ಹೆಚ್ಚುತ್ತಿದೆ ಇ-ಸಿಗರೇಟಿನ ಹುಚ್ಚು

ಹೆಚ್ಚುತ್ತಿದೆ ಇ-ಸಿಗರೇಟಿನ ಹುಚ್ಚು. ಇತ್ತೀಚಿನ ದಿನಗಳಲ್ಲಿ, ತಂಬಾಕುವಿನ ಸಿಗರೇಟು ಸೇವನೆಯ ಚಟದಿಂದ ಮುಕ್ತರಾಗಲು ಇ-ಸಿಗರೇಟಿನ ಮೊರೆ ಹೋಗುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.ಇ-ಸಿಗರೇಟ್‍ನಿಂದಾಗಿ ಉಂಟಾಗುವ ಹಾನಿಗಳ ಬಗ್ಗೆ ಯಾವುದೇ ದೀರ್ಘಕಾಲಿಕ ಸಂಶೋಧನೆಗಳ ಫಲಿತಾಂಶ ಲಭ್ಯವಿಲ್ಲ. ಆದರೆ ತುಂಬಾ ಬಳಸುವುದು ಒಳ್ಳೆಯದಲ್ಲ.

E-Cigarette/ಹೆಚ್ಚುತ್ತಿದೆ ಇ-ಸಿಗರೇಟಿನ ಹುಚ್ಚು

ಧೂಮಪಾನ ವಿಷಪಾನ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಸಾಂಪ್ರದಾಯಿಕ ಧೂಮಪಾನದಲ್ಲಿ ಬೀಡಿ, ಸಿಗರೇಟು ಮುಂತಾದವುಗಳ ಮುಖಾಂತರ ತಂಬಾಕು ಉತ್ಪನ್ನಗಳನ್ನು ಉರಿಸಿ ಅದರಿಂದ ಬಂದ ನಿಕೋಟಿನ್ ಸ್ವಾದಯುಕ್ತ ಹೊಗೆಯನ್ನು ಜನರು ಆಸ್ವಾದಿಸುತ್ತಾ ಏನೋ ವಿಚಿತ್ರವಾದ ಸುಖವನ್ನು ಅನುಭವಿಸುತ್ತಾರೆ. ಧೂಮಪಾನದ ಹೊಗೆಯಲ್ಲಿ ಸಾವಿರಾರು ಕ್ಯಾನ್ಸರ್‍ಕಾರಕ ವಿಷಾನಿಲಗಳು ಇದೆಯೆಂದು ತಿಳಿದಿದ್ದರೂ ಜನರು ಅಲ್ಪ ಸಮಯದ ಸಂತಸಕ್ಕಾಗಿಯೋ, ಮೋಜಿಗಾಗಿಯೋ ಅಥವಾ ಇನ್ನಾವುದೇ ಕಾರಣಕ್ಕಾಗಿಯೋ ಸಾಂಪ್ರದಾಯಿಕ ಬೀಡಿ ಸಿಗರೇಟಿನ ದಾಸರಾಗುತ್ತಿರುವುದು ಬಹಳ ನೋವಿನ ವಿಚಾರ. ತಂಬಾಕು ಉತ್ಪನ್ನಗಳಿಂದ ಬಾಯಿ ಕ್ಯಾನ್ಸರ್, ಗಂಟಲಿನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಮತ್ತು ಹೃದಯಾಘಾತ ಮುಂತಾದ ಮಾರಣಾಂತಿಕ ರೋಗ ಬರುತ್ತದೆ ಎಂದು ಎಂದೋ ಜಗಜ್ಜಾಹೀರಾಗಿದ್ದರೂ ಜನರು “ಇರುಳು ಕಂಡ ಬಾವಿಗೆ ಹಗಲು ಬೀಳುವಂತೆ” ಸಿಗರೇಟಿನ ಚಟಕ್ಕೆ ದಾಸರಾಗುವುದು ಬಹಳ ವಿಷಾದನೀಯ, ವಿಚಾರಗಳ ಚಟ ಚಟ್ಟವನ್ನು ಹತ್ತಿಸುತ್ತದೆ ಎಂಬ ಕಹಿ ಸತ್ಯದ ಅರಿವಿದ್ದರೂ ತನ್ನ ಕ್ಷಣಿಕ ಚಪಲಕ್ಕಾಗಿ, ತಂಬಾಕು ಸೇವಿಸುವ ಧೂಮಪಾನಿಗಳ ಸಂಖ್ಯೆ ಬಹಳಷ್ಟು ಇದೆ.

ಏನಿದು ಎಲೆಕ್ಟ್ರಾನಿಕ್ ಸಿಗರೇಟು?

ಇದೊಂದು ಇಲೆಕ್ಟ್ರಾನಿಕ್ ಬ್ಯಾಟರಿ ಚಾಲಿತ ಯಂತ್ರವಾಗಿದ್ದು ಅದರೊಳಗಿನ ದ್ರಾವಣವನ್ನು ಬಿಸಿಯಾಗಿಸಿದಾಗ, ದ್ರಾವಣ ಹದೆಯಾಗಿ ಮಾರ್ಪಪಡುತ್ತದೆ. ಯಂತ್ರದೊಳಗಿನ ದ್ರಾವಣವನ್ನು ಇ-ದ್ರಾವಣ ಎಂದೂ ಕರೆಯುತ್ತಾರೆ. ಇ-ದ್ರಾವಣದಲ್ಲಿ ನಿಕೋಟಿನ್, ನೀರು, ಗ್ಲಿಸರೀನ್, ಪಾಪಿಲೀನ್, ಗ್ಲೆಕೋಲ್ ಮತ್ತು ಸುಗಂಧಯುಕ್ತ ವಸ್ತು ಇರುತ್ತದೆ. ಕೆಲವೊಂದು ದ್ರಾವಣಗಳು ನಿಕೋಟಿನ್ ಮುಕ್ತವಾಗಿರುತ್ತದೆ. ದ್ರಾವಣವನ್ನು ಬಿಸಿಯಾಗಿಸಿದಾಗ ಸುಗಂಧಯುಕ್ತ ಹೊಗೆ ಮತ್ತು ನಿಕೋಟಿನ್‍ಯುಕ್ತ ಹೊಗೆ ಬಿಡುಗಡೆಯಾಗಿ, ವ್ಯಸನಿಗಳಿಗೆ ಧೂಮಪಾನ ಮಾಡಿದ ಅನುಭವ ಉಂಟಾಗುತ್ತದೆ.

ಹೇಗೆ ಸೇದುವುದು?

ಈ ಬ್ಯಾಟರಿಚಾಲಿತ ಯಂತ್ರದಲ್ಲಿನ ಅಟೋಮೈಜರ್‍ಗೆ ಒಂದು ಸಣ್ಣ ಕಾಯಿಸುವ ಸಾಧನವನ್ನು ಕಾಯಿಲ್‍ನ ರೂಪದಲ್ಲಿ ಅಳವಡಿಸಲಾಗುತ್ತದೆ. ಈ ಯಂತ್ರದ ಮೇಲ್ಭಾಗದಲ್ಲಿರುವ ಸೆನ್ಸಾರ್ ಗುಂಡಿಯನ್ನು ಒತ್ತಿದಾಗ, ಕಾಯಿಲ್ ಕಾದು ಇ-ದ್ರಾವಣದ ಮೇಲೆ ಪರಿಣಾಮ ಬೀರುತ್ತದೆ. ಇ-ದ್ರಾವಣ 100 ರಿಂದ 250 ಡಿಗ್ರಿ ಸೆಂಟಿಗ್ರೇಡ್‍ವರೆಗೆ ಕಾದಾಗ ಸುಗಂಧಯುಕ್ತ, ನಿಕೋಟಿನ್ ಸ್ವಾದದ ಹಬೆಯನ್ನು ಹೊರಸೂಸುತ್ತದೆ. ಅದನ್ನು ಬಳಕೆದಾರ ಗಂಟಲಿಗೆಳೆದುಕೊಂಡು ಹೊರಕ್ಕೆ ಉಗುಳಿದಾಗ ದಟ್ಟವಾದ ಹೊಗೆ ಬರುತ್ತದೆ. ಅದು ತಂಬಾಕುವಿನ ಸ್ವಾದ ಅಥವಾ ತಂಬಾಕು ಸೇವಿಸಿದ ತೃಪ್ತಿಯ ಅನುಭವವನ್ನು ನೀಡುತ್ತದೆ.

ಇ-ಸಿಗರೇಟು v/s ಸಾಂಪ್ರದಾಯಿಕ ಸಿಗರೇಟು

1. ಇ- ಸಿಗರೇಟಿನಲ್ಲಿ ಇರುವ ಹೊಗೆ ಮಾಮೂಲಿ ಸಿಗರೇಟಿನ ಹೊಗೆಗಿಂತ ಜಾಸ್ತಿ ಇದ್ದರೂ, ಬೇಗನೇ ವಾತಾವರಣದಲ್ಲಿ ಲೀನವಾಗುತ್ತದೆ. ಮತ್ತು ವಾಯುಮಾಲಿನ್ಯ ಉಂಟುಮಾಡುವುದಿಲ್ಲ.

2. ಇ-ಸಿಗರೇಟಿನಲ್ಲಿ ನೂರಕ್ಕೂ ಹೆಚ್ಚು ಬಗೆಯ ಸ್ವಾದ ಮತ್ತು ಸುವಾಸನೆ ಗಳಿರುವುದರಿಂದ ಪರಿಮಳಯುಕ್ತವಾಗಿರುತ್ತದೆ. ನಿಕೋಟಿನ್‍ಮುಕ್ತ ಮತ್ತು ನಿಕೋಟಿನ್‍ಯುಕ್ತ ಇ-ಸಿಗರೇಟುಗಳು ಲಭ್ಯವಿದೆ.

3. ಸಾಂಪ್ರದಾಯಿಕ ಧೂಮಪಾನಗಳಿಂದ ಪ್ಯಾಸಿವ್ ಸ್ಮೊಕರ್‍ಗೆ ಬಹಳಷ್ಟು ಕಿರಿಕಿರಿಯಾಗುತ್ತದೆ. ಆದರೆ ಇ-ಸಿಗರೇಟಿನಿಂದ ಅಷ್ಟು ಕಿರಿ ಕಿರಿಯಾಗುವುದಿಲ್ಲ.

4. ಸಾಂಪ್ರದಾಯಿಕ ಸಿಗರೇಟಿಗಿಂತ ಇ-ಸಿಗರೇಟು ಸುರಕ್ಷಿತ. ಆದರೆ ಇ-ಸಿಗರೇಟು ಸಂಪೂರ್ಣ ಸುರಕ್ಷಿತ ಎಂದು ಇನ್ನೂ ಸಾಬಿತಾಗಿಲ್ಲ. ದಿನವೊಂದಕ್ಕೆ 30 ರಿಂದ 40 ಸಿಗರೇಟು ಸೇದುವ ವ್ಯಸನಿಗಳ ಚಟ ಬಿಡಿಸಲು ಇ-ಸಿಗರೇಟು ಬಳಸಬಹುದು ಮತ್ತು ಶ್ವಾಸ ಕೋಶಕ್ಕೆ ಆಗುವ ಹೆಚ್ಚಿನ ಹಾನಿ ತಡೆಯಬಹುದು.

5. ಸಾಂಪ್ರದಾಯಿಕ ಸಿಗರೇಟಿಗೆ ಹೆಚ್ಚಿನ ವೆಚ್ಚ ತಗಲುತ್ತದೆ. ದಿನವೊಂದಕ್ಕೆ 20 ಸಿಗರೇಟು ಸೇದುವವನಿಗೆ 200 ರಿಂದ 300 ರೂ ಅಗತ್ಯ. ಆದರೆ ಇ-ಸಿಗರೇಟು ಆರಂಭದಲ್ಲಿ ಒಮ್ಮೆ ದುಬಾರಿ ಎನಿಸಿದರೂ, ಅದರ ಬಳಕೆಯ ವೆಚ್ಚ ಬಹಳ ಕಡಿಮೆ.

ಇತ್ತೀಚಿನ ದಿನಗಳಲ್ಲಿ, ತಂಬಾಕುವಿನ ಸಿಗರೇಟು ಸೇವನೆಯ ಚಟದಿಂದ ಮುಕ್ತರಾಗಲು ಇ-ಸಿಗರೇಟಿನ ಮೊರೆ ಹೋಗುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮುಕ್ತ ಮಾರುಕಟ್ಟೆಯಲ್ಲಿ ಇದರ ಮಾರಾಟಕ್ಕೆ ನಿಷೇಧವಿದ್ದರೂ, ಯುವ ಜನರು ಆನ್‍ಲೈನ್ ಮುಖಾಂತರ ತರಿಸಿ ಕೊಳ್ಳುತ್ತಿದ್ದಾರೆ. 2003 ರಲ್ಲಿ ಚೈನಾದ ಹಾನ್‍ಲಿಕ್ ಎಂಬ ಪಾರ್ಮಸಿಸ್ಟ್ (ಔಷಧಿ ವಿಜ್ಞಾನಿ) ಇ-ಸಿಗರೇಟನ್ನು ಕಂಡುಹಿಡಿದ. 2004 ರಿಂದ ಜಗತ್ತಿನಾದ್ಯಂತ ಇದರ ಲಭ್ಯತೆ ಆರಂಭವಾಗಿದ್ದರೂ ಹೆಚ್ಚಿನ ಎಲ್ಲಾ ಇ-ಸಿಗರೇಟು ಉತ್ಪಾದನೆ ಚೈನಾ ದೇಶದಲ್ಲಿಯೇ ಆಗುತ್ತಿದೆ. ಶೇಕಡಾ 90 ರಷ್ಟು ಉತ್ಪಾದನೆ ಚೈನಾ ದೇಶವೊಂದರಲ್ಲಿಯೇ ಆಗುತ್ತದೆ. ಆದರೆ ಇ-ಸಿಗರೇಟಿನ ಅತೀ ಹೆಚ್ಚು ಬಳಕೆದಾರರು ಅಮೇರಿಕಾ ಮತ್ತು ಇಂಗ್ಲೆಡ್ ದೇಶದಲ್ಲಿ ಕಂಡುಬರುತ್ತದೆ.

ಹಣ ಉಳಿತಾಯ, ಸಾಂಪ್ರದಾಯಿಕ ಧೂಮಪಾನದ ಚಟ ಬಿಡುವುದಕ್ಕಾಗಿ  ಹೆಚ್ಚು ಹೆಚ್ಚು ಯುವ ಜನರು ಮತ್ತು ಸಾಂಪ್ರದಾಯಿಕ ಧೂಮಪಾನಿಗಳು ಇ-ಸಿಗರೇಟಿನ ಮೊರೆ ಹೋಗುತ್ತಿದ್ದಾರೆ.  ಜಾಗತಿಕವಾಗಿ ವಿಶ್ವದೆಲ್ಲೆಡೆ ಸುಮಾರು 500 ಬ್ರಾಂಡ್‍ಗಳ ಇ-ಸಿಗರೇಟು, ಲಭ್ಯವಿದ್ದು ವಾರ್ಷಿಕ ಸರಾಸರಿ ಸುಮಾರು 7 ಬಿಲಿಯಾನ್ ಅಮೇರಿಕ ಡಾಲರ್ ಗಿಂತಲೂ ಜಾಸ್ತಿ ಇ-ಸಿಗರೇಟ್ ವಹಿವಾಟು ನಡೆಯುತ್ತದೆ.  ಅತಿಯಾದ ಧೂಮಪಾನದ ಚಟವಿರುವವರಿಗೆ, ಚಟದ ದಾಸ್ಯದಿಂದ ಮುಕ್ತರಾಗಲು ಇ-ಸಿಗರೇಟು ಹೆಚ್ಚು ಉಪಯುಕ್ತ. ಇ-ಸಿಗರೇಟ್‍ನಿಂದಾಗಿ ಉಂಟಾಗುವ ಹಾನಿಗಳ ಬಗ್ಗೆ ಯಾವುದೇ ದೀರ್ಘಕಾಲಿಕ ಸಂಶೋಧನೆಗಳ ಫಲಿತಾಂಶ ಲಭ್ಯವಿಲ್ಲ. ಆದರೆ ತುಂಬಾ ಬಳಸುವುದು ಒಳ್ಳೆಯದಲ್ಲ.

ಡಾ| ಮುರಲೀ ಮೋಹನ್ ಚೂಂತಾರು

ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787

www.surakshadental.com
email: drmuraleemohan@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!