ಹರ್ನಿಯಾ : ಅಲಕ್ಷಿಸಬೇಡಿ!

ಇತ್ತೀಚಿನ ದಿನಗಳಲ್ಲಿ `ಹರ್ನಿಯಾ’ ತೊಂದರೆ ಅನುಭವಿಸುತ್ತಿರುವವರ ಸಂಖ್ಯೆ ಅಧಿಕ. ಇದಕ್ಕೆ ಕಾರಣಗಳೇನು ಬಹಳಷ್ಟಿದ್ದರೂ ಹರ್ನಿಯಾ ಬಗ್ಗೆ ಜನರಲ್ಲಿ ತಿಳುವಳಿಕೆ ಕಡಿಮೆ ಎನ್ನಬಹುದು. ಸಾಮಾನ್ಯಕ್ಕಿಂತ ಹೆಚ್ಚು ಎತ್ತರವಿರುವ ವ್ಯಕ್ತಿಗಳಲ್ಲಿ ಹರ್ನಿಯಾ ಹೆಚ್ಚಾಗಿಕಂಡುಬರುತ್ತದೆ. ಹರ್ನಿಯಾ ಮೊದಲು ಕಂಡು ಬಂದಾಗ, ಸ್ವಲ್ಪ ಉಬ್ಬುವಿಕೆ, ನೋವು, ಕಾಣಿಸಿದಾಗ ಅಲಕ್ಷ್ಯ ಮಾಡುವವರೇ ಹೆಚ್ಚು. ಪರಿಸ್ಥಿತಿ ತುಂಬಾ ವಿಷಮಗೊಂಡಾಗ ವೈದ್ಯರಲ್ಲಿಗೆ ಬರುತ್ತಾರೆ.
ಆಗ ತುರ್ತು ಚಿಕಿತ್ಸೆ ಮಾಡಬೇಕಾಗುತ್ತದೆ. ಹರ್ನಿಯಾ ಕೆಲವರಲ್ಲಿ ಜನಿಸುವಾಗಲೇ ಕಾಣಿಸಿಕೊಂಡರೆ, ಇನ್ನು ಕೆಲವರಲ್ಲಿ ವಯಸ್ಸಾದಂತೆಕಾಣಿಸಿಕೊಳ್ಳುತ್ತದೆ. ಆರಂಭದ ಹಂತದಲ್ಲಿ ಹರ್ನಿಯಾದೊಳಗಿನ ಅಂಗಭಾಗಗಳು ಸಾಮಾನ್ಯವಾಗಿ ಒಳ-ಹೊರಗೆ ಚಲಿಸುವಂತಿರುತ್ತದೆ. ಹೆಚ್ಚು ವೇಗವಾಗಿ ನಡೆದಾಗ, ಭಾರಹೊತ್ತಾಗ, ಕೆಮ್ಮಿದಾಗ ಆ ಭಾಗ ಹೊರಬಂದು ಉಬ್ಬುತ್ತದೆ. ಕೈಯಿಂದ ಆ ಭಾಗದಲ್ಲಿ ಸ್ವಲ್ಪ ಒತ್ತಡ ಹಾಕಿದಾಗ ಒಳಗೆ ಹೋಗುತ್ತವೆ. ಅವುಗಳ ಗಾತ್ರ ದೊಡ್ಡದಾದಂತೆಲ್ಲ ಅವುಗಳನ್ನು ಸುಲಭವಾಗಿ ಹಿಂದಕ್ಕೆಸರಿಸಲು ಆಗುವುದಿಲ್ಲ. ಕೆಲವೊಮ್ಮೆ ಹರ್ನಿಯದ ಚೀಲದೊಳಗಿನ ಕರುಳಿನಂಥ ಅಂಗಭಾಗಗಳು ಒಂದೆರಡು ಸಲ ತಿರುಚಿಕೊಂಡು ಕರುಳು ಕೊಳೆತು ಹೋಗುವ ಪರಿಸ್ಥಿತಿ ಉಂಟಾಗಬಹುದು. ಆದ್ದರಿಂದ ಯಾವುದೇ ಹರ್ನಿಯಾವನ್ನು ಸಕಾಲದಲ್ಲಿ ಚಿಕಿತ್ಸೆಗೆ ಒಳಪಡಿಸಬೇಕು. ಯಾವುದೇ ಕಾರಣಕ್ಕೂ ಅಲಕ್ಷಿಸಬಾರದು. ಇದು ಖಂಡಿತ ಒಳ್ಳೆಯದಲ್ಲ.
ಎಲ್ಲರಲ್ಲೂ…
ಹರ್ನಿಯಾ ಅಥವಾ ಅಂಡವಾಯು ಸಾಮಾನ್ಯವಾಗಿ ಯಾವುದೇ ವಯಸ್ಸಿನಲ್ಲಿ, ಲಿಂಗಭೇದವಿಲ್ಲದೆ ಕಾಣಿಸಿಕೊಳ್ಳುತ್ತದೆ. ದೇಹದ ಯಾವುದೇ ಕೋಶದೊಳಗಿನ ಅಂಗಭಾಗಗಳು ಅದರ ಭಿತ್ತಿಯಲ್ಲಿರಬಹುದಾದ ರಂಧ್ರಗಳ ಮೂಲಕ ಹೊರಚಾಚಿಕೊಳ್ಳುವ ಸ್ಥಿತಿಯೇ ಹರ್ನಿಯಾ. ದೇಹದ ಸುಮಾರು ಇಪ್ಪತ್ತು ಸ್ಥಳಗಳಲ್ಲಿ ಹರ್ನಿಯಾ ಉಂಟಾಗುವ ಸಾಧ್ಯತೆಗಳಿರುತ್ತವೆ. ಆದರೂ ಶೇ. 90ರಷ್ಟು ಹರ್ನಿಯಾ ಕಾಣಿಸಿಕೊಳ್ಳುವುದು. ಕಿಬ್ಬೊಟ್ಟೆ ಕೆಳಭಾಗದ ಪ್ರದೇಶದಲ್ಲಿಯೇ. ಈ ಭಾಗದ ಹೊಟ್ಟೆಯ ಭಿತ್ತಿ ದುರ್ಬಲವಾಗಿರುವುದೇ ಇದಕ್ಕೆ ಕಾರಣ. ಇಲ್ಲಿ ಕರುಳು, ನೆಣಮಾಲೆಯಂಥ ಭಾಗಗಳು ಹೊರಚಾಚಿಕೊಂಡು ಕೆಲವೊಮ್ಮೆ ಆಕಸ್ಮಾತ್ ತಿರುಚಿಕೊಂಡು ಜೀವಕ್ಕೆ ಅಪಾಯ ಉಂಟಾಗಬಹುದು. ಭ್ರೂಣಾವಸ್ಥೆಯಲ್ಲಿರುವ ಏಳನೇ ತಿಂಗಳ ಮಗುವಿನಲ್ಲಿ ಉದರ ಕೋಶದಿಂದ ವೃಷಣ ಚೀಲದವರೆಗೂ, ಅಂತಸ್ಥ ಕಾಲುವೆಯೊಂದು ಉಳಿದುಕೊಂಡಿರುತ್ತದೆ. ಹೆಚ್ಚಿನ ಜನರಲ್ಲಿ ಅದು ತಂತಾನೇ ಮುಚ್ಚಿಹೋಗಿರುತ್ತದೆ. ಆದರೆ ಕೆಲವರಲ್ಲಿ ಉದರ ಕೋಶದಲ್ಲಿ ಒತ್ತಡ ಹೆಚ್ಚಾದಾಗ, ಶ್ರಮದ ಕೆಲಸದಲ್ಲಿ ತೊಡಗಿದಾಗ, ಭಿತ್ತಿ ದುರ್ಬಲವಾದಾಗ, ಗೆಜ್ಜೆಯ ಅಂತಸ್ಥ ಕಾಲುವೆ ತೆರೆದುಕೊಳ್ಳುತ್ತದೆ.
ಲಕ್ಷಣಗಳೇನು?
ಅದರ ಮೂಲಕ ಕರುಳು ಮತ್ತು ನೆಣಮಾಲೆಯ ಕೆಲವು ಸುರುಳಿಗಳು ಕೆಳಗಿಳಿದು ವೃಷಣ ಚೀಲದತ್ತ ಸಾಗುತ್ತದೆ. ಇದನ್ನೇ ಗೆಜ್ಜೆಯ ಹರ್ನಿಯಾ ಎನ್ನುತ್ತಾರೆ. ಇದು ಶೇ. 80ರಷ್ಟು ಗಂಡರಸಲ್ಲೇ ಕಾಣಿಸಿಕೊಳ್ಳುತ್ತದೆ. ಕೆಮ್ಮಿದಾಗ ತೊಡೆಯ ಮೇಲ್ಭಾಗದ ಗೆಜ್ಜೆಯ ಸಂದಿನಲ್ಲಿ ಗುಳ್ಳೆಯಂತೆ ಊದಿಕೊಳ್ಳುವುದು. ದಪ್ಪಗಾಗುವುದು, ಮಲಗಿಕೊಂಡಾಗ ಊತವೆಲ್ಲ ಉದರ ಕೋಶದೊಳಗೆ ಜಾರಿಹೋಗಿ ಗೆಜ್ಜೆಯ ಪ್ರದೇಶ ಖಾಲಿಯಾಗುವುದು. ಇವು ಗೆಜ್ಜೆ ಹರ್ನಿಯಾದ ಮುಖ್ಯ ಲಕ್ಷಣಗಳು. ಹರ್ನಿಯಾ ಚೀಲದೊಳಗೆ ಇರುವ ಕರುಳು ಮತ್ತು ನೆಣಮಾಲೆಗಳ ಪ್ರಮಾಣ ಹೆಚ್ಚಾದಂತೆ, ಅವನ್ನು ಹಿಂದೆ ಸರಿಸುವುದು ಕಷ್ಟವಾಗುತ್ತದೆ. ಅಲ್ಲದೆ, ಕರುಳು, ನೆಣಮಾಲೆಗಳು ಒಂದೆರಡು ಸುತ್ತುತಿರುಚಿಕೊಂಡಾಗ ವಿಪರೀತ ನೋವು, ವಾಂತಿ ಆಗುತ್ತದೆ. ಗೆಜ್ಜೆ ಮತ್ತು ವೃಷಣ ಚೀಲಗಳು ಗಾತ್ರದಲ್ಲಿ ದೊಡ್ಡದಾಗುತ್ತವೆ. ಒಳಗಡೆ ತಿರುಚಿದ ಭಾಗಕ್ಕೆ ರಕ್ತ ಪೂರೈಕೆಯಾಗದೆ ಕೊಳೆಯಲು ಆರಂಭಿಸುತ್ತದೆ. ರೋಗಿಗೆ ಎಡೆಬಿಡದೆ ವಾಂತಿ ಆಗುವುದಲ್ಲದೆ, ಹೊಟ್ಟೆ ಊದಿಕೊಳ್ಳುತ್ತದೆ. ಈಪರಿಸ್ಥಿತಿಯಲ್ಲಿ ಯಾವುದೇ ಕಾರಣದಿಂದಲೂ ನಿರ್ಲಕ್ಷಿಸದೆ ನಾಲ್ಕರಿಂದ ಆರು ಗಂಟೆಯೊಳಗೆ ಶಸ್ತ್ರಚಿಕಿತ್ಸೆ ಮಾಡಿಸಬೇಕು. ಇಲ್ಲದಿದ್ದರೆ ರೋಗಿಯಜೀವಕ್ಕೆ ಅಪಾಯ. ತೊಡೆಯ ರಕ್ತನಾಳಗಳು ತೊಡೆಯ ಸಂದಿಯ ಇಕ್ಕಟ್ಟಾದ ದ್ವಾರದ ಮೂಲಕ ಹಾಯ್ದು ಹೋಗುತ್ತವೆ. ರಕ್ತನಾಳಗಳ ಸುತ್ತಕಿರಿದಾದ ನಾಳದಂಥ ರಂಧ್ರವಿರುತ್ತದೆ.
ಮಹಿಳೆಯರಲ್ಲಿ ಹೆಚ್ಚು
ಇದರ ಮೂಲಕವೂ ಕೆಲವೊಮ್ಮೆ ಕರುಳು ಇಲ್ಲವೇ ನೆಣಮಾಲೆಯ ಸಣ್ಣ ತುಣುಕುಗಳ ಕೆಳಗಿಳಿಯುವ ಪ್ರಯತ್ನ ನಡೆಸಿ ಸಿಕ್ಕಿಕೊಳ್ಳುತ್ತವೆ. ಇದಕ್ಕೆ ತೊಡೆಯ ಹರ್ನಿಯಾ ಎನ್ನುತ್ತಾರೆ. ಒಟ್ಟು ಹರ್ನಿಯಾಗಳ ಪೈಕಿ ಶೇ. 5 ರಿಂದ 6ರಷ್ಟು ಪ್ರಮಾಣದಲ್ಲಿ ಇರುವ ಈ ಹರ್ನಿಯಾ, ಗಂಡಸರಿಗಿಂತ ಹೆಂಗಸರಲ್ಲಿ ಮೂರು ಪಟ್ಟು ಜಾಸ್ತಿ. ತೊಡೆಯ ಒಳಬಂದಿಯ ಸಂದಿಯಲ್ಲಿ ಸಣ್ಣ ಗುಳ್ಳೆಯಂತೆ ಕಾಣುವ ಈ ಹರ್ನಿಯಾವನ್ನು ಪತ್ತೆಮಾಡುವುದು ಸುಲಭವಲ್ಲ. ಹರ್ನಿಯಾ ಇದ್ದವರಿಗೆ ದೈನಂದಿನ ಚಟುವಟಿಕೆಗಳಿಗೆ ಸ್ವಲ್ಪ ಅನಾನುಕೂಲ ಉಂಟಾಗುತ್ತದೆ. ಅದರೊಂದಿಗೆ ಕರುಳು ತಿರುಚಿಕೊಳ್ಳಬಹುದು. ಆದ್ದರಿಂದ ಹರ್ನಿಯಾ ಇದ್ದವರೆಲ್ಲರೂ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡು ಆದಷ್ಟು ಬೇಗ ಚಿಕಿತ್ಸೆ ಮಾಡಿಸಿಕೊಳ್ಳಬೇಕು.

 

 

 

 

ಡಾ. ಚಲಪತಿ
ಪ್ರೊಫೆಸರ್ ಅಫ್ ಜನರಲ್ ಸರ್ಜರಿ
ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, ವೈಟ್‍ಫೀಲ್ಡ್, ಬೆಂಗಳೂರು – 560066
080-28413384/82/83.   www.vims.ac.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!