ಜೀರಿಗೆ ಎಲ್ಲರಿಗೂ ಉಪಕಾರಿ ಔಷಧಾಹಾರ. ನಿತ್ಯವೂ ಜೀರಿಗೆಯನ್ನು ಸೇವಿಸುವುದರಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮೆದುಳಿನ ಶಕ್ತಿಯನ್ನು ಹೆಚ್ಚು ಮಾಡುವುದರಿಂದ ಹಿಡಿದು ಪಾದದ ಉಗುರಿನ ಸಮಸ್ಯೆಯವರೆಗೆ ಇದು ಉಪಯೋಗಿ.
ಬಹುಶಃ ಅಡುಗೆ ಮನೆಯಲ್ಲಿ ಇರುವ ಔಷಧೀಯ ವಸ್ತುಗಳಲ್ಲಿ ಮೊದಲನೇ ಶ್ರೇಣಿ ಜೀರಿಗೆಗೇ ಸಿಗುತ್ತದೆ. ಅಷ್ಟರ ಮಟ್ಟಿಗೆ ಅದು ಹಲವಾರು ಖಾಯಿಲೆಗಳಲ್ಲಿ ಆಬಾಲ ವೃದ್ಧರಾದಿಯಾಗಿ ಎಲ್ಲರಿಗೂ ಉಪಕಾರಿ ಔಷಧಾಹಾರ. ಮೆದುಳಿನ ಶಕ್ತಿಯನ್ನು ಹೆಚ್ಚು ಮಾಡುವುದರಿಂದ ಹಿಡಿದು ಪಾದದ ಉಗುರಿನ ಸಮಸ್ಯೆಯವರೆಗೆ ಇದು ಉಪಯೋಗಿ.
ಹೌದು; ಇದು ನಮ್ಮ ಬುದ್ಧಿ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಎಂದು ಆಯುರ್ವೇದ ಹೇಳುತ್ತದೆ. ಹಾಗಾಗಿ ಇದರ ಬಗ್ಗೆ ವಿವರಿಸುವಾಗ “ಮೇಧ್ಯ” ಎಂದು ಕೂಡ ಹೇಳಿದ್ದಾರೆ. ಹಾಗಾಗಿ ಚಿಕ್ಕ ಮಕ್ಕಳಿಗೆ ಕೊಡುವ ಆಹಾರ ಪದಾರ್ಥಗಳಲ್ಲಿ ಜೀರಿಗೆಯನ್ನು ಚೆನ್ನಾಗಿ ಬಳಸಬೇಕು. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುವುದಲ್ಲದೇ ತಿಂದ ಆಹಾರ ದೇಹಕ್ಕೆ ಚೆನ್ನಾಗಿ ಹೀರಿಕೊಳ್ಳುವಲ್ಲಿಯೂ ಅನುಕೂಲವಾಗುತ್ತದೆ. ಈ ಕಾರಣಕ್ಕಾಗಿಯೇ ಜೀರಿಗೆ ಐಬಿಎಸ್ ಸಮಸ್ಯೆ ಇರುವವರಿಗೆ ಅತಿ ಉಪಯೋಗಿ.
ಒಂದಿಷ್ಟು ಜೀರಿಗೆ, ಅದರ ಅರ್ಧದಷ್ಟು ಶುಂಠಿ ಮತ್ತು ಶುಂಠಿಯ ಅರ್ಧದಷ್ಟು ಸೈಂಧವ ಲವಣವನ್ನು ಸೇರಿಸಿ ಚೆನ್ನಾಗಿ ಪುಡಿ ಮಾಡಿ ಒಂದು ಡಬ್ಬಿಯಲ್ಲಿ ಹಾಕಿ ಇಟ್ಟುಕೊಳ್ಳಬೇಕು. ಅರ್ಧ ಚಮಚದಷ್ಟು ಈ ಪುಡಿಯನ್ನು ಊಟ ಪ್ರಾರಂಭ ಮಾಡುವಾಗ ಬಿಸಿ ಅನ್ನಕ್ಕೆ ಒಂದು ತುತ್ತಿಗೆ ಹಾಕಿ ಅದಕ್ಕೆ ಅರ್ಧ ಚಮಚ ತುಪ್ಪ ಹಾಕಿ ಸೇವಿಸಿ ನಂತರ ಮುಂದಿನ ಊಟ ಮಾಡುವುದರಿಂದ ಹೊಟ್ಟೆಯುಬ್ಬರ, ಅಜೀರ್ಣದಂತಹ ತೊಂದರೆಗಳು ಗುಣವಾಗುತ್ತವೆ.
ಹೆಣ್ಣು ಮಕ್ಕಳಲ್ಲಿ ಮುಟ್ಟಿನ ಸಮಯದ ಹೊಟ್ಟೆ ನೋವು ಹತೋಟಿಗೆ ತರಲು ಜೀರಿಗೆ ತುಂಬಾ ಅನುಕೂಲಕಾರಿ. ಏಕೆಂದರೆ ಇದು ಗರ್ಭಾಶಯವನ್ನು ಶುದ್ಧ ಮಾಡುವ ಗುಣವನ್ನು ಹೊಂದಿದೆ; ಹಾಗಾಗಿ ರಕ್ತಸ್ರಾವ ಸುಲಭವಾಗಿ ಆಗಿ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಒಂದಿಷ್ಟು ಜೀರಿಗೆಯನ್ನು ಪುಡಿ ಮಾಡಿ ಅದರ ಅರ್ಧದಷ್ಟು ಪ್ರಮಾಣದಲ್ಲಿ ಸಾವಯವ ಬೆಲ್ಲವನ್ನು ಸೇರಿಸಿ ಇಟ್ಟುಕೊಳ್ಳಬೇಕು. ಮುಟ್ಟಿನ ಸಮಯ ಹತ್ತಿರ ಬಂದಾಗ ಒಂದೆರಡು ದಿನ ಎರಡೆರಡು ಟೀ ಚಮಚದಷ್ಟು ಈ ಪುಡಿಯನ್ನು ಬೆಳಗ್ಗೆ ಮತ್ತು ರಾತ್ರಿ ಊಟದ ಮೊದಲು ಸೇವಿಸಬೇಕು.
ಜೀರಿಗೆ ವೃಷ್ಯವೂ, ಬಲ್ಯವೂ ಆಗಿದೆ ಎಂದು ಆಯುರ್ವೇದ ಹೇಳುತ್ತದೆ. ಅಂದರೆ ಲೈಂಗಿಕ ಶಕ್ತಿಯನ್ನು ಹೆಚ್ಚು ಮಾಡುವ ಮತ್ತು ದೇಹದ ಬಲವನ್ನು ಹೆಚ್ಚಿಸುವ ಶಕ್ತಿ ಜೀರಿಗೆಗೆ ಇದೆ ಎಂದರ್ಥ. ಜೀರಿಗೆಗೆ ವಾತದ ಜೊತೆ ಕಫವನ್ನು ನಿಯಂತ್ರಿಸುವ ಗುಣ ಇದೆ. ಹಾಗಾಗಿ ದೇಹದ ಯಾವುದೇ ಭಾಗದಲ್ಲಿ ನೋವು, ಬಿಗಿತ, ನರಸಂಬಂಧಿ ಸಮಸ್ಯೆಗಳು, ಕಫದ ತೊಂದರೆಗಳು ಇರುವಾಗ ಜೀರಿಗೆಯ ಸೇವನೆ ತುಂಬಾ ಸಹಕಾರಿ.
ಇದು ಜೀರ್ಣಕಾರಿಯಾದ ಕಾರಣದಿಂದ ಪದೇಪದೇ ವಾಂತಿ ಅಥವಾ ಭೇದಿ ಆಗುವವರು ಇದನ್ನು ನಿತ್ಯವೂ ಸೇವಿಸಬೇಕು. ಇದರ ಜೊತೆಗೆ ಸ್ವಲ್ಪ ಶುಂಠಿ ಮತ್ತು ಕೊತ್ತಂಬರಿ ಕಾಳನ್ನು ಸೇರಿಸಿ ಕಷಾಯಮಾಡಿ ನಿತ್ಯವೂ ಸೇವಿಸಿದರೆ ಹೆಚ್ಚು ಅನುಕೂಲಕರ. ಇದು ಮೂತ್ರಾಂಗ ವ್ಯೂಹದ ಮೇಲೆ ಕೂಡ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ಮೂತ್ರದ ಕಲ್ಲು, ಮೂತ್ರ ತಡೆ, ಮೂತ್ರಕೋಶದ ಉರಿಯೂತ ಇರುವಾಗ ಔಷಧಗಳ ಜೊತೆಗೆ ಜೀರಿಗೆ ಕಷಾಯವನ್ನು ಕುಡಿಯುತ್ತಿದ್ದರೆ ಸಮಸ್ಯೆ ಬೇಗ ವಾಸಿಯಾಗುತ್ತದೆ.
ಚಿಕ್ಕ ಮಕ್ಕಳು ಸರಿಯಾಗಿ ಊಟ ಮಾಡದೆ ಇದ್ದಾಗ ಜೀರಿಗೆ ಕಷಾಯವನ್ನು ಕೊಡುವುದರಿಂದ ಬಾಯಿರುಚಿ ಹೆಚ್ಚಾಗಿ ಚೆನ್ನಾಗಿ ಊಟ ಮಾಡುತ್ತಾರೆ. ಬಾಣಂತಿಯರಿಗೆ ಜೀರಿಗೆ ಕಷಾಯವನ್ನು ಕುಡಿಸುವುದರಿಂದ ಎದೆಹಾಲು ಹೆಚ್ಚುತ್ತದೆ. ತುಂಬಾ ಮಾತನಾಡುವ ವೃತ್ತಿಯಲ್ಲಿರುವವರು ಅಥವಾ ಹಾಡುಗಾರರಿಗೆ ಧ್ವನಿಯ ಸಮಸ್ಯೆಯಾಗುವುದು ಸಹಜ. ಅಂಥವರು ಸ್ವಲ್ಪ ಜೀರಿಗೆ ಮತ್ತು ಜೇಷ್ಠಮಧುವಿನ ಮಿಶ್ರಣವನ್ನು ಬಾಯಲ್ಲಿಟ್ಟು ಜಗಿಯುತ್ತಿದ್ದರೆ ಧ್ವನಿ ಸುಧಾರಿಸುತ್ತದೆ ಮತ್ತು ಧ್ವನಿಗೆ ಸಂಬಂಧಿಸಿದ ಸಮಸ್ಯೆ ಬರದಂತೆ ಇದು ತಡೆಯುತ್ತದೆ. ಒಟ್ಟಿನಲ್ಲಿ ನಿತ್ಯವೂ ಜೀರಿಗೆಯನ್ನು ಸೇವಿಸುವುದರಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.