ಹೆಪಟೈಟಿಸ್ ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಕಾರಣಕ್ಕೆ ಕೋವಿಡ್ ರೋಗವು ಸುಲಭವಾಗಿ ಹರಡುತ್ತದೆ ಮತ್ತು ವಿವಿಧ ತೊಡಕುಗಳಿಗೆ ಕಾರಣವಾಗಬಹುದು. ಹಾಗಾಗಿ ಕೋವಿಡ್ -19 ರೋಗದ ಜೊತೆಗೆ, ರೋಗಿಗಳ ಮತ್ತು ಜನಸಾಮಾನ್ಯರ ಆರೋಗ್ಯದ ಹಿತದೃಷ್ಠಿಯಿಂದ ಹೆಪಟೈಟಿಸನ್ನು ನಿರ್ಲಕ್ಷ್ಯ ಮಾಡದೆ ಅತೀವ ಕಾಳಜಿ ವಹಿಸುವುದು ಉತ್ತಮ.
‘ಹೆಪಟೈಟಿಸ್‘ ಎಂಬುದು, ನಾವು ಸೇವಿಸುವ ಆಹಾರ ಪಚನ ಕ್ರಿಯೆಯಲ್ಲಿ ಸಹಾಯಕವಾಗುವ ಅಂಗಗಳಲ್ಲಿ ಮುಖ್ಯವಾದ ಅಂಗ ಯಕೃತ್ (Liver) ಗೆ ಕನ್ನ ಹಾಕುವ ಕಾಯಿಲೆಗಳಲ್ಲಿ ಹೆಚ್ಚು ಮಾರಕವಾದ ಮತ್ತು ಯಕೃತ್ತಿನ ಚಟುವಟಿಕೆ ಮೇಲೆ ಪ್ರಭಾವ ಬೀರಿ ಹಲವಾರು ಅರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಒಂದು ಸಾಂಕ್ರಾಮಿಕ ರೋಗ. ಸಾಮಾನ್ಯವಾಗಿ ನಮ್ಮ ಆಡುವ ಭಾಷೆಯಲ್ಲಿ ಇದನ್ನು ‘ಯಕೃತ್ತಿನ ಉರಿಯೂತ’ ಅಥವಾ ‘ಸಾಂಕ್ರಾಮಿಕ ಕಾಮಣಿ’ ಎಂದು ಕರೆಯಲಾಗುತ್ತದೆ. ಪಚನಶಕ್ತಿ ಬಹಳಷ್ಟು ಕಡಿಮೆ ಆಗುವುದರಿಂದ ರೋಗಿಯ ದೇಹದ ಬಲ ಮತ್ತು ಕಾಂತಿ ಕಡಿಮೆಯಾಗುತ್ತದೆ.
ಈ ಕಾಯಿಲೆ ಬರುವಿಕೆಯಲ್ಲಿ ಮುಖ್ಯ ಕಾರಣವೆಂದರೆ ಹೆಪಟೊಟ್ರೊಪಿಕ್ ವೈರಸಿನ ಐದು ತಳಿಗಳು, ಅವುಗಳೆಂದರೆ ಹೆಪಟೈಟಿಸ್ ವೈರಸ್, ಎ, ಬಿ, ಸಿ, ಡಿ ಮತ್ತು ಇ. ಇವುಗಳಿಂದ ಉತ್ಪತ್ತಿಯಾಗುವ ಹೆಪಟೈಟಿಸ್ ಕಾಯಿಲೆಯು ಪ್ರಾಯೋಗಿಕವಾಗಿ ವಿವಿಧ ಆಯಾಮಗಳಾದ ರೋಗ ಹರಡುವಿಕೆ, ರೋಗ ತೀವ್ರತೆ, ಭೌಗೋಳಿಕ ವಿತರಣೆ ಮತ್ತು ರೋಗ ತಡೆಗಟ್ಟುವ ವಿಧಾನಗಳಲ್ಲಿ ಭಿನ್ನವಾಗಿವೆ. ಹೆಪಟೈಟಿಸ್ ಬಿ ವೈರಸ್ (HBV) ವನ್ನು ಕಂಡುಹಿಡಿದ ಮತ್ತು ವೈರಸ್‌ಗೆ ರೋಗನಿರ್ಣಯ ಪರೀಕ್ಷೆ ಮತ್ತು ಲಸಿಕೆಯನ್ನು ಅಭಿವೃದ್ಧಿಪಡಿಸಿದ ನೊಬೆಲ್ ಪ್ರಶಸ್ತಿ ವಿಜೇತ ಡಾ. ಬರೂಚ್ ಬ್ಲಂಬರ್ಗ್ ಅವರ ಜನ್ಮದಿನದ ಪ್ರಯುಕ್ತ ಪ್ರತಿವರ್ಷ ರೋಗಿಗಳ ಜೊತೆಗೆ ಜನಸಾಮಾನ್ಯರಲ್ಲಿ ಹೆಪಟೈಟಿಸ್ ರೋಗದಿಂದ ಆಗುವ ಆರೋಗ್ಯದ ಸಮಸ್ಯೆ ಕುರಿತು ಅರಿವು ಮೂಡಿಸಲು ಮತ್ತು ರೋಗಿಗಳಲ್ಲಿ ಇರುವ ಆತಂಕವನ್ನು ಹೋಗಲಾಡಿಸಲು ಜುಲೈ 28 ರಂದು ವಿಶ್ವ ಹೆಪಟೈಟಿಸ್ ದಿನವೆಂದು ಆಚರಿಸಲಾಗುತ್ತದೆ.
ಈ ವರ್ಷದ ವಿಷಯ:
ಇವುಗಳಲ್ಲಿ ವಿಶೇಷವಾಗಿ ಹೆಪಟೈಟಿಸ್ ಬಿ ಮತ್ತು ಸಿ ಗಳು ಹೆಚ್ಚು ಸಾವುಗಳಿಗೆ ಕಾರಣವಾಗಿವೆ ಮತ್ತು ರೋಗಿಗಳಿಗೆ ಧೀರ್ಘಕಾಲದವರೆಗೂ (Chronic ) ಕಾಡುತ್ತವೆ. ಹೆಪಟೈಟಿಸ್ ಎ ಮತ್ತು ಈ ಗಳು ತೀವ್ರ (Acute) ಸೋಕಿಗೆ ಕಾರಣವಾಗುತ್ತವೆ. ಈ ವರ್ಷದ ವಿಷಯವೆಂದರೆ “ಹೆಪಟೈಟಿಸ್ ಕಾಯಲು ಸಾಧ್ಯವಿಲ್ಲ” (Hepatitis can’t wait) ಅಂದರೆ ರೋಗಿಯ ತಪಾಸಣೆ, ಪರೀಕ್ಷೆ ಮತ್ತು ಚಿಕಿತ್ಸೆಯನ್ನು ಕಾಯದೆ ತುರ್ತಾಗಿ ಮಾಡುವುದು. ಯಾಕೆಂದರೆ ಪ್ರಸ್ತುತ ವಿಶ್ವದಲ್ಲಿ ಹೆಪಟೈಟಿಸ್ ಸಂಬಂಧಿತ ಕಾಯಿಲೆಯಿಂದ ಪ್ರತಿ 30 ಸೆಕೆಂಡಿಗೆ ಒಬ್ಬ ಸಾಯುತ್ತಿದಾನೆ ಮತ್ತು ಸರ್ ವಿಲಿಯಂ ಜೇಮ್ಸ್ ಹೇಳಿರುವ ಹಾಗೆ ಆರೋಗ್ಯಕರ ಜೀವನವು ಯಕೃತ್ತಿನ ಮೇಲೆ ಅವಲಂಬಿತವಾಗಿರುತ್ತದೆ.
ವೈರಸ್ ಹರಡುವಿಕೆ:
ಹೆಪಟೈಟಿಸ್ ವೈರಾಣುಗಳು ಮುಖ್ಯವಾಗಿ ಎರಡು ಮಾರ್ಗಗಳಿಂದ ಹರಡುತ್ತವೆ. ವೈರಸ್ ಎ ಮತ್ತು ಈ ಎಂಟರಿಕ್ ಮಾರ್ಗ ಮತ್ತು ವೈರಸ್ ಬಿ, ಸಿ ಮತ್ತು ಡಿ ಪೇರೆಂಟರಲ ಮಾರ್ಗದಿಂದ ಹರಡುತ್ತವೆ.
•ಸೋಂಕಿತ ವ್ಯಕ್ತಿಯಿಂದ ಕಲುಷಿತಗೊಂಡ ಆಹಾರ ಮತ್ತು ನೀರಿನ ಬಳಕೆಯಿಂದ
• ಸೋಂಕಿತ ವ್ಯಕ್ತಿಯ ರಕ್ತ ಮತ್ತು ದೇಹದ ಇತರೆ ದ್ರವಗಳ ಸಂಪರ್ಕದ ಮೂಲಕ
• ಸೋಂಕಿತ ಸಂಗಾತಿಯ ಜೊತೆಗೆ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ
• ಅಸುರಕ್ಷಿತ ಮತ್ತು ಸೋಂಕುಯುಕ್ತ ಸೂಜಿಗಳ, ಸಿರೆಂಜಿಗಳ ಮತ್ತು ಇತರೆ ಚಿಕಿತ್ಸಾ ಉಪಚಾರ ಸಾಧನಗಳ ಬಳಕೆಯಿಂದ
• ಜನನ ಮತ್ತು ಹೆರಿಗೆ ಸಮಯದಲ್ಲಿ ಸೋಂಕಿತ ತಾಯಿಯಿಂದ ಮಗುವಿಗೆ
ಹೆಪಟೈಟಿಸ್ ಕಾರಣಗಳು:
ಹೆಪಟೈಟಿಸ್ ಬರುವಿಕೆಯಲ್ಲಿ ಮುಖ್ಯವಾಗಿ 80-90% ಹೆಪಟೊಟ್ರೊಪಿಕ್ ವೈರಸಿನ್ ಐದು ತಳಿಗಳು ಕಾರಣವಾದರೆ. ಇನ್ನುಳಿದ 10-20% ಮಧ್ಯಪಾನ ಸೇವನೆ, ರೋಗನಿರೋಧಕ ಶಕ್ತಿಯು ಸರಿಯಾಗಿ ಕೆಲಸ ಮಾಡದಿರುವಿಕೆ, ಜೀವಾಣು ವಿಷದಿಂದ, ಪರಾವಲಂಬಿಗಳಿಂದ, ಬ್ಯಾಕ್ಟೇರಿಯಾದಿಂದ, ಆನುವಂಶಿಕ (Genetic) ಮತ್ತು ಕೆಲವು ಔಷದಗಳ ಸೇವನೆಗಳಿಂದ ಬರುತ್ತದೆ.
ರೋಗದ ತೀವ್ರತೆ:
ವಿಶ್ವ ಸಂಸ್ಥೆಯ (WHO) ವರದಿಯ ಪ್ರಕಾರ ಪ್ರತಿವರ್ಷ ಸರಿಸುಮಾರು 1.5 ಮಿಲಿಯನ್ ಜನರು ವೈರಲ್ ಹೆಪಟೈಟಿಸ್ನಿಂದ ಸಾಯುತ್ತಿದ್ದಾರೆ. ಅವುಗಳಲ್ಲಿ 90% ಸಾವುಗಳು ಬಿ ಮತ್ತು ಸಿ ವೈರಸನಿಂದ ಮತ್ತು 10% ಸಾವುಗಳು ಉಳಿದ ವೈರಸ್ ಗಳಿಂದ ಸಂಭವಿಸುತ್ತಿದೆ. ಪ್ರಸ್ತುತ ವಿಶ್ವದಲ್ಲಿ 350 ಮಿಲಿಯನ್ ಜನರು ಹೆಪಟೈಟಿಸ್ ಬಿ ಇಂದ ಬದುಕುತ್ತಿದ್ದಾರೆ ಎಂದು ರೋಗ ನಿಯಂತ್ರಣ ಕೇಂದ್ರ (CDC) ತನ್ನ ಒಂದು ವರದಿಯಲ್ಲಿ ಉಲ್ಲೇಖಸಿದೆ.
ರೋಗದ ಲಕ್ಷಣಗಳು:
ಸಾಮಾನ್ಯವಾಗಿ ಹೆಚ್ಚಿನ ಸಂಧರ್ಭಗಳಲ್ಲಿ ಮತ್ತು ಸಮಯದವರೆಗೆ ಹೆಪಟೈಟಿಸ್ ರೋಗಿಗಳಲ್ಲಿ ಯಾವದೇ ಲಕ್ಷಣಗಳು ಕಂಡುಬರದಿದ್ದರೂ. ಕಣ್ಣು, ಲೋಳೆಯಪೊರೆ ಮತ್ತು ಚರ್ಮದಲ್ಲಿ ಹಳದಿ ಬಣ್ಣ ಕಾಣಿಸುವುದು, ವಾಕರಿಕೆ, ವಾಂತಿ, ಹೊಟ್ಟೆನೋವು, ಹಸಿವು ಇಲದಿರುವಿಕೆ, ಭೇದಿ, ಆಯಾಸ, ಜ್ವರ, ಸಂಧಿನೋವು, ದೇಹದ ತೂಕ ಕಡಿಮೆಯಾಗುವುದು, ಮೂತ್ರ ಮತ್ತು ಮಲ ಬಣ್ಣದಲ್ಲಿ ಬದಲಾವಣೆಯಂತ ಲಕ್ಷಣಗಳು ವಿಶೇಷವಾಗಿ ಆರಂಭಿಕ ಹಂತದಲ್ಲಿ ಕಾಣಿಸಿಕೊಂಡರೆ ಹೊಟ್ಟೆಯಲ್ಲಿ ನೀರು ತುಂಬಿಕೊಳ್ಳುವುದು, ಹೊಟ್ಟೆಭಾವು, ಯಕೃತಿನ ವೈಫಲ್ಯ ಮತ್ತು ಕ್ಯಾನ್ಸರ್ನಂತ ಲಕ್ಷಣಗಳು ಧೀರ್ಘವಸ್ಥೆಯಲ್ಲಿ ಕಾಣಿಸಿಕೊಳುತ್ತವೆ.
ರೋಗ ಪತ್ತೆಹಚ್ಚುವ ವಿಧಾನ:
ಹೆಪಟೈಟಿಸ್ ಮುಖ್ಯವಾಗಿ ರೋಗ ಲಕ್ಷಣ ಮತ್ತು ದೈಹಿಕ ಚಿನ್ನೆಗಳ ಜೊತ್ತೆಗೆ ರಕ್ತ ಪರೀಕ್ಷೆಯಲ್ಲಿ ‘ಯಕೃತಿನ ಕಿಣ್ವಗಳು’, ‘ವೈರಸಿನ ಪ್ರತಿಜನಕ’, ‘ಎಂಟಿ ವೈರಲ್ ಪ್ರತಿಕಾಯ’ (Antibody) ಅಥವಾ ‘ವೈರಸಿನ ಅನುವಂಶಿಕ ಕಣವನ್ನು'(Viral genom) ಪತ್ತೆ ಹಚ್ಚುವ ಮುಖಾಂತರ ದೃಡಪಡಿಸಲಾಗುತ್ತದೆ. ವಿಶೇಷ ಸಂಧರ್ಭದಲ್ಲಿ ರೋಗ ಮತ್ತು ಯಕೃತಿನ ಸ್ಥಿತಿಗತಿಯನ್ನು ತಿಳಿಯಲು ‘ಯಕೃತ್ ಬಯಾಪ್ಸಿ, ಅಲ್ಟ್ರಾಸೋನೋಗ್ರಫಿ ಮತ್ತು ಸಿ ಟಿ ಸ್ಕ್ಯಾನ್ ನ್ನು ಮಾಡಲಾಗುತ್ತದೆ.
ಹೆಪಟೈಟಿಸ್ ಮತ್ತು ಕೋವಿಡ್ 19
ಪ್ರಸ್ತುತ ಭಾರತವು ಸೇರಿದಂತೆ ವಿಶ್ವವು ಕೋವಿಡ್ -19 ಎಂಬ ಸಾಂಕ್ರಾಮಿಕ ರೋಗದಿಂದ ಸ್ವಲ್ಪ ಚೇತರಿಸಿಕೊಂಡರೂ ಇನ್ನು ಈ ರೋಗದ ಬಿಕ್ಕಟ್ಟಿನಿಂದ ಸಂಪೂರ್ಣವಾಗಿ ಹೊರಬಂದಿಲ್ಲ. ಇದರ ಮಧ್ಯ ಪ್ರತಿನಿತ್ಯ ಹೆಪಟೈಟಿಸ್ ರೋಗವು ಸಾವಿರಾರು ಜೀವಗಳನ್ನು ಕೊಲ್ಲುತ್ತಲೇ ಇದೆ. ಹೆಪಟೈಟಿಸ್ ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಕಾರಣಕ್ಕೆ ಕೋವಿಡ್ ರೋಗವು ಸುಲಭವಾಗಿ ಹರಡುತ್ತದೆ ಮತ್ತು ವಿವಿಧ ತೊಡಕುಗಳಿಗೆ ಕಾರಣವಾಗಬಹುದು. ಹಾಗಾಗಿ ಕೋವಿಡ್ -19 ರೋಗದ ಜೊತೆಗೆ, ರೋಗಿಗಳ ಮತ್ತು ಜನಸಾಮಾನ್ಯರ ಆರೋಗ್ಯದ ಹಿತದೃಷ್ಠಿಯಿಂದ ಹೆಪಟೈಟಿಸನ್ನು ನಿರ್ಲಕ್ಷ್ಯ ಮಾಡದೆ ಅತೀವ ಕಾಳಜಿ ವಹಿಸುವುದು ಉತ್ತಮ. ಕೇಂದ್ರ ಅರೋಗ್ಯ ಇಲಾಖೆ (MOHFW) ಅನುಮೋದಿಸಿರುವ ಕೋವಿಡ್-19 ಮುಂಜಾಗೃತ ಕ್ರಮಗಳ ಪಾಲನೆಯ ಜೊತ್ತೆಗೆ ಹೆಪಟೈಟಿಸ್ ಮುಂಜಾಗೃತ ಕ್ರಮಗಳನ್ನು ಪಾಲಿಸಲು ಜನಸಾಮಾನ್ಯರನ್ನು ಪ್ರೋತ್ಸಾಹಿಸುತ್ತ ದೇಶವನ್ನು ಕೋವಿಡ್ -19 ಮತ್ತು ಹೆಪಟೈಟಿಸ್ ಮುಕ್ತ ಮಾಡಲು ಕೈಜೋಡಿಸೋಣ.
ಡಾ! ಮಹ್ಮದ ಯುನುಸ. ಶ. ನಬೂಜಿ
ಸಹ ಪ್ರಾಧ್ಯಾಪಕರು
ಶ್ರೀ. ಜೆ. ಜಿ. ಸಿ. ಹೆಚ್. ಎಸ್. ಆಯುರ್ವೇದಿಕ್ ಮೆಡಿಕಲ್ ಕಾಲೇಜು ಘಟಪ್ರಭಾ
ಮೊ: 9448456450
Email: nabooji11819@gmail.com