ಹದಿಹರೆಯದ ತರುಣಿಯರ ಸಮಸ್ಯೆಗಳು

ಹದಿಹರೆಯದ ತರುಣಿಯರ ಸಮಸ್ಯೆಗಳು ಹಲವಾರು.ಮಾನಸಿಕ ತೊಂದರೆಗಳಲ್ಲದೇ ಕಿಶೋರಿಯಲ್ಲಿ ‘ಶಾರೀರಿಕ ಸಮಸ್ಯೆಗಳು’ ಹಲವಾರು ಇರುತ್ತವೆ. ಅವುಗಳಲ್ಲಿ ಮುಖ್ಯವಾಗಿ, ಮುಟ್ಟಾಗುವುದು ಅಥವಾ ಋತುಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು.

ಹದಿಹರೆಯದ ತರುಣಿಯರ ಸಮಸ್ಯೆಗಳುಹದಿಹರೆಯದ ತರುಣಿಯರೆಂದರೆ ಸರಿಸುಮಾರು 13 ವರ್ಷದಿಂದ 19 ವರ್ಷದ ವಯಸ್ಸಿನ ತರುಣಿಯರು. ಒಬ್ಬಳು ಹುಡುಗಿ ತನ್ನ ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಮಾರ್ಪಾಡಾಗುವ ವಯಸ್ಸು ಇದು. ಋತುಚಕ್ರ ಆರಂಭವಾಗುವುದು ಈ ವಯಸ್ಸಿನಲ್ಲಿಯೇ, ಇಷ್ಟೊಂದು ಬದಲಾವಣೆಗಳಾಗುವ ಹದಿಹರೆಯದ ವಯಸ್ಸಿನಲ್ಲಿ ಹಲವಾರು ಸಮಸ್ಯೆಗಳು ಉದ್ಭವವಾಗುವುದು ಸಹಜ. ಬಾಲ್ಯಾವಸ್ಥೆಯಲ್ಲಿ ಲಿಂಗಭೇದವಿಲ್ಲದೇ ಒಟ್ಟಿಗೆ ಆಡಿ, ಕುಣಿದು, ಕುಪ್ಪಳಿಸಿ, ನಲಿಯುತ್ತಾರೆ. ಆದರೆ ಪ್ರೌಢಾವಸ್ಥೆಯನ್ನು ದಾಟುತ್ತಿದ್ದಂತೆಯೇ ಗಂಡು, ಹೆಣ್ಣು ಎಂಬ ಭೇದ-ಭಾವ ಸುಳಿಯುತ್ತದೆ. ಸಾಮಾಜಿಕವಾಗಿ ಒಂದು ವಿಭಿನ್ನ ಬಾಂಧವ್ಯ ಬೆಳೆಯುತ್ತದೆ. ಈ ಹಂತದ ಯುವತಿಯರಲ್ಲಿ ಬೆಳವಣಿಗೆಗಳು ಅಥವಾ ಬದಲಾವಣೆಗಳು ಕಂಡು ಬರುತ್ತವೆ.

ಶಾರೀರಿಕ ಬದಲಾವಣೆ:

ಕಿಶೋರಿಯು ಪ್ರೌಢಾವಸ್ಥೆಗೆ ಕಾಲಿಡುವಾಗ ಆಕೆಯಲ್ಲಿ ಪ್ರಕೃತಿದತ್ತವಾಗಿ ಕೆಲವೊಂದು ಬದಲಾವಣೆಗಳು ಕಂಡು ಬರುತ್ತವೆ. ಅವುಗಳೆಂದರೆ, ಪಿಟ್ಯುಟರಿ ಗ್ರಂಥಿಯಿಂದ ಉತ್ಪಾದನೆಯಾಗುವ ಹಾರ್ಮೋನ್ ಪ್ರಚೋದನೆಯಿಂದಾಗಿ ಎತ್ತರ ಮತ್ತು ಗಾತ್ರಗಳಲ್ಲಿ ಬೆಳವಣಿಗೆಯಾಗುತ್ತದೆ. ಈ ಬೆಳವಣಿಗೆ ಸರಿಸುಮಾರು 18-20 ವಯಸ್ಸಿನವರೆಗೆ ಇರುತ್ತದೆ. ಹಾಗೆಯೇ ಜನನೇಂದ್ರಿಯಗಳ ಸುತ್ತ ಹಾಗೂ ಕಂಕುಳಗಳಲ್ಲಿ ಕೂದಲು ಬೆಳವಣಿಗೆಯಾಗುತ್ತದೆ. ಸ್ತನಗಳು, ಮಾಂಸಖಂಡಗಳು, ಜನನೇಂದ್ರಿಯಗಳು ಬೆಳೆಯಲಾರಂಭಿಸುತ್ತವೆ. ಈ ಎಲ್ಲಕ್ಕಿಂತ ಮುಖ್ಯವಾಗಿ ಒಳ ಅಂಗಾಂಗಗಳಾದ ಗರ್ಭಕೋಶ, ಅಂಡಾಶಯಗಳು ತನ್ನ ಕಾರ್ಯಪ್ರವೃತ್ತಿಯನ್ನು ಚುರುಕುಗೊಳಿಸುತ್ತವೆ.

ಮಾನಸಿಕ ಬದಲಾವಣೆ:

ಬಾಲ್ಯದಿಂದ ತಾರುಣ್ಯದ ಬದುಕಿಗೆ ಹೆಜ್ಜೆಯಿಡುವುದೇ ಯೌವ್ವನ. ಈ ಹಂತದಲ್ಲಿ ದೈಹಿಕ ಬೆಳವಣಿಗೆಯ ಜೊತೆಗೆ ಮಾನಸಿಕ ಬೆಳವಣಿಗೆಯಲ್ಲಿ ಬದಲಾವಣೆಗಳು ಕಂಡು ಬರುತ್ತವೆ. ಮುಖ್ಯವಾಗಿ ಆಕೆ ತನ್ನ ಬಾಹ್ಯ ಸೌಂದರ್ಯದ ಕಡೆ ಹೆಚ್ಚಿನ ಗಮನ ಕಾಳಜಿ ನೀಡುತ್ತಾಳೆ. ಸಹಜವಾಗಿಯೇ ಅನ್ಯ ಲಿಂಗದವರೊಡನೆ ಆಕರ್ಷಣೆಯುಂಟಾಗುತ್ತದೆ. ಈ ಸಮಯದಲ್ಲಿ ಆಕೆ ತನ್ನೊಳಗೆ ತಾನೇ ಮಾತನಾಡಿಕೊಂಡು ಸಂಭ್ರಮಿಸುತ್ತಾಳೆ. ಆದಷ್ಟು ಏಕಾಂಗಿಯಾಗಿರಬೇಕೆಂದು ಬಯಸುತ್ತಾಳೆ. ಈ ಸಮಯದಲ್ಲಿ ಕೆಲವರು ಕುಟುಂಬದವರೊಡನೆ ಬೆರೆಯದೇ ಇರಬಹುದು. ಮತ್ತೆ ಕೆಲವರಲ್ಲಿ ಭಯ, ಅಸಹನೆ, ಕೋಪ, ದುಗುಡಗಳು ಕಂಡುಬರಬಹುದು. ಇವೆಲ್ಲವುಗಳಿಗೆ ಮುಖ್ಯ ಕಾರಣ ಶರೀರದಲ್ಲಿನ ಏರುಪೇರಾಗಿರುವ ಹಾರ್ಮೋನ್‍ಗಳು.

ಹದಿಹರೆಯದ ಕಿಶೋರಿಯರ ಸಮಸ್ಯೆಗಳು:

ಹದಿಹರೆಯದ ಕಿಶೋರಿಯರು ಕೆಲವೊಂದು ಸಮಸ್ಯೆಗಳು ಮತ್ತು ತೊಂದರೆಗಳನ್ನು ಎದುರಿಸುತ್ತಾರೆ. ಅವುಗಳಲ್ಲಿ ಮುಖ್ಯವಾಗಿ,
1. ಮಾನಸಿಕ ತೊಂದರೆಗಳು: ಹೆಚ್ಚಾಗಿ ನಿದ್ರೆ ಮಾಡುವುದು, ಅಸಹನೆ, ಮಾನಸಿಕ ಖಿನ್ನತೆ, ಚಿಕ್ಕ ಚಿಕ್ಕ ವಿಷಯಗಳಿಗೂ ಅಳುವುದು, ಜೀವನವೇ ಬೇಡ ಎನ್ನಿಸುವುದು ಇತ್ಯಾದಿ ಸಮಸ್ಯೆಗಳು ಕಂಡುಬರುತ್ತವೆ.
2. ಲೈಂಗಿಕ ಸಮಸ್ಯೆಗಳು: ನಾಚಿಕೆ ಸ್ವಭಾವ ಇರುವಂತಹ ಯುವತಿಯರಲ್ಲಿ ಈ ಸಮಯದಲ್ಲಿ ಉಂಟಾಗುವಂತಹ ಶಾರೀರಿಕ ಬದಲಾವಣೆಗಳನ್ನು ಬೇರೆಯವರ ಜೊತೆ ಹೇಳಿಕೊಳ್ಳಲಾಗದೇ ಸಮಸ್ಯೆಯನ್ನು ತಾವೇ ಎದುರಿಸುತ್ತಿರುತ್ತಾರೆ. ಈ ಹಂತದಲ್ಲಿ ಲೈಂಗಿಕ ಆಕರ್ಷಣೆಯುಂಟಾಗುವುದು ಸಹಜ. ಯುವಜನರಲ್ಲಿ ಸರಿಯಾದ ಲೈಂಗಿಕತೆ ಬಗ್ಗೆ ತಿಳಿವಳಿಕೆಯಿಲ್ಲದೇ ಇರುವುದು ಮತ್ತು ಚಿಕ್ಕ ವಯಸ್ಸು ಅವಳು ಯಾರಿಗೂ ಹೇಳುವುದಿಲ್ಲವೆಂದು ಕುಟುಂಬ ವರ್ಗದವರು, ಸಹಪಾಠಿಗಳು, ಸ್ನೇಹಿತರು ಮತ್ತು ನೆರೆಹೊರೆಯವರಿಂದ ಲೈಂಗಿಕ ಶೋಷಣೆಗೆ ಒಳಗಾಗುವ ಸಾಧ್ಯತೆ ಇದೆ.
3. ನಡವಳಿಕೆಯಲ್ಲಿನ ಸಮಸ್ಯೆಗಳು: ಪ್ರೌಢಾವಸ್ಥೆಗೆ ಕಾಲಿಟ್ಟಂತಹ ವಯಸ್ಸಿನವರಲ್ಲಿ ಹೆಚ್ಚಾಗಿ ಸ್ವತಂತ್ರವಾಗಿರಲು ಬಯಸುತ್ತಾರೆ. ತಮ್ಮ ಇಚ್ಛೆಗೆ ಬಂದ ಹಾಗೆ ನಡೆದುಕೊಳ್ಳುವುದು ಹಿರಿಯರು ಹೇಳಿದ ಮಾತನ್ನು ಕೇಳದೆ ಅವರು ಹೇಳಿದ್ದಕ್ಕೆ ವಿರುದ್ಧವಾಗಿ ವರ್ತಿಸುವುದು. ಹಠ, ಜಗಳ, ಹೊಂದಾಣಿಕೆಯಿಲ್ಲದಿರುವುದು, ಸರಿಯಾದ ಮಾರ್ಗವನ್ನು ತಿಳಿಸಿದವರೊಡನೆ ಕೋಪಿಸಿಕೊಳ್ಳುವುದು ಮುಂತಾದ ನಡವಳಿಕೆಗಳು ಯುವಜನರಲ್ಲಿ ಕಂಡುಬರುತ್ತದೆ. ಹಾಗೆಯೇ ಶಾಲೆಗೆ ಹೋಗದೆ ಹಠ ಮಾಡುವುದು ಇತ್ಯಾದಿ.
4. ಬೊಜ್ಜುತನ: ಸಾಮಾನ್ಯವಾಗಿ ಈ ಸಮಯದಲ್ಲಿ ಅತಿಯಾದ ಆಹಾರ ಸೇವನೆಯಿಂದ ದೇಹತೂಕ ಹೆಚ್ಚಾಗಿ ಬೊಜ್ಜುತನವುಂಟಾಗುತ್ತದೆ. ಇದು ಬಹುತೇಕರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಅತಿಯಾದ ಬೊಜ್ಜುತನದಿಂದ ಇತರರಿಂದ ಅವಮಾನಗೊಂಡವರಂತೆ ತಮಗೆ ತಾವೇ ದ್ವೇಷಿಸಿಕೊಳ್ಳಲು ಪ್ರಾರಂಭಿಸುತ್ತಾರೆ ಮತ್ತು ಅವರಿಗೆ ಕೀಳರಿಮೆಯ ಭಾವನೆ ಉಂಟಾಗುತ್ತದೆ. ಈ ಸಮಸ್ಯೆಯನ್ನು ದೂರಮಾಡಲು ಊಟಬಿಟ್ಟು ಮಾನಸಿಕವಾಗಿ ಮತ್ತು ದೈಹಿಕವಾಗಿ ಕೃಶರಾಗಿ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಳ್ಳದಂತಾಗುತ್ತಾರೆ.
5. ಆರ್ಥಿಕ ತೊಂದರೆಗಳು: ಹದಿಹರೆಯದ ವಯಸ್ಸಿಗೆ ಕಾಲಿಡುತ್ತಿದ್ದಂತೆಯೇ ಕಿಶೋರಿಯರಿಗೆ ಹಣದ ಅವಶ್ಯಕತೆ ತೀವ್ರವಾಗುತ್ತದೆ. ಅವುಗಳಲ್ಲಿ ಮುಖ್ಯವಾಗಿ ಅವರ ವೈಯಕ್ತಿಕ ಅವಶ್ಯಕತೆಗಳು. ಈ ವಯಸ್ಸಿಗೆ ಕಾಲಿಡುತ್ತಿದ್ದಂತೆಯೇ ಹಲವಾರು ವಸ್ತುಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.  ಮುಖ್ಯವಾಗಿ ಸೌಂದರ್ಯವರ್ಧಕ ವಸ್ತುಗಳು, ಒಳ ಉಡುಪುಗಳು-ಬ್ರಾ, ಸ್ಯಾನಿಟರಿ ಪ್ಯಾಡ್‍ಗಳು, ಕೂದಲು ತೆಗೆಯುವ ಸಾಧನಗಳು ಇತ್ಯಾದಿ ತೀರ ಅವಶ್ಯಕ ವಸ್ತುಗಳನ್ನು ಕೊಂಡುಕೊಳ್ಳಲು ಹಣ ಬೇಕಾಗುತ್ತದೆ. ಈ ವಸ್ತುಗಳನ್ನು ಕುಟುಂಬದವರೊಂದಿಗೆ ತೆಗೆದುಕೊಡಿ ಎಂದು ಹೇಳಲಾಗುವುದಿಲ್ಲ. ಸಾಮಾನ್ಯ ಖರ್ಚುಗಳಾದ ಉದಾಹರಣೆಗೆ ಸ್ನೇಹಿತರೊಡನೆ ಹೊರಗೆ ಹೋದಾಗ ಸಿನಿಮಾ, ಹೋಟೆಲ್, ಓಡಾಟದ ಖರ್ಚು, ವಾಹನ ಇಂಧನದ ಖರ್ಚು ಮುಂತಾದವುಗಳಿಗೂ ಹಣದ ಅವಶ್ಯಕತೆ ಇದ್ದೇ ಇರುತ್ತದೆ.
6. ಕಾನೂನು ಸಮಸ್ಯೆಗಳು: 18 ವಯಸ್ಸು ತುಂಬುವವರೆಗೆ ವಾಹನ ಚಾಲನೆಯ ಪೂರ್ಣ ಪ್ರಮಾಣದ ಪರವಾನಗಿ ಸಿಗುವುದಿಲ್ಲ. ಆದರೆ ಅನಿವಾರ್ಯತೆ ಮತ್ತು ಆಸೆಯಿಂದ ವಾಹನಗಳನ್ನು ಓಡಿಸಲೇ ಬೇಕಾಗುತ್ತದೆ. ಪರವಾನಗಿ ಇಲ್ಲದೇ ವಾಹನಗಳನ್ನು ಓಡಿಸಿ ಸಿಕ್ಕಿಹಾಕಿಕೊಂಡಾಗ ದಂಡ ತೆರಬೇಕಾಗುತ್ತದೆ. ಇದರಿಂದ ಯುವಜನತೆಗೆ ತೊಂದರೆಯಾಗುವುದು. ಹಾಗೆಯೇ ಹದಿನೆಂಟಕ್ಕಿಂತ ಮುಂಚೆ ಮದುವೆಯಾಗುವಂತಿಲ್ಲ. ಈ ರೀತಿ ಮದುವೆಯಾದರೆ ಕಾನೂನು ಬಾಹಿರವಾಗುತ್ತದೆ. ಹೀಗೆ ಅನೇಕ ರೀತಿಯ ಕಾನೂನು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
7. ದುಶ್ಚಟಗಳು: ಸಹವಾಸದೋಷದಿಂದ ಅನೇಕ ದುಶ್ಚಟಗಳಿಗೆ ಬಲಿಯಾಗುವುದು, ಕುಡಿತ, ಡ್ರಗ್ಸ್ ಮುಂತಾದ ಚಟಗಳಿಗೆ ದಾಸರಾಗಿ ಜೀವನವನ್ನೇ ಬಲಿಕೊಡುವ ಸಾಧ್ಯತೆ ಇದೆ.

ಶಾರೀರಿಕ ಸಮಸ್ಯೆಗಳು:

ಮಾನಸಿಕ ತೊಂದರೆಗಳಲ್ಲದೇ ಕಿಶೋರಿಯಲ್ಲಿ ‘ಶಾರೀರಿಕ ಸಮಸ್ಯೆಗಳು’ ಹಲವಾರು ಇರುತ್ತವೆ. ಅವುಗಳಲ್ಲಿ ಮುಖ್ಯವಾಗಿ, ಮುಟ್ಟಾಗುವುದು ಅಥವಾ ಋತುಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು.
1. ಮುಟ್ಟಿನ ಮುನ್ನಾದಿನದ ನೋವು (Pre Menstrual Syndrome) : ಕೆಲವು ಯುವತಿಯರಲ್ಲಿ ಮುಟ್ಟಾಗುವ ಮುನ್ನಾದಿನ ಅಂದರೆ ಒಂದು ವಾರದ ಹಿಂದೆ ನೋವು ಕಂಡುಬರುತ್ತದೆ.
2. ಮುಟ್ಟಿನ ನೋವು (Dysmenorrhea): ಮುಟ್ಟಾದಾಗ ಕೆಲವರಲ್ಲಿ 1-2 ದಿವಸ ಹೊಟ್ಟೆನೋವು, ಸೊಂಟನೋವು, ಬೆನ್ನು ನೋವು, ಕಾಲುಗಳಲ್ಲಿ ಸೆಳೆತ ಕಂಡುಬರುವುದು, ಪ್ರೊಸ್ಟೊಗ್ಲಾಂಡಿನ್ ಹಾರ್ಮೋನಿನ ಏರಿಕೆಯಿಂದ ಈ ಸಮಸ್ಯೆ ಉಂಟಾಗುತ್ತದೆ.
3. ಅಧಿಕ ರಕ್ತಸ್ರಾವ (Menorrhagia): ಮುಟ್ಟಿನ ಸಮಯದಲ್ಲಿ sಸಾಮಾನ್ಯವಾಗಿ 3 ರಿಂದ 5 ದಿನಗಳವರೆಗೆ ರಕ್ತಸ್ರಾವವಿರುತ್ತದೆ. ಕೆಲವರಲ್ಲಿ ಈ ಅವಧಿ ಹೆಚ್ಚಿರುತ್ತದೆ. ಇದನ್ನು ಅಧಿಕ ರಕ್ತಸ್ರಾವ ಎಂದು ಕರೆಯುತ್ತಾರೆ. ಇದು ಹಾರ್ಮೋನ್‍ಗಳ ವ್ಯತ್ಯಾಸದಿಂದ ಉಂಟಾಗುತ್ತದೆ.
4. ನಿಧಾನ ಮುಟ್ಟು (Oligomenorrhea): ಕೆಲವು ಯುವತಿಯರಲ್ಲಿ ಮುಟ್ಟು ಪ್ರತಿ ತಿಂಗಳು ಸರಿಯಾಗಿ ಆಗುವುದಿಲ್ಲ ಮತ್ತು 2 ರಿಂದ 3 ತಿಂಗಳಾದರೂ ಆಗುವುದಿಲ್ಲ. ಇದಕ್ಕೆ ನಿಧಾನ ಮುಟ್ಟು ಎಂದು ಹೆಸರು. ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟಿರೋನ್ ಹಾರ್ಮೋನ್‍ಗಳ ವ್ಯತ್ಯಾಸದಿಂದ ಈ ರೀತಿ ವ್ಯತ್ಯಾಸ ಉಂಟಾಗುತ್ತದೆ.
5. ಮುಟ್ಟು ನಿಲುಗಡೆ (Ammenorrhoea): ಕೆಲವರಲ್ಲಿ ಮಾಸಿಕ ಮುಟ್ಟಾಗುವ ಕ್ರಿಯೆಯು ನಿಂತು ಹೋಗುತ್ತದೆ. ಅಂದರೆ 5 ರಿಂದ 6 ತಿಂಗಳುಗಳು ಆದರೂ ಮುಟ್ಟು ಆಗುವುದಿಲ್ಲ. ಇದನ್ನು ಮುಟ್ಟು ನಿಲುಗಡೆ ಎಂದು ಕರೆಯಲಾಗುತ್ತದೆ. ಇದಕ್ಕೂ ಸಹ ಹಾರ್ಮೋನ್‍ಗಳ ಏರುಪೇರು ಕಾರಣವಾಗುತ್ತದೆ. ಇದರಿಂದ ಅಂಡಾಶಯದಲ್ಲಿ ಗಂಟುಗಳಾಗಬಹುದು. ಥೈರಾಯಿಡ್‍ಗ್ರಂಥಿಯ ತೊಂದರೆ ಮುಂತಾದ ಸಮಸ್ಯೆಗಳುಂಟಾಗುತ್ತವೆ.
6. ವಿವಾಹ ಮುಂಚಿನ ಗರ್ಭಧಾರಣೆ: ಸರಿಯಾದ ಲೈಂಗಿಕ ತಿಳಿವಳಿಕೆ ಇಲ್ಲದೆ ಹಲವಾರು ಯುವತಿಯರು ವಿವಾಹಕ್ಕೆ ಮುಂಚೆಯೇ ಗರ್ಭವತಿಯರಾಗುತ್ತಾರೆ. ಅವಿವಾಹಿತೆಯರು ಗರ್ಭಧರಿಸಿದಾಗ ಅನೇಕ ದೈಹಿಕ, ಮಾನಸಿಕ ಮತ್ತು ಕೌಟುಂಬಿಕ, ಸಾಮಾಜಿಕ, ಆರ್ಥಿಕ ಹಾಗೂ ಕಾನೂನಿನ ತೊಂದರೆಗಳನ್ನು ಅಲ್ಲದೆ ಅಪವಾದಗಳನ್ನು ಎದುರಿಸಬೇಕಾಗುತ್ತದೆ. ಒಂದು ವೇಳೆ ವಿವಾಹಕ್ಕೆ ಮುಂಚೆಯೇ ಗರ್ಭವತಿಯಾಗಿ ಅದನ್ನು ಗರ್ಭಪಾತ (Abortion) ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹೆಚ್ಚಿನ ಆರ್ಥಿಕ, ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ಅನುಭವಿಸಬೇಕಾಗುತ್ತದೆ.
7. ಮೊಡವೆಗಳು: ಕಾಲೇಜು ಯುವತಿಯರಲ್ಲಿ ಮೊಡವೆಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಇದು ಟೆಸ್ಟೋಸ್ಟಿರೋನ್ ಹಾರ್ಮೋನಿನ ಏರುಪೇರಿನಿಂದ ಉಂಟಾಗುತ್ತದೆ. ಇದು ಅತಿಯಾದ ಎಣ್ಣೆಯಂಶದಿಂದ, ಸ್ವಚ್ಛತೆ ಇಲ್ಲದಿರುವುದರಿಂದಲೂ ಬರಬಹುದು.
8. ಅತಿರೋಮ ಬೆಳವಣಿಗೆ (Hirsutism): ಕೆಲವು ಯುವತಿಯರಲ್ಲಿ ದೇಹ ಮತ್ತು ಮುಖದ ಮೇಲೆ ಅಧಿಕವಾದ, ದಟ್ಟವಾದ ರೋಮ (ಕೂದಲು) ಬೆಳವಣಿಗೆಯಾಗುತ್ತದೆ. ಇದಕ್ಕೆ ಅತಿರೋಮ ಬೆಳವಣಿಗೆ ಎಂದು ಹೆಸರು. ಇದಕ್ಕೆ ಆಂಡ್ರೋಜೆನ್ ಹಾರ್ಮೋನ್‍ಗಳಲ್ಲಿನ ವ್ಯತ್ಯಾಸ ಮುಖ್ಯ ಕಾರಣವಾಗಿರುತ್ತದೆ.
9. ಸೋಂಕು: ದೇಹ ಸ್ವಚ್ಛತೆಯಿಲ್ಲದಿರುವುದರಿಂದ ಹಲವರಿಗೆ ಯೋನಿಸೋಂಕು ಉಂಟಾಗಬಹುದು. ಇದರಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತವೆ. ಅವುಗಳಲ್ಲಿ ಮುಖ್ಯವಾಗಿ ಗರ್ಭಕೋಶಕ್ಕೆ ಸೋಂಕು ತಗುಲಿ ಬಂಜೆತನವುಂಟಾಗಬಹುದು.

teenage-girls-problemತಪಾಸಣಾ ವಿಧಾನಗಳು:

ಯುವತಿಯರಲ್ಲಿ ಕಂಡುಬರುವ ಮೇಲ್ಕಂಡ ಸಮಸ್ಯೆಗಳಿಗೆ ಕಾರಣ ಕಂಡುಹಿಡಿಯಲು ಕೆಲವೊಂದು ತಪಾಸಣೆಗಳನ್ನು ಮಾಡಬೇಕಾಗುತ್ತದೆ.
1. ರಕ್ತ ಪರೀಕ್ಷೆ
2. ಮೂತ್ರ ಪರೀಕ್ಷೆ
3. ಕೀಳ್ಗುಳಿ ಪರೀಕ್ಷೆ (Pelvic Scanning)
4. ಹಾರ್ಮೋನ್ ಪರೀಕ್ಷೆ
5. ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರೆ ಗರ್ಭ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಮುಂಜಾಗ್ರತಾ ಕ್ರಮಗಳು:

1. ಆಹಾರ ಶೈಲಿಯಲ್ಲಿ ಬದಲಾವಣೆ: ಪೌಷ್ಟಿಕ ಆಹಾರ ಸೇವನೆಯಿಂದ – ತರಕಾರಿ, ಹಣ್ಣು-ಹಂಪಲು, ಬೇಳೆ, ಕಾಳುಗಳು ಇತ್ಯಾದಿ. ಉಪ್ಪು ಕಡಿಮೆ ತಿನ್ನುವುದು, ರಸ್ತೆ ಬದಿಯ ಆಹಾರ ತಿನ್ನುವುದನ್ನು ಕಡಿಮೆ ಮಾಡುವುದು.
2. ಜೀವನ ಶೈಲಿಯಲ್ಲಿ ಬದಲಾವಣೆ: ಮಾದಕ ವಸ್ತುಗಳಿಂದ ದೂರವಿರುವುದು. ಉತ್ತಮ ಸ್ನೇಹಿತರೊಂದಿಗೆ ಇರುವುದು. ಲೈಂಗಿಕ ದುಸ್ಸಾಹಸಗಳಿಂದ ದೂರವಿರುವುದು. ಕಾಮಪ್ರಚೋದಕ ಮಾಧ್ಯಮಗಳಿಂದ ದೂರವಿರುವುದು ಉತ್ತಮ.
3. ಸುರಕ್ಷಿತ ಲೈಂಗಿಕತೆ: ಲೈಂಗಿಕತೆ ಅತಿ ಅನಿವಾರ್ಯವೆಂದಾಗ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಲೈಂಗಿಕ ಸೋಂಕು ರೋಗಗಳು, ಏಡ್ಸ್ ವಿವಾಹಕ್ಕೆ ಮುಂಚೆ ಗರ್ಭವತಿಯಾಗುವುದು ಮತ್ತು ಅನೇಕ ಲೈಂಗಿಕ ಸಮಸ್ಯೆಗಳಿಗೆ ಒಳಗಾಗಬೇಕಾಗುತ್ತದೆ. ಇದಕ್ಕೆಲ್ಲ ಕಾರಣ ಲೈಂಗಿಕತೆಯ ಬಗ್ಗೆ ಸರಿಯಾದ ತಿಳಿವಳಿಕೆಯಿಲ್ಲದಿರುವುದು ಮತ್ತು ಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗದೇ ಇರುವುದು. ಒಂದು ವೇಳೆ ಲೈಂಗಿಕತೆ ಅನಿವಾರ್ಯ ಎಂದಾಗ ನಿರೋಧ್, ಗರ್ಭನಿರೋಧಕ ಮಾತ್ರೆಗಳನ್ನು ಬಳಸುವುದು ಸೂಕ್ತ.
4. ಲೈಂಗಿಕ ಶೋಷಣೆ: ಕುಟುಂಬ ವರ್ಗದವರಿಂದ ಮತ್ತು ನೆರೆಹೊರೆಯವರಿಂದ ಲೈಂಗಿಕ ಶೋಷಣೆಗಳಿಗೆ ಒಳಗಾಗದಂತೆ ಜಾಗೃತರಾಗಿರಬೇಕು. ಶೋಷಣೆಯಾಗುತ್ತಿದ್ದರೆ ಧೈರ್ಯವಾಗಿ ಮನೆಯವರಿಗೆ, ತಮಗೆ ಹತ್ತಿರವಿದ್ದವರಿಗೆ ಹೇಳಿಕೊಳ್ಳಬೇಕು. ಅದಕ್ಕಾಗಿ ಹದಿಹರೆಯದವರ ಸಮಸ್ಯೆಯ ಅರಿವು ಮೂಡಿಸುವಂತಹ ವೈಜ್ಞಾನಿಕ ಶಿಕ್ಷಣ ನೀಡುವುದು ಹಾಗೂ ತಂದೆ ತಾಯಿಯರು, ಪೋಷಕರು, ವೈದ್ಯರು, ಶಿಕ್ಷಕರು, ಸ್ನೇಹಿತರು, ಸಮಾಜ ಕಾರ್ಯಕರ್ತರು ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಿ ಮಾರ್ಗದರ್ಶನ ನೀಡುವುದು ಅತ್ಯವಶ್ಯಕ.
ಚಿಕಿತ್ಸೆಗಳು:

1. ಮುಟ್ಟಿನ ತೊಂದರೆಗಳಿಗೆ ಸಾಮಾನ್ಯವಾಗಿ ಮೊದಲಿಗೆ ಹಾರ್ಮೋನ್ ಚಿಕಿತ್ಸೆಯನ್ನು ನೀಡಲಾಗುತ್ತದೆ. ಇದರಿಂದ ಹಾರ್ಮೋನಿನ ಏರುಪೇರುಗಳನ್ನು ಸರಿದೂಗಿಸಬಹುದು. ಅದರಿಂದ ಅಡ್ಡ ಪರಿಣಾಮಗಳುಂಟಾಗುತ್ತವೆ.
(ಅ) ಮುಟ್ಟಿನ ಮುನ್ನಾದಿನದ ನೋವುಗಳಿಗೆ: ಉಪ್ಪು, ಕಾಫಿ, ಟೀ ಸೇವನೆ ಕಡಿಮೆ ಮಾಡಬೇಕು. ವಿಟಮಿನ್ ಇ ಮತ್ತು ಪ್ರಿಮರೋಸ್ ಎಣ್ಣೆಯಿಂದ ಕೂಡಿದ (Prim Rose Oil) ಮಾತ್ರೆಯನ್ನು ಸೇವಿಸಬೇಕು.
(ಆ) ಮುಟ್ಟು ನೋವು ತೀವ್ರವಾಗಿದ್ದಾಗ: ನೋವು ನಿವಾರಕ ಮಾತ್ರೆಗಳನ್ನು (Mefenamic Acid) ಸೇವಿಸಬಹುದು. ಬೊಜ್ಜುತನ ಇದ್ದರೆ ತೂಕ ಕಡಿಮೆ ಮಾಡಿಕೊಳ್ಳಬೇಕು. ನಿಯಮಿತವಾಗಿ ವ್ಯಾಯಾಮ ಮಾಡಬೇಕು.
(ಇ) ಏರುಪೇರಿನ ಮುಟ್ಟು: ಮುಟ್ಟಿನ ಏರುಪೇರನ್ನು ಸರಿಪಡಿಸಲು ಈಸ್ಟ್ರೋಜೆನ್ (Estrogen) ಮತ್ತು ಪ್ರೊಜೆಸ್ಟ್ರೋನ್ (Progestrone) ಹಾರ್ಮೋನ್ ಮಾತ್ರೆಗಳನ್ನು ನಿಯಮಿತವಾಗಿ ವೈದ್ಯರ ಸಲಹೆಯ ಮೇರೆಗೆ ಸೇವಿಸಬಹುದು.
2. ಹದಿಹರೆಯದ ವಯಸ್ಸಿನಲ್ಲಿ ಕಂಡುಬರುವಂತಹ ಮಾನಸಿಕ ತೊಂದರೆಯಿಂದ ದೂರವಿರಲು ಯೋಗ, ಧ್ಯಾನ, ವ್ಯಾಯಾಮ, ಉತ್ತಮ ಪುಸ್ತಕಗಳ ಅಧ್ಯಯನ, ಒಳ್ಳೆಯ ಕಥೆ, ಕಾದಂಬರಿಗಳನ್ನು ಓದುವುದು, ಮನಸ್ಸಿಗೆ ಮುದ ನೀಡುವಂತಹ ಸ್ಥಳಗಳಿಗೆ ಭೇಟಿ ನೀಡುವುದು, ಪೂಜಾ ಮಂದಿರಗಳಿಗೆ, ವಿಹಾರಧಾಮಗಳಿಗೆ ಭೇಟಿ ನೀಡುವುದು ಮುಂತಾದ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದರಿಂದ ಸಮಸ್ಯೆಗಳನ್ನು ದೂರವಿಡಬಹುದು.
3. ಲೈಂಗಿಕ ಸೋಂಕು ಉಂಟಾಗಿದ್ದರೆ ತಕ್ಷಣವೇ ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆಯನ್ನು ಮಾಡಿಸಿ ತಜ್ಞವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆಯನ್ನು ಪಡೆಯುವುದು. ಮೂತ್ರದ ಹಾಗೂ ಲೈಂಗಿಕ ಸೋಂಕುಗಳಿಗೆ ರೋಗ ನಿರೋಧಕ ಔಷಧಿಗಳನ್ನು ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳಬೇಕು.
4. ಸಕ್ರಿಯ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿರುವ ಅವಿವಾಹಿತ ಯುವತಿಯರು ವಿಶೇಷ ಜಾಗೃತೆ ವಹಿಸಿ ಆಗಿಂದಾಗ್ಗೆ ಪರೀಕ್ಷೆ ಮಾಡಿಸಿಕೊಳ್ಳುತ್ತಿರಬೇಕು. ಮುಟ್ಟು ಏನಾದರೂ ನಿಂತರೆ ತಕ್ಷಣ ಗರ್ಭ ಪರೀಕ್ಷೆ ಮಾಡಿಸಿಕೊಳ್ಳಬೇಕು.
5. ಮೊಡವೆಗೆ: ಮುಖ್ಯವಾಗಿ ಸ್ವಚ್ಛತೆಯಿಂದಿರುವುದು, ಅತಿಯಾದ ಎಣ್ಣೆಯಂಶದ ಆಹಾರ ಸೇವನೆ ಮಾಡಬಾರದು, ಮೊಡವೆ ಬಂದಾಗ ಅದನ್ನು ಕೀಳುವುದಾಗಲಿ, ಗಿಂಟುವುದಾಗಲಿ, ಮಾಡಬಾರದು. ಮೊಡವೆ ಹೋಗಲು Calomine Lotion ಬಳಸಬಹುದು.
“ಹದಿಹರೆಯದ ವಯಸ್ಸು ತರುವುದು ಹುಮ್ಮಸ್ಸು,
ಆತುರ ಪಟ್ಟರೆ ಹಾಳಾಗುವುದು ಮನಸ್ಸು”

ಡಾ|| ಸಿ. ಶರತ್ ಕುಮಾರ್ ನಿರ್ದೇಶಕರು ಮತ್ತು ಖ್ಯಾತ ಗರ್ಭಧಾರಣಾ ತಜ್ಞವೈದ್ಯರು, ಮೆಡಿವೇವ್ ಗರ್ಭಧಾರಣಾ ಮತ್ತು ಸಂಶೋಧನಾ ಆಸ್ಪತ್ರೆ, ಸಿಟಿ ಎಕ್ಸ್-ರೇ ಕಾಂಪ್ಲೆಕ್ಸ್, ಸಯ್ಯಾಜಿ ರಾವ್ ರಸ್ತೆ, ಮೈಸೂರು-570 001 ದೂ. 0821-2444441, 4255019

ಡಾ|| ಸಿ. ಶರತ್ ಕುಮಾರ್
ನಿರ್ದೇಶಕರು ಮತ್ತು ಖ್ಯಾತ ಗರ್ಭಧಾರಣಾ ತಜ್ಞವೈದ್ಯರು, ಮೆಡಿವೇವ್ ಗರ್ಭಧಾರಣಾ ಮತ್ತು ಸಂಶೋಧನಾ ಆಸ್ಪತ್ರೆ,
ಸಿಟಿ ಎಕ್ಸ್-ರೇ ಕಾಂಪ್ಲೆಕ್ಸ್, ಸಯ್ಯಾಜಿ ರಾವ್ ರಸ್ತೆ, ಮೈಸೂರು-570 001
ದೂ. 0821-2444441, 4255019

www.mediwave.net

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!