ಹೇರ್ ಪ್ರಾಡಕ್ಟ್‍ಗಳ ಅತಿಯಾದ ಬಳಕೆಯೇ ಕೂದಲು ಉದುರುವುದಕ್ಕೆ ಕಾರಣ.ಹೇರ್ ಕೇರ್ ಪ್ರಾಡಕ್ಟ್‍ಗಳನ್ನು ಎಚ್ಚರಿಕೆಯಿಂದ ಬಳಸದಿದ್ದರೆ ವಾಸ್ತವವಾಗಿ ನಿಮ್ಮ ಕೂದಲಿಗೆ ಸಾಕಷ್ಟು ಹಾನಿಯುಂಟು ಮಾಡಬಹುದು.
ನಾವು ಕೂದಲು ಉದುರುವುದರ ಬಗ್ಗೆ ನಿರಂತರವಾಗಿ ಚಿಂತಿಸುತ್ತವೆ, ಆದರೆ ನಿರಂತರ ಚಿಂತೆಯಿಂದ ನಮಗೆ ಹಾನಿಯಾಗುತ್ತದೆ ಹಾಗೂ ವಿಪರೀತ ಕೂದಲು ಉದುರುವುದಕ್ಕೆ ಕಾರಣವಾಗುತ್ತದೆ ಎಂಬುದನ್ನು ನಾವು ಮರೆಯುತ್ತೇವೆ. ಕೂದಲು ಉದುರುವಿಕೆಯು ತೀರಾ ಸಾಮಾನ್ಯ ಸಂಗತಿಯಾಗಿದ್ದು, ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಕನಿಷ್ಠ ಒಂದು ಬಾರಿಯಾದರೂ ಇದರ ಪ್ರಭಾವಕ್ಕೆ ಒಳಗಾಗಿಯೇ ಇರುತ್ತಾರೆ. ಕೂದಲು ಉದುರುವುದರ ಬಗ್ಗೆ ಕೆಲವು ಮಂದಿ ಸಾಕಷ್ಟು ತೊಂದರೆ ಅನುಭವಿಸಿದ್ದರೆ, ಇನ್ನು ಕೆಲವರು ಅದನ್ನು ಹೇಗೋ ನಿರ್ವಹಣೆ ಮಾಡುತ್ತಾರೆ.
ಎಚ್ಚರಿಕೆಯಿಂದ ಬಳಸದಿದ್ದರೆ ಕೂದಲಿಗೆ ಸಾಕಷ್ಟು ಹಾನಿ:
ಕೆಲವರು ತಮ್ಮ ಕೂದಲುಗಳ ಆರೈಕೆಗಾಗಿ ಸಾಧ್ಯವಾಗುವ ಎಲ್ಲ, ಪ್ರತಿಯೊಂದು ಕಸರತ್ತುಗಳನ್ನು ಪ್ರಯತ್ನಿಸುತ್ತಾರೆ. ಕೆಲವರು ತಮ್ಮ ಕೂದಲನ್ನು ಸೂರ್ಯನಿಂದ ರಕ್ಷಿಸಿಕೊಳ್ಳಲು ಕೊಡೆ ಸಹ ಬಳಸುತ್ತಾರೆ ಮತ್ತು ಮಾರುಕಟ್ಟೆಯಲ್ಲಿ ತುಂಬಾ ದುಬಾರಿಯಾದ ವಿವಿಧ ಹೇರ್ ಪ್ರಾಡಕ್ಟ್‍ಗಳನ್ನು ಪ್ರಯತ್ನಿಸುತ್ತಾರೆ. ಆದರೆ ಸತತವಾಗಿ ಕೂದಲ ಆರೈಕೆ ಉತ್ಪನ್ನಗಳ ಬಳಕೆಯು ಕೂದಲು ಉದುರುವುದನ್ನು ತಡೆಗಟ್ಟುವುದಕ್ಕೆ ಪರಿಹಾರವಲ್ಲ ಎಂಬ ಸತ್ಯ ಸಂಗತಿಯನ್ನು ನಾವು ಮರೆತಿರುತ್ತೇವೆ. ನಿಮ್ಮ ಹೇರ್ ಶಾಂಪೂ, ಹೇರ್ ಆಯಿಲ್, ಹೇರ್ ಗೆಲ್, ಹೇರ್ ಕಂಡಿಷನರ್, ಹೇರ್ ಡೈ ಅಥವಾ ಹೇರ್ ಕಲರಿಂಗ್ ಇತ್ಯಾದಿ ಹೇರ್ ಕೇರ್ ಪ್ರಾಡಕ್ಟ್‍ಗಳನ್ನು ಎಚ್ಚರಿಕೆಯಿಂದ ಬಳಸದಿದ್ದರೆ ವಾಸ್ತವವಾಗಿ ನಿಮ್ಮ ಕೂದಲಿಗೆ ಸಾಕಷ್ಟು ಹಾನಿಯುಂಟು ಮಾಡಬಹುದು. ಅಲ್ಲದೇ ನಿಮ್ಮ ಕೂದಲಿಗೆ ಕೇಶ ವಿನ್ಯಾಸಕ್ಕೋ ಅಥವಾ ಹೇರ್ ಸ್ಟೈಲ್‍ಗೋ ನೀವು ಮಾಡಿಕೊಳ್ಳುವ ಆಯ್ಕೆಯು ವಿಪರೀತ ಕೂದಲು ಉದುರುವಿಕೆಗೆ ಕೊಡುಗೆ ನೀಡುತ್ತದೆ.
ಇಂದಿನ ವಿಶ್ವದಲ್ಲಿ, ಸೌಂದರ್ಯದ ಪರಿಕಲ್ಪನೆಯು ಅಗಾಧವಾಗಿ ಬದಲಾವಣೆಯಾಗಿದೆ. ಸೌಂದರ್ಯವನ್ನು ಕೂದಲು ಮತ್ತು ಚಂದದೊಂದಿಗೆ ಗುರುತಿಸಲಾಗುತ್ತದೆ. ತಮ್ಮ ಸೌಂದರ್ಯ ಆರೈಕೆಗಾಗಿ ಅನೇಕರು ವಿವಿಧ ಕ್ರೀಮ್‍ಗಳು, ಪೌಡರ್‍ಗಳು, ಶಾಂಪೂಗಳು, ಆಯಿಲ್‍ಗಳು, ಕಂಡಿಷನರ್‍ಗಳು ಮತ್ತು ಅಗತ್ಯವಾದ ಎಲ್ಲವನ್ನು ಬಳಸುತ್ತಾರೆ. ಆದರೆ ಇವುಗಳಿಂದ ದೊಡ್ಡ ಫಲಿತಾಂಶ ಲಭಿಸದಿದ್ದರೆ ಆ ಬಗ್ಗೆ ಯಾರೂ ದೂರು ನೀಡುವುದಿಲ್ಲ. ನಮ್ಮಲ್ಲಿ ಕೆಲವರು ಕೇವಲ ಅವುಗಳನ್ನು ಬಳಸಬೇಕೆಂಬ ಉದ್ದೇಶಕ್ಕಾಗಿ ಮಾತ್ರ ಬ್ಯೂಟಿ ಪ್ರಾಡಕ್ಟ್‍ಗಳನ್ನು ಉಪಯೋಗಿಸುತ್ತಾರೆ. ಕ್ಲಿನಿಕ್‍ಗೆ ಬರುವ ಅನೇಕ ಮಹಿಳೆಯರು ತಮ್ಮ ಕೂದಲು ವಿಪರೀತ ಉದುರುತ್ತಿರುವುದರ ಬಗ್ಗೆಯೇ ಪ್ರಸ್ತಾಪಿ ಪರಿಹಾರ ಕೋರುತ್ತಾರೆ. ತಮ್ಮ ತಲೆಯಲ್ಲಿ ಸೊಂಪಾದ ಕೂದಲು ಇರಬೇಕೆಂಬುದು ಅವರ ಇರಾದೆಯಾಗಿರುತ್ತದೆ. ನಿಮ್ಮ ಕೂದಲ ಆರೈಕೆಯಾಗಿ ಈಗ ಏನು ಉಪಯೋಗಿಸುತ್ತಿರುವಿರಿ ಎಂದು ನಾನು ಪ್ರಶ್ನಿಸಿದಾಗ ಅವರು ಎಲ್ಲ ಪ್ರಸಿದ್ಧ ಬ್ರಾಂಡ್‍ಗಳ ಶಾಂಪೂಗಳು, ಕಂಡಿಷನರ್‍ಗಳು ಮತ್ತು ಆಯಿಲ್‍ಗಳ ಹೆಸರುಗಳನ್ನು ಹೇಳುತ್ತಾರೆ. ಅವರು ಅದನ್ನು ನಿರಂತರವಾಗಿ ಬಳಸುತ್ತಾರೆ ಮತ್ತು ಅವು ಕೆಲಸ ಮಾಡದಿದ್ದಾಗ ಪದೇ ಪದೇ ಬ್ರಾಂಡ್‍ಗಳನ್ನು ಬದಲಿಸುತ್ತಾರೆ.
ಅನೇಕ ಮಂದಿ ತಮ್ಮ ತಲೆಯಲ್ಲಿ ಸಮೃದ್ಧ ಕೂದಲು ಬರುತ್ತದೆ ಎಂದು ಭಾವಿಸಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲ ಹೇರ್ ಕೇರ್ ಪ್ರಾಡಕ್ಟ್‍ಗಳನ್ನು ಪ್ರಯತ್ನಿಸುತ್ತಾರೆ ಎಂದು ನನಗೆ ಅನ್ನಿಸುತ್ತದೆ. ಆದರೆ, ಕಟ್ಟ ಕಡೆಯ ಫಲಿತಾಂಶವೆಂದರೆ ಸಾಕಷ್ಟು ಕೂದಲು ಬಾಚಣಿಗೆಯಲ್ಲಿರುತ್ತದೆ. ನಂತರ ನಾವು ಇದಕ್ಕಾಗಿ ಯಾರ ಬಳಿ ಮೊರೆ ಹೋಗಬೇಕು ಎಂಬುದನ್ನು ಹುಡುಕುತ್ತೇವೆ. ಆದರೆ ಒಂದು ತಿಂಗಳಿನಲ್ಲಿ ಕೂದಲು ಉದುರುವಿಕೆ ನಿಲ್ಲುತ್ತದೆ ಎಂದು ಟೆಲಿವಿಷನ್ ಜಾಹೀರಾತಿನಲ್ಲಿ ಸವಾಲು ಹಾಕುವ ಶಾಂಪೂ ಕಂಪನಿಯ ಮಂದಿಯನ್ನು ನಿಮ್ಮ ಉತ್ಪನ್ನವು ಕೆಲಸ ಮಾಡಲಿಲ್ಲ ಎಂದು ಪ್ರಶ್ನಿಸುವ ಮತ್ತು ತಮ್ಮ ಹಣವನ್ನು ವಾಪಸ್ ನೀಡುವಂತೆ ದೂರು ನೀಡುವ ಗೋಜಿಗೆ ನಾವು ಹೋಗುವುದಿಲ್ಲ. ಇದು ವಾಸ್ತವ ಸಂಗತಿ. ನಾವು ಮಾಡುವ ಕೆಲಸವೆಂದರೆ ಇದನ್ನು ‘ನಿರ್ಲಕ್ಷಿಸಿ’ ಶಾಂಪೂವನ್ನು ಬದಲಾಯಿಸುತ್ತೇವೆ.
ಉತ್ತಮ ರೀತಿಯಲ್ಲಿ ನಿಮ್ಮ ಕೂದಲನ್ನು ಆರೈಕೆ ಮಾಡುವಿಕೆ :
ಅನೇಕ ಕಾರಣಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಹಾಗೂ ಬದಲಿಸುವುದು ನಮ್ಮ ಕೈಯಲ್ಲಿ ಇರುವುದಿಲ್ಲ. ಆದಾಗ್ಯೂ, ಉತ್ತಮ ರೀತಿಯಲ್ಲಿ ನಮ್ಮ ಕೂದಲನ್ನು ನಾವು ಆರೈಕೆ ಮಾಡಬಹುದಾಗಿರುತ್ತದೆ. ನೀವು ಕೆಲವು ಆಹಾರಗಳು ಹಾಗೂ ಜೀವನಶೈಲಿ ಬದಲಾವಣೆಯನ್ನು ಆಯ್ಕೆ ಮಾಡಿಕೊಳ್ಳಬಹುದು ಹಾಗೂ ಆಯುರ್ವೇದ ವೈದ್ಯರೊಬ್ಬರನ್ನು ಭೇಟಿ ಮಾಡಿ ಸಲಹೆ ಪಡೆಯಬಹುದು. ಕೂದಲು ಉದುರುವಿಕೆ ಸಮಸ್ಯೆಯನ್ನು ನಿವಾರಿಸಲು ಆಯುರ್ವೇದ ತನ್ನದೇ ಆದ ವಿವಿಧ ವಿಧಾನ ಮತ್ತು ಪದ್ದತಿಗಳನ್ನು ಒಳಗೊಂಡಿದೆ.
ಆಯುರ್ವೇದದಲ್ಲಿ ವೈದ್ಯರು ಕೂದಲು ಉದುರುವ ಸಮಸ್ಯೆಯನ್ನು ನಿವಾರಿಸಲು ನಿರ್ವಿಷೀಕರಣ, ಆಂತರಿಕ ಔಷಧಿಗಳು ಹಾಗೂ ಆಯುರ್ವೇದ ಹೇರ್ ಪ್ಯಾಕ್‍ಗಳನ್ನು ಮಾಡುತ್ತಾರೆ. ನಸ್ಯ (ಮೂಗಿನ ಹೊಳ್ಳೆ ಮೂಲಕ ಔಷಧಿಗಳನ್ನು ಹಾಕುವಿಕೆ), ಕೂದಲು ಸಮಸ್ಯೆಗಳ ನಿವಾರಣೆಗೆ ಆಯುರ್ವೇದದಲ್ಲಿ ಉಲ್ಲೇಖಿಸಿರುವ ಒಂದು ಚಿಕಿತ್ಸಾ ವಿಧಾನವಾಗಿದೆ. ಕೂದಲಿನ ಸಮೃದ್ಧ ಬೆಳವಣಿಗೆಗಾಗಿ ಅಧಿಕ ತರಕಾರಿ ಜೀವಸತ್ವ ಆಹಾರಗಳನ್ನು ಬಳಸುವಂತೆ ಆಯುರ್ವೇದದಲ್ಲಿ ಸಲಹೆ ಮಾಡಲಾಗಿದೆ. ಆದಾಗ್ಯೂ, ಮಾಂಸ, ಹುರಿದ ಮತ್ತು ಮಸಾಲೆ ಆಹಾರಗಳು ಹಾಗೂ ಆಲ್ಕೋಹಾಲ್ ಮತ್ತು ಇತರ ಪೇಯಗಳ ವಿಪರೀತ ಬಳಕೆಗೆ ಇದು ಪ್ರತಿಕೂಲವಾಗಿರುತ್ತದೆ.
ನಿಮ್ಮ ಕೂದಲಿಗೆ ನೀವು ಏನು ನೀಡುತ್ತಿದ್ದೀರಿ ?
ಕೂದಲನ್ನು ಹೊರಗೆ ಮತ್ತು ಒಳಗೆ ಪೋಷಣೆ ಮಾಡುವುದು ತುಂಬಾ ಮುಖ್ಯ. ಉತ್ತಮ ಸಂತುಲಿತ ಆಹಾರವನ್ನು ಸೇವಿಸುವುದರಿಂದ ಕೂದಲನ್ನು ಉತ್ತಮ ರೀತಿಯಲ್ಲಿ ಹೊರಗಿನಿಂದ ಆರೈಕೆ ಮಾಡಬಹುದು ಹಾಗೂ ಗಿಡಮೂಲಿಕೆಯ ಆಧಾರದ ಶುದ್ಧೀಕರಣದ ಮೂಲಕ ಕೂದಲ ಒಳಭಾಗವನ್ನು ಪೋಷಣೆ ಮಾಡಬಹುದು. ಮೂಲತ: ಪಿತ್ತ ದೋಷದ ವಿಪರೀತ ಉಷ್ಣ ಮತ್ತು ಶುಷ್ಕತೆಯ ಪರಿಣಾಮಗಳಿಂದ ಕೂದಲನ್ನು ರಕ್ಷಿಸುವುದಕ್ಕೆ ಆದ್ಯತೆ ಕೊಡಲಾಗುತ್ತದೆ.
ಆದಾಗ್ಯೂ, ಇಂದಿನ ಒತ್ತಡದ ಬದುಕಿನಲ್ಲಿ ನಾವು ಇತರ ಸಂಗತಿಗಳಲ್ಲಿ ನಿರತರಾಗಿರುತ್ತೇವೆ ಹಾಗೂ ನಮ್ಮ ಆರೋಗ್ಯದ ಕಡೆ ಗಮನಹರಿಸುವುದನ್ನು ಮರೆತಿರುತ್ತೇವೆ. ಪ್ರತಿಯೊಬ್ಬರೂ ದೈಹಿಕವಾಗಿ ಮತ್ತು ಭೌತಿಕವಾಗಿ ತಮ್ಮನ್ನು ತಾವು ಆರೈಕೆ ಮಾಡಿಕೊಳ್ಳಬೇಕಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಈ ಶರೀರವು ಕೆಲಸಗಳನ್ನು ಮಾಡಲು ಅಥವಾ ಏನೋ ಒಂದನ್ನು ಸಾಧಿಸಲು ಇರುವ ಏಕಮಾತ್ರ ಮಾಧ್ಯಮವಾಗಿದೆ. ದೇಹಕ್ಕೆ ಬೇಕಾದ ಅಗತ್ಯದ ಕಡೆ ನಾವು ಗಮನಹರಿಸದಿದ್ದರೆ ಜೀವನದ ಗುರಿಗಳನ್ನು ಸಾಧಿಸಲು ನಾವು ವಿಫಲರಾಗುತ್ತೇವೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ದೇಹದ ಬಗ್ಗೆ ಅಗತ್ಯ ಆರೈಕೆ ಮಾಡಬೇಕು.
ಸೂಕ್ತವಾದ ಆಯುರ್ವೇದ ಶಾಂಪೂವನ್ನು ಆಯ್ಕೆ ಮಾಡಿಕೊಳ್ಳಿ
ನಮಗೆ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಶಾಂಪೂಗಳು ಲಭಿಸುತ್ತವೆ. ಶಾಂಪೂವಿನ ಏಕೈಕ ಕಾರ್ಯವೆಂದರೆ ಕೂದಲಿನ ಬುಡಕ್ಕೆ ಹಾನಿಯಾಗದಂತೆ ತಲೆಯನ್ನು ಸ್ವಚ್ಚಗೊಳಿಸುವುದಾಗಿರುತ್ತದೆ. ರಾಸಾಯನಿಕಗಳೊಂದಿಗೆ ನೆತ್ತಿಯ ಚರ್ಮವನ್ನು ಸ್ವಚ್ಚಗೊಳಿಸುವುದರ ಹೊರತಾಗಿ ಸಾಮಾನ್ಯ ಶಾಂಪೂಗಳಿಂದ ವಾಸ್ತವವಾಗಿ ಯಾವುದೇ ಪ್ರಯೋಜನ ಅಥವಾ ಉಪಯೋಗ ನನಗೆ ಕಂಡುಬಂದಿಲ್ಲ. ತಮ್ಮ ಕೂದಲಿನ ರೀತಿ ತಮ್ಮದೇ ಆದ ಗಿಡಮೂಲಿಕೆ ಶಾಂಪೂವನ್ನು ತಯಾರಿಸಿಕೊಳ್ಳುವಂತೆ ನಾನು ಜನರಿಗೆ ಸಲಹೆ ಮಾಡುತ್ತೇನೆ. ನಿಮ್ಮ ಕೂದಲಿನ ಗುಣಮಟ್ಟವನ್ನು ನೋಡಿ ಅದಕ್ಕೆ ಹೊಂದಿಕೊಳ್ಳುವಂಥ ಶಾಂಪೂವನ್ನು ತಯಾರಿಸಿ. ಉದಾಹರಣೆಗೆ ವಾತಾ ದೋಷದ ಕೂದಲುಗಳು, ಒಣ ಮತ್ತು ಬಿರುಸಾದ ಕೂದಲಿಗೆ ಮಾಯಿಶ್ಚರೈಸಿಂಗ್ ಶಾಂಪೂ ಅಗತ್ಯವಿರುತ್ತದೆ.
ಕೂದಲು ಉದುರುವಿಕೆಗೆ ತಲೆ ಹೊಟ್ಟು ಕಾರಣವಾಗಿದ್ದರೆ, ಮೊದಲು ನೀವು ತಲೆ ಹೊಟ್ಟನ್ನು ನಿರ್ಮೂಲನೆ ಮಾಡಬೇಕು. ಆನಂತರ ಕೂದಲು ಉದುರುವುದನ್ನು ತಡೆಗಟ್ಟುವ ಶಾಂಪೂವನ್ನು ಆಯ್ಕೆ ಮಾಡಿಕೊಳ್ಳಬೇಕು. ಕೂದಲನ್ನು ಸ್ವಚ್ಚಗೊಳಿಸಲು ಪ್ರತಿದಿನ ಶಾಂಪೂ ಬಳಸುವುದು ಸಲಹೆಗೆ ಯೋಗ್ಯವಲ್ಲ. ವಾರದಲ್ಲಿ ಎರಡು ಬಾರಿ ಅಥವಾ ಗರಿಷ್ಠವೆಂದರೆ ಮೂರು ಸಲ ಮಾತ್ರ ಶಾಂಪೂ ಬಳಸುವುದು ಉತ್ತಮ. ಕೂದಲನ್ನು ಸ್ವಚ್ಚಗೊಳಿಸುವ ಸಮಯವು, ಅದು ಮಾಲಿನ್ಯಕ್ಕೆ ಒಳಗಾಗುವ ಸಮಯವನ್ನು ಅವಲಂಬಿಸಿರುತ್ತದೆ. ಅಮೋನಿಯಂ ಮತ್ತು ಓಡಿಯಮ್ ಲಾರಿಲ್ ಸಲ್ಫೇಟ್ ರಾಸಾಯನಿಕಗಳನ್ನು ಹೊಂದಿರುವ ಶಾಂಪೂ ಬಳಸವುದನ್ನು ಸಾಧ್ಯವಾದಷ್ಟೂ ತಪ್ಪಿಸಿ. ಇವು ನಿಮ್ಮ ಕೂದಲಿಗೆ ತುಂಬಾ ಹಾನಿಕಾರಕ ರಾಸಾಯನಿಕಗಳಾಗಿರುತ್ತವೆ.
ನಿಮ್ಮದೇ ಆದ ಆಯುರ್ವೇದಿಕ್ ಶಾಂಪೂ ತಯಾರಿಸಿಕೊಳ್ಳಿ:
1. ಪುಡಿ ಶಾಂಪೂ : ನಿರಂತರವಾಗಿ ಮಾಲಿನ್ಯಕ್ಕೆ ಒಳಗಾಗುವ ಮಂದಿಯ ಕೂದಲು ತುಂಬಾ ಕೊಳೆ ಮತ್ತು ತೈಲದಿಂದ ಕೂಡಿರುತ್ತದೆ. ಅಂಥ ಮಂದಿಗೆ ಈ ಶಾಂಪೂ ಸೂಕ್ತವಾಗಿರುತ್ತದೆ. ಒಂದು ಟೀ ಚಮಚ ಪದ್ಮ ಪುಷ್ಕರ (ಓರಿಸ್) ಬೇರಿನ ಪುಡಿ ಮತ್ತು ಒಂದು ಟೀ ಚಮಚ ಸಮಪ್ರಮಾಣದ ಆರೋರೂಟ್ ಪುಡಿ ಹಾಗೂ ಎರಡು ಟೇಬಲ್ ಚಮಚ ಆಮ್ಲ, ನೀಮ್ ಮತ್ತು ಶ್ರೀಗಂಧದ ಪುಡಿಯನ್ನು ಮಿಶ್ರಣ ಮಾಡಿ. ಇವುಗಳನ್ನು ಚೆನ್ನಾಗಿ ಕಲೆಸಿ ಕೂದಲಿನ ಭಾಗಗಳ ಮೇಲೆ ಸಿಂಪಡಿಸಿ. 5 ರಿಂದ 10 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ಕೊಳೆ ಮತ್ತು ಎಣ್ಣೆ ಹೊರಗೆ ಬರುವ ತನಕ ಬ್ರಷ್ ಮಾಡಿ.
2. ತೇವ ಶಾಂಪೂ : ಶುಷ್ಕ ಮತ್ತು ಒರಟು ಕೂದಲು ಹೊಂದಿರುವ ಮಂದಿ ಇದನ್ನು ಬಳಸಬಹುದು. ಒಂದು ಟೀ ಚಮಚ ರೀತಾ ಪುಡಿ ಮತ್ತು ಎರಡು ಟೀ ಚಮಚ ಆಮ್ಲ, ಹೆನಾ ಮತ್ತು ಸಿಗೇಕಾಯಿ ಪುಡಿಯನ್ನು ಮಿಶ್ರಣ ಮಾಡಿ ಹಾಗೂ ಕಾಲು ಪಾತ್ರೆ ಕುದಿಯುವ ನೀರಿನ್ನು ಕುದಿಸಿ. ನಂತರ ಮಿಶ್ರಣದ ಮೇಲೆ ಕುದಿಯುವ ನೀರನ್ನು ಸುರಿಯಿರಿ. ಅದು ತಣ್ಣಗಾಗಲು ಬಿಡಿ. ಇದನ್ನು ನಿಯತ ಶಾಂಪೂವಾಗಿ ಬಳಸಬಹುದು.
3. ಆಯುರ್ವೇದಿಕ್ ಕಂಡಿಷನರ್ : ಮೂರು ಟೇಬಲ್ ಚಮಚ ಆಮ್ಲ ತೈಲ, ಒಂದು ಟೇಬಲ್ ಚಮಚ ತಾಜಾ ನಿಂಬೆ ರಸ, ಒಂದು ಮೊಟ್ಟೆಯ ಹಳದಿ ಲೋಳೆ ಮತ್ತು ಒಂದು ಟೀ ಚಮಚ ಜೇನು ಹಾಗೂ ಕೂದಲಿನ ಸ್ಥಿತಿಗೆ ಅನುಗುಣವಾಗಿ ಅಗತ್ಯವಿರುವ ಇತರ ತೈಲಗಳ ಕೆಲವು ಹನಿಗಳು. ಈ ಮಿಶ್ರಣವನ್ನು ರೆಗ್ಯೂಲರ್ ಕಂಡಿಷನರ್ ಆಗಿ ಬಳಸಬಹುದು. ಇದು ಕೂದಲಿನ ಸ್ವಾಭಾವಿಕ ಬಣ್ಣವನ್ನು ವೃದ್ಧಿಸಲು ನೆರವಾಗುತ್ತದೆ ಹಾಗೂ ಕೂದಲು ಉದುರುವುದನ್ನು ತಪ್ಪಿಸಿ ಹೊಳಪು ನೀಡುತ್ತದೆ.
ಡಾ. ವಿಭೂತಿ ಎಸ್. ರಾವ್
ಅಮೃತ್ ಆಯುರ್ವೇದ ಸೆಂಟರ್
66/3, ವಾಣಿವಿಲಾಸ್ ರಸ್ತೆ, ಬಸವನಗುಡಿ, ಬೆಂಗಳೂರು-560004
ಫೋನ್ : 9972060989
Email : drvibhuthirao@gmail.com
Web : www.amruthayurvedic.com