Health Vision

Health Vision

SUBSCRIBE

Magazine

Click Here

ಸ್ತ್ರೀ ಪುರುಷರ ಲೈಂಗಿಕ ಸಮಸ್ಯೆಗಳು:ಲೈಂಗಿಕ ಆರೋಗ್ಯಕ್ಕೆ ಹತ್ತು  ಸೂತ್ರಗಳು 

ಈ ಆಧುನಿಕ ಜಗತ್ತಿನಲ್ಲೂ ನಮ್ಮ ದೇಶದಲ್ಲಿ ಅನೇಕರು ಲೈಂಗಿಕತೆ ಮತ್ತು ಲೈಂಗಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ಹಿಂಜರಿಯುತ್ತಾರೆ.ಲೈಂಗಿಕ ಸಮಸ್ಯೆಗಳನ್ನು ಗೌಪ್ಯವಾಗಿಡಲು ಯತ್ನಿಸುತ್ತಾರೆ. ಸಮಸ್ಯೆಗಳು ಉಲ್ಬಣಗೊಂಡಾಗ ಮಾತ್ರ ವೈದ್ಯರನ್ನು ಸಂದರ್ಶಿಸುತ್ತಾರೆ. ಕೆಲವೊಮ್ಮೆ ಸಂಪೂರ್ಣ ಮಾಹಿತಿಯನ್ನೂ ನೀಡುವುದಿಲ್ಲ. ಈ ಮನೋಭಾವ ಪುರುಷರಿಗೆ ಹೋಲಿಸಿದರೆ ಸ್ತ್ರೀಯರಲ್ಲೇ ಜಾಸ್ತಿ ಕಂಡುಬರುತ್ತದೆ.  ಕೆಲವೊಮ್ಮೆ ಪುರುಷರು ತಮ್ಮ ನ್ಯೂನ್ಯತೆಗಳನ್ನು ಮರೆಮಾಚಿ ಸಂಗಾತಿಯನ್ನೇ ದೂಷಿಸುವುದುಂಟು. 

ಲೈಂಗಿಕತೆ, ಜನನೇಂದ್ರಿಯಗಳು ಮತ್ತು ಲೈಂಗಿಕ ಕ್ರಿಯೆಗಳ ಬಗ್ಗೆ ಅಪೂರ್ಣ ಮಾಹಿತಿ ಅಥವಾ ಸಮರ್ಪಕ ಜ್ಞಾನ ಇಲ್ಲದಿರುವುದು ಮತ್ತು ಕೆಲಬಗೆಯ ಅಪನಂಬಿಕೆಗಳಿಂದಲೂ ಲೈಂಗಿಕ ಸಮಸ್ಯೆಗಳು ಉಧ್ಭವಿಸುತ್ತವೆ.ಲೈಂಗಿಕತೆ ಮತ್ತು ಲೈಂಗಿಕ ಕ್ರಿಯೆ ನಮ್ಮ ಜೀವನದ ಒಂದು ಭಾಗ. ಲೈಂಗಿಕ ಕ್ರಿಯೆಯು ಬರೀ ಸಂತಾನ ಪ್ರಾಪ್ತಿಗೆ ಮಾತ್ರ ಸೀಮಿತವಲ್ಲ, ಇದರಿಂದ ಸ್ತ್ರೀ ಪುರುಷರ ನಡುವೆ ಅನ್ಯೋನ್ಯತೆ ಬೆಳೆಯುವುದಲ್ಲದೇ ಸುಖ ಸಂತೃಪ್ತಿಯನ್ನು ಒದಗಿಸುವ ಒಂದು ಮಾಧ್ಯಮವೂ ಆಗಿದೆ.

ಅಮೇರಿಕ ಲೈಂಗಿಕ ಆರೋಗ್ಯ ಸಂಸ್ಥೆಯ ಪ್ರಕಾರ ಲೈಂಗಿಕ ಆರೋಗ್ಯದ ಬಗ್ಗೆ ಕಾಳಜಿವಹಿಸುವುದೆಂದರೆ ಲೈಂಗಿಕ ಸಂಪರ್ಕದಿಂದ ಬರುವ ರೋಗಗಳನ್ನುಬರದಂತೆ ತಡೆಯುವುದು  ಅಥವಾ ಗರ್ಭಧರಿಸುವುದನ್ನು ತಪ್ಪಿಸುವುದು ಮಾತ್ರವಲ್ಲ, ಇದು ಜೀವನದಲ್ಲಿ ಲೈಂಗಿಕತೆ ಒಂದು ಮಹತ್ವದ ಪಾತ್ರವಹಿಸುತ್ತದೆಂಬುದನ್ನು ಅರಿಯುವುದಾಗಿದೆ.”ಲೈಂಗಿಕ ಕ್ರಿಯೆಯಿಂದ ವ್ಯಕ್ತಿಯ ಶಾರೀರಿಕ, ಮಾನಸಿಕ, ಭಾವನಾತ್ಮಕ ಅಭಿವೃದ್ಧಿಯಾಗುತ್ತದೆ, ಸುಖನಿದ್ರೆಗೆ, ಹೃದಯದ ಆರೋಗ್ಯಕ್ಕೆ, ದೇಹದ ರೋಗನಿರೋಧಕ ಶಕ್ತಿ (Immunity) ಬಲಗೊಳ್ಳಲು ಹೀಗೆ ಇನ್ನೂ ಅನೇಕ ಧನಾತ್ಮಕ ಪರಿಣಾಮಗಳು ಆಗುತ್ತವೆ.

ಪುರುಷರ ಲೈಂಗಿಕ ಸಮಸ್ಯೆಗಳು 

 1. ನಿಮಿರು ದೌರ್ಬಲ್ಯ (Erectile dysfunction):ಈ ಸಮಸ್ಯೆಯಲ್ಲಿ ಪುರುಷನು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಾಗ ಸ್ಥಿರ ಮತ್ತು ಸಮರ್ಪಕ ಲಿಂಗದ     ನಿಮಿರುವಿಕೆಯನ್ನು ಹೊಂದಲಾಗುವುದಿಲ್ಲ, ಇದರಿಂದ ಸಂಭೋಗದಲ್ಲಿ ಪರಿಪೂರ್ಣತೆ ಅಥವಾ ಸಂತೃಪ್ತಿ ಸಿಗುವುದಿಲ್ಲ.
 1. ಶೀಘ್ರ ಸ್ಖಲನ, ತಡವಾದ ಸ್ಖಲನ ಮತ್ತು ಹಿಮ್ಮುಖ ಸ್ಖಲನ:ಸಂಭೋಗದ ಮುಂಚೆಯೇ ಅಥವಾ ಶುರುವಿನಲ್ಲೇ ಸಂಭವಿಸುವ ಅಕಾಲಿಕ ವೀರ್ಯ ಸ್ಖಲನವನ್ನು ಶೀಘ್ರಸ್ಕಲನ (Premature ejaculation) ಎನ್ನುವರು.ಹಿಮ್ಮುಖ ಸ್ಖಲನವು (retrograde ejaculation) ಕೆಲವು ಮಧುಮೇಹಿಗಳಲ್ಲಿ ಮತ್ತು ಕೆಲವು ಔಷಧಿಗಳ ದುಷ್ಪರಿಣಾಮಗಳಿಂದ ಉಂಟಾಗಬಹುದು.
 1. ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಇಲ್ಲದಿರುವುದು:ಲೈಂಗಿಕ ಕ್ರಿಯೆಯಲ್ಲಿ ಅನಾಸಕ್ತಿಯುಂಟಾಗಲು ಟೆಸ್ಟೋಸ್ಟಿರೋನ್ ಹಾರ್ಮೋನಿನ ಕಡಿಮೆ ಪ್ರಮಾಣ ಕಾರಣ.  ಟೆಸ್ಟೋಸ್ಟಿರೋನ್ ಹಾರ್ಮೋನು ಲೈಂಗಿಕ ಆಸಕ್ತಿ, ವೀರ್ಯ ಉತ್ಪಾದನೆ, ದೇಹದ ಸ್ನಾಯುಗಳು, ಕೂದಲು ಮತ್ತು ಮೂಳೆಗಳ ಬೆಳವಣಿಗೆಗೆ ಮತ್ತು ಪೋಷಣೆಗೆ ಅತ್ಯಗತ್ಯ.

ಪುರುಷರ ಸಮಸ್ಯೆಗಳಿಗೆ ಕಾರಣಗಳು 

 1. ಶಾರೀರಿಕ ಕಾರಣಗಳು
 • ಪುರುಷರಲ್ಲಿ ಟೆಸ್ಟೋಸ್ಟಿರೋನ್ ಹಾರ್ಮೋನ್ ಪ್ರಮಾಣ ಕಡಿಮೆಯಾದರೆ
 • ಅಧಿಕ ರಕ್ತದೊತ್ತಡ ಮತ್ತು ರಕ್ತನಾಳಗಳ ದಪ್ಪವಾಗುವಿಕೆ
 • ಮಧುಮೇಹದಿಂದುಂಟಾಗುವ ನರಗಳದೌರ್ಬಲ್ಯ
 • ಮಾನಸಿಕ ಖಿನ್ನತೆ (Depression) ಮತ್ತು ಅಧಿಕ ರಕ್ತದೊತ್ತಡಕ್ಕೆ ನೀಡಲಾಗುವ ಕೆಲವು ಔಷಧಿಗಳ ಅಡ್ಡಪರಿಣಾಮಗಳಿಂದ (Drug side effects)
 • ಮಿದುಳುಬಳ್ಳಿ ಮತ್ತು ಲಿಂಗಕ್ಕೆ ಏಟಾಗಿದ್ದರೆ
 • ಮಿದುಳುಬಳ್ಳಿ, ಪ್ರಾಸ್ಟೇಟ್ ಗ್ರಂಥಿ ಮತ್ತು ಮೂತ್ರಕೋಶಗಳ ಶಸ್ತ್ರಚಿಕಿತ್ಸೆ
 • ಸಾಕಾಗದ ನಿದ್ರೆ ಮತ್ತು ವ್ಯಾಯಾಮ
 • ಕೆಲವೊಂದು ವ್ಯಾಧಿಗಳು
 • ಧೂಮಪಾನ ಮತ್ತು ಆಲ್ಕೋಹಾಲ್ ಮಿತಿಮೀರಿದ ಸೇವನೆ
 • ಸ್ಥೂಲಕಾಯ (Obesity)  ಮತ್ತು ಹೆಚ್ಚು ಕೊಲೆಸ್ಟ್ರಾಲ್
 1. ಮಾನಸಿಕ ಅಥವಾ ಸೈಕೊಲಾಜಿಕಲ್
 • ಲೈಂಗಿಕ ಸಾಮರ್ಥ್ಯದ ಬಗ್ಗೆ ಸಂದೇಹ, ಕೆಲ ತಪ್ಪು ಕಲ್ಪನೆಗಳು
 • ಪತಿ ಪತ್ನಿ ಅಥವಾ ಸ್ತ್ರೀ ಪುರುಷರ ಸಂಬಂಧಗಳಲ್ಲಿ ಹೆಚ್ಚಾದವಿರಸ, ಭಿನ್ನಾಭಿಪ್ರಾಯಗಳು
 • ಮಾನಸಿಕ ಖಿನ್ನತೆ, ಅಪರಾಧಪ್ರಜ್ಞೆ (Guilt feelings)
 • ಈ ಹಿಂದೆ ಸಂಭವಿಸಿದ ಲೈಂಗಿಕ ಅಥವಾ ಮಾನಸಿಕ ಆಘಾತಗಳು
 • ಉದ್ಯೋಗ ಸಂಬಂಧಿ ಆತಂಕ, ಒತ್ತಡಗಳು ಇತ್ಯಾದಿ

ಸ್ತ್ರೀಯರ ಲೈಂಗಿಕ ಸಮಸ್ಯೆಗಳು 

ಸ್ತ್ರೀಯರಲ್ಲಿ ಲೈಂಗಿಕ ಸ್ಪಂದನೆ, ಆಸಕ್ತಿ, ವೇದನೆ ಇತ್ಯಾದಿಗಳಿಗೆ ಸಂಬಂಧಿಸಿದ ನಿರಂತರವಾಗಿ ಬರುವ ಸಮಸ್ಯೆಗಳಿಂದ ಸಂಬಂಧಗಳಲ್ಲಿ ಒಡಕು ಮೂಡಬಹುದು.ಕೆಲವು ಬಾರಿ ಅನೇಕ ಅನುಮಾನ, ಮಾನಸಿಕ ಒತ್ತಡಗಳಿಗೆ ಎಡೆಮಾಡಿಕೊಡುತ್ತದೆ.

ಸ್ತ್ರೀಯರ ಲೈಂಗಿಕ ಸಮಸ್ಯೆಗಳು ಹೀಗಿವೆ 

 1. ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಇಲ್ಲದಿರುವುದು
 2. ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿಯಿದ್ದರೂ ಸಕ್ರಿಯತೆ ಇಲ್ಲದಿರುವುದು
 3. ಯೋನಿಯಲ್ಲಿ ವಿಪರೀತ ನೋವು (dyspareunia)

ಸ್ತ್ರೀಯರ  ಸಮಸ್ಯೆಗಳಿಗೆ ಕಾರಣಗಳು

 1. ಶಾರೀರಿಕ ಕಾರಣಗಳು
 • ಕ್ಯಾನ್ಸರ್, ಡಯಾಬಿಟಿಸ್, ಹೃದಯ ಖಾಯಿಲೆ
 • ನರರೋಗಗಳು
 • ಥೈರಾಯ್ಡ್ ಮತ್ತು ಇತರೇ ಹಾರ್ಮೋನುಗಳ ವ್ಯತ್ಯಯಗಳು
 • ಮೆನೋಪಾಸ್ ನಂತರ ಸ್ತ್ರೀಯರಲ್ಲಿ ಈಸ್ಟ್ರೋಜೆನ್ ಹಾರ್ಮೋನಿನ ಪ್ರಮಾಣ ಇಳಿಮುಖವಾಗುವುದರಿಂದ ಸ್ತ್ರೀಯರಲ್ಲಿ ಲೈಂಗಿಕ ಸ್ಪಂದನೆ ಕುಂದುತ್ತದೆ. ಇದರಿಂದ ಸ್ತ್ರೀಯರ ಯೋನಿಯಲ್ಲುಂಟಾಗುವ ಕೆಲವು ಮಾರ್ಪಾಡುಗಳಾಗಿ, ಸ್ತ್ರೀಯರು ಸಂಭೋಗದಲ್ಲಿ ನೋವು ಅನುಭವಿಸುವಂತಾಗುತ್ತದೆ (dyspareunia).
 • ಕಿಡ್ನಿ ವೈಫಲ್ಯತೆ ಮತ್ತು ಯಕೃತ್ತಿನ (Liver)  ರೋಗಗಳು
 • ಆಲ್ಕೋಹಾಲ್, ಧೂಮ್ರಪಾನ ಮತ್ತು ಡ್ರಗ್ಸ್ ಸೇವನೆ
 • ಮಾನಸಿಕ ಖಿನ್ನತೆ (Depression) ಮತ್ತು ಅಧಿಕ ರಕ್ತದೊತ್ತಡಕ್ಕೆ ನೀಡಲಾಗುವ ಕೆಲವು ಔಷಧಿಗಳ ಅಡ್ಡಪರಿಣಾಮಗಳಿಂದ (Drug side effects)
 1. ಮಾನಸಿಕ ಕಾರಣಗಳು
 • ಕೆಲತಪ್ಪು ಕಲ್ಪನೆಗಳು, ಸಾಂಸ್ಕೃತಿಕ ಮತ್ತು ಧಾರ್ಮಿಕ ನಂಬಿಕೆಗಳು
 • ಪತಿಪತ್ನಿ ಅಥವಾ ಸ್ತ್ರೀ ಪುರುಷರ ಸಂಬಂಧಗಳಲ್ಲಿ ಹೆಚ್ಚಾದ ವಿರಸ, ಭಿನ್ನಾಭಿಪ್ರಾಯಗಳು
 • ಈಹಿಂದೆ ಸಂಭವಿಸಿದ ಲೈಂಗಿಕ ಅಥವಾ ಮಾನಸಿಕ ಆಘಾತಗಳು (sexual abuse)
 • ಉದ್ಯೋಗಸಂಬಂಧಿ ಆತಂಕ, ಒತ್ತಡಗಳು ಇತ್ಯಾದಿ
 • ಪತಿಪತ್ನಿ ಅಥವಾ ಸ್ತ್ರೀ ಪುರುಷರ ಸಂಬಂಧಗಳಲ್ಲಿ ಹೆಚ್ಚಾದ ವಿರಸ, ಭಿನ್ನಾಭಿಪ್ರಾಯಗಳು
 • ಗರ್ಭಧರಿಸುವ ಆತಂಕ ಮತ್ತು ಮಗುವನ್ನು ನಿಭಾಯಿಸುವ ಜವಾಬ್ದಾರಿಯ ಬಗ್ಗೆ ಅಸ್ಪಷ್ಟತೆ

ಲೈಂಗಿಕ ಆರೋಗ್ಯಕ್ಕೆ ಹತ್ತು  ಸೂತ್ರಗಳು 

 1. ಕ್ರಮವಾದ ಜೀವನ ಶೈಲಿ ರೂಢಿಸಿಕೊಳ್ಳಬೇಕು, ಮಿತವಾದ ಮತ್ತು ಆರೋಗ್ಯಕ್ಕೆ ಹಿತವಾದ ಆಹಾರ ಸೇವನೆ
 2. ಪ್ರತಿನಿತ್ಯ ವ್ಯಾಯಾಮ
 3. ಕುಡಿತ ಮತ್ತು ಧೂಮಪಾನ ತ್ಯಜಿಸುವುದು
 4. ದೇಹದ ತೂಕದ ನಿರ್ವಹಣೆ, ಬೊಜ್ಜು ಕರಗಿಸುವುದು
 5. ಇತರೆ ಖಾಯಿಲೆಗಳಿಗೆ ಸೇವಿಸುವ ಔಷಧಿಗಳ ಅಡ್ಡಪರಿಣಾಮದಿಂದಲೈಂಗಿಕ ಸಮಸ್ಯೆಗಳು ಉಂಟಾಗುತ್ತಿದ್ದರೆ, ಸಂಬಂಧಪಟ್ಟ ವೈದ್ಯರ ಸಲಹೆಯ ಮೇರೆಗೆ ಅವನ್ನು ಬದಲಿಸುವುದು
 6. ಸಂಬಂಧಗಳ ಸುಧಾರಣೆ, ಅನ್ಯೋನ್ಯತೆ.
 7. ಮುಖ್ಯವಾಗಿ ಸಮಸ್ಯೆಗಳು ಮತ್ತು ಬೇಕು ಭೇಡಗಳ ಬಗ್ಗೆ ನಡುವೆ  ಇಬ್ಬರ ನಡುವೆ ಮುಕ್ತವಾದ ಚರ್ಚೆ.
 8. ಶಾಲಾ ಕಾಲೇಜುಗಳಲ್ಲಿ ಲೈಂಗಿಕ ಶಿಕ್ಷಣ ನೀಡುವುದರಿಂದ ಕೆಲ ತಪ್ಪು ಕಲ್ಪನೆ ಆತಂಕಗಳನ್ನು ದೂರಗೊಳಿಸಬಹುದು
 9. ದೇಹ ಮತ್ತು ಜನನಾಂಗಗಳ ಸ್ವಚ್ಛತೆಗೆ ಆದ್ಯತೆ
 10. ಡಯಾಬೆಟಿಸ್, ಅಧಿಕ ರಕ್ತದೊತ್ತಡಗಳ ಸಮರ್ಪಕ ಚಿಕಿತ್ಸೆ ಮತ್ತು ನಿರ್ವಹಣೆ ಇತ್ಯಾದಿ

ಲೈಂಗಿಕ ಸಮಸ್ಯೆಗಳಿಗೆ ಹೋಮಿಯೋಪತಿ ಚಿಕಿತ್ಸೆ 

ಹೋಮಿಯೋಪಥಿ ಚಿಕಿತ್ಸೆ ಒಂದು ಹೋಲಿಸ್ಟಿಕ್ ಚಿಕಿತ್ಸೆಯಾಗಿದ್ದು, ಲೈಂಗಿಕ ಸಮಸ್ಯೆಗಳ  ಕಾರಣಗಳನ್ನು ವಿಶ್ಲೇಷಿಸಿ, ವ್ಯಕ್ತಿಯ ಕೆಲ ಗುಣಲಕ್ಷಣಗಳು ಮತ್ತು ಲೈಂಗಿಕ ಸಮಸ್ಯೆಗಳನ್ನು ಒಟ್ಟಾಗಿ ವಿಶ್ಲೇಷಿಸಿ ಔಷಧಿ ನೀಡಲಾಗುವುದು.ಹೋಮಿಯೋಪಥಿ ಚಿಕಿತ್ಸೆಯಲ್ಲಿ ಯಾವುದೇ ಕೃತಕ ಹಾರ್ಮೋನ್ ಅಥವಾ ಸ್ಟೆರಾಯ್ಡ್ ಔಷಧಿಗಳನ್ನು ನೀಡುವುದಿಲ್ಲ ಬದಲಾಗಿ ನೈಸರ್ಗಿಕ ವಸ್ತುಗಳಿಂದ ತಯಾರಿಸಲಾದ ಔಷಧಿಗಳನ್ನು ಕೊಡಲಾಗುತ್ತದೆ, ಹಾಗಾಗಿ ಯಾವ ಅಡ್ಡ ಪರಿಣಾಮಗಳೂ ಇರುವುದಿಲ್ಲ.ಹೋಮಿಯೋಪಥಿಯಲ್ಲಿ ಸ್ತ್ರೀ ಪುರುಷರ  ಲೈಂಗಿಕ ಸಮಸ್ಯೆಗಳು ಮಾತ್ರವಲ್ಲದೆ, ಲೈಂಗಿಕ ರೋಗಗಳು, ಮಕ್ಕಳಾಗದಿರುವಿಕೆ (Infertility) ಇತ್ಯಾದಿ ತೊಂದರೆಗಳಿಗೂ  ಸೂಕ್ತ ಪರಿಹಾರವಿದೆ.

ಡಾ. ತೇಜಸ್ವಿ ಕೆ.ಪಿ.
ಸಹ ಪ್ರಾಧ್ಯಾಪಕರು, ಭಗವಾನ್ ಬುದ್ಧ ಹೋಮಿಯೋಪತಿ ವೈದ್ಯಕೀಯ ಕಾಲೇಜು
ಸುರಭಿ ಹೋಮಿಯೋ ಕ್ಲಿನಿಕ್,ವಿದ್ಯಾರಣ್ಯಪುರ ಮುಖ್ಯರಸ್ತೆ, ಬೆಂಗಳೂರು-97 ಮೊ: 9731133819

Back To Top