ಗರ್ಭನಿರೋಧಕ ವಿಧಾನಗಳು ಗರ್ಭಧಾರಣೆಯನ್ನು ತಡೆಯಲು ಬಳಸುವ ವಿಧಾನ ಅಥವಾ ಔಷಧಗಳು. ತಮ್ಮ ಫಲವತ್ತತೆಯನ್ನು ನಿಯಂತ್ರಿಸಲು ಮತ್ತು ಅವರ ಅಗತ್ಯಗಳಿಗೆ ತಕ್ಕಂತೆ ಯೋಜಿಸುವ ಸಾಮರ್ಥ್ಯವನ್ನು ಗರ್ಭನಿರೋಧಕಗಳು ನೀಡುತ್ತವೆ. ಇದರೊಂದಿಗೆ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಬೆಂಬಲ ನೀಡುತ್ತವೆ.
ಗರ್ಭಧಾರಣೆಯನ್ನು ತಡೆಯಲು ಬಳಸುವ ವಿಧಾನ ಅಥವಾ ಔಷಧಗಳು ಗರ್ಭನಿರೋಧಕಗಳಾಗಿರುತ್ತವೆ. ಗರ್ಭನಿರೋಧಕಗಳು ವಿಭಿನ್ನ ರೀತಿಯಲ್ಲಿ ಕೆಲಸ ಮಾಡುತ್ತವೆ. ಅಂಡಾಣುವನ್ನು ಫಲವತ್ತಾಗಿಸದಂತೆ ವೀರ್ಯವನ್ನು ತಡೆಯುವುದು ಮತ್ತು ಅಂಡೋತ್ಪತ್ತಿ ತಡೆಯುವುದು ಇವುಗಳಲ್ಲಿ ಸೇರಿವೆ. ಮಹಿಳೆ ತನ್ನ ಪ್ರಜನನಾತ್ಮಕ ಆರೋಗ್ಯವನ್ನು ನಿಯಂತ್ರಿಸಲು ಅಲ್ಲದೆ ಕುಟುಂಬ ಯೋಜನೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಗರ್ಭನಿರೋಧಕ ವಿಧಾನಗಳು ಮಹಿಳೆಗೆ ಅವಕಾಶ ಮಾಡಿಕೊಡುತ್ತದೆ.
ವಿಭಿನ್ನ ಗರ್ಭನಿರೋಧಕ ವಿಧಾನಗಳು ಈ ಕೆಳಗಿನಂತಿವೆ :
• ಬ್ಯಾರಿಯರ್(ತಡೆಗೋಡೆ)ವಿಧಾನ: ಜನನ ನಿಯಂತ್ರಣದ ವಿಧಾನಗಳಲ್ಲಿ ಕಾಂಡಮ್ಗಳನ್ನು “ಬ್ಯಾರಿಯರ್’’ ಕ್ರಮಗಳೆಂದು ಕರೆಯಲಾಗುತ್ತದೆ. ಪುರುಷರ ವೀರ್ಯವು ಗರ್ಭಾಶಯಕ್ಕೆ ಪ್ರವೇಶಿಸಿ ಫಲವತ್ತುಗೊಳ್ಳಲು ಅಂಡಾಣುವನ್ನು ತಲುಪುವುದಕ್ಕೆ ಇವು ಭೌತಿಕವಾಗಿ ಅಡ್ಡಿ ಒಡ್ಡುತ್ತದೆ ಅಥವಾ ತಡೆಯುತ್ತದೆ. ಮತ್ತೊಂದು ಇದೇ ರೀತಿ ಬ್ಯಾರಿಯರ್ ಕ್ರಮ ಎಂದರೆ ಅದು ಸರ್ವೈಕಲ್ ಕ್ಯಾಪ್ ಮತ್ತು ಡಯಾಫ್ರಮ್ಗಳದ್ದಾಗಿರುತ್ತದೆ. ಈ ಸಣ್ಣ ರಬ್ಬರ್ನ ಉಪಕರಣಗಳನ್ನು ಮಹಿಳೆಯರು ತಮ್ಮ ಯೋನಿಯೊಳಗೆ ತೂರಿಸಿಕೊಂಡು ಗರ್ಭಕೋಶದ ಕೊರಳಿನಲ್ಲಿ ಇರಿಸಿಕೊಳ್ಳುತ್ತಾರೆ. ಈ ಉಪಕರಣಗಳು ವೀರ್ಯಾಣುಗಳಿಗೆ ಅಡ್ಡಿವುಂಟು ಮಾಡಿ ಗರ್ಭಧಾರಣೆಯನ್ನು ತಡೆಯುತ್ತವೆ. ಇವೆರಡರಲ್ಲೂ ವೀರ್ಯಾಣುವನ್ನು ಕೊಲ್ಲುವಂತಹ ರಾಸಾಯನಿಕ ಇರುತ್ತದೆ.
• ಗರ್ಭಾಶಯದ ಒಳಗಿನ ಉಪಕರಣಗಳು (ಐಯುಡಿಎಸ್) : ಗರ್ಭಧಾರಣೆಯನ್ನು ತಡೆಯಲು ಈ ಸಣ್ಣ ಉಪಕರಣಗಳನ್ನು ಗರ್ಭಾಶಯದ ಒಳಗೆ ತೂರಿಸಲಾಗುತ್ತದೆ. ಇದು ದೀರ್ಘಕಾಲದ ಮತ್ತು ಈ ಕ್ರಮ ಕೈಗೊಳ್ಳುವುದಕ್ಕೆ ಮೊದಲಿನಂತೆ ಹಿಮ್ಮುಖವಾಗಿ ಬದಲಾಯಿಸಬಹುದಾದ ಕ್ರಮವಾಗಿದೆ. ಅಲ್ಲದೆ, ಇದು ಅತ್ಯಂತ ಪರಿಣಾಮಕಾರಿ ಗರ್ಭನಿರೋಧಕ ಕ್ರಮಗಳಲ್ಲಿ ಒಂದಾಗಿದೆ. ಇವುಗಳನ್ನು ಹಾರ್ಮೋನಲ್ ಮತ್ತು ಹಾರ್ಮೋನ್ಯೇತರ ಎಂದು ಎರಡು ರೀತಿಯಲ್ಲಿ ವಿಂಗಡಿಸಲಾಗಿದೆ. ಹಾರ್ಮೋನಲ್ ಇಂಟ್ರಾಯುಟೇರೀನ್ ಡಿವೈಸ್(ಐಯುಡಿ) ಅತ್ಯಂತ ಚಿಕ್ಕದಾದ, ಟಿ-ಆಕಾರದ ಪ್ಲಾಸ್ಟಿಕ್ ಉಪಕರಣವಾಗಿದ್ದು ಗರ್ಭಾವಸ್ಥೆಯನ್ನು ತಡೆಯಲು ಇದನ್ನು ಗರ್ಭಾಶಯದ ಒಳಕ್ಕೆ ತೂರಿಸಲಾಗುತ್ತದೆ. ಲೆವೊನೋರ್ಗೆಸ್ಟ್ರೆಲ್ ಎಂಬ ಪ್ರೊಗೆಸ್ಟಿನ್ ಹಾರ್ಮೋನ್ ಅನ್ನು ಇದು ಬಿಡುಗಡೆ ಮಾಡುತ್ತದೆಯಲ್ಲದೆ, ಇದರಿಂದ ಗರ್ಭಾವಸ್ಥೆಯನ್ನು ತಡೆಯಲು ಸಹಾಯವಾಗುತ್ತದೆ. ಹಾರ್ಮೋನ್ಯೇತರ ಇಂಟ್ರಾಯುಟೇರೀನ್ ಡಿವೈಸ್(ಐಯುಡಿ) ದೀರ್ಘಕಾಲೀನ ಜನನ ನಿಯಂತ್ರಣ ರೀತಿಯಾಗಿದ್ದು, ಇದನ್ನು ಗರ್ಭಾಶಯದೊಳಕ್ಕೆ ಇಡಲಾಗುತ್ತದೆ. ಅತ್ಯಂತ ಸಾಮಾನ್ಯವಾದ ಹಾರ್ಮೋನ್ಯೇತರ ಐಯುಡಿ ಎಂದರೆ ಅದು ಕಾಪರ್ ಐಯುಡಿ ಆಗಿದೆ.
• ಹಾರ್ಮೋನಲ್ ಜನನ ನಿಯಂತ್ರಣ ವಿಧಾನ: ಇದರಲ್ಲಿ ಗರ್ಭನಿರೋಧಕಗಳು ಈಸ್ಟ್ರೊಜೆನ್ ಮತ್ತು ಪ್ರೊಗೆಸ್ಟಿನ್ ಅಥವಾ ಕೇವಲ ಪ್ರೊಗೆಸ್ಟಿನ್ಗಳನ್ನು ಹೊಂದಿರುತ್ತವೆ. ಇವು ಸುರಕ್ಷಿತ ಮತ್ತು ನಂಬಿಕಾರ್ಹ ರೀತಿಯ ಗರ್ಭ ನಿಯಂತ್ರಣ ವಿಧಾನಗಳಾಗಿರುತ್ತದೆ. ಹಾರ್ಮೋನಲ್ ವಿಧಾನಗಳಲ್ಲಿ ಇಂಪ್ಲಾಂಟ್, ಇಂಟ್ರಾಯುಟೇರೀನ್ ಡಿವೈಸ್(ಐಯುಡಿ), ಚುಚ್ಚುಮದ್ದುಗಳು, ಮಾತ್ರೆಗಳು, ವೆಜೈನಲ್ ರಿಂಗ್ಗಳು ಮತ್ತು ಸ್ಕಿನ್ ಪ್ಯಾಚ್ಗಳು ಸೇರಿರುತ್ತವೆ. ಗರ್ಭ ನಿಯಂತ್ರಣ ಮಾತ್ರೆಗಳು ಬಾಯಿಂದ ಸೇವಿಸುವ ಗರ್ಭನಿರೋಧಕಗಳಾಗಿ ಕೆಲಸ ಮಾಡುತ್ತವೆ. ಇವುಗಳಲ್ಲಿ ಅಂಡೋತ್ಪತ್ತಿ ತಡೆಯುವ ಹಾರ್ಮೋನ್ಗಳು (ಈಸ್ಟ್ರೊಜೆನ್ ಮತ್ತು ಪ್ರೊಗೆಸ್ಟೀನ್ ಅಥವಾ ಕೇವಲ ಪ್ರೊಗೆಸ್ಟೀನ್) ಇರುತ್ತವೆ.
• ನೈಸರ್ಗಿಕ ವಿಧಾನಗಳು: ಋತುಬಂಧದ ಆವರ್ತನವನ್ನು ಪರೀಕ್ಷಿಸಿ ಫಲವತ್ತಾದ ದಿನಗಳನ್ನು ನಿರ್ಧರಿಸಿ ನಂತರ ಸಂಭೋಗದ ಸಮಯದಲ್ಲಿ ಬ್ಯಾರಿಯರ್(ತಡೆಗೋಡೆ) ವಿಧಾನಗಳನ್ನು ಬಳಸುವುದು.
• ಶಸ್ತ್ರಕ್ರಿಯೆ ವಿಧಾನ : ಮಹಿಳೆಯರಿಗಾಗಿ ಟ್ಯೂಬಲ್ ಲಿಗೇಷನ್(ಕೊಳವೆಗಳನ್ನು ಕಟ್ಟಿ ಹಾಕುವುದು) ಎಂಬ ಶಸ್ತ್ರಕ್ರಿಯಾ ವಿಧಾನವನ್ನು ಬಳಸಲಾಗುತ್ತದೆ. ಇದು ಮಹಿಳೆಯರಿಗೆ ಖಾಯಂ ಗರ್ಭನಿರೋಧಕ ವಿಧಾನವಾಗಿರುತ್ತದೆ. ಇದರಲ್ಲಿ ಮಹಿಳೆಯರ ಫಾಲೊಪಿಯನ್ ಟ್ಯೂಬ್ಗಳಲ್ಲಿ ತಡೆವೊಡ್ಡುವುದು, ಕಟ್ಟಿಹಾಕುವುದು ಅಥವಾ ಅವುಗಳನ್ನು ಕತ್ತರಿಸುವಂತಹ ಕ್ರಮಗಳು ಸೇರಿರುತ್ತವೆ. ಇದರಿಂದ ಅಂಡಾಣುಗಳು ಅಂಡಾಶಯಗಳಿಂದ ಗರ್ಭಾಶಯಕ್ಕೆ ಸಾಗುವುದನ್ನು ತಡೆಯಲಾಗುತ್ತದೆಯಲ್ಲದೆ, ಇದರೊಂದಿಗೆ ಗರ್ಭಧಾರಣೆಯನ್ನು ತಡೆಯಲಾಗುತ್ತದೆ. ವ್ಯಾಸೆಕ್ಟಮಿ ಎಂಬುದು ಶಸ್ತ್ರಕ್ರಿಯಾ ಕ್ರಮವಾಗಿದ್ದು, ಇದನ್ನು ಪುರುಷರ ಮೇಲೆ ಖಾಯಂ ಗರ್ಭನಿರೋಧಕ ವಿಧಾನವಾಗಿ ನಡೆಸಲಾಗುತ್ತದೆ. ಈ ಕ್ರಮದಲ್ಲಿ ವೃಷಣಗಳಿಂದ ಮೂತ್ರನಾಳಕ್ಕೆ ವೀರ್ಯಾಣುಗಳನ್ನು ಒಯ್ಯುವ ಕೊಳವೆಗಳಾದ ವಾಸ್ ಡಿಫರೆನ್ಸ್ಗಳನ್ನು ಕತ್ತರಿಸುವ ಅಥವಾ ಖಾಯಂ ಆಗಿ ಮುಚ್ಚಿಹೋಗುವಂತೆ ಸೀಲ್ ಮಾಡುವ ವಿಧಾನಗಳು ಸೇರಿರುತ್ತವೆ. ಈ ಕೊಳವೆಗಳಲ್ಲಿ ಅಡ್ಡಿವುಂಟು ಮಾಡುವುದರೊಂದಿಗೆ ಸ್ಕಲನ ಸಮಯದಲ್ಲಿ ವೀರ್ಯ3ದೊಂದಿಗೆ ವೀರ್ಯಾಣು ಮಿಶ್ರಣವಾಗುವುದನ್ನು ತಡೆಯಲಾಗುತ್ತದೆ. ಇದರೊಂದಿಗೆ ಅಂಡಾಣುವನ್ನು ಫಲವತ್ತಾಗಿಸುವುದರಿಂದ ತಡೆಯಲಾಗುತ್ತದೆ.
ಅತ್ಯುತ್ತಮ ಗರ್ಭನಿರೋಧಕವನ್ನು ಪರಿಗಣಿಸುವುದಕ್ಕಾಗಿ ಜನರು ತಮ್ಮ ವೈಯಕ್ತಿಕ ಆದ್ಯತೆಗಳು, ಆರೋಗ್ಯ, ಜೀವನಶೈಲಿ ಮತ್ತು ಆಯಾ ವಿಧಾನದ ಪರಿಣಾಮಕಾರಿ ಪ್ರಭಾವವನ್ನು ಮೌಲ್ಯೀಕರಣ ಮಾಡಬೇಕು. ಈ ವಿಷಯದಲ್ಲಿ ಗಮನಾರ್ಹರಾದ ಮತ್ತೊಬ್ಬರ ಜೊತೆಗೆ ಪರಸ್ಪರ ಗೌರವ ಮತ್ತು ತಿಳುವಳಿಕೆ ಹೊಂದಿರುವುದರಿಂದ ಸಕಾರಾತ್ಮಕ ಮತ್ತು ಭಾವನಾತ್ಮಕ ಬೆಂಬಲ ಲಭಿಸುತ್ತದೆ.
ಪರಿಣತರ ಮಾರ್ಗದರ್ಶನದೊಂದಿಗೆ ಸುರಕ್ಷಿತವಾಗಿ ನಿಮ್ಮ ಗರ್ಭನಿರೋಧಕ ಆಯ್ಕೆಗಳನ್ನು ಅನುಸರಿಸಿ
• ಗರ್ಭನಿರೋಧಕ ವಿಧಾನವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಮುನ್ನ ಸೂಕ್ತ ಮಾರ್ಗದರ್ಶನಕ್ಕಾಗಿ ವೈದ್ಯರೊಂದಿಗೆ ಸಮಾಲೋಚನೆ ಮಾಡಿಕೊಳ್ಳಬೇಕು. ಕೆಲವು ಕ್ರಮಗಳನ್ನು ನಡೆಸಲು ವೈದ್ಯರ ಅಗತ್ಯವಿರುತ್ತದೆ. ವೈದ್ಯರೊಂದಿಗೆ ಚರ್ಚಿಸುವುದು ಯಾವಾಗಲೂ ಮುಖ್ಯವಾಗಿರುವುದಲ್ಲದೆ, ಮಾಹಿತಿಪೂರ್ಣ ಮತ್ತು ಸುರಕ್ಷಿತ ಆಯ್ಕೆ ಮಾಡಿಕೊಳ್ಳುವಲ್ಲಿ ಈ ಚರ್ಚೆ ಪ್ರಮುಖವಾಗಿರುತ್ತದೆ.
• 35 ವರ್ಷಕ್ಕೂ ಮೇಲ್ಪಟ್ಟ ಧೂಮಪಾನಿಗಳು ಈಸ್ಟ್ರೊಜೆನ್ ಇರುವ ಗರ್ಭನಿರೋಧಕಗಳ ಬಳಕೆಯನ್ನು ತಪ್ಪಿಸಬೇಕು.
• ರಕ್ತ ಹೆಪ್ಪುಗಟ್ಟುವಲ್ಲಿನ ತೊಂದರೆಗಳು, ಮೈಗ್ರೇನ್ ತಲೆನೋವು, ಹಾರ್ಮೋನ್ ಸಂವೇದಿತ ಕ್ಯಾನ್ಸರ್ಗಳು ಅಥವಾ ಅಲರ್ಜಿಗಳು ಮುಂತಾದ ತೊಂದರೆಗಳಿರುವವರು ಅದರಲ್ಲಿಯೂ ಲಾಟೆಕ್ಸ್ ಅಥವಾ ತಾಮ್ರ ಕುರಿತಂತೆ ವಿಶೇಷ ಅಲರ್ಜಿ ಇರುವವರು ಐಯುಡಿ ವಿಧಾನದಿಂದ ದೂರವಿರಬೇಕು. ಅನಿಗದಿತ ಮುಟ್ಟಿನ ಅವಧಿ ಹೊಂದಿರುವವರು, ಅತಿಯಾದ ರಕ್ತಸ್ರಾವ ಅಥವಾ ಗರ್ಭಾಶಯದ ಅಸಾಧಾರಣ ಸಮಸ್ಯೆಗಳು ಇರುವವರು ತಮಗೆ ಸೂಕ್ತವಾದಂತಹ ವಿಧಾನವನ್ನು ಆಯ್ದುಕೊಳ್ಳಬೇಕು. ತಾವು ಆಯ್ದುಕೊಳ್ಳಲಾದ ಗರ್ಭನಿರೋಧಕ ವಿಧಾನ, ಬ್ಯಾರಿಯರ್, ಹಾರ್ಮೋನಲ್, ಐಯುಡಿಗಳು ಮತ್ತು ನೈಸರ್ಗಿಕ ಅಥವಾ ಶಸ್ತ್ರಕ್ರಿಯ ಕ್ರಮಗಳು ಮುಂತಾದವುಗಳ ಕುರಿತು ಜ್ಞಾನ ಹೊಂದಿರುವುದು ಮುಖ್ಯವಾಗಿರುತ್ತದೆ.
ಬಿಡುವಿಲ್ಲದ ಅಥವಾ ಅನಿಗದಿತ ಕಾರ್ಯ ವೇಳಾ ಪಟ್ಟಿ ಹೊಂದಿರುವ ವ್ಯಕ್ತಿಗಳಿಗೆ ಮಾತ್ರೆಗಳನ್ನು ಸೇವಿಸುವಂತಹ ದೈನಂದಿನ ವಿಧಾನಗಳು ಅಷ್ಟು ಅತ್ಯುತ್ತಮವೆನಿಸುವುದಿಲ್ಲ. ಜೋಡಿಯಾದವರು ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಅವಶ್ಯಕವಾಗಿರುತ್ತದೆ. ಏಕೆಂದರೆ ಕೆಲವು ವಿಧಾನಗಳಲ್ಲಿ ಸಹಕಾರದ ಅಗತ್ಯವಿರುತ್ತದೆ. ಒಂದು ವಿಧಾನವನ್ನು ಆಯ್ಕೆ ಮಾಡುವಾಗ ಲೈಂಗಿಕ ಚಟುವಟಿಕೆಯ ಆವರ್ತನಾ ಮತ್ತು ಸ್ವಾಭಾವಿಕತೆಯನ್ನು ಪರಿಗಣಿಸಿ ಅನುಕೂಲವನ್ನು ಆಧರಿಸಿ ಹಾರ್ಮೋನಲ್ ಮತ್ತು ಹಾರ್ಮೋನ್ಯೇತರ ವಿಧಾನಗಳ ನಡುವೆ ಆಯ್ಕೆ ಮಾಡಿಕೊಳ್ಳಿ. ಸಂಭಾವ್ಯ ಅಡ್ಡ ಪರಿಣಾಮಗಳ ಬಗ್ಗೆ ಕೂಲಂಕಷ ಸಂಶೋಧನೆ ಮಾಡಿಕೊಂಡು ಮಾಹಿತಿಪೂರ್ಣ ನಿರ್ಣಯ ಕೈಗೊಳ್ಳಿರಿ.
ಗರ್ಭನಿರೋಧಕಗಳ ಉಪಯೋಗಗಳು :
• ಗರ್ಭಾವಸ್ಥೆಯನ್ನು ತಡೆಯುವುದು : ಬಯಸದ ಅಥವಾ ಯೋಜಿಸದ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಗರ್ಭಾವಸ್ಥೆಗಳನ್ನು ತಡೆಯಲು ಗರ್ಭನಿರೋಧಕ ಕ್ರಮಗಳು ನೆರವಾಗುತ್ತವೆ. ಇದರೊಂದಿಗೆ ಅಸಂಕಲ್ಪಿತ ಜನನಗಳ ಅಪಾಯಗಳನ್ನು ಮತ್ತು ಗರ್ಭಪಾತದ ಅಗತ್ಯವನ್ನು ಕಡಿಮೆ ಮಾಡುತ್ತವೆ.
• ಗರ್ಭಾವಸ್ಥೆಯನ್ನು ವಿಳಂಬವಾಗಿಸುವುದು : ಸ್ವತಃ ಅವರು ಸಿದ್ಧವಾಗುವವರೆಗೆ ಗರ್ಭಾವಸ್ಥೆಯನ್ನು ವಿಳಂಬಗೊಳಿಸಲು ವ್ಯಕ್ತಿಗಳಿಗೆ ಇವು ಅವಕಾಶ ಮಾಡಿಕೊಡುತ್ತವೆ. ಉದಾಹರಣೆಗೆ ಶಿಕ್ಷಣ ಅಥವಾ ವೃತ್ತಿಜೀವನವನ್ನು ನಿರ್ಮಿಸಿಕೊಳ್ಳುವ ಹಂತಗಳಲ್ಲಿ ಇವು ನೆರವಾಗುತ್ತವೆ.
• ಲೈಂಗಿಕ ಸಂಪರ್ಕದಿಂದ ಹರಡುವ ಸೋಂಕುಗಳ(ಎಸ್ಟಿಐ) ವಿರುದ್ಧ ಸಂರಕ್ಷಣೆ : ಪುರುಷರು ಮತ್ತು ಮಹಿಳೆಯರು ಇಬ್ಬರು ಬಳಸುವಂತಹ ಕಾಂಡಮ್ಗಳು ಎಚ್ಐವಿ ಸೇರಿದಂತೆ ಲೈಂಗಿಕ ಸಂಪರ್ಕದಿಂದ ಹರಡುವ ರೋಗಗಳು(ಎಸ್ಟಿಡಿಎಸ್) ಮತ್ತು ಸೋಂಕುಗಳ(ಎಸ್ಟಿಐಎಸ್) ಪ್ರಸರಣವನ್ನು ತಡೆಯುವ ದೈಹಿಕ ತಡೆಗೋಡೆಯನ್ನು ಪೂರೈಸುತ್ತವೆ.
• ಸಬಲೀಕರಣ : ತಮ್ಮ ಪ್ರಜನನ ಸಂಬಂಧಿತ ಆರೋಗ್ಯ ಕುರಿತಂತೆ ಮಾಹಿತಿಪೂರ್ಣ ಆಯ್ಕೆಗಳನ್ನು ಮಾಡಿಕೊಳ್ಳಲು ಮತ್ತು ತಮ್ಮ ಫಲವತ್ತತೆ ಕುರಿತಂತೆ ನಿಯಂತ್ರಣ ಹೊಂದಿರಲು ವ್ಯಕ್ತಿಗಳನ್ನು ಗರ್ಭನಿರೋಧಕಗಳ ಸಂಪರ್ಕ ಸಬಲೀಕರಿಸುತ್ತದೆ.
ಅಂತಿಮ ತೀರ್ಮಾನ
ಅನುದ್ದೇಶಿತ ಗರ್ಭಾವಸ್ಥೆಗಳನ್ನು ತಡೆಯಲು ಮತ್ತು ಲೈಂಗಿಕ ಸಂಪರ್ಕದಿಂದ ಹರಡುವ ರೋಗಗಳ(ಎಸ್ಟಿಡಿಎಸ್) ವಿರುದ್ಧ ಸಂರಕ್ಷಣೆ ನೀಡಲು ಗರ್ಭನಿರೋಧಕ ವಿಧಾನಗಳನ್ನು ಉಪಯೋಗಿಸಲಾಗುತ್ತದೆ. ಋತುಸ್ರಾವ ಸಂಬಂಧಿತ ಮತ್ತು ಪ್ರಜನನ ಸಂಬಂಧಿತ ಆರೋಗ್ಯ ಸ್ಥಿತಿಗಳನ್ನು ನಿರ್ವಹಿಸುವುದು ಮತ್ತು ಪ್ರಜನನಾತ್ಮಕ ಹಕ್ಕುಗಳನ್ನು ಹಾಗೂ ಲಿಂಗ ಸಮಾನತೆಯನ್ನು ಪ್ರೋತ್ಸಾಹಿಸುವಲ್ಲಿ ಇವು ನೆರವಾಗುತ್ತವೆ.
ಡಾ ನಿವೇದಿತಾ ಝಾ
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು
ಅಪೋಲೋ ಕ್ರೇಡಲ್, ಬೆಂಗಳೂರು