ದೀಪಗಳ ಹಬ್ಬ ದೀಪಾವಳಿ

ದೀಪಗಳ ಹಬ್ಬ ದೀಪಾವಳಿ ಸಂಭ್ರಮ, ಸಡಗರ ಮತ್ತು ಉತ್ಸಾಹಗಳನ್ನು ತರಬೇಕು. ಗೆಳೆಯರು ಸಂಬಂಧಿಕರು ಎಲ್ಲರೂ ರುಚಿಯಾದ ಸಿಹಿ ತಿನಿಸುಗಳನ್ನು ತಿಂದು, ಹೊಸ ಬಟ್ಟೆಗಳನ್ನು ಹಾಕಿಕೊಂಡು ಸಂತೋಷ ಪಡಬೇಕು. ಯಾರೂ ಪಟಾಕಿಗಳ ಅನಾಹುತದಿಂದ ಆಸ್ಪತ್ರೆ ಸೇರಬಾರದು.

ದೀಪಗಳ ಹಬ್ಬ ದೀಪಾವಳಿ

ದೀಪಾವಳಿಯು ಹಿಂದುಗಳ ಮತ್ತು ಜೈನರ ಜನಪ್ರಿಯ ಹಬ್ಬ. ದೀಪಾವಳಿಯು ಕತ್ತಲೆಯ ವಿರುದ್ಧ ಜನಗಳಿಸಿದ ಬೆಳಕಿನ ಸಂಕೇತ, ಅಜ್ಞಾನದ ವಿರುದ್ಧ ಜ್ಞಾನದ ಜಯದ ಸಂಕೇತ, ದುಷ್ಟರ ವಿರುದ್ಧ ಶಿಷ್ಟರ ಜಯದ ಸಂಕೇತ. ಕಟ್ಟದ್ದರ ವಿರುದ್ಧ ಒಳ್ಳೆಯತನದ ಜಯದ ಸಂಕೇತ. ದೀಪಾವಳಿ ಹಬ್ಬದಲ್ಲಿ ಮನೆಗಳು, ಅಂಗಡಿಗಳು, ಕಚೇರಿಗಳು, ಮಠಗಳು ಮತ್ತು ಮಂದಿರಗಳನ್ನು ಸ್ವಚ್ಛಗೊಳಿಸಿ, ಸಿಂಗರಿಸಿ, ದೀಪಾಲಂಕಾರ ಮಾಡಿ ಲಕ್ಷ್ಮಿ, ಸರಸ್ವತಿ, ಗಣೇಶ ಮತ್ತು ಕಬೇರ ದೇವರುಗಳನ್ನು ಪೂಜಿಸುವರು. ತಮ್ಮ ಎಲ್ಲಾ ಬಂಧುಗಳನ್ನು, ಗೆಳೆಯರನ್ನು ಕರೆದು, ಸಿಹಿ ಹಂಚಿ, ಕಾಣಿಕೆಗಳನ್ನು ಕೊಟ್ಟು ಸಂತೋಷ ಪಡುವರು. ತಾವು ಕೂಡ ಒಳ್ಳೆಯ ಮತ್ತು ಹೊಸ ಬಟ್ಟೆಗಳನ್ನು ಹಾಕಿಕೊಂಡು ಸಂಭ್ರಮಿಸುವರು. ಹಬ್ಬದ ದಿವಸ ಮನೆಯ ಮುಂದೆ ಮತ್ತು ಅಂಗಡಿಯ ಮುಂದೆ ಪಟಾಕಿ (ಮದ್ದು-ಗುಂಡುಗಳು) ಸಿಡಿಸಿ ಸಂಭ್ರಮಿಸುವರು.

ವಿಜಯ ದಶಮಿಯ 18ನೇ ದಿವಸ ದೀಪಾವಳಿ ಆಚರಿಸುತ್ತಾರೆ. ಪ್ರಾರಂಭವಾಗುವುದಕ್ಕಿಂತ ಮೊದಲು ಮತ್ತು ಕೃಷಿಕರ ವರ್ಷದ ಕೊನೆಯ ಹಬ್ಬ. ದೀಪಾವಳಿ ಹಬ್ಬವನ್ನು ರಾಷ್ಟ್ರೀಯ ಹಬ್ಬವಾಗಿ ಭಾರತ, ನೇಪಾಳ, ಸಿಂಗಾಪುರ, ಶ್ರೀಲಂಕ, ಮಲೇಶಿಯಾ, ಫಿಜಿ, ಮೈನ್ಮಾರ್ ಇನ್ನು ಮುಂತಾದ ದೇಶದ ಜನರು ಆಚರಿಸುತ್ತಾರೆ. ಉದ್ಯೋಗಸ್ಥರು ಕೂಡ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಕಛೇರಿಗಳಿಗೆ ರಜೆ ಘೋಷಣೆ ಮಾಡುತ್ತಾರೆ. ಭಾರತದೇಶ ಬಿಟ್ಟು ಕೆಲಸ ಮಾಡಲು ಬೇರೆ ದೇಶಗಳಿಗೆ ತೆರಳಿದ ಭಾರತೀಯರು ಆ ದೇಶಗಳಲ್ಲೂ ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸುತ್ತಾರೆ.

ದೀಪಾವಳಿಯು ಸಂಸ್ಕøತ ಶಬ್ದ (ದೀಪ+ಸಾಲು). ಸಾಲು ಸಾಲು ದೀಪಗಳಿಂದ ಮನೆ, ಮಂದಿರ, ಅಂಗಡಿ ಮತ್ತು ಕಛೇರಿಗಳನ್ನು ಅಲಂಕರಿಸುತ್ತಾರೆ. ದೀಪಾವಳಿ ಅಮಾವಾಸ್ಯೆಯ ಕತ್ತಲು ತುಂಬಿದ ರಾತ್ರಿ, ಈ ಕತ್ತಲೆಯನ್ನು ಹೋಗಲಾಡಿಸಲು ದೀಪಗಳನ್ನು ಹಚ್ಚುತ್ತಾರೆ. ಐಶ್ವರ್ಯ ದೇವತೆಯಾದ ಲಕ್ಷ್ಮಿಯು ದೀಪಾವಳಿ ಹಬ್ಬದ ಸಮಯದಲ್ಲಿ ಯಾರ ಮನೆಗಳನ್ನು ದೀಪಗಳಿಂದ ಅಲಂಕರಿಸಿ ಸಂತೋಷದಿಂದ ಇರುತ್ತಾರೋ ಅಂತವರ ಮನೆಗಳಲ್ಲಿ ನೆಲೆಸಿ ಅವರಿಗೆ ಹಣ, ಐಶ್ವರ್ಯ, ಸುಖ ಮತ್ತು ಆರೋಗ್ಯ ಕೊಟ್ಟು ಅವರ ಮನೆಯಲ್ಲಿ ನೆಲೆಸುವಳು ಎಂಬ ಪ್ರತೀತಿ (ನಂಬಿಕೆ).

ಐದು ದಿನಗಳ ದೀಪಾವಳಿ:

ದೀಪಾವಳಿ ಹಬ್ಬವನ್ನು ಐದು ದಿನಗಳಲ್ಲಿ ಆಚರಿಸುತ್ತಾರೆ.
1. ಮೊದಲನೆಯ ದಿನ – ಧನ್ವಂತರಿ ಪೂಜೆ. ಈ ದಿವಸವನ್ನು ಉತ್ತರ ಭಾರತದಲ್ಲಿ ಧನತಿರಿ ಅಂದರೆ ಧನ = ಹಣ, ತೆರಿ. ವಿಜಯದಶಮಿಯು ಮುಗಿದು 13 ದಿನಗಳು ಮುಗಿದಿವೆ ಎಂದು ಅರ್ಥ. ಮೊದಲನೆಯ ದಿವಸ ಅಂಗಡಿ ಮತ್ತು ಕಛೇರಿಗಳನ್ನು ಸ್ವಚ್ಛ ಮಾಡುತ್ತಾರೆ. ಸುಣ್ಣ, ಬಣ್ಣ ಹಚ್ಚಿ, ದುರಸ್ತಿ ಕಾರ್ಯ ಮಾಡಿ ಮುಂದಿನ ಒಂದು ವರ್ಷದವರೆಗೆ ಅರೋಗ್ಯವಾಗಿ ಮನೆಯಲ್ಲಿ ಇರಲು ಅನುಕೂಲ ಮಾಡಿಕೊಳ್ಳುತ್ತಾರೆ. ದಕ್ಷಿಣ ಭಾರತದಲ್ಲಿ ಈ ದಿವಸವನ್ನು ಧನ್ವಂತರಿ ದಿವಸ ಎಂದು ಧನ್ವಂತರಿ ದೇವರನ್ನು ಪೂಜಿಸುತ್ತಾರೆ. (ಸಂಪೂರ್ಣ ಅರೋಗ್ಯ ದಯಪಾಲಿಸುವ ದೇವರು).

2. ಎರಡನೇ ದಿನ : ಮನೆಯ ಎಲ್ಲ ಭಾಗಗಳಲ್ಲಿ ರಂಗೋಲಿಯನ್ನು ಹಾಕಿ ದೀಪಾಲಂಕಾರವನ್ನು ಮಾಡುತ್ತಾರೆ. ಮಾವಿನ ಎಲೆಯ ತೋರಣ ಮತ್ತು ಹೂವಿನ ಅಲಂಕಾರಮಾಡಿ ಐಶ್ವರ್ಯ ದೇವತೆಯು ಸಂತೋಷಪಟ್ಟು ನಮ್ಮ ಮನೆ ಸೇರಲಿ ಎಂದು ಬೇಡಿಕೊಳ್ಳುತ್ತಾರೆ.

3. ದೀಪಾವಳಿ ಅಮಾವಸ್ಯೆ : ಐಶ್ವರ್ಯ ದೇವತೆಯಾದ ಲಕ್ಷ್ಮೀ, ವಿದ್ಯಾ ದೇವತೆಯಾದ ಸರಸ್ವತಿ, ಬುದ್ಧಿ ದೇವತೆಯಾದ ಗಣಪತಿ ಮತ್ತು ಲೆಕ್ಕಪತ್ರದ ದೇವತೆಯಾದ ಕುಬೇರ ಈ ನಾಲ್ಕು ದೇವತೆಗಳನ್ನು ಪೂಜಿಸುತ್ತಾರೆ. ಮನೆಯಲ್ಲಿ ಹೆಣ್ಣುಮಕ್ಕಳು ದೇವರ ಹಾಡುಗಳನ್ನು ಹಾಡಿ ಎಲ್ಲರಿಗೂ ಸಂತೋಷ ತರುತ್ತಾರೆ. ರಾತ್ರಿ ಮನೆಯ ಸುತ್ತಲೂ ದೀಪಾಲಂಕಾರ ಮಾಡಿ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಾರೆ.

4. ಬಲಿಪಾಡ್ಯಮಿ : ವಿಷ್ಣು ತನ್ನ ವಾಮನ ಅವತಾರದಿಂದ ಬಲಿಚಕ್ರವರ್ತಿಯನ್ನು ಪಾತಾಳ ಲೋಕಕ್ಕೆ ಕಳುಹಿಸಿ ಭೂತಾಯಿಯ ಮಕ್ಕಳನ್ನು ಬಲಿ ಚಕ್ರವರ್ತಿಯ ಆಡಳಿತದಿಂದ ಪಾರು ಮಾಡುತ್ತಾನೆ. ಮನೆಯನ್ನು ಆಕಳ ಸಗಣಿಯಿಂದ ಚೆನ್ನಾಗಿ ಸಾರಿಸಿ, ಸಗಣಿಯಿಂದ ಪಾಂಡವರ ಮೂರ್ತಿಗಳನ್ನು ಮಾಡಿ ಪ್ರತಿಯೊಂದು ಮನೆಯ ಬಾಗಿಲ ಎಡರು ಬದಿಗಳಲ್ಲಿ ಅವುಗಳನ್ನು ಇಟ್ಟು ಪೂಜಿಸುತ್ತಾರೆ. ಆಕಳ ಸಗಣಿಯಲ್ಲಿ ಫಾರ್ಮೆಲಿನ್ ಇರುವುದರಿಂದ ಹೊರಗಡೆಯಿಂದ ಮನೆಯ ಒಳಭಾಗಕ್ಕೆ ಕ್ರಿಮಿ, ಕೀಟಗಳು ಬಾರದೆಂಬ ಮುನ್ನೆಚ್ಚರಿಕೆಯ ಕ್ರಮ.

5. ಐದನೆಯ ದಿನವನ್ನು “ಅಕ್ಕನ ತದಿಗೆ ಬಾವನ ಬಿದಿಗೆ’‘ ಎಂದು ಕರೆಯುತ್ತಾರೆ. ಮದುವೆಯಾಗಿ ಗಂಡನ ಮನೆಗೆ ಹೋದ ಅಕ್ಕ ತಂಗಿಯರು ತಮ್ಮ ಅಣ್ಣ ತಮ್ಮಂದಿರನ್ನು ಮನೆಗೆ ಕರೆದು ಅವರಿಗೆ ಇಷ್ಟವಾದ ಸಿಹಿ ತಿನಿಸುಗಳನ್ನು ತಿನ್ನಿಸಿ ಒಳ್ಳೆಯ ಬಟ್ಟೆಗಳನ್ನು ಕೊಟ್ಟು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಎಲ್ಲ ಸಂಬಂಧಿಕರು ಪ್ರೀತಿಯಿಂದ ಕೂಡಿ ಜೀವನ ನಡೆಸುತ್ತಾರೆ.

ದೀಪಾವಳಿಯ ಐದು ವಿಶೇಷಗಳು:

1. ಸ್ವಚ್ಛತೆ
2. ಅಲಂಕಾರ 
3. ಸಿಹಿ ತಿನಿಸುಗಳು ಮತ್ತು ಹೊಸ ಬಟ್ಟೆಗಳು
4. ದೇವರ ಪೂಜೆ ಮತ್ತು
5. ಪಟಾಕಿ-ಮದ್ದುಗುಂಡುಗಳನ್ನು ಸಿಡಿಸುವುದು.
ದೀಪಾವಳಿ ಎಂದರೆ ಪಟಾಕಿಗಳನ್ನು ಸಿಡಿಸುವ ಹಬ್ಬ ಎಂಬಂತೆ ಆಗಿದೆ.

ದೀಪಗಳ ಹಬ್ಬ ದೀಪಾವಳಿ

ದೀಪಾವಳಿಯ ಇತಿಹಾಸ

1. ಯಮಧರ್ಮನೊಂದಿಗೆ ನಚಿಕೇತ ಸಂವಾದ, ಚರ್ಚೆ ಮಾಡಿದ್ದು ದೀಪಾವಳಿಯ ದಿವಸ: ಪುರಾತನ ಕಾಲದಿಂದಲೂ ಭಾರತೀಯರು ದೀಪಾವಳಿ ಹಬ್ಬವನ್ನು ಆಚರಿಸುತ್ತಾ ಬಂದಿರುತ್ತಾರೆ. ದೀಪಾವಳಿ ಹಬ್ಬದ ಮಹತ್ವವನ್ನು ಪದ್ಮ ಪುರಾಣ ಮತ್ತು ಸ್ಕಂದ ಪುರಾಣಗಳಲ್ಲಿ ಉಲ್ಲೇಖಿಸಿದ್ದಾರೆ. ನಚಿಕೇತ ಋಷಿಕುಮಾರನು ತನ್ನ ತಂದೆಗೆ ಸದ್ಗತಿ ಸಿಗಲಿ ಎಂಬ ಒಂದೇ ಕೋರಿಕೆಯೊಂದಿಗೆ ಯಮಧರ್ಮನನ್ನು ಭೇಟಿಯಾಗಲು ಯಮಲೋಕಕ್ಕೆ ತೆರಳುವನು.  “ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು, ಯಾವ ಕೆಲಸವನ್ನು ನಾವು ಮಾಡುವುದರಿಂದ ನಮಗೆ ಮುಕ್ತಿ ಸಿಗುತ್ತದೆ, ನಾವು ಸ್ವರ್ಗಕ್ಕೆ ಹೋಗುತ್ತೇವೆ, ಯಾವುದು ನಿಜವಾದ ಸಂಪತ್ತು ಮತ್ತು ಯಾವುದು ಕ್ಷಣಿಕ ಸಂಪತ್ತು, ನಾವು ಸತ್ತಮೇಲೆ ನಮ್ಮ ಭೌತಿಕ ಶರೀರಕ್ಕೆ ಏನು ಆಗುತ್ತದೆ ಮತ್ತು ನಮ್ಮ ಆತ್ಮವು ದೇಹವನ್ನು ಬಿಟ್ಟು ಎಲ್ಲಿಗೆ ಹೋಗುತ್ತದೆ. ನರಕದಲ್ಲಿ ಮತ್ತು ಸ್ವರ್ಗದಲ್ಲಿ ಅದಕ್ಕೆ ಆಗುವ ಅನುಭವಗಳು ಏನು” ಎಂಬಿತ್ಯಾದಿ ವಿಷಯಗಳನ್ನು ಯಮಧರ್ಮನೊಂದಿಗೆ ನಚಿಕೇತ ಸಂವಾದ, ಚರ್ಚೆ ಮಾಡಿದ್ದು ದೀಪಾವಳಿಯ ದಿವಸ.

2. ಶ್ರೀ ರಾಮಚಂದ್ರನು ವನವಾಸ ಮುಗಿಸಿ, ಅಸುರ ಸೇನೆಯನ್ನು ಸೋಲಿಸಿ ಅಯೋಧ್ಯೆಗೆ ಪ್ರವೇಶಿಸಿದ್ದು ದೀಪಾವಳಿಯ ದಿವಸ: ಶ್ರೀರಾಮಚಂದ್ರನು, ಸೀತಾಮಾತಾ, ಲಕ್ಷ್ಮಣ, ಆಂಜನೇಯ ಮತ್ತು ಕಪಿ ಸೇನೆಯೊಂದಿಗೆ ರಾವಣಾಸುರನ ಅಸುರ ಸೈನಿಕರನ್ನು ಸೋಲಿಸಿ ವಿಜಯ ಪತಾಕೆಯ ಜೊತೆ ದೀಪಾವಳಿ ಹಬ್ಬದ ದಿವಸ ಅಯೋದ್ಯೆಯನ್ನು ಪ್ರವೇಶಿಸುತ್ತಾನೆ. ಶ್ರೀ ರಾಮಚಂದ್ರನು ವನವಾಸ ಮುಗಿಸಿ, ಅಸುರ ಸೇನೆಯನ್ನು ಸೋಲಿಸಿ ಅಯೋಧ್ಯೆಗೆ ಬರುವುದನ್ನು ಆಯೋಧ್ಯೆವಾಸಿಗಳು ತಮ್ಮ ಪಟ್ಟಣವನ್ನು ಸಿಂಗರಿಸಿ ಬರಮಾಡಿಕೊಳ್ಳುತ್ತಾರೆ. ಅಂದಿನಿಂದ ಇವತ್ತಿನವರೆಗೆ ದೀಪಾವಳಿಯನ್ನು ಭಾರತದಲ್ಲಿ ಆಚರಿಸುತ್ತಾರೆ ಎಂದು ಪ್ರತೀತಿ.

ದೀಪಗಳ ಹಬ್ಬ ದೀಪಾವಳಿ

3. ಶ್ರೀಲಕ್ಷ್ಮಿಯು ದೀಪಾವಳಿ ಹಬ್ಬದ ದಿವಸ, ಶ್ರೀವಿಷ್ಣುವನ್ನು ಮದುವೆಯಾಗುತ್ತಾಳೆ: ಸುರರು ಮತ್ತು ಅಸುರರು ಕ್ಷೀರ ಸಮುದ್ರವನ್ನು ಮಂದಾರ ಪರ್ವತ ಮತ್ತು ವಾಸುಕಿಯ ಸಹಾಯದಿಂದ ಸಮುದ್ರ ಮಂಥನ ಮಾಡಿದಾಗ, ಶ್ರೀಲಕ್ಷ್ಮಿಯು ಹುಟ್ಟುತ್ತಾಳೆ. ದೀಪಾವಳಿ ಹಬ್ಬದ ದಿವಸ, ಶ್ರೀವಿಷ್ಣುವನ್ನು ಮದುವೆಯಾಗುತ್ತಾಳೆ. ಆದ್ದರಿಂದ ಜಗತ್ತು ದೀಪಾವಳಿಯನ್ನು ಸಡಗರದಿಂದ ಆಚರಿಸುವುದು ಪ್ರತೀತಿ.

4. ದುರ್ಗಾದೇವಿಯು  ಅಸುರರನ್ನು ಕೊಂದ ದಿವಸ ದೀಪಾವಳಿ : ದುರ್ಗಾದೇವಿಯು ತನ್ನ ಕಾಳಿಕ ಅವತಾರದಿಂದ ದುಷ್ಟ ಮತ್ತು ಲೋಕ ಕಂಠಕ ಅಸುರರನ್ನು ಕೊಂದ ದಿವಸ. ಆದ್ದರಿಂದ ದೀಪಾವಳಿಯನ್ನು ಒಳ್ಳೆಯ ಜನರು ಸಡಗರದಿಂದ ಆಚರಿಸುವರು ಎಂದು ಪ್ರತೀತಿ.

5. ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮನು ಸಂಹರಿಸಿದ ದಿವಸ ದೀಪಾವಳಿ:  ಶ್ರೀ ಕೃಷ್ಣ ಪರಮಾತ್ಮನು ನರಕಾಸುರನನ್ನು ಸಂಹರಿಸಿದ ದಿವಸ ದೀಪಾವಳಿ. ಅಂಧಕಾರವನ್ನು ಮೀರಿ ಪ್ರಕಾಶಮಯ ಜ್ಞಾನದ ವಿಜಯ ಸಂಕೇತ. ಆದ್ದರಿಂದ ಅಮಾವಾಸ್ಯೆಯ ಕತ್ತಲನ್ನು ಹಿಮ್ಮೆಟ್ಟಿಸಲು ದೀಪಗಳನ್ನು ಬೆಳಗಿಸುವ ಹಬ್ಬ ದೀಪಾವಳಿ.

ದೀಪಗಳ ಹಬ್ಬ ದೀಪಾವಳಿ

6. ಬಲಿಚಕ್ರವರ್ತಿಯನ್ನು ಪಾತಾಳ ಲೋಕಕ್ಕೆ ಕಳುಹಿಸಿದ ದಿವಸ ದೀಪಾವಳಿ: ಶ್ರೀ ವಿಷ್ಣುವು ತನ್ನ ಐದನೆಯ ಅವತಾರವಾದ ವಾಮನ ಅವತಾರದಿಂದ ಬಲಿಚಕ್ರವರ್ತಿಯನ್ನು ಪಾತಾಳ ಲೋಕಕ್ಕೆ ಕಳುಹಿಸುವ ದಿವಸ ದೀಪಾವಳಿಯ ಪಾಡ್ಯದ ದಿವಸ.

7. ಭಗವಾನ್ ಮಹಾವೀರರಿಗೆ ಜ್ಞಾನೋದಯವಾದ ದಿವಸ ದೀಪಾವಳಿ: ಜೈನ ಸಮುದಾಯದ ತೀರ್ಥಂಕರ ಭಗವಾನ್ ಮಹಾವೀರರಿಗೆ ದೀಪಾವಳಿ ಹಬ್ಬದ ದಿವಸ  ಜ್ಞಾನೋದಯವಾಯಿತು.

8. ಸಿಖ್  ಗುರು ಹರಗೋವಿಂದಜೀಯವರಿಗೆ ಮುಕ್ತಿ ದೊರೆತ ದಿವಸ ದೀಪಾವಳಿ: ದೀಪಾವಳಿಯ ದಿವಸ ಸಿಖ್ ಸಮುದಾಯದ ಗುರು ಹರಗೋವಿಂದಜೀಯವರಿಗೆ ಮುಕ್ತಿ ದೊರೆಯಿತು.

ವ್ಯಾಪಾರ ಮಾಡುವ ಜನರು ದೀಪಾವಳಿಯ ದಿವಸವನ್ನು ಹೊಸ ವರ್ಷವೆಂದು ಹಳೆಯ ಎಲ್ಲ ಲೆಕ್ಕವನ್ನು ಚುಕ್ತಾಮಾಡಿ ಹೊಸವರ್ಷಕ್ಕೆ ಹೊಸ ಲೆಕ್ಕ ಪುಸ್ತಕಗಳನ್ನು ಪ್ರಾರಂಭಿಸುತ್ತಾರೆ. ಲೆಕ್ಕಗಳ ದೇವತೆ ಕುಬೇರ, ಜ್ಞಾನದ ದೇವತೆ ಗಣೇಶ, ವಿದ್ಯಾದೇವತೆ ಸರಸ್ವತಿ ಮತ್ತು ಐಶ್ವರ್ಯ ದೇವತೆ ಲಕ್ಷ್ಮಿಯ ಪೂಜೆ ಮಾಡಿ ದೀಪಾಲಂಕಾರವನ್ನು ಮಾಡಿ ಸಂಭ್ರಮಿಸುತ್ತಾರೆ. 

ದೀಪಾವಳಿ ಹಬ್ಬದ ಆಚರಣೆಗಳನ್ನು ವೈದ್ಯರಾಗಿ ವಿಮರ್ಶಿಸಿದಾಗ :

ದೀಪಾವಳಿ ಹಬ್ಬದ ಸಮಯದಲ್ಲಿ ಹಚ್ಚುವ ಪಟಾಕಿಗಳು, ಮದ್ದು ಗುಂಡುಗಳ ಬಗ್ಗೆ ಮಾತ್ರ ವೈದ್ಯರು ಆತಂಕಪಡುವರು. ಭಾರತ ದೇಶದಲ್ಲಿ ಸುಮಾರು 40 ತರಹದ ಪಟಾಕಿಗಳಿವೆ. ಒಂದು ಪಟಾಕಿಗಿಂತ, ಇನ್ನೊಂದು ಪಟಾಕಿಯು ಹೆಚ್ಚು ಶಬ್ಧವನ್ನು ಮಾಡುತ್ತದೆ ಮತ್ತು ಹೆಚ್ಚು ಹೊಗೆಯನ್ನು ವಾತಾವರಣದಲ್ಲಿ ಬಿಟ್ಟು ವಾತಾವರಣವನ್ನು ಕಲುಷಿತಗೊಳಿಸುತ್ತವೆ. ಪ್ರಶಾಂತವಾದ, ಶುಭ್ರವಾದ ವಾತಾವರಣವು ಪಟಾಕಿಗಳಿಂದ ಹೊರಬೀಳುವ ಹೊಗೆ, ವಾಹನಗಳಿಂದ ಬರುವ ಹೊಗೆ ಮತ್ತು ಮಂಜಿನ ಮಿಶ್ರಣದಿಂದ ವಿಷವಾಗಿ, ಸಾಮಾನ್ಯ ಜನರು ಮತ್ತು ಉಸಿರಾಟದ ತೊಂದರೆ ಇರುವವರಿಗೆ, ಉಸಿರಾಡಲು ತೊಂದರೆಯಾಗುತ್ತದೆ.

ಸಣ್ಣ ಮಕ್ಕಳು ಮತ್ತು ವಯಸ್ಸಾದ ಮುದುಕರಿಗೆ (ವೃದ್ಧರಿಗೆ) ಉಸಿರಾಡಲು ಹೆಚ್ಚು ತೊಂದರೆಯಾಗುತ್ತದೆ. ಪಟಾಕಿಗಳನ್ನು ಸುಟ್ಟಾಗ ಅದರಲ್ಲಿರುವ ಸಲ್ಪರ್ ಡೈ ಆಕ್ಸೈಡ್, ಕ್ಯಾಡಿಮಿಯಮ್ ತಾಮ್ರ ಮ್ಯಾಗ್ನಿಷಿಯಂ ನೈಟ್ರೆಟೆಸ್ ಮತ್ತು ನೈಟ್ರಾಯಿಟಸ್ ಮುಂತಾದ ವಿಷ ಅನಿಲಗಳು ವಾತಾವರಣವನ್ನು ಸಂಪೂರ್ಣ ಕಲುಷಿತಗೊಳಿಸುತ್ತವೆ. ವಿಶ್ವ ಆರೋಗ್ಯ ಸಂಸ್ಥೆಯು ನಡೆಸಿದ ಸಮೀಕ್ಷೆಯಲ್ಲಿ, ಭಾರತ ದೇಶದ ಎಲ್ಲ ಪಟ್ಟಣಗಳಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ನಾವು ಉಸಿರಾಡುವ ಗಾಳಿಯು ವಿಷವಾಗಿ ಪರಿವರ್ತಿತವಾಗಿರುತ್ತದೆ ಎಂದು ತಿಳಿಸಿರುವರು.

1. ಪಟಾಕಿಗಳಿಂದ ಸುಟ್ಟಗಾಯ : ಪಟಾಕಿ ಹಚ್ಚುವಾಗ ಮತ್ತು ಪಟಾಕಿ ಹಚ್ಚಿದ ಮೇಲೆ ಜಾಗರೂಕತೆ ವಹಿಸದಿದ್ದರೆ, ಸುಟ್ಟಗಾಯಗಳು ಆಗುವವು. ಸುಟ್ಟಗಾಯಗಳು ಕಡಿಮೆ ಪ್ರಮಾಣದ್ದಿರಬಹುದು. ಇಲ್ಲವೆ ತೀವ್ರ ಪ್ರಮಾಣದ್ದಿರಬಹುದು. ಕಣ್ಣಿಗೆ ಗಾಯವಾಗಬಹುದು. ಕೆಲವೊಂದು ಸಲ ಕಣ್ಣಿನ ದೃಷ್ಟಿಯೇ ಹೋಗಬಹುದು. ಬಾಟಲ್ ರಾಕೆಟನ್ನು ಬಿಟ್ಟಾಗ, ರಾಕೆಟ್ ಆಕಾಶದಲ್ಲಿ ಹಾರಿ ಕೆಳಗೆ ಬಿದ್ದಾಗ, ಬೆಂಕಿ ಹತ್ತುವ ವಸ್ತುಗಳ ಮೇಲೆ ಬಿದ್ದರೆ, ಬೆಂಕಿ ಹತ್ತಿ ಮನೆಗಳು, ಅಂಗಡಿಗಳು ಸುಡಬಹುದು.

2. ಪಟಾಕಿಗಳಿಂದ ಉಂಟಾಗುವ ಶಬ್ದ ಮಾಲಿನ್ಯ : ಜನರು ವಾಸಮಾಡುವ ಸ್ಥಳಗಳಲ್ಲಿ ಸುರಕ್ಷಿತವಾದ ಶಬ್ದದ ಸಾಮಥ್ರ್ಯ 55 ಡೆಸಿಬಲ್ಸ್ ಮತ್ತು ರಾತ್ರಿ ಸಮಯ 45 ಡೆಸಿಬಲ್ಸ್. ಇವತ್ತು ಪಟಾಕಿಗಳನ್ನು ಸುಟ್ಟಾಗ ಉಂಟಾಗುವ ಶಬ್ದವು 90 ಡೆಸಿಬಲ್ಸ್ ಇರುತ್ತದೆ. ಇನ್ನು ಹೆಚ್ಚು ಕೂಡ ಇರಬಹುದು. ಈ ಹೆಚ್ಚು ಶಬ್ದವು ತಾತ್ಕಾಲಿಕ ತಲೆನೋವು, ತಲೆಸುತ್ತು, ವಾಂತಿಯನ್ನು ಉಂಟು ಮಾಡಬಹುದು. ವಯಸ್ಸಾದ ವೃದ್ಧರಿಗೆ, ಮಕ್ಕಳಿಗೆ ಕಿವಿ ಕೇಳುವುದು ನಷ್ಟವಾಗಬಹುದು.

3.ಪಟಾಕಿಗಳ ಇತಿಹಾಸ : ಚೀನಾ ದೇಶದಲ್ಲಿ ಕ್ರಿಸ್ತ ಪೂರ್ವ 200 (200ಃಅ) ರಲ್ಲಿ ಬಿದಿರುಗಳನ್ನು ಸುಡುವಾಗ ಕೆಲವೊಂದು ಬಿದಿರುಗಳು ದೊಡ್ಡ ಶಬ್ದಮಾಡಿ ಸ್ಫೋಟವಾದವು. ಅಂತಹ ಬಿದಿರುಗಳನ್ನು ಮೋಜಿನ ಸಲುವಾಗಿ ಮತ್ತು ಪ್ರಾಣಿಗಳನ್ನು ಹೆದರಿಸಲು ಉಪಯೋಗಿಸುತ್ತಿದ್ದರು. ಚಕ್ರವರ್ತಿಗಳು, ಸೈನಿಕರನ್ನು ಹುರಿದುಂಬಿಸಲು ಮತ್ತು ಶತ್ರು ಸೈನಿಕರನ್ನು ಭಯಪಡಿಸಲು ಈ ಪಟಾಕಿಗಳನ್ನು ಉಪಯೋಗಿಸುತ್ತಿದ್ದರು. ಈಗ ಹಬ್ಬಗಳಲ್ಲಿ, ಮದುವೆಗಳಲ್ಲಿ ಮತ್ತು ಹೆಚ್ಚು ಸಂತೋಷದ ಸಮಯದಲ್ಲಿ ಪಟಾಕಿ ಸುಟ್ಟು ಸಂತೋಷಪಡುವುದು ಸಾಮಾನ್ಯವಾಗಿದೆ.

ಭಾರತ ದೇಶದಲ್ಲಿ ತಮಿಳುನಾಡಿನ ಶಿವಕಾಶಿಯಲ್ಲಿ ಪಟಾಕಿಗಳು ಉತ್ಪಾದನೆಯಾಗುತ್ತಿವೆ. ಸಣ್ಣ ಮಕ್ಕಳಿಂದ ದೊಡ್ಡವರು ಸಿಡಿಸುವ ಪಟಾಕಿಗಳು, ಥಳಥಳಿಸುವ ಪಟಾಕಿಗಳು (SPARKLERS), ಚಕ್ರಗಳು, ಲಕ್ಷ್ಮಿ ಪಟಾಕಿ, ಸ್ಪೋಟಗೊಳ್ಳುವ ಬಾಂಬುಗಳು, ಉಕ್ಕಿನ ಗುಳ್ಳೆಗಳು, ಇನ್ನೂ ಅನೇಕ ಪಟಾಕಿಗಳನ್ನು ತಯಾರಿಸುತ್ತಾರೆ. ಇವತ್ತು ವಿಶೇಷವಾದ ಹಾರುಮದ್ದು (GUN POWDER) ಹಾಕಿ ತಯಾರಿಸುವ ಪಟಾಕಿಗಳು ಹೆಚ್ಚು ಆಕರ್ಷಕ, ಆದರೆ, ಅಷ್ಟೇ ಅಪಾಯಕಾರಿ. ಬೇಗನೆ ಬೆಂಕಿ ಹೊತ್ತಿಕೊಳ್ಳುವುದರಿಂದ ಪಟಾಕಿಗಳನ್ನು ತಯಾರಿಸುವ ಕಾರ್ಖಾನೆಗಳಲ್ಲಿ ಬೆಂಕಿ ಅನಾಹುತಗಳು ಮತ್ತು ಕಾರ್ಮಿಕರ ಸಾವುನೋವು ಸಾಮಾನ್ಯ.

ವೈಜ್ಞಾನಿಕವಾಗಿ ಪಟಾಕಿಗಳನ್ನು ಸುಟ್ಟಾಗ ಬರುವ ಹೊಗೆಯು ಕ್ರಿಮಿಕೀಟಗಳನ್ನು ಕೊಲ್ಲುತ್ತದೆ. ಆದರೆ ಮನುಷ್ಯರು ಉಸಿರಾಡುವ ಗಾಳಿಯನ್ನು ವಿಷಯುಕ್ತವಾಗಿ ಬದಲಾಯಿಸುತ್ತದೆ. ಹಬ್ಬಗಳಲ್ಲಿ ಪಟಾಕಿಗಳನ್ನು ಹಾರಿಸುವುದು, ಸಂತೋಷಕ್ಕಾಗಿ ಮತ್ತು ಸಂಭ್ರಮಕ್ಕಾಗಿ. ಆದ್ದರಿಂದ ಪಟಾಕಿಯನ್ನು ಸುಟ್ಟು ನಾವು ಮತ್ತು ನಮ್ಮ ಎಲ್ಲ ಸಂಬಂಧಿಕರು, ಗೆಳೆಯರು, ಹಿತೈಷಿಗಳು, ಸಂತೋಷ ಪಡಬೇಕು, ಪಟಾಕಿಗಳಿಂದು ಸುಟ್ಟುಕೊಂಡು ಆಸ್ಪತ್ರೆ ಸೇರಬಾರದು.

                          

ಡಾ. ಕೆ. ಹನುಮಂತಯ್ಯ        ಡಾ. ಮೇನಕಾ ಮೋಹನ್

ಚರ್ಮರೋಗ ವಿಭಾಗ, ವೈದೇಹಿ ಇನ್ಸ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್,
# 82, ಇಪಿಐಪಿ ಏರಿಯಾ, ವೈಟ್‍ಫೀಲ್ಡ್, ಬೆಂಗಳೂರು-560066.
ಫೋನ್ : 080-28413381/1/2/3/4/5.
Email: info@vims.ac.in 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!