ನವರಾತ್ರಿಯಲ್ಲಿ ಮಾಡುವ ಉಪವಾಸದ ಮಹತ್ವ

ನವರಾತ್ರಿ ಬಹಳ ಸಂಭ್ರಮ ಸಡಗರದಿಂದ ಒಂಬತ್ತು ರಾತ್ರಿಗಳು ಆಚರಿಸಲ್ಪಡುವ ನಾಡ ಹಬ್ಬ. ಭಾರತದ ಹಲವು ಭಾಗಗಳಲ್ಲಿ ಹಲವಾರು ರೀತಿಯಲ್ಲಿ ಧಾರ್ಮಿಕ ಮತ್ತು ಸಾಂಸಕೃತಿಕ ಕಾರ್ಯಕ್ರಮಗಳನ್ನು ಇದರ ಅಂಗವಾಗಿ ಆಚರಿಸಲಾಗುವುದು.
ನವರಾತ್ರಿಯಲ್ಲಿ ಶಕ್ತಿ ದೇವತೆಯನ್ನು ಆರಾಧಿಸಲಾಗುವುದು. ವಿಶೇಷವಾಗಿ ಈ ಒಂಬತ್ತು ದಿನಗಳಲ್ಲಿ ಉಪವಾಸದೊಂದಿಗೆ ದೇವಿಯ ಆರಾಧನೆಯನ್ನು ಭಕ್ತಿ ಪೂರ್ವಕವಾಗಿ ಮಾಡಲಾಗುವುದು.
ಉಪವಾಸವನ್ನು ಹಬ್ಬದ ಪ್ರಯುಕ್ತ ಧಾರ್ಮಿಕವಾಗಿ ಮಾಡಿದರೂ ಸಹ, ಇದರಿಂದ ಹಲವಾರು ಆರೋಗ್ಯದ ಲಾಭಗಳಿವೆ. ಶರೀರ, ಮನಸ್ಸು ಮತ್ತು ಆತ್ಮದ ಮೇಲೆ ಇದರ ವಿಶೇಷ ಪ್ರಭಾವವಿದೆ.

ಉಪವಾಸ ಎಂದರೇನು?
ಉಪ ಎಂದರೆ ಹತ್ತಿರ, ವಾಸ ಎಂದರೆ ಇರುವುದು. ಹತ್ತಿರವಾಗುವುದು, ಹತ್ತಿರ ಸಾಗುವುದು ಎಂಬುದು ಇದರ ಅರ್ಥ. ದೇವರಿಗೆ ಪ್ರೀತಿ ಪಾತ್ರರಾಗುವುದು, ದೇವರೆಡೆಗೆ ಸಾಗುವುದು ಎಂಬುದಾಗಿದೆ. ಆದರಿಂದ ಹಲವು ಶಾಸ್ತ್ರಗಳು ಉಪವಾಸ ಪುಣ್ಯಪ್ರದ ಎಂದು ತಿಳಿಸುತ್ತದೆ.
ಘನ ಅಥವಾ ದ್ರವ ಆಹಾರವನ್ನು ಅಥವಾ ಎರಡನ್ನು ಅಲ್ಪಕಾಲದವರೆಗೆ, ಒಂದು ಉತ್ತಮ ಉದ್ದೇಶಕ್ಕಾಗಿ ತ್ಯಜಿಸುವುದನ್ನು ಉಪವಾಸ ಎನ್ನಲಾಗುವುದು. ಇದರಿಂದ ದೇಹ, ಮನಸ್ಸು, ಆತ್ಮ ಶುದ್ದಿಗೊಳ್ಳುತ್ತದೆ ಮತ್ತು ಶಾಂತವಾಗುತ್ತದೆ.

ನವರಾತ್ರಿಯಲ್ಲಿ ಏಕೆ ಉಪವಾಸ?
ನವರಾತ್ರಿ ಎಂದರೆ ಒಂಬತ್ತು ರಾತ್ರಿಗಳು ಎಂದರ್ಥ. ವರ್ಶದಲ್ಲಿ ಇಂತಹ ನಾಲ್ಕು ನವರಾತ್ರಿ ಇದೆ. ಆದರೆ ಮಳೆಗಾಲದ ನಂತರ ಶರತ್ ಕಾಲದ ಪ್ರಾರಂಭದೊಂದಿಗೆ ಇರುವ 9 ದಿನಗಳು ಶರನ್ನವರಾತ್ರಿ . ಮುಂಗಾರು ಮುಗಿದು ಚಳಿಗಾಲ ಪ್ರಾರಂಭವಾಗುವ ಸಂಧಿಕಾಲವು ಈ ಹತ್ತು ದಿನಗಳಾಗಿವೆ. ಈ ಬದಲಾವಣೆಯ ಸಮಯದಲ್ಲಿ ಪ್ರಕೃತಿಯಲ್ಲಿ ಹಲವು ಬದಲಾವಣೆಯಾಗುತ್ತದೆ. ಅತಿಯಾದ ಮಳೆ, ಶೀತ ದಿಂದ ಜೀರ್ಣಶಕ್ತಿ ಬಹಳಷ್ಟು ಕಡಿಮೆಯಾಗಿರುತ್ತದೆ ನಂತರ ತತ್ಕ್ಷಣ ಚಳಿಗಾಲ ಪ್ರಾರಂಭವಾಗುವುದರಿಂದ, ಜೀರ್ಣಶಕ್ತಿಯ ಮೇಲೆ ಪ್ರಭಾವ ಬೀರುತ್ತದೆ. ಜೀರ್ಣಶಕ್ತಿ ಕಡಿಮೆಯಾಗುವುದರೊಂದಿಗೆ ಹಲವು ಹೊಟ್ಟೆಯ ವಿಕಾರಗಳು ಸಂಭವಿಸಬಹುದು. ಅಲ್ಲದೆ ಈ ಸಮಯದಲ್ಲಿ ದೇಹದಲ್ಲಿರುವ ಜಾಡ್ಯತೆ, ನಕಾರಾತ್ಮಕ ಶಕ್ತಿಯನ್ನು ತೆಗೆದು ದೇಹಮನಸನ್ನು ಹಗುರಗೊಳಿಸಿ ಚಳಿಗಾಲಕ್ಕೆ ಹೊಂದಿಕೊಂಡು ಹಲವು ರೋಗಗಳನ್ನು ತಡೆಯುವ ನಿಟ್ಟಿನಲ್ಲಿ ಉಪವಾಸವನ್ನು ಧಾರ್ಮಿಕ ಆಚರಣೆಯಾಗಿ ನವರಾತ್ರಿಯ ಹಬ್ಬದಲ್ಲಿ ಅಳವಡಿಸಲಾಗಿದೆ.

ಉಪವಾಸ ಮಾಡುವುದು ಹೇಗೆ?
ಉಪವಾಸ ಮಾಡುವ ಮೊದಲು ನಮ್ಮ ದೈಹಿಕ ಶಕ್ತಿ ತಿಳಿದುಕೊಳ್ಳಬೇಕು ಮತ್ತು ಮಾನಸಿಕವಾಗಿ ಸಿದ್ದರಾಗಬೇಕು. ಪ್ರಾತಃಕಾಲ ಎದ್ದು ಶೌಚಾದಿಕರ್ಮಗಳನ್ನು ಮುಗಿಸಿ ಉಪವಾಸಕ್ಕೆ ಅಣಿಯಾಗಬೇಕು. ಉಪವಾಸದಲ್ಲಿ ನಿರಾಹಾರ ಮತ್ತು ಫಲಾಹಾರ ಎಂಬ ಎರಡು ಬೇಧ ಇದೆ. ಯಾವುದೇ ರೀತಿಯ ಆಹಾರವನ್ನು ಸೇವಿಸದೆ ಉಪವಾಸ ಮಾಡುವುದನ್ನು ನಿರಾಹಾರ, ಕೆಲವೊಂದು ಫಲಾಹಾರ ಸೇವಿಸುವುದನ್ನು ಫಲಾಹಾರ ಉಪವಾಸ ಎನ್ನಲಾಗುವುದು. ಶುದ್ದವಾದ ನೀರನ್ನು ಮಾತ್ರ ಸೇವಿಸಿದರೆ ಸಜಲ ಉಪವಾಸ ಮತ್ತು ನೀರನ್ನು ಸಹ ವರ್ಜಿಸಿ ಉಪವಾಸ ಮಾಡುವುದನ್ನು ನಿರ್ಜಲ ಉಪವಾಸ ಎನ್ನಲಾಗುವುದು.
ಪ್ರತಿಯೊಬ್ಬರೂ ಉಪವಾಸ ಮಾಡುವ ಮೊದಲು, ತಮ್ಮ ದೈಹಿಕ ಶಕ್ತಿಯ ಅನುಗುಣವಾಗಿ, ರೋಗಗಳಲ್ಲಿ ವೈದ್ಯರ ಸಲಹೆಯ ಮೇರೆಗೆ ಸೂಕ್ತ ಉಪವಾಸವನ್ನು ಮಾಡಬೇಕು.
ಆಯುರ್ವೇದ ಪ್ರಕಾರ ನಿರ್ಜಲ ಉಪವಾಸ ಮತ್ತು ಏಳು ಅಥವಾ ಹತ್ತು ದಿನಕ್ಕಿಂತ ಹೆಚ್ಚಿ ಉಪವಾಸ ಮಾಡುವಂತಿಲ್ಲ. ಧಾರ್ಮಿಕವಾಗಿ ಮಾಡುವ ಉಪವಾಸದಲ್ಲಿ ಉದಾ. ಏಕಾದಶಿಯಲ್ಲಿ , ಇಡೀ ದಿನ ಉಪವಾಸ ಮಾಡಿ ಮರುದಿನ ಆಹಾರ ಸೇವಿಸಲಾಗುವುದು. ರೋಗಿಗಳಲ್ಲಿ ಸೂಕ್ತ ಅವಶ್ಯ ಲಕ್ಷಣಗಳು ಪ್ರಾಪ್ತಿಯಾಗುವವರೆಗೆ ಉಪವಾಸ ಮಾಡಿ ನಿಲ್ಲಿಸಬೇಕು.
ಘನ ಆಹಾರವನ್ನು ತ್ಯಜಿಸಿ. ಮೃದುವಾದ, ಲಘು ಆಹಾರವನ್ನು ಸೇವಿಸಬೇಕು. ದೇಹಕ್ಕೆ ಅವಶ್ಯ ಪೋಶಕಾಂಶವನ್ನು ನೀಡುವ ಸಾತ್ವಿಕ ಆಹಾರವನು ಸೇವಿಸುವುದು ಉತ್ತಮ.

ಉಪವಾಸ ಮಾಡುವಾಗ ಸೇವಿಸಬಹುದಾದ ಆಹಾರಗಳು
1. ಶುದ್ದವಾದ ನೀರನ್ನು ಸೇವಿಸಬೇಕು, ದೇಹಕ್ಕೆ ಅಗತ್ಯ ನೀರಿನಂಶ ಪ್ರಾಪ್ತಿಯಾಗುತ್ತದೆ.
2. ಹಣ್ಣಿನ ರಸವನ್ನು ಸೇವಿಸಬಹುದು. ನೀರಿನಾಂಶ, ನಾರು ಹಾಗೂ ಖನಿಜಾಂಶ ಇರುವುದರಿಂದ ಅಗತ್ಯ ಪೋಷಕಾಂಶವನ್ನು ನೀಡಿ ದೇಹವನ್ನು ಸುಸ್ತಿತಿಯಲ್ಲಿ ಇರಿಸುವುದು.
3. ಹಸುವಿನ ಹಾಲು ಪೋಷಕಾಂಶವನ್ನು ನೀಡುವುದು
4. ಎಳನೀರು ಪ್ರಾಕೃತಿಕ ಖನಿಜಾಂಶಗಳನ್ನು ತತ್ಕ್ಷಣ ಶಕ್ತಿಯನ್ನು ನೀಡುವುದು
5. ಮಜ್ಜಿಗೆ, ನಿಂಬೆಹಣ್ಣಿನ ಶರಬತ್ತು ಉತ್ತಮ
6. ವಿಶೇಷವಾಗಿ ಸೈಂದವ ಉಪ್ಪನ್ನು ಸೇವಿಸಬೇಕು – ಇದು ಮಲಬದ್ದತೆಯನ್ನು ತಡೆದು, ಪೋಷಕಾಂಶವು ದೇಹದಲ್ಲಿ ಹೀರಿಕೊಳ್ಲಲು ಸಹಕಾರಿ.

ರಾಜಸಿಕ ಆಹಾರಗಳಾದ ಮೀನು ಮೊಟ್ಟೆ, ಮಾಂಸ ಆಹಾರಗಳನ್ನು, ಈರುಳ್ಳಿ, ಬೆಳ್ಳುಳ್ಳಿ, ಧೂಮಪಾನ, ಮಧ್ಯಪಾನ, ಕರಿದ ತಿಂಡಿಗಳು, ಕಾಳುಗಳನ್ನು ಸೇವಿಸಬಾರದು
ಲಘುವಾದ, ಸುಲಬವಾಗಿ ಪಚನವಾಗುವ, ದೇಹಕ್ಕೆ, ಜೀರ್ಣಶಕ್ತಿಯನ್ನು ವ್ಯತ್ಯಾಸಗೊಳಿಸದಿರುವ ಆಹಾರಗಳನ್ನು ಸೇವಿಸಬಹುದು. ಸಬ್ಬಕ್ಕಿ, ರವೆ, ಕಿಚಡಿಯನ್ನು, ಒಂದು ಹೊತ್ತು ಸಣ್ಣಪ್ರಮಾಣದ ಸಾತ್ವಿಕ ಭೋಜನವನ್ನು ಮಾಡಬಹುದು.

ಉಪವಾಸವನ್ನು ನಿಲ್ಲಿಸುವ ಪ್ರಕಿಯೆ ಹೇಗೆ?
ಹಸಿವು, ನಾಲಿಗೆ ಶುದ್ದಿ, ಮೂತ್ರ ಸಲೀಸಾಗಿ ವಿಸರ್ಜನೆ ಯಾದಾಗ, ಲಘುವಿನ ಅನುಭವ, ತಾಜಾತನದ ಅನುಭವವಾದಾಗ್ ಉಪವಾಸವನ್ನು ನಿಲ್ಲಿಸಬೇಕು.
ಯಾವುದೇ ಆಹಾರ ಸೇವಿಸದೆ ಉಪವಾಸ ಮಾಡಿದ್ದಲ್ಲಿ ಮೊದಲು ಹಣ್ಣಿನ ರಸ ಸೇವಿಸಬೇಕು. ನಿರ್ಜಲ ಉಪವಾಸ ಮಾಡಿದ್ದರೆ ಮೊದಲು ಶುದ್ದವಾದ ನೀರನ್ನು ಸೇವಿಸಬೇಕು.
ಹೊಟ್ಟೆಗೆ ಭಾರವಾಗದ ಹಾಗೆ ಮೊದಲು ಅತೀ ಅಲ್ಪ ಹಾಗೂ ಲಘುವಾದ ನೀರಿನಾಂಶವುಳ್ಳ ಆಹಾರವನ್ನು ನಿಧಾನವಾಗಿ ಸೇವಿಸಬೇಕು. ಈ ವಿಧವಾಗಿ ಆಹಾರವನ್ನು ಸೇವಿಸಿದಾಗ ಮಾತ್ರ ಪೋಷಕಾಂಶಗಳು ಮತ್ತೆ ಕ್ರಮೇಣ ದೇಹವನ್ನು ಸೇರುತ್ತದೆ.
ಎಣ್ಣೆಯಲ್ಲಿ ಕರಿದ, ಹೊಟ್ಟೆಗೆ ಭಾರವಾಗುವ ಕಷ್ಟ ಜೀರ್ಣ ಆಹಾರವನ್ನು ಸೇವಿಸಬಾರದು.

ಯಾರು ಉಪವಾಸವನ್ನು ಮಾಡಬಾರದು?
1. ಅಲ್ಪಬಲ ಉಳ್ಳವರಾದ ಮಕ್ಕಳು ಮತ್ತು ವೃದ್ದರು
2. ಗರ್ಭಿಣಿಯರು, ಹಾಲುಣಿಸುವ ತಾಯಂದಿರು
3. ಋತುಸ್ರಾವದಲ್ಲಿರುವ ಸ್ತ್ರೀಯರು
4. ಅತೀ ಹೆಚ್ಚು ಶ್ರಮವುಳ್ಳ ಕೆಲಸ ಮಾಡುವರು
5. ಪ್ರಿತ್ತ ಪ್ರಕೃತಿಯವರು
6. ಹಸಿವನ್ನು ಹೆಚ್ಚು ತಡೆಯದವರು
7. ನಿತ್ಯ ಔಷಧಿಗಳನ್ನು ಸೇವಿಸುತ್ತಿರುವ ರೋಗಿಗಳು
8. ಹೃದಯ ಸಂಬಂಧಿ ರೋಗಿಗಳು
9. ತೀವ್ರ ಮಲಬದ್ದತೆ ಇದ್ದವರು
10. ಪೋಷಕಾಂಶಗಳ ಕೊರತೆ ಉಳ್ಳವರು ಉಪವಾಸ ಮಾಡಬಾರದು

ಯಾರು ಮಾಡಬಹುದು
1. ಶಾರೀರಿಕ ಬಲವುಳ್ಳವರು
2. ಚಳಿಗಾಲದಲ್ಲಿ
3. ಪೋಶಕಾಂಶ ಹೆಚ್ಚಾದ ರೋಗಿಗಳಲ್ಲಿ
4. ಬೊಜ್ಜು, ಕೊಲೆಸ್ಟ್ರಾಲ್ ರೋಗಿಗಳು
5. ಅಜೀರ್ಣ
6. ಚರ್ಮ ರೋಗಗಳಲ್ಲಿ
7. ಮುಂತಾದ ರೋಗಗಳಲ್ಲಿ ವೈದ್ಯರ ನಿರ್ದೇಶನದಂತೆ ಮಾಡಬೇಕು

ಅತಿಯಾದ ಉಪವಾಸದಿಂದಾಗುವ ದುಷ್ಪರಿಣಾಮಗಳು
ದೇಹದ ಬಲಕ್ಕೆ ಅನುಗುಣವಾಗಿ ಉಪವಾಸ ಮಾಡಿದಾಗ ಮಾತ್ರ ಆರೋಗ್ಯದ ಲಾಭವು ಪ್ರಾಪ್ತಿಯಾಗುತ್ತದೆ. ಇಲ್ಲದಿದ್ದಲ್ಲಿ ದೇಹಲ್ಲಿ ನೀರಿನ ಹಾಗೂ ಖನಿಜಾಂಶ, ಪೋಷಕಾಂಶಗಳು ಕಳೆದು ಹೋಗುತ್ತದೆ ಮತ್ತು ದೇಹದಲ್ಲಿ ನಿತ್ರಾಣ, ಸುಸ್ತು, ಆಯಾಸ, ದೌರ್ಬಲ್ಯತೆ ಬರುತ್ತದೆ.
ಅತಿಯಾಗಿ ಉಪವಾಸ ಮಾಡುವುದರಿಂದ, ಮೈ ನೋವು, ಸೊಂಟನೋವು, ಕೆಮ್ಮು, ಆಲಸ್ಯ, ಬಾಯಾರಿಕೆ, ಒಣಚರ್ಮ, ತಲೆಸುತ್ತು, ತಲೆನೋವು, ಕಣ್ಣುಮಂಜು, ದೇಹದ ಬ¯ ಕಡಿಮೆಯಾಗುತ್ತದೆ.
ಆದ್ದರಿಂದ ಆರೋಗ್ಯವಂತರಲ್ಲಿ ಅಲ್ಪ್ ಕಾಲದ ಉಪವಾಸ, ರೋಗಿಗಳಲ್ಲಿ ರೋಗದ ಲಕ್ಷಣಗಳು ಕಡಿಮೆಯಾಗುವವರೆಗೆ ಮಾತ್ರ ಉಪವಾಸ ಮಾಡಬೇಕು.

ಉಪವಾಸದ ಲಾಭಗಳು
ಉಪವಾಸದಿಂದ ಹಲವಾರು ಲಾಭಗಳಿವೆ.
1. ಉಪವಾಸ ಮಾಡುವುದರಿಂದ ಕಾಲಕಾಲಕ್ಕೆ ಜೀರ್ಣಾಂಗಗಳಿಗೆ ಅಗತ್ಯ ವಿಶ್ರಾಂತಿ ದೊರೆಯುತ್ತದೆ . ಇದರಿಂದ ಮತ್ತೆ ಜೀರ್ಣಾಂಗಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ನೆರವಾಗುತ್ತದೆ
2. ಅತಿಯಾದ ಆಹಾರವನ್ನು ಸದಾ ಕಾಲ ಮಾಡುವುದರಿಂದ, ಜೀರ್ಣಶಕ್ತಿ ಕುಗ್ಗಿ, ಅಜೀರ್ಣವಾಗುತ್ತದೆ ಮತ್ತು ಇದರಿಂದ ಆಹಾರ ಸರಿಯಾಗಿ ಪಚನಗೋಳ್ಳದೆ ನಿರಪಯುಕ್ತ ವಸ್ತುವಾದ ಟಾಕ್ಸಿನ್ಸ್ ಆಗಿ ಪರಿವರ್ತನೆಗೊಂಡು ದೇಹದ ಎಲ್ಲ ಭಾಗಗಳಲ್ಲಿ ಸೇರಿ ದೇಹದ ಕಾರ್ಯವೈಖರಿಯನ್ನು ವ್ಯತ್ಯಯಗೊಳಿಸುತ್ತದೆ ಮತ್ತು ಹಲವಾರು ರೋಗಗಳಿಗೆ ಕಾರಣವಾಗುತ್ತದೆ. ಉಪವಾಸ ಮಾಡುವುದರಿಂದ ಈ ಟಾಕ್ಸಿನ್ಸ್ ಗಳು ನಾಶವಾಗುತ್ತದೆ ಮತ್ತು ಜೀರ್ಣಶಕ್ತಿ ಹೆಚ್ಚುತ್ತದೆ. ದೇಹ ಲಘುವಾಗಿ ಮತ್ತೆ ಅಂಗಾಂಗಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.
3. ದೇಹದ ಎಲ್ಲ ಜೀವಕೋಶಗಳಿಗೆ ನವ ಶಕ್ತಿ, ಉತ್ಸಾಯವನ್ನು ತುಂಬುತ್ತದೆ
4. ದೇಹವನ್ನು ಶುದ್ದಗೊಳಿಸಿ, ಲಘುವಾಗಿಸುತ್ತದೆ
5. ನಿರುಪಯುಕ್ತ ವಸ್ತುಗಳು ದೇಹದಿಂದ ಹೊರಹಾಕಲ್ಪಡುವುದರಿಂದ ಹಳೆಯ, ದುಷ್ಟ ಜೀವಕೋಶಗಳು ಶುದ್ದಿಗೊಂಡು, ಜೀವಕೋಶಗಳು ಬೇಗ ನಾಶವಾಗುವುದನ್ನು ತಡೆಯುತ್ತದೆ ಮತ್ತು ಇದರಿಂದ ವಯಸ್ಸಾಗುವುದನ್ನು ಮುಂದೂಡುತ್ತದೆ.
6. ಕೊಬ್ಬಿನಾಂಶವನ್ನು ಕರಗಿಸಿ ಬೊಜ್ಜನ್ನು ನಿವಾರಿಸುತ್ತದೆ
7. ಕೊಬ್ಬಿನಾಂಶವನ್ನು ಕರಗಿಸುವುದರಿಂದ, ದೇಹವು ಇನ್ಸುಲಿನ್ ಉತ್ಪತ್ತಿ ಅಥ್ವಾ ಅದರ ಕಾರ್ಯವನ್ನು ತಡೆಯುವ ಎಲ್ಲ ಅಂಶವನ್ನು ನಾಶಮಾಡಿ ದೇಹವು ಸಕ್ಕರೆ ಅಂಶವನ್ನು ಸರಿಯಾಗಿ ಹೀರಿಕೊಳ್ಳಲು ನೆರವಾಗುತ್ತದೆ.

ಮಾನಸಿಕ ಹಾಗೂ ಆಧ್ಯಾತ್ಮ ಲಾಭಗಳು
1. ಉಪವಾಸ ನಮ್ಮೊಂದಿಗೆ ನಾವು ಇರುವ ಪ್ರಕ್ರಿಯೆ
2. ಅಂತರಂಗ, ಮನಸ್ಸು ಶುದ್ದಿಯಾಗುತ್ತದೆ.
3. ಉಪವಾಸದೊಂದಿಗೆ ಧ್ಯಾನಮಾಡುವುದರಿಂದ ನಮ್ಮ ಆಂತರ್ಯವನ್ನು ಅರಿಯಲಾಗುವುದು ಮತ್ತು ಆಧ್ಯಾತ್ಮ ಸಿದ್ದಿಗೆ ಉಪವಾಸ ನೆರವಾಗುತ್ತದೆ
4. ಮನಸ್ಸಿನ ಕ್ಲೇಷಗಳು, ದುಃಖ ದೂರವಾಗುತ್ತದೆ
5. ಧ್ಯಾನದೊಂದಿಗೆ ಉಪವಾಸ ಮಾಡುವುದರಿಂದ ಸಾತ್ವಿಕಾಂಶ ಹೆಚ್ಚಾಗುತ್ತದೆ, ಇದರಿಂದ ಮನಸ್ಸಿಗೆ ಶಾಂತಿ, ಪ್ರಸನ್ನತೆ ಹೆಚ್ಚಾಗುತ್ತದೆ ಮತ್ತು ಇದರಿಂದ ನಮ್ಮ ಪ್ರಾರ್ಥನೆ , ಸಂಕಲ್ಪ ಶಕ್ತಿಶಾಲಿಯಾಗುತ್ತದೆ.

– ಡಾ. ಮಹೇಶ್ ಶರ್ಮಾ ಎಂ.
ಆಯುರ್ವೇದ ತಜ್ನರು
ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ
ಅಂಚೇಪಾಳ್ಯ, ಮೈಸೂರು ರಸ್ತೆ, ಬೆಂಗಳೂರು
9964022654
email : drsharmamysr@gmail.com

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!