ಕಣ್ಣಿನ ಆರೋಗ್ಯಕ್ಕಾಗಿ ತ್ರಾಟಕ

ಕಣ್ಣಿನ ಆರೋಗ್ಯಕ್ಕಾಗಿ ತ್ರಾಟಕ ಕಣ್ಣಿನ ಆರೋಗ್ಯಕ್ಕಾಗಿ ತ್ರಾಟಕ. ದೇಹವನ್ನು ಶುದ್ಧೀಕರಿಸುವ ಆರು ಪ್ರಾಥಮಿಕ ಕ್ರಿಯೆಗಳ (ಷಟ್‍ಕ್ರಿಯೆಗಳ) ಪ್ರಮುಖ ಅಭ್ಯಾಸಗಳಲ್ಲಿ ಈ ತ್ರಾಟಕವೂ ಒಂದು. ಇದು ಅನಾದಿಕಾಲದ ಆಧ್ಯಾತ್ಮಿಕ, ವೈಜ್ಞಾನಿಕ ಆಚರಣೆಯಾಗಿದ್ದು, ಈ ಆಚರಣೆಯು ಕಾಲದಿಂದ ಕಾಲಕ್ಕೆ ವಿಕಸನಗೊಳ್ಳುತ್ತಾ ಸಾಗಿದೆ. ಹಠಯೋಗದಲ್ಲಿ ಶುದ್ಧೀಕರಿಸು ಎಂದರೆ ಅಜ್ಞಾನವನ್ನು ಹೋಗಲಾಡಿಸು ಅಥವಾ ಅವಿದ್ಯದಿಂದ ವಾಸ್ತವದ ಗ್ರಹಿಕೆಯನ್ನು ಪಡೆಯುವುದು ಎನ್ನಲಾಗಿದೆ. ತ್ರಾಟಕವನ್ನು ಧ್ಯಾನಕ್ಕಾಗಿ ಬಳಸುವ ಒಂದು ತಂತ್ರವೆಂತಲೂ ಕರೆಯುವುದುಂಟು. ಒಂದೇಕಡೆ ನೋಟವನ್ನು ಕೇಂದ್ರೀಕರಿಸುವುದರಿಂದ ಚಂಚಲವಾದ ಮನಸ್ಸನ್ನು ಒಂದು ಕಡೆಗೆ ನಿಲ್ಲಿಸಲು ಅಥವಾ ಏಕಾಗ್ರಿಸಲು ಸಹಾಯವಾಗುತ್ತದೆ.

ತ್ರಾಟಕದ ಅಭ್ಯಾಸದಿಂದ ಕಣ್ಣುರೆಪ್ಪೆಯ ಪ್ರತಿವರ್ತನ ನಿಯಂತ್ರಣ ಪೀನಿಯಲ್ ಗ್ರಂಥಿಯನ್ನು (ಮೂರನೆಕಣ್ಣು) ಪ್ರಚೋದಿಸುತ್ತದೆ ಎಂದು ಹೇಳಲಾಗಿದೆ. ತ್ರಾಟಕ ಎಂದ ಕೂಡಲೇ ದೃಷ್ಟಿ ಸ್ಪಷ್ಟತೆ ಎಂತಲೂ ಕರೆಯುವುದುಂಟು. ಹಣತೆಯಲ್ಲಿ ಬೆಳಗುತ್ತಿರುವ ದೀಪದ ಅಥವಾ ಮೇಣದ ಬತ್ತಿಯ ಜ್ವಾಲೆಯಂತಹ ಒಂದು ಸೂಕ್ಷ್ಮಾತಿಸೂಕ್ಷ್ಮ ಬಿಂದುವನ್ನು ಎವೆಯಿಕ್ಕದೆ ನೋಡುವುದನ್ನು ಒಳಗೊಂಡ ಒಂದು ವಿಧಾನವೆ ತ್ರಾಟಕ ಎಂದು ಹೇಳಲಾಗುತ್ತದೆ. ಇದು ಗ್ರಹಿಕೆಯ ಶಕ್ತಿಯನ್ನು ಹೆಚ್ಚಿಸುವುದು. ಕಣ್ಣುಗಳನ್ನು ಬಲಪಡಿಸುವುದರ ಜೊತೆಗೆ ನಮ್ಮ ಗಮನವನ್ನು ಹಾಗೂ ಅರಿವನ್ನು ಹೆಚ್ಚಿಸುವುದಾಗಿದೆ. ನಮ್ಮ ಕಣ್ಣುಗಳನ್ನು “ಮನಸ್ಸಿನ ಕಿಟಕಿಗಳು” ಎಂದು ಕರೆಯಲಾಗಿದೆ. ನಮ್ಮ ಕಣ್ಣುಗಳು ಮೆದುಳಿನ ಕಾರ್ಯ ಮತ್ತು ಮನಸ್ಸಿನ ಆಲೋಚನೆಗಳಿಗೆ ಸಂಬಂಧವನ್ನು ಕಲ್ಪಿಸುತ್ತದೆ ಎಂಬುದು ಅದೆಷ್ಟೋ ಜನರಿಗೆ ತಿಳಿದಿರುವುದೇ ಇಲ್ಲ. ಮುಖ್ಯವಾದ ಪಂಚೇಂದ್ರಿಯಗಳಲ್ಲಿ ನಮ್ಮ ಕಣ್ಣುಗಳು ಅತ್ಯಂತ ಶಕ್ತಿಯುತವಾದ ಆಯುಧಗಳಾಗಿವೆ ಎನ್ನಬಹುದು. ಮೆದುಳಿನ ನಂತರ ನಮ್ಮ ದೇಹದ ಅತ್ಯಂತ ಸಂಕೀರ್ಣ ಅಂಗವೇ ಈ ಕಣ್ಣುಗಳು.

ನಮ್ಮ ಭ್ರೂಣ ಜೀವನದ ಮೊದಲ ದಿನಗಳಲ್ಲಿ ಕಣ್ಣುಗಳ ಮತ್ತು ಮೆದುಳಿನ ನಡುವಿನ ಸಂಬಂಧವು ಪ್ರಾರಂಭವಾಗುತ್ತವೆ ಮತ್ತು ಗರ್ಭಧಾರಣೆಯ ಎರಡು ವಾರಗಳ ನಂತರ ಕಣ್ಣುಗಳ ಬೆಳವಣಿಗೆಯಾಗಲು ಆರಂಭವಾಗುತ್ತದಂತೆ. ಕಣ್ಣಿನ ಭಾಗದ ರೆಟಿನಾ ಮತ್ತು ಆಪ್ಟಿಕ್ ನರಗಳು ನಮ್ಮ ಮೆದುಳಿನ ನೇರ ಸಂಬಂಧಿಯಾಗಿ ಬೆಳೆಯುತ್ತವೆ. ಆದ್ದರಿಂದ ರೆಟಿನಾ ವಾಸ್ತವವಾಗಿ ಮೆದುಳಿನ ಒಂದು ಭಾಗವಾಗಿದ್ದು ಮೆದುಳಿನ ಅರ್ಧದಷ್ಟು ಭಾಗವು ದೃಷ್ಟಿಗೆ ಮತ್ತು ನೋಡುವುದಕ್ಕೆ ಮೀಸಲಾಗಿದೆಯಂತೆ.ಜೊತೆಗೆ ನಮ್ಮ ಪ್ಯಾರಾಸಿ0ಪಥೆಟಿಕ್ ನರಮಂಡಲದ ಮೇಲೆ ಹಿಡಿತ ಸಾಧಿಸಲು, ಹೃದಯ ಬಡಿತ ಮತ್ತು ಉಸಿರಾಟದ ಪ್ರಮಾಣವನ್ನು ಸರಿಯಾದ ಕ್ರಮದಲ್ಲಿ ಕಾರ್ಯನಿರ್ವಹಿಸಲು ಅನುಕೂಲಕರವಾಗಿದೆ. ಇದು ರಕ್ತನಾಳವನ್ನು ಹಿಗ್ಗಿಸುವಿಕೆ ಅಥವಾ ರಕ್ತನಾಳದ ವೈಶಾಲ್ಯತೆಯನ್ನು ಹೆಚ್ಚಿಸುತ್ತದೆ. ಎಲ್ಲಾ ಭಾವನಾತ್ಮಕ ಸಮಸ್ಯೆಗಳನ್ನು ದೂರವಿರಿಸಲು ಸಹಾಯ ಮಾಡುತ್ತದೆ.

ಅನಾದಿ ಕಾಲದಿಂದ ಹಿಡಿದು ಇಂದಿನ ಆಧುನಿಕ ಯುಗದವರೆಗೂ ಈ ತ್ರಾಟಕದ ಬಗ್ಗೆ ಹಲವಾರು ಜನ ಯೋಗಿಗಳು, ವಿದ್ವಾಂಸರು ತಮ್ಮದೇ ಆದ ವಿಶಿಷ್ಟವಾದ ಕೊಡುಗೆಗಳನ್ನು ನೀಡಿದ್ದಾರೆ. 12ನೇ ಶತಮಾನದ ವಚನಕಾರ್ತಿಯಾದ ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮತಮ್ಮ ವಚನದಲ್ಲಿ ತ್ರಾಟಕದ ಕುರಿತು ಈ ಕೆಳಗಿನಂತೆ ಉಲ್ಲೇಖಿಸಿದ್ದಾರೆ.
“ಹೋಗುತ್ತ ಹೋಗುತ್ತ ಹೊಟ್ಟೆಯಡಿಯಾಯಿತ್ತು,ಕಣ್ಣಿನ ಆರೋಗ್ಯ
ಬಟ್ಟಬಯಲಾಯಿತ್ತು.
ತುಟ್ಟತುದಿಯನೇರಿತೂರ್ಯಾತೀತನಾಗಿ,
ಇಷ್ಟ ಪ್ರಾಣಭಾವ ಬಯಲಾಯಿತ್ತು.
ಬಯಲಲ್ಲಿ ನಿಂದುಕೊಂಡು ನೋಡುತ್ತಿರಲು,
ಬ್ರಹ್ಮವೆಯಾಯಿತ್ತು, ಕರ್ಮಕಡೆಗೋಡಿತ್ತು.
ಅರಿವರತು ಮರಹು ನಷ್ಟವಾಯಿತ್ತು.
ತೆರನಳಿದು ನಿರಿಗೆ ನಿಃಪತಿಯಾಗಿ
ಮಿರುಗುವದೃಷ್ಟಿಯಲ್ಲಿ ನೋಡುತ್ತಿರಲು,
ನೋಟತ್ರಾಟಕವದಾಂಟಿಕೂಟದಲ್ಲಿಕೂಡಿ,
ಬೆರಸಿ ಬೇರಾಗದಿಪ್ಪ ಶರಣ
ಅಪ್ಪಣ್ಣಪ್ರೀಯಚೆನ್ನಬಸವಣ್ಣತಾನೆ ನೋಡಾ.”
-ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅರ್ಥ: ತ್ರಾಟಕವು ಸಂಸ್ಕøತ ಪದವಾಗಿದ್ದು ‘ಸ್ಥಿರವಾಗಿ ನೋಡು, ಸ್ಪಷ್ಟವಾಗಿ ನೋಡು, ಗ್ರಹಿಸು, ವಿಕ್ಷಿಸು, ಅವಲೋಕಿಸು, ಎವೆಯಿಕ್ಕದೆ ನೋಡು’ ಎಂಬ ಇತ್ಯಾದಿ ಅರ್ಥಗಳನ್ನು ಕೊಡುತ್ತದೆ.

ತ್ರಾಟಕದ ವಿಧಗಳು:

ಸಾಂಪ್ರದಾಯಿಕವಾಗಿ ತ್ರಾಟಕವನ್ನು ಎರಡು ವಿಧಗಳಲ್ಲಿ ವಿಂಗಡಿಸಲಾಗಿದೆ.

1. ಅಂತರತ್ರಾಟಕ: ಅಂತರತ್ರಾಟಕವು ಕಣ್ಣುಗಳನ್ನು ಮುಚ್ಚಿ ಅಭ್ಯಾಸಿಸಲಾಗುತ್ತದೆ. ಎರಡು ಹುಬ್ಬುಗಳ ಮಧ್ಯದ ಭಾಗ (ಭುರ್ಮಾಧ್ಯಾ ದೃಷ್ಟಿ) ಮೇಲೆ ಮುಚ್ಚಿದ ಕಣ್ಣುಗಳಿಂದ ದೃಷ್ಟಿಯನ್ನು ಕೇಂದ್ರೀಕರಿಸುವುದಾಗಿದೆ.

2. ಬಾಹ್ಯತ್ರಾಟಕ: ಕಣ್ಣುಗಳನ್ನು ಮಿಟುಕಿಸದೆ ದೀಪದಅಥವಾ ಮೇಣದ ಬತ್ತಿಯಂತಹ ಜ್ವಾಲೆಯನ್ನು ನೋಡುವುದು. (ಬೆಳಗಿನ [ನಸುಕಿನ] ಜಾವದ ಸೂರ್ಯ, ರಾತ್ರಿ ಸಮಯದ ಚಂದ್ರ, ನಕ್ಷತ್ರ ಅಥವಾ ಪ್ರಕಾಶಮಾನವಾದ [ಶುಕ್ರ] ಗ್ರಹದಂತಹ ದೂರದ ವಸ್ತುಗಳ ಮೇಲೆಯೂ ನಮ್ಮ ನೋಟವನ್ನುಕೇಂದ್ರೀಕರಿಸುವುದಾಗಿದೆ.)

ಅಭ್ಯಾಸಿಸುವ ವಿಧಾನ:

1. ಮೊದಲಿಗೆ ಪದ್ಮಾಸನ, ಅರ್ಧ ಪದ್ಮಾಸನ, ವಜ್ರಾಸನ, ಸುಖಾಸನ ಅಥವಾ ತಮಗಿಷ್ಟವಾದ ಆಸನದಲ್ಲಿ ಒತ್ತಡರಹಿತವಾಗಿ ಹಾಗೂ ನೇರವಾಗಿ ಕುಳಿತುಕೊಳ್ಳಿ.

2. ನೇಲದ ಮೇಲೆ ಕುಳಿತುಕೊಳ್ಳಲು ಸಾಧ್ಯವಾಗದವರು ಕುರ್ಚಿಯ ಮೇಲೆ ನೇರವಾಗಿ ಕುಳಿತುಕೊಂಡು ಅಭ್ಯಾಸಿಸಬಹುದು.

3. ಸುಮಾರು 3 ರಿಂದ 4 ಅಡಿಗಳಷ್ಟು ಅಥವಾ 1 ಮೀಟರನಷ್ಟು ಕಣ್ಣಿನ ನೇರಕ್ಕೆ ಬೆಳಗುತ್ತಿರುವ ದೀಪದ ಅಥವಾ ಮೇಣದ ಬತ್ತಿಯನ್ನು ಇರಿಸಿ.

4. ನಂತರ ಉರಿಯುತ್ತಿರುವ ದೀಪದ ಅಥವಾ ಮೇಣದ ಬತ್ತಿಯ ಜ್ವಾಲೆಯನ್ನು ಕಣ್ಣುಗಳನ್ನು ಮೀಟುಕಿಸದೆ ನೋಡುತ್ತಿರಿ.

5. ಅಭ್ಯಾಸದ ಸ್ವಲ್ಪ ಸಮಯದಲ್ಲಿ ಕಣ್ಣುಗಳು ದಣಿಬಹುದು ಆಗ ಕಣ್ಣುಗಳ ಮೇಲೆ ಒತ್ತಡ ಹೆರದೆ ಕಣ್ಣುಗಳನ್ನು ಮುಚ್ಚಿ ವಿಶ್ರಮಿಸಿ.

6. ತ್ರಾಟಕದ ಅಭ್ಯಾಸದಿಂದ ಕೆಲಮೊಮ್ಮೆ ಕಣ್ಣುಗಳಿಂದ ನೀರು ಬರಬಹುದು. ಹಾಗೆ ಕಣ್ಣುಗಳಿಂದ ನೀರು ಬಂದರೆ ಕಣ್ಣುಗಳನ್ನು ಮುಚ್ಚಿ ಶುಭ್ರವಾದ ಹಾಗೂ ಮೃದುವಾದ ಬಟ್ಟೆಯಿಂದ ಕಣ್ಣುಗಳನ್ನು ಸ್ವಚ್ಚಗೊಳಿಸಿ.

7. ನಂತರ ಮತ್ತೆ ಅದೇ ರೀತಿಯಲ್ಲಿ ಕಣ್ಣುಗಳನ್ನು ಮಿಟುಕಿಸದೆ ದೀಪದ ಜ್ವಾಲೆಯನ್ನು ನೋಡುತ್ತ ಮನಸ್ಸನ್ನು ಅಲೆದಾಡದಂತೆ ಹಿಡಿದಿಟ್ಟುಕೊಳ್ಳುವವರೆಗೆ ಈ ಪ್ರಕ್ರಿಯೆಯನ್ನು ಪುನರಾವರ್ತಿಸಬಹುದು.

ಅಭ್ಯಾಸಕ್ಕೆ ಸೂಕ್ತವಾದ ಸಮಯ:

ತ್ರಾಟಕವನ್ನು ಸಾಮಾನ್ಯವಾಗಿ ಬೆಳಗಿನ (ನಸುಕಿನ) ಜಾವದಲ್ಲಿ ಅಭ್ಯಾಸಿಸುವುದು ಸೂಕ್ತ ಎನ್ನಲಾಗಿದೆ. ಬೆಳಗಿನ ಸಮಯದಲ್ಲಿ ಅಭ್ಯಾಸವನ್ನು ಮಾಡಲು ಸಾಧ್ಯವಾಗದವರು ಸಂಜೆ ಸಯಮದಲ್ಲೂ ಅಭ್ಯಾಸಿಸಬಹುದು.

ಅಭ್ಯಾಸದ ಅವಧಿ:

ತ್ರಾಟಕದ ಅಭ್ಯಾಸವನ್ನು ಸುಮಾರು 10 ರಿಂದ 15 ನಿಮಿಷಗಳವರೆಗೆ ಅಥವಾ ಅಭ್ಯಾಸಿಯ ಆಸಕ್ತಿ ಮತ್ತು ಶಕ್ತಿಗನುಸಾರವಾಗಿ ಹೆಚ್ಚಿನ ಸಮಯದವರೆಗೂ ಅಭ್ಯಾಸಿಸಬಹುದು.

ಪ್ರಯೋಜನಗಳು:

trataka1. ತ್ರಾಟಕದ ಅಭ್ಯಾಸ ಕಣ್ಣುಗಳ ಸುತ್ತಲಿನ ಸ್ನಾಯುಗಳನ್ನು ಬಲಪಡಿಸುತ್ತದೆ.

2. ಕಣ್ಣುಗಳನ್ನು ಶುದ್ಧಿಕರೀಸುತ್ತದೆ.

3. ಕಣ್ಣಿನ ದೋಷಗಳಾದ ಅಸಮ ಮತ್ತು ಸಮೀಪದೃಷ್ಟಿಯನ್ನು ದೂರವಾಗಿಸುತ್ತದೆ.

4. ಕಣ್ಣುಗಳು ಸ್ಪಷ್ಟ ಮತ್ತು ಪ್ರಕಾಶಮಾನವಾಗುವಂತೆ ಮಾಡಲು ಸಹಕಾರಿಯಾಗಿದೆ.

5. ನಿದ್ರಾಹೀನತೆಯಿಂದ ತೊಡೆದುಹಾಕುತ್ತದೆ. ಆದ್ದರಿಂದ ನಿದ್ರೆಗೆ ಹೋಗುವ ಕೆಲವು ಸಮಯದ ಮೊದಲು ಇದನ್ನು ಅಭ್ಯಾಸ ಮಾಡುವುದರಿಂದ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ ಎನ್ನಲಾಗಿದೆ.

6. ಮನಸ್ಸಿನ ಗೊಂದಲಗಳನ್ನು ನಿವಾರಿಸುತ್ತದೆ. ಇದು ಮನಸ್ಸನ್ನು ಶಾಂತ ಮತ್ತು ಸ್ಥಿರವಾಗಿಸುತ್ತದೆ.

7. ಮಾನಸಿಕ ಹಾಗೂ ಪ್ರಾಣ ಸ್ಥಿರತೆಯನ್ನು ಸುಧಾರಿಸುತ್ತದೆ.

8. ಘೆರಿಂಡಾ ಸಂಹಿತಾ ಉಲ್ಲೇಖಿಸಿದಂತೆ ತ್ರಾಟಕದ ಅಭ್ಯಾಸದಿಂದ ನರಮಂಡಲಕ್ಕೆ ಶಕ್ತಿಯನ್ನು ನೀಡುವುದರಜೊತೆಗೆ ವ್ಯವಸ್ಥಿತವಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ತುಂಬಾ ಸಹಯಕವಾಗಿದೆ.

9. ಖಿನ್ನತೆಯ ಚಿಕಿತ್ಸೆಯಲ್ಲಿ ಸಹಾಯಕವಾಗಬಲ್ಲದು.

10. ಏಕಾಗ್ರತೆ ಮತ್ತು ಸ್ಮರಣೆಯನ್ನು ಸುಧಾರಿಸುತ್ತದೆ.

11. ಭಾವನಾತ್ಮಕ ಸ್ಥಿರತೆಯನ್ನು ಉತ್ತೇಜಿಸುತ್ತದೆ.

12. ಆಜ್ಞಾಚಕ್ರವನ್ನು ಜಾಗೃತಗೊಳಿಸುವಲ್ಲಿ ಈ ತ್ರಾಟಕವು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ.

13. ಅಲ್ಲದೇ ಇಚ್ಛಾಶಕ್ತಿ ಮತ್ತು ಏಕಾಗ್ರತೆಯನ್ನು ವೃದ್ಧಿಸುತ್ತದೆ. ಇದರಿಂದ ಧ್ಯಾನದ ಅಭ್ಯಾಸಕ್ಕೂ ಮುನ್ನುಡಿಯಾಗಲಿದೆ.

ಮುಜಾಗ್ರತ ಕ್ರಮಗಳು:

1. ದೃಷ್ಟಿದೋಷ, ಕಣ್ಣಿನ ಪೊರೆ, ಗ್ಲುಕೋಮಾ, ಭ್ರಮೆಗೊಳಗಾಗುವುದು ಅಥವಾ ಅಪಸ್ಮಾರದ ಸಮಸ್ಯೆಯಿಂದ ಬಳಲುತ್ತಿದ್ದವರು ತ್ರಾಟಕವನ್ನು ಅಭ್ಯಾಸಿಸುವ ಮುನ್ನ ವೈದ್ಯರ ಅಥವಾ ಯೋಗತಜ್ಞರ ಸಲಹೆಯನ್ನು ಪಡೆಯುವುದು ಉತ್ತಮ.

2. ತ್ರಾಟಕವನ್ನು ಅಭ್ಯಾಸಿಸಿದ ಕೂಡಲೇ ಯಾವುದೇ ಕಾರಣಕ್ಕೂ ಹಠಾತಾಗಿ ಕಣ್ಣುಗಳನ್ನು ಉಜ್ಜಬಾರದು ಮತ್ತು ನೀರಿನಿಂದ ಮುಖವನ್ನು/ಕಣ್ಣುಗಳನ್ನು ತೊಳೆದುಕೊಳ್ಳಬಾರದು. ಸ್ವಲ್ಪ ಸಮಯದ ನಂತರ ಅಂದರೆ ಸುಮಾರು 10 ರಿಂದ 15 ನಿಮಿಷಗಳ ಕಾಲ ವಿಶ್ರಮಿಸಿದ ಮೇಲೆ ಮುಖವನ್ನು / ಕಣ್ಣುಗಳನ್ನು ತೊಳೆದುಕೊಳ್ಳಬಹುದು.

3. ತ್ರಾಟಕದ ಅಭ್ಯಾಸದ ನಂತರ ಸ್ವಲ್ಪ ಸಮಯದವರೆಗೂ ಏನನ್ನು ಓದಬಾರದು ಮತ್ತು ದೂರದರ್ಶನವನ್ನು ನೋಡಬಾರದೆಂದು ಸೂಚಿಸಲಾಗಿದೆ. ಸಾಧ್ಯವಾದರೆ ಸ್ವಲ್ಪ ಹೊತ್ತಿನವರೆಗೆ ಕಣ್ಣುಗಳನ್ನು ಮುಚ್ಚಿ ಶವಾಸನದಲ್ಲಿ ಅಥವಾ ಕುಳಿತು ವಿಶ್ರಮಿಸುವುದು ಉತ್ತಮ.

ನಾಗರಾಜ್ ಆರ್. ಸಾಲೋಳ್ಳಿ - ಭೂಮಿ ಯೋಗ ಫೌಂಡೇಶನ್ ಟ್ರಸ್ಟ್ (ರಿ.)

ನಾಗರಾಜ್ ಆರ್. ಸಾಲೋಳ್ಳಿ
ಭೂಮಿ ಯೋಗ ಫೌಂಡೇಶನ್ ಟ್ರಸ್ಟ್ (ರಿ.)
#57, ಗುರುಕುಲ ಶಾಲೆ ಸಮೀಪ, ಓಂ ನಗರ,
ಸೇಡಂ ರಸ್ತೆ, ಕಲಬುರಗಿ-585 105
ದೂ. : 9972776062
ಇಮೇಲ್ : bhoomiyogafoundation2016@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!