ಗರ್ಭಿಣಿಯರು ಯೋಗ ಮಾಡಬಹುದೇ?- ಇದು ಪ್ರತಿಯೊಬ್ಬರಿಗೂ ಇರುವ ಅನುಮಾನಗಳಲ್ಲಿ ಒಂದು. ಸುಲಭ ಹೆರಿಗೆಗಾಗಿ ಯೋಗ ಅತ್ಯಂತ ಪರಿಣಾಮಕಾರಿ ವಿಧಾನ ಎಂಬುದನ್ನು ವೈದ್ಯರು ಮತ್ತು ಪ್ರಸೂತಿ ತಜ್ಞರು ಗುರುತಿಸಿದ್ದಾರೆ. ಆದರೆ, ಮೊದಲ ಮೂರು ತಿಂಗಳ ಅವಧಿಯಲ್ಲಿ ಯೋಗಾಸನ ಮಾಡುವಾಗ ಎಚ್ಚರ ವಹಿಸಬೇಕು.

ಯೋಗದಿಂದ ಸಾಕಷ್ಟು ಪ್ರಯೋಜನ:
ಗರ್ಭಧಾರಣೆ ವೇಳೆ ಮಾಡುವ ಯೋಗದಿಂದ ಅನೇಕ ಪ್ರಯೋಜನಗಳಿವೆ. ಭೌತಿಕ ಮಟ್ಟದ ಮೇಲೆ ನಿರ್ದಿಷ್ಟವಾಗಿ ಅನುಸರಿಸುವ ಯೋಗ ಭಂಗಿಗಳು ದೇಹದ ಸಾಮಥ್ರ್ಯ ಹೆಚ್ಚಿಸಿ ಹೊಂದಾಣಿಕೆ ಸಾಮಥ್ರ್ಯವನ್ನು ಸೃಷ್ಟಿಸುತ್ತದೆ. ಯೋಗಾಸನಗಳು ಚೈತನ್ಯ ವೃದ್ಧಿಸಿ ಒತ್ತಡವನ್ನು ಕಡಿಮೆ ಮಾಡುತ್ತದೆ. ಗರ್ಭಧಾರಣೆ ವೇಳೆ ಕಂಡುಬರುವ ಬೆನ್ನು ನೋವು ಮತ್ತು ದ್ರವ ಉಳಿಯುವಿಕೆಯಂಥ ಸಾಮಾನ್ಯ ಗರ್ಭಧಾರಣೆ ದೋಷಗಳಿಗೂ ಇದು ಉಪಶಮನ ನೀಡಲು ನೆರವಾಗುತ್ತದೆ. ಉಸಿರಾಟ ವ್ಯಾಯಾಮಗಳು ನರಮಂಡಲದ ವ್ಯವಸ್ಥೆಯನ್ನು ಉತ್ತಮಗೊಳಿಸಿ ದೇಹಕ್ಕೆ ಮತ್ತು ಹೊಟ್ಟೆಯಲ್ಲಿರು ಶಿಶುವಿಗೆ ಆಮ್ಲಜನಕ ಪೂರೈಕೆಯನ್ನು ಹೆಚ್ಚಿಸುತ್ತದೆ. ಪ್ರಸವ ವೇಳೆಯಲ್ಲಂತೂ ಇದು ತುಂಬಾ ಪ್ರಯೋಜನಕಾರಿ. ಹೆರಿಗೆ ಸುಗಮವಾಗಿ ಆಗಲು ಸಾಯ್ನುಗಳು ವಿಕಸನವಾಗಲು ಸಹಾಯ ಮಾಡುತ್ತದೆ.
ಯೋಗಾಸನ ಚಲನೆಗಳು ಮತ್ತು ಆಸನ-ಭಂಗಿಗಳು ಹೆರಿಗೆಯ ಪ್ರತಿ ಹಂತದಲ್ಲೂ ಗರ್ಭಿಣಿಯರಿಗೆ ಸಹಕಾರಿ. ಆದರೆ, ಮೊದಲ ಮೂರು ತಿಂಗಳ ಅವಧಿಯಲ್ಲಿ ಯೋಗಾಸನ ಮಾಡುವಾಗ ಎಚ್ಚರ ವಹಿಸಬೇಕು. ವಿಶ್ರಾಂತಿ, ಧ್ಯಾನ, ಸರಳ ಉಸಿರಾಟ ವ್ಯಾಯಾಮಗಳನ್ನು ವಿಶೇಷವಾಗಿ ಮೊದಲ ತ್ರೈಮಾಸಿಕ ಅವಧಿಯಲ್ಲಿ ಗರ್ಭಿಣಿಯರಿಗೆ ಶಿಫಾರಸು ಮಾಡಲಾಗಿದೆ. ಇವು ಗರ್ಭಧರಿಸಿದ್ದ ಸಂದರ್ಭದಲ್ಲಿ ಕಂಡುಬರುವ ಆಯಾಸ, ತಲೆ ಸುತ್ತುವಿಕೆ, ವಾಂತಿ ಮೊದಲಾದ ಸಂಭವನೀಯ ಅಡ್ಡ ಪರಿಣಾಮಗಳನ್ನು ನಿವಾರಿಸಲು ಗರ್ಭವತಿಯರಿಗೆ ಸಹಕಾರಿ.ಕೆಲ ಕಾಲದಿಂದ ಯೋಗಾಭ್ಯಾಸ ಮಾಡುತ್ತಿರುವ ಮಹಿಳೆಯರು, ತಮ್ಮ ಅಗತ್ಯತಳಿಗೆ ಅನುಗುಣವಾಗಿ ಆಸನ ಮತ್ತು ಭಂಗಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಾಮಾನ್ಯ ಆಸನವನ್ನು ಮುಂದುವರಿಸಬಹುದು. ಎರಡನೇ ತ್ರೈಮಾಸಿಕ ಅವಧಿಯಲ್ಲಿ, ಬಹುತೇಕ ಮಹಿಳೆಯರು ಹೊಸ ಉಲ್ಲಾಸದೊಂದಿಗೆ ಖುಷಿಯಾಗಿರುತ್ತಾರೆ.
ಯೋಗ ಮಾಡುವುದರಿಂದ ಅವರು ದೇಹದ ಸಾಮಥ್ರ್ಯ ಹೆಚ್ಚಾಗಿ ಭಂಗಿ ಮತ್ತು ಶಕ್ತಿಯನ್ನು ಸುಧಾರಿಸುತ್ತದೆ. ಕೆಲವೊಂದು ಯೋಗಾಸನಗಳನ್ನು ಗರ್ಭವತಿಯರ ಉದರ ಮತ್ತು ಹೊಟ್ಟೆಯಲ್ಲಿರುವ ಶಿಶುವಿನ ಮೇಲೆ ಒತ್ತಡ ಬೀಳದಂತೆ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಗರ್ಭಧಾರಣೆಯು ಎರಡನೇ ಮತ್ತು ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಮಹಿಳೆಯರು ಯೋಗ ಮಾಡುವಾಗ ಮೆತ್ತನೆಯ ದಿಂಬು ಅಥವಾ ಕುಷನ್ಗಳನ್ನು ಉಪಯೋಗಿಸುವ ಅಗತ್ಯವಿದೆ. ಇದರಿಂದ ಯೋಗಾಸನ ಮಾಡುವಾಗ ಆರಾಮವಾಗಿರುತ್ತದೆ. ಕೊನೆಯ ತ್ರೈಮಾಸಿಕ ಅವಧಿಯಲ್ಲಿ ವೈದ್ಯರು ಮತ್ತು ನುರಿತ ಯೋಗ ತಜ್ಞರ ಶಿಫಾರಸಿನ ಮೇರೆಗೆ ಯೋಗಾಸನ ಮಾಡಬೇಕಾಗುತ್ತದೆ.
ಗರ್ಭಿಣಿಯರ ನೆಮ್ಮದಿಗೆ ಯೋಗ:

ಗರ್ಭಧಾರಣೆಯ ಮೂರು ತ್ರೈಮಾಸಿಕಗಳಲ್ಲಿ ಮಾಡುವ ಯೋಗಾಭ್ಯಾಸ ಮತ್ತು ಭಂಗಿಗಳು ಪ್ರತಿ ಹಂತದಲ್ಲೂ ವಿಭಿನ್ನತೆಯಿಂದ ಕೂಡಿರುತ್ತದೆ. ಇದು ಕೇವಲ ಯೋಗಾಸನವಲ್ಲ ; ಪರಿಣಿತರ ಉಸ್ತುವಾರಿ ಹಾಗೂ ಪೂರಕ ವಾತಾವರಣದಲ್ಲಿ ಮಾಡಬೇಕಾದ ವ್ಯಾಯಾಮವಾಗಿದೆ. ವ್ಯಾಯಾಮ ಆರಂಭಿಸುವುದಕ್ಕೂ ಮುನ್ನ ಗರ್ಭವತಿಯು ತನ್ನ ಆರೋಗ್ಯ ಹಿನ್ನೆಲೆಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಇದೇ ಮೊದಲ ಬಾರಿಗೆ ಯೋಗಾಭ್ಯಾಸ ಮಾಡುವವರು ಹಾಗೂ ನಿಯಮಗಳನ್ನು ಪಾಲಿಸದೇ ಇರುವವರು ವೈದ್ಯಕೀಯ ಸಮ್ಮತಿ ಇಲ್ಲದೇ ಯೋಗಾಸನ ಮಾಡಬಾರದು. ಮೊದಲ ಮೂರು ತಿಂಗಳು ತುಂಬಾ ಮಹತ್ವದ್ದಾಗಿದ್ದು, ಗರ್ಭಪಾತ ಆಗುವ ಸಾಧ್ಯತೆಗಳು ಅಧಿಕವಾಗಿರುತ್ತದೆ ; ಅದ್ದರಿಂದ ಈ ಅವಧಿಯಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕಾದುದು ಅತಿ ಮುಖ್ಯ.ಎಲ್ಲ ನಿಯಮಗಳು ಹಾಗೂ ಆರೋಗ್ಯ ಮಾಹಿತಿಗಳನ್ನು ಗಮನದಲ್ಲಿಟ್ಟುಕೊಂಡು, ತಾಯಿಯಾಗುವವರಿಗೆ ತುಂಬಾ ಸೂಕ್ತವಾದ ಹಾಗೂ ಶಿಫಾರಸ್ಸಿಗೆ ಅರ್ಹವಾದ ‘ಆಸನಗಳನ್ನು’ ಮಾತ್ರ ಮಾಡಬೇಕಾಗುತ್ತದೆ.
ಡಾ.ದಿನಕರ್
ವೈದೇಹಿ ಹಾಸ್ಪಿಟಲ್, ವೈದೇಹಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್,
82, ಇಪಿಐಪಿ ವೈಟ್ಫೀಲ್ಡ್, ಬೆಂಗಳೂರು -560066
ಫೋನ್: 080- 49069000 Extn: 1147/1366 http://www.vims.ac.in/
ಮೊ.: 97422 74849