ಮದ್ಯಪಾನ ಮಿತಿ ಮೀರಿದರೆ ವ್ಯಕ್ತಿಯ ಸರ್ವನಾಶ ಖಚಿತ. ನಶೆಯ ಅಡಿಯಾಳಾಗುವಾಗ ದೈಹಿಕ ಮತ್ತು ಮಾನಸಿಕ ಆರೋಗ್ಯ ಕುಸಿಯುತ್ತದೆಂಬುದನ್ನು ಅರಿಯಬೇಕು. ಕುಡಿತದಿಂದ ಉಂಟಾಗುವ ಕೆಟ್ಟ ಪರಿಣಾಮಗಳ ಜೊತೆಗೆ ಅನಾರೋಗ್ಯಕರವಾದ ಆಹಾರ ಕ್ರಮವೂ ಸೇರಿದಾಗ ದೇಹಕ್ಕೆ ಇಮ್ಮಡಿ ಪ್ರಹಾರಗಳುಂಟಾಗುತ್ತದೆ.
ಇತ್ತೀಚೆಗೆ ಹೆಸರಾಂತ ಸಿನಿಮಾ ಕಲಾವಿದರೊಬ್ಬರು ನಿಧನರಾದ ಸುದ್ದಿ ಕಲಾಜಗತ್ತನ್ನೇ ಬೆಚ್ಚಿಸಿತು. ಇನ್ನೂ ಎಳೆಯ ಪ್ರಾಯವಲ್ಲದಿದ್ದರೂ ಬಾಳಿ ಬದುಕಬೇಕಾದ ಜೀವ. ಎಲ್ಲ ರೀತಿಯ ನಟನೆಯಲ್ಲೂ ಸೈ ಎನಿಸಿಕೊಂಡವರು. ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿದ ಮಹಾನ್ ಕಲಾವಿದ. ಸಂಭಾಷಣೆಯನ್ನು ಒಪ್ಪಿಸುವುದರಲ್ಲಿ ನಿಪುಣ. ತೀರಾ ಬಡತನದಿಂದ ಬಂದ ಈ ಕಲಾವಿದ ಕೀರ್ತಿಯ ಮೇರುಶಿಖರಕ್ಕೆ ಏರಿದಂತವರು. ಆದರೆ ಅವರ ಬದುಕಿನಲ್ಲಿ ಖಳನಾಗಿ ಬಂದಿದ್ದು ಕುಡಿತ. ಕುಡಿತ ಅವರನ್ನು ಸಂಪೂರ್ಣವಾಗಿ ಅಡಿಯಾಳನ್ನಾಗಿ ಮಾಡಿತು. ಕುಡಿತದಿಂದ ಸಮಯಕ್ಕೆ ಸರಿಯಾಗಿ ಹಾಜರಾಗದೆ, ನಂಬಿಕೆಯನ್ನು ಕಳೆದುಕೊಂಡರು. ನೆಮ್ಮದಿಯ ಕೌಟುಂಬಿಕ ಬದುಕು ಅಶಾಂತಿಯ ಬೀಡಾಯಿತು. ಕೊನೆಗೂ ಕುಡಿತವೇ ಇಂತಹ ಅಪ್ರತಿಮ ಕಲಾವಿದನನ್ನು ಬಲಿ ತೆಗೆದುಕೊಂಡಿತು.
ಕುಡಿತದೊಂದಿಗೆ ಜೊತೆಯಾಗಲು ಒಬ್ಬೊಬ್ಬರಿಗೆ ಒಂದೊಂದು ಕಾರಣವಿದೆ. ಸಂತೋಷಪಡಲೂ ಬೇಕು, ದುಃಖಪಡಲೂ ಬೇಕು – ಕುಡಿತ. ಖ್ಯಾತ ಹಾಸ್ಯ ಲೇಖಕರಾದ ಬೀಚಿಯವರು ಒಂದೆಡೆ ಹೇಳಿದ್ದಾರೆ. ಒಬ್ಬರು ಹೆಂಡತಿ ಮನೆಯಲ್ಲಿ ಇಲ್ಲವೆಂದು ಕುಡಿಯುತ್ತಾರೆ, ಮತ್ತೊಬ್ಬರು ಹೆಂಡತಿ ಮನೆಯಲ್ಲಿ ಇದ್ದಾಳೆಂದು ಕುಡಿಯುತ್ತಾರೆ. ಎಲ್ಲರೂ ಕುಡಿಯುತ್ತಾರೆಂದೇ ಇದರ ಅರ್ಥ. ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕವೆಂಬ ವಾಕ್ಯ ಬಾಟಲಿಯ ಮೇಲೆ ಅಷ್ಟೇ ಅಲ್ಲ, ಪ್ರತಿಯೊಬ್ಬ ಮದ್ಯಪಾನಿಯ ಮನಸ್ಸಿನಲ್ಲೂ ಬರೆಯಲಾಗಿದೆ. ಆದರೆ ಮದ್ಯದ ರುಚಿ ಕಂಡವರು ಅದರಿಂದ ದೂರ ಸರಿಯಲು ಹೆಣಗುತ್ತಾರೆ.
ಕುಡಿತ ದೇಹದೊಳಗೆ ಹೇಗೆ ವರ್ತಿಸುತ್ತದೆ?
ಅಮಿತವಾದ ಕುಡಿತ ದೇಹದ ಎಲ್ಲಾ ಅಂಗಾಂಗಗಳ ಮೇಲೂ ದುಷ್ಪರಿಣಾಮವನ್ನು ಬೀರುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಅದು ಏಕರೀತಿಯಲ್ಲಿ ಸರ್ವನಾಶ ಪಡಿಸುತ್ತದೆ. ಆದರೆ ಇದನ್ನು ಗುರುತಿಸಲು ಕೆಲವರು ತುಂಬಾ ತಡ ಮಾಡುತ್ತಾರೆ. ಕಡಿಮೆ ಕಾಲಾವಧಿಯಲ್ಲಿ ಹೆಚ್ಚು ಮದ್ಯವನ್ನು ಕುಡಿಯಬೇಕೆಂಬ ಅದಮ್ಯ ಅಭಿಲಾಷೆ ಅಪಾಯವನ್ನು ಹೆಚ್ಚಿಸುತ್ತದೆ. ಕುಡಿತದ ವೇಗ ಹೆಚ್ಚಾಗುತ್ತಿದ್ದಂತೆ ದೇಹದೊಳ ಸೇರುವ ಆಲ್ಕೋಹಾಲಿನ ಪ್ರಮಾಣವು ಹೆಚ್ಚಾಗುತ್ತದೆ. ಸೇವಿಸುವ ಮದ್ಯದ ಶಕ್ತಿಯನ್ನು ಅರಿತು ಯಾರೂ ಅದನ್ನು ಬಳಸುವುದಿಲ್ಲ. ಪ್ರತಿಯೊಂದು ಪೆಗ್ಗಿನ ಲೆಕ್ಕದಲ್ಲಿ ಒಳಸೇರುತ್ತದೆ. ಅಲ್ಪ ಪ್ರಮಾಣದಲ್ಲಿ ಮದ್ಯಸೇವಿಸಿದರೂ ಅದು ದೇಹಕ್ಕೆ ಅಪಾಯವನ್ನುಂಟು ಮಾಡುತ್ತದೆ. ಹಾಗಾದರೆ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ದೇಹದೊಳಕ್ಕೆ ಹೋದರೆ ಅದು ಎಷ್ಟು ಗುರುತರನಾಗಿ ದೇಹವನ್ನು ಕಾಡುತ್ತದೆ?
ಒಳಸೇರಿದ ಆಲ್ಕೋಹಾಲನ್ನು ಧ್ವಂಸ ಮಾಡುವ ಕೆಲಸ ಯಕೃತ್ತಿನದು. ಆದರೆ ಯಕೃತ್ತಿಗೆ ತನ್ನ ಕೆಲಸಕ್ಕೆ ಒಂದು ಮಿತಿಯಿದೆ. ಅಷ್ಟೇ ಅಲ್ಲ ಯಕೃತ್ತು ತನ್ನ ಇತರೆ ಕೆಲಸಗಳನ್ನು ಬದಿಗೊತ್ತಿ ಆಲ್ಕೋಹಾಲನ್ನು ನಿರ್ವೀಯಗೊಳಿಸಲು ಶ್ರಮಿಸಬೇಕು. ನಿರಂತರವಾಗಿ ಒಳಸೇರುವ ಆಲ್ಕೋಹಾಲ್ ಯಕೃತ್ತಿನ ಮಿತಿಯನ್ನು ಮೀರಿ ರಕ್ತದಲ್ಲಿ ಸಂಚರಿಸಿ ವ್ಯಕ್ತಿಗೆ `ಹ್ಯಾಂಗ್ಓವರ್’ನ್ನುಂಟು ಮಾಡುತ್ತದೆ. ಮದ್ಯದೊಂದಿಗೆ ಸೇವಿಸುವ ಆಹಾರ ಕೂಡ ದೇಹದಲ್ಲಿ ಖಳನಾಯಕನ ಪಾತ್ರವನ್ನು ವಹಿಸುತ್ತದೆ. ಸಾಮಾನ್ಯವಾಗಿ ಕುಡುಕ ಮಂದಿ ಹುರಿದಿದ್ದು, ಕರಿದಿದ್ದನ್ನು ಆಯ್ಕೆ ಮಾಡುತ್ತಾರೆ. ಮದ್ಯ ದೇಹದ ರಸಗಳನ್ನು ಉತ್ತೇಜಿಸುವುದರಿಂದ ಯಾವುದೇ ಆಹಾರವನ್ನು ಹೆಚ್ಚೆಚ್ಚು ಸೇವಿಸಲು ಅವಕಾಶವನ್ನುಂಟು ಮಾಡುತ್ತದೆ. ಕುಡಿತದಿಂದ ಉಂಟಾಗುವ ಕೆಟ್ಟ ಪರಿಣಾಮಗಳ ಜೊತೆಗೆ ಅನಾರೋಗ್ಯಕರವಾದ ಆಹಾರ ಕ್ರಮವೂ ಸೇರಿದಾಗ ದೇಹಕ್ಕೆ ಇಮ್ಮಡಿ ಪ್ರಹಾರಗಳುಂಟಾಗುತ್ತದೆ.
ಅಮಿತ ಮದ್ಯಪಾನದ ಪರಿಣಾಮಗಳು
1. ಯಕೃತ್ತಿನ ಕಾಯಿಲೆಗಳು : ಫ್ಯಾಟೈ ಲಿವರ್, ಹೈಪಟೈಟಿಸ್, ಸಿರೋಸಿಸ್ ಎಂಬ ಮೂರು ಪ್ರಮುಖ ಕಾಯಿಲೆಗಳು ಅಮಿತ ಮದ್ಯಪಾನದಿಂದ ಯಕೃತ್ತನ್ನು ಭಾದಿಸುತ್ತದೆ. ಕೆಲವೊಮ್ಮೆ ಕಡಿಮೆ ಮದ್ಯಪಾನವೂ ಇದಕ್ಕೆ ಕಾರಣವಾಗುವುದುಂಟು.
2. ಹೊಟ್ಟೆಯ ಸಮಸ್ಯೆಗಳು : ಗ್ಯಾಸ್ಟ್ರೈಟಿಸ್, ಊತ, ಅಲ್ಸರ್, ಪ್ಯಾನ್ಕ್ರಿಯಾಡೈಟಿಸ್ ಮುಂತಾದ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ.
3. ಹೃದಯ ಸಂಬಂಧಿ ಕಾಯಿಲೆಗಳು : ಅಮಿತ ಮದ್ಯಪಾನ ಹೃದಯದ ಚಟುವಟಿಕೆಗಳನ್ನು ದುರ್ಬಲಗೊಳಿಸುತ್ತದೆ. ಕಾರ್ಡಿಯೋಮಯೋಪ್ಪತಿ, ರಕ್ತದೊತ್ತಡ ಮುಂತಾದವುಗಳಿಗೆ ನಿಮಿತ್ತವಾಗುತ್ತವೆ.
4. ಮೆದುಳಿನ ಕಾಯಿಲೆಗಳು : ನೆನಪಿನ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಪೋಷಕಾಂಶಗಳ ಕೊರತೆ ಅಮಿತ ಮದ್ಯಪಾನದಿಂದ ಉಂಟಾಗುತ್ತದೆ.. ಅದು ಮೆದುಳಿನ ಕ್ರಿಯಾಶೀಲತೆಗೆ ಭಂಗ ತರುತ್ತದೆ. ಯಾವುದೇ ಕೆಲಸದಲ್ಲಿ ಮನಸ್ಸು ಕೇಂದ್ರೀಕರಿಸಲಾಗುವುದಿಲ್ಲ. ಸರಿಯಾದ ಸಮಯಕ್ಕೆ ಮಾಡಬೇಕಾದ ಕೆಲಸಗಳು ಆಗದಿರುವುದು ಕೂಡ ನೆನಪಿನ ಶಕ್ತಿಯು ಕುಂಠಿತಗೊಳ್ಳುವುದರಿಂದ, ಹಾಸಿಗೆ ಬಿಟ್ಟೇಳುವಾಗ ಅಥವಾ ನಡೆಯುವಾಗ ಸಮತೋಲನ ಕೂಡ ತಪ್ಪುತ್ತದೆ.
5. ನಾಡೀ ತಕರಾರುಗಳು: ನಿರಂತರವಾಗಿ ಕುಡಿಯುವವರಲ್ಲಿ ನರಗಳ ದೌರ್ಬಲ್ಯವುಂಟಾಗುತ್ತದೆ. ಪೆರಿಫೆರಲ್ ನ್ಯೂರೋಪತಿ ಹೆಚ್ಚಾಗುವ ಸಾಧ್ಯತೆಯುಂಟು. ಕಕ್ಕಸ್ಸಿಗೆ ಕುಳಿತಾಗ ಮತ್ತೆ ಏಳಬೇಕೆಂದರೆ ಕೈಕಾಲುಗಳು ಹಿಡಿತ ಕಳೆದುಕೊಳ್ಳುವುದು. ಕಣ್ಣಿನ ಪ್ರಮುಖ ಓಪ್ಟಿಕ್ ನರದ ಪ್ರವರ್ತನಗಳನ್ನು ಇದು ತಕರಾರಿಗೆ ಒಯ್ಯುತ್ತದೆ.
6. ಗೌಟ್: ಮದ್ಯಪಾನದಿಂದ ಯೂರಿಕ್ ಆಮ್ಲದ ಉತ್ಪತ್ತಿ ಹೆಚ್ಚಾಗಿ ಗೌಟ್ ಎಂಬ ಸಂಧಿವಾತ ಕಾಯಿಲೆಗೆ ಕಾರಣವಾಗುತ್ತದೆ. ಇದು ವಿಪರೀತ ನೋವನ್ನು ಕೊಡುತ್ತದೆ.
7. ನಿದ್ರಾಹೀನತೆ: ಕುಡಿದರೆ ಚೆನ್ನಾಗಿ ನಿದ್ರೆ ಮಾಡಬಹುದೆಂಬ ಭಾವನೆ ಬಹುತೇಕರಲ್ಲಿ ಮನೆ ಮಾಡಿದೆ. ಇದು ತಪ್ಪು, ಕುಡಿದರೆ, ಅಮಲಿಗೆ ತಕ್ಷಣ ನಿದ್ರೆ ಬರುವುದು ನಿಜ. ಆದರೆ ಸುಖ ನಿದ್ರೆಯಂತು ಬರಲಾರದು. ಮದ್ಯಪಾನ ಸುಖನಿದ್ರೆಗೆ ಮಾರಕವಾಗಿದೆ. ಕೆಲವರು ಚೆನ್ನಾಗಿ ಕುಡಿದು ಮಲಗಿ ಗೊರಕೆ ಹೊಡೆಯುತ್ತಾರೆ. ಆದರೆ ಯಾವುದೋ ಒಂದು ಯಾಮದಲ್ಲಿ ಎಚ್ಚರಗೊಂಡರೆ ಮತ್ತೆ ಅವರ ಬಳಿ ನಿದ್ರೆ ಸುಳಿಯದು. ಆಗ ಅವರು ಮತ್ತೆ ಕುಡಿಯುವುದಕ್ಕೆ ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ಉಸಿರಾಟದ ತೊಂದರೆಯನ್ನೂ ಅನುಭವಿಸಬೇಕಾಗುತ್ತದೆ.
8. ಲೈಂಗಿಕ ಶಕ್ತಿಯ ಭ್ರಮೆ: ಕುಡಿದರೆ ಲೈಂಗಿಕ ಕ್ರಿಯೆಯಲ್ಲಿ ಅಮಿತ ಆನಂದ ಸಿಗುತ್ತದೆ ಎಂಬ ಭ್ರಮೆ ಕೆಲವರಲ್ಲಿದೆ. ಗಂಡು-ಹೆಣ್ಣು ಕುಡಿದು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದುಂಟು. ಆದರೆ ಇದು ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಮುಂದೆ ಲೈಂಗಿಕ ನಿಶ್ಯಕ್ತಿ, ಉದ್ದರಣೆಯಿಲ್ಲದಿರುವಿಕೆ ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು. ಹೆಂಗಸರಲ್ಲಿ ಕುಡಿತ ಗರ್ಭಸ್ರಾವಕ್ಕೂ ಕಾರಣಾವಾಗಬಹುದು.
9.ಶಕ್ತಿ ಕುಂದುವಿಕೆ : ಅಮಿತ ಮದ್ಯಪಾನ ಮೂಳೆಯ ಶಕ್ತಿಯನ್ನು ಕುಗ್ಗಿಸುತ್ತದೆ. ಇಂತವರು ಕೆಳಕ್ಕೆ ಬಿದ್ದರೆ ಮೂಳೆ ಮುರಿತಕ್ಕೂ ಕಾರಣವಾಗುತ್ತದೆ. ಮದ್ಯಪಾನವನ್ನು ಹಿತಮಿತವಾಗಿ, ಔಷಧಿಯಂತೆ ಬಳಸಿದರೆ ದೇಹದ ಮೇಲೆ ಯಾವುದೇ ದುಷ್ಪರಿಣಾಮಗಳು ಉಂಟಾಗುವುದಿಲ್ಲ. ಆದರೆ ಮದ್ಯಪಾನವನ್ನು ಆಹಾರದಂತೆ ಬಳಸಿದರೆ ಕಾಯಿಲೆ ಕಟ್ಟಿಟ್ಟ ಬುತ್ತಿ.
-ಕೆ.ಕೆ. ಗಂಗಾಧರನ್