ಕರ್ನಾಟಕ ಹೋಮಿಯೋಭವನ ನನ್ನ ಋಣ ಸಂದಾಯ – ಕವಿ ಹೃದಯದ ಅಪ್ಪಟ ಮನುಷ್ಯ ಡಾ.ಬಿ.ಟಿ.ರುದ್ರೇಶ್

ಕರ್ನಾಟಕ ಹೋಮಿಯೋಭವನ ಈ ವಾರ (20-11-2020) ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಲೋಕಾರ್ಪಣೆಗೊಳ್ಳಲಿದೆ. ಕವಿ ಹೃದಯದ ಅಪ್ಪಟ ಮನುಷ್ಯ ಡಾ.ಬಿ.ಟಿ.ರುದ್ರೇಶ್ ಅಷ್ಟೇನೂ ಪರಿಚಿತವಲ್ಲದ ಹೋಮಿಯೋಪತಿ ಬಗ್ಗೆ ಜನರಲ್ಲಿ ವಿಶ್ವಾಸ ಮೂಡುವುದಕ್ಕೆ  ಕಾರಣಕರ್ತರಾದರು.  ಕರ್ನಾಟಕ ಹೋಮಿಯೋಭವನದ ಒಂದೊಂದು ಮೆಟ್ಟಲು ಕೂಡ ಕರ್ನಾಟಕ ಹೋಮಿಯೋಪತಿ ಮಂಡಳಿ ಅಧ್ಯಕ್ಷ  ಡಾ.ಬಿ.ಟಿ.ರುದ್ರೇಶ್ ಶ್ರಮದ ಗುಣಗಾನ ಮಾಡುತ್ತಿದೆ.

karnataka-homoeo-bhavana ಕರ್ನಾಟಕ ಹೋಮಿಯೋಭವನ ನನ್ನ ಋಣಸಂದಾಯ - ಕವಿ ಹೃದಯದ ಅಪ್ಪಟ ಮನುಷ್ಯ ಡಾ.ಬಿ.ಟಿ.ರುದ್ರೇಶ್

ಇದು ಒಂದರ್ಥದಲ್ಲಿ ಹನುಮದ್ವಿಕಾಸ. ಹಳ್ಳಿಯ ಹುಡುಗನೊಬ್ಬ ಬೆಂಗಳೂರೆಂಬ ಮಾಯಾನಗರಿಗೆ ಬಂದು ತಾನೇ ಒಂದು ವರ್ಗ ಎಂಬಂತೆ ಬೆಳೆದು ಒಂದು ಅನನ್ಯ ವ್ಯಕ್ತಿತ್ವವಾಗಿ ಸ್ಥಾಪಿತಗೊಂಡ ಬಗೆಯೇ ಈ ಮಹಾಗಾಥೆ. ಹಾಗಲ್ಲದಿದ್ದರೆ ರುದ್ರೇಶ್ ಕೇವಲ ಓರ್ವ ವೈದ್ಯರಾಗಿ ಹತ್ತರ ಜತೆ ಹನ್ನೊಂದಾಗಿ ಅಷ್ಟೇನೂ ಪರಿಚಿತವಲ್ಲದ ಮುಖವಾಗಿ ಮರೆಯಾಗಿಯೇ ಉಳಿದುಬಿಡುತ್ತಿದ್ದರು. ಕನ್ನಡ ನೆಲದ ಸಾವಿರಾರು ವೈದ್ಯರ ನಡುವೆ ಡಾ. ಬಿ.ಟಿ. ರುದ್ರೇಶ್ ಓರ್ವ ಸಾಮಾನ್ಯ ಹೋಮಿಯೋಪತಿ ತಜ್ಞರಾಗಿ, ಅವರ ರೋಗಿಗಳಿಗಷ್ಟೇ ಗೊತ್ತಿರುವ ಮುಖವಾಗಿ ಸೀಮಿತಗೊಂಡಿರುತ್ತಿದ್ದರು. ಹಾಗಿದ್ದರೆ ಇವತ್ತು ಅವರ ಕುರಿತು ಮಾತನಾಡುವ, ಚರ್ಚಿಸುವ, ಪ್ರೀತಿಯ ಮಾತುಗಳನ್ನಾಡುವ ಅವಕಾಶವೇ ಸಿಗುತ್ತಿರಲಿಲ್ಲ.

ಹೋಮಿಯೋಪತಿ ವೈದ್ಯರಾಗಿ ಜಗದಗಲ ಹೆಸರು

ಈ ವಾರ (20-11-2020) ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಲೋಕಾರ್ಪಣೆಗೊಳ್ಳಲಿರುವ ಕರ್ನಾಟಕ ಹೋಮಿಯೋಭವನದ ಒಂದೊಂದು ಮೆಟ್ಟಲು ಕೂಡ ರುದ್ರೇಶ್ ಶ್ರಮದ ಗುಣಗಾನ ಮಾಡುತ್ತಿದೆ. ಅಸೀಮ ಉತ್ಸಾಹ, ದಿಟ್ಟ ಛಲ, ಕ್ರಿಯಾಶೀಲ ಮನಸ್ಸು, ಸಮರ್ಪಣಾ ಮನೋಭಾವ, ಅಸಹಾಯಕರ ನೋವಿಗೆ ಮಿಡಿವ ಹೃದಯ ಇವುಗಳ ಮೊತ್ತವೇ ರುದ್ರೇಶ್. ಅವರ ದೈಹಿಕ ವ್ಯಕ್ತಿತ್ವಕ್ಕೂ ಸಾಧನೆಯ ವ್ಯಕ್ತಿತ್ವಕ್ಕೂ ಅಜಗಜಾಂತರ. ಅವರ ಬಗೆಗಿನ ಸಾಧನೆಯ ಕತೆಗಳನ್ನು ಕೇಳಿದವರು ಮೊದಲ ಬಾರಿಗೆ ನೋಡಿದಾಗ ಗೇಣುದ್ದ ಇರುವ ಮನುಷ್ಯ ಇಂಥ ಅಸಾಧಾರಣ ಪ್ರತಿಭೆ ಮೆರೆದಿರುವ ಬಗ್ಗೆ ಅಚ್ಚರಿಯಿಂದ ಮೌನಕ್ಕೆ ಶರಣಾಗುವುದು ಸಾಧ್ಯವಿದೆ.

ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಎಂಬ ಐತಿಹಾಸಿಕ ದೇವಾಲಯಗಳಿರುವ ಪುಟ್ಟ ಗ್ರಾಮವೊಂದರಲ್ಲಿ ಜನಿಸಿದ ರುದ್ರೇಶ್ ಮುಂದೊಂದು ದಿನ ಇತಿಹಾಸ ನಿರ್ಮಿಸುವಂಥ ಹೋಮಿಯೋಪತಿ ವೈದ್ಯರಾಗಿ ಜಗದಗಲ ಹೆಸರು ಮಾಡುತ್ತಾರೆಂದು ಆ ದಿನಗಳ ಯಾರೂ ಊಹಿಸಿರಲಾರರು. ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಹೋಮಿಯೋಪತಿ ವೈದ್ಯರಾಗಿರುವ ರುದ್ರೇಶ್, ತಾವು ನಂಬಿದ ವೈದ್ಯಕೀಯ ಪದ್ಧತಿ ಜನಸಾಮಾನ್ಯರಿಗೆ ಕೈಗೆಟಕುವ ಚಿಕಿತ್ಸಾ ಕ್ರಮವಾಗಿರುವುದನ್ನು ಮನಗಂಡ ಫಲವಾಗಿ ಅವರಲ್ಲಿ ಛಲ ಹುಟ್ಟಿತು. ಯಾವುದೇ ಅಡ್ಡಪರಿಣಾಮಗಳಿಲ್ಲದ ಹೋಮಿಯೋಪತಿ ಚಿಕಿತ್ಸಾ ಪದ್ಧತಿಯನ್ನು ಆಂದೋಲನದಂತೆ ಕನ್ನಡ ನೆಲದ ಮನೆಮನೆಗೂ ಮುಟ್ಟಿಸುವ ಕಾಯಕವನ್ನು ಅವರು ಅಪ್ಪಿಕೊಂಡರು.

ಆವರೆಗೂ ಅಷ್ಟೇನೂ ಪರಿಚಿತವಲ್ಲದ ಹೋಮಿಯೋಪತಿ ಬಗ್ಗೆ ಜನರಲ್ಲಿ ವಿಶ್ವಾಸ ಮೂಡುವುದಕ್ಕೆ ಅವರು ಕಾರಣಕರ್ತರಾದರು. ಈ ಮೊದಲು ಸಾಕಷ್ಟು ಹೋಮಿಯೋಪತಿ ವೈದ್ಯರು ಬಂದು ಹೋಗಿರಬಹುದು. ಆದರೆ ಕರ್ನಾಟಕದ ಹೋಮಿಯೋಪತಿ ಸಾಮ್ರಾಜ್ಯಕ್ಕೆ ಅಡಿಗಲ್ಲು ಇಟ್ಟು ಒಂದೊಂದೇ ಇಟ್ಟಿಗೆ ಇಟ್ಟು ಅದರ ವಿಸ್ತರಣೆಗೆ ಕಾರಣರಾದವರು ರುದ್ರೇಶ್. ಅವರ ಛಲದ ಫಲವೇ ಇತರ ಚಿಕಿತ್ಸೆಗಳಿಂದ ಅನುಕೂಲ ಕಾಣದ ಅದೆಷ್ಟೋ ರೋಗಿಗಳು ಅಸಂಖ್ಯಾತ ಹೋಮಿಯೋಪತಿ ವೈದ್ಯರ ಚಿಕಿತ್ಸಾಲಯಗಳ ಬಾಗಿಲು ಬಡಿಯುವಂಥ ಸಕಾರಾತ್ಮಕ ಬದಲಾವಣೆ ಕಾಣುವುದು ಸಾಧ್ಯವಾಯಿತು.

ಅಮೆರಿಕದ ಮೂರನೇ ಅಧ್ಯಕ್ಷ, ರಾಜನೀತಿಜ್ಞ, ತತ್ವಜ್ಞಾನಿ ಥಾಮಸ್ ಜೆಫರ್ ಸನ್ ಹೇಳಿದ A nation, as a society, forms a moral person, and every member of it is personally responsible for his society ಎಂಬ ಸಮಾಜನಿಷ್ಠ ಮಾತುಗಳನ್ನು ಯಾರು ಪಾಲಿಸಿದ್ದಾರೋ ಇಲ್ಲವೋ, ರುದ್ರೇಶ್ ಕೂಡ ಈ ಮಾತುಗಳನ್ನು ಕೇಳಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಈ ನಲ್ನುಡಿಗೆ ಮಹೋನ್ನತ ಉದಾಹರಣೆಯಂತೆ ಕಂಗೊಳಿಸುತ್ತಿದ್ದಾರೆ. ತಾನಾಯಿತು ತನ್ನ ವೈಯಕ್ತಿಕ ಬದುಕಾಯಿತು ಎಂಬ ಅದೆಷ್ಟೋ ಜನರ ಕೇವಲ ಯಾಂತ್ರಿಕ ಬದುಕಿಗೆ ರುದ್ರೇಶ್ ಜೋತು ಬಿದ್ದವರಲ್ಲ.

ಹೋಮಿಯೋಪತಿ ಸಿದ್ಧಾಂತದ ಚೌಕಟ್ಟಿನಲ್ಲಿ ಬೆರಗುಗೊಳಿಸುವ ಸಾಧನೆ

dr-rudresh

ಚಲನಶೀಲ ಸಮಾಜಕ್ಕೆ ತಕ್ಕ ವೇಗದಲ್ಲಿ ಒಂದು ಹೆಜ್ಜೆ ಮುಂದೆಯೇ ಇರಬೇಕೆಂಬ ತುಡಿತ ಅವರದು. ಅನಾರೋಗ್ಯಕ್ಕೆ ಸಂಬಂಧಿಸಿದ ವರ್ತಮಾನದ ದುರಂತಗಳಲ್ಲಿ ಕೈಚೆಲ್ಲಿ ಕುಳಿತವರ ನಡುವೆ ಸವಾಲಿನಂತೆ ಸ್ವೀಕರಿಸಿ ಹೋಮಿಯೋಪತಿ ಸಿದ್ಧಾಂತದ ಚೌಕಟ್ಟಿನಲ್ಲಿ ಬೆರಗುಗೊಳಿಸುವ ಸಾಧನೆ ಮಾಡಿರುವುದೂ ಅವರ ಬದುಕಿನ ಪ್ರಮುಖ ಅಧ್ಯಾಯಗಳಲ್ಲೊಂದು. ಅದು ದೆಹಲಿಯಲ್ಲಿ ಸಂಭವಿಸಿದ ಕಲಬೆರಕೆ ಸಾಸಿವೆ ಎಣ್ಣೆ ದುರಂತವೇ ಇರಬಹುದು, ಕರೋನಾ ವೈರಾಣುವಿನ ದಾಳಿಯೇ ಇರಬಹುದು. ಒಂದು ಕೈ ನೋಡೇ ಬಿಡುವೆ ಎಂಬ ಛಲದಿಂದ ತಮ್ಮ ಸಿದ್ಧಾಂತದ ಔಷಧ ಸಂಯೋಜನೆ ಬಳಸಿ ಯಶಸ್ಸು ಕಂಡು ಆಗಿಂದಾಗ್ಗೆ ಸುದ್ದಿಯಾದವರು ರುದ್ರೇಶ್.

ಸಂತಾನಭಾಗ್ಯವಿಲ್ಲದ ನೊಂದ ನೂರಾರು ಹೆಣ್ಣು ಮಕ್ಕಳ ಬದುಕಲ್ಲಿ ಮುದ್ದು ಮಗುವಿನ ಆಪ್ತ ಸ್ಪರ್ಶ ಸುಖ ಕಾಣುವಂತೆ ಚಿಕಿತ್ಸೆ ನೀಡಿದವರು ರುದ್ರೇಶ್. ಕ್ಯಾನ್ಸರ್, ಮೂತ್ರಪಿಂಡ ವೈಫಲ್ಯ, ಹೃದ್ರೋಗ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಇತರ ವೈದ್ಯಕೀಯ ಪದ್ಧತಿಯಿಂದ ಕಿಂಚಿತ್ತೂ ಪ್ರಯೋಜನ ಕಾಣದೇ ಕಾಲಿಗೆ ಕಲ್ಲು ಕಟ್ಟಿಕೊಂಡಂತೆ ನೋವೇ ಬದುಕಾದಂತೆ ಬೆಂದವರು ಹೊಸ ನಿರೀಕ್ಷೆಗಳೊಂದಿಗೆ ಮುನ್ನಡೆಯುವಂತೆ ಮಾಂತ್ರಿಕ ಚಿಕಿತ್ಸೆ ನೀಡಿದವರು ರುದ್ರೇಶ್. ಅವರಿಗೆ ಪ್ರತಿ ದಿನವೂ ಹೊಸತು, ಪ್ರತಿ ರೋಗಿಯೂ ಹೊಸಬರು. ವೃತ್ತಿಯ ಆರಂಭದ ದಿನಗಳಲ್ಲಿದ್ದ ಉತ್ಸಾಹ ಇಂದಿಗೂ ಕಿಂಚಿತ್ತೂ ಬತ್ತಿಲ್ಲ. ತಮ್ಮ ಬಳಿಗೆ ಬರುವ ರೋಗಿಯ ಗೆಳೆಯನಂತೆ, ತಂದೆಯಂತೆ, ಸಹೋದರನಂತೆ, ಸಮಾಲೋಚಕನಂತೆ ಪ್ರತಿ ಪ್ರಕರಣಕ್ಕೆ ತಕ್ಕಂತೆ ಕಾಯಿಲೆಯ ಒಳಗನ್ನು ನೋಡುವುದು ರುದ್ರೇಶ್ ಅವರ ವೈಶಿಷ್ಠ್ಯ.

ಕಾಯಿಲೆಗಳು ಕೇವಲ ವೈರಾಣುಗಳಿಂದ ಬರುವುದಿಲ್ಲ, ನಮ್ಮ ಮನೆ, ಪರಿಸರ, ಕೆಲಸ ಮಾಡುವ ಸ್ಥಳ ಒಂದೊಂದು ರೀತಿಯ ಪರಿಣಾಮ ಬೀರುವುದು ಕೂಡ ಕಾಯಿಲೆಗೆ ಕಾರಣವಾಗುತ್ತದೆ ಎನ್ನುತ್ತಾರೆ ಅವರು. ಅವರ ಮಾತುಗಳಿಂದಲೇ ಅರ್ಧದಷ್ಟು ಕಾಯಿಲೆ ವಾಸಿಯಾದಂತೆ ನೆಮ್ಮದಿಯ ನಿಟ್ಟುಸಿರು ಬಿಟ್ಟು ಹೊರನಡೆದು ನಂತರದ ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖರಾದವರ ಸಂಖ್ಯೆ ಕಡಿಮೆಯೇನಲ್ಲ. ಪ್ರತಿಯೊಬ್ಬ ಮನುಷ್ಯನೂ ವಿಭಿನ್ನನಾಗಿರುವುದರಿಂದ ಹೋಮಿಯೋಪತಿಯಲ್ಲಿ ಒಂದು ಕಾಯಿಲೆಗೆ ಒಂದು ಔಷಧ ಎಂಬುದಿಲ್ಲ ಎನ್ನುವ ತತ್ವವನ್ನು ಅಕ್ಷರಶಃ ಪಾಲಿಸುತ್ತಿರುವುದರಿಂದಲೇ ಒಬ್ಬೊಬ್ಬರ ಬಳಿಯಲ್ಲೂ ಆತ್ಮೀಯವಾಗಿ ಮಾತನಾಡಿ ಕಾಯಿಲೆಯ ಮೂಲ ಪತ್ತೆ ಹಚ್ಚುವುದರಲ್ಲಿ ಅವರು ಸಿದ್ಧಹಸ್ತರು.

ಹೀಗಾಗಿಯೇ ಎಷ್ಟೋ ಕಾಯಿಲೆಗಳನ್ನು ಮಾನಸಿಕವಾಗಿ ಸಿದ್ಧಪಡಿಸುವುದರಿಂದಲೇ ಗುಣಮುಖರಾಗಿಸುವ ಕಲೆ ಅವರಿಗೆ ಒಲಿದಿದೆ. ಹಾಗೆಂದ ಮಾತ್ರಕ್ಕೆ ಅವರು ನೀಡುವ ಸಿಹಿ ಗುಳಿಗೆ ಕೇವಲ ನೆಪ ಮಾತ್ರಕ್ಕಲ್ಲ. ಅದು ಕೂಡ ಗುಣಮುಖಗೊಳಿಸುವ ಪ್ರಕ್ರಿಯೆಯಲ್ಲಿ ಪೂರಕ ಪಾತ್ರ ವಹಿಸುತ್ತದೆ. ಅವರಲ್ಲಿ ಕೋಪಿಷ್ಟ ದುರ್ವಾಸನನ್ನು ಕಂಡವರೂ ಅವರೊಳಗಿನ ಮಗು ಮನಸ್ಸನ್ನೂ ಕಂಡಿದ್ದಾರೆ. ಪ್ರೀತಿ, ತಮಾಷೆ, ಕೋಪ ಎಲ್ಲವೂ ಅವರಲ್ಲಿದೆ. ನೋವುಂಡವರನ್ನು ಕಂಡು ಕೇವಲ ಯಾಂತ್ರಿಕವಾಗಿ ಪ್ರತಿಕ್ರಿಯಿಸದ ಅವರಲ್ಲಿನ ತಾಯಿ ಹೃದಯ ಆಳದಲ್ಲಿ ಮರುಗಿದ್ದೂ ಇದೆ.

ಒಂದೊಂದು ಪ್ರಕರಣವನ್ನೂ ಪ್ರತ್ಯೇಕವಾಗಿಯೇ ನೋಡುವುದರಿಂದಾಗಿ, ರೋಗಿಯ ಒಳಗನ್ನು ಪ್ರವೇಶಿಸುವುದರಿಂದಾಗಿ ಅವರು ಸ್ಪಂದಿಸುವ ಬಗೆಯೂ ವಿಭಿನ್ನವಾಗಿರುತ್ತದೆ. ಇದರಿಂದಾಗಿಯೇ ಅವರು ಬರೆದ ಒಂದೊಂದು ಪುಸ್ತಕವೂ ಅಪೂರ್ವ ಕೃತಿಯಂತೆ ಕಾಣುತ್ತದೆ. ಅವರು ರಚಿಸಿದ ಸಾಕ್ಷ್ಯ ಚಿತ್ರಗಳು, ಅವರು ಭಾಗವಹಿಸುವ ಸುದ್ದಿವಾಹಿನಿಗಳು ವಿಶೇಷ ಮನ್ನಣೆ ಪಡೆದಿವೆ. ಅವರ ಮಾತುಗಳಲ್ಲಿ ಸ್ವಾನುಭವವಷ್ಟೇ ಅಲ್ಲ, ಈ ನೆಲದ ಬನಿ ಇದೆ. ಜಗತ್ತಿನ ಕಣ್ಣು ತೆರೆಸಿದ ಮಹಾನ್ ಮಾನವತಾವಾದಿಗಳ ಪ್ರಭಾವ ರುದ್ರೇಶ್ ಅವರ ಮಾತುಗಳಲ್ಲಿ ಸದಾ ಪ್ರತಿಧ್ವನಿಸುತ್ತದೆ. ಅವರೊಬ್ಬ ಗಂಭೀರ ಓದುಗ ಎನ್ನುವುದನ್ನೂ ಇಂಥ ಮಾತುಗಳು ಹೇಳುತ್ತವೆ.

ಇದರ ಫಲವಾಗಿಯೇ ಅದೆಷ್ಟೋ ಪ್ರಶಸ್ತಿಗಳು ಅವರನ್ನರಸಿ ಬಂದು ಅವುಗಳ ಗೌರವ ಹೆಚ್ಚಿಸಿಕೊಂಡಿವೆ. ನಡೆ, ನುಡಿ, ಕಾಯಕದಲ್ಲಿ ಅಪ್ಪಟ ಶರಣನಂತೆ ಕಾಣುವ ರುದ್ರೇಶ್ ಯಾವುದೇ ಜಾತಿ, ಮತ, ಧರ್ಮ, ಪಂಥಕ್ಕೆ ಸೀಮಿರಾದವರಲ್ಲ. ಅವರದು ಅಕ್ಷರಶಃ ‘ಮನುಜಮತ ವಿಶ್ವಪಥ”.ಇಲ್ಲದಿದ್ದರೆ ಬೆಳವಾಡಿಯಂಥ ಪುಟ್ಟ ಗ್ರಾಮದಲ್ಲಿ ಜನಿಸಿ, ಬೆಂಗಳೂರಿಗೆ ಬಂದು ಹೋಮಿಯೋಪತಿ ವೈದ್ಯಕೀಯ ಜಗತ್ತಿನಲ್ಲಿ ಅಸಾಧಾರಣ ಸಾಧನೆ ಮಾಡಿ ಗ್ರೀಸ್ ಸೇರಿದಂತೆ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಹೋಮಿಯೋಪತಿ ತಜ್ಞರ ಗೋಷ್ಠಿಗಳಲ್ಲೇ ಉಪನ್ಯಾಸ ನೀಡುವುದು ಸಾಧ್ಯವಿತ್ತೇ?

ಅವರ ಛಲದ ಫಲವೇ ಈಗ ಭವ್ಯ ಕರ್ನಾಟಕ ಹೋಮಿಯೋ ಭವನ

dr-bt-rudresh ಕರ್ನಾಟಕ ಹೋಮಿಯೋಭವನ ನನ್ನ ಋಣಸಂದಾಯ - ಕವಿ ಹೃದಯದ ಅಪ್ಪಟ ಮನುಷ್ಯ ಡಾ.ಬಿ.ಟಿ.ರುದ್ರೇಶ್

ಕರ್ನಾಟಕ ಹೋಮಿಯೋಪತಿ ಮಂಡಳಿ ಅಧ್ಯಕ್ಷರಾಗಿ, ಕೇಂದ್ರೀಯ ಹೋಮಿಯೋಪತಿ ಮಂಡಳಿ ಕಾರ್ಯಕಾರಿ ಸದಸ್ಯರಾಗಿ, ಭಾರತೀಯ ಹೋಮಿಯೋಪತಿ ವೈದ್ಯಕೀಯ ಸಂಸ್ಥೆ ಉಪಾಧ್ಯಕ್ಷರಾಗಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸೆನೆಟ್-ಸಿಂಡಿಕೇಟ್ ಸದಸ್ಯರಾಗಿ, ರಾಜ್ಯ ಜ್ಞಾನ ಆಯೋಗದ ಸದಸ್ಯರಾಗಿ ಅನುಕರಣೀಯ ಸೇವೆ ದಾಖಲಿಸಿರುವ ರುದ್ರೇಶ್ ‘ಛಲ ಬೇಕು ಶರಣಂಗೆ…,’ ಎಂಬ ಮಾತಿಗೆ ಮಾದರಿಯಾದವರು. ಅವರ ಛಲದ ಫಲವೇ ಈಗ ಭವ್ಯ ಕರ್ನಾಟಕ ಹೋಮಿಯೋ ಭವನ ತಲೆ ಎತ್ತಿ ನಿಂತಿದೆ. ಅದು ಅವರ ಬದುಕಿನ ಕನ್ನಡಿಯ ಪ್ರತಿಬಿಂಬದಂತಿದೆ. ಕರ್ನಾಟಕ ಹೋಮಿಯೋಪತಿ ಮಂಡಳಿಯ ಅಧ್ಯಕ್ಷಾವಧಿಯಲ್ಲಿ ತಮ್ಮ ವೇತನದ ಚಿಕ್ಕಾಸೂ ಪಡೆಯದೆ ಉಳಿಸಿದ ಐವತ್ತು ಲಕ್ಷ ರೂಪಾಯಿಗೂ ಹೆಚ್ಚಿನ ಮೊತ್ತವನ್ನು ಈ ಭವನ ನಿರ್ಮಾಣಕ್ಕೆ ದೇಣಿಗೆಯಾಗಿ ನೀಡಿದ್ದಾರೆ.

ಅದನ್ನು ಅವರು, ‘ಜಗತ್ತಿನ ಅನಾರೋಗ್ಯದಿಂದ ನೊಂದು ಅಸಹಾಯಕತೆಯಿಂದ ತತ್ತರಿಸಿರುವ ಕೋಟ್ಯಂತರ ಕುಟುಂಬಗಳಿಗೆ ಬೆಳಕು ನೀಡಿದ ಹೋಮಿಯೋಪತಿ ಚಿಕಿತ್ಸಾ ಪದ್ಧತಿಯ ಒಂದು ಭಾಗವಾಗಿರುವ ನನ್ನ ಋಣ ಸಂದಾಯ‘ ಎನ್ನುತ್ತಾರೆ. ಅವರು ಕವಿ ಹೃದಯದ ಅಪ್ಪಟ ಮನುಷ್ಯರಾಗಿರುವುದರಿಂದಲೇ ಇಂಥ ನಿಸ್ವಾರ್ಥ ಮಾತುಗಳು ಅವರ ಬದುಕಿನ ಅನುಭವದ ಕುಲುಮೆಯಿಂದ ಹೊರಹೊಮ್ಮಿ ಪ್ರಜ್ವಲಿಸುವುದು ಸಾಧ್ಯವಾಗಿದೆ. ಹೋಮಿಯೋ ಭವನ ಈ ಜನಪರ ಚಿಕಿತ್ಸಾ ಪದ್ಧತಿಯ ಘನತೆ, ಗೌರವದ ಪ್ರತೀಕದಂತಿದೆ.

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!