ಡಯಾಬಿಟಿಸ್ ಕಾಯಿಲೆಯನ್ನು ನಮ್ಮ ಪ್ರಾಚೀನರು ಪ್ರಮೇಹ ಎಂದು ಕರೆದಿದ್ದಾರೆ. ಅದರಲ್ಲಿ ಅನೇಕ ವಿಧಗಳನ್ನು ಗುರುತಿಸಿದ್ದಾರೆ. ಆದರೆ ನಮ್ಮಲ್ಲಿ ಹೆಚ್ಚಾಗಿ ಕಂಡುಬರುವುದು ಮಧುಮೇಹ ಎಂಬ ಪ್ರಕಾರ. ಆಹಾರ ಪದ್ಧತಿ, ಜೀವನಶೈಲಿ ಪರಿಸರ ಹಾಗೂ ವಂಶವಾಹಿ ಕಾರಣಗಳು ಈ ಕಾಯಿಲೆಯ ಹಿಂದೆ ಇದೆ. ಚಿಕಿತ್ಸೆ ವಿಧಾನಗಳು ಕಾಯಿಲೆಯ ವಿಧ ಹಾಗೂ ಅವಸ್ಥೆ ಅವಲಂಬಿಸಿ ಬೇರೆ ಬೇರೆ ರೀತಿಯಾಗಿರುತ್ತವೆ. ಒಂದೊಂದೇ ಗಿಡಮೂಲಿಕೆಗಳ ವಿವಿಧ ಪ್ರಯೋಗಗಳು ಹಾಗೂ ಮಿಶ್ರ ಔಷಧ ಪ್ರಯೋಗಗಳು ಆಯುರ್ವೇದದ ಶಾಸ್ತ್ರೀಯ ಗ್ರಂಥಗಳಲ್ಲಿ ಉಲ್ಲೇಖಗೊಂಡಿದೆ.
ಆದರೆ ಇಂದಿನ ವರ್ತಮಾನದ ವಿಜ್ಞಾನದ ಬೆಳಕಿನಲ್ಲಿ ಅವುಗಳನ್ನು ಮರುದೃಡೀಕರಣ ಗೊಳಿಸಬೇಕಾದ ಅಗತ್ಯವೂ ಇದೆ. ಇದು ಪರಸ್ಪರ. ಆಯುರ್ವೇದ ಹಾಗೂ ಆಧುನಿಕ ವಿಜ್ಞಾನ- ಇವೆರಡರ ಬೆಳವಣಿಗೆಗೂ ಪೂರಕ. ಆಧುನಿಕ ವಿಜ್ಞಾನದ ಕ್ರಾಂತಿಕಾರಿ ಪ್ರಯೋಗ ಹಾಗೂ ಅಭೂತಪೂರ್ವ ಸಂಶೋಧನೆಯ ಫಲಗಳ ನಡುವೆಯೂ, ಹಲವಾರು ಪಂಥಾಹ್ವಾನಗಳು ಮಧುಮೇಹಕ್ಕೆ ಸಂಬಂಧಿಸಿ ಅಸ್ತಿತ್ವದಲ್ಲಿದೆ. ಈ ಕಾರಣಕ್ಕೆ ವೈದ್ಯಕೀಯ ಜಗತ್ತಿನ ವಿವಿಧ ಆಯಾಮಗಳ ಸುಪ್ತ ಶಕ್ತಿಯನ್ನು ಮತ್ತೆ ಅನ್ವೇಷಿಸಬೇಕಾದ ಅನಿವಾರ್ಯತೆಯನ್ನು ಪ್ರಸ್ತುತ ಸಂದರ್ಭವು ಅಪೇಕ್ಷಿಸುತ್ತದೆ.
ಇಷ್ಟೆಲ್ಲಾ ವೈದ್ಯಕೀಯ ಸೌಲಭ್ಯಗಳು ಹಾಗೂ ಪತ್ತೆ ಮಾಡುವ ವಿಧಾನಗಳು ಪರಿಕರಗಳು ಇದ್ದಾಗ್ಯೂ ಮಧುಮೇಹವು ಜಗತ್ತನ್ನು ಹೆಚ್ಚೆಚ್ಚು ಏಕೆ ಆವರಿಸಿಕೊಳ್ಳುತ್ತಿದೆ?
ಆಯುರ್ವೇದವು ಇಂತಹ ಸಂದರ್ಭಗಳನ್ನು ಸಮಗ್ರವಾಗಿ ಮತ್ತು ಪರಿಣಾಮಕಾರಿಯಾಗಿ ನಿಭಾಯಿಸುವ ಮಾರ್ಗವನ್ನು ಕಂಡುಕೊಳ್ಳುತ್ತದೆ. ಯುಕ್ತವಾದ ಸಂಶೋಧನಾ ಮಾದರಿಗಳನ್ನು ರೂಪಿಸುವುದು, ಆಯುರ್ವೇದ ಔಷಧಗಳ ಸುರಕ್ಷತೆ ಮತ್ತು ಸಾಮಥ್ರ್ಯವನ್ನು ಪ್ರಕಾಶ ಗೊಳಿಸಲು ಎದುರಾಗುವ ಒಂದು ಸವಾಲು. ಈ ಪಂಥಾಹ್ವಾನ ಮತ್ತು ಪರಿಮಿತಿಗಳ ನಡುವೆಯೂ ಕೆಲವಾರು ಪ್ರಾಯೋಗಿಕವಾದ, ರೋಗಿ ಕೇಂದ್ರಿತವಾದ ವರದಿಗಳು ಆಯುರ್ವೇದದ ಚಿಕಿತ್ಸೆಗಳ ಸಾಮಥ್ರ್ಯ ಹಾಗೂ ಸುರಕ್ಷತೆಯನ್ನು ಸಾಬೀತುಗಳಿಸಲು ಸಮರ್ಪಕ ಸಾಕ್ಷ್ಯಾಧಾರಗಳನ್ನು ಒದಗಿಸುತ್ತವೆ.
ಡಯಾಬಿಟಿಸ್ ಆಧುನಿಕ ರೀತಿಯಲ್ಲಿ ಒಂದು ಮೆಟಾಬಾಲಿಕ್ ಡಿಸಾರ್ಡರ್. ಅಂದರೆ ದೇಹದ ಚಯಾಪಪಚಯ ಕ್ರಿಯೆಯಲ್ಲಿ ಆಗುವ ವ್ಯತ್ಯಯ. ಅಂದರೆ ಮೇದೋಜೀರಕ ಗ್ರಂಥಿಯ ಐಲೆಟ್ಸ ಲಾಂಗರ್ ಹ್ಯಾನ್ಸ್ ನಲ್ಲಿನ ಬೀಟಾ ಕೋಶಗಳು ಸುರಿಸುವ ಇನ್ಸುಲಿನ್ ಹಾರ್ಮೋನ್ ಕೊರತೆಯಿಂದಾಗಿ, ರಕ್ತದಲ್ಲಿ ಸಕ್ಕರೆಯ ಪ್ರಮಾಣ ಇದ್ದರೂ ಅದನ್ನು ಬಳಸಿಕೊಳ್ಳಲು ಕೋಶಗಳು ಸಮರ್ಥವಾಗುವುದಿಲ್ಲ. ಇದರಿಂದಾಗಿ ಸಕ್ಕರೆಯು ಕೋಶದೊಳಗೆ ನುಗ್ಗಿ ಶಕ್ತಿಪ್ರದಾನ ಮಾಡುವುದರ ಬದಲು, ರಕ್ತದಲ್ಲಿ ಹೆಚ್ಚು ಪ್ರಮಾಣದಲ್ಲಿ ಸಂಚಯ ಗೊಳ್ಳುತ್ತದೆ. ಇದರಿಂದಾಗಿ, ದೀರ್ಘಕಾಲ ಇದು ಮುಂದುವರೆದಲ್ಲಿ ಅಂಗಾಂಗಗಳ ವೈಫಲ್ಯವು ಉಂಟಾಗುವುದು ಖಂಡಿತ. ಆದರೆ ರೋಗಿಗಳು ಸಕ್ಕರೆಯ ಅಂಶ ಹೆಚ್ಚಾಗಿದ್ದರೂ,” ನನಗೆ ಗಾಯ ಬೇಗ ಗುಣವಾಗುತ್ತದೆ”,” ನನಗೆ ಇಷ್ಟರವರೆಗೆ ಏನು ತೊಂದರೆ ಆಗಿಲ್ಲ” ಇತ್ಯಾದಿ ಸಬೂಬುಗಳೊಂದಿಗೆ ವೈದ್ಯರಲ್ಲಿ ಚರ್ಚೆ ಮಾಡಿ ಔಷದ ಸೇವನೆಯನ್ನು ನಿರಾಕರಿಸುತ್ತಾರೆ!
ಕೆಲವರು ವೈದ್ಯರೊಂದಿಗೆ” ನನಗೆ ಇನ್ಸುಲಿನ್ ಬೇಡ, ಮಾತ್ರೆ ಮಾತ್ರ ಸಾಕು” ಎಂದು ಹಟ ಮಾಡುತ್ತಾರೆ. ಆದರೆ ಮಾತ್ರೆಗಳು ಪ್ರಯೋಜನ ನೀಡದೇ ಹೋದಾಗ ಇನ್ಸುಲಿನ್ ಚುಚ್ಚುಮದ್ದು ಅನಿವಾರ್ಯ ಎಂಬುದನ್ನು ರೋಗಿಗಳು ಅರ್ಥಮಾಡಿಕೊಳ್ಳುವುದಿಲ್ಲ ಎಂಬುದು ಭಾರತದ ಸಾಮಾಜಿಕ ಪರಿಸ್ಥಿತಿಯ ದುರಂತ. ಇನ್ಸುಲಿನ್ ಡಿಪೆಂಡೆಂಟ್, ಅಂದರೆ ಟೈಪ್-1 ಮಧುಮೇಹದಲ್ಲಿ ಸ್ವಲ್ಪವೂ ಇನ್ಸುಲಿನ್ ಉತ್ಪಾದನೆ ಆಗದೆ ಇರುವುದರಿಂದ ಇನ್ಸುಲಿನ್ ಚುಚ್ಚುಮದ್ದು ಅನಿವಾರ್ಯ. ಎರಡನೇ ವಿಧವಾದ ನಾನ್ ಇನ್ಸುಲಿನ್ ಡಿಪೆಂಡೆಂಟ್, ಅಂದರೆ ಟೈಪ್-2 ಮಧುಮೇಹ ದಲ್ಲೂ ಕೂಡ, ಗುಳಿಗೆಗಳಿಗೆ ಕಾಯಿಲೆಯು ನಿರೋಧಕತೆ ಬೆಳೆಸಿಕೊಂಡಾಗ ಇನ್ಸುಲಿನ್ ಅನಿವಾರ್ಯ.
ಅತಿಯಾದ ಮೂತ್ರ ವಿಸರ್ಜನೆ, ಅತಿಯಾದ ಬಾಯಾರಿಕೆ ಹಾಗೂ ಅತಿಯಾದ ಹಸಿವು- ಇವುಗಳು ಕಾಯಿಲೆಯ ಲಕ್ಷಣಗಳು. ಜಾಗತಿಕವಾಗಿ 1985 ರಲ್ಲಿ 30 ಮಿಲಿಯದಷ್ಟು ಇದ್ದ ಮಧುಮೇಹ ರೋಗಿಗಳ ಸಂಖ್ಯೆ 2000ನೇ ಇಸವಿಯಲ್ಲಿ 177 ಮಿಲಿಯದಷ್ಟು ಆಗಿದೆ. 2030 ನೇ ಇಸವಿಗೆ 360 ಮಿಲಿಯ ವ್ಯಕ್ತಿಗಳು ಸಕ್ಕರೆ ಕಾಯಿಲೆಗೆ ತುತ್ತಾಗುವ ನಿರೀಕ್ಷೆ ಇದೆ. ಟೈಪ್ 2 ಡಯಾಬಿಟಿಸ್ ಕಾಯಿಲೆಯು ಬೊಜ್ಜಿನಿಂದಾಗಿ ಏರುಗತಿಯಲ್ಲಿದೆ. ಬೊಜ್ಜಿಗೆ ಕಾರಣ ವ್ಯಾಯಾಮವಿಲ್ಲದ ಜೀವನ ಶೈಲಿ ಹಾಗೂ ಅತಿಯಾದ ಅನಿಯಮಿತ ಆಹಾರ ಸೇವನೆ.
ಆಯುರ್ವೇದವು ಕಾಯಿಲೆಗೆ ಕಾರಣವಾದ ಸಂಗತಿಗಳನ್ನು ನಿಯಂತ್ರಿಸುವಲ್ಲಿ ಹೆಚ್ಚು ಒತ್ತು ಕೊಡುತ್ತದೆ. ಆಯುರ್ವೇದದಲ್ಲಿ ಪ್ರಧಾನವಾಗಿ ಶರೀರದ ದೋಷಗಳನ್ನು ಶೋಧನ ವಿಧಾನಗಳ ಮೂಲಕ ಹೊರಹಾಕುವ ಸಂಶೋಧನ ಚಿಕಿತ್ಸೆ ಹಾಗೂ ಔಷಧಗಳನ್ನು ನೀಡಿ ದೋಷಗಳನ್ನು ಶಮನಗೊಳಿಸುವ. ಸಂಶಮನ ಚಿಕಿತ್ಸೆ- ಹೀಗೆ ಎರಡು ವಿಧವಾಗಿವೆ. ಆಹಾರ ಮತ್ತು ವ್ಯಾಯಾಮದ ನಿಬಂಧನೆಗಳ ಜೊತೆಗೆ ಸಸ್ಯಜನ್ಯ ಔಷಧಗಳ ಬಳಕೆಯನ್ನು ಒತ್ತಿ ಹೇಳಬಹುದು.
ಆಯುರ್ವೇದದಲ್ಲಿ “ನಿದಾನ ಪರಿವರ್ಜನ “ಅಂದರೆ, ಕಾಯಿಲೆ ಉಂಟುಮಾಡುವ ಕಾರಣಗಳನ್ನು ದೂರವಿಡುವುದು. ಅಂದರೆ ತಪ್ಪಾದ ಜೀವನಶೈಲಿ, ಆಹಾರ ಸೇವನೆಯಲ್ಲಿನ ತಪ್ಪುಗಳು, ಮಾನಸಿಕ ಒತ್ತಡ, ಹಗಲು ನಿದ್ರೆ, ರಾತ್ರಿ ಜಾಗರಣೆ ಇತ್ಯಾದಿಗಳನ್ನು ದೂರಮಾಡುವುದು.
ಆಹಾರದಲ್ಲಿ ಮಸಾಲೆ ಖಾರ, ವೃಕ್ಷ ಅಥವಾ ಒಣಕಲು ಆಹಾರ ಅಂದರೆ ಇಂದಿನ ಪರಿಭಾಷೆಯಲ್ಲಿ ಜಂಕ್ ಫುಡ್, ಎಣ್ಣೆಯಲ್ಲಿ ಕರಿದ ಪದಾರ್ಥ, ಕಬ್ಬಿನಿಂದ ತಯಾರಿಸಲ್ಪಟ್ಟ ಸಕ್ಕರೆ ಬೆಲ್ಲ ಇತ್ಯಾದಿ, ಶರೀರದ ಸ್ಥೌಲ್ಯವನ್ನು ಹೆಚ್ಚಿಸುವ ಸಿಹಿ ಮತ್ತು ಕೊಬ್ಬಿನಿಂದ ಕೂಡಿದ ಪದಾರ್ಥಗಳು, ಒಳಗಿನ ಸ್ರೋತಸ್ಸು ಗಳನ್ನು ಅವರೋಧಗೊಳಿಸ ತಕ್ಕ ಮೊಸರು, ನೆಲಕಡಲೆ ಇತ್ಯಾದಿ ಅಭಿಷ್ಯಂದಿ ಎನಿಸಿಕೊಳ್ಳತಕ್ಕ ಆಹಾರ ಪದಾರ್ಥಗಳು ವಜ್ರ್ಯ.
ಯೋಗಾಸನಗಳು ಹಾಗೂ ಲಘು ವ್ಯಾಯಾಮಗಳು, ನಡಿಗೆ ಪ್ರಯೋಜನಕಾರಿ. ಆಹಾರ ಪದ್ಧತಿಯಿಂದ ಮರೆಯಾಗುತ್ತಿರುವ ಕಹಿ ಮತ್ತು ಚೊಗರು ಹೆಚ್ಚು ಉಪಯೋಗಿಸಬೇಕು.
ಆದರೆ ಬೊಜ್ಜನ್ನು ಹೊಂದಿರುವ ಸ್ಥೂಲ ಪ್ರಮೇಹ ರೋಗಿಗೆ ಆಯುರ್ವೇದದಲ್ಲಿ ಪಂಚಕರ್ಮ ವಿಧಾನಗಳ ಮೂಲಕ ಶರೀರವನ್ನು ಶೋಧಿಸಿ ನಂತರ ಔಷಧ ಚಿಕಿತ್ಸೆ ನೀಡಬೇಕು. ಹಾಗೂ ಕೃಶ ಹಾಗೂ ದುರ್ಬಲ ರೋಗಿಗೆ ಲಘು ಶೋಧನ ಚಿಕಿತ್ಸೆ ನೀಡಿ, ಕೃಶ ಗೊಂಡ ಧಾತುಗಳನ್ನು ಬಲಗೊಳಿಸುವ ಸಂತರ್ಪಣ ಚಿಕಿತ್ಸೆ ನೀಡಬೇಕು. ಇದು ಆಯುರ್ವೇದದಲ್ಲಿ ಡಯಾಬಿಟಿಸ್ ರೋಗದ ಪ್ರಧಾನ ಚಿಕಿತ್ಸಾ ಸೂತ್ರ. ಹೆಸರು, ಬಾರ್ಲಿ ಹಾಗೂ ಪುರಾಣ ಶಾಲಿ ಅಂದರೆ ಹಳೆಯ ಅಕ್ಕಿ ಪ್ರಶಸ್ತ ಆಹಾರ.
ಒಂದೇ ಆಗಿ ಪ್ರಯೋಗಿಸಬಹುದಾದ ದ್ರವ್ಯಗಳಲ್ಲಿ ನೆಲ್ಲಿಕಾಯಿ, ಹಾಗಲಕಾಯಿ, ಮೆಂತೆ, ಶಿಲಾಜಿತು, ನೇರಳೆ, ತೇಜ ಪತ್ರ, ದಾಲ್ಚಿನ್ನಿ, ಅಮೃತಬಳ್ಳಿ, ಖದಿರ(ಕಾಚಿ), ದೇವದಾರು, ಏಕನಾಯಕ ಇತ್ಯಾದಿಗಳು ಒಳಗೊಳ್ಳುತ್ತವೆ. ಸಕ್ಕರೆ ಕಾಯಿಲೆ ಇಲ್ಲದವರು ಇವುಗಳನ್ನು ಸೇವಿಸಿದರೆ, ಬಾರದಂತೆ ತಡೆಯುತ್ತದೆ. ಅಮೃತಬಳ್ಳಿ ಅಂತೂ ಅದರ ಹೆಸರೇ ಹೇಳುವಂತೆ ಸಾವನ್ನು ದೂರವಿಡಲು” ಅಮೃತ.”
ಆಯುರ್ವೇದ ಸಿದ್ಧ ಔಷಧಿಗಳನ್ನು ಹೇಳುವುದಾದರೆ ಚಂದ್ರಪ್ರಭ ವಟೀ, ಶಿಲಾಜಿತ್ವಾದಿ ವಟೀ, ವಸಂತ ಕುಸುಮಾಕರ ರಸ, ಫಲತ್ರಿಕಾದಿ ಕಶಾಯ, ನಿಶಾಮಲಕಿ ಚೂರ್ಣ, ಮೇಹಾರಿ ವಟಿ, ಅಸನಾದಿ ಗಣ ಕಷಾಯ, ಸಪ್ತ ಚಕ್ರ ಘನವಟಿ, ಅಮೃತದಿ ಚೂರ್ಣ, ನಿಶಾ ಕತಕಾದಿ ಕಷಾಯ, ತ್ರಿಫಲ ಚೂರ್ಣ ಇತ್ಯಾದಿಗಳನ್ನು ವೈದ್ಯರ ಸಲಹೆ ಪಡೆದುಕೊಂಡು ರೋಗಿ ಮತ್ತು ರೋಗಗಳ ಅವಸ್ಥಾಭೇದಗಳ ಅನುಸಾರ ಪ್ರಯೋಗಿಸಬಹುದು. ಸ್ವಯಂ ವೈದ್ಯಕೀಯ ಬೇಡ. ಈಗಾಗಲೇ ಆಧುನಿಕ ಔಷಧಗಳನ್ನು ಸೇವಿಸುತ್ತಿದ್ದರೂ ಕೂಡ ಇವುಗಳನ್ನು ಸೇವಿಸಿದರೆ ವಿಶೇಷ ಜೀವಕೋಶ ರಕ್ಷಕ ಗುಣವಿರುವ ಔಷಧೀಯ ಜಾಡಮಾಲಿಗಳ ಲಾಭವು ಲಭಿಸುವುದರಿಂದ ದೀರ್ಘಕಾಲೀನ ಅಂಗಾಂಗ ವೈಫಲ್ಯವನ್ನು ತಡೆಗಟ್ಟುವುದು.
ಡಾ ರಾಘವೇಂದ್ರ ಪ್ರಸಾದ್ ಬಂಗಾರಡ್ಕ
ಆಯುರ್ವೇದ ತಜ್ಞ ವೈದ್ಯರು, ಪ್ರಸಾದ್ ಆಯುರ್ವೇದ ಹೆಲ್ತ್ ಕೇರ್ ಸೆಂಟರ್
ಪುರುಷರಕಟ್ಟೆ ಪುತ್ತೂರು.
ಮೊಬೈಲ್:9740545979