ಕರುಳು ಜಾರುವಿಕೆ ಅಥವಾ ಹರ್ನಿಯ

 ಜೀವಿ ಎಂದಮೇಲೆ ಸಮಸ್ಯೆಗಳ ಆಗರವೇ ಸರಿ. ಸಮಸ್ಯೆಗಳು ಮನಸಿಕವಾಗಿರಬಹುದು ಇಲ್ಲವೇ ಶಾರೀರಿಕವಾಗಿ ಬರಬಹುದು. ಶಾರೀರಿಕವಾಗಿ ನಮ್ಮನ್ನು ಬಾಧಿಸುವ ಸಮಸ್ಯೆಗಳಲ್ಲಿ ‘ಹರ್ನಿಯಾ’ ಕೂಡ ಒಂದು. ಇದು ಸ್ತ್ರೀಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಹರ್ನಿಯಾ ಎಂದರೇನು?
ಒಡಲಿನ (ಉದರ) ಒಳಗಿನ ಅಂಗಾಂಗಳು ಅದರಲ್ಲೂ ಬಹಳ ಮುಖ್ಯವಾಗಿ ಕರುಳು ಕೆಲವು ಸಾರಿ ಉದರದ ಹೊರಕ್ಕೆ ಜಾರಿ ಮೃದುವಾದ ಮತ್ತು ಉಬ್ಬಿದ ಮಾಂಸದ ಮುದ್ದೆಯ ರೀತಿಯಲ್ಲಿ (ಗುಡ್ಡೆಯ, ಗಂಟಿನ ಹಾಗೆ) ಕಾಣುವ ಗಂಟಿಗೆ ‘ಹರ್ನಿಯಾ’ ಎಂದು ಹೆಸರು. ಈ ರೀತಿಯ ಗಂಟುಗಳು ಉದರದ ಯಾವ ಭಾಗದಲ್ಲಾದರೂ ಕಂಡುಬರಬಹುದು.
ಹರ್ನಿಯಾ ಯಾರಲ್ಲಿ ಹೆಚ್ಚಾಗಿ ಕಂಡುಬರಬಹುದು?
ಹರ್ನಿಯಾ ಯಾವ ಭೇದ ಭಾವವಿಲ್ಲದೆ ಎಲ್ಲರಲ್ಲೂ ಕಂಡು ಬರುತ್ತದೆ. ಇದು ಶೇ.2 ರಷ್ಟು ಪುರುಷರಲ್ಲಿ ಮತ್ತು ಶೇ. 1ರಷ್ಟು ಸ್ತ್ರೀಯರಲ್ಲಿ ಕಂಡುಬರುತ್ತದೆ. ಮಕ್ಕಳಲ್ಲಿ, 50 ವರ್ಷ ದಾಟಿದವರಲ್ಲಿ ಮತ್ತು ಧೂಮಪಾನ ಚಟವನ್ನು ಬೆಳೆಸಿಕೊಂಡವರಲ್ಲಿ ಈ ಸಮಸ್ಯೆಯು ಹೆಚ್ಚಾಗಿ ಕಂಡುಬರುತ್ತದೆ.
ಹರ್ನಿಯಾ ಎಲ್ಲೆಲ್ಲಿ ಕಂಡು ಬರಬಹುದು?
ಹರ್ನಿಯಾವು ಉದರದ ಯಾವುದೇ ಭಾಗದಲ್ಲಾದರೂ ಕಂಡುಬರಬಹುದು. ಮುಖ್ಯವಾಗಿ ಈ ಕೆಳಕಂಡ ಜಾಗಗಳಲ್ಲಿ ಕಂಡುಬರುತ್ತದೆ.
ತೊಡೆ ಸಂದಿನ ಹರ್ನಿಯ: ಇದನ್ನು ಇಂಗ್ವೆನಲ್ ಹರ್ನಿಯಾ (Inguinal Hernia) ಎಂದು ಕರೆಯುತ್ತಾರೆ. ಹರ್ನಿಯಾಗಳಲ್ಲಿಯೇ ಇದು ಅತ್ಯಂತ ಹೆಚ್ಚಾಗಿ ಕಂಡುಬರುತ್ತದೆ. ಶೇ.75ರಷ್ಟು ಹರ್ನಿಯಾಗಳು ಈ ರೀತಿಯದ್ದಾಗಿರುತ್ತದೆ.
ವೃಷಣ ನೀರ್ತುಂಬುವಿಕೆ ಹರ್ನಿಯಾ (ಹೈಡ್ರೋಸಿಲ್-Hydrocele) : ಕೆಲವು ಸಾರಿ ವೃಷಣಗಳ ಒಳಗೆ ಹರ್ನಿಯಾ ಉಂಟಾಗಿ ನೀರು ತುಂಬುತ್ತದೆ. ಇದನ್ನು ಚೋರು ಅಥವಾ ನೀರ್ತುಂಬುವಿಕೆ ಹರ್ನಿಯಾ ಎಂದು ಕರೆಯುತ್ತಾರೆ.
ಹೊಕ್ಕಳು ಹರ್ನಿಯಾ (ಅಂಬೆಲಿಕಲ್ ಹರ್ನಿಯಾ – Umbilical Hernia): ಹೊಕ್ಕಳಿನ ಭಾಗದಲ್ಲಿ ಉಂಟಾಗುವ ಹರ್ನಿಯಾವನ್ನು ಹೊಕ್ಕಳು ಹರ್ನಿಯಾ ಎಂದು ಕರೆಯುತ್ತಾರೆ.
ಹಯಾಟಸ್ ಹರ್ನಿಯಾ – (Hiatus Hernia): ಉದರದ ಭಾಗ ಎದಗೂಡಿನ ಒಳಗೆ ಸೇರಿಕೊಳ್ಳುವುದಕ್ಕೆ ‘ಹಯಾಟಸ್ ಹರ್ನಿಯಾ’ ಎಂದು ಕರೆಯುತ್ತಾರೆ.
ಹೊಲಿಗೆ ಹರ್ನಿಯಾ (Incisional Hernia): ಶಸ್ತ್ರ ಚಿಕಿತ್ಸೆಗಾಗಿ ಹೊಲಿಗೆ ಹಕಿದ ಜಾಗದಲ್ಲಿ ಈ ರೀತಿಯ ಹರ್ನಿಯಾ ಬರಬಹುದು.
ಮರುಕಳಿಸಿದ ಹರ್ನಿಯಾ (Recurrent Hernia): ಒಮ್ಮೆ ಹರ್ನಿಯಾ ಶಸ್ತ್ರ ಚಿಕಿತ್ಸೆ ಆಗಿ ಪುನಃ ಅದೇ ಜಾಗದಲ್ಲಿ ಹರ್ನಿಯಾ ಬರಬಹುದು.
ಹರ್ನಿಯಾದ ಹಂತಗಳು:
ಕುಗ್ಗಿಸಬಲ್ಲ ಹರ್ನಿಯಾ (Reducible Hernia): ಇದು ಪ್ರಾಥಮಿಕ ಹಂತ. ಈ ಹಂತದಲ್ಲಿ ಹರ್ನಿಯಾವನ್ನು ಉದರದ ಒಳಗೆ ತಳ್ಳಿ ಹರ್ನಿಯಾ ಇಲ್ಲದಂತೆ ಮಾಡಬಹುದು.
ಕುಗ್ಗಿಸಲಾಗದ ಹರ್ನಿಯಾ (Irreducible Hernia): ಇದು ದ್ವಿತೀಯ ಹಂತ, ಈ ಹಂತದಲ್ಲಿ ಹರ್ನಿಯಾವು ಒಳಗೆ ತಳ್ಳದೇ ಇರುವ ಪರಿಸ್ಥಿತಿ ತಲುಪಿರುತ್ತದೆ.
ಸಿಕ್ಕಿಹಾಕಿಕೊಂಡ ಹರ್ನಿಯಾ (Obstructed Hernia): ಹರ್ನಿಯಾವು ಒಳಗೆ ತಳ್ಳಲಾಗದ ಸ್ಥಿತಿಯನ್ನು ತಲುಪಿರುತ್ತದೆ.
ಉಸಿರು ಕಟ್ಟಿದ ಹರ್ನಿಯಾ (Strangulated Hernia): ಇಲ್ಲಿ ಹರ್ನಿಯಾವು ಒಳಗೆ ತಳ್ಳಲಾಗದೆ ಸಿಕ್ಕಿಹಾಕಿಕೊಂಡು ಉಸಿರುಕಟ್ಟಿ ನೇಣುಹಾಕಿದ ಹಾಗೆ ಅಥವಾ ಹಗ್ಗ ಬಿಗಿದ ರೀತಿಯಲ್ಲಿ ಇರುತ್ತದೆ.
`ಹರ್ನಿಯಾ’ ಬರಲು ಕಾರಣಗಳು:
ಗಂಡಸರಲ್ಲಿ ಭ್ರೂಣಾವಸ್ಥೆಯಲ್ಲಿ ವೃಷಣಗಳು ಎರಡರ ಒಳಗೆ ಇರುತ್ತದೆ. ನಾಲ್ಕನೇ ತಿಂಗಳು ಕಳೆದ ನಂತರ ವೃಷಣಗಳು ಉದರದಿಂದ ಕೆಳಗೆ ಜಾರಿ ವೃಷಣದ ಚೀಲಕ್ಕೆ ಬಂದು ಸೇರುತ್ತದೆ. ಈ ಕ್ರಿಯೆ ಜರುಗುವ ಸಮಯದಲ್ಲಿ ವೃಷಣ ಜಾರಿ ವೃಷಣಚೀಲಕ್ಕೆ ಬರುವ ಜಾಗದಲ್ಲಿ ಒಂದು ಸಂದು ಉಂಟಾಗುತ್ತದೆ. ಕೆಲವು ಸಾರಿ ಈ ಸಂದು ಹಿಗ್ಗಿ ಅದರ ಮುಖಾಂತರ ಕರುಳು ಜಾರಿ ತೊಡೆ ಸಂದಿನ ಹರ್ನಿಯಾ ಉಂಟಾಗುತ್ತದೆ. ಶೇ. 70 ರಷ್ಟು ಬಲಭಾಗದಲ್ಲಿ ಕಂಡುಬರುತ್ತದೆ. ಶೇ.30 ರಷ್ಟು ಎಡಭಾಗದಲ್ಲಿ ಕಂಡುಬರುತ್ತದೆ. ಅಲ್ಲದೆ

  • ಉದರದ ಒಳಗೆ ಅತಿಯಾದ ಒತ್ತಡ ಉಂಟಾಗುವುದರಿಂದ
  • ಆಮ್ಲತೆ ಹೆಚ್ಚಾಗಿ ಸರಿಯಾದ ಚಿಕಿತ್ಸೆ ಪಡೆಯದಿದ್ದಾಗ
  • ಮಲಬದ್ಧತೆ ಉಂಟಾದಾಗ, ಮೂತ್ರ ಕಟ್ಟುವುದರಿಂದ
  • ದೀರ್ಘಕಾಲದ ಕೆಮ್ಮಿನಿಂದ ಮತ್ತು ಮಿತಿಮೀರಿದ ಮದ್ಯಪಾನ ಮತ್ತು ಮಸಾಲೆ ಪದಾರ್ಥಗಳ ಸೇವನೆಯಿಂದ
  • ನಾಯಿಕೆಮ್ಮು, ದಮ್ಮು, ಭಾರವಾದ ತೂಕ ಎತ್ತುವುದರಿಂದ
  • ಬೊಜ್ಜುತನದಿಂದ ಬಳಲುತ್ತಿರುವವರಲ್ಲಿ
  • ಗರ್ಭಿಣಿ ಸ್ತ್ರೀಯರಲ್ಲಿ
  • ಕೆಲವೊಮ್ಮೆ ಹುಟ್ಟಿದಾಗಿನಿಂದಲೂ ಹರ್ನಿಯಾ (Congental Hernia): ಬಂದಿರಬಹುದು.

ಹರ್ನಿಯಾದ ಚಿಹ್ನೆಗಳು ಯಾವುವು?
ಉಬ್ಬುವುದು, ಊತಬರುವುದು, ವೃಷಣ ಚೀಲಗಳಲ್ಲಿ ಊತಬರುವುದು, ಮಕ್ಕಳು ಅಳುವಾಗ, ಕೆಮ್ಮಿದಾಗ ಮತ್ತು ತುಂಬಾ ಶ್ರಮದಾಯಕ ಕೆಲಸಗಳಲ್ಲಿ ಊತ ಕಂಡುಬರಬಹುದು. ಊತದ ಭಾಗವು ಮೃದುವಾಗಿರುತ್ತದೆ. ಹರ್ನಿಯಾ ಇರುವ ಜಾಗದಲ್ಲಿ ನೋವು ಬರಬಹುದು. ಅಥವಾ ಇಲ್ಲದೇ ಇರಬಹುದು.
ಹರ್ನಿಯಾ ಚೀಲದ ಒಳಗೆ ಏನಿರುತ್ತದೆ?
ಹರ್ನಿಯಾ ಚೀಲದ ಒಳಗೆ ಕರುಳು, ಕೊಬ್ಬಿನ ಅಂಶ ಮತ್ತು ನೀರಿನ ಅಂಶ ಮುಂತಾದವುಗಳು ಇರುತ್ತವೆ.
ಹರ್ನಿಯಾದಿಂದಾಗುವ ದುಷ್ಪರಿಣಾಮಗಳು ಏನು?
ಪ್ರಾಥಮಿಕ ಹಂತದ ಸ್ಥಿತಿಯಲ್ಲಿ ಹರ್ನಿಯಾವನ್ನು ಒಳಗೆ ತಳ್ಳಬಹುದು. ಆದರೆ ಮುಂದುವರೆದ ಸ್ಥಿತಿಯಲ್ಲಿ ಹರ್ನಿಯಾ ಇದ್ದರೆ ಅದನ್ನು ಒಳಗೆ ತಳ್ಳಲಾಗುವುದಿಲ್ಲ. ಇದರಿಂದ ವಾಕರಿಕೆ, ವಾಂತಿ, ಅಸಹ್ಯಕರ ಭಾವನೆ, ಅತಿಯಾದ ನೋವು ಕಂಡುಬರಬಹುದು ಮತ್ತು ಇದರ ಜೊತೆಗೆ ಕರುಳಿಗೆ ರÀಕ್ತಸಂಚಾರ ಕಡಿಮೆಯಾಗಿ ಜೀವಕ್ಕೆ ಅಪಾಯವಾದರೂ ಆಶ್ಚರ್ಯವಿಲ್ಲ. ವೃಷಣಗಳ ನೀರ್ತುಂಬುವಿಕೆ ಹರ್ನಿಯಾದಿಂದ ವೀರ್ಯೋತ್ಪಾದನೆ ಕುಗ್ಗಬಹುದು.
ತಪಾಸಣೆ ಮಾಡುವುದು ಹೇಗೆ?
ವೈದ್ಯಕೀಯ ಮತ್ತು ಶಾರೀರಿಕ ತಪಾಸಣೆಯಿಂದ ಬಹುತೇಕ ಹರ್ನಿಯಾವನ್ನು ಕಂಡುಹಿಡಿಯಬಹುದು. ಅಲ್ಲದೆ ಕ್ಷ-ಕಿರಣದ (X-Ray) ಮೂಲಕ ಮತ್ತು ಎಂಡೋಸ್ಕೋಪಿ.
ಹರ್ನಿಯಾಕ್ಕೆ ಚಿಕಿತ್ಸೆಗಳು:
ವೈದ್ಯಕೀಯ ಚಿಕಿತ್ಸೆ: ಹರ್ನಿಯಾ ಬರುವ ಕಾರಣಗಳನ್ನು ಗುರತಿಸಿ ಅವುಗಳನ್ನು ನಿಯಂತ್ರಿಸುವ ಮುಖಾಂತರ ಹರ್ನಿಯಾವನ್ನು ತಡೆಗಟ್ಟಬಹುದು. ಉದಾಹರಣೆಗೆ ದೇಹತೂಕವನ್ನು ಸಮಪ್ರಮಾಣದಲ್ಲಿಡುವುದರಿಂದ, ಧೂಮಪಾನದಿಂದ ದೂರವಾಗುವುದರಿಂದ ಪ್ರಾರಂಭಿಕ ಹಂತದ ಹರ್ನಿಯಾವನ್ನು (ಕುಗ್ಗಿಸಬಲ್ಲ ಹರ್ನಿಯಾ) ನಿಯಂತ್ರಿಸಬಹುದು. ಅಲ್ಲದೆ ಇದಕ್ಕೆ ‘ಹರ್ನಿಯಾ ನಿಯಂತ್ರಿತ ಸೊಂಟಪಟ್ಟಿಯನ್ನು ಧರಿಸುವುದರಿಂದಲೂ (Truss-ಹರ್ನಿಯಾಕ್ಕೆಂದೇ ವಿಶೇಷವಾಗಿ ಸಿದ್ಧಪಡಿಸಿದ ಸೊಂಟಪಟ್ಟಿ) ನಿಯಂತ್ರಿಸಬಹುದು.
ಶಸ್ತ್ರ ಚಿಕಿತ್ಸೆ:
ದ್ವ್ವಿತೀಯ ಹಂತದ ಹರ್ನಿಯಾವನ್ನು ಶಸ್ತ್ರಕ್ರಿಯೆ ಮಾಡುವ ಮುಖಾಂತರ ಇಲ್ಲವಾಗಿಸಬಹುದು. ವೈದ್ಯಕೀಯ ಚಿಕಿತ್ಸೆಯಿಂದ ಗುಣಪಡಿಸಲಾಗದ ಹರ್ನಿಯಾಗಳಿಗೆ ಮತ್ತು ಕುಗ್ಗಿಸಲಾರದ ಹರ್ನಿಯಾ, ಸಿಕ್ಕಿಹಾಕಿಕೊಂಡ ಹರ್ನಿಯಾ ಹಾಗೂ ಉಸಿರು ಕಟ್ಟಿದ ಹರ್ನಿಯಾಗಳಿಗೆ ಶಸ್ತ್ರ ಚಿಕಿತ್ಸೆಯನ್ನು ಮಾಡಿ ಸರಿಪಡಿಸಬೇಕಾಗುತ್ತದೆ.
ಮುಂಜಾಗರೂಕತಾ ಕ್ರಮಗಳು:

  • ಜೀವನಶೈಲಿಯಲ್ಲಿ ಬದಲಾವಣೆ,
  • ಧೂಮಪಾನ ಮುಂತಾದ ಚಟಗಳಿಂದ ದೂರವಿರಬೇಕು.
  • ದೇಹತೂಕ ಹೆಚ್ಚಾಗದಂತೆ ನೋಡಿಕೊಳ್ಳಬೇಕು.
  • ನಿಯಮಿತ ವ್ಯಾಯಾಮ/ಯೋಗಾಸನ, ಧ್ಯಾನ ಮಾಡಬೇಕು.

ಈ ಕೆಲವು ಕ್ರಮಗಳಿಂದ ಹರ್ನಿಯಾ ಬರದಂತೆ ಎಚ್ಚರವಹಿಸಿ, ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಒಂದು ವೇಳೆ ಹರ್ನಿಯಾ ಕಂಡುಬಂದರೆ ಸೂಕ್ತ ತಜ್ಞವೈದ್ಯರ ಸಲಹೆ ಹಾಗೂ ಸೂಚನೆಯ ಮೇರೆಗೆ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ದೇಹಕ್ಕೆ ಹರ್ನಿಯಾ ತುಂಬಾ ತೊಂದರೆಯನ್ನುಂಟುಮಾಡಿದ್ದರೂ, ಕಡೆಗಾಣಿಸಿದರೆ ಜೀವಕ್ಕೆ ಅಪಾಯ ತರಲೂಬಹುದು.
“ರೋಗ ಬರುವುದಕ್ಕಿಂತ ಮುಂಚೆ ಎಚ್ಚರ ವಹಿಸುವುದೇ ಲೇಸು”

ಡಾ|| ಸಿ. ಶರತ್ ಕುಮಾರ್
ನಿರ್ದೇಶಕರು ಮತ್ತು ಖ್ಯಾತ ಗರ್ಭಧಾರಣಾ ತಜ್ಞವೈದ್ಯರು, ಮೆಡಿವೇವ್ ಗರ್ಭಧಾರಣಾ ಮತ್ತು ಸಂಶೋಧನಾ ಆಸ್ಪತ್ರೆ,
ಸಿಟಿ ಎಕ್ಸ್-ರೇ ಕಾಂಪ್ಲೆಕ್ಸ್, ಸಯ್ಯಾಜಿ ರಾವ್ ರಸ್ತೆ, ಮೈಸೂರು-570 001
ದೂ. 0821-2444441, 4255019 www.mediwave.net

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!