ದಂತ ಕ್ಷಯ ಎನ್ನುವುದು ಅತೀ ಸಾಮಾನ್ಯವಾದ ಖಾಯಿಲೆಯಾಗಿದ್ದು, ಇದು ಮಾರಣಾಂತಿಕ ಕಾಯಿಲೆ ಅಲ್ಲದಿದ್ದರೂ ಜನರು ಅತಿಯಾಗಿ ಭಯ ಪಡುವ ಖಾಯಿಲೆ ಎಂದರೂ ತಪ್ಪಾಗಲಾರದು. ಲಸಿಕೆಯಿಂದ ತಡೆಗಟ್ಟಲಾಗದ ರೋಗ ಇದಾಗಿದ್ದು ನಿರಂತರವಾಗಿ ಹಲ್ಲಿನ ಆರೈಕೆ ಮಾಡಿದ್ದಲ್ಲಿ ಮಾತ್ರ ಈ ರೋಗವನ್ನು ಪರಿಣಾಮಕಾರಿಯಾಗಿ ತಡೆಯಬಹುದಾಗಿದೆ.
ದಂತ ಕ್ಷಯ ಎನ್ನುವುದು ಅತ್ಯಂತ ಪುರಾತನವಾದ ಮತ್ತು ಅತೀ ಸಾಮಾನ್ಯವಾದ ಖಾಯಿಲೆಯಾಗಿದ್ದು, ಪ್ರತಿಯೊಬ್ಬರೂ ಈ ದಂತ ಕ್ಷಯಕ್ಕೆ ಒಂದಲ್ಲ ಒಂದು ಬಾರಿ ಜೀವಮಾನದಲ್ಲಿ ತುತ್ತಾಗುತ್ತಾರೆ. ಆಡು ಭಾಷೆಯಲ್ಲಿ ಹಲ್ಲು ಹುಳುಕಾಗುವುದು ಅಥವಾ ಹಲ್ಲು ಕೊಳೆಯುವ ರೋಗ ಎಂದು ಕರೆಯುತ್ತಾರೆ. ಆಂಗ್ಲ ಭಾಷೆಯಲ್ಲಿ ಡೆಂಟಲ್ ಕ್ಯಾವಿಟಿ ಎಂದು ಸಂಬೋಧಿಸಲಾಗುತ್ತದೆ. ಇದು ಸೋಂಕು ರಹಿತ ಕಾಯಿಲೆಯಾಗಿದ್ದು ಬ್ಯಾಕ್ಟೀಯಗಳಿಂದ ಬರುವಂತಾಹ ರೋಗವಾಗಿರುತ್ತದೆ. ವಿಶ್ವ ಸಂಸ್ಥೆ ವರದಿ ಪ್ರಕಾರ 2010 ರಲ್ಲಿ 2.5 ಬಿಲಿಯನ್ ಮಂದಿ ಈ ರೋಗಕ್ಕೆ ತುತ್ತಾಗಿದ್ದಾರೆ. 2020ರಲ್ಲಿ ಈ ಸಂಖ್ಯೆ 4 ಬಿಲಿಯನ್ ಗಳಿಗೆ ತಲುಪುವ ಸಾಧ್ಯತೆ ಇದೆಯೆಂದು ಅಂದಾಜಿಸಲಾಗಿದೆ.
ಇದು ಮಾರಣಾಂತಿಕ ಕಾಯಿಲೆ ಅಲ್ಲದಿದ್ದರೂ ಜನರು ಅತಿಯಾಗಿ ಭಯ ಪಡುವ ಖಾಯಿಲೆ ಎಂದರೂ ತಪ್ಪಾಗಲಾರದು. ಯಾಕೆಂದರೆ ದಂತ ಕ್ಷಯದಿಂದಾಗಿ ಉಂಟಾಗುವ ಹಲ್ಲು ನೋವು ಹೆರಿಗೆ ನೋವಿನ ನಂತರದ ಎರಡನೆ ಸ್ಥಾನದಲ್ಲಿ ತಲೆಮಾರುಗಳಿಂದ ವಿರಾಜಮಾನವಾಗಿದೆ. ಒಟ್ಟಿನಲ್ಲಿ ದಂತ ಕ್ಷಯ ಎನ್ನುವುದು ಇಂದಿಗೂ ಜನ ಸಾಮಾನ್ಯರಿಗೆ ಕಬ್ಬಿನದ ಕಡಲೆಯಾಗಿಯೇ ಉಳಿದಿದೆ. ಲಸಿಕೆಯಿಂದ ತಡೆಗಟ್ಟಲಾಗದ ರೋಗ ಇದಾಗಿದ್ದು ನಿರಂತರವಾಗಿ ಹಲ್ಲಿನ ಆರೈಕೆ ಮಾಡಿದ್ದಲ್ಲಿ ಮಾತ್ರ ಈ ರೋಗವನ್ನು ಪರಿಣಾಮಕಾರಿಯಾಗಿ ತಡೆಯಬಹುದಾಗಿದೆ.
ದಂತ ಕ್ಷಯ ಎಂದರೇನು?
ನಾವು ಆಹಾರ ಸೇವಿಸಿದ ಬಳಿಕ ಸರಿಯಾಗಿ ಬಾಯಿಯ ಸ್ವಚ್ಚತೆಯನ್ನು ಕಾಪಾಡಿಕೊಳ್ಳದಿದ್ದಲ್ಲಿ, ನಮ್ಮ ಆಹಾರದ ಕಣಗಳಿಂದ ಬ್ಯಾಕ್ಟಿರೀಯಗಳು ಆಸಿಡ್ ಉತ್ಪತ್ತಿ ಮಾಡಿ ಹಲ್ಲಿನ ಗಟ್ಟಿಯಾದ ಎನಾಮಿನ್ ಮತ್ತು ಡೆಂಟಿನ್ ಪದರವನ್ನು ಹಾಳುಗೆಡುತ್ತದೆ. ಆ ಮೂಲಕ ವಜ್ರಕ್ಕಿಂತಲೂ ಅಮೂಲ್ಯವಾದ ಹಲ್ಲನ್ನು ಹಾಳುಗೆಡವಿ ದಂತಕ್ಷಯ ಉಂಟಾಗುವಂತೆ ಮಾಡುತ್ತದೆ. ಹಲ್ಲನ್ನು ಶುಚಿಗೊಳಿಸದಿದ್ದಲ್ಲಿ ಹಲ್ಲಿನ ಎನಾಮಿಲ್ ಪದರದ ಮೇಲೆ ದಂತ ಪಾಚಿ ಅಥವಾ ಡೆಂಟಲ್ ಪ್ಲಾಕ್ ಎಂಬ ತೆಳುವಾದ ಮೆತ್ತನೆಯ ಪದರ ಬೆಳೆಯುತ್ತದೆ. ಈ ಪದರಗಳಲ್ಲಿ ಲಕ್ಷಾಂತರ ಬ್ಯಾಕ್ಟ್ರೀಯಗಳಿರುತ್ತದೆ. ಈ ಪದರದಲ್ಲಿನ ಬ್ಯಾಕ್ಟ್ರೀರಿಯಗಳು ನಾವು ಸೇವಿಸಿದ ಆಹಾರದಲ್ಲಿನ ಸಕ್ಕರೆಯ ಅಂಶವಾದ ಸುಕ್ರೋನ್ ನ ಜೊತೆ ಸೇರಿಕೊಂಡು ಆಮ್ಲವನ್ನು ಉತ್ಪತ್ತಿ ಮಾಡಿ ಹಲ್ಲು ಹುಳುಕಾಗುವಂತೆ ಮಾಡುತ್ತದೆ. ವಾರ್ಷಿಕವಾಗಿ ಭಾರತ ದೇಶವೊಂದರಲ್ಲಿಯೇ ಸುಮಾರು 10 ಮಿಲಿಯನ್ ಮಂದಿ ಈ ದಂತ ಕ್ಷಯದಿಂದ ಬಳಲುತ್ತಿದ್ದಾರೆ ಎಂಬ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
1. ಅತಿಯಾದ ಸಕ್ಕರೆ ಅಂಶ ಇರುವ ಆಹಾರವನ್ನು ಸೇವಿಸುವುದು.
2. ಬಾಯಿಯ ಶುಚಿತ್ವವನ್ನು ಕಾಪಾಡದೇ ಇರುವುದು.
3. ನಿರಂತರವಾಗಿ ನಿಯಮಿತವಾಗಿ ದಂತ ವೈದ್ಯರ ಸೇವೆ ಪಡೆದುಕೊಳ್ಳದಿರುವುದು. ಹಲ್ಲು ನೋವು ಬಂದಾಗ ಮಾತ್ರ ದಂತ ವೈದ್ಯರನ್ನು ಬೇಟಿ ಮಾಡುವುದು ಸರಿಯಲ್ಲ.
4. ಜಾಸ್ತಿ ಜಿಗುಟಾದ ಅಂಟು ಪದಾರ್ಥಗಳನ್ನು ಗಳನ್ನು ಹೆಚ್ಚು ಸೇವಿಸುವುದು. ಹಸಿ ತರಕಾರಿ ಹಣ್ಣು ಹಂಪಲು ಸೇವಿಸದೇ ಇರುವುದು.
ದಂತ ಕ್ಷಯದ ಸೂಚನೆಗಳು
1. ಹಲ್ಲಿನಲ್ಲಿ ಅತಿ ಸಂವೇದನೆ ಉಂಟಾಗುವುದು. ಆಹಾರ ಸೇವಿಸುವಾಗ ಆಹಾರ ಹಲ್ಲಿನಲ್ಲಿ ಸಿಕ್ಕಿಹಾಕಿಕೊಳ್ಳುವುದು, ಜುಂ ಎನ್ನುವುದು.
2. ಹಲ್ಲಿನಲ್ಲಿ ನೋವು ಉಂಟಾಗುವುದು.
3. ಹಲ್ಲಿನ ಮೇಲ್ಭಾಗದಲ್ಲಿ ಕಪ್ಪು ಕಲೆಗಳು ಕಂಡು ಬರುತ್ತದೆ.
4. ಹಲ್ಲಿನ ಮೇಲ್ಭಾಗದಲ್ಲಿ ಸಣ್ಣಸಣ್ಣ ಕುಳಿಗಳು ಅಥವಾ ರಂಧ್ರಗಳು ಉಂಟಾಗಬಹುದು.
5. ಬಿಸಿನೀರು, ಸಿಹಿಪದಾರ್ಥ, ತಣ್ಣೀರು ಸೇವಿಸಿದಾಗ ಅತಿಯಾದ ಸಂವೇದನೆ ಮತ್ತು ನೋವು ಉಂಟಾಗುವುದು.
ತಡೆಗಟ್ಟುವುದು ಹೇಗೆ?
1. ದಿನಕ್ಕೆರಡು ಬಾರಿ ಕನಿಷ್ಠ ಮೂರು ನಿಮಿಷಗಳ ಕಾಲ ಹಲ್ಲುಜ್ಜುವುದು.
2. ಪ್ರತಿದಿನ ದಂತ ದಾರ ಅಥವಾ ದಂತ ಬಳ್ಳಿ ಬಳಸಿ ಹಲ್ಲಿನ ಸಂದುಗಳನನು ಶುಚಿಗೊಳಿಸುವುದು.
3. ನಿರಂತರವಾಗಿ 6 ತಿಂಗಳಿಗೊಮ್ಮೆ ದಂತ ವೈದ್ಯರ ಭೇಟಿ, ಸಲಹೆ ಮತ್ತು ಮಾರ್ಗದರ್ಶನ ಅತೀ ಅಗತ್ಯ.
4. ಆದಷ್ಟು ಸಿಹಿ ಪದಾರ್ಥ, ಅಂಟಾದ ಜಿಗುಟಾದ ಆಹಾರ ವಸ್ತುಗಳನ್ನು ತಿನ್ನುವುದನ್ನು ಕಡಿಮೆಮಾಡಬೇಕು. ಅನಿವಾರ್ಯವಾಗಿ ಬಳಸಿದಲ್ಲಿ ತಕ್ಷಣವೇ ಹಲ್ಲನ್ನು ಶುಚಿಗೊಳಿಸಬೇಕು.
5. ನಾರುಯುಕ್ತ, ಹಸಿ ತರಕಾರಿ, ಹಣ್ಣುಹಂಪಲುಗಳನ್ನು ಸೇವಿಸಬೇಕು.
6. ಮಕ್ಕಳಲ್ಲಿ `ಪ್ಲೋರೈಡ್ ದ್ರಾವಣ’ ಹಲ್ಲುಗಳಿಗೆ ಲೇಪಿಸಿ ದಂತಕ್ಷಯ ಬಾರದಂತೆ ಮಾಡಲಾಗುತ್ತದೆ.
ಚಿಕಿತ್ಸೆ ಹೇಗೆ?
ದಂತಕ್ಷಯ ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತದೆ. ಆರಂಭಿಕ ಹಂತದಲ್ಲಿ ದಂತಕ್ಷಯವಾದ ಭಾಗವನ್ನು ಕೊರೆದು ತೆಗೆದು ಹಲ್ಲನ್ನು ಸಿಮೆಂಟಿನಿಂದ ತುಂಬಿಸಲಾಗುತ್ತದೆ. ಮುಂದುವರಿದ ಹಂತದಲ್ಲಿ ಬೇರುನಾಳ ಚಿಕಿತ್ಸೆ ಮಾಡಿ ಹಲ್ಲಿಗೆ ಕವಚ ಹಾಕಲಾಗುತ್ತದೆ. ಆವರೀತಿಯ ಚಿಕಿತ್ಸೆ ಯಾವಾಗ ಮಾಡಬೇಕು ಎಂಬುದನ್ನು ದಂತ ವೈದ್ಯರು ನಿರ್ಧರಿಸುತ್ತಾರೆ.
ಕೊನೆಮಾತು
ದಂತಕ್ಷಯ ಎನ್ನುವುದು ಅತೀ ಸಾಮಾನ್ಯವಾದ ದಂತ ಸಂಬಂಧಿ ಕಾಯಿಲೆಯಾಗಿದ್ದು, ಹಲ್ಲಿನ ಪದರಗಳಾದ ಎನಾಮಲ್ ಮತ್ತು ಡೆಂಟಿನ ಪದರಗಳನ್ನು ಹಾನಿಗೊಳಿಸಿ ಹಲ್ಲು ನೋವು ಬರುವಂತೆ ಮಾಡುತ್ತದೆ. ಹಲ್ಲಿನ ಮಧ್ಯಭಾಗದಲ್ಲಿರುವ ದಂತ ಮಜ್ಜೆ ಅಥವಾ ಡೆಂಟಲ್ ಪಲ್ಪ್ ಎಂಬ ಅಂಗಾಂಶಕ್ಕೆ ದಂತ ಕ್ಷಯ ತಲುಪಿದಾಗ ಅಸಾಧ್ಯವಾದ ನೋವು ಉಂಟಾಗುತ್ತದೆ. ಈ ಕಾರಣದಿಂದಲೇ ಆರಂಭಿಕ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಇಂಗ್ಲೆಂಡಿನ ಕಿಂಗ್ಸ್ ಕಾಲೇಜಿನ ಪ್ರೊಪೆಸರ್ ಪಾಲ್‍ಶಾರ್ಪೆ ಎಂಬವರು ಇಲಿಗಳ ಹಲ್ಲಿನಮೇಲೆ ಮಾಡಿದ ಸಂಶೋಧನೆಗಳ ಪ್ರಕಾರ `ಟಿಡೆಗ್ಲುಸಿಬ್’ ಎಂಬ ಔಷಧಿ ಹಲ್ಲಿನ ಡೆಂಟಿನ್ ಪದರವನ್ನು ಪುನರುತ್ಪತ್ತಿ ಮಾಡಲು ಪ್ರಚೋದಿಸುತ್ತದೆ ಎಂದು ತಿಳಿದುಬಂದಿದೆ.
ಈ ಸಂಶೋಧನೆ ಮನುಷ್ಯರಲ್ಲಿ ಯಶಸ್ವಿಯಾದಲ್ಲಿ ಮನುಕುಲವನ್ನು ಇನ್ನಿಲ್ಲದಂತೆ ಕಾಡಿದ ದಂತಕ್ಷಯ ರೋಗ ನಿರ್ಮೂಲನ ಆಗುವ ದಿನಗಳು ದೂರವಿಲ್ಲ ಎಂಬುದು ಬಲ್ಲವರ ಅನಿಸಿಕೆ.ಒಟ್ಟಿನಲ್ಲಿ ಈ ಸಂಶೋಧನೆಯಲ್ಲಿ ಯಶಸ್ಸು ದೊರೆತು ದಂತ ಕ್ಷಯದಿಂದ ಶಾಶ್ವತ ಮುಕ್ತಿ ಸಿಕ್ಕಿದಲ್ಲಿ ದಂತ ವೈದ್ಯರ ಸಹವಾಸ ತಪ್ಪಿ ಹಲ್ಲು ಡ್ರಿಲ್ ಮಾಡಿಸಿಕೊಳ್ಳಬೇಕಾದ ಯಾತನೆ ದೂರವಾಗಿ ದುಬಾರಿ ದಂತ ಚಿಕಿತ್ಸೆಗೆ ಕಡಿವಾಣ ಬೀಳುವ ದಿನಗಳು ದೂರವಿಲ್ಲ.
ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ, ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111 ಮೊ.: 98451 35787
www.surakshadental.com
email: drmuraleemohan@gmail.com