ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಹೆಚ್ಚುವರಿ ಆಹಾರ ಮತ್ತು ಆರೋಗ್ಯ ಸೇವೆ ಏಕೆ ಬೇಕು? ಕಡಿಮೆ ಅಥವಾ ಅಪೌಷ್ಟಿಕ ಆಹಾರವನ್ನು ಸೇವಿಸಿದಲ್ಲಿ, ಇದರ ಪರಿಣಾಮವಾಗಿ ಮಹಿಳೆಯರಲ್ಲಿ ಅಪೌಷ್ಟಿಕತೆ ಉಂಟಾಗಿ ಶಿಶುವಿನ ಜನನದ ತೂಕ ಕಡಿಮೆ ಆಗುವುದಲ್ಲದೆ ಹಾಗೂ ತಾಯಿಯ ಮರಣದ ಪ್ರಮಾಣವು ಕೂಡ ಹೆಚ್ಚುತ್ತದೆ.
ಗರ್ಭಧಾರಣೆಯ ಸಂಧರ್ಭದಲ್ಲಿ ಶಾರೀರಿಕವಾಗಿ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತೇವೆ ಮತ್ತು ಭ್ರೂಣದ ಬೆಳವಣಿಗೆಯು ಕೂಡ ವೇಗವಾಗಿರುತ್ತದೆ. ಗರ್ಭಿಣಿ ಮಹಿಳೆಯು ಈ ಬೇಡಿಕೆಗಳನ್ನು ಈಡೇರಿಸಲು ಹೆಚ್ಚು ಪ್ರಮಾಣದ ಪೋಷಕಾಂಶಗಳನ್ನು ಹಾಗೂ ಗುಣಮಟ್ಟವುಳ್ಳ ಆಹಾರವನ್ನು ಸೇವಿಸಬೇಕು. ಒಂದು ವೇಳೆ ಕಡಿಮೆ ಅಥವಾ ಅಪೌಷ್ಟಿಕ ಆಹಾರವನ್ನು ಸೇವಿಸಿದಲ್ಲಿ, ಇದರ ಪರಿಣಾಮವಾಗಿ ಮಹಿಳೆಯರಲ್ಲಿ ಅಪೌಷ್ಟಿಕತೆ ಉಂಟಾಗಿ ಶಿಶುವಿನ ಜನನದ ತೂಕ ಕಡಿಮೆ ಆಗುವುದಲ್ಲದೆ ಹಾಗೂ ತಾಯಿಯ ಮರಣದ ಪ್ರಮಾಣವು ಕೂಡ ಹೆಚ್ಚುತ್ತದೆ.
ಆದ್ದರಿಂದ ಗರ್ಭಿಣಿ ಮಹಿಳೆ ಹೆಚ್ಚುವರಿ ಆಹಾರ ಸೇವಿಸುವುದು ಸೂಕ್ತ. ಗರ್ಭಾವಸ್ಥೆಯಲ್ಲಿ ಆರೋಗ್ಯವಂತ ಮಹಿಳೆಯ ತೂಕ ಸುಮಾರು 10-12 ಕೆಜಿ ಹೆಚ್ಚಿರಬೇಕು. ಉದಾಹರಣೆಗೆ ಒಬ್ಬ ಸಾಮಾನ್ಯ ಮಹಿಳೆಯ ತೂಕ 50 ಕೆಜಿ ಆಗಿದ್ದರೆ, ಆ ಮಹಿಳೆಯು ಗರ್ಭಿಣಿಯಾದಾಗ ದೇಹದ ತೂಕ ಸುಮಾರು 60 ರಿಂದ 62 ಕೆಜಿ ಅಷ್ಟು ಹೆಚ್ಚಾಗಬೇಕು ಮತ್ತು ಆರೋಗ್ಯವಂತ ಶಿಶುವಿನ ಜನನದ ತೂಕ ಸುಮಾರು 3 ಕೆಜಿ ಗಳಷ್ಟಿರಬೇಕು.
ಗರ್ಭಾವಸ್ಥೆಯಲ್ಲಿ ಪೋಷಕಾಂಶಗಳ ವಿಶೇಷತೆ
• ಗರ್ಭಿಣಿ ಮಹಿಳೆಯ ದೈನಂದಿನ ಆಹಾರ ಸೇವನೆಗಿಂತ ಹೆಚ್ಚುವರಿಯಾಗಿ 350 ಕ್ಯಾಲೋರಿಗಳು ಮತ್ತು +23 ಗ್ರಾಂ ಗಳಷ್ಟು ಪ್ರೋಟಿನ್ ಅನ್ನು ಅಧಿಕವಾಗಿ ಸೇವಿಸಬೇಕು.
• ಫೋಲಿಕ್ ಆಸಿಡ್‍ನ್ನು ಸಂಪೂರ್ಣ ಗರ್ಭಾವಸ್ಥೆಯ ಅವಧಿಯಲ್ಲಿ ತೆಗೆದುಕೊಳ್ಳಬೇಕು. ಇದರಿಂದ ಭ್ರೂಣದ ತೂಕ ಹೆಚ್ಚುತ್ತದೆ ಹಾಗೆಯೇ ಮಗುವಿನಲ್ಲಿ ಯಾವುದೇ ರೀತಿಯ ಜನ್ಮಜಾತ ಅಸ್ವಸ್ಥತೆಗಳು ಉಂಟಾಗುವುದಿಲ್ಲ.
• ಮಹಿಳೆಯ ಮತ್ತು ಬೆಳೆಯುತ್ತಿರುವ ಭ್ರೂಣದ ರಕ್ತದ ಉತ್ಪತ್ತಿಗೆ ಹೆಚ್ಚು ಕಬ್ಬಿಣಾಂಶದ ಅವಶ್ಯಕತೆಯಿದೆ.
• ತಾಯಿಯ ಎದೆ ಹಾಲಿನ ಉತ್ಪತ್ತಿ ಹೆಚ್ಚಿಸಲು ಮತ್ತು ಮಗುವಿನ ಮೂಳೆ, ಹಲ್ಲುಗಳ ರಚನೆಗೆ ಸಹಾಯ ಮಾಡಲು ಕ್ಯಾಲ್ಸಿಯಂನ ಸೇವನೆ ಅತ್ಯವಶ್ಯ.
• ಅಯೋಡಿನ್ ಎಂಬ ಖನಿಜಾಂಶವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ ಮಗುವಿನ ಮೆದುಳು ಹಾಗೂ ಮಾನಸಿಕ ಬೆಳವಣಿಗೆ ವೃದ್ಧಿಗೊಳ್ಳುತ್ತವೆ.
• ಅಷ್ಟೇ ಅಲ್ಲದೆ, ಬೆಳೆಯುತ್ತಿರುವ ಶಿಶುವಿಗೆ ವಿವಿಧ ಬಗೆಯ ಜೀವಸತ್ವಗಳಾದ ಎ, ಸಿ, ಬಿ-12 ಗಳು ತಾಯಿಯ ಎದೆ ಹಾಲಿನ ಮೂಲಕ ದೊರೆಯುತ್ತವೆ.
ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ಈ ಮೇಲಿನ ಪೋಷಕಾಂಶಗಳ ಬೇಡಿಕೆಗಳನ್ನು ಹೇಗೆ ಪೂರೈಸಿಕೊಳ್ಳಬಹುದು?
ಗರ್ಭಿಣಿ/ಹಾಲುಣಿಸುವ ಮಹಿಳೆಯು ದೇಹದ ಎಲ್ಲ ಬದಲಾವಣೆಗಳನ್ನು ಪೂರೈಸಲು ವಿವಿಧ ರೀತಿಯ ಆಹಾರವನ್ನು ಸೇವಿಸುವುದು ಸೂಕ್ತ.
• ದಿನನಿತ್ಯ ಸೇವಿಸುವ ಆಹಾರದಲ್ಲಿ ಬದಲಾವಣೆ ಮಾಡುವುದು ಅಗತ್ಯವಿಲ್ಲ. ಆದರೆ ಆಹಾರದ ಪ್ರಮಾಣವನ್ನು ಹೆಚ್ಚಿಸಬೇಕು ಹಾಗೂ ವಿಭಿನ್ನ ಆಹಾರಗಳನ್ನು ದೇಹಕ್ಕೆ ಪೂರೈಸಬೇಕು.
ಉದಾಹರಣೆಗೆ ವಿವಿಧ ತರಹದ ಹಣ್ಣುಗಳಾದ ಸೇಬು, ಕಿತ್ತಳೆ, ಸ್ಟ್ರಾ ಬೆರ್ರಿ, ಬಾಳೆ ಹಣ್ಣು, ಮಾವಿನ ಹಣ್ಣು, ದ್ರಾಕ್ಷಿ, ನಿಂಬೆ ಹಣ್ಣು ಇತ್ಯಾದಿ ಹಾಗೆಯೇ ತರಕಾರಿಗಳಾದ – ಬೀನ್ಸ, ಹಸಿರು ಮತ್ತು ಹಳದಿ ತರಕಾರಿಗಳು, ಕ್ಯಾರೇಟ್, ಎಲೆ ಕೋಸು, ಮೆಂತೆ, ಪಾಲಕ್‍ಗಳನ್ನು ಪ್ರಮುಖವಾಗಿ ಸೇವಿಸಬೇಕು.
• ದೇಹಕ್ಕೆ ಶಕ್ತಿಯನ್ನು ಒದಗಿಸುವ ಮೂಲವು ಧಾನ್ಯಗಳದ್ದಾಗಿದೆ. ಅಷ್ಟೇ ಅಲ್ಲದೆ, ದೇಹಕ್ಕೆ ಜೀವಸತ್ವ ಬಿ, ಕಬ್ಬಿಣಾಂಶ, ನಾರಿನಾಂಶ ಮತ್ತು ಅಲ್ಪ ಪ್ರಮಾಣದಲ್ಲಿ ಪ್ರೋಟಿನ್ ಅಂಶವನ್ನು ಕೂಡ ನೀಡುತ್ತವೆ. ಸಿಪ್ಪೆ ಸಹಿತವಿರುವ ಧಾನ್ಯಗಳಾದ ರಾಗಿ, ಜೋಳ, ಗೋಧಿ, ನವಣೆ, ಸಾವೆಗಳನ್ನು ಸೇವಿಸಬೇಕು.
• ಎರಡನೇ ಮತ್ತು ಮೂರನೇ ತ್ರೈಮಾಸಿಕಗಳಲ್ಲಿ ವಿಶೇಷವಾಗಿ ಮಗುವಿಗೆ ಪ್ರೋಟಿನ್‍ನ ಅವಶ್ಯಕತೆ ಹೆಚ್ಚಾಗಿರುತ್ತದೆ. ಇದಕ್ಕೆ ಕಾರಣ ಭ್ರೂಣದ ದೇಹ ರಚನೆ.
• ಪ್ರೋಟಿನ್ ಅಂಶಗಳನ್ನೊಳಗೊಂಡಿರುವ ಆಹಾರಗಳಾದ ಬೀನ್ಸ್, ಬೇಳೆಕಾಳುಗಳು, ಒಣಗಿದ ಹಣ್ಣುಗಳಾದ ಬಾದಾಮಿ, ಒಣ ದ್ರಾಕ್ಷಿ, ವಾಲ್ ನಟ್ಸ, ಖರ್ಜುರ, ಗೋಡಂಬಿ ಮತ್ತು ಹಾಲಿನ ಪದಾರ್ಥಗಳಾದ, ಮೊಟ್ಟೆ, ಮೀನು ಮತ್ತು ಮಾಂಸ.
• ಕಬ್ಬಿಣಾಂಶವನ್ನು ಒದಗಿಸುವ ಆಹಾರಗಳಾದ ಒಣಗಿದ ಹಣ್ಣುಗಳು, ಹಸಿರು ತರಕಾರಿಗಳು, ತಾಜಾ ಹಣ್ಣುಗಳು, ಹುದುಗಿಸಿದ ಆಹಾರ ಪದಾರ್ಥಗಳಾದ ದೋಸೆ, ಇಡ್ಲಿ, ಶ್ರೀಖಂಡ ಇತ್ಯಾದಿ ಮತ್ತು ಮೊಳಕೆ ಬರಿಸಿದ ಕಾಳುಗಳು.
• ಬಲವಾದ ಹಲ್ಲು ಮತ್ತು ಮೂಳೆಗಳ ಬೆಳವಣಿಗೆಗೆ ಕ್ಯಾಲ್ಸಿಯಂನ ಅವಶ್ಯಕತೆ ಯಥೆಚ್ಚವಾಗಿದ್ದು, ಹಾಲು ಮತ್ತು ಹಾಲಿನ ಉತ್ಪನ್ನಗಳಾದ ಮೊಸರು, ಕ್ರೀಮ್, ಚೀಸ್ ಮತ್ತು ಪನ್ನೀರ್ ಹಾಗೂ ಹಸಿರು ತರಕಾರಿಗಳಲ್ಲಿಯೂ ಕೂಡ ಕ್ಯಾಲಸಿಯಂನ ಪ್ರಮಾಣ ಹೆಚ್ಚಿರುತ್ತದೆ.
• ವೈದ್ಯರ ಮುನ್ಸೂಚನೆಯೊಂದಿಗೆ ಫೋಲಿಕ್ ಆಸಿಡ್ ಪೋಷಕಾಂಶವನ್ನು ಸೇವಿಸಬೇಕು. ಫೋಲಿಕ್ ಆಸಿಡ್ ಅಂಶವನ್ನು ಹೊಂದಿರುವ ಕೆಲವು ಆಹಾರಗಳು ಪಾಲಕ್, ಬೀನ್ಸ, ಬೇಳೆಕಾಳುಗಳು, ಕ್ಯಾರೆಟ್ ಮತ್ತು ಇತರೆ ಹಸಿರು ತರಕಾರಿಗಳು.
ಈ ಎಲ್ಲ ಆಹಾರಗಳ ಸೇವನೆಯ ಜೊತೆಗೆ ಗರ್ಭಿಣಿ ಮಹಿಳೆಯು ಪ್ರಮುಖವಾಗಿ ಮಾಡಬೇಕಾದಂತಹ ಮೂಲ ಅಂಶಗಳು :
• ಪ್ರತಿ ತಿಂಗಳಿಗೊಮ್ಮೆ ತೂಕದ ತಪಾಸಣೆಯನ್ನು ಮಾಡುವುದು
• ರಕ್ತದೊತ್ತಡ ಮತ್ತು ರಕ್ತಹೀನತೆಯ ತಪಾಸಣೆ
• ಪ್ರತಿ ನಿತ್ಯ ದೈಹಿಕ ವ್ಯಾಯಾಮ ಮತ್ತು ಕನಿಷ್ಠ 2 ರಿಂದ 3 ಗಂಟೆ ವಿಶ್ರಾಮ
• ದಿನಕ್ಕೆ ಕನಿಷ್ಟ 8-12 ಲೋಟಗಳಷ್ಟು ನೀರು
• ಬಿಸಿ ಪದಾರ್ಥಗಳ ಸೇವನೆ
• ಧೂಮಪಾನ, ಗುಟಕಾ, ತಂಬಾಕು ಮತ್ತು ಮಧ್ಯ ಸೇವನೆಯನ್ನು ಮಾಡಬಾರದು
• ಚಹಾ ಮತ್ತು ಕಾಫಿಗಳಂತಹ ಪಾನೀಯಗಳ ಸೇವನೆಯಿಂದ ಭ್ರೂಣದ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಆದಷ್ಟು ಇವುಗಳ ಸೇವನೆಯನ್ನು ಸ್ಥಗಿತಗೊಳಿಸುವುದು ಸೂಕ್ತ.
ಗರ್ಭಿಣಿಯರ ಆಹಾರ ಪದ್ಧತಿ :
ಪ್ರತಿ ನಿತ್ಯ 6-11 ಬಾರಿ ಧವಸ ಧಾನ್ಯಗಳು
ಕನಿಷ್ಠ 3 ಬಾರಿ ಗುಣಮಟ್ಟ ಪ್ರೋಟಿನ್ ಅಂಶವುಳ್ಳ ಆಹಾರ
ಕನಿಷ್ಟ 2 ರಿಂದ 4 ಬಾರಿ ವಿವಿಧ ತರಹದ ಹಣ್ಣುಗಳು, 4 ಅಥವಾ ಹೆಚ್ಚು ಬಾರಿ ತರಕಾರಿಗಳು
ಕನಿಷ್ಟ 4 ಬಾರಿ ಹಾಲು ಮತ್ತು ಹಾಲಿನ ಉತ್ಪನ್ನಗಳು
ಕನಿಷ್ಠ 1 ಬಾರಿ ಮೊಳಕೆ ಬರಿಸಿದ ಕಾಳುಗಳು
ಚೈತನ್ಯ ಆರ್. ಇಟಗಿ
ಸಹಾಯಕ ಪ್ರಾಧ್ಯಾಪಕರು
ಆಹಾರ ವಿಜ್ಞಾನ ಮತ್ತು ಪೋಷಣೆ
ಸಮುದಾಯ ವಿಜ್ಞಾನ ಕಾಲೇಜು
ಯುಎಎಸ್, ಧಾರವಾಡ -05
Mob:94499 70666