ಹೋಮಿಯೋಪತಿ ಅಪರಿಮಿತ ಸಾಧ್ಯತೆಗಳ ವೈದ್ಯ ವಿಜ್ಞಾನ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಹೋಮಿಯೋಪಥಿ ಒಂದು ವೇಗವಾಗಿ ಬೆಳೆಯುತ್ತಿರುವ ಮತ್ತು ವಿಶ್ವದಲ್ಲೇ ಎರಡನೇ ಅತೀ ಹೆಚ್ಚು ಉಪಯೋಗಿಸಲ್ಪಡುವ ವೈದ್ಯಪದ್ಧತಿ.
ಹಲವು ದಶಕಗಳ ಹಿಂದೆ ಹೋಮಿಯೋಪಥಿ ಎಂಬ ವೈದ್ಯ ಪದ್ಧತಿ ಅಸ್ತಿತ್ವದಲ್ಲಿರುವುದು ಅನೇಕರಿಗೆ ತಿಳಿದಿರಲಿಲ್ಲ, ನಾಡೋಜ ಗೌರವಕ್ಕೆ ಪಾತ್ರರಾದ ಮತ್ತು ಕರ್ನಾಟಕದ ಪ್ರಸಿದ್ಧ ಹೋಮಿಯೋಪತಿ ವೈದ್ಯ ಡಾ.ಬಿ.ಟಿ ರುದ್ರೇಶ್ ಅವರು ಅನೇಕಬಾರಿ ತಮ್ಮ ಹೋಮಿಯೋಪತಿ ವೃತ್ತಿಯ ಆರಂಭದ ದಿನಗಳ ಕಷ್ಟಗಳನ್ನು ಹಂಚಿಕೊಳ್ಳುವಾಗ ಹೀಗೆ ಹೇಳಿದ್ದುಂಟು, “ಆ ಕಾಲದಲ್ಲಿ ಹೋಮಿಯೋಪಥಿಯೆಂದರೆ ಬರೀ ಸಕ್ಕರೆ ಗುಳಿಗೆ ಎಂಬ ಅಭಿಪ್ರಾಯವಿತ್ತು, ಹೋಮಿಯೋಪಥಿ ವೈದ್ಯರಿಗೆ ಮದುವೆಗೆ ಹೆಣ್ಣು ಕೊಡುತ್ತಿರಲಿಲ್ಲ,
ಹೀಗೆ ಅನೇಕ ಟೀಕೆ ಟಿಪ್ಪಣಿಗಳಿಗೆ ಇದು ಒಳಗಾಗಿತ್ತು. ಹೋಮಿಯೋಪಥಿ ವೈದ್ಯ ಪದ್ಧತಿ ಅಂತಹ ದಯನೀಯ ಸ್ಥಿತಿಯಿಂದ ಮೇಲೆದ್ದು ಈಗ ಇಡೀ ವಿಶ್ವದಲ್ಲೇ ಎರಡನೇ ಜನಪ್ರಿಯ ವೈದ್ಯಪದ್ಧತಿಯೆಂದು ಸಾಬೀತಾಗಿದೆ. ಅಂತಹ ಕಷ್ಟದ ದಿನಗಳಲ್ಲೂ ಹೋಮಿಯೋಪಥಿ ವೃತ್ತಿಯನ್ನು ಛಲಬಿಡದ ವಿಕ್ರಮನಂತೆ ಆಶ್ರಯಿಸಿ, ಬೆಳೆಸಿ, ತಾವೂ ಬೆಳೆದು, ಅನೇಕ ರೋಗಿಗಳ ಬಾಳಲ್ಲಿ ಬೆಳಕನೀಡುವ ಕಾಯಕ ಮಾಡಿದ ಡಾ. ಬಿ.ಟಿ ರುದ್ರೇಶ್ ಅವರ ಸಾಧನೆಗಳು ನಮ್ಮ ಕಣ್ಣೆದುರಿಗಿದ್ದು, ನಮೆಗೆಲ್ಲಾ ಆದರ್ಶಪ್ರಾಯ.
ಹೋಮಿಯೋಪಥಿಯ ಈಗಿನ ಸ್ಥಿತಿಗತಿಗಳು
ಹೋಮಿಯೋಪಥಿ ವಿಶ್ವವ್ಯಾಪಿ
• ಜಗತ್ತಿನಾದ್ಯಂತ ಸುಮಾರು 200 ಮಿಲಿಯನ್ ಮೇಲ್ಪಟ್ಟು ಜನರು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಹೋಮಿಯೋಪಥಿ ಚಿಕಿತ್ಸೆಯನ್ನು ಆಶ್ರಯಿಸಿದ್ದಾರೆ. 80 ಕ್ಕಿಂತಾ ಹೆಚ್ಚು ದೇಶಗಳಲ್ಲಿ ಹೋಮಿಯೋಪಥಿ ಒಂದು ಚಿಕಿತ್ಸಾಪದ್ದತಿಯೆನಿಸಿದೆ. 42 ದೇಶಗಳಲ್ಲಿ ಇದು ಕಾನೂನಾತ್ಮಕವಾಗಿ ಮನ್ನಣೆಯನ್ನು ಪಡೆದಿದೆ,
• ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಹೋಮಿಯೋಪಥಿ ಒಂದು ವೇಗವಾಗಿ ಬೆಳೆಯುತ್ತಿರುವ ಮತ್ತು ವಿಶ್ವದಲ್ಲೇ ಎರಡನೇ ಅತೀ ಹೆಚ್ಚು ಉಪಯೋಗಿಸಲ್ಪಡುವ ವೈದ್ಯಪದ್ಧತಿ.
• ಫ್ರಾನ್ಸ್ ದೇಶದ 95% ಮಕ್ಕಳ ವೈದ್ಯರು ಮತ್ತಿತರ ವೈದ್ಯರು ಹೋಮಿಯೋ ಔಷಧಿಗಳನ್ನು ನೀಡುತ್ತಾರೆಂಬುದು ತಿಳಿದಿದೆ.
ಭಾರತದಲ್ಲಿ ಹೋಮಿಯೋಪಥಿ
• ನಮ್ಮ ದೇಶದಲ್ಲಿ ಹೋಮಿಯೋಪಥಿ ಎರಡನೇ ಹೆಚ್ಚು ಜನಪ್ರಿಯ ಚಿಕಿತ್ಸಾಪದ್ದತಿ.
• ಸುಮಾರು 100 ಮಿಲಿಯನ್ಗೂ ಹೆಚ್ಚು ಭಾರತೀಯರು ಹೋಮಿಯೋಪಥಿ ಚಿಕಿತ್ಸೆಯನ್ನು ತಮ್ಮ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಆಶ್ರಯಿಸಿದ್ದಾರೆ.
• ಎ ಸಿ ನೆಲ್ಸನ್ ಎಂಬ ಪ್ರಖ್ಯಾತ ಕಂಪನಿಯ ಸರ್ವೇ ಪ್ರಕಾರ 62% ಹೋಮಿಯೋಪಥಿ ಯನ್ನು ನೆಚ್ಚಿಕೊಂಡಿರುವ ಜನರು ಬೇರೆ ಚಿಕಿತ್ಸೆಗೆ ಹೋಗಿರುವುದಿಲ್ಲ ಮತ್ತು 82% ಹೋಮಿಯೋಪಥಿ ಚಿಕಿತ್ಸೆಯ ಬಗ್ಗೆ ಒಲವುಳ್ಳ ಜನರು ಯಾವತ್ತಿಗೂ ಬೇರೆಯ ಚಿಕಿತ್ಸೆಗೆ ಹೋಗುವುದಿಲ್ಲ ಎಂದು ತಿಳಿದುಬಂದಿದೆ.
• ನಮ್ಮ ದೇಶದಲ್ಲಿ 2,24,279 ಕ್ಕಿಂತಾ ಹೆಚ್ಚು ಹೋಮಿಯೋಪಥಿ ವೈದ್ಯರು ಸೇವೆಸಲ್ಲಿಸು ತ್ತಿದ್ದಾರೆ, 7856 ಸರ್ಕಾರಿ ಹೋಮಿಯೋಪಥಿ ಔಷಧಾಲಯಗಳಿವೆ, 207 ಸರ್ಕಾರಿ ಆಸ್ಪತ್ರೆಗಳಲ್ಲಿ ಹೋಮಿಯೋಪಥಿ ಚಿಕಿತ್ಸೆ ಲಭ್ಯವಿದೆ.
ಹೋಮಿಯೋಪಥಿ ಶಿಕ್ಷಣ ಅಥವಾ ವ್ಯಾಸಂಗ
• ಹೋಮಿಯೋಪಥಿ ವೈದ್ಯ ವಿಜ್ಞಾನದಲ್ಲಿ, ಇತರ ವೈದ್ಯಕೀಯ ಕೋರ್ಸುಗಳಂತೆಯೇ 5.5 ವರ್ಷದ ಪದವಿ ಶಿಕ್ಷಣ (BHMS) ಮತ್ತು 3 ವರ್ಷ ಅವಧಿಯ ಸ್ನಾತಕೋತ್ತರ (M.D Homeopathy) ಕೋರ್ಸುಗಳಿವೆ.
• ನಮ್ಮ ದೇಶದಲ್ಲಿ ಸುಮಾರು 200 ಪದವಿ ಕಾಲೇಜುಗಳು ಮತ್ತು 43 ಸ್ನಾತಕೋತ್ತರ (Pಉ) ಕಾಲೇಜುಗಳಿವೆ. ರಾಷ್ಟ್ರೀಯ ಹೋಮಿಯೋಪಥಿ ಸಂಸ್ಥೆ (National Institute of Homeopathy, NIH) ಎಂಬ ಅತ್ಯುನ್ನತ ಸರ್ಕಾರಿ ಇನ್ಸ್ಟಿಟ್ಯೂಟ್ ಕಲ್ಕತ್ತಾ ನಗರದಲ್ಲಿದೆ.
• ಸುಮಾರು 15 ಇನ್ಸೂರೆನ್ಸ್ ಕಂಪನಿಗಳು ಹೋಮಿಯೋಪಥಿ ಚಿಕಿತ್ಸೆಗೂ ಅವಕಾಶ ಮಾಡಿಕೊಟ್ಟಿವೆ.
ಹೋಮಿಯೋಪಥಿ ವೈದ್ಯ ವಿಜ್ಞಾನದ ಹುಟ್ಟು
• ಸಾಮ್ಯುಯೆಲ್ ಹಾನಿಮಾನ್ ಎಂಬ ಜರ್ಮನ್ ಅಲೋಪಥಿ ವೈದ್ಯ ಹೋಮಿಯೋಪಥಿ ವೈದ್ಯ ಪದ್ದತಿಯ ಜನಕನೆಂದು ಪರಿಗಣಿಸಲ್ಪಟ್ಟಿದ್ದರೂ, ಇವರಿಗೆ ಮುಂಚೆಯೇ ವೈದ್ಯಕೀಯದ ಪಿತಾಮಹನೆಂದು ಕರೆಯಲ್ಪಟ್ಟ ಹಿಪ್ಪೊಕ್ರೇಟ್ಸ್ ಅನೇಕ ಶತಮಾನಗಳ ಹಿಂದೆಯೇ ಹೋಮಿಯೋಪಥಿಯ ಬಗ್ಗೆ ಹೇಳಿದ್ದುಂಟು. ಅವರು ತಮ್ಮ ಶಿಷ್ಯಂದಿರಿಗೆ ರೋಗಗಳನ್ನು 2 ರೀತಿಯಲ್ಲಿ ಗುಣಪಡಿಸಬಹುದು, ಅದಕ್ಕನುಗುಣವಾಗಿ 2 ವಿಭಿನ್ನ ತತ್ವಗಳನ್ನು ಉಪದೇಶಿಸಿದ್ದರು ಅವುಗಳೆಂದರೆ ಸಾಮ್ಯತೆಯ ತತ್ವ (ಹೋಮಿಯೋಪಥಿಯ ತಳಹದಿ ) ಮತ್ತು ವಿರುದ್ಧಾತ್ಮಕ ತತ್ವ (ಅಲೋಪಥಿಯ ತಳಹದಿ ). ಹಿಪ್ಪೊಕ್ರೇಟ್ಸ್ ಅವರ ಶಿಷ್ಯಂದಿರು ಸುಲಭ ಮತ್ತು ಹೆಚ್ಚು ಲಾಭದಾಯಕವಾದ ವಿರುದ್ಧಾತ್ಮಕ ತತ್ವವನ್ನೇ ವೈದ್ಯ ವೃತ್ತಿಯಲ್ಲಿ ಅಳವಡಿಸಿಕೊಂಡು ಬಿಟ್ಟರು. ಸಾಮ್ಯತೆಯ ತತ್ವ ಕಾಲಗರ್ಭದಲ್ಲಿ ಮರೆಯಾಯಿತು. ಸ್ಯಾಮ್ಯುಯೆಲ್ ಹಾನಿಮಾನ್ ಅವರ ಸತತ ಪ್ರಯತ್ನ ಮತ್ತು ಸಂಶೋಧನೆಗಳ ಫಲವಾಗಿ ಸಾಮ್ಯತೆಯ ತತ್ವದ ತಳಹದಿಯುಳ್ಳ ಹೋಮಿಯೋಪಥಿ ವೈದ್ಯಪದ್ಧತಿ ಬೆಳಕಿಗೆ ಬಂದಿತು.
• ಹೋಮಿಯೋಪಥಿ ವೈದ್ಯಪದ್ಧತಿಯ ಮೂಲ ತತ್ವ “ಸಿಮಿಲಿಯಾ ಸಿಮಿಲಿಬಸ್ ಕ್ಯೂರೆಂಟರ್ “ ಅಥವಾ ಸಾಮ್ಯತೆಯ ತತ್ವದ ತಳಹದಿಯ ಮೇಲೆ ರೂಪಿಸಲ್ಪಟ್ಟಿದೆ. ಈ ತತ್ವವನ್ನೇ ಹೋಲುವ “ಉಷ್ಣಾಂ ಉಷ್ಣೇನ ಶಾಂತಿ “ ಎಂಬ ತತ್ವವು ನಮ್ಮ ದೇಶದ ಪುರಾತನ ಸಂಸ್ಕೃತ ಗ್ರಂಥಗಳಲ್ಲಿ ಉಲ್ಲೇಖವಾಗಿದೆ.
ಮಾನವನ ಆರೋಗ್ಯ ಸಮಸ್ಯೆಗಳಿಗೆ ಹೋಮಿಯೋಪತಿ ಚಿಕಿತ್ಸೆ
ಇತ್ತೀಚೆಗೆ ತಮ್ಮ ಆರೋಗ್ಯ ಸಮಸ್ಯೆಗಳಿಗೆ ಹೋಮಿಯೋಪಥಿಯನ್ನು ಮೊದಲ ಆಯ್ಕೆಯಾಗಿ ಪರಿಗಣಿಸುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ, ಈ ಕೆಳಗಿನ ಪ್ರಮುಖ ವಿಶೇಷತೆಗಳು, ಹೆಚ್ಚು ಜನರು ಹೋಮಿಯೋಪಥಿಯ ಬಗ್ಗೆ ಜನರ ಒಲವು ತೋರಲು ಕಾರಣಗಳಾಗಿವೆ.
1. ಕಹಿಯಾದ ಸಿರಪ್ಪು, ಗುಳಿಗೆಗಳಿಗೆ ಹೋಲಿಸಿದರೆ ಹೋಮಿಯೋ ಔಷಧಿ ಗಳು ಸಿಹಿಯಾಗಿರುತ್ತವೆ, ಹಾಗಂದಮಾತ್ರಕ್ಕೆ ಡಯಾಬೆಟಿಸ್ ಉಳ್ಳವರಲ್ಲಿ ಇವನ್ನು ಸೇವಿಸುವುದರಿಂದ ಸಕ್ಕರೆ ಪ್ರಮಾಣ ಹೆಚ್ಚಾಗುವುದಿಲ್ಲ.
2. ಹೋಮಿಯೋ ಔಷಧಿಗಳಲ್ಲಿ ಯಾವುದೇ ಕೆಮಿಕಲ್ ಅಥವಾ ಸ್ಟೀರಾಯ್ಡ್ ಇರುವುದಿಲ್ಲ. ಹಾಗಾಗಿ ಹೋಮಿಯೋ ಔಷಧಿಗಳಿಂದ ಅಡ್ಡ ಪರಿಣಾಮ (side-effects) ಉಂಟಾಗುವ ಸಾಧ್ಯತೆಯಿಲ್ಲ. ಹೋಮಿಯೋ ಔಷಧಗಳನ್ನು ಹುಟ್ಟಿದ ಮಕ್ಕಳಿಂದ ವಯಸ್ಕರ ತನಕ ಎಲ್ಲಾರೂ ಸೇವಿಸಬಹುದು.
3. ಸಮಗ್ರತೆ ತತ್ವದ (Holistic principle) ಅಡಿಯಲ್ಲಿ ಹೋಮಿಯೋಪಥಿ ವೈದ್ಯ ಪದ್ಧತಿ ಕಾರ್ಯನಿರ್ವಹಿಸುವುದರಿಂದ ಇಲ್ಲಿ “ಮನುಷ್ಯನಲ್ಲಿರುವ ರೋಗ” ಕ್ಕಿಂತಾ “ರೋಗದಲ್ಲಿರುವ ಮನುಷ್ಯ” ಹೆಚ್ಚು ಪ್ರಸ್ತುತ. ರೋಗಕ್ಕೊಳಗಾದ ವ್ಯಕ್ತಿಯ ವ್ಯಕ್ತಿತ್ವ, ರೋಗಕ್ಕೆ ಕಾರಣವಾದ ಅಂಶಗಳು, ಮಾನಸಿಕ , ಭಾವನಾತ್ಮಕ ಒತ್ತಡಗಳು ಮತ್ತು ಆ ವ್ಯಕ್ತಿಯಲ್ಲಿ ವ್ಯಕ್ತವಾಗಿರುವ ರೋಗದ ವಿಶೇಷತೆಗಳಿಗೆ (characteristic symptoms of disease) ಅನುಗುಣವಾಗಿಯೇ ಹೋಮಿಯೋಪಥಿ ಚಿಕಿತ್ಸೆಯನ್ನು ನೀಡಲಾಗುತ್ತದೆಯೇ ಹೊರತು ಬರೀ ರೋಗದ ಹೆಸರಮೇಲಲ್ಲ. ಇಲ್ಲಿ ಪ್ರಖ್ಯಾತ ವೈದ್ಯರೂ ಮತ್ತು ಆಧುನಿಕ ವೈದ್ಯ ಪದ್ದತಿಯೆನಿಸಿರುವ ಅಲೋಪಥಿಯ ಪಿತಾಮಹ (Father of Modern medicine) ಸರ್ ವಿಲಿಯಂ ಒಸ್ಲರ್ ಅವರು ವೈದ್ಯ ಮತ್ತು ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಮಾಡಿದ ಉಲ್ಲೇಖ ಹೀಗಿದೆ ” ಒಳ್ಳೆಯ ವೈದ್ಯ ರೋಗಕ್ಕೆ ಚಿಕಿತ್ಸೆ ನೀಡುತ್ತಾನೆ; ಅತ್ಯುತ್ತಮ ವೈದ್ಯ ರೋಗಕ್ಕೀಡಾದ ರೋಗಿಗೆ ಚಿಕಿತ್ಸೆ ಕೊಡುತ್ತಾನೆ” (“The good physician treats the disease; the great physician treats the patient who has the disease.” ) ಸಮಚಿತ್ತದಿಂದ ಯೋಚಿಸಿದರೆ ಈ ಮಾತು ಎಷ್ಟು ಅರ್ಥಗರ್ಭಿತ!
4. ಆಧುನಿಕ ಜಗತ್ತಿನ ಸವಲತ್ತುಗಳು ಹೆಚ್ಚಾದಂತೆ ನಮ್ಮ ಆರೋಗ್ಯವನ್ನು ಹಾಳುಮಾಡಲು ದಾಂಗುಡಿಯಿಟ್ಟ ಡೈಯಾಬಿಟೀಸ್, ಅಧಿಕರಕ್ತದೊತ್ತಡ, ಸ್ಥೂಲಕಾಯ (Obesity) ಥೈರಾಯ್ಡ್ ಸಮಸ್ಯೆ, ಅಂಡಕೋಶಗಳ ನೀರ್ಗಂಟುಗಳು (Ovarian cyst, PCOD), ಹೃದಯದ ತೊಂದರೆ ಹೀಗೆ ಇಂತಹ ಹಲವಾರು ಸಮಸ್ಯೆಗಳು ಹೆಚ್ಚಿನಂಶ ಸೈಕೋ ಸೊಮ್ಯಾಟಿಕ್ (ಮಾನಸಿಕ ಮತ್ತು ದೈಹಿಕ ಅಂಶಗಳ ಸಂಕೀರ್ಣ ಏರಿಳಿತಗಳಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು) ರೀತಿಯದಾಗಿರುತ್ತವೆ. ಹೋಮಿಯೋಪಥಿ ವೈದ್ಯಕೀಯದಲ್ಲಿ ಈ ಸಮಸ್ಯೆಗಳಿಗೆ ತಕ್ಕ ಪರಿಹಾರ ಸಾಧ್ಯ.
5. ಹೋಮಿಯೋಪಥಿಯಲ್ಲಿ ರೋಗದ ಸಂಪೂರ್ಣ ಮೂಲೋಚ್ಛಾಟನೆ ಸಾಧ್ಯವಿದೆ. ಅಂದರೆ ರೋಗವನ್ನು ಸಂಪೂರ್ಣವಾಗಿ ಗುಣಪಡಿಸುವುದಲ್ಲದೇ, ರೋಗವು ಮತ್ತೆ ಮರುಕಳಿಸದಂತೆ ತಡೆಯಬಹುದು. ಹೋಮಿಯೋ ಔಷಧಿಗಳು ತಾತ್ಕಾಲಿಕ ಪರಿಹಾರ ಕೊಡುವ ನೋವು ನಿವಾರಕ (Pain killers)ಅಥವಾ ಆಂಟಿ ಬಿಯೋಟಿಕ್ ಗಳಂತಲ್ಲ.
6. ಹೋಮಿಯೋ ಔಷಧಿಗಳು ಸುರಕ್ಷಿತ ಮತ್ತು ಆಡ್ಡ ಪರಿಣಾಮ ರಹಿತ. ಹೋಮಿಯೋಪಥಿ ಔಷಧಿಗಳು ಪ್ರಕೃತಿಯಲ್ಲಿ ಲಭ್ಯವಿರುವ ಗಿಡ ಮೂಲಿಕೆಗಳಿಂದ, ಖನಿಜಗಳಿಂದ ತಯಾರಿಸಲ್ಪಟ್ಟಿದು, ಯಾವುದೇ ಹಾನಿಕಾರಕ ರಾಸಾಯನಿಕ, ಸ್ಟೀರಾಯ್ಡ್ ಅಂಶಗಳನ್ನು ಹೊಂದಿರುವುದಿಲ್ಲ ಉದಾಹರಣೆಗೆ ನೇಟ್ರಮ್ ಮುರಿಯಾಟಿಕಮ್ (Natrum.Mur) ಎಂಬ ಹೋಮಿಯೋ ಔಷಧಿ ನಾವು ದಿನನಿತ್ಯ ಬಳಸುವ ಅಡಿಗೆ ಉಪ್ಪಿನಿಂದ ತಯಾರಿಸಲ್ಪಟ್ಟಿದೆ, ಇದು ಮೈಗ್ರೇನ್ ತಲೆನೋವು, ಕೂದಲುದುರುವಿಕೆ, ಚರ್ಮದ ತೊಂದರೆ ಮತ್ತಿತರ ತೊಂದರೆಗಳಿಗೆ ಹೆಚ್ಚು ಉಪಕಾರಿ. ಶೀತವನ್ನು ತೊಲಗಿಸುವ ಅಲಿಯಂ ಸಿಪಾ ಎಂಬ ಹೋಮಿಯೋ ಔಷದಿ ಈರುಳ್ಳಿ ಯಿಂದ, (Onion) ಗಾಯಗಳಿಗೆ ಸೂಕ್ತವಾದ ಕ್ಯಾಲೆಂಡುಲ ಎಂಬ ಔಷದಿ ಚೆಂಡು ಹೂವಿನಿಂದ, ಹೀಗೆ ಅನೇಕ ಹೋಮಿಯೋ ಔಷಧಿಗಳು ದೇವರ ಕೊಡುಗೆಗಳಾದ –ಪ್ರಕೃತಿಯ ಗಿಡ, ಮರ, ಬಳ್ಳಿ ಹೂವು, ಖನಿಜಗಳಿಂದ ತಯಾರಿಸಲ್ಪಟ್ಟಿವೆ.
7. ಮಕ್ಕಳಿಗೆ ಹೋಮಿಯೋಪಥಿ ಮತ್ತು ಹೋಮಿಯೋ ಔಷಧಿಗಳು ಬಲು ಇಷ್ಟ. ಸಿಹಿಯಾದ ಹೋಮಿಯೋ ಗುಳಿಗೆಗಳನ್ನು ಮಕ್ಕಳು ಯಾವುದೇ ತಕರಾರಿಲ್ಲದೇ ಸೇವಿಸುವರು, ಕಹಿಯಾದ ಸಿರಪ್ಪು, ಗುಳಿಗೆಗಳಿಗಿಂತ ಪರಿಣಾಮಕಾರಿಯಾದ, ಅಡ್ಡ ಪರಿಣಾಮವಿಲ್ಲದ ಸಿಹಿ ಹೋಮಿಯೋ ಔಷಧಿಗಳು ಮಕ್ಕಳ ಅಚ್ಚುಮೆಚ್ಚು. ಈಗ ತಾನೇ ಜನಿಸಿದ ಮಕ್ಕಳಿಗೂ ಅಡ್ಡ ಪರಿಣಾಮದ ಭಯವಿಲ್ಲದೆ ಹೋಮಿಯೋ ಔಷಧಿಗಳನ್ನು ನೀಡಬಹುದಾಗಿದೆ.
8. ಅಲರ್ಜಿಗಳಿಗೆ ರಾಮಬಾಣ ಹೋಮಿಯೋಪಥಿ. ಬೆಂಗಳೂರು ಅಲರ್ಜಿಗಳ ರಾಜಧಾನಿಯೆಂದು ಕುಖ್ಯಾತಿ ಪಡೆದಿದೆ, ಬೆಂಗಳೂರಿಗರು ಅನೇಕ ತರಹದ ಅಲರ್ಜಿ ಸಂಬಂಧಿತ ತೊಂದರೆಗಳಿಂದ ಬಳಲುತ್ತಿದ್ದಾರೆ. ಸಾಮಾನ್ಯವಾಗಿ ವೈದ್ಯರು ಕೊಡುವ ಸಿಟ್ರಝಿನ್ ಮತ್ತಿತರ ಅಲರ್ಜಿ ನಿರೋಧಕ ಔಷಧಿಗಳು ಅಲರ್ಜಿಯಿಂದ ತಾತ್ಕಾಲಿಕ ಶಮನ ಕೊಡುತ್ತವೆಯೇ ಹೊರತು ಅಲರ್ಜಿ ಸಂಪೂರ್ಣವಾಗಿ ತೊಲಗುವುದಿಲ್ಲ ಮತ್ತು ಅವುಗಳಿಂದಾಗುವ ಅಡ್ಡ ಪರಿಣಾಮಗಳು ಇಲ್ಲದಿಲ್ಲ. ಆಸ್ತಮಾ, ಅಲರ್ಜಿಕ್ ರೈನೈಟಿಸ್, ಚರ್ಮದ ಅಲರ್ಜಿ ಇನ್ನಿತರ ಅನೇಕ ಸಮಸ್ಯೆಗಳು ಬೆಂಗಳೂರಿಗನ್ನಷ್ಟೇ ಅಲ್ಲ ಇತರರನ್ನೂ ಬಾಧಿಸುತ್ತಿವೆ.
9. ಹೋಮಿಯೋಪಥಿಯಿಂದ ಸಾಧ್ಯ ಅನೇಕ ರೋಗಗಳ ಪರಿಹಾರ, ಆದರೂ ಜೀಬಿಗಲ್ಲ ಇದು ಭಾರ .ಹೋಮಿಯೋ ಚಿಕಿತ್ಸೆ ಬೇರೆಯ ವೈದ್ಯಪದ್ಧತಿಗಳಿಗೆ ಹೋಲಿಸಿದರೆ ಮಿತವ್ಯಯಕರ, ಆಮ್ ಆದ್ಮಿಯ ಜೇಬಿಗೆ ಹೊರೆಯಾಗುವುದಿಲ್ಲ, ಹೋಮಿಯೋ ವೈದ್ಯಪದ್ಧತಿಯಲ್ಲಿ ಕಾಲಿಗೊಬ್ಬ , ಕೈಗೊಬ್ಬ, ಪ್ರತಿಯೊಂದು ಅಂಗಗಕ್ಕೊಬ್ಬ ಸ್ಪೆಷಲಿಸ್ಟ್ ವೈದ್ಯರಿರುವುದಿಲ್ಲ. ರಾಷ್ಟ್ರ ಪಿತ ಮಹಾತ್ಮ ಗಾಂಧಿಯವರು ಹೋಮಿಯೋಪಥಿಯ ಬಗ್ಗೆ ಹೀಗೆ ಉಲ್ಲೇಖಿಸಿದ್ದಾರೆ:
“ಬೇರೆ ವೈದ್ಯ ಪದ್ದತಿಗಳಿಗೆ ಹೋಲಿಸಿದರೆ, ಹೋಮಿಯೋಪಥಿ ಹೆಚ್ಚು ಪ್ರತಿಶತ ರೋಗಿಗಳನ್ನು ಗುಣಮಾಡುತ್ತದೆ. ರೋಗಿಗಳಗೆ ಅಹಿಂಸಾತ್ಮಕ ತತ್ವದಡಿಯಲ್ಲಿ ಚಿಕಿತ್ಸೆ ನೀಡುವ ಮಿತವ್ಯಯ ಕಾರಿಯಾದ ಇತ್ತೀಚಿನ, ಪರಿಷ್ಕೃತ ಚಿಕಿತ್ಸಾ ಪದ್ಧತಿ ಇದಾಗಿದೆ.
ಡೆಂಗೀ, ಚಿಕುನ್ಗುನ್ಯಾ ಇತರೇ ಸಾಂಕ್ರಾಮಿಕ ರೋಗಗಳ ಚಿಕಿತ್ಸೆಗೆ ಹೋಮಿಯೋಪಥಿ
ಆರಂಭದಿಂದಲೂ ಹೋಮಿಯೋಪಥಿ ಸಾಂಕ್ರಾಮಿಕ ರೋಗಗಳ ತಡೆಗಟ್ಟಲು ಮತ್ತು ಚಿಕಿತ್ಸೆಗೆ ಫಲಕಾರಿಯಾಗಿದೆ. ಇತ್ತೀಚಿಗೆ ಹೆಚ್ಚು ಬಾಧಿಸುತ್ತಿರುವ ಡೆಂಗೀ, ಚಿಕೂನ್ಗುನ್ಯಾ, ಹಂದಿಜ್ವರ (H1N1)ಇತರೇ ಸಾಂಕ್ರಾಮಿಕ ರೋಗಗಳ ತಡೆಗಟ್ಟಲೆಂದೇ ರೂಪಿಸಲಾದ ಜೀನಸ್ ಎಪಿಡೆಮಿಕಸ್ ಎಂಬ ತತ್ವ ಸಿದ್ಧಾಂತದ ಮೇಲೆ ಆಯ್ಕೆಮಾಡಲಾದ ಹೋಮಿಯೋ ಔಷದಿ ಸಾಂಕ್ರಾಮಿಕ ರೋಗಗಳ ತಡೆಗಟ್ಟಲು (Preventive) ಮತ್ತು ಚಿಕಿತ್ಸೆಗೆ ಹೆಚ್ಚು ಪರಿಣಾಮಕಾರಿಯೆಂದು ಹಲವಾರು ಸಂದರ್ಭಗಳಲ್ಲಿ ತಿಳಿದುಬಂದಿದೆ.
ಕೆಲವು ವರ್ಷಗಳ ಹಿಂದೆ ಆಂಧ್ರಪ್ರದೇಶದಲ್ಲಿ ಸಾಂಕ್ರಾಮಿಕವಾಗಿ ತಲೆದೋರಿದ್ದ ಜಪಾನೀಸ್ ಎನ್ಸೆಫಾಲಿಟಿಸ್ ಎಂಬ ಮಿದುಳಿನ ಸೋಂಕು ಜನರಿಗೆ ಹರಡುವುದನ್ನು ತಡೆಗಟ್ಟಲು ಬೆಲ್ಲಡೋಣ, ಕಲ್ಕೇರಿಯ ಕಾರ್ಬ್ ಮತ್ತು ಟ್ಯುಬೆರ್ಕ್ಯುಲಿನಮ್ ಎಂಬ ಮೂರು ಹೋಮಿಯೋ ಔಷಧಿಗಳನ್ನು ಜನರಿಗೆ ಅಲ್ಲಿನ ಸರ್ಕಾರವೇ ಉಚಿತವಾಗಿ ಹಂಚಿದುದರ ಫಲವಾಗಿ ಜಪಾನೀಸ್ ಎನ್ಸೆಫಾಲಿಟಿಸ್ ಸೋಂಕು ಅನೇಕರಲ್ಲಿ ಬರುವುದನ್ನು ತಡೆಗಟ್ಟುವುದರಲ್ಲಿ ಯಶಸ್ವಿಯಾಯಿತು. ತಮಿಳುನಾಡಿನ ಮಧುರೈನ ರಾಜಾಜಿ ಸರ್ಕಾರೀ ಆಸ್ಪತ್ರೆಯಲ್ಲಿ ತಿರುಮಂಗಲಂ ಸರ್ಕಾರೀ ಹೋಮಿಯೋಪಥಿ ಕಾಲೇಜು ಮತ್ತು ತಮಿಳುನಾಡು ಸರ್ಕಾರದ ನಿಗಾವಣೆಯಲ್ಲಿ ಡೆಂಗೀ ತಡೆಗಟ್ಟಲು ಮುಂಜಾಗ್ರತೆಗಾಗಿ ಹೋಮಿಯೋ ಔಷಧಿಗಳನ್ನು ಜನರಿಗೆ ವಿತರಿಸಲಾಯ್ತು, ಇದರಿಂದ ಅನೇಕ ಜನರು ಡೆಂಗೀ ಜ್ವರಕ್ಕೀಡಾಗುವುದು ತಪ್ಪಿತು.
ಹೋಮಿಯೋಪಥಿ ಚಿಕಿತ್ಸಾ ಪದ್ದತಿಯ ಇತಿಮಿತಿಗಳು
ಜೀವಕ್ಕೆ ಅಪಾಯ ತಂದೊಡ್ಡುವ ಸಮಸ್ಯೆಗಳಾದ ತೀವ್ರ ರಕ್ತಸ್ರಾವ, ರಸ್ತೆ ಅಪಘಾತಗಳು, ತಲೆ ಅಥವಾ ಮಿದುಳಿಗೆ ಪೆಟ್ಟುಬಿದ್ದಾಗ, ಬೆಂಕಿಯಿಂದಾಗುವ ಅವಘಡಗಳು, ವಿದ್ಯುದಾಘಾತ, ವಿಷಪ್ರಾಶನ ಮತ್ತು ಹಾವು ಕಡಿತ, ತೀವ್ರ ಹೃದಯಾಘಾತ ಹೀಗೆ ಜೀವಕ್ಕೆ ಕುತ್ತು ತರುವ ಸಂದರ್ಭ ಅಥವಾ ಖಾಯಿಲೆಗಳಲ್ಲಿ ಹೋಮಿಯೋಪಥಿ ಚಿಕಿತ್ಸೆ ಪ್ರಯೋಜನಕ್ಕೆ ಬಾರದು. ಈ ಮೇಲಿನ ತೊಂದರೆಗಳಲ್ಲಿ ಶೀಘ್ರವಾಗಿ ರೋಗಿಯ ಜೀವವುಳಿಸುವ ಔಷಧಿಗಳು, ಆಕ್ಸಿಜೆನ್ ಪೂರೈಕೆ ಮತ್ತು ಶಸ್ತ್ರ ಚಿಕಿತ್ಸೆಯಂತಹ ತುರ್ತು ಕ್ರಮಗಳ ಅಗತ್ಯವಿರುತ್ತದೆ. ಆಸ್ಪತ್ರೆಯ ತೀವ್ರ ನಿಗಾ ಅಥವಾ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲು ಮಾಡಬೇಕಾಗುವ ಅವಶ್ಯಕತೆ ಇರುತ್ತದೆ ಸೇರಿಸಬೇಕಾಗುತ್ತದೆ.
ಹೋಮಿಯೋಪಥಿ ಔಷಧಿಗಳು ಇಂತಹ ತುರ್ತು ಪರಿಸ್ಥಿತಿಗಳಲ್ಲಿ ತಕ್ಷಣವೇ ಸಹಾಯಮಾಡಲು ಶಕ್ಯವಿಲ್ಲದಿದ್ದರೂ, ನಂತರದಲ್ಲಿ ಉಂಟಾಗುವ ಸಮಸ್ಯೆಗಳ ನಿವಾರಣೆಗೆ ಹೆಚ್ಚು ಸಹಾಯಕ. ಅಂದರೆ ರೋಗಿಯು ತುರ್ತು ಚಿಕಿತ್ಸೆ ಪಡೆದು, ಪ್ರಾಣಾಪಾಯದಿಂದ ಪಾರಾದಮೇಲೆ, ಅಥವಾ ಶಸ್ತ್ರಚಿಕಿತ್ಸೆಯ ನಂತರ ಉಂಟಾಗುವ ಸಮಸ್ಯೆಗಳು. ಉದಾಹರಣೆಗೆ– ಗಾಯಗಳು ಬೇಗ ಮಾಯಲು, ಮುರಿದ ಮೂಳೆ (Fractures) ಬೇಗನೆ ಕೂಡಿಕೊಳ್ಳಲು, ರಕ್ತಸ್ರಾವದಿಂದುಂಟಾದ ಬಲಹೀನತೆ ನಿವಾರಿಸಲು, ಅನಸ್ತೀಶಿಯಾದಿಂದುಟಾದ ಅಡ್ಡ ಪರಿಣಾಮಗಳ ನಿವಾರಣೆಗೆ, ಕ್ಯಾನ್ಸರ್ ರೋಗಿಗಳಲ್ಲಿ ಕಿಮೋಥೆರಪಿ ಮತ್ತು ರೇಡಿಯೋಥೆರಪಿಯಿಂದುಂಟಾಗುವ ಅಡ್ಡ ಪರಿಣಾಮಗಳ ನಿವಾರಣೆಗೆ ಹೀಗೆ ಅನೇಕ ಸಮಸ್ಯೆಗಳಲ್ಲಿ ಹೋಮಿಯೋಪಥಿ ಔಷಧಿಗಳು ಪ್ರಯೋಜನಕಾರಿ.
ಮುದ್ದಿನ ಪ್ರಾಣಿ ಪಕ್ಷಿಗಳಿಗೆ, ಜಾನುವಾರುಗಳಿಗೆ, ಮತ್ಸ್ಯ ಕೃಷಿಗೆ ಹೋಮಿಯೋಪಥಿ
ನಿಮ್ಮ ಮುದ್ದಿನ ನಾಯಿ, ಬೆಕ್ಕು, ಮೀನು, ದನ-ಕರುಗಳ ರೋಗ ರುಜಿನಗಳ ಚಿಕಿತ್ಸೆಗೆ ಹೋಮಿಯೋಪಥಿಯಲ್ಲಿ ಪರಿಣಾಮಕಾರಿ ಚಿಕಿತ್ಸೆಯುಂಟು. 22-7-2019 ರಲ್ಲಿ ಪ್ರಕಟವಾದ ವಿಜಯವಾಣಿ ಪತ್ರಿಕೆಯ ವಿತ್ತವಾಣಿ ಪುರವಣಿಯಲ್ಲಿ ಜಾನುವಾರುಗಳ ರೋಗಗಳನ್ನುಹೋಮಿಯೋ ಚಿಕಿತ್ಸೆಯಿಂದ ಗುಣಪಡಿಸುವ ಶ್ರೀ ಪ್ರಸನ್ನ ಹೆಗ್ಡೆಯವರ ವಿವರ ಮತ್ತು ಸಂದರ್ಶನ ನೀಡಲಾಗಿತ್ತು. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರಸನ್ನ ಹೆಗ್ಡೆಯವರು ಸಾವಿರಾರು ಜಾನುವಾರುಗಳಿಗೆ ಹೋಮಿಯೋಪಥಿ ಔಷಧಿಗಳನ್ನು ನೀಡಿ ಗುಣಪಡಿಸಿ ಖ್ಯಾತರಾಗಿದ್ದಾರೆ .
ಇತ್ತೀಚಿನ ಒಂದು ಸಂಶೋಧನಾ ವರದಿಯ ಪ್ರಕಾರ ಹೋಮಿಯೋಪಥಿ ಔಷಧಿಗಳು ಮತ್ಸ್ಯ ಕೃಷಿಯಲ್ಲೂ ಪ್ರಯೋಜನಕಾರಿ. ಮೀನುಗಳ ಅನೇಕ ರೋಗಳಿಗೆ, ವಂಶಾಭಿವೃದ್ದಿಗೆ ಹೋಮಿಯೋ ಔಷಧಿಗಳನ್ನು ಯಶಸ್ವಿಯಾಗಿ ಬಳಸಲಾಗಿದೆ. ಕೇರಳ ಮತ್ಸ್ಯ ಮತ್ತು ಸಾಗರ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಒರಿಸ್ಸಾ ರಾಜ್ಯದ ಭುವನೇಶ್ವರದಲ್ಲಿರುವ ಉತ್ಕಲ್ ಸೂಕ್ಷ್ಮ ಜೀವವಿಜ್ಞಾನ ವಿಶ್ವವಿದ್ಯಾಲಯದ ವಿಜ್ಞಾನಿಗಳು ಜಂಟಿಯಾಗಿ ನೆಡೆಸಿದ ಸಂಶೋದನೆಗಳು ಹೋಮಿಯೋಪಥಿ ಔಷಧಿಗಳು ಗೋಲ್ಡ್ ಫಿಶ್, ಪಕು, ಬ್ಲಾಕ್ ಮೊಲ್ಲಿ ಮತ್ತಿತರ ವಿವಿಧ ಜಾತಿಯ ಮೀನುಗಳ ಅರೋಗ್ಯ ಸಮಸ್ಯೆಗಳ ನಿವಾರಣೆಗೆ ಸಹಕಾರಿಯೆಂದು ಸಾಬೀತಾಗಿದೆ. ಹೆಚ್ಚಿನ ವಿವರಗಳಿಗೆ ಕೆಳಗಿನ ಲಿಂಕ್ ನೋಡಿ :
http://nexusacademicpublishers.com/uploads/files/JIMB_6_1_16-21.pdf
ಕೇರಳ ರಾಜ್ಯದ ಸರ್ಕಾರಿ ಪಶುವೈದ್ಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಪಶುವೈದ್ಯರಿಗೆ ಹೋಮಿಯೋಪಥಿ ಕೋರ್ಸನ್ನು ಶುರುಮಾಡಲಾಗಿದೆ. ಇದರಲ್ಲಿ ತರಬೇತಿ ಹೊಂದಿದ ಪಶುವೈದ್ಯರು ಹಸುಗಳಿಗೆ ಮತ್ತಿತರ ಪ್ರಾಣಿ ಪಕ್ಷಿಗಳ ಸಮಸ್ಯೆಗಳಿಗೆ ಹೋಮಿಯೋಪಥಿ ಚಿಕಿತ್ಸೆ ನೀಡಬಹುದಾಗಿದೆ.
ಕೃಷಿಯಲ್ಲಿ ಹೋಮಿಯೋಪಥಿ
ಅಗ್ರೋ ಹೋಮಿಯೋಪಥಿ ಎಂಬ ಹೊಸದೊಂದು ಕ್ಷೇತ್ರ ಇತ್ತೀಚಿಗೆ ಹೆಚ್ಚು ಮಹತ್ವವನ್ನು ಪಡೆದುಕೊಳ್ಳುತ್ತಿದೆ. ರೈತ ತಾನು ಬೆಳೆವ ಬೆಳೆಗಳ ಅಭಿವೃದ್ಧಿಗೆ ರಾಸಾಯನಿಕ ಗೊಬ್ಬರ, ಬೆಳೆಗಳ ರಕ್ಷಣೆಗೆ ಕೀಟನಾಶಕಗಳು ಹೀಗೆ ಅನೇಕ ಕೆಮಿಕಲ್ ಗಳನ್ನು ಬಳಕೆ ಮಾಡುತ್ತಾನೆ, ಈ ಕೆಮಿಕಲ್ ಯುಕ್ತ ಧಾನ್ಯ, ಹಣ್ಣು ತರಕಾರಿಗಳನ್ನು ನಾವು ಸೇವಿಸುವುದ್ದರಿಂದ ಆರೋಗ್ಯಕ್ಕೆ ಅಪಾಯವಿರುವುದು ಎಲ್ಲರಿಗೂ ತಿಳಿದ ವಿಷಯ . ಹೋಮಿಯೋಪಥಿಯ ನೆರವಿನಿಂದ ಈ ಸಮಸ್ಯೆಗಳನ್ನು ತಪ್ಪಿಸಬಹುದು. ರಸಗೊಬ್ಬರ, ಕೀಟನಾಶಕ ಇತರೇ ರಾಸಾಯನಿಕ ವಸ್ತುಗಳ ದುರ್ಬಳಕೆಯನ್ನೂ ತಡೆಗಟ್ಟಬಹುದು.
ಇತ್ತೀಚಿನ ಸಂಶೋಧನೆಯೊಂದು ಹೋಮಿಯೋ ಔಷಧಿಗಳಾದ ಸಿಲಿಕಾ 12, ಡಲ್ಕಮರ 30, ಮತ್ತು ಸಲ್ಫರ್ 6ಛಿ ಗಳನ್ನ ಬೆಳೆಗಳ ಮೇಲೆ ಪ್ರಯೋಗಿಸಿ ಇವು ಮೊಳಕೆಯೊಡೆಯುವಿಕೆ, ರೋಗ ಪ್ರತಿರೋಧಕತೆ, ಕೀಟ ನಿಯಂತ್ರಣ, ಹವಾಮಾನದ ವ್ಯತಿರಿಕ್ತತೆ ಹೀಗೆ ಇನ್ನಿತರ ಅನೇಕ ಬೆಳೆಗಳ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಹಕಾರಿ ಎಂಬುದನ್ನು ತೋರಿಸಿವೆ. ಹೆಚ್ಚಿನ ವಿವರಗಳಿಗೆ ಕೆಳಗಿನ ಲಿಂಕ್ ನೋಡಿ
http://orgprints.org/23727/1/23727_MM.pdf
ಆಧುನಿಕ ಜಗತ್ತಿನ ಆರೋಗ್ಯದ ಸವಾಲುಗಳು ಮತ್ತು ಪರಿಹಾರ
ಈ ಆಧುನಿಕ ಜಗತ್ತಿನಲ್ಲಿ ಮಾಹಿತಿ ತಂತ್ರಜ್ಞಾನ, ಆರೋಗ್ಯಕ್ಷೇತ್ರ ಹೀಗೆ ಇನ್ನೂ ಅನೇಕ ದಿಕ್ಕುಗಳಲ್ಲಿ ಕಂಡರಿಯದ ಬೆಳವಣಿಗೆಗಳಾಗುತ್ತಲೇ ಇವೆ. ಮಾನವನ ಆಯಸ್ಸು ನಮ್ಮ ಪೂರ್ವಜರಿಗೆ ಹೋಲಿಸಿದರೆ ಈಗ ಹೆಚ್ಚಾಗಿದೆ. ಆದರೆ ಜೀವನದ ಗುಣಮಟ್ಟ (Quality of life) ಕುಸಿದಿದೆ, ಮನುಷ್ಯ ಈಗ ಹೆಚ್ಚು ಒತ್ತಡಕ್ಕೊಳಗಾಗಿದ್ದಾನೆ, ಮನಸ್ಸಿನ ಶಾಂತಿ ನೆಮ್ಮದಿಗಳು ತುಂಬಾ ಕೆಳಮಟ್ಟಕ್ಕೆ ಇಳಿದಿವೆ. ಅನೇಕ ಮಕ್ಕಳ ಬಾಲ್ಯ, ಖಾಯಿಲೆಗಳು, ಒತ್ತಡಗಳ ದೆಸೆಯಿಂದ ಮುರುಟಿಹೋಗಿದೆ, ಡಯಾಬೆಟಿಸ್, ರಕ್ತದೊತ್ತಡ, ಕ್ಯಾನ್ಸರ್, ಮುಟ್ಟಿನ ಸಮಸ್ಯೆಗಳು, ಮಕ್ಕಳಾಗದಿರುವಿಕೆ, ಆರ್ಥ್ರೈಟಿಸ್, ಅಲ್ಲರ್ಜಿಗಳಂತ ದೀರ್ಘಕಾಲೀನ ಸಮಸ್ಯೆಗಳು ಒಂದೆಡೆಯಾದರೆ, ಪ್ರತಿವರ್ಷವೂ ಧಾಳಿಯಿಡುತ್ತಿರುವ ಡೆಂಗೆ, ಚಿಕೂನ್ಗುನ್ಯಾ ಸಮಸ್ಯೆಗಳು ಇನ್ನೊಂದೆಡೆ ಹೀಗೆ ಜನರ ಆರೋಗ್ಯ, ಹಣ, ನೆಮ್ಮದಿಗಳಿಗೆ ಕುತ್ತು ತರುವುದಲ್ಲದೆ ವೈದ್ಯಲೋಕಕ್ಕೆ ಒಂದು ದೊಡ್ಡ ಸವಾಲಾಗಿವೆ.
ಪ್ರಾಣಿ ಮತ್ತು ಸಸ್ಯ ಸಂಕುಲವೂ ಇದಕ್ಕೆ ಹೊರತಲ್ಲ. ಆರೋಗ್ಯಕ್ಷೇತ್ರದಲ್ಲಿನ ಬೆಳವಣಿಗೆಗಳು, ಆವಿಷ್ಕಾರಗಳು ಮನುಷ್ಯ ರೋಗಿಯಾದ ಮೇಲೆ ಬೇಕಾಗುವ ಹೊಸ ಹೊಸ ಔಷಧಿಗಳ, ಉಪಕರಣಗಳ, ಟೆಸ್ಟುಗಳ ಅವಿಷ್ಕಾರಕ್ಕೆ ಹೆಚ್ಚಿನಂಶ ಸೀಮಿತವಾಗಿವೆ, ಇದಕ್ಕಾಗಿ ಕೋಟಿಗಟ್ಟಲೆ ಹಣವನ್ನು ಅನೇಕ ಬಹುರಾಷ್ಟ್ರೀಯ ಕಂಪನಿಗಳು ಹೂಡುತ್ತವೆ (ಲಾಭದಾಯಕ), ಆದರೆ ಮನುಷ್ಯನನ್ನು ರೋಗಿಯಾಗದ ಹಾಗೆ ರೋಗವು ಬರದಂತೆ ತಡೆಯುವ ನಿಟ್ಟಿನಲ್ಲಿ ಹೆಚ್ಚು ಪ್ರಯತ್ನಗಳು ಆಗುತ್ತಿಲ್ಲ. ಸರ್ ವಿಲಿಯಂ ಒಸ್ಲರ್ ಅವರ ಒಂದು ಮಹತ್ವದ ಉಲ್ಲೇಖ ನೆನಪಿಗೆ ಬರುತ್ತದೆ “ಜನರಿಗೆ ಔಷಧಿ ತೆಗೆದುಕೊಳ್ಳದಂತೆ ತಿಳುವಳಿಕೆ ನೀಡುವುದೇ ವೈದ್ಯನ ಮೊದಲ ಕರ್ತವ್ಯ” (“One of the first duties of the physician is to educate the masses not to take medicine.”)
ಈ ನಿಟ್ಟಿನಲ್ಲಿ ಹೋಮಿಯೋಪಥಿ ಆರೋಗ್ಯ ಸಂರಕ್ಷಣೆಯಲ್ಲಿ ಒಂದು ದೊಡ್ಡ ಪಾತ್ರ ವಹಿಸಬಲ್ಲುದು. ಸವಾಲೊಡ್ಡುವ ಹಲವಾರು ಆರೋಗ್ಯ ಸಮಸ್ಯೆಗಳನ್ನು ಯಾವುದೇ ಒಂದು ವೈದ್ಯಪದ್ಧತಿಯಿಂದ ಸರಿಪಡಿಸಲು ಆಗುವುದಿಲ್ಲವೆಂದಲ್ಲಿ ಹೋಮಿಯೋಪಥಿ, ಅಲೋಪಥಿ, ಆಯುರ್ವೇದ, ಯೋಗ ಮತ್ತಿತರ ಸಶಕ್ತ ವೈದ್ಯ ಪದ್ದತಿಗಳ ಸಂಘಟಿತ ಚಿಕಿತ್ಸೆಯನ್ನು (Integrated treatment)ನೀಡಿ ಆ ಮೂಲಕ ಆಧುನಿಕ ಜಗತ್ತಿನ ಆರೋಗ್ಯ ಸಮಸ್ಯೆಗಳಿಗೆ ತಕ್ಕ ಪರಿಹಾರ ಕಂಡುಕೊಳ್ಳಬಹುದು, ಈ ಮೂಲಕ ಮಾನವ ಕಲ್ಯಾಣಕ್ಕೆ ಶ್ರಮಿಸಬಹುದಲ್ಲವೇ ! ?
Watch our video on Homoeopathy by Dr.Tejasvi. K.P:
ಹೋಮಿಯೋಪತಿ ಕುರಿತ ಕೆಲವು ವಿಶೇಷ ಮಾಹಿತಿಗಳು | Facts about Homeopathy
ಡಾ. ತೇಜಸ್ವಿ ಕೆ.ಪಿ.
ಸುರಭಿ ಹೋಮಿಯೋ ಕ್ಲಿನಿಕ್,
ಶಾಪ್ ನಂ.2, #823, 6ನೇ ಮುಖ್ಯರಸ್ತೆ
7ನೇ ಅಡ್ಡರಸ್ತೆ, 4ನೇ ಬ್ಲಾಕ್,
ಬೆಲ್ ಲೇಔಟ್, ವಿದ್ಯಾರಣ್ಯಪುರ, ಬೆಂಗಳೂರು-97
ಲ್ಯಾಂಡ್ಮಾರ್ಕ್ – ಹಳೆ ಅಂಚೆ ಕಛೇರಿ ಬಸ್ ನಿಲ್ದಾಣ, ಸಾಯಿಬಾಬ ದೇವಸ್ಥಾನ ರಸ್ತೆ
ಮೊ: 97311 33819