ಭಾರತದಲ್ಲಿ ಹೆಚ್ಚುತ್ತಿರುವ ಗರ್ಭಧಾರಣೆಯ ಮಧುಮೇಹ ಪ್ರಕರಣಗಳು

ಡಯಾಬಿಟಿಸ್ ಚಿಕಿತ್ಸೆಗಾಗಿ 1922ರಲ್ಲಿ ಇನ್ಸುಲಿನ್‍ನನ್ನು ಪರಿಚಯಿಸಿದ ನಂತರ ಹೆರಿಗೆ ಸಾವುಗಳ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡುಬಂದರೂ, ಹಲವು ದಶಕಗಳ ಕಾಲ ಗರ್ಭಧಾರಣೆಯ ನಷ್ಟ ದರವು ಅಧಿಕ ಪ್ರಮಾಣದಲ್ಲೇ ಮುಂದುವರೆದಿತ್ತು. ಆರೋಗ್ಯಕರ ಗರ್ಭಧಾರಣೆ ಯೋಜನೆಯ ಗುರಿಯು ಗರ್ಭಧಾರಣೆ ಮುನ್ನ, ಗರ್ಭಧರಿಸಿದ ವೇಳೆ ಮತ್ತು ನಂತರದ ಗರಿಷ್ಠ ಗ್ಲೈಸಿಮಿಕ್ (ರಕ್ತದಲ್ಲಿನ ಸಕ್ಕರೆ) ಹತೋಟಿಯನ್ನು ಅವಲಂಬಿಸಿದೆ. ಆರೋಗ್ಯಕರ ಗ್ಲೈಸಿಮಿಕ್ ನಿಯಂತ್ರಣವು ಭ್ರೂಣ ಮತ್ತು ಹೆರಿಗೆ ತೊಡಕುಗಳೆರಡನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ತುಂಬಾ ಮಹತ್ವದ್ದಾಗಿದೆ.
ಗರ್ಭಧಾರಣೆ ವೇಳೆ ಕಂಡುಬರುವ ಮಧುಮೇಹ ರೋಗದ ನಿರ್ವಹಣೆಯು ತುಂಬಾ ಸೂಕ್ಷ್ಮವಾದ ವಿಚಾರವಾಗಿದ್ದು, ಔಷಧಿ, ಪ್ರಸೂತಿ, ಆಹಾರ, ಪ್ರಸವ ಮತ್ತು ಇತರೆ ವಿಶೇಷತೆಗಳಂಥ ಬಹು ಮುಖ್ಯ ವಿಷಯಗಳನ್ನು ಒಳಗೊಂಡಿರುತ್ತದೆ. ಗರ್ಭಧಾರಣೆಗೂ ಮುನ್ನ ಸೂಕ್ತ ಇನ್ಸುಲಿನ್ ಚಿಕಿತ್ಸೆಯೊಂದಿಗೆ ಉತ್ತಮ ರೀತಿಯಲ್ಲಿ ಡಯಾಬಿಟಿಸ್ ನಿಯಂತ್ರಿಸಬಹುದು ಹಾಗೂ ಅದನ್ನು ಗರ್ಭಧಾರಣೆ ವೇಳೆಯೂ ಸಮರ್ಪಕವಾಗಿ ನಿರ್ವಹಣೆ ಮಾಡುವುದರಿಂದ ಹೆರಿಗೆ ಮತ್ತು ಪ್ರಸವ ಸಂದರ್ಭದ ತೊಡಕುಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂಬುದನ್ನು ಅನೇಕ ಕ್ಲಿನಿಕಲ್ ಅಧ್ಯಯನಗಳು ಸಾಬೀತು ಮಾಡಿವೆ.
ಗಂಡಾಂತರಕಾರಿ ಅಂಶಗಳು
ಗರ್ಭಧಾರಣೆ ವೇಳೆ ಕಂಡಬರುವ ಡಯಾಬಿಟಿಸ್‍ನಲ್ಲಿ ಅನೇಕ ಗಂಡಾಂತರಕಾರಿ ಅಂಶಗಳಿವೆ. ಜೆಸ್ಟೇಷನಲ್ ಡಯಾಬಿಟಿಸ್‍ನಿಂದ ಗರ್ಭಧಾರಣೆ ಸಂದರ್ಭದಲ್ಲಿ ಮತ್ತು ನಂತರ ತಾಯಿ ಮತ್ತು ಶಿಶುವಿಗೆ ಹಲವಾರು ತೊಡಕುಗಳು ಕಂಡುಬರುತ್ತವೆ. ಗರ್ಭಿಣಿ ಜೆಸ್ಟೇಷನಲ್ ಡಯಾಬಿಟಿಸ್‍ನಿಂದ ಬಳಲುತ್ತಿದ್ದರೆ, ಆಕೆಗೆ ಸೀಸೇರಿಯನ್ ಹೆರಿಗೆ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂಥ ಗರ್ಭವತಿಯರಲ್ಲಿ ಅಧಿಕ ರಕ್ತದೊತ್ತಡ ಹಾಗೂ ಹೆರಿಗೆ ಮತ್ತು ಪ್ರಸವ ತೊಡಕುಗಳು ಸಹ ಕಂಡುಬರುತ್ತವೆ.
ಜಿಡಿಎಂ ಹೊಂದಿರುವ ಗರ್ಭಿಣಿಯರಲ್ಲಿ ಹೆರಿಗೆ ನಂತರ ಟೈಪ್-2 ಡಯಾಬಿಟಿಸ್ ಕಾಣಿಸಿಕೊಳ್ಳುವ ಸಾಧ್ಯತೆ ಅಧಿಕವಾಗಿರುತ್ತದೆ. ಪ್ರತಿ ಹೆಚ್ಚುವರಿ ಗರ್ಭಧಾರಣೆಯೊಂದಿಗೆ ಟೈಪ್-2 ಡಯಾಬಿಟಿಸ್ ಅಭಿವೃದ್ಧಿಗೊಳ್ಳುವ ಸಂಭವಾಂಶ ಹೆಚ್ಚಾಗುತ್ತದೆ. ಜಿಡಿಎಂ ತಾಯಿಯ ಶಿಶುವಿಗೆ ಡಯಾಬಿಟಿಸ್, ಗಾಯ, ಅಧಿಕ ಜನನ ತೂಕ, ಭುಜದ ಸಮಸ್ಯೆ, ಕಾಮಾಲೆ ಕಾಣಿಸಿಕೊಳ್ಳುವ ಸಂಭವ ಹೆಚ್ಚಾಗಿರುತ್ತದೆ. ಇದರೊಂದಿಗೆ ಮಗು ನಂತರದ ದಿನಗಳಲ್ಲಿ ಅತಿಯಾದ ತೂಕ, ಬೊಜ್ಜು, ಸ್ಥೂಲಕಾಲ ಮತ್ತು ಮಧುಮೇಹ ರೋಗದಿಂದ ನರಳುವ ಸಾಧ್ಯತೆಗಳೂ ಅಧಿಕವಾಗಿರುತ್ತದೆ.
ಟೈಪ್-1 ಡಯಾಬಿಟಿಸ್ ಹೊಂದಿರುವ ಮಹಿಳೆಯು ಗರ್ಭಧಾರಣೆ ತೊಡಕುಗಳಿಗೆ ಒಳಗಾಗುವ ಸಂಭವ ಅತ್ಯಧಿಕವಾಗಿರುತ್ತದೆ. ಈ ತೊಡಕುಗಳು ಜನ್ಮಜಾತ ನ್ಯೂನತೆಗಳು, ಪ್ರಸವ ಮರಣ, ಪ್ರಸೂತಿ ತೊಡಕುಗಳು ಹಾಗೂ ನವಜಾತ ಶಿಶು ಅನಾರೋಗ್ಯ ಇವುಗಳನ್ನು ಒಳಗೊಂಡಿರುತ್ತದೆ.
ಇನ್ಸುಲಿನ್ ಕಂಡುಹಿಡಿಯುವುದಕ್ಕೆ ಮೊದಲು ಟೈಪ್-1 ಡಯಾಬಿಟಿಸ್ ಹೊಂದಿರುವ ಮಹಿಳೆಯರು ಆರೋಗ್ಯಕರ ಶಿಶುಗಳ ಯಶಸ್ವಿ ಹೆರಿಗೆ ಬಹುತೇಕ ಅಸಾಧ್ಯವಾಗಿತ್ತು ಹಾಗೂ ಹೆರಿಗೆ ಸಾವು ಪ್ರಕರಣಗಳು ಶೇಕಡ 25ರಷ್ಟು ಅಧಿಕವಾಗಿತ್ತು. ಗರ್ಭಧರಿಸಲು ಹಾಗೂ ಆರೋಗ್ಯಕರ ಶಿಶುವಿಗೆ ಜನ್ಮ ನೀಡಲು ಬಯಸುವ ಟೈಪ್-1 ಡಯಾಬಿಟಿಸ್ ಹೊಂದಿರುವ ಮಹಿಳೆಯರು ಕಟ್ಟುನಿಟ್ಟಿನ ಗ್ಲೈಸಿಮಿಕ್ ನಿಯಂತ್ರಣಕ್ಕೆ ಒಳಗಾಗುವ ಅಗತ್ಯವಿದೆ.
ರಕ್ತದಲ್ಲಿ ಕಡಿಮೆ ಸಕ್ಕರೆ ಅಥವಾ ಹೈಪೋಗ್ಲಿಸಿಮಿಯಾ
ಡಯಾಬಿಟಿಸ್ ಹೊಂದಿರುವ ಗರ್ಭಿಣಿಯರಿಗೆ ರಕ್ತದಲ್ಲಿನ ಕಡಿಮೆ ಸಕ್ಕರೆ ಅಥವಾ ಹೈಪೋಗ್ಲಿಸಿಮಿಯಾದ ಅನುಭವ ಉಂಟಾಗಿ ಅದು ಬೆಳೆಯುತ್ತಿರುವ ಶಿಶುವಿನ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಈ ಪರಿಸ್ಥಿತಿಯು ಮುಂದೆ ಶಿಶುವಿನಲ್ಲಿ ಅರಿವಿನ ದೋಷಗಳು, ಡಯಾಬಿಟಿಸ್, ಕರೋನರಿ ಆರ್ಟರಿ ರೋಗ ಮತ್ತು ಅಧಿಕ ರಕ್ತದೊತ್ತಡದಂಥ ಸಮಸ್ಯೆಗೆ ಎಡೆಮಾಡಿಕೊಡುತ್ತದೆ. ಹೈಪೋಗ್ಲಿಸಿಮಿಯಾ ಇರುವ ಮಹಿಳೆಯರಲ್ಲಿ ಗಣನೀಯವಾಗಿ ಕಡಿಮೆ ಜನನ ತೂಕದ ಶಿಶುಗಳು ಜನಿಸುತ್ತವೆ. ಇದಕ್ಕೆ ರಕ್ತದಲ್ಲಿನ ಕಡಿಮೆ ಸಕ್ಕರೆ ಅಂಶವೇ ಕಾರಣ ಎಂಬುದನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಕಡಿಮೆ ಜನನ ತೂಕ ಹೊಂದಿರುವ ಹಸುಳೆಗಳು ಬೆಳೆವಣಿಗೆಯ ಎಲ್ಲ ಮೈಲಿಗಲ್ಲುಗಳನ್ನು ತಲುಪಲು ವಿಳಂಬಕ್ಕೆ ಒಳಗಾಗುತ್ತವೆ. ಅಂದರೆ ಹಲ್ಲು ಬೆಳೆಯುವಿಕೆ, ಸ್ವತಂತ್ರವಾಗಿ ಕುಳಿತುಕೊಳ್ಳುವಿಕೆ ಮತ್ತು ನಡೆದಾಡುವಿಕೆ, ಮೂತ್ರಚೀಲ ನಿಯಂತ್ರಣ ಹಾಗೂ ವಾಕ್ ಅಭಿವೃದ್ಧಿಯಂಥ ಚಟುವಟಿಕೆಗಳಲ್ಲಿ ಹಿಂದಿರುತ್ತವೆ. ಇಂಥ ಶಿಶುಗಳು ನಂತರದ ಬಾಲ್ಯದ ದಿನಗಳು ಮತ್ತು ಯೌವ್ವನದಲ್ಲಿ ವಿಪರೀತ ಭಾವನಾತ್ಮಕ ಮತ್ತು ನಡವಳಿಕೆ ಸಮಸ್ಯೆಗಳನ್ನು ಎದುರಿಸುತ್ತವೆ.
ರಕ್ತದಲ್ಲಿ ಕಡಿಮೆ ಸಕ್ಕರೆ ಅಥವಾ ಹೈಪೋಗ್ಲಿಸಿಮಿಯಾದಲ್ಲಿ ಒಳ್ಳೆಯ ಸುದ್ದಿಯೆಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣದ ಮೇಲೆ ಸೂಕ್ತ ನಿಗಾ ವಹಿಸುವುದರಿಂದ ಮತ್ತು ಪಥ್ಯಾಹಾರಗಳನ್ನು ಪಾಲಿಸುವುದರಿಂದ ಇದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಅಗಾಗ ಸಣ್ಣ ಪ್ರಮಾಣದಲ್ಲಿ ಸೂಕ್ತ ಆಹಾರ ಸೇವಿಸುವುದರಿಂದ ಹೈಪೋಗ್ಲಿಸಿಮಿಯಾ ಸಮಸ್ಯೆಯನ್ನು ತಪ್ಪಿಸಬಹುದಾಗಿದೆ.
ಚಿಕಿತ್ಸೆ
ಗರ್ಭಾವಸ್ಥೆಯಲ್ಲಿನ ಮಧುಮೇಹದಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣದ ಮೇಲೆ ನಿಯಂತ್ರಣ ಸಾಧಿಸಲು ವಿಶೇಷ ಗಮನಹರಿಸಬೇಕು ಹಾಗೂ ಆರೋಗ್ಯಕರ ಶಿಶು ಜನನಕ್ಕೆ ಇದು ಅತಿ ಮುಖ್ಯವಾದ ಸಂಗತಿಯಾಗಿದೆ.
ದೇಹದಲ್ಲಿ ಅಪಾಯಕಾರಿ ಗ್ಲುಕೋಸ್ ಏರಿಳಿತಗಳಿರುತ್ತವೆ. ಇದು ಸಾಂಪ್ರದಾಯಿಕ ಗ್ಲುಕೋಸ್ ಪರೀಕ್ಷೆಗಳೊಂದಿಗೆ ಪತ್ತೆಯಾಗುವುದಿಲ್ಲ. ಡಯಾಬಿಟಿಸ್ ಹೊಂದಿರುವ ರೋಗಿಗಳು ಹಾಗೂ ಗರ್ಭ ಧರಿಸಲು ಯೋಜನೆ ರೂಪಿಸುತ್ತಿರುವ ಮಹಿಳೆಯರಿಗೆ ತಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣದ ಸರಿಯಾದ ಚಿತ್ರಣ ಲಭಿಸುವಂತಾಗಲು ನಿರಂತರ ಗ್ಲುಕೋಸ್ ನಿಗಾ ವ್ಯವಸ್ಥೆಗೆ (ಕಂಟಿನ್ಯೂಯಸ್ ಗ್ಲುಕೋಸ್ ಮಾನಿಟರಿಂಗ್ ಸಿಸ್ಟಮ್- ಸಿಜಿಎಂಎಸ್) ಎಂಡೋಕ್ರಿನಾಲಾಜಿಸ್ಟ್ ಸಲಹೆ ಮಾಡುತ್ತಾರೆ. ಸಿಜಿಎಂಎಸ್‍ನನ್ನು ಐಪ್ರೋ2 ಮಾನಿಟರ್‍ನೊಂದಿಗೆ ಮಾಡಲಾಗುತ್ತದೆ. ಇದನ್ನು ತಾಯಿಯಾಗಲಿರುವ ಮಹಿಳೆಯ ಉದರದ ಗೋಡೆಗೆ ಅಳವಡಿಸಲಾಗುತ್ತದೆ. ಇದು ವ್ಯಕ್ತಿಯ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಪ್ರತಿ 10 ಸೆಕೆಂಡ್‍ಗಳಿಗೊಮ್ಮೆ ಮಾಪನ ಮಾಡುತ್ತದೆ ಹಾಗೂ ಪ್ರತಿ ಐದು ನಿಮಿಷಕ್ಕೊಮ್ಮೆ ವರದಿಯನ್ನು ನೀಡುತ್ತದೆ. ಹೀಗಾಗಿ ಒಂದು ದಿನಕ್ಕೆ 288 ಬ್ಲಡ್ ಶುಗರ್ ರೀಡಿಂಗ್‍ನನ್ನು ಪಡೆಯಲಾಗುತ್ತದೆ. ಈ ದತ್ತಾಂಶ ದಾಖಲೆಯನ್ನು ಕಂಪ್ಯೂಟರ್‍ಗೆ ಅಪ್‍ಲೋಡ್ ಮಾಡಲಾಗುತ್ತದೆ ಹಾಗೂ ಇದು ಗ್ರಾಫ್ ರೂಪದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
ದಿನದ ಪ್ರತಿಯೊಂದು ಆಹಾರ ಮತ್ತು ಊಟ ಸೇವನೆಯ ನಂತರ ಹೇಗೆ ತಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ ಎಂಬುದನ್ನು ಸಹ ನೋಡಬಹುದಾಗಿದೆ. ನಿರ್ದಿಷ್ಟ ಆಹಾರ ಸೇವಿಸಿದ ಬಳಿಕ ಎಷ್ಟು ಪ್ರಮಾಣದಲ್ಲಿ ರಕ್ತದಲ್ಲಿನ ಸಕ್ಕರೆ ಅಂಶ ಏರಿಕೆಯಾಗುತ್ತದೆ ಎಂಬ ಸ್ಪಷ್ಟ ಚಿತ್ರಣವನ್ನು ಸಹ ಇದು ನೀಡುತ್ತದೆ.
ಗ್ಲುಕೋಸ್ ಮಟ್ಟಗಳ ಮೇಲೆ ನಿಗಾ ಇಡುವುದರಿಂದ, ಗರ್ಭಿಣಿಯರ ರಕ್ತದಲ್ಲಿನ ಸಕ್ಕರೆ ಪ್ರಮಾಣಗಳ ಮೇಲೆ ಆಹಾರ, ವ್ಯಾಯಾಮ, ಒತ್ತಡ ಇತ್ಯಾದಿಯಂಥ ವಿವಿಧ ಚಟುವಟಿಕೆಗಳು ಯಾವ ರೀತಿಯ ಪ್ರಭಾವ ಮತ್ತು ಪರಿಣಾಮ ಬೀರುತ್ತವೆ ಎಂಬ ಬಗ್ಗೆ ಉಪಯುಕ್ತ ಮಾಹಿತಿ ಸಿಗುತ್ತದೆ. ಈ ಮಾಹಿತಿಯನ್ನು ಆಧರಿಸಿ ಆಹಾರ ಸೇವನೆಗೆ ಸಂಬಂಧಪಟ್ಟಂತೆ ಸರಿಯಾದ ಕ್ರಮಗಳನ್ನು ಗರ್ಭಿಣಿಯರು ಕೈಗೊಳ್ಳಬಹುದಾಗಿದೆ.
ಗರ್ಭಿಣಿಯ ರಕ್ತದಲ್ಲಿನ ಸಕ್ಕರೆ ಪ್ರಮಾಣವು ಇಡೀ ದಿನ ಹೇಗೆ ಬದಲಾಗುತ್ತಿರುತ್ತವೆ ಎಂಬುದನ್ನು ವೈದ್ಯರು ಸುಲಭವಾಗಿ ಪತ್ತೆ ಮಾಡಲು ಇದರಿಂದ ಸಾಧ್ಯ. ದಿನದ ಮಾಪನದಲ್ಲಿ ಅಧಿಕ ಬ್ಲಡ್ ಶುಗರ್ ಹೊಂದಿರುವ ಸಾಕಷ್ಟು ಮಹಿಳೆಯರು ಕಂಡುಬರುತ್ತಾರೆ. ಇದನ್ನು ಆಹಾರ ಸೇವನೆಗೆ ಮುನ್ನ ಬ್ಲಡ್ ಶುಗರ್ ಮತ್ತು ಪಿಪಿಬಿಎಸ್ (ಆಹಾರ ಸೇವನೆ ನಂತರ ಬ್ಲಡ್ ಶುಗರ್) ಈ ರೀತಿಯ ಮಾಮೂಲಿ ಬ್ಲಡ್ ಟೆಸ್ಟ್‍ಗಳಿಂದ ಪತ್ತೆ ಮಾಡಲು ಸಾಧ್ಯವಿಲ್ಲ. ರಾತ್ರಿ ವೇಳೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುವಿಕೆ (ಹೈಪೋಗ್ಲಿಸಿಮಿಯಾ) ಗಮನಕ್ಕೆ ಬರದಿರುವ ರೋಗಗಳಿಗೆ ಇದು ಪ್ರಯೋಜನಕಾರಿ. ಸಿಜಿಎಂಎಸ್‍ನೊಂದಿಗೆ ಇಡೀ ದಿನ ಉತ್ತಮ ರೀತಿಯಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಹತೋಟಿಯಲ್ಲಿಡಲು ವೈದ್ಯರು ಚಿಕಿತ್ಸೆಯನ್ನು ಮಾರ್ಪಡಿಸಿಕೊಳ್ಳಬಹುದಾಗಿದೆ.
ಸಿಎಸ್‍ಐಐ ಅಥವಾ ಇನ್ಸುಲಿನ್ ಪಂಪ್ ಥೆರಪಿ-ಟೈಪ್ 1 ಡಯಾಬಿಟಿಸ್ ಗರ್ಭಿಣಿಯರಿಗೆ ವರದಾನ
ಗರ್ಭಧರಿಸಲು ಮತ್ತು ಆರೋಗ್ಯವಂತ ಶಿಶುವಿಗೆ ಜನ್ಮ ನೀಡಲು ಬಯಸುವ ಟೈಪ್-1 ಡಯಾಬಿಟಿಸ್ ಹೊಂದಿರುವ ರೋಗಿಗಳು ನಿರಂತರ ಚರ್ಮದಡಿ ಇನ್ಸುಲಿನ್ ಸೇರ್ಪಡೆ (ಕಂಟಿನ್ಯೂಯಸ್ ಸಬ್‍ಕುಟಾನಿಯಸ್ ಇನ್‍ಸುಲಿನ್ ಇನ್‍ಫ್ಯೂಷನ್- ಸಿಎಸ್‍ಐಐ) ಅಥವಾ ಇನ್ಸುಲಿನ್ ಪಂಪ್ ಥೆರಪಿ ಮೂಲಕ ಗರ್ಭಾವಸ್ಥೆಯ ಎಲ್ಲ ಮೂರು ತ್ರೈಮಾಸಿಕ ಅವಧಿಯಲ್ಲಿ ಆಪೇಕ್ಷಿತ ಗ್ಲೈಸಿಮಿಕ್ ನಿಯಂತ್ರಣ ಸಾಧಿಸಬಹುದು. ಪರ್ಸನಲ್ ಪೋರ್ಟಬಲ್ ಇನ್ಸುಲಿನ್ ಪಂಪ್ ಬಳಕೆಯೊಂದಿಗೆ ಸಿಎಸ್‍ಐಐ, ಟೈಪ್-1 ಡಯಾಬಿಟಿಸ್ ಹೊಂದಿರುವ ರೋಗಿಗಳಲ್ಲಿ ಇನ್ಸುಲಿನ್ ಪೂರೈಕೆಗೆ ಅತ್ಯುತ್ತಮ ಮತ್ತು ಅತ್ಯಂತ ಸುಧಾರಿತ ಮಾರ್ಗವಾಗಿದೆ.
ಇನ್ಸುಲಿನ್ ಪಂಪ್ ಥೆರಪಿಯು ಗರ್ಭಧಾರಣೆ ವೇಳೆ ಕಂಡುಬರುವ ಡಯಾಬಿಟಿಸ್‍ನಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಉತ್ತಮ ರೀತಿಯಲ್ಲಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ನೆರವಾಗುತ್ತದೆ. ಗರ್ಭಾವಸ್ಥೆಯಲ್ಲಿ ಕಂಡುಬರುವ ಗರ್ಭಪಾತ, ಅವಧಿಗೆ ಮುನ್ನ ಹೆರಿಗೆ, ಸೀಸೇರಿಯನ್ ಶಸ್ತ್ರಚಿಕಿತ್ಸೆ ಹಾಗೂ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುವ ಹೈಪೋಗ್ಲಿಸಿಮಿಯಾ ವಿದ್ಯಮಾನದಂಥ ತೊಡಕುಗಳನ್ನು ಕಡಿಮೆ ಮಾಡಲು ಇದು ಸಹಕಾರಿ.
ಗರ್ಭಧಾರಣೆ ವೇಳೆ ಕಂಡುಬರುವ ಟೈಪ್-1 ಡಯಾಬಿಟಿಸ್ ನಿರ್ವಹಣೆಯು ಜಟಿಲವಾಗಿದ್ದು, ಸಾಧ್ಯವಾದಷ್ಟು ಮಟ್ಟಿಗೆ ಸಾಮಾನ್ಯ ಸ್ಥಿತಿಗೆ ಹತ್ತಿರದಲ್ಲಿ ಬ್ಲಡ್ ಗ್ಲುಕೋಸ್ ಮಟ್ಟದ ನಿಯಂತ್ರಣ ಮತ್ತು ನಿರ್ವಹಣೆ ಮಾಡುವುದು ಡಯಾಬಿಟಿಸ್ ತೊಡಕುಗಳ ನಿರ್ವಹಣೆಯ ಮುಖ್ಯ ಗುರಿಯಾಗಿದೆ. ಗರ್ಭಧಾರಣೆ ವೇಳೆ ಕಂಡುಬರುವ ಮಧುಮೇಹ ರೋಗದ ನಿರ್ವಹಣೆಯು ತುಂಬಾ ಸೂಕ್ಷ್ಮವಾದ ವಿಚಾರವಾಗಿದ್ದು, ಔಷಧಿ, ಪ್ರಸೂತಿ, ಆಹಾರ, ಪ್ರಸವ ಮತ್ತು ಇತರೆ ವಿಶೇಷತೆಗಳಂಥ ಬಹು ಮುಖ್ಯ ವಿಷಯಗಳನ್ನು ಒಳಗೊಂಡಿರುತ್ತದೆ. ಗರ್ಭಧಾರಣೆಗೂ ಮುನ್ನ ಸಿಎಸ್‍ಐಐ ಅಥವಾ ಇನ್ಸುಲಿನ್ ಪಂಪ್ ಥೆರಪಿಯಂಥ ಸೂಕ್ತ ಇನ್ಸುಲಿನ್ ಚಿಕಿತ್ಸೆಯೊಂದಿಗೆ ಉತ್ತಮ ರೀತಿಯಲ್ಲಿ ಡಯಾಬಿಟಿಸ್ ನಿಯಂತ್ರಣ ಮಾಡಬಹುದಾಗಿದೆ ಹಾಗೂ ಅದನ್ನು ಗರ್ಭಧಾರಣೆ ವೇಳೆಯೂ ಸಮರ್ಪಕವಾಗಿ ನಿರ್ವಹಣೆ ಮಾಡುವುದರಿಂದ ಹೆರಿಗೆ ಮತ್ತು ಪ್ರಸವ ಸಂದರ್ಭದ ತೊಡಕುಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು.

ಡಾ.ದಿನಕರ್
ವೈದೇಹಿ ಹಾಸ್ಪಿಟಲ್, ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್, 82, ಇಪಿಐಪಿ ವೈಟ್‌ಫೀಲ್ಡ್, ಬೆಂಗಳೂರು -560066
ಫೋನ್ : 080-28413381/2/3/4      ಮೊ.: 97422 74849

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!