ಹೃದ್ರೋಗಿಗಳ ಆಹಾರ ಕ್ರಮಗಳು ಹೇಗಿರಬೇಕು ?

ಹೃದ್ರೋಗಿಗಳು ಆಹಾರ ನಿಯಂತ್ರಿಸಿ, ವ್ಯಾಯಾಮದ ಮೂಲಕವೂ ಎತ್ತರಕ್ಕೆ ಅನುಗುಣವಾದ ತೂಕದ ಶೇಕದ 10ರಷ್ಟನ್ನು ಕಡಿಮೆಗೊಳಿಸುವುದು ಒಳ್ಳೆಯದು. ಆದರೆ ಹೇಳುವಾಗ ಸುಲಭವಾಗಿದ್ದರೂ, ಆಹಾರ ಪಥ್ಯಕ್ರಮಗಳು ರೋಗಿಯ ಬಾಯಿ ಚಪಲ ಮತ್ತು ಸುಖಮಯ ಜೀವನಕ್ಕೆ ತೊಂದರೆಯಾಗುವುದರಿಂದ ಇದನ್ನು ಪಾಲಿಸುವುದು, ಅನುಸರಿಸುವುದು ಕಷ್ಟದಾಯಕ. ಮಾನವ ಸಾಮಾನ್ಯವಾಗಿ ಆಹಾರಪ್ರಿಯ. ಆದರೆ, ಪ್ರಾಣಿಗಳು ಆಹಾರ ಸೇವಿಸುವುದು ಅದರ ಉಳಿವಿಗಾಗಿ. ಆದಾಗ್ಯೂ, ಮನುಷ್ಯ ತನ್ನ ಜೀವನ ನಡೆಸಲು ಮತ್ತು ಆತ್ಮಸಂತೃಪ್ತಿಗಾಗಿ ಆಹಾರ ಸೇವಿಸುತ್ತಾನೆ. ಇದರಿಂದಾಗಿ ನಾವು ಅಗತ್ಯಕ್ಕಿಂತ ಶೇಕಡ 3 ರಿಂದ 4 ಪಟ್ಟು ಹೆಚ್ಚು ಆಹಾರ ಸೇವಿಸುತ್ತೇವೆ. ಅನಿಯಂತ್ರಿತ ಆಹಾರ ಸೇವನೆ ವಿಷ ಸಮಾನ.
ಹೃದಯಾಘಾತವಾದ ಬಳಿಕ ಎರಡು ತಿಂಗಳಲ್ಲಿ ರಕ್ತದಲ್ಲಿನ ಕೊಬ್ಬಿನಾಂಶಗಳಾದ ಕೊಲೆಸ್ಟರಾಲ್, ಎಚ್‍ಡಿಎಲ್, ಟ್ರೈಗ್ಲಿಸರಾಯ್ಡ್, ಕೈಲೋಮೈಕ್ರೋನ್ ಇತ್ಯಾದಿ ಪರೀಕ್ಷೆ ಮಾಡಬೇಕು. ಸುಮಾರು 14 ಗಂಟೆಗಳ ಕಾಲ ಆಹಾರ ಸೇವಿಸದೇ ಈ ಮೇಲಿನ ಪರೀಕ್ಷಗಳನ್ನು ನಡೆಸಬೇಕಾಗುತ್ತದೆ. ಕೊಲೆಸ್ಟರಾಲ್ ಹಾಗೂ ಟ್ರೈಗ್ಲಿಸರಾಯ್ಡ್ ಅಧಿಕವಾಗುವುದರಿಂದ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚುತ್ತದೆ. ಆದರೆ, ಎಚ್‍ಡಿಎಲ್ ಅಧಿಕವಾದರೆ ಹಾರ್ಟ್ ಆ್ಯಟಾಕ್ ಸಾಧ್ಯತೆ ಕಡಿಮೆಯಾಗುತ್ತದೆ. ಆದ್ದರಿಂದ ಎಚ್‍ಡಿಎಲ್ ಮತ್ತು ಕೊಲೆಸ್ಟರಾಲ್ ಪ್ರಮಾಣವು ಅನುಪಾತ ರೀತಿಯಲ್ಲಿ ಅಧಿಕವಾದರೆ ತೊಂದರೆ ಇಲ್ಲ. ಇದರ ಅನುಪಾತವು ಶೇಕಡ 4.5ಕ್ಕಿಂತಲೂ ಅಧಿಕವಾಗಿರಬಾರದು. ಇದು ಸಮಪ್ರಮಾಣದಲ್ಲಿ ಇಲ್ಲದಿದ್ದಲ್ಲಿ ಆಹಾರದ ರೀತಿಯನ್ನು ನಿಯಂತ್ರಿಸುವುದರೊಂದಿಗೆ ಔಷಧಿಗಳನ್ನು ಸೇವಿಸಿ ರಕ್ತದಲ್ಲಿನ ಕೊಬ್ಬನ್ನು ನಿಯಂತ್ರಿಸಬೇಕು.
ಆಹಾರ ಕ್ರಮಗಳು
ಎಣ್ಣೆ ಮತ್ತು ಕೊಬ್ಬು ಅಧಿಕವಾಗಿ ಸೇರಿಸಿ ತಯಾರಿಸಿದ ಆಹಾರ ಮಾತ್ರ ರುಚಿ ಇರುತ್ತದೆ ಎಂಬ ತಪ್ಪು ಕಲ್ಪನೆ ನಮ್ಮಲ್ಲಿದೆ. ಒಂದು ಗ್ರಾಂ ಕೊಬ್ಬಿನಲ್ಲಿ 9 ಕ್ಯಾಲೋರಿ ಶಕ್ತಿ, 1 ಗ್ರಾಂ ಕಾರ್ಬೋಹೈಡ್ರೇಟ್‍ನಲ್ಲಿ 4 ಕ್ಯಾಲೋರಿ ಶಕ್ತಿ ಮತ್ತು 1 ಗ್ರಾಂ ಪ್ರೋಟಿನ್‍ನಲ್ಲಿ 4 ಕ್ಯಾಲೋರಿ ಶಕ್ತಿ ಅಡಕವಾಗಿದೆ. ಆದ್ದರಿಂದ ಬಹಳ ಕಡಿಮೆ ಕೊಬ್ಬು ಸೇವಿಸಿದರೂ ಕೂಡ ಅಗತ್ಯಕ್ಕಿಂತ ಹೆಚ್ಚು ಶಕ್ತಿ ಲಭಿಸುವುದಲ್ಲದೇ, ಇದರಿಂದ ದುರ್ಮೇದಸ್ಸು ಉಂಟಾಗುತ್ತದೆ. ಅಡುಗೆ ಎಣ್ಣೆ ಇದರಲ್ಲಿ ಮುಖ್ಯಪಾತ್ರ ವಹಿಸುತ್ತದೆ. ಈ ಎಣ್ಣೆಯನ್ನು ತೊರೆದರೆ ಹೆಚ್ಚು ಕಡಿಮೆ ಹೊಟ್ಟೆ ತುಂಬಾ ಆಹಾರ ಸೇವಿಸಿದರೂ ದೇಹದಲ್ಲಿ ದುರ್ಮೇದಸ್ಸು ಉಂಟಾಗುವುದಿಲ್ಲ. ಅಲ್ಲದೇ ಶರೀರದ ತೂಕ ಅಧಿಕ ಇದ್ದಲ್ಲಿ ತೂಕವನ್ನು ಕಡಿಮೆ ಮಾಡಬಹುದು. ಹೀಗಾಗಿ ಹೃದ್ರೋಗಿಗಳಲ್ಲಿ ತಮ್ಮ ರೋಗ ಗುಣಮುಖವಾಗಲು ಆಹಾರ ನಿಯಂತ್ರಣ ಬಹುಮುಖ್ಯ ಪಾತ್ರ ವಹಿಸುತ್ತದೆ.
ದೇಹ ತೂಕ ಕಡಿಮೆ ಮಾಡಿಕೊಳ್ಳಲು ಕಟ್ಟುನಿಟ್ಟಿನ ಆಹಾರಪಥ್ಯಗಳು ಫಲಕಾರಿಯಾಗುತ್ತದೆ. ಈ ರೀತಿ ಇರುವ ಆಹಾರ ಪಥ್ಯಗಳನ್ನು ಅನುಸರಿಸುವಾಗ, ಮಲ್ಟಿ ವಿಟಮಿನ್‍ಗಳಲ್ಲಿ ಯಾವುದಾದರೂ ಒಂದನ್ನು ವೈದ್ಯರ ಸಲಹೆಯಂತೆ ಪ್ರತಿದಿನ ಒಂದರಂತೆ ಸೇವಿಸಬೇಕು. ಹೃದ್ರೋಗಕ್ಕೆ ಉಪಯೋಗಿಸುವ ಔಷಧಿಗಳನ್ನು ಸಾಮಾನ್ಯ ರೀತಿಯಲ್ಲೇ ಸೇವಿಸಬೇಕು. ಡಯಾಬಿಟಿಸ್ ಇರುವ ಹೃದ್ರೋಗಿಗಳು ಉಪವಾಸ ಮಾಡುವಾಗ ಸಕ್ಕರೆ ಕಾಯಿಲೆ ನಿಯಂತ್ರಣಕ್ಕ ಉಪಯೋಗಿಸುವ ಔಷಧಿ ಮತ್ತು ಇನ್ಸುಲಿನ್ ಇಂಜೆಕ್ಷನ್ ಆಗಲಿ, ಡೋಸ್ ನಿಯಂತ್ರಣಗೊಳಿಸುವುದಾಗಲಿ ಅಗತ್ಯವಿರುವುದರಿಂದ ಚಿಕಿತ್ಸೆ ನೀಡುವ ವೈದ್ಯರ ಸಲಹೆ ಅನಿವಾರ್ಯ.
ಎತ್ತರಕ್ಕೆ ಅನುಸಾರವಾದ ತೂಕದ ಶೇಕಡ 10ರಷ್ಟು ಕಡಿಮೆಯಾಗಿದ್ದಲ್ಲಿ, ಎಣ್ಣೆ ಇಲ್ಲದೇ ತಯಾರಿಸಿದ ಚರ್ಮ ಸುಲಿದ ಕೋಳಿ ಮಾಂಸ ಮತ್ತು ಮೀನು ಅಡುಗೆಯನ್ನು ವಾರಕ್ಕೆ ಒಂದರೆಡು ಬಾರಿ ಮಿತವಾಗಿ ತಿನ್ನಬಹುದು. ಅನ್ನದ ಅಳತೆಯನ್ನು ಒಂದು ಕಪ್ (250 ಮಿ.ಲೀ.) ಅಥವಾ ಎರಡು ಚಪಾತಿಯನ್ನು ಸೇವಿಸಬಹುದು. ತೂಕ ಹೆಚ್ಚಾಗುತ್ತಿದ್ದರೆ, ಆಹಾರದ ಅಳತೆಯನ್ನು ಮತ್ತಷ್ಟು ಕಡಿಮೆಗೊಳಿಸಿ, ಎತ್ತರಕ್ಕೆ ಅನುಗುಣವಾದ ತೂಕಕ್ಕಿಂತ ಶೇಕಡ 10ರಷ್ಟು ಇಳಿಸಬೇಕು.
ಪಥ್ಯಗಳನ್ನು ಮಾಡಿ ಎತ್ತರಕ್ಕೆ ಅನುಸಾರವಾದ ತೂಕಕ್ಕಿಂತ ಶೇಕಡ 10ರಷ್ಟನ್ನು ಕಡಿಮೆಗೊಳಿಸುವುದರಿಂದ ಆಂಜೈನಾದಿಂದ ವಿಮುಕ್ತಿ ಹೊಂದಲು, ಔಷಧೀಯ ಅಳತೆ ಮತ್ತು ಸಂಖ್ಯೆಯನ್ನು ಕಡಿಮೆ ಮಾಡಲು, ಬೈಪಾಸ್ ಶಸ್ತ್ರಚಿಕಿತ್ಸೆ ಮತ್ತು ಆಂಜಿಯೋಪ್ಲಾಸ್ಟಿ ಇಲ್ಲವಾಗಿಸಲು ಸಹಾಯವಾಗುತ್ತದೆ. ಆದಾಗ್ಯೂ ಹಲವರಿಗೆ ಈ ರೀತಿಯ ಪಥ್ಯಗಳನ್ನು ಮಾಡಿ ತೂಕ ಕಡಿಮೆಗೊಳಿಸಲು ಸಾಧ್ಯವಾಗುವುದಿಲ್ಲ. ಇಂಥವರು ಅಧಿಕ ಔಷಧಿ ಸೇವಿಸಬೇಕಾಗುತ್ತದೆ. ಆದರೂ, ಕೆಲವೊಮ್ಮೆ ಆಂಜಿಯೋಪ್ಲಾಸ್ಟಿ ಅಥವಾ ಬೈಪಾಸ್ ಚಿಕಿತ್ಸೆಯ ಅಗತ್ಯ ಕಂಡುಬರಬಹುದು.
ಸೇವಿಸಬಹುದಾದ ತರಕಾರಿಗಳು :
ಎಲೆಕೋಸು, ಹೂಕೋಸು, ಬೀನ್ಸ್, ತೊಂಡೆಕಾಯಿ, ಈಚಲಕಾಯಿ, ಪಡವಲಕಾಯಿ, ಕುಂಬಳಕಾಯಿ, ಸೋರೆಕಾಯಿ, ಮೂಲಂಗಿ, ಅವರೇಕಾಯಿ, ಬಾಳೆಹಿಂಡಿ, ಬಾಳೆ ಹೂ, ಕ್ಯಾರೆಟ್, ಸೌತೆಕಾಯಿ, ಹಾಗಲಕಾಯಿ, ಟೊಮೊಟೊ, ನುಗ್ಗೆಕಾಯಿ, ಅಲಸಂದೆ, ಹಸಿರೆಲೆ ತರಕಾರಿಗಳು, ಸೊಪ್ಪುಗಳು, ಬದನೆಕಾಯಿ, ಬೆಂಡೆಕಾಯಿ ಇತ್ಯಾದಿ. ಇವುಗಳಲ್ಲಿ ಸೌತೆಕಾಯಿ, ಕ್ಯಾರೆಟ್ ಮತ್ತು ಟೊಮೊಟೊ ಬೇಯಿಸದೇ ತಿನ್ನಬೇಕು.
ನಿಯಂತ್ರಿಸಬೇಕಾದ ಆಹಾರಗಳು :
ಕೊಬ್ಬಿನಾಂಶ ಇರುವ ಹಾಲು, ಹಾಲಿನಿಂದ ತಯಾರಿಸಿದ ಆಹಾರ ಪದಾರ್ಥಗಳು, ಚೀಸ್, ಐಸ್‍ಕ್ರೀಮ್, ಮೊಟ್ಟೆ, ದನದ ಮಾಂಸ, ಆಡಿನ ಮಾಂಸ, ಕುರಿ ಮಾಂಸ, ಹಂದಿ ಮಾಂಸ, ಚಿಪ್ಪು ಮಾಂಸ, ಏಡಿ, ಗಂಜಿ, ಕಾಯಿಸಿದ ಭಕ್ಷ್ಯ ಪದಾರ್ಥಿಗಳು ಮತ್ತು ಬೇಕರಿ ತಿಂಡಿ-ತಿನಿಸುಗಳು.

ಡಾ. ಮಹಂತೇಶ್ ಆರ್. ಚರಂತಿಮಠ್
ಹೃದ್ರೋಗ ತಜ್ಞರು ತಥಾಗತ್ ಹಾರ್ಟ್‍ಕೇರ್ ಸೆಂಟರ್,
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01
ಭೇಟಿ ಮಾಡಲು ಸಂಪರ್ಕಿಸಿ : 080-22357777, 9900356000
E-mail: mahanteshrc67@gmail.com

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!