ಸೇಬಿನ ಸೇವನೆ-ಸೋಂಕು ವಿರುದ್ಧ ರೋಗನಿರೋಧಕ ಶಕ್ತಿ ಬೆಳೆಸಿಕೊಳ್ಳಲು ಅತ್ಯುತ್ತಮ. ಸ್ವಾದಿಷ್ಟವಾಗಿರುವ ಮತ್ತು ತಿನ್ನುವಾಗ ವಿಶಿಷ್ಟವಾದ ರೀತಿಯಲ್ಲಿ “ಕರಕರ” ಎಂಬ ಸದ್ದನ್ನು ಮಾಡುವ ಸೇಬು ಹಣ್ಣನ್ನು ಮೆಚ್ಚದವರಿಲ್ಲ. ಹೀಗಾಗಿಯೇ ಇದು ಎಲ್ಲ ವಯೋಮಾನದವರಿಗೂ ಅತ್ಯಂತ ಪ್ರಿಯವಾದ ಹಣ್ಣಾಗಿದೆ. ಗರಿಷ್ಠ ಆರೋಗ್ಯಕ್ಕೆ ಅತ್ಯಗತ್ಯವಾಗಿರುವ ಪೋಷಕಾಂಶಗಳು ಸೇಬಿನಲ್ಲಿ ಹೇರಳವಾಗಿವೆ. ಅಷ್ಟೇ ಅಲ್ಲ, ಇದರಲ್ಲಿ ತುಂಬಿಕೊಂಡಿರುವ ಆಂಟಿಆಕ್ಸಿಡೆಂಟ್‍ಗಳು ಆರೋಗ್ಯವರ್ಧನೆಗೆ ನೆರವಾಗುವ ಮತ್ತು ರೋಗವನ್ನು ತಡೆಗಟ್ಟುವ ಲಕ್ಷಣಗಳನ್ನು ಹೊಂದಿವೆ. ಹೀಗಾಗಿ ಇದನ್ನು ‘ಹಣ್ಣಿನ ರೂಪದಲ್ಲಿರುವ ಧನ್ವಂತರಿ’ ಎಂದು ಅವಶ್ಯವಾಗಿ ಕರೆಯಬಹುದೇನೋ?!!
ರೋಸೇಸಿ ಎಂಬ ವಂಶಕ್ಕೆ ಸೇರಿದ ಮಧ್ಯಮಗಾತ್ರದ ಮರಗಳಿಂದ ಸೇಬುಗಳನ್ನು ಪಡೆಯಲಾಗುತ್ತದೆ. ಕಝಕ್‍ಸ್ಥಾನ್‍ನ ಖನಿಜ-ಸಮೃದ್ಧ ಪರ್ವತಶ್ರೇಣಿಗಳಲ್ಲಿ ಈ ಮರಗಳು ಹುಟ್ಟಿಕೊಂಡವಾದರೂ, ಈಗ ಇವನ್ನು ವಿಶ್ವದ ಅನೇಕ ಭಾಗಗಳಲ್ಲಿ ಬೆಳೆಸಲಾಗುತ್ತದೆ. ಭಾರತದಲ್ಲಿ ಕಾಶ್ಮೀರಿ ಸೇಬು, ಸಿಮ್ಲಾ ಸೇಬು ಎಷ್ಟೊಂದು ಜನಪ್ರಿಯ ಎಂಬುದು ನಿಮಗೆ ಗೊತ್ತು. ವಿಶಿಷ್ಟವೆನಿಸುವಂಥ ಆಕಾರದಲ್ಲಿರುವ ಸೇಬುಹಣ್ಣಿನ ಹೊರಗಿನ ಸಿಪ್ಪೆಯು ಕೆಂಪು, ಹಳದಿ, ಕೆನೆ ಬಣ್ಣ ಅಥವಾ ಈ ಎಲ್ಲ ಬಣ್ಣಗಳ ಮಿಶ್ರಣವಾಗಿರಲು ಸಾಧ್ಯವಿದೆ.
ಕೆಲವೊಮ್ಮೆಯಂತೂ ಇಡೀ ಹಣ್ಣು ಅಪ್ಪಟ ಕೆಂಪಗಿದ್ದು ಲಘುವಾಗಿ ಉಜ್ಜಿದಾಗ ಅದಕ್ಕೆ ಹೊಳಪು ಬರುವುದನ್ನು ನಾವು ಕಾಣಬಹುದು. ಒಟ್ಟಿನಲ್ಲಿ ಹೇಳುವುದಾದರೆ ಸೇಬಿನ ತಳಿಯನ್ನು ಆಧರಿಸಿ ಅದರ ಹೊರಗಿನ ಸಿಪ್ಪೆಯ ಬಣ್ಣವು ಬದಲಾಗುತ್ತಾ ಹೋಗುತ್ತದೆ. ರಸಭರಿತವಾದ ಒಳಗಿನ ತಿರುಳು ಮಾಸಲು ಬಿಳುಪಿನಿಂದ ಮೊದಲ್ಗೊಂಡು ಕೆನೆಯ ಬಣ್ಣದವರೆಗೆ ಇರುತ್ತದೆ ಹಾಗೂ ಲಘು ಸಿಹಿರುಚಿ ಮತ್ತು ಕಟುರುಚಿಯ ಒಂದು ಹದವಾದ ಮಿಶ್ರಣವನ್ನು ಇದು ಒಳಗೊಂಡಿರುತ್ತದೆ. ಆದರೆ ಬೀಜಗಳು ಕಹಿಯಾಗಿರುತ್ತವೆಯಾದ್ದರಿಂದ ಅದು ಖಾದ್ಯಯೋಗ್ಯವಲ್ಲ.
ಸೇಬಿನಿಂದ ದೊರೆಯುವ ಆರೋಗ್ಯ-ಸಂಬಂಧಿ ಪ್ರಯೋಜನಗಳು:
1.ಸ್ವಾದಿಷ್ಟಕರವಾಗಿರುವ ಸೇಬು ಹಣ್ಣು ದೇಹದ ಬೆಳವಣಿಗೆಗೆ ಮತ್ತು ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳ ಆಗರವಾಗಿದೆ.
ಸೇಬುಗಳಲ್ಲಿ ಕ್ಯಾಲೊರಿಗಳ ಪ್ರಮಾಣ ಕಡಿಮೆಯಿರುತ್ತದೆ. ಪರ್ಯಾಪ್ತ-ಕೊಬ್ಬುಗಳು ಅಥವಾ ಕೊಲೆಸ್ಟರಾಲ್ ಇದರಲ್ಲಿ ಇರುವುದಿಲ್ಲವಾದರೂ, ನಾರಿನಂಶ ಸಮೃದ್ಧವಾಗಿರುತ್ತದೆ. ಆಹಾರಕ್ರಮದಲ್ಲಿ ಸೇಬನ್ನು ಯಾವ ಕಾರಣಕ್ಕಾಗಿ ಸೇರಿಸಿಕೊಳ್ಳಬೇಕು ಎಂಬುದಕ್ಕೆ ಈ ಅಂಶಗಳು ಪುಷ್ಟಿ ನೀಡುತ್ತವೆ.
2.ಸೇಬು ಹಣ್ಣಿನಲ್ಲಿ ಸಿ-ಅನ್ನಾಂಗ ಹಾಗೂ ಬೀಟಾ ಕ್ಯಾರೊಟೀನ್ ಅಂಶಗಳು ಹೇರಳವಾಗಿವೆ. ಸಿ-ಅನ್ನಾಂಗವು ಒಂದು ಶಕ್ತಿಯುತವಾದ ಮತ್ತು ಸ್ವಾಭಾವಿಕವಾದ ಆಂಟಿಆಕ್ಸಿಡೆಂಟ್ ಎನಿಸಿಕೊಂಡಿದೆ. ಹೀಗಾಗಿ ಸೇಬಿನ ಸೇವನೆಯಿಂದ ಸೋಂಕುಕಾರಕ ವಸ್ತುಗಳ ವಿರುದ್ಧ ದೇಹವು ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಲು ಸಹಾಯವಾಗುತ್ತದೆ ಹಾಗೂ ದೇಹಕ್ಕೆ ಹಾನಿಕಾರಕವಾದ ವಸ್ತುಗಳು ದೇಹದಿಂದ ಹೊರಗೆ ತಳ್ಳಲ್ಪಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
3.ಸೇಬಿನಲ್ಲಿ ಸಣ್ಣ ಪ್ರಮಾಣದಲ್ಲಿ ಪೊಟಾಷಿಯಂ ಮತ್ತು ಕ್ಯಾಲ್ಷಿಯಂನಂಥ ಖನಿಜ ಪದಾರ್ಥಗಳಿರುತ್ತವೆ; ಪೊಟಾಷಿಯಂ ಖನಿಜವು ಜೀವಕೋಶಗಳಲ್ಲಿನ ಒಂದು ಪ್ರಮುಖ ಘಟಕಾಂಶವಾಗಿರುವುದರಿಂದ, ಹೃದಯದ ಬಡಿತ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
4.ತಾಜಾ ಸೇಬುಗಳು ಎಲ್ಲಾ ಋತುಗಳಲ್ಲೂ ಸಿಗುತ್ತವೆ. ಸೇಬುಗಳನ್ನು ಕೋಣೆಯ ತಾಪಮಾನದಲ್ಲಿ ತಾಜಾ ಆಗಿ ಕೆಲದಿನಗಳವರೆಗೆ ಇರಿಸಿಕೊಳ್ಳಬಹುದು. ರೆಫ್ರಿಜಿರೇಟರ್‍ನಲ್ಲಿ ಎರಡರಿಂದ ಮೂರು ವಾರಗಳವರೆಗೆ ತಾಜಾ ಆಗಿಯೇ ಇರುತ್ತದೆ. ಹಾಗಂತ ಸೇಬು ಕೈಗೆ ಸಿಕ್ಕಿದ ತಕ್ಷಣ ಅದನ್ನು ಕಚ್ಚಿತಿನ್ನದೇ, ಮೊದಲು ಅದನ್ನು ಶುದ್ಧವಾದ ತಣ್ಣೀರಿನಲ್ಲಿ ತೊಳೆಯಬೇಕು. ಸಿಪ್ಪೆಯ ಮೇಲೆ ಜಮಾವಣೆಗೊಂಡಿರುವ ಧೂಳು ಹಾಗೂ ಕೀಟನಾಶಕಗಳ ಉಳಿಕೆಯನ್ನು ತೊಡೆದುಹಾಕುವಲ್ಲಿ ಈ ಕ್ರಮವು ನೆರವಾಗುತ್ತದೆ.
5.ಸೇಬನ್ನು ಸಿಪ್ಪೆಯ ಸಮೇತ ಕಚ್ಚಿ ತಿನ್ನಬೇಕು; ಹೀಗಾದಾಗಲೇ ಗರಿಷ್ಟ ಪ್ರಮಾಣದ ಆರೋಗ್ಯ-ಸಂಬಂಧಿ ಪ್ರಯೋಜನಗಳು ದೊರೆಯಲು ಸಾಧ್ಯ. ಒಂದು ಸೇಬುಹಣ್ಣನ್ನು ಇಡಿಯಾಗಿ ತಿಂದರೆ, ಅದು ಪಚನಗೊಳ್ಳಲು ಸುಮಾರು ಒಂದೂವರೆ ಗಂಟೆಯಷ್ಟು ಸಮಯ ಹಿಡಿಯುತ್ತದೆ. ಸೇಬಿನ ಹೋಳುಗಳನ್ನು ಕತ್ತರಿಸಿಟ್ಟರೆ ಅವು ಗಾಳಿಗೆ ಒಡ್ಡಿಕೊಂಡು ಸ್ವಲ್ಪ ಹೊತ್ತಿಗೆಲ್ಲಾ ಕಂದುಬಣ್ಣಕ್ಕೆ ತಿರುಗುತ್ತವೆ. ಅದರಲ್ಲಿರುವ ಫೆರಸ್ ಆಕ್ಸೈಡು, ಫೆರಿಕ್ ಆಕ್ಸೈಡ್ ಆಗಿ ಪರಿವರ್ತನೆಗೊಳ್ಳುವುದೇ ಇದಕ್ಕೆ ಕಾರಣ. ಆದ್ದರಿಂದ ಒಂದು ವೇಳೆ ಹೋಳುಗಳಾಗಿ ಕತ್ತರಿಸಿ ತಿನ್ನಬೇಕೆಂದಿದ್ದರೆ, ತಾಜಾ ನಿಂಬೆಹಣ್ಣಿನ ರಸದ ಕೆಲವು ಹನಿಗಳನ್ನು ಬೆರೆಸಿರುವ ನೀರಿನಲ್ಲಿ ಹೋಳುಗಳನ್ನು ನೆನೆಸಿಡುವುದು ಸೂಕ್ತ.
6.ಹಣ್ಣಿನ ಜಾಮ್, ಹಣ್ಣಿನ ಸಲಾಡ್ ಇತ್ಯಾದಿಗಳ ತಯಾರಿಕೆಯಲ್ಲೂ ಸೇಬನ್ನು ಬಳಸಲಾಗುತ್ತದೆ. ಸೇಬಿನ ರಸವನ್ನು ಊಟದೊಂದಿಗೆ ಕೆಲವರು ಸೇವಿಸುವುದುಂಟು.
7.ಸೇಬಿನಿಂದ ಸೌಂದರ್ಯವನ್ನೂ ಹೆಚ್ಚಿಸಿಕೊಳ್ಳಬಹುದು. ಸೇಬಿನ ತಿರುಳನ್ನು ಚೆನ್ನಾಗಿ ನಯಗೊಳಿಸಿ ಮುಖಕ್ಕೆ ಲೇಪಿಸಿಕೊಂಡರೆ ಮುಖದ ಕಾಂತಿ ಹೆಚ್ಚುವುದೇ ಅಲ್ಲದೇ ಮುಖದ ಮೇಲಿನ ಕಲೆಗಳೂ ಸಹ ಹೇಳಹೆಸರಿಲ್ಲದಂತೆ ಮಾಯವಾಗುತ್ತವೆ. ಚರ್ಮದ ಮೇಲೆ ಬೊಕ್ಕೆಗಳಿದ್ದರೆ ಹುಳಿಸೇಬಿನ ರಸವನ್ನು ಹಚ್ಚುವುದರಿಂದ ಬೊಕ್ಕೆಗಳು ಒಣಗಿ ಬೀಳುತ್ತವೆ.
8.ಸೇಬುಹಣ್ಣನ್ನು ಕ್ರಮಬದ್ಧವಾಗಿ ಸೇವಿಸುವುದರಿಂದ ಎದೆಯಲ್ಲಿರುವ ಕಫ ಕರಗುತ್ತದೆ. ಅಷ್ಟೇ ಅಲ್ಲ, ನಿಮ್ಮ ಹಲ್ಲುಗಳು ಹಾಗೂ ಒಸಡುಗಳು ದೃಢವಾಗಿರಬೇಕೆಂದರೆ ಒಂದು ಇಡೀ ಸೇಬನ್ನು ಕಚ್ಚಿ ತಿನ್ನಬೇಕು. ಸೇಬಿನ ಎಲೆಯಲ್ಲಿ ‘ಫ್ಲೊರೆಟಿನ್’ ಎಂಬ ರಾಸಾಯನಿಕ ಅಂಶವಿರುತ್ತದೆ. ಇದು ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ ಎಂಬುದು ಗಮನಾರ್ಹ ಅಂಶ. ಸೇಬಿನ ಎಲೆಯ ಕಷಾಯವನ್ನು ಸೇವಿಸಿದರೆ ಗಂಟಲು ನೋವು ಗುಣವಾಗುತ್ತದೆ.
9.ಸೇಬಿನಲ್ಲಿ ಫಾಸ್ಫೋರಸ್ ಮತ್ತು ಕಬ್ಬಿಣಾಂಶಗಳು ತುಂಬಿಕೊಂಡಿವೆ. ಮೆದುಳಿಗೆ ಮತ್ತು ಶರೀರಕ್ಕೆ ಇದು ಉತ್ತಮ ಪೋಷಕ ಆಹಾರವಾಗಿದೆ. ಇದು ಶರೀರವನ್ನು ಬಲಿಷ್ಠವನ್ನಾಗಿ ಮಾಡುವುದಲ್ಲದೆ ಬುದ್ಧಿಯನ್ನು ಚುರುಕುಗೊಳಿಸುತ್ತದೆ. ಯಕೃತ್‍ನ ಕಾರ್ಯಕ್ಷಮತೆಯನ್ನೂ ಇದು ಹೆಚ್ಚಿಸುತ್ತದೆ. ಕ್ಷಯರೋಗಕ್ಕೆ ಇದು ಉಪಯುಕ್ತ ಔಷಧವಾಗಿದೆ. ಸೇಬಿನ ಸೇವನೆಯಿಂದ ಮೇಧಸ್ಸಿನಲ್ಲಿ ಹೆಚ್ಚಳವಾಗಿ ಶರೀರದಲ್ಲಿ ಶಕ್ತಿಯ ಸಂಚಾರವಾಗುತ್ತದೆ.
10.ಸೇಬು ಹಣ್ಣಿಗೆ ಜ್ಞಾಪಕಶಕ್ತಿಯನ್ನು ಹೆಚ್ಚಿಸುವ ಸಾಮಥ್ರ್ಯವಿದೆ. ಸೇಬುಹಣ್ಣಿನ ಸೇವನೆಯಿಂದ ತಡೆಗೊಂಡಿರುವ ಮೂತ್ರ ಹೊರಬರುತ್ತದೆ. ವೀರ್ಯವೃದ್ಧಿಗೆ ಸೇಬು ದಿವ್ಯೌಷಧವೆನ್ನುತ್ತಾರೆ. ಸೇಬುಹಣ್ಣಿಗೆ ಕೊಂಚವೇ ಉಪ್ಪನ್ನು ಲೇಪಿಸಿ ತಿನ್ನುವುದರಿಂದ ತಲೆನೋವು ಕಡಿಮೆ ಆಗುತ್ತದೆ.
ಡಾ|| ಮಂಜುಶ್ರೀ
ಪೂರ್ಣಾಯು ಕ್ಲಿನಿಕ್, ಎನ್‌ಹೆಚ್ 66,
ಶಾನ್‌ಬಾನ್ ಟ್ರೇಡರ‍್ಸ ಎದುರು, ತಡಂಬೈಲು