ವೈದ್ಯಲೋಕದ ಅಕ್ಷರ ಜಾತ್ರೆ: ಅರಿವಿನ ಅಕ್ಷಯ ಪಾತ್ರೆ…..

ದಿನಾಂಕ 26-5-2019 ರಂದು ಮಂಗಳೂರು ಶಾಖೆಯ ಭಾರತೀಯ ವೈದ್ಯಕೀಯ ಸಂಘ ಭವನದ ಎ.ವಿ.ರಾವ್ ಸಭಾಂಗಣದಲ್ಲಿ ಡಾ.ಎಂ.ಶಿವರಾಮ್( ರಾಶಿ )ವೇದಿಕೆಯ ಮೇಲೆ ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಘಟಕ, ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಶಾಖೆಯ ಆಶ್ರಯದಲ್ಲಿ ಭಾರತೀಯ ವೈದ್ಯಕೀಯ ಸಂಘ ಕನ್ನಡ ಬರಹಗಾರರ ಬಳಗದ ಸಹಯೋಗದೊಂದಿಗೆ ಐ.ಎಮ್. ಎ.ಕನ್ನಡ ವೈದ್ಯ ಬರಹಗಾರರ ಪ್ರಥಮ ರಾಜ್ಯ ಸಮ್ಮೇಳನ ವೈಶಿಷ್ಟ್ಯಪೂರ್ಣವಾಗಿ ನಡೆಯಿತು.

ಕನ್ನಡದಲ್ಲಿ ವೈದ್ಯ ಸಾಹಿತ್ಯ ವಿಪುಲವಾಗಿ ಬೆಳೆದಿದ್ದರೂ, ವೈದ್ಯ ಸಾಹಿತಿಗಳ ಸಮ್ಮೇಳನ ಇದು ವರೆಗೂ ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಉದಯೋನ್ಮುಖ ವೈದ್ಯ ಬರಹಗಾರರಿಗೆ ಉತ್ತೇಜನ ನೀಡುವ ಮತ್ತು ವೈದ್ಯ ಸಾಹಿತಿಗಳ ಚಿಂತನ-ಮಂಥನಕ್ಕೆ, ವೈದ್ಯ ವೃತ್ತಿಯಲ್ಲಿ ಸಮಸ್ಯೆ,ತಲ್ಲಣಗಳ ಬಗ್ಗೆ ಚರ್ವಿತ ಚರ್ವಿತ ಚರ್ಚಿಸಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಸಮ್ಮೇಳನವನ್ನು ಆಯೋಜಿಸಿತ್ತು ಮತ್ತು ಆ ನಿಟ್ಟಿನಲ್ಲಿ ಅದು ಸಾರ್ಥಕತೆಯನ್ನೂ ಪಡೆದಿದೆ.

ಪ್ರಾದೇಶಿಕ ಭಾಷೆಯೊಂದರಲ್ಲಿ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ನಡೆದ ವೈದ್ಯ ಬರಹಗಾರರ ಸಮ್ಮೇಳನ ಇದಾಗಿತ್ತಲ್ಲದೇ, ನಾಡಿನ ಮೂಲೆ ಮೂಲೆಯಿಂದ ಸುಮಾರು 200 ಕ್ಕೂ ಹೆಚ್ಚು ವೈದ್ಯ ಸಾಹಿತಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ವೈದ್ಯ ಸಾಹಿತ್ಯ ಬೆಳವಣಿಗೆಗೆ ಐ.ಎಮ್.ಎ.ಮಾಡಿದ ಅಪರೂಪದ ಪ್ರಯತ್ನವಾಗಿತ್ತಲ್ಲದೇ, ಐ.ಎಮ್.ಎ.ಇತಿಹಾಸದಲ್ಲಿ ಒಂದು ಮೈಲುಗಲ್ಲಾಗಿ ನಿಲ್ಲುವುದರಲ್ಲಿ ಮಂಗಳೂರು ಶಾಖೆಯ ಹೆಸರು ಶಾಶ್ವತವಾಗಿ ದಾಖವಾಯಿತು.ಡಾ.ಸಚ್ಚಿದಾನಂದ ರೈ ಮತ್ತವರ ಬಳಗ, ಸಂಘಟನಾ ಕಾಕಾರ್ಯದರ್ಶಿ ಡಾ.ಅಣ್ಣಯ್ಯ ಕುಲಾಲ ಅವರ ಸಂಘಟನಾ ಚಾತುರ್ಯಕ್ಕೆ,ಕಾರ್ಯಕ್ಷಮತೆ ಹಿಡಿದ ರನ್ನಗನ್ನಡಿಯಾಗಿತ್ತು ಈ ಸಮ್ಮೇಳನ.

ಸಮ್ಮೇಳನಕ್ಕೆ ಬಂದವರನ್ನು ಕರಾವಳಿ ಜನಪದ ಶೈಲಿ-ಚಂಡಮದ್ದಳೆಯ ಮೂಲಕ ಸ್ವಾಗತ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಸಚ್ಚಿದಾನಂದ ಉದ್ಘಾಟಿಸಿ – ಮಾಧ್ಯಮದಲ್ಲಿ ಬರುವ ಆರೋಗ್ಯ ಕ್ಷೇತ್ರದ ಜಾಹೀರಾತುಗಳಿಂದ ಜನರು ದಾರಿ ತಪ್ಪುವ ಸಾಧ್ಯತೆ ಹೆಚ್ಚು. ವೈದ್ಯ ಬರಹಗಾರರು ಲೇಖನಗಳ ಮೂಲಕ ಜನರಲ್ಲಿ ಅರಿವು ಮೂಡಿಸಿ, ತಪ್ಪು ಮಾಹಿತಿಗಳನ್ನು ಹೋಗಲಾಡಿಸಬೇಕು ಎಂಬ ಕಿವಿಮಾತನ್ನು ವೈದ್ಯರಿಗೆ ತಳಿಸಿದರು. ಮುಂದಿನ ಸಮ್ಮೇಳನವನ್ನು ವಿಶ್ವವಿದ್ಯಾಲಯ ನಡೆಸಿಕೊಡುವುದಾಗಿ ಘೋಷಿಸಿದರು.

ಆಂಗ್ಲ ಭಾಷೆ ದಬ್ಬಾಳಿಕೆ, ಹಿಂದಿ ಭಾಷೆಯ ಹೇರಿಕೆಯ ನಡುವೆ ಕನ್ನಡ ಕಳೆದು ಹೋಗುವ ಆತಂಕ ಎದುರಿಸುತ್ತಿದೆ. ಈ ಹೆದರಿಕೆಗೆ ಕನ್ನಡ ವೈದ್ಯ ಬರಹಗಾರರು ಲೇಖನಗಳ ಮೂಲಕ ಚಿಕಿತ್ಸೆ ನೀಡಬಲ್ಲರು. ಕನ್ನಡ ಭಾಷೆಯ ಅಂದ, ಚೆಂದದ ಅಭಿವೃದ್ದಿಗೆ ವೈದ್ಯರ ಕೊಡುಗೆ ಅಪಾರವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಮನು ಬಳಿಗಾರ ಹೇಳಿದರು. ಪರಿಷತ್ತಿನಿಂದ ಹಣಕಾಸಿನ ನೆರವು ನೀಡುವ ಮತ್ತು ಮುಂದಿನ ಸಮ್ಮೇಳನದಲ್ಲಿ ವೈದ್ಯಕೀಯ ಸಾಹಿತ್ಯಕ್ಕಾಗಿಯೇ ಒಂದು ಗೋಷ್ಠಿ ಮೀಸಲಿಡುವುದಾಗಿ ಆಶ್ವಾಸನೆ ಕೊಟ್ಟರು.

ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಎಸ್ .ಪಿ.ಯೋಗಣ್ಣ ಮಾತನಾಡಿ – ಭಾರತೀಯ ವೈದ್ಯಕೀಯ ಸಂಘದ 175 ಶಾಖೆಗಳು ರಾಜ್ಯದಲ್ಲಿದ್ದು, 300 ಕ್ಕೂ ಹೆಚ್ಚು ವೈದ್ಯ ಬರಹಗಾರರಿದ್ದಾರೆ. ವೈದ್ಯರ ಸಾಹಿತ್ಯದ ಪ್ರತಿಭೆಗೆ ವೇದಿಕೆ ಒದಗಿಸುವ ಪ್ರಯತ್ನ ಇಡಲಾಗಿದೆ.ಸಮಾಜದಲ್ಲಿ ವೈದ್ಯರು ಎಂದರೆ ಇಂಗ್ಲಿಷ್ ಮಾತನಾಡುವವರು ಎಂಬ ಭಾವನೆ ಇದೆ. ಆದರೆ, ಕನ್ನಡದಲ್ಲಿ ಬಹಳಷ್ಟು ಕವಿಗಳು, ಬರಹಗಾರರಾಗಿ ಗುರುತಿಸಿಕೊಂಡಿರುವ ವೈದ್ಯರಿದ್ದಾರೆ. ವೈದ್ಯರು ಇಂಗ್ಲಿಷ್ ನಪ್ಟೇ ಕನ್ನಡದಲ್ಲಿಯೂ ಉತ್ತಮವಾಗಿ ಬರೆಯುತ್ತಾರೆ. ಮುಂಬರುವ ದಿನಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಾಹಿತ್ಯ ರಚನೆಯ ಬಗ್ಗೆ ತರಬೇತಿ ನೀಡುವ ಯೋಜನೆ ಇದೆ ಎಂದು ತಿಳಿಸಿದರು.

ಭವಿಷ್ಯದಲ್ಲಿ ಕನ್ನಡ ಭಾಷೆಯಲ್ಲಿಯೇ ವೈದ್ಯಕೀಯ ಶಿಕ್ಷಣ ಪಡೆಯಲು ಈ ಸಮ್ಮೇಳನ ಪ್ರೇರಕವಾಗಲಿದೆ ಎಂದರು.
ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಘಟಕದ ಆಶ್ರಯದಲ್ಲಿ 2017 ರಲ್ಲಿ ವೈದ್ಯ ಬರಹಗಾರರ ಬಳಗ ಅಸ್ತಿತ್ವಕ್ಕೆ ಬಂದಿದ್ದು, ಅತ್ಯುತ್ತಮ ವೈದ್ಯ ಬರಹಗಾರರಿಗೆ “ಶ್ರೇಷ್ಠ ವೈದ್ಯ ಸಾಹಿತಿ ” ಪ್ರಶಸ್ತಿ ನೀಡುತ್ತ ಬದಲಾಗಿದೆ. 2018 ರ ಶ್ರೇಷ್ಠ ವೈದ್ಯ ಸಾಹಿತಿ ಪ್ರಶಸ್ತಿಗೆ ಬಾದಾಮಿಯ ಡಾ.ಕರವೀರಪ್ರಭು ಕ್ಯಾಲಕೊಂಡ ಮತ್ತು ಶಿವಮೊಗ್ಗದ ಡಾ.ಶುಭಲತಾ ಭಾಜನರಾಗಿದ್ದು, ಅವರಿಗೆ ಕುಲಪತಿ ಡಾ.ಸಚ್ಚಿದಾನಂದ, ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರಾದ ಮನು ಬಳೆಗಾರ, ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಎಸ್. ಪಿ.ಯೋಗಣ್ಣ,ಐ.ಎಮ್. ಎ.ಕರ್ನಾಟಕ ರಾಜ್ಯ ಘಟಕದ ರಾಜ್ಯಾಧ್ಯಕ್ಷರಾದ ಡಾ.ಅನ್ನದಾನಿ ಮೇಟಿ, ನಿಯೋಜಿತ ಅಧ್ಯಕ್ಷರಾದ ಡಾ.ಮಧುಸೂಧನ, ಮಾಜಿ ಅಧ್ಯಕ್ಷ ಡಾ.ಯೋಗಾನಂದರಡ್ಡಿ,
ಸ್ಥಳೀಯ ಸಂಘಟಿಕರು ಪ್ರಶಸ್ತಿ ಪ್ರದಾನ ಮಾಡಿದರು.

ವೈದ್ಯರು, ವೈದ್ಯಕೀಯ ಸೇವೆ ಮತ್ತು ತಲ್ಲಣಗಳು, ವಿನೋದ ಪ್ರಸಂಗಗಳು, ತಾಯಿ ಮಕ್ಕಳ ಆರೋಗ್ಯ, ಕನ್ನಡ ಸಾಹಿತ್ಯಕ್ಕೆ ವೈದ್ಯರ ಕೊಡುಗೆ, ವೈದ್ಯರು ಮತ್ತು ಪತ್ರಿಕಾ ಅಂಕಣಗಳು ಹೀಗೆ ಆರು ಗೋಷ್ಠಿಗಳು, ಕವಿಗೋಷ್ಠಿ ಎಲ್ಲವೂ ಅಚ್ಚುಕಟ್ಟಾಗಿ ನಡೆದವು.ಎಲ್ಲವನ್ನೂ ನಿಗದಿ ಪಡಿಸಿದ ಕಾಲಾವಧಿಯಲ್ಲಿಯೇ ಮುಗಿಸಿ ಸಮಯ ಪ್ರಜ್ಞೆ ಮೆರೆದದ್ದರಿಂದ, ಸಾಹಿತ್ಯ ಸಮ್ಮೇಳನದಲ್ಲೂ ಇದು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಲ್ಲದೇ, ಮಾದರಿ ಸಾಹಿತ್ಯ ಸಮ್ಮೇಳನ ಹೇಗಿರಬೇಕು ಎಂಬುದಕ್ಕೆ ದಿಕ್ಸೂಚಿಯಾಯಿತು.
ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಘಟಕದ ರಾಜ್ಯಾಧ್ಯಕ್ಷರಾದ ಡಾ. ಅನ್ನದಾನಿ ಮೇಟಿ ಮಾತನಾಡಿ ಇಂಥ ಸಮ್ಮೇಳನಗಳು ಪ್ರತಿ ವರ್ಷ ಜರುಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರಲ್ಲದೇ, ದಾನಿಗಳ ಮನವೊಲಿಸಿ ದತ್ತಿ ಪ್ರಾರಂಭಿಸುವುದಾಗಿಯೂ ಹೇಳಿದರು. ಇಂದಿನ ಗೋಷ್ಠಿಯಲ್ಲಿ ಮಂಡಿಸಿದ ವಿಚಾರಗಳನ್ನು ಪುಸ್ತಕ ರೂಪದಲ್ಲಿ ಹೊರತಂದು ಚಾಮರಾಜನಗರದಲ್ಲಿ ಜರುಗುವ ವಾರ್ಷಿಕ ಸಮ್ಮೇಳನದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದರು. ಪ್ರಾರಂಭದಲ್ಲಿ ನಾಡಗೀತೆ.ಮಂಗಳೂರು ಶಾಖೆಯ ಅಧ್ಯಕ್ಷರಾದ ಡಾ.ಬಿ.ಸಚ್ಚಿದಾನಂದ ರೈ ಯಿಂದ ಸ್ವಾಗತ. ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಡಾ.ಅಣ್ಣಯ್ಯ ಕುಲಾಲರಿಂದ ಪ್ರಾಸ್ತಾವಿಕ ನುಡಿ.ಕೊನೆಯಲ್ಲಿ ಸಂಘದ ಕಾರ್ಯದರ್ಶಿ ಡಾ.ಸುಧೀಂದ್ರ ರಾವ್ ವಂದನಾರ್ಪಣೆ ಮಾಡಿದರು.

ಸ್ವೀಕರಿಸಿದ ಗೊತ್ತುವಳಿಗಳು :
1.ಪ್ರತಿ ವರ್ಷ ಐ.ಎಮ್. ಎ.ವೈದ್ಯ ಬರಹಗಾರರ ಸಮ್ಮೇಳನವನ್ನು ಕರ್ನಾಟಕ ರಾಜ್ಯ ಭಾರತೀಯ ವೈದ್ಯಕೀಯ ಸಂಘದ ಅಡಿಯಲ್ಲಿ ಮಾಡುವುದು.
2.ಪ್ರತಿ ವರ್ಷ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿಯನ್ನು (ಒಬ್ಬರು ಪುರುಷ, ಒಬ್ಬರು ಮಹಿಳಾ ಸಾಹಿತಿ) ರಾಜ್ಯ ಶಾಖೆಯಿಂದ ಕೊಡುವುದು
3.ನಮ್ಮದೇ ಆದ ಪ್ರಸಾರಾಂಗವನ್ನು ಸ್ಥಾಪಿಸಿ, ಜನಾರೋಗ್ಯ ಜಾಗೃತಿಯನ್ನು ಮೂಡಿಸುವುದು.
4.ಪ್ರತಿ ವರ್ಷ ಪುಸ್ತಕ ಪ್ರಶಸ್ತಿ, ಅಂಕಣ ಪ್ರಶಸ್ತಿಗಳನ್ನು ಕೊಡುವುದು. ಸಂಬಂಧ ಪಟ್ಟ ಎಲ್ಲಾ ಪ್ರಶಸ್ತಿಗಳಿಗೆ ಮೂರು ತಿಂಗಳು ಮೊದಲೇ ಅರ್ಜಿ ಕರೆದು, ಅಮೂಲಾಗ್ರ ವಾಗಿ ನೇಮಕಗೊಂಡ ಸಮಿತಿ ಪರಿಶೀಲಿಸಿದ ಮೇಲೆ ಪ್ರಶಸ್ತಿಗಳನ್ನು ನಿರ್ಣಯಿಸುವುದು.
5.ಆಧುನಿಕ ವೈದ್ಯ ವಿಧ್ಯಾರ್ಥಿಗಳಿಗೆ,ಉದಯೋನ್ಮುಖ ಬರಹಗಾರರಿಗೆ ಕಾರ್ಯಾಗರ ಏರ್ಪಡಿಸಿ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ಕೊಡಿಸುವುದು.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!