯವೆ ಸರ್ಕಾರಕ್ಕೆ ಮುಖ್ಯ ಆದಾಯದ ಮೂಲವೇ? ಲಾಕ್ ಡೌನ್ ನಂತರ ಮದ್ಯ ಮಾರಾಟ ಪುನರರಾಂಭವಾದಾಗ ಸಾಮಾಜಿಕ ಅಂತರ, ಮುನ್ನೆಚ್ಚರಿಕೆ, ಮಾಸ್ಕು, ಕೈ ಸ್ವಚ್ಚತೆ ಎಲ್ಲವನ್ನೂ ಗಾಳಿಗೆ ತೂರಿ ಜನ ಮೊದಲ ದಿನ 45 ಕೋಟಿ ರೂಪಾಯಿಯ ಮದ್ಯ ಕುಡಿದು ಕುಪ್ಪಳಿಸಿದ್ದಾರೆ. ಸರಕಾರಕ್ಕೆ ಮದ್ಯವೆ ಮುಖ್ಯ ಆದಾಯದ ಮೂಲವೆಂಬುದು ದುರಷ್ಟಕರ.

ಮದ್ಯವೆ ಸರ್ಕಾರಕ್ಕೆ ಮುಖ್ಯ ಆದಾಯದ ಮೂಲವೇ?ಸುಮಾರು ಆರವತ್ತು ವರ್ಷವಿರಬಹುದು ಆತನಿಗೆ. ಮಧ್ಯವಯಸ್ಕ ಗೆಳೆಯನೊಂದಿಗೆ ಮನೆಗೆ ಹೋಗುವಾಗ ವಾಹನದಿಂದ ಬಿದ್ದು ಗಾಯಮಾಡಿಕೊಂಡು ನಮ್ಮ ಆಸ್ಪತ್ರೆಯ ತುರ್ತುಚಿಕಿತ್ಸೆಗೆ ಬಂದಿದ್ದರು. ಮುಖ, ತಲೆ‌, ಕೈಕಾಲು ಗಾಯಗಳಾಗಿ ರಕ್ತ ಸೋರುತಿತ್ತು‌. ವೃದ್ದ ಮಾತನಾಡುವ ಸ್ಥತಿಯಲ್ಲಿರಲಿಲ್ಲ. ಆಲ್ಕೋಹಾಲ್ ಸಾರದ ಹ್ಯಾಂಡ್ ಸಾನಿಟೈಸರ್ ಕೈಗೆ ಹಾಕಿಕೊಂಡು ರೋಗಿಯ ಪರೀಕ್ಷೆಗಿಳಿದೆ. ಮೈತುಂಬ ತರಚು ಗಾಯಗಳಿದ್ದವು, ತಲೆಗೆ ಒಂದೆರಡು ಆಳದ ಗಾಯಗಳಿದ್ದವು . ಒಂದೆರಡು ಕಡೆ ಹೊಲಿಗೆ ಹಾಕಿ ಮಿಕ್ಕಿದ ಕಡೆ ಪ್ಲ್ಯಾಸ್ಟರ್ ಹಾಕುವ ಯೋಜನೆ ಮಾಡಿ ಅಪಘಾತದ ವಿವರ ಪಡೆದು, ಚಿಕಿತ್ಸೆಗೂ ಮುನ್ನ ರೋಗಿಯ ಸಂಭಂಧಿಕರಿಗೆ ವಿವರಕೊಟ್ಟು, ಚಿಕಿತ್ಸೆಯ ಅನುಮತಿ ಪಡೆಯಬೇಕು, ಅಲ್ಲಿಯವರೆಗೆ ಹೊಲಿಗೆಗೆ ಎಲ್ಲ ತಯಾರಿ ಮಾಡಲು ನರ್ಸ್ ಒಬ್ಬರಿಗೆ ಹೇಳಿ ಚಿಕಿತ್ಸಾ ಕೊಠಡಿ ಬಾಗಿಲಲ್ಲಿ ಬಂದು ನಿಂತು ” ಯಾರ್ರಿ ಇವರ ಕಡೆ ..? ” ಎನ್ನುತ್ತ ನಿಂತೆ.

ನರ್ಸ್ ನಿಧಾನವಾಗಿ ರೋಗಿಯ ಹತ್ತಿರ ನಿಂತು ಡ್ರೆಸಿಂಗ್ ತಯಾರಿ ಮಾಡುತಿದ್ದರೆ, ಆ ವೃದ್ದ ತನ್ನ ರಕ್ತ ಸಿಕ್ತ ಬಲಗೈ ಎತ್ತಿ ನರ್ಸ್ಳ ಎದೆ ಮುಟ್ಟಿದ. ..! ನಾನು ಕೊಂಚ ವಿಚಲಿತನಾದೆ, ಆತ ಕೈ ಅಲುಗಾಡಿಸುವಾಗ ತಪ್ಪಿ ಕೈ  ಎದೆಗೆ ತಗುಲಿರಬೇಕು ಅಂದುಕೊಂಡೆ. ಕೊಂಚ ಗಾಬರಿಯಾದ ನರ್ಸ್ ಕೂಡ ನನ್ನಂತೆ ತಿಳಿದು ಸ್ವಲ್ಪ ತಡೆದು ಮತ್ತೆ ವೃಧ್ದನ ಹತ್ತಿರಹೋದಾಗ, ವೃದ್ದ ನರಳುತ್ತ ನರ್ಸ್ಳ ಎದೆ ತುಂಬ ಧೈರ್ಯವಾಗಿ ನಿಖರವಾಗಿ ಮುಟ್ಟಿದ. ನರ್ಸ್ ಗಾಬರಿಯಿಂದ‌ ಅರಚಿ ಹಿಂದೆ ಸರಿದು ನಿಂತಳು. ನಾನು ನಿಂತಲ್ಲೆ ಮರಗಟ್ಟಿದಂತಾಗಿದ್ದೆ. ನರ್ಸ್ಳ ಎದೆಯ ಮೇಲಿನ ಬಿಳಿ ಸೀರೆಯ ರಕ್ತದ ಕಲೆಗಳು, ಕಣ್ತುಂಬ ನೀರು. ” ಹತ್ರ ಬಾರೆ ನಿನ್ನಮ್ಮನ್ ….” ಎಂದು ತೊದಲುತ್ತ ವೃಧ್ದ ನುಡಿದಾಗ ನರ್ಸ್ ಕೈಯಲ್ಲಿದ ಪರಿಕರ ಟೇಬಲ್ ಮೇಲಿಟ್ಟು ಅಳಲಾರಂಭಿಸಿದಳು. ಅಷ್ಟರಲ್ಲಿ ಸುಧಾರಿಸಿಕೊಂಡ ನಾನು ಓಡಿ ನರ್ಸ್ ಹಾಗೂ ವೃದ್ದನ ಮಧ್ಯ ನಿಂತೆ.

” ಸರ್ ದಿಸ್ ಓಲ್ಡ ಮ್ಯಾನ್ ಟಚಡ್ ಮೈ ಚೆಸ್ಟ್…”:

” ಸರ್ ದಿಸ್ ಓಲ್ಡ ಮ್ಯಾನ್ ಟಚಡ್ ಮೈ ಚೆಸ್ಟ್…”  ಎಂದು ನರ್ಸ್ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು . ” ಏನಯ್ಯ ಮಾಡ್ತಿರೋದು ನೀನು ..?” ಎಂದೆ. ” ನಾನೆನೂ ಮಾಡಿಲ್ಲ …ಅಮ್ಮಾ ನೋವು …ಕೈ ನೋವು …ಬೇಗಾ ಡ್ರೆಸಿಂಗ್ ಮಾಡಿ ” ಎಂದ. ಆಗ ಗಾಢವಾದ ಹೆಂಡದ ವಾಸನೆ ಮೂಗಿಗೆ ಬಡಿಯಿತು. ನಾನು ರೋಗಿ ಮುಟ್ಟುವ ಮುನ್ನ ಕೈಗೆ ಪೂಸಿಕೊಂಡ ಸಾನಿಟೈಸರ್ ವಾಸನೆಯ ಘಾಟಿನಲ್ಲಿ ವೃದ್ದನ ಹೆಂಡದ ವಾಸನೆ ಗುರುತಿಸಿರಲಿಲ್ಲ . ” ಏಯ್ ಎದ್ದೆಳಯ್ಯಾ ಮೇಲೆ …” ಎಂದರಚಿದೆ ‌.
” ನಿನ್ ಮಗಳು ಇಲ್ಲಾ ಮೊಮ್ಮಗಳು ವಯಸ್ಸು ಹುಡುಗಿ ಜೊತೆ ಈ ತರಾ ಮಾಡಿ ನರಳಾಡೋ‌ ನಾಟ್ಕ ಮಾಡ್ತಿಯಲ್ಲಾ …? ಇಲ್ಲಿಂದ‌ ಹೋಗು ನೀನು . ” ಎಂದೆ .
ನನ್ನ ಮಾತು ತಿಳಿಯದಷ್ಟು ಆತನಿಗೆ ಮತ್ತೇರಿರಿಲಿಲ್ಲ .
” ಅಲ್ಲಾ ಅದು ಡ್ರೆಸಿಂಗ್ ಮಾಡಿ …” ಎಂದ‌.
” ಎದ್ದೆಳೋ ಮೇಲೆ. ಆಚೆ ನಡಿ ಇಲ್ಲಿಂದ‌…ನರ್ಸ್  ಜೊತೆ ಏನು ಮಾಡ್ದೆ ನೀನು…ನಾನು ನೋಡಿದಿನಿ ..” ಎಂದೆ ಕೋಪದಿಂದ .
” ನಿನಗೆ ಡ್ರೆಸಿಂಗ್ ಮಾಡಲ್ಲ, ಬೇರೆ ಹಾಸ್ಪಿಟಲ್‌ ಗೆ ಹೋಗು ….ಮೊದ್ಲು ಈ ರೂಮಿಂದ ಆಚೆ ನಡಿ ..” ಎಂದು ಗದರಲು ಆತ ನಿಧಾನವಾಗಿ ಎದ್ದು ಆತನ ಜೊತೆ ಬಂದವನ ಜೊತೆ ಪಕ್ಕ ಕುಳಿತ. ಜೊತೆಗಾರನಿಗೆ ಪೂರ್ಣ ಮತ್ತೆರಿತ್ತು. ಮಾತನಾಡಲಾಗದೆ ತಲೆ ತಗ್ಗಿಸಿ ಕುಳಿತಿದ್ದ‌.
” ಡ್ರೆಸಿಂಗ್ ಮಾಡ್ರಿ ” ಎಂದು ಒಂದು ಸಲ‌ ಅರಚಿ ಸುಮ್ಮನೆ ಕುಳಿತ. ಅಷ್ಟರಲ್ಲಿ ವೃದ್ದನ ಮಗನ ಆಗಮನ ವಾಯಿತು. ಸಿನೆಮಾದ ಹೀರೊನಂತೆ ಆಗಮಿಸಿದ‌ ಆತ ” ಯಾವನೋ‌ಡಾಕ್ಟ್ರು ನೋಡಿದ್ದು, ರಕ್ತಾ ಹೋಗ್ತಾ ನೋಡಲ್ವಾ ?” ಎಂದರಚಿದ .
” ನಿಮ್ಮ ತಂದೆ ತುಂಬಾ‌ ಕುಡ್ದಿದಾರೆ, ಇಲ್ಲಿ ‌ಟ್ರೀಟ್ಮೆಂಟ್ ಮಾಡಕ್ಕಾಗಲ್ಲ, ಕರ್ಕೊಂಡು ಸರಕಾರಿ ಆಸ್ಪತ್ರಗೆ ಹೋಗಿ. ಅಲ್ಲಿ ಪೋಲಿಸ್ ಕೇಸು ಮಾಡಬೇಕು. ಕುಡ್ದು ಬೈಕ್ ಓಡ್ಸಿ ಅಕ್ಸಿಡೆಂಟ್ ಮಾಡಿದಾರೆ ” ಎಂದಾಗ ನಾಯಕನ ಪಿತ್ತ ನೇತ್ತಿಗೇರಿತ್ತು.
” ರೀ ಫಸ್ಟ ಏಡಾನಾ ಮಾಡ್ರಿ…ಕುಡಕ್ರು ಮನುಷ್ಯರಲ್ವಾ…? ನಾವು ಲೋಕಲ್ ನಮ್ ‌ಜೊತೆ ಇದೆಲ್ಲಾ ರೂಲ್ಸ ಬೇಡಾ ಡಾಕ್ಟ್ರೇ ” ಎಂದ.
ಹತ್ತಿರ ಕರೆದು, ಅವನ ‌ಸೂಪರ್ ಹೀರೋ ಮಾಡಿರೋ ಪರಾಕ್ರಮ ವಿವರಿಸಿದೆ.
” ರೀ ಡಾಕ್ಟ್ರೇ ಏನ್ರಿ ನಾಟ್ಕಾ ನಿಮ್ಮದು. ನಮ್ಮಪ್ಪಾ ಆತರಾ ಮನುಷ್ಯನೆ ಅಲ್ಲಾ. ಬರಿ ಆಕ್ಸಿಟೆಂಡ್ ಕೇಸು ಅಂತಾ ಈ ತರಾ ಸುಳ್ಳ ಹೇಳೋದಾ ….? ನಿಮಗೆಲ್ಲಾ ಪಾಠಾ ಕಲ್ಸಬೇಕು. ಕುಡುಕ್ರು ಮನುಷ್ಯರಲ್ವಾ. ಕುಡುದ್ರೆ ತಪ್ಪಾ ..? ಏನ್ ನಿಮ್ಮ ದುಡ್ಡಿಂದ ಕುಡಿದ್ರಾ?‌. ಕುಡುದ್ರು ಬಿದ್ರು…ಮುಚ್ಕೊಂಡು ಏನ್ ಮಾಡೋದು ಮಾಡಬೇಕು. ಮನುಷ್ಯತ್ವಾನೂ ಇರಬೇಕು” ಕುಡುಕರ ಹಕ್ಕುಗಳು ಹಾಗೂ ವೈದ್ಯರಿಗಿರಬೇಕಾದ ಮನುಷ್ಯತ್ವದ ಪಾಠ ಹೇಳಲು ಮುಂದಾದ .
” ಬಾರಯ್ಯ ಇಲ್ಲಿ ” ಎಂದು ಏರಿಯಾ ರೌಡಿಯಂತಿದ್ದವನ ಅವರಪ್ಪನ‌ ಮುಂದೆ ನಿಲ್ಲಿಸಿ .
” ಏನಪ್ಪಾ ಸಿಸ್ಟರ್ ಡ್ರೆಸಿಂಗ್ ಮಾಡಕ ಬಂದ್ರೆ ಅವಳ ಎದೆ ಮೇಲೆ ಕೈ ಹಾಕಿಲ್ಲ ನೀನು..? ” ಎಂದು ಗದರಿದೆ .
” ಏನೋ‌ ಸಾಮಿ ತಪ್ಪಾಯ್ತು …ಕ್ಷಮಿಸಿ. ಪಸ್ಟ ಏಡ ಮಾಡಿ ” ಎಂದು ತಲೆ ತಗ್ಗಿಸಿದ ವೃದ್ದ .

” ನೋಡ್ದೆನಪ್ಪಾ …ನಿಮ್ಮಪ್ಪಾ ಮಾಡಿರೋ ಕೆಲ್ಸಾ..? ಕಂಡ ಕಂಡೋರ್ ಹೆಣ್ ಮಕ್ಕಳ ಎದೆ ಮೇಲೆ‌ ಕೈಹಾಕ್ತಾನಲ್ಲಾ ಈ‌ ಮುದ್ಕಾ ಸಾರಾಯಿ ನೆಪಾ ಮಾಡಿ. ನಿಮ್ಮನೆಗೆ ಕರ್ಕೊಂಡು ನಿಮ್ನೆಲಿರೋ ಹೆಣ್ಮಕ್ಕಳ ಜೊತೆ ಮಾಡ್ತಾನಾ ಈ ತರಾ ನೋಡೋಣಾ..?. ಇಲ್ಲಿಂದಾ ಬೇಗಾ ತೊಲಗಬೇಕು. ಇಲ್ಲಾ ನಾನೆ ಪೋಲಿಸ್ ಕರಿತಿನಿ ” ಎಂದೆ ಕೋಪದಿಂದ. ಮೂವರು ತಲೆ ತಗ್ಗಿಸಿ ನಿಂತಿದ್ದರು. ಬೇರೆ ರೋಗಿಗಳ ಸಂಬಂದಿಕರು ತಮ್ಮ ತಮ್ಮಲ್ಲೆ ಗೊಣಗಲಾರಂಭಿಸಿದರು. ಕೆಲವರು ವೃದ್ದನ ಗುರುತು ಹಿಡಿಯುವ ಪ್ರಯತ್ನಕ್ಕಿಳಿದರೆ, ನಮಗೆಲ್ಲಾ ಪಾಠಕಲಿಸುವ ಯೋಜನೆ ಮಾಡಿದ್ದ ನಾಯಕನೆ ಭಾರಿ ಪಾಠ ಕಲಿತಿದ್ದ. ಕುಂಟುವ ಅಪ್ಪನ ಕಂಕುಳಲ್ಲಿ ಕೈ ಹಾಕಿ ಅಪ್ಪನ ಕರೆದುಕೊಂಡು ಕತ್ತಲಲ್ಲಿ ಮಾಯವಾದ. ಕುಡುಕ ವೃದ್ದನ ಸುಪ್ತ ಚೇತನಗಳು ಬಹಿರಂಗವಾಗಿ ಆತನ ನಿಜರೂಪ ತೋರಿಸಿದ್ದವು. ಏರಿಯಾ ರೌಡಿ ಮಗನಿಗೂ ಬೇಕಾದಷ್ಟು ಅವಮಾನವಾಗಿತ್ತು. ಕುಡುಕರ ಮೂಲಭೂತ ಹಕ್ಕುಗಳ ಬಗ್ಗೆ ಪಾಠ ಹೇಳಲು ಬಂದವನಿಗೆ ತೀವ್ರ ಮುಖಭಂಗವಾಗಿತ್ತು.

ನಮ್ಮ ದೇಶದಲ್ಲಿ  ವೀಪರೀತ ವ್ಯಸನಿಗಳಿದ್ದಾರಾ …? 

liquor-shopಲಾಕ್ ಡೌನ್ ನಂತರ ಮದ್ಯ ಮಾರಾಟ ಪುನರರಾಂಭವಾದಾಗ ನಮ್ಮ ಮಿತ್ರನ ಆಸ್ಪತ್ರೆಯಲ್ಲಿ ಎಂಟು ಇರಿತದ ಕೇಸುಗಳು ದಾಖಲಾದರೆ, ಇನ್ನೊಬ್ಬ ವೈದ್ಯೆ ಕುಡಿದು ವಾಹನ ನಡೆಸಿ ಅಪಘಾತಕ್ಕೀಡಾಗಿ ಮೇದುಳು ಹಾನಿಮಾಡಿಕೊಂಡ ಕೇಸುಗಳಿಗೆ ಚಿಕಿತ್ಸೆ ನೀಡುತಿದ್ದಾರೆ. ಸಾಮಾಜಿಕ ಅಂತರ, ಮುನ್ನೆಚ್ಚರಿಕೆ, ಮಾಸ್ಕು, ಕೈ ಸ್ವಚ್ಚತೆ ಎಲ್ಲವನ್ನೂ ಗಾಳಿಗೆ ತೂರಿ ಜನ ಮೊದಲ ದಿನ 45 ಕೋಟಿ ರೂಪಾಯಿಯ ಮದ್ಯ ಕುಡಿದು ಕುಪ್ಪಳಿಸಿದ್ದಾರೆ. ಕಳ್ಳ ಭಟ್ಟಿ ಕುಡಿಯುವದ ತಪ್ಪಿಸಲು ಮದ್ಯ ಮಾರಾಟ ಎಂಬುದೊಂದು ಪಿಳ್ಳೆ ನೆವ. ಚಾನಲ್ಗಳು ಅವ್ಯಾಹತವಾಗಿ ಹರಿದ ಮದ್ಯ, ಕೊಳ್ಳ ಬಂದ ಮಾನಿನಿಯರು, ಕುಡಿದ ಮಹಾನುಭಾವರ ವಿಶೇಷ ಸ್ಪೂರ್ತಿದಾಯಕ ವಿಡಿಯೋಗಳನ್ನು ಪ್ರಸಾರ ಮಾಡಿ ತಮ್ಮ ಸಾಮಾಜಿಕ ಕಳಕಳಿ ಮರೆದರು.

ಕುಡುಕ ಕಾಮಿ ವೃದ್ದನದು ಬೆಂಗಳೂರಿನ ಒಂದು ಚಿಕ್ಕ ಆಸ್ಪತ್ರೆಯ ಘಟನೆ. ಈ ತರಹದ ಕುಡುಕರ ವರ್ತನೆಯ ಘಟನೆಗಳು ಇಡಿ ರಾತ್ರಿಯೆಲ್ಲಾ ಪ್ರತಿ ಆಸ್ಪತ್ರೆಯಲ್ಲಿ ನಡೆಯುತ್ತವೆ. ಮದ್ಯ ವ್ಯಸನದ ಇನ್ನೊಂದು ಕಾಣದ ಮುಖ. ಹಣದ ನಷ್ಟದ ಜೊತೆ ಜೀವ ನಷ್ಟ. ಕುಟುಂಬಸ್ಥರ ಕಣ್ಣೀರು, ಚಿಕಿತ್ಸೆ ಮಾಡುವ ದೈವಿ ಸಧೃಶ ವೈದ್ಯ ಸಿಬ್ಬಂದಿಯ ಜೊತೆಯ ಅನುಚಿತ ವರ್ತನೆ. ನಮ್ಮ ದೇಶದಲ್ಲಿ ಇಷ್ಟು ಸಂಖ್ಯೆಯ ಇಂತಹ ವೀಪರೀತ ವ್ಯಸನಿಗಳಿದ್ದಾರಾ …? ಎಂಬುದು ಆಶ್ಚರ್ಯಕರ ಪ್ರಶ್ನೆ.ಮುಖ ಲಂಗೋಟಿ ತೊಟ್ಟು ಬಾರಿನ ಸರದಿಯಲ್ಲಿ ನಿಂತವನೊಬ್ಬ ” ನಾನು ನಿರಂತರ ಮೂರ್ನಾಲ್ಕು ದಿನ ಕುಡಿದು ಕುಡಿದು ಮಲಗುತ್ತೆನೆ ” ಎಂದು ಅಪಾರ ಆನಂದ ಹಾಗೂ ಹೆಮ್ಮೆಯಿಂದ ಹೇಳಿ, ಸರಕಾರದ ಕ್ರಮವನ್ನು ಶ್ಲಾಘಿಸಿದ.

ಮದ್ಯಪಾನ ಮಾಡುವವರ  ಅವಸಾನ ಮದ್ಯದಿಂದಲೆ:

ಮದ್ಯ ವ್ಯಸನ ಅತ್ಯಂತ ಕೆಟ್ಟ ವ್ಯಸನ. ಬಿಡಲಾಗದೆ ಹಲವು ಕುಟುಂಬಗಳು ಹಾಳದವು,ಹಾಳಗುತ್ತಲೆ ಇವೆ. ಬಿಡಲಾಗದಂತಹ ಪರಿಣಾಮವೇನು ? ಅಲ್ಕೋಹಾಲ್ ದೇಹ ಪ್ರವೇಶಿಸಿ ಮೆದುಳಿಗೆ ಹೋದಾಗ,ಮೆದುಳಿನ ವಿಶೇಷ ರಾಸಾಯನಿಕಗಳ ಜೊತೆ ಗೂಡಿ ಆಫೀಮಿನಂತಹ ರಾಸಾಯನಿಕವಾಗಿ ಮಾರ್ಪಡುವದರಿಂದ ಇದರ ಚಟ ಬಿಡಲಾಗದು . ಅಫೀಮು ಗಾಂಜಾ ತುಂಬ ಗೀಳಿನ ವ್ಯಸನಗಳು, ಬಿಡಲಾಗುವದಿಲ್ಲ. ಹಾಗೆಯ ಮದ್ಯಕೂಡ‌. ಆದಿಯಾದವನು ದಿನ‌ಬೆಳಿಗ್ಗೆ ಕುಡಿಯುತ್ತಾನೆ,ಈ ತರಹದ ಮುಂಜಾನೆಯ ಮದ್ಯಪಾನ ಮಾಡುವವರು ಮದ್ಯ ಬಿಡುವದಿಲ್ಲ ಅವರ ಅವಸಾನ ಮದ್ಯದಿಂದಲೆ. ಮದ್ಯ ಅವರಿಗೆ ಸಕಲ ಶಕ್ತಿಯ ಮೂಲವಾಗಿ , ನಿಧಾನವಾಗಿ ಯಕೃತ್ನ ತಿಂದು ಹಾಕುತ್ತದೆ. ಯಕೃತ್ ಹಲವಾರು ಕೆಲಸಗಳಲ್ಲಿ ಒಂದು ಮುಖ್ಯ ಕೆಲಸವೆಂದರೆ ದೇಹದ ಹಾರ್ಮೋನುಗಳ ನಿಷ್ಕ್ರಿಯ ಮಾಡುವಿಕೆ. ‌ಅಂದರೆ ಹಾರ್ನೋನುಗಳ ಕೆಲಸ ಮುಗಿದ ಮೇಲೆ ಯಕೃತ್ ( ಲಿವರ್ ) ನಲ್ಲಿ ರಾಸಾಯನಿಕ ಅವಸಾನ ಹೊಂದಿ ನಿಷ್ಕ್ರಿಯ ರಸಾಯನಿಕವಾಗಿ ಮಾರ್ಪಟ್ಟು ಮೂತ್ರದ ಮುಖಾಂತರ ಹೊರಬರುತ್ತದೆ‌.

ಗಂಡಸಿನ ದೇಹದಲ್ಲಿ ಅಲ್ಪ ಪ್ರಮಾಣದ ಮಹಿಳಾ ಹಾರ್ಮೋನ್ ಅಂದರೆ ಈಸ್ಟ್ರೋಜನ್ ‌ಕೂಡ‌ ತಯಾರಾಗುತ್ತದೆ. ಮದ್ಯವಸನಿಯ ಹಾಳಾದ ಯಕೃತ್ತು ಈಸ್ಟ್ರೋಜನ್ ನ್ನು ರಾಸಾಯನಿಕವಾಗಿ ಒಡೆದುಹಾಕುವಲ್ಲಿ ವಿಫಲವಾಗುತ್ತದೆ. ಹಾಗಾಗಿ ನಿಧಾನವಾಗಿ ಗಂಡಸಿನ‌ ದೇಹದಲ್ಲಿ ಮಹಿಳಾ ರಾಸಾಯನಿಗಳು ಹೆಚ್ಚಾಗಿ ಶೇಖರವಾಗಿ ತಮ್ಮ ಪರಿಣಾಮ ತೋರಿಸಲಾರಂಭಿಸುತ್ತವೆ. ಅದರಲ್ಲಿ ಮೊಟ್ಟ ಮೋದಲನೆಯದು ಗಂಡಸರ ಲೈಂಗಿಕ ಆಸೆ, ಕ್ಷಮತೆ ಕುಗ್ಗಿಹೋಗುವುದು. ಇಲ್ಲಿಂದ ಕೌಟುಂಬಿಕ ಕಲಹ ಆರಂಭವಾಗಿ, ನಿರಾಸಕ್ತ ಮದ್ಯ ವಸನಿ ಗಂಡ ಮಡದಿಯ ಶೀಲ ಶಂಕಿಸಿ ಗಲಾಟೆ ಆರಂಭಿಸುತ್ತಾನೆ. ತನ್ನ ಗಂಡಸುತನ ಕ್ಷೀಣಿಸಿ ಮಡದಿಯ ಮೇಲೆ ಅನೈತಿಕತೆಯ ಸಂಶಯಮಾಡಿ‌ ಇನ್ನೂ ಹೆಚ್ಚಿಗೆ ಕುಡಿಯಲಾರಂಭಿಸಿ, ಸಂಸಾರ, ಕುಟುಂಬದ, ಮೇಲೆ ಯಾವ ರೀತಿಯ ಒಲವಿಲ್ಲದೆ ಕುಡಿತವೆ ಆತನ ಜೀವನ ಧ್ಯೇಯವಾಗುತ್ತದೆ. ಎಷ್ಟೋ ಕೊಲೆಯ ವಾರ್ತೆಗಳಲ್ಲಿ ವೀಪರೀತ ಕುಡುಕ ಗಂಡನ ಸಂಶಯಕ್ಕೆ ಬಲಿಯಾದ ಹೆಂಗಸರ ಕತೆಗಳು ದಿನಕ್ಕೆ ನೂರಾರು. ನಂತರ ರಕ್ತ ವಾಂತಿಗಳು, ರಕ್ತಭೇದಿ .ಅಸೈಟಿಸ್ ಎಂಬ ಹೊಟ್ಟೆಯಲ್ಲಿ ವಿಪರೀತ ನೀರು ಸೇರಿಕೊಳ್ಳುವಿಕೆಯ ರೋಗ. ನಂತರ ನರಳಿ ನರಳಿ ಸಾವು.

ಸರಕಾರಕ್ಕೆ ಮದ್ಯವೆ ಮುಖ್ಯ ಆದಾಯದ ಮೂಲವೆಂಬುದು ದುರಷ್ಟಕರ: 

ಇವೆಲ್ಲದರ ಮಧ್ಯ ಕುಟುಂಬ ಭಿಕ್ಷೆ ಬೇಡುವ ಸ್ಥಿತಿಗೆ ಬಂದಿರುತ್ತದೆ. ಕುಡುಕನ ಹೆಂಡತಿ, ಇವರಪ್ಪ ವಿಪರೀತ ಕುಡುಕ ಎಂಬ ಹಣೆಪಟ್ಟಿಗಳು. ಅಪ್ಪ ಅಮ್ಮನ ಅನೈತಿಕ ಸಂಭಂದದ ಅವಾಚ್ಯ ಜಗಳಗಳನ್ನು ಕೇಳಿದ ಮಕ್ಕಳ ಮೇಲೆ ವಿಪರೀತ ದುಷ್ಪರಿಣಾಮ, ಹೇಳಿದಷ್ಟೂ ಕಡಿಮೆಯೆ. ಪ್ರತಿಷ್ಟೆ, ಫ್ಯಾಷನ್, ಟೈಮ್‌ಪಾಸ್ ಎಂದು ಆರಂಭವಾಗುವ ಮದ್ಯಪಾನ ಮನುಷ್ಯನ ಯಾವ ಮಟ್ಟಕ್ಕೆ ಒಯ್ಯುತ್ತದೆಂದು ಊಹಿಸಲಾಗದು. ತುಂಬ ಸಾಹುಕಾರ ಹಾಗೂ ಬುಧ್ದಿವಂತ ವಕೀಲರೋಬ್ಬರು ಕುಡಿದು ಕುಡಿದು ರಕ್ತವಾಂತಿ, ರಕ್ತ ಬೇಧಿ ಮಾಡಲಾರಂಭಿಸದರು. ಅವರನ್ನು ಮಾನಸಿಕ ಸಮಾಲೋಚನೆ ಮಾಡಿ ಒಳ್ಳೆಯ ಆಸ್ಪತ್ರೆಯ ಚಿಕಿತ್ಸೆ ಕೊಡಿಸಿ ಮನೆಗೆ ಕರೆದೋಯ್ಯಲಾಯಿತು.

“ದೈಹಿಕ ತೊಂದರೆ ಎಷ್ಟೆ ಆಗಲಿ ನಾನು ಮದ್ಯ ಬಿಡಲಾರೆ ” ಎಂದು ಕಾಯಿಲೆ ಪೂರ್ಣ ವಾಸಿಯಾಗುವ ಹಂತದಲ್ಲಿದ್ದವರು ಚೆನ್ನಾಗಿ ಕುಡಿದು ರಕ್ತಕಾರಿ ಸತ್ತು ಹೋದರು‌. ಯಾವ ಪುರುಷಾರ್ಥ ಸಾಧನೆಯೋ? ಗಂಡಸರೊಂದಿಗೆ ಇಲ್ಲಿಯೂ ಪೈಪೋಟಿಗಿಳಿದು ಮದ್ಯದ ಅಂಗಡಿಯ ಮುಂದೆ ಮೂರ್ಛೆಹೋದ ಮಾನಿನಿಯೊಬ್ಬಳು ನಿನ್ನೆ ವಾರ್ತಾ ವಾಹಿನಿಗಳಿಗೆ ನಶೆ ಏರಿಸಿದ್ದಳು. ಕುಡಿದವರಾರೋ ಅಮಲೇರಿಸಿಕೊಂಡವಾರಾರೋ. ಮದ್ಯದಂಗಡಿ, ಕುಡುಕರ ಪ್ರತಿಮಾತು ,ವರ್ತನೆ ನೇರಪ್ರಸಾರ ಮಾಡಿ ಕೀಳು ಮಟ್ಟದ ಹಣಗಳಿಕೆಯ ದಾರಿಕಂಡುಕೊಂಡ ವಾಹಿನಿಗಳ ತಮ್ಮ ನೈತಿಕತೆಯ ಸಾಕ್ಷಿ ತಾವೆ ನೀಡಿದ್ದಾರೆ. ಸರಕಾರಕ್ಕೆ ಮದ್ಯವೆ ಮುಖ್ಯ ಆದಾಯದ ಮೂಲವೆಂಬುದು ದುರಷ್ಟಕರ. ಅಕ್ಕಿಯಿಂದ ಸ್ಯಾನಿಟೈಸರ್ ತಯಾರಿಸುವ ಯೋಜನೆ ನೆನಪಾಗಿ ನಗು ಬಂದರೂ, ಬಾರುಗಳಲ್ಲಿನ ಅಲ್ಕೋಹಾಲ್ ನ್ನು ಚಿಕ್ಕ ಬೆರಕೆಯೊಂದಿಗೆ ಸ್ಯಾನಿಟೈಸರ್ ಆಗಿ ಪರಿವರ್ತಿಸಬಹುದು ಎಂಬ ಉಪಾಯ, ಅಕ್ಕಿಯ ಸ್ಯಾನಿಟೈಸರ್ ಯೋಚಿಸಿದವರಿಗೆ ಬರಲಿಲ್ಲವಾ ಎಂಬುದೆ ವಿಪರ್ಯಾಸ ….

-ಅಬುಯಾಹ್ಯಾ

 

Dr-Salim-nadaf ಡಾ. ಸಲೀಮ್ ನದಾಫ್‌ ಆರ್ ಪಿ ಮ್ಯಾನ್ಶನ್, ಕಾಡುಗೋಡಿ, ಬೆಂಗಳೂರು ಮೊ.: 8073048415

ಡಾ. ಸಲೀಮ್ ನದಾಫ್‌
ಆರ್ ಪಿ ಮ್ಯಾನ್ಶನ್, ಕಾಡುಗೋಡಿ, ಬೆಂಗಳೂರು

ಮೊ.: 8073048415

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!