ಖರ್ಜೂರದ ಮಹತ್ವ : ಬಹುತೇಕ ಎಲ್ಲರಿಗೂ ಪ್ರಿಯವಾದ ಸ್ವಾದಿಷ್ಟ ಹಣ್ಣು ಖರ್ಜೂರ. ಸಿಹಿ ರುಚಿ, ತಂಪು, ಸ್ನಿಗ್ಧ ಮತ್ತು ಧಾತುವರ್ಧಕ ಗುಣವನ್ನು ಹೊಂದಿರುವ ಈ ಖರ್ಜೂರವು ಸಹಜವಾಗಿ ವಾತ ಮತ್ತು ಪಿತ್ತ ದೋಷಗಳನ್ನು ನಿಯಂತ್ರಿಸುತ್ತದೆ.
ಆಯುರ್ವೇದ ಗ್ರಂಥಗಳ ಪ್ರಕಾರ ಬಲವನ್ನು ಹೆಚ್ಚು ಮಾಡುವ ಗುಣವನ್ನು ಹೊಂದಿರುವ ಹಣ್ಣುಗಳಲ್ಲಿ ಖರ್ಜೂರ ಕೂಡ ಅತ್ಯಂತ ಪ್ರಮುಖವಾದುದು. ಆಯುರ್ವೇದದ ಗ್ರಂಥಗಳಲ್ಲಿ ವಿವರಿಸಿದಂತೆ ಖರ್ಜೂರದ ಗುಣಗಳನ್ನು ಈಗ ತಿಳಿದುಕೊಳ್ಳೋಣ. ಖರ್ಜೂರದ ನಿಯಮಿತ ಸೇವನೆಯಿಂದ ಹೃದಯದ ಶಕ್ತಿ ಹೆಚ್ಚಾಗುತ್ತದೆ. ವಿಶೇಷವಾಗಿ ದೌರ್ಬಲ್ಯ, ಮಾನಸಿಕ ಒತ್ತಡ ಅಥವಾ ವೃದ್ಧಾಪ್ಯದ ಕಾರಣದಿಂದ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತಿದ್ದರೆ ಅಂತಹ ಸಂದರ್ಭದಲ್ಲಿ ಖರ್ಜೂರವನ್ನು ನಿಯಮಿತವಾಗಿ ಸೇವನೆ ಮಾಡುವುದು ಒಳ್ಳೆಯದು. ಯಾವುದೇ ಕಾರಣದಿಂದ ಧಾತುಕ್ಷಯವಾಗಿದ್ದರೆ, ತೂಕ ಕಡಿಮೆಯಾಗಿದ್ದರೆ, ಸುಸ್ತು ಉಂಟಾಗುತ್ತಿದ್ದರೆ ಅಂತಹ ಸಂದರ್ಭದಲ್ಲಿ ಖರ್ಜೂರ ತುಂಬಾ ಪ್ರಯೋಜನಕಾರಿ. ಇಂತಹ ತೊಂದರೆಗಳು ಆಗುತ್ತಿರುವಾಗ ಪ್ರತಿನಿತ್ಯ ಐದಾರು ಖರ್ಜೂರಗಳನ್ನು ತುಪ್ಪದ ಜೊತೆ ಸೇವನೆ ಮಾಡಬೇಕು.
ಎಷ್ಟೋ ಬಾರಿ ಚೆನ್ನಾಗಿ ಹಸಿವಾಗುತ್ತಿದ್ದರೂ, ಸರಿಯಾದ ಪ್ರಮಾಣದಲ್ಲಿ ಆಹಾರ ಸೇವನೆ ಮಾಡುತ್ತಿದ್ದರೂ ಸುಸ್ತು, ತೂಕ ಕಡಿಮೆಯಾಗುವುದು, ಮಾಂಸಖಂಡಗಳಲ್ಲಿ ದುರ್ಬಲತೆ ಇಂತಹ ತೊಂದರೆಗಳು ಪದೇ ಪದೇ ಆಗುತ್ತಿದ್ದರೆ ಖರ್ಜೂರಗಳನ್ನು ಹಾಲಿನ ಜೊತೆ ರುಬ್ಬಿ ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಉಷ್ಣದ ಕಾರಣದಿಂದಾಗಿ ಆಗುವ ಹಲವು ಸಮಸ್ಯೆಗಳನ್ನು ಇದು ನಿವಾರಿಸುತ್ತದೆ. ಉಷ್ಣದ ಕಾರಣದಿಂದ ಮೂಲವ್ಯಾಧಿ, ಮೂಗಿನಿಂದ ರಕ್ತಸ್ರಾವ, ಬಿಳಿಮುಟ್ಟಿನಂತಹ ತೊಂದರೆಗಳು ಉಂಟಾಗುತ್ತಿದ್ದರೆ ಖರ್ಜೂರ ತುಂಬಾ ಒಳ್ಳೆಯ ಆಹಾರ ಅಥವಾ ಔಷಧ.
ಆಯುರ್ವೇದ ಗ್ರಂಥಗಳು ಖರ್ಜೂರವನ್ನು ವಿವರಿಸುವಾಗ “ಶುಕ್ರಲಂ” ಎಂದು ಹೇಳಿದ್ದಾರೆ ಅಂದರೆ ಇದು ಶುಕ್ರ ದಾತುವಿಗೆ ಪುಷ್ಟಿ ನೀಡಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಸಂತಾನ ಪ್ರಾಪ್ತಿಯಲ್ಲಿಯೂ ಅನುಕೂಲ ಮಾಡಿಕೊಡುತ್ತದೆ. ದೌರ್ಬಲ್ಯದ ಅಥವಾ ರೋಗನಿರೋಧಕ ಶಕ್ತಿಯ ಕೊರತೆಯ ಕಾರಣದಿಂದ ಪದೇ ಪದೇ ಕೆಮ್ಮು, ದಮ್ಮು ಉಂಟಾಗುತ್ತಿದ್ದರೆ ಖರ್ಜೂರ ತುಂಬಾ ಉಪಕಾರಿ ಆಹಾರ. ಮೆದುಳಿಗೆ ಶಕ್ತಿಯನ್ನು ಕೊಡುವ ಗುಣವನ್ನು ಹೊಂದಿರುವ ಕಾರಣ ಮಾನಸಿಕ ದೌರ್ಬಲ್ಯವನ್ನು ಹೊಂದಿರುವವರು, ನಿದ್ರಾಹೀನತೆ, ಭಯ, ಚಿಂತೆ, ಒತ್ತಡಗಳಿಂದ ಬಳಲುತ್ತಿರುವವರು ಖರ್ಜೂರವನ್ನು ಉತ್ತಮ ಆಹಾರವಾಗಿ ಬಳಕೆ ಮಾಡಬಹುದು.
ಖರ್ಜೂರ ಉಷ್ಣವೆಂದು ತುಂಬಾ ಜನ ಹೆದರುತ್ತಾರೆ. ಆದರೆ ಎಲ್ಲಾ ಆಯುರ್ವೇದ ಗ್ರಂಥಗಳಲ್ಲಿಯೂ ಖರ್ಜೂರವು ತಂಪೆಂದೂ, ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ಎಂದೂ ವಿವರಿಸಿದ್ದಾರೆ. ಹಾಗಾಗಿ ಖರ್ಜೂರವನ್ನು ನಿರ್ಭೀತೆಯಿಂದ ನಿತ್ಯವೂ ಸೇವಿಸಬಹುದು. ಹೊಟ್ಟೆ ಹಸಿದಿರುವಾಗ ಅಥವಾ ಊಟ ಮಾಡುವ ಮೊದಲು ಇದನ್ನು ಸೇವಿಸುವುದು ಒಳ್ಳೆಯದು. ಜೀರ್ಣಕ್ಕೆ ಕಷ್ಟಕರವಾದ ಕಾರಣ ಇದನ್ನು ಊಟದ ನಂತರ ಸೇವಿಸುವುದು ಸರಿಯಲ್ಲ. ಒಂದು ದಿನಕ್ಕೆ ಐದಾರು ಖರ್ಜೂರಗಳನ್ನು ಸೇವಿಸಬಹುದು. ಅಜೀರ್ಣದ ಸಮಸ್ಯೆ ಇದ್ದರೆ ಅಥವಾ ಡಯಾಬಿಟಿಸ್ ಇದ್ದಾಗ ಖರ್ಜೂರದ ಬಳಕೆ ಮಾಡುವುದು ಸರಿಯಲ್ಲ.
ಆದರೆ ಅನ್ನ, ಗೋದಿ, ಸಕ್ಕರೆ, ಬೆಲ್ಲ ಮುಂತಾದ ಕಾರ್ಬೋಹೈಡ್ರೇಟ್ ಯುಕ್ತ ಆಹಾರ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಿ ಸ್ವಲ್ಪ ಖರ್ಜೂರವನ್ನು ಸೇವಿಸಿದರೆ ಮಧುಮೇಹಿಗಳಿಗೂ ತೊಂದರೆ ಆಗುವುದಿಲ್ಲ. ಕೆಲವು ಬಾರಿ ಸರಿಯಾಗಿ ಬೆಳೆಯದ ಖರ್ಜೂರಕ್ಕೆ ಸಕ್ಕರೆ ಪಾಕ ಸೇರಿಸಿ ಸಿಹಿ ಆಗುವಂತೆ ಮಾಡಿ ಮಾರಾಟ ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಕಪ್ಪಗೆ, ಮೆತ್ತಗೆ ಇರುವ ಮತ್ತು ನೈಜ ಸಿಹಿ ಅನುಭವ ಕೊಡುವ ಖರ್ಜೂರವನ್ನು ಬಳಸುವುದು ಸೂಕ್ತ. ಇಂಥವು ಸ್ವಲ್ಪ ದುಬಾರಿಯಾದರೂ ಆರೋಗ್ಯಕ್ಕೆ ಹೆಚ್ಚು ಒಳ್ಳೆಯದಾಗಿರುತ್ತವೆ. ಚಿಕ್ಕ ಮಕ್ಕಳಿಗೆ ರಾಸಾಯನಿಕ ಯುಕ್ತ ಅಂಗಡಿ ತಿನಿಸುಗಳನ್ನು ಕೊಡುವುದರ ಬದಲು ಖರ್ಜೂರ, ಒಣ ಹಣ್ಣುಗಳನ್ನು ಹಾಕಿ ತಯಾರಿಸಿದ ಲಡ್ಡು, ಖರ್ಜೂರದ ಮಿಲ್ಕ್ ಶೇಕ್ ನಂತಹ ಸ್ವಾದಿಷ್ಟ ತಿನಿಸುಗಳನ್ನು ಕೊಡಬಹುದು. ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಖರ್ಜೂರ ಆರೋಗ್ಯಕಾರಕ ಹಾಗೂ ಬಲದಾಯಕ.