ಒಮ್ಮಿಂದೊಮ್ಮೆಲೇ ಪ್ರಾರಂಭವಾಗುವ ಜ್ವರ, ತಲೆನೋವು, ಸ್ಪಷ್ಟವಾಗಿ ಕಣ್ಣುಗುಡ್ಡೆಗಳ ಹಿಂಭಾಗದಲ್ಲಿ ಪ್ರಾರಂಭವಾಗುವ ನೋವು, ತೀವ್ರತರ ಸ್ನಾಯು ಮತ್ತು ಸಂಧಿಗಳ ನೋವು, ಮೈಯಲ್ಲಿ ದಡಾರ ಸದೃಶ ಮಚ್ಚೆಗಳು ಡೆಂಗ್ಯೂಜ್ವರದ ಪ್ರಾರಂಭಿಕ ಲಕ್ಷಣಗಳು. ಡೆಂಗ್ಯೂ ಜ್ವರ ಏಡಿಸ್ ಈಜಿಪ್ಟ್ಯೆ ಏ ಸೊಳ್ಳೆಗಳ ಮುಖಾಂತರ ಹರಡುತ್ತದೆ. ಇದು ಡೆಂಗ್ಯೂ ವೈರಸ್‍ಗಳ ಉಪಸರ್ಗದಿಂದ ಹರಡುವ ಜ್ವರವಾಗಿದ್ದು, ಮಳೆಗಾಲದ ಪ್ರಾರಂಭದಲ್ಲಿ ಇದರ ಹಾವಳಿ ಜಾಸ್ತಿಯಾಗಿರುತ್ತದೆ.
ಈಡಿಸ್‍ಈಜಿಪ್ಟೈ ಸೊಳ್ಳೆಗಳು ಬೇಸಿಗೆ ಕಾಲದ ಅಂತ್ಯದಲ್ಲಿ ಸುರಿದ ಮಳೆಗೆ ಮರದ ಪೊಟರೆಗಳಲ್ಲಿ, ಹೊಂಡಗಳಲ್ಲಿ, ಹೂಕುಂಡಗಳು, ಹೊರಗೆ ಚೆಲ್ಲಿದ ಅನುಪಯುಕ್ತ ಪ್ಲಾಸ್ಟಿಕ್ ಚೀಲಗಳು, ಪಾತ್ರೆಗಳು, ಗೆರಟೆಗಳಲ್ಲಿ, ಚರಂಡಿಗಳಲ್ಲಿ ಸಂಗ್ರಹವಾದ ನೀರಿನಲ್ಲಿ, ತಂಪಾಗಿರುವ ಜಾಗಗಳಲ್ಲಿ ಮೊಟ್ಟೆಗಳನ್ನಿಡುತ್ತವೆ. ಈ ಮೊಟ್ಟೆಗಳು ಲಾರ್ವಾಗಳಾಗಿ ಪರಿವರ್ತನೆ ಹೊಂದಿ ಮಳೆಗಾಲದ ಪ್ರಾರಂಭದಲ್ಲಿ ಬಲಿತು ಮರಿಸೊಳ್ಳೆಗಳು ಹುಟ್ಟಿಕೊಳ್ಳುತ್ತವೆ. ಮೊಟ್ಟೆಗಳು ಡೆಂಗ್ಯೂ ವೈರಸ್‍ನಿಂದ ಭಾದಿತವಾಗಿದ್ದಲ್ಲಿ ಅವುಗಳಿಂದ ಹುಟ್ಟಿದ ಸೊಳ್ಳೆಗಳೂ ಕೂಡಾ ಅದೇ ವೈರಸ್‍ಗಳನ್ನು ತನ್ನದೇಹದಲ್ಲಿ ವೃದ್ಧಿಸಿಕೊಂಡು ಅವುಗಳ ಲಾಲಾರಸದ ಮುಖಾಂತರ ಕಚ್ಚಿಸಿಕೊಂಡ ಆರೋಗ್ಯವಂತ ಮನುಷ್ಯರಿಗೆ ವರ್ಗಾವಣೆಯಾಗಿ ರೋಗ ಹರಡುತ್ತದೆ.
ಡೆಂಗ್ಯೂ ಜ್ವರ ಸಾಮಾನ್ಯವಾಗಿ ಸೊಳ್ಳೆ ಕಚ್ಚಿಸಿಕೊಂಡ 4 ರಿಂದ 14 ದಿನಗಳೊಳಗೆ ಪ್ರಾರಂಭವಾಗುತ್ತದೆ. ಚಿಕ್ಕ ಮಕ್ಕಳು ಹೆಚ್ಚಾಗಿ ಅಧಿಕ ಜ್ವರ ಭಾದೆಯಿಂದ ಬಳಲುತ್ತಾರೆ. ಸಾಮಾನ್ಯವಾಗಿ ಮನುಷ್ಯರಲ್ಲಿ ವೈರಸ್‍ನ ವಿರುದ್ಧವಿರುವ ಸಹಜ ರೋಗನಿರೋಧಕ ಶಕ್ತಿಯಿಂದಾಗಿ ಸೊಳ್ಳೆ ಕಚ್ಚಿಸಿಕೊಂಡ 80 ಶೇಕಡಾ ಜನರಿಗೆ ಜ್ವರ ಪ್ರಾರಂಭವಾಗುವುದಿಲ್ಲ. ಕೇವಲ 20 ಶೇಕಡಾ ಜನರು ಜ್ವರದಿಂದ ಬಳಲುತ್ತಾರೆ. ಇಲ್ಲಿಯೂ ಜ್ವರದಿಂದ ಬಳಲುವ ಕೇವಲ 5 ಶೇಕಡಾ ಜನರಷ್ಟೇ ತೀವ್ರತರ ಜ್ವರ ಭಾದೆಗೊಳಗಾಗುತ್ತಾರೆ. ಉಳಿದವರು ಸಾಮಾನ್ಯಜ್ವರ ಲಕ್ಷಣಗಳೊಂದಿಗೆ ಉಪಶಮನ ಹೊಂದುತ್ತಾರೆ.
ಡೆಂಗ್ಯೂ ಜ್ವರ 4 ವಿವಿಧ ಜೀನ್‍ಟೈಪ್ ವೈರಸ್‍ಗಳಿಂದ ಹರಡುತ್ತದೆ. ಜ್ವರ ಬಂದ ನಂತರ ದೇಹದಲ್ಲಿ ಸಹಜರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿ ಜ್ವರ ಉಪಶಮನವಾಗುತ್ತದೆ. ಸಾಮಾನ್ಯವಾಗಿ ಡೆಂಗ್ಯೂ ಭಾದೆಗೊಳಗಾದ ವ್ಯಕ್ತಿ ಜ್ವರದಿಂದ 4 ರಿಂದ 7 ದಿನಗಳಲ್ಲಿ ಗುಣಮುಖನಾಗುತ್ತಾನೆ. ಒಮ್ಮೆ ಒಂದು ವಿಧದ ಜೀನ್‍ಟೈಪ್‍ನಿಂದ ಜ್ವರ ಬಂದು ಉಪಶಮನ ಹೊಂದಿದ ವ್ಯಕ್ತಿಗೆ ಜೀವನ ಪರ್ಯಂತ ಆ ವಿಧದ ಜೀನ್‍ಟೈಪ್ ವೈರಸ್‍ನ ವಿರುದ್ಧ ರೋಗ ನಿರೋಧಕ ಶಕ್ತಿ ಹೊಂದುತ್ತಾನೆ ಹಾಗೂ ಆ ವಿಧದ ಜ್ವರ ಭಾದೆಯಿಂದ ಮತ್ತೆ ಬಳಲುವುದಿಲ್ಲ.
ಜ್ವರ ಲಕ್ಷಣಗಳು:
ತೀವ್ರತರ ಅಧಿಕ ಜ್ವರ, ತಲೆನೋವು, ಕಣ್ಣುಗುಡ್ಡೆಗಳ ಹಿಂಭಾಗದಲ್ಲಿ ಚುಚ್ಚುವ ನೋವು, ತೀವ್ರತರ ಸ್ನಾಯು, ಗಂಟು ನೋವು, ಮೈಯಲ್ಲಿ ಕೆಂಪು ದಡಾರ ಸದೃಶ ಮಚ್ಚೆಗಳು ಡೆಂಗ್ಯೂ ಜ್ವರದ ಪ್ರಾರಂಭಿಕ ಲಕ್ಷಣಗಳು. ಇವುಗಳು 3 ವಿವಿಧ ಹಂತಗಳಲ್ಲಿ ಗೋಚರಿಸುತ್ತವೆ. ಮೊದಲಾಗಿ ತೀವ್ರ ಜ್ವರ 104ಡಿಗ್ರಿ, ತೀವ್ರ ಮೈಕೈ ನೋವು, ತಲೆ ನೋವು ಇದು 3ರಿಂದ 7 ದಿನಗಳವರೆಗೆ ಮುಂದುವರಿಯುತ್ತದೆ. ಕೆಲವೊಮ್ಮೆ ವಾಂತಿ, ದಡಾರದಂತ ಸಣ್ಣ ಮಚ್ಚೆಗಳು ಮೊದಲ 2 ದಿನಗಳಲ್ಲಿ ಗೋಚರಿಸಬಹುದು. ನಂತರ ಮಾಯವಾಗುತ್ತವೆ. ಮೂಗಿನಿಂದ, ಬಾಯಿಯಿಂದ, ಹಲ್ಲಿನ ಸಂಧಿನಿಂದ ರಕ್ತ ಜಿನುಗುವುದು ಕಂಡುಬರಬಹುದು. ನಂತರ ಜ್ವರ ಉಪಶಮನ ಹೊಂದಿ ಎಲ್ಲಾ ಲಕ್ಷಣಗಳು ಸಹಜ ಸ್ಥಿತಿಗೆ ಬರುತ್ತವೆ. ಕೆಲವರು ಒಂದೆರಡು ದಿನಗಳೊಳಗೆ ಅಲ್ಪ ಲಕ್ಷಣಗಳೊಂದಿಗೆ ಗುಣಮುಖರಾಗುತ್ತಾರೆ.
ಕೇವಲ ಕಲವೇ ಮಂದಿ ತೀವ್ರಾವಸ್ಥೆಗೆ ತಲಪುತ್ತಾರೆ. ಆದರೆ ಸಾವು ಸಂಭವಿಸುವುದು ಅತಿ ವಿರಳ. ಬೇರೆ ರೋಗಗಳಿಂದ ಸಮ್ಮಿಳಿತವಾಗಿ, ಅಥವಾ ವಿವಿಧ ಬೇರೆ ಔಷಧ ಸೇವನೆಯ ದುಷ್ಪರಿಣಾಮಗಳಿಂದಾಗಿ ಅಸಾಧ್ಯವಾಗಿ ಪರಿಣಮಿಸದ ಹೊರತು ಸಾವು ಸಂಭವಿಸುವುದಿಲ್ಲ.
ತೀವ್ರತರ ಡೆಂಗ್ಯೂವಿನಲ್ಲಿ ಕೆಲವೊಮ್ಮೆ ಕೆಲವರಲ್ಲಿ ಜ್ವರದೊಂದಿಗೆ ಸೂಕ್ಷ್ಮ ರಕ್ತನಾಳಗಳಲ್ಲಿ ಪ್ಲಾಸ್ಮಾ ದ್ರವ ಒಸರುವಿಕೆಯಿಂದ ಎದೆ ಮತ್ತು ಹೊಟ್ಟೆಯೊಳಗಡೆ ಅದು ಸಂಗ್ರಹವಾಗಿ ಅಥವಾ ರಕ್ತಸ್ರಾವದಿಂದಾಗಿ ಉಪಯುಕ್ತ ದೇಹದ ಅಂಗಗಳಿಗೆ ರಕ್ತ ಪೂರೈಕೆಯಾಗದೆ ತಡೆಯುಂಟಾಗಿ ಅಂಗಾಂಗಗಳ ವೈಫಲ್ಯದಿಂದ ಅಥವಾ ಡೆಂಗ್ಯೂ ರೋಗದಿಂದ ಬಳಲಿದ ರೋಗಿಗೆ ಇತರ ಬೇರೆ ರೋಗಗಳ ಸೋಂಕಿಗೊಳಗಾಗಿ ಸಾವು ಸಂಭವಿಸುವ ಅತಿ ವಿರಳ ಘಟನೆಗಳು ದಾಖಲಾಗಿವೆ.
ಕೆಲವೊಮ್ಮೆ ಜ್ವರ ಉಪಶಮನ ಹೊಂದಿದ ಹಂತದಲ್ಲಿ ಪುನಃ ತೀವ್ರ ಮೈಕೆರೆತ, ಹೃದಯ ಬಡಿತದ ಕುಸಿತ, ತೀವ್ರ ಸುಸ್ತು, ನಡುಕ, ಸೆಳೆತ, ಅಪಸ್ಮಾರ, ಮೂರ್ಛೆ ಉಂಟಾಗಿ ಮೆದುಳಿಗೆ ಹಾನಿಯುಂಟಾಗಿ ಪಕ್ಷಾಘಾತ ಸಂಭವಿಸಿದ ಘಟನೆಗಳೂ ದಾಖಲಾಗಿವೆ.
ರೋಗ ಪತ್ತೆ ವಿಧಾನ:
ಸಾಮಾನ್ಯವಾಗಿ ರೋಗ ಪತ್ತೆಕಾರ್ಯವನ್ನು ರೋಗ ಲಕ್ಷಣಗಳ ಮುಖಾಂತರ ಕಂಡು ಹಿಡಿಯಲಾಗುವುದು. ರೋಗಿಯ ರಕ್ತ ಮಾದರಿಯ ಡೆಂಗ್ಯೂ ಟೆಸ್ಟ್‍ಕಿಟ್, ಎಲಿಸಾ ಮತ್ತು ಪಾಲಿಮರೈಸ್ಡ್ ಚೈನ್‍ರೀಯಾಕ್ಷನ್ ರಕ್ತ ಪರೀಕ್ಷೆಯಿಂದ ನಿಖರವಾಗಿ ರೋಗ ಪತ್ತೆಕಾರ್ಯ ಕಂಡುಕೊಳ್ಳಬಹುದು. ರಕ್ತಕಣಗಳ ಪರೀಕ್ಷೆಯಿಂದ ಪ್ಲೇಟ್‍ಲೆಟ್‍ಕಣಗಳ ಪರೀಕ್ಷೆಯಿಂದ ರೋಗ ತೀವ್ರತೆಯನ್ನು ಕಂಡುಕೊಳ್ಳಬಹುದು. ಆದರೆ ಪ್ಲೇಟ್‍ಲೆಟ್ ರಕ್ತಕಣಗಳ ಸಂಖ್ಯೆಯನ್ನು ಅಟೋಸೆಲ್ ಕೌಂಟರ್ ಮುಖಾಂತರ ಕಂಡುಕೊಳ್ಳುವುದು ಕೆಲವೊಮ್ಮೆ ಪ್ಲೇಟ್‍ಲೆಟ್ ರಕ್ತಕಣಗಳ ತಪ್ಪು ಕುಸಿತ ಸಂಖ್ಯೆಯನ್ನು ತೋರಿಸುವುದರಿಂದ ಬ್ಲಡ್‍ಸ್ಟೈನ್‍ನ ಸೂಕ್ಷ್ಮದರ್ಶಕ ಪರೀಕ್ಷೆ ಮುಖಾಂತರವೇ ಖಚಿತ ಪಡಿಸಿಕೊಳ್ಳಬೇಕಾಗುತ್ತದೆ.
ಚಿಕಿತ್ಸೆ ಮತ್ತುಉಪಚಾರ:
ಡೆಂಗ್ಯೂ ರೋಗೋಪಶಮನವು ಸಹಜ ವ್ಯಕ್ತಿಗತ ರೋಗ ನಿರೋಧಕ ಶಕ್ತಿ ಉಂಟಾಗಿ ಗುಣಮುಖ ಹೊಂದುವುದರಿಂದ ಲಕ್ಷಣಗಳಿಗನುಗುಣವಾಗಿ ಉಪಶಮನಚಿಕಿತ್ಸೆ ನೀಡಲಾಗುವುದು, ದ್ರವಾಹಾರ ಸೇವನೆ ಮತ್ತು ತೀವ್ರ ರೋಗಭಾದೆಗೊಳಗಾದವರಲ್ಲಿ ರಕ್ತನಾಳಗಳ ಮೂಲಕ ದ್ರವ ಮರುಪೂರಣ ಹಾಗೂ ರಕ್ತಸ್ರಾವ ಉಂಟಾದ ರೋಗಿಗಳಲ್ಲಿ ರಕ್ತ ಮರುಪೂರಣ ಚಿಕಿತ್ಸೆ ಕೈಗೊಳ್ಳಲಾಗುವುದು. ಪ್ಲೇಟ್‍ಲೆಟ್ ರಕ್ತಕಣಗಳ ತೀವ್ರ ಕುಸಿತದಲ್ಲಿ ಪ್ಲೇಟ್‍ಲೆಟ್ ರಕ್ತಕಣಗಳ ಮರುಪೂರಣ ಚಿಕಿತ್ಸೆ ಕೈಗೊಳ್ಳಲಾಗುವುದು.
ಡೆಂಗ್ಯೂ ಜ್ವರದಲ್ಲಿ ಆಯುರ್ವೇದ ಚಿಕಿತ್ಸೆ:
ಆಯುರ್ವೇದಲ್ಲಿ ಸಹಜರೋಗ ನಿರೋಧಕ ಶಕ್ತಿ ವೃದ್ಧಿ ಹೊಂದುವ ಚಿಕಿತ್ಸೆ ಹಾಗೂ ವೈರಸ್ ಸೋಂಕಿಗೊಳಗಾದ ವ್ಯಕ್ತಿಯಲ್ಲಿ ವೈರಸ್ ವಿಷ ಪರಿಣಾಮದಿಂದಾಗಿ ತೀವ್ರಜ್ವರ ಹಾಗೂ ನೋವಿನ ಲಕ್ಷಣಗಳು ಉಂಟಾಗುವುದರಿಂದ ವೈರಸ್ ವಿಷ ಶಮನ ಹೊಂದುವ ಚಿಕಿತ್ಸೆ ನೀಡುವುದರಿಂದ ರೋಗಿ ಶೀಘ್ರವಾಗಿ ಚೇತರಿಸಿಕೊಳ್ಳುತ್ತಾನೆ.
ತ್ರಿಭುವನಕೀರ್ತಿರಸ, ಮಹಾವಾತವಿದ್ವಂಸ ರಸ, ಕಾಮದುಘಾರಸ ಶುಂಠಿರಸದೊಂದಿಗೆ ಗುಡೂಚಿಕಷಾಯದ ಅನುಪಾನ ಸೇವನೆ ಮಾಡಬೇಕು ಬೇಕು. ಈ ಔಷದೋಪಚಾರದಿಂದ ಡೆಂಗ್ಯೂವಿನ ಜ್ವರ ಹಾಗೂ ಇತರ ಲಕ್ಷಣಗಳು ಬೇಗನೆ ಉಪಶಮನ ಹೊಂದಿ ಗುಣಮುಖನಾಗುತ್ತಾನೆ.
ವೈರಸ್‍ನ ವಿಷ ಪರಿಣಾಮ ತಗ್ಗಿಸುವಲ್ಲಿ ಅರ್ಕಾದಿ ಗಣಕಷಾಯ, ಪಪ್ಪಾಯ ಎಲೆ ಸ್ವರಸ, ಬಿಲ್ವಾದಿ ಗಣ, ಕರಂಜಾದಿ ಗಣ, ಆರಗ್ವದಾದಿ ಗಣ ದ್ರವ್ಯಗಳ ಕಷಾಯವೂ ಉಪಯುಕ್ತವಾಗಿರುತ್ತವೆ. ವೈರಸ್‍ನ ವಿಷ ಪರಿಣಾಮವನ್ನು ತಗ್ಗಿಸುವುದರಿಂದ ಪ್ಲೇಟ್‍ಲೆಟ್ ರಕ್ತಕಣಗಳ ಕುಗ್ಗುವಿಕೆ ಉಂಟಾಗುವುದಿಲ್ಲ. ಇದೇ ಕಾರಣದಿಂದ ಸಿದ್ಧ ವೈದ್ಯ ಪದ್ದತಿಯವರು ತಮಿಳುನಾಡುವಿನಲ್ಲಿ ತೀವ್ರ ಡೆಂಗ್ಯೂಜ್ವರ ಹಾವಳಿಯಲ್ಲಿ ಪಪ್ಪಾಯ ಎಲೆ ಸ್ವರಸ ಸೇವನೆಯಿಂದ ಜ್ವರದ ತೀವ್ರತೆಯನ್ನು ತಗ್ಗಿಸಿರುತ್ತಾರೆ.
ಡಾ. ಹರಿಪ್ರಸಾದ್ ಸುವರ್ಣ
ಸುವರ್ಣ ಕ್ಲಿನಿಕ್
ಅಳಕೆ, ಮಂಗಳೂರು
ಮೊ.: 9880238693
ಅಳದಂಗಡಿ, ಬೆಳ್ತಂಗಡಿ
ಮೊ.: 9449616356
email:suvarnaclini2014@gmail.com
Web: www.suvarnaclinic.com