ಧ್ಯಾನವು ಮೆದುಳಿಗೆ ಮಲ್ಟಿವಿಟಮಿನ್ ಇದ್ದಂತೆ

ಧ್ಯಾನವು ಮೆದುಳಿಗೆ ಮಲ್ಟಿವಿಟಮಿನ್ ಇದ್ದಂತೆ. ಅದನ್ನು ಪ್ರತಿದಿನ ತಪ್ಪದೆ ಅಭ್ಯಸಿಸಿ ಒತ್ತಡದಿಂದ ಮುಕ್ತರಾಗಿ.ಏಕಾಗ್ರತೆಯಿಂದ ಕೂಡಿರುವ ಧ್ಯಾನ ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ಹೊಂದಿದೆ. 

ಧ್ಯಾನವು ಮೆದುಳಿಗೆ ಮಲ್ಟಿವಿಟಮಿನ್ ಇದ್ದಂತೆಇಂದಿನ ಆಧುನಿಕ ಜೀವನದ ಜಂಜಾಟಗಳಾದ ಮನೆ ಕೆಲಸ, ವೃತಿ ಜೀವನದ ಒತ್ತಡ ಸೇರಿದಂತೆ ಅನೇಕ ಅವಶ್ಯಕ ಹಾಗೂ ಅನಾವಶ್ಯಕ ಜವಾಬ್ದಾರಿಯ ಕೆಲಸಗಳು ಮತ್ತು ಸಮಸ್ಯೆಗಳಿಂದಾಗಿ ಮನಸ್ಸು ಬಹುಬೇಗ ದಣಿಯುತ್ತದೆ. ಇದರಿಂದ ಜೀವನವು ಕೆಲವೊಮ್ಮೆ ತುಂಬಾ ಕಷ್ಟಕರ ಎನಿಸುತ್ತದೆ. ನಮ್ಮ ಜೀವನವು ಅಂದಿಗಿಂತಲೂ ಇಂದು ಹೆಚ್ಚು ಕಾರ್ಯನಿರತವಾಗಿದೆ, ತಂತ್ರಜ್ಞಾನ ಮತ್ತು ಡಿಜಿಟಲ್ ಲೋಕ ದಿನಪೂರ್ತಿ (24ಘಿ7) ನಮ್ಮನ್ನು ಒದ್ದಾಡುವಂತೆ ಮಾಡಿದೆ. ಇದರಿಂದಾಗಿ ಬಹುತೇಕ ಜನ ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳುವುದರಲ್ಲಿ ಆಶ್ವರ್ಯವೇನಿಲ್ಲ.

ವ್ಯಕ್ತಿಯ ದೈಹಿಕ ಮತ್ತು ಮಾನಸಿದಕ ಆರೋಗ್ಯ ಸರಿಯಾಗಿರಬೇಕು ಎಂದರೆ ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯವಾದ ವಿಚಾರವಾಗಿದೆ. ಇಲ್ಲವಾದರೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ತಲೆದೂರುವುದರಲ್ಲಿ ಸಂದೇಹವೆ ಇಲ್ಲ. ಆರೋಗ್ಯ ಸಮಸ್ಯೆ ಹಾಗೂ ಒತ್ತಡದ ಪರಿಸ್ಥಿತಿಯ ಸಮತೋಲನವನ್ನು ನಿರ್ವಹಿಸಲು ಸಾಧ್ಯವಾಗದೆ ಇದ್ದಾಗ ಬಹುಬೇಗ ಮನಸ್ಸು ಬಳಲಿಕೆಗೆ ಒಳಗಾಗುತ್ತದೆ. ನಿತ್ಯವೂ ಚೈತನ್ಯಶೀಲರಾಗಿರಬೇಕು ಎಂದರೆ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಸರಿಯಾಗಿರಬೇಕು.

ಧನಾತ್ಮಕ ಚಿಂತನೆಗಳೆಡೆಗೆ ಮನಸ್ಸು ತಿರುಗಿದಾಗ ಸಮಸ್ಯೆಗಳೆಲ್ಲವೂ ಸರಳವಾಗಿ ತೋರುತ್ತವೆ. ಕೆಲಸಗಳೂ, ಕಷ್ಟಗಳು ಸರಳವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಇಂತಹ ಒಂದು ಉತ್ತಮವಾದ ಮನಸ್ಸು ನಮ್ಮದಾಗಬೇಕು ಎಂದಾದರೆ ಮೊದಲು ಮನಸ್ಸಿಗೆ ಅನುಕೂಲವಾಗುವಂತ ಮನಸ್ಸಿನ ವ್ಯಾಯಾಮ ಅಥವಾ ಮನಸ್ಸಿಗೆ ಶಾಂತಿ ದೊರೆಯಬೇಕಾಗುತ್ತದೆ. ಮನಸ್ಸಿನ ಆರೋಗ್ಯವನ್ನು ಸದಾ ಕಾಲ ಆರೈಕೆ ಮಾಡುವ ಒಂದು ಪುರಾತನ ಆಧ್ಯಾತ್ಮಿಕ, ವೈಜ್ಞಾನಿಕ ಪದ್ಧತಿ ಅಥವಾ ಅತ್ಯುತ್ತಮವಾದ ವಿಧಾನ ಎಂದರೆ ‘ಧ್ಯಾನ’. ಏಕಾಗ್ರತೆಯಿಂದ ಕೂಡಿರುವ ಧ್ಯಾನ ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ಹೊಂದಿದೆ. ನಿತ್ಯವೂ ಒಂದು ನಿರ್ದಿಷ್ಟ ದಿಕ್ಕು, ಸ್ಥಳ ಹಾಗೂ ನಿರ್ದಿಷ್ಟ ಸಮಯದಲ್ಲಿ ಕ್ರಮವಾಗಿ ಧ್ಯಾನವನ್ನು ಕೈಗೊಳ್ಳುವುದರಿಂದ ಮಾನಸಿಕ ಸ್ಥಿತಿಯು ಸದಾ ಆರೋಗ್ಯಯುತವಾಗಿರುವುದಲ್ಲದೆ ದಿನ ಪೂರ್ತಿ ಉಲ್ಲಾಸದಲ್ಲಿರುವಂತೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಅನೇಕ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಸಹ ನಿಯಂತ್ರಣದಲ್ಲಿಡುತ್ತದೆ.

ಧ್ಯಾನವು ಒಂದು ಪುರಾತನವಾದ ಆಧ್ಯಾತ್ಮಿಕ, ವೈಜ್ಞಾನಿಕ ಆಚರಣೆಯಾಗಿದ್ದು, ಈ ಆಚರಣೆಯು ವರ್ಷಾನುವರ್ಷಗಳಿಂದ ವಿಕಸನಗೊಳ್ಳುತ್ತಾ ಬಂದಿದೆ. ಹಾಗೂ ಒತ್ತಡ, ಖಿನ್ನತೆ ಮತ್ತು ಉದ್ವೇಗಗಳಂತಹ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ತನ್ನ ಮಹತ್ವದ ಪಾತ್ರವನ್ನು ಹೊಂದಿದೆ. ಇಷ್ಟು ಮಾತ್ರವೆ ಅಲ್ಲ, ಧ್ಯಾನವು ನಮ್ಮ ಗ್ರಹಿಕೆಯ ಸಾಮಥ್ರ್ಯದ ಕುರಿತೂ ಕಾಳಜಿವಹಿಸುತ್ತದೆ. ಒಂದು ವೇಳೆ ನಾವೇನಾದರೂ ಅತಿಯಾದ ಉದಾಸೀನತೆಯಲ್ಲಿ ಗಂಭೀರವಾದ ಸ್ಥಿತಿಯಿಂದ ಬಳಲುತ್ತಿದ್ದರೆ, ನಮ್ಮಲ್ಲಿ ಏಕಾಗ್ರತೆ ಹಾಗೂ ಧ್ಯಾನದ ಕೊತರೆಯಿದೆ ಎಂದು ಗ್ರಹಿಸಬಹುದು. ಅದಾಗಿಯೂ, ನಮ್ಮ ಜೀವನಶೈಲಿಯಲ್ಲಿ ಸಕರಾತ್ಮಕ, ಆರೋಗ್ಯಕರ ಬದಲಾವಣೆಯನ್ನುಂಟು ಮಾಡಲು ಈ ಧ್ಯಾನದಿಂದ ಸಾಧ್ಯ ಎನ್ನಲಾಗಿದೆ.

ಧ್ಯಾನ ಎಂದರೇನು?

ಇದೊಂದು ಸಾಮಾನ್ಯ ಪ್ರಶ್ನೆ ಎನಿಸದೆ ಇರದು. ಆದರೆ ಧ್ಯಾನದ ಅರ್ಥ ವಿಶಾಲವಾದುದು. ಸಾಮಾನ್ಯವಾಗಿ ಕಣ್ಣು ಮುಚ್ಚಿಕೊಂಡು ದೇವರ ನಾಮ ಜಪಿಸುವುದು ಧ್ಯಾನ ಎಂತಲೂ, ಮನಸ್ಸನ್ನು ಖಾಲಿ ಮಾಡುವುದು, ಮನಸ್ಸನ್ನು ತೆರವುಗೊಳಿಸುವುದು ಅಥವಾ ಆಲೋಚನೆಗಳನ್ನು ನಿಲ್ಲಿಸುವುದು ಎಂದರ್ಥವಲ್ಲ.

ಧ್ಯಾನವೆಂದರೆ ಭ್ರಮಾತ್ಮಕವಾಗಿ ಕಲ್ಪಿಸುವುದಲ್ಲ,
ಧ್ಯಾನವೆಂದರೆ ಜಪಿಸುವುದಲ್ಲ,
ಧ್ಯಾನವೆಂದರೆ ಗಾಯನವು ಅಲ್ಲ,
ಧ್ಯಾನವೆಂದರೆ ನೃತ್ಯವೂ ಅಲ್ಲ,
ಧ್ಯಾನವೆಂದರೆ ಭಾವಲೋಕದಲ್ಲಿ ವಿಹರಿಸುವುದೂ ಅಲ್ಲ,
ಧ್ಯಾನವೆಂದರೆ ಪ್ರಾರ್ಥನೆಯು ಅಲ್ಲ,
ಧ್ಯಾನವೆಂದರೆ ಪ್ರಾಪಂಚಿಕತೆಯಲ್ಲಿ ತೊಡಗುವುದು ಅಲ್ಲ,
ಧ್ಯಾನವೆಂದರೆ ಇಲ್ಲದ ದೇವರನ್ನು, ಆತ್ಮವನ್ನು ಹುಡುಕಾಡುವುದು ಅಲ್ಲ.

ಆದರೆ ಧ್ಯಾನದ ಅರ್ಥ ‘ಮನಸ್ಸು ಮತ್ತು ದೇಹ ಒಂದೆಡೆ ಸೇರುವುದಾಗಿದೆ’. ಯಾವುದಾದರೂ ಒಂದು ವಿಷಯದ ಮೇಲೆ ಅಥವಾ ವಸ್ತುವಿನ ಮೇಲೆ ಎಡಬಿಡದೆ ಸಮಚಿತ್ತದಿಂದ ಗಮನವಿಡುವ ಸ್ಥಿತಿಯೆ ಧ್ಯಾನ. ಅಂದರೆ ಮನಸ್ಸಿನ ಸ್ವರೂಪವು ಯೋಚಿಸುವುದು. ಆ ಅಲೋಚನೆಗಳನ್ನು ಹೆಚ್ಚು ಸ್ಪಷ್ಟವಾಗಿ ನೋಡುವುದು, ಕಂಡುಕೊಳ್ಳುವ ಅಥವಾ ಸ್ಪಷ್ಟವಾಗಿ ಅರ್ಥೈಸಿಕೊಳ್ಳುವುದಾಗಿದೆ. ಮನಸ್ಸಿಗೆ ಅಸಾಧ್ಯವಾದ ಕೆಲಸವನ್ನು ಸಾಧ್ಯ ಮಾಡುವ ಸಾಮಥ್ರ್ಯ ಧ್ಯಾನದಲ್ಲಿದೆ ಎನ್ನಲಾಗಿದೆ.

ಪತಂಜಲಿ ಮುನಿಯು ತನ್ನ ಅಷ್ಟಾಂಗ ಯೋಗದಲ್ಲಿ ಧ್ಯಾನ ಕುರಿತು ವಿವರಿಸಿದ್ದು, ಧ್ಯಾನ ಸಾಧನೆಯ ಏಳನೇ ಮೆಟ್ಟಿಲಾಗಿದೆ. ಆರನೇ ಮೆಟ್ಟಿಲು ಧಾರಣ. ಧಾರಣ ಎಂದರೆ ಒಂದೇ ವಿಷಯದ ಮೇಲಿನ ಏಕಾಗ್ರತೆ. ಧ್ಯಾನ ಎಂದರೆ ತಲ್ಲೀನತೆ. ಮನಸ್ಸು ಚಂಚಲವಾಗದೆ, ತಿಕ್ಕಾಟಕ್ಕೊಳಗಾಗದೆ ತನ್ನ ಕ್ರಿಯೆಯತ್ತಲೇ ಏಕಾಗ್ರವಾಗಿರುವ ಸ್ಥಿತಿ. ಆಂತರ್ಯದ ಜ್ಞಾನವು ಬುದ್ಧಿಯೊಡನೆ ಉದ್ವೇಗ ರಹಿತವಾಗಿ ಸಂಗಮಿಸುವಂತೆ ಪ್ರೇರಣೆ ನೀಡುತ್ತದೆ. ಇದೇ ಸ್ಥಿತಿ ಹೆಚ್ಚು ಸಮಯ ಮುಂದುವರೆದರೆ ಅದೇ ಧ್ಯಾನ.

ಧ್ಯಾನ ಯಾರು ಬೇಕಾದರೂ ಮಾಡಬಹುದು. ಇದಕ್ಕೆ ವಯಸ್ಸಿನ ಮಿತಿಯಿಲ್ಲ. ಜಾತಿ, ಧರ್ಮ, ಲಿಂಗಗಳ ಬೇಧವಿಲ್ಲ. ಧ್ಯಾನವು ಅಭ್ಯಾಸಿಯ ಶಕ್ತಿಗನುಗುಣವಾಗಿ ಎಷ್ಟು ಹೊತ್ತು ಬೇಕಾದರೂ ಅಭ್ಯಾಸಿಸಬಹುದು. ಆದರೆ ಧ್ಯಾನದ ಕಡೆ ಮನಸ್ಸು ಹರಿಸುವುದು ತುಸು ಕಷ್ಟವೇ ಸರಿ. ಆದರೆ ದೃಢ ನಿರ್ಧಾರ, ಸಂಕಲ್ಪದಿಂದ ಮಾತ್ರ ಸಾಧ್ಯ. ಯಾವುದೇ ಮರವನ್ನು ನೆಟ್ಟಾಗ ಕೂಡಲೇ ಫಲ (ಹೂ, ಹಣ್ಣು) ದೊರೆಯುವುದಿಲ್ಲ. ಅದು ಫಲ ನೀಡಬೇಕಾದರೆ ಕೆಲವು ಕೆಲವು ದಿನಗಳು/ವರ್ಷಗಳೆ ಬೇಕಾಗುತ್ತದೆ. ಅದೇ ರೀತಿ ಧ್ಯಾನದಲ್ಲೂ ಕೂಡ. ಧ್ಯಾನ ಅಭ್ಯಾಸಿಸಿದ ಒಂದೆ ದಿನದಲ್ಲಿ ಫಲ ದೊರೆಯುವುದಿಲ್ಲ. ಆದರೆ ಭವಿಷ್ಯದಲ್ಲಿ ಖಂಡಿವಾಗಿಯೂ ಅನಿರೀಕ್ಷಿತ ಫಲ ದೊರೆಯುವುದಲ್ಲಿ ಸಂದೇಹವೇ ಇಲ್ಲ.

ಧ್ಯಾನದ ಪ್ರಕಾರಗಳು:

ಸಾಕಾರ ಅಥವಾ ಸಬೀಜ ಧ್ಯಾನ
ನಿರಾಕಾರ ಅಥವಾ ನಿರ್ಬೀಜ ಧ್ಯಾನ

ಸಾಕಾರ ಅಥವಾ ಸಬೀಜ ಧ್ಯಾನ:

ಧ್ಯಾನಕ್ಕೆ ಪೂರಕವಾಗಿ ವಸ್ತು, ದೇವರು, ಗುರು, ಸೂರ್ಯ, ಚಂದ್ರ, ನಕ್ಷತ್ರ ಹೀಗೆ ಪ್ರೀಯವಾದುದರ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ ಅದರ ರೂಪ, ಆಕಾರ, ಗುಣ, ಸಾಧನೆಗಳನ್ನು ಮನನ ಮಾಡಿಕೊಳ್ಳುತ್ತಾ ಅಥವಾ ಮಂತ್ರ, ಶ್ಲೋಕ ಪಠಣ ಸಾಧನದ ಮೂಲಕ ಏಕಾಗ್ರತೆಯನ್ನು ಪಡೆಯುವುದೇ ಸಾಕಾರ ಧ್ಯಾನ,

ನಿರಾಕಾರ ಅಥವಾ ನಿರ್ಬೀಜ ಧ್ಯಾನ:

ಧಾರಣಗೊಂಡ ದೇಹದ ಉಸಿರಾಟ ಪ್ರಕ್ರಿಯೆಯ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ ಕ್ರಮೇಣ ನಿರಾಕಾರವಾದ ಅನಂತಾತೀತವಾದ ‘ಂ’ ಶೂನ್ಯದತ್ತ ಮನಸ್ಸನ್ನು ಉನ್ನತ ಸ್ಥಿತಿಯತ್ತ ಕೊಂಡೊಯ್ಯುವುದೇ ನಿರಾಕಾರ ಧ್ಯಾನ.

ಧ್ಯಾನಕ್ಕೆ ಸಿದ್ಧತೆ:

ನಿಮ್ಮೊಳಗಿನ ಗೊಂದಲಗಳನ್ನು ಶಾಂತಗೊಳಿಸಲು ಹಾಗೂ ಅಸ್ಪಷ್ಟತೆಗಳನ್ನು ತಿಳಿಗೊಳಿಸಲು ಸ್ವಲ್ಪ ಸಯಮ ಮೀಸಲಿಡಿ. ಅದಕ್ಕಾಗಿ ನಿರಂತರ ವಾರ್ತೆ ಓದುವ ನಿಮ್ಮ ಬಾಯಿಯನ್ನು ಸ್ವಲ್ಪ ಹೊತ್ತು ಮೌನಗೊಳಿಸಿ, ಹೊರಗಿನ್ನೆಲ್ಲವನ್ನು ರಿಕಾರ್ಡಿಂಗ್ ಮಾಡುತ್ತಿರುವ ನಿಮ್ಮ ಕಿವಿಯನ್ನು ಸ್ವಲ್ಪ ಹೊತ್ತು ಸ್ತಬ್ಧಗೊಳಿಸಿ, ಪ್ರತಿ ಕ್ಷಣಕ್ಕೂ ಚಿತ್ರಣಗಳನ್ನು ಕ್ಲಿಕ್ಕಿಸುವ ನಿಮ್ಮ ಕಣ್ಣಿನ ರೆಪ್ಪೆಗಳನ್ನು ಮುಚ್ಚಿ ಮನಸ್ಸನ್ನು ಪರಿಪೂರ್ಣವಾಗಿ ಆಫ್ ಮಾಡಿ.

1. ಸೂಕ್ತವಾದ ಸ್ಥಳದ ಆಯ್ಕೆ: ಧ್ಯಾನವನ್ನು ಅಭ್ಯಾಸ ಮಾಡುವಲ್ಲಿ ಸ್ಥಳ ಪಾತ್ರ ಅತ್ಯಂತ ಮಹತ್ವದ್ದು. ಶುದ್ಧ ಗಾಳಿ ಬೆಳಕಿನಿಂದ ಕೂಡಿದ, ಸದ್ದು – ಗದ್ದಲಿಲ್ಲದ, ಸಮತಟ್ಟಾದ ಹಾಗೂ ಪ್ರಶಾಂತವಾದ ಸ್ಥಳವೇ ಧ್ಯಾನಕ್ಕೆ ಸೂಕ್ತ.

2. ಸಮಯ: ಬೆಳಿಗ್ಗೆ ಸಮಯ ಹಾಗೂ ಸಾಯಂಕಾಲ ಧ್ಯಾನವನ್ನು ಅಭ್ಯಾಸ ಮಾಡಬಹುದು. ಪ್ರಸ್ತುತ ಒತ್ತಡ ದಿನಗಳಲ್ಲಿ ಲಭ್ಯವಿರುವ ಬಿಡುವಿನ ವೇಳೆ ಲಘು ಧ್ಯಾನವನ್ನು ಮಾಡಿ ವಿಶ್ರಾಂತಿ ಪಡೆಯಬಹುದು.

3. ನೆಲ ಹಾಸು: ಧ್ಯಾನಕ್ಕೆ ಕೂರಲು ಶುಭ್ರವಾದ ಬಟ್ಟೆ ಅಥವಾ ಜಮಖಾನೆ ಉತ್ತಮ.
ಕುಳಿತುಕೊಳ್ಳುವ ವಿಧಾನ: ಧ್ಯಾನಕ್ಕೆ ಪದ್ಮಾಸನದಲ್ಲಿ ಕೂರುವುದು ಒಳಿತು. ಸಾಧ್ಯವಾಗದಿದ್ದಲ್ಲಿ ಯಾವುದಾದರೂ ಅನುಕೂಲಕರ ಸ್ಥಿತಿಯಲ್ಲಿ ಕೂರಬಹುದು. ಒಟ್ಟಿನಲ್ಲಿ ಬೆನ್ನುಹುರಿ, ಕುತ್ತಿಗೆ, ತಲೆ ನೇರವಾಗಿರಬೇಕು.

4. ಮುದ್ರೆ: ಧ್ಯಾನಕ್ಕೆ ಜ್ಞಾನ ಮುದೆ, ಚಿನ್ ಮುದ್ರೆ ಅಥವಾ ಚಿನ್ಮಯ ಮುದ್ರೆಯನ್ನು ಹಾಕಬಹುದು.

ಧ್ಯಾನವನ್ನು ಅಭ್ಯಾಸಿಸುವಲ್ಲಿ ಪಾಲಿಸಬೇಕಾದ ಕೆಲವು ಪ್ರಮುಖ ನಿಯಮಗಳು:

ಧ್ಯಾನವು ಮೆದುಳಿಗೆ ಮಲ್ಟಿವಿಟಮಿನ್ ಇದ್ದಂತೆ1. ಧ್ಯಾನ ಪ್ರಾರಂಭಿಸುವ ಮುನ್ನ ಮಲ, ಮೂತ್ರ ವಿಸರ್ಜನೆ ಮಾಡಿ ನಂತರ ಧ್ಯಾನಕ್ಕೆ ಕುಳಿತುಕೊಳ್ಳಬೇಕು.

2. ಶುಭ್ರವಾದ ಹಾಗೂ ಸರಳವಾದ ಉಡುಪನ್ನು ಧರಿಸಬೇಕು.

3. ಧ್ಯಾನಕ್ಕೆ ಮೊದಲು ಸ್ನಾನ ಮಾಡಿದರೆ ತುಂಬಾ ಒಳ್ಳೆಯದು.

4. ನೆಲದ ಮೇಲೆ ಜಮಖಾನೆಯನ್ನು ಹಾಸಿ ಅದರ ಮೇಲೆ ಧ್ಯಾನವನ್ನು ಮಾಡಬೇಕು.

5. ಹಿರಿಯರು ಹಾಗೂ ನೆಲದ ಮೇಲೆ ಕೂರಲು ಆಗದವರು ಕುರ್ಚಿಯ ಮೇಲೆ ನೇರವಾಗಿ ಕುಳಿತುಕೊಂಡು ಧ್ಯಾನವನ್ನು ಮಾಡಬಹುದು.

6. ಒತ್ತಡದಿಂದ ಮುಕ್ತರಾಗಿರಬೇಕು.

7. ಸಮಯವನ್ನು ಮುಂಚಿತವಾಗಿ ನಿರ್ಧರಿಸಿಕೊಳ್ಳಬೇಕು.

8. ಮನಸ್ಸನ್ನು ಪ್ರಶಾಂತವಾಗಿರುವಂತೆ ನೋಡಿಕೊಳ್ಳಬೇಕು.

9. ಧ್ಯಾನಕ್ಕೆ ಯಾವುದಾದರೊಂದು ದಿಕ್ಕು, ಸ್ಥಳ ಹಾಗೂ ನಿಗದಿತ ಸಮಯವನ್ನು ನಿರ್ಧರಿಸಿಕೊಳ್ಳಬೇಕು.

ನಾಗರಾಜ್ ಆರ್. ಸಾಲೋಳ್ಳಿ
ಭೂಮಿ ಯೋಗ ಫೌಂಡೇಶನ್ ಟ್ರಸ್ಟ್ (ರಿ.)
#57, ಗುರುಕುಲ ಶಾಲೆ ಸಮೀಪ, ಓಂ ನಗರ,
ಸೇಡಂ ರಸ್ತೆ, ಕಲಬುರಗಿ-585 105
ದೂ. : 9972776062
ಇಮೇಲ್ : bhoomiyogafoundation2016@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!