ಕ್ಯಾನ್ಸರ್ ರೋಗಿಗಳಿಗೆ ಕೋವಿಡ್ ಸೋಂಕು ತಗಲಿದಾಗ ಸಮಸ್ಯೆಗಳು ದ್ವಿಗುಣ

ಕ್ಯಾನ್ಸರ್ ರೋಗಿಗಳಿಗೆ ಕೋವಿಡ್ ಸೋಂಕು ತಗಲಿದಾಗ ಸಮಸ್ಯೆಗಳು ದ್ವಿಗುಣವಾಗುತ್ತದೆ.ಕ್ಯಾನ್ಸರ್ ರೋಗಿಗಳಲ್ಲಿ ಕೋವಿಡ್-19 ಸೋಂಕು ಅಥವಾ ಇನ್ನಾವುದೇ ಬ್ಯಾಕ್ಟೀರಿಯಾ ಹಾಗೂ ವೈರಾಣು ಸೋಂಕು ತಗಲಿದಾಗ ತೀವ್ರತರವಾಗಿ ಕಾಡಿ ರೋಗಿಯ ದೇಹಸ್ಥಿತಿ ಮತ್ತಷ್ಟು ಹದಗೆಟ್ಟು ಮಾರಣಾಂತಿಕವಾಗಿ ಕಾಡುವ ಎಲ್ಲಾ ಸಾಧ್ಯತೆಗಳು ಮುಕ್ತವಾಗಿದೆ.

ಕ್ಯಾನ್ಸರ್ ರೋಗಿಗಳಿಗೆ ಕೋವಿಡ್ ಸೋಂಕು ತಗಲಿದಾಗ ಸಮಸ್ಯೆಗಳು ದ್ವಿಗುಣಕೋವಿಡ್-19 ಎಂಬ ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ರೋಗ ಜಗತ್ತಿನೆಲ್ಲೆಡೆ ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ಯಾವುದೇ ಜಾತಿ, ಮತ, ಪಂಥ ಬೇಧವಿಲ್ಲದೆ, ಬಡವ ಬಲ್ಲಿದ, ಹೆಳವ, ಹೆಡ್ಡ ಎಂಬ ಭೇದವಿಲ್ಲದೆ ಸಾರ್ವರ್ತಿಕವಾಗಿ ಎಲ್ಲರನ್ನೂ ಕಾಡುತ್ತಿದೆ. ಅದರಲ್ಲೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ರೋಗಿಗಳನ್ನು ಮತ್ತಷ್ಟು ತೀವ್ರವಾಗಿ ಕಾಡಿ ರೋಗಿಗಳನ್ನು ಹಿಂಡಿಹಿಪ್ಪೆ ಮಾಡುತ್ತಿದೆ. ರೋಗ ನಿರೋಧಕ ಶಕ್ತಿ ಕುಂದಿದ ರೋಗಿಗಳಲ್ಲಿ ಕೋವಿಡ್ ಬಹುತೇಕ ಮಾರಣಾಂತಿಕವಾಗಿದೆ ಎಂದೂ ತಿಳಿದು ಬಂದಿದೆ.

ಕ್ಯಾನ್ಸರ್ ಎನ್ನುವುದು ಒಂದು ವಿಶಿಷ್ಟ ಕಾಯಿಲೆಯಾಗಿದ್ದು, ವ್ಯಕ್ತಿಯ ದೇಹದಲ್ಲಿನ ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆಯುತ್ತದೆ. ಯಾವುದೇ ರೀತಿಯ ನಿಯಂತ್ರಣವಿಲ್ಲದ ಬೆಳವಣಿಗೆ ಇದಾಗಿದ್ದು, ಹಳಿ ತಪ್ಪಿದ ರೈಲಿನಂತೆ, ಜೀವಕೋಶಗಳು ಎರ್ರಾಬಿರ್ರಿ ಬೆಳೆಯುತ್ತಿದೆ. ಸಾಮಾನ್ಯ ಆಡುಭಾಷೆಯಲ್ಲಿ ಇದನ್ನು ಗಡ್ಡೆ ಬೆಳೆಯುವುದು ಎನ್ನಲಾಗುತ್ತಿದೆ. ಮುಖ್ಯವಾಗಿ ಇದರಲ್ಲಿ ಎರಡು ವಿಧಗಳಿದ್ದು, ನಿಯಂತ್ರಣದಲ್ಲಿರುವ ನಿಧಾನವಾಗಿ ಬೆಳೆಯುವ ಗಡ್ಡೆ ಮತ್ತು ಅನಿಯಂತ್ರಿತವಾಗಿ ತೀವ್ರವಾಗಿ ಬೆಳೆಯುವ ಗಡ್ಡೆ ಎಂಬುದಾಗಿ ಎರಡು ವಿಧಗಳಿವೆ. ಈ ತೀವ್ರವಾಗಿ ಅನಿಯಂತ್ರಿತವಾಗಿ ಬೆಳೆಯುವ ಗಡ್ಡೆ ಬಹಳ ವೇಗವಾಗಿ ಬೆಳೆದು ದೇಹದಲ್ಲೆಡೆ ಹರಡುತ್ತಾ ವ್ಯಕ್ತಿಯನ್ನು ನಿಧಾನವಾಗಿ ಕೊಲ್ಲುತ್ತದೆ. ತಕ್ಷಣವೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಬಹುತೇಕ ಎಲ್ಲರೂ ಮರಣದಲ್ಲಿ ಪರ್ಯವಸಾನ ಹೊಂದುತ್ತಾರೆ.

ಕ್ಯಾನ್ಸರ್ ರೋಗಕ್ಕೆ ಹಲವಾರು ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ನಿಧಾನವಾಗಿ ಬೆಳೆಯುವ ಗಡ್ಡೆಗಳಿಗೆ ಸರ್ಜರಿ ಮುಖಾಂತರ ಗಡ್ಡೆಯನ್ನು ಕಿತ್ತು ತೆಗೆಯಲಾಗುತ್ತದೆ. ಇನ್ನು ತೀವ್ರತರವಾಗಿ ಬೆಳೆಯುವ ಮಾಲಿಗ್ನೆಂಟ್ ಗಡ್ಡೆಗಳಿಗೆ ಬರೀ ಸರ್ಜರಿ ಸಾಕಾಗುವುದಿಲ್ಲ. ಸರ್ಜರಿ ಜೊತೆಗೆ ಕೀಮೊಥೆರಪಿ, ರೇಡಿಯೋಥೆರಪಿ ಇಮ್ಯುನೋಥೆರಪಿ ಸ್ಟಿರಾಯ್ಡು ಥೆರಪಿ, ಮುಂತಾದ ಚಿಕಿತ್ಸೆ ಅವಶ್ಯಕವಿರುತ್ತದೆ. ಯಾವ ರೀತಿಯ ಚಿಕಿತ್ಸೆ ಎನ್ನುವುದು ವ್ಯಕ್ತಿಯ ವಯಸ್ಸು, ಗಡ್ಡೆಯ ಬೆಳವಣಿಗೆಯ ವೇಗ, ಗಡ್ಡೆಯ ಗಾತ್ರ ಮತ್ತು ರೋಗಿಯ ದೇಹದ ಪ್ರಕೃತಿ ಇವೆಲ್ಲವುಗಳ ಮೇಲೆ ಅವಲಂಬಿತವಾಗಿರುತ್ತದೆ. ಒಟ್ಟಿನಲ್ಲಿ ಕ್ಯಾನ್ಸರ್ ಚಿಕಿತ್ಸೆ ಎನ್ನುವುದು ಸಂಕೀರ್ಣವಾಗಿದ್ದು, ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ ಮತ್ತು ಹೆಚ್ಚಿನ ಎಲ್ಲಾ ಚಿಕಿತ್ಸೆಗಳಲ್ಲಿ ರೋಗಿಯ ರಕ್ಷಣಾ ವ್ಯವಸ್ಥೆ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುವ ಎಲ್ಲಾ ಸಾಧ್ಯತೆ ಇರುತ್ತದೆ.

ಏನು ಸವಾಲುಗಳು?

cancer

ರೋಗ ನಿರೋಧಕ ಶಕ್ತಿ ಕುಂದಿದ ಕ್ಯಾನ್ಸರ್ ರೋಗಿಗಳಿಗೆ ಕೋವಿಡ್-19 ರೋಗದ ವಿರುದ್ಧ ಉಸಿರಾಡುವಷ್ಟು ಶಕ್ತಿ ಇರುವುದಿಲ್ಲ. ಈ ಕಾರಣದಿಂದ ಇಂತಹಾ ಕ್ಯಾನ್ಸರ್ ರೋಗಿಗಳಲ್ಲಿ ಕೋವಿಡ್-19 ಸೋಂಕು ಅಥವಾ ಇನ್ನಾವುದೇ ಬ್ಯಾಕ್ಟೀರಿಯಾ ಹಾಗೂ ವೈರಾಣು ಸೋಂಕು ತಗಲಿದಾಗ ತೀವ್ರತರವಾಗಿ ಕಾಡಿ ರೋಗಿಯ ದೇಹಸ್ಥಿತಿ ಮತ್ತಷ್ಟು ಹದಗೆಟ್ಟು ಮಾರಣಾಂತಿಕವಾಗಿ ಕಾಡುವ ಎಲ್ಲಾ ಸಾಧ್ಯತೆಗಳು ಮುಕ್ತವಾಗಿದೆ. ಕೋವಿಡ್-19 ಸೋಂಕು ತೀವ್ರವಾಗಿ ಹರಡುತ್ತಿರುವ ಸಂದರ್ಭದಲ್ಲಿ ಕ್ಯಾನ್ಸರ್ ರೋಗಿಗಳನ್ನು ರೋಗ ಬರದಂತೆ ತಡೆದು ಅವರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹು ದೊಡ್ಡ ಸವಾಲು ಆಗಿರುತ್ತದೆ.
1. ಮೊದಲನೆಯದಾಗಿ ಕ್ಯಾನ್ಸರ್ ರೋಗಿಗಳಿಗೆ ನೀಡುವ ಔಷಧಿಗಳಿಂದಾಗಿ ರೋಗಿಗಳ ವ್ಯಾದಿ ಕ್ಷಮತೆ ಅಥವಾ ರೋಗ ನಿರೋಧಕ ಶಕ್ತಿ ಬಹುತೇಕ ಕುಂದಿರುತ್ತದೆ. ಯಾವುದಾದರೂ ಬಾಹ್ಯ ಸೋಂಕು ತಗುಲಿದಾಗ ಅವುಗಳಿಂದ ದೇಹವನ್ನು ರಕ್ಷಿಸಿಕೊಳ್ಳುವ ಸಾಮಥ್ರ್ಯ ದೇಹಕ್ಕೆ ಇರುವುದಿಲ್ಲ. ಹೆಚ್ಚಿನ ಕ್ಯಾನ್ಸರ್ ರೋಗಿಗಳಲ್ಲಿ ಸ್ಟಿರಾಯ್ಡು ಔಷಧಿ ಬಳಸಿದಾಗ ದೇಹ ಮತ್ತಷ್ಟು ಸೋಂಕು ರೋಗಕ್ಕೆ ತೆರೆದುಕೊಳ್ಳುವ ಸಾದ್ಯತೆ ಇರುತ್ತದೆ. ಸಣ್ಣ ಪುಟ್ಟ ಸಾಮಾನ್ಯ ಸೋಂಕುಗಳು ಕೂಡಾ ಬಹಳ ಉಗ್ರವಾಗಿ ಇಂತಹಾ ರೋಗಿಗಳನು ಕಾಡುತ್ತದೆ. ಇನ್ನು ಅವಕಾಶವಾದಿ ಸೋಂಕುಗಳಾದ ಶಿಲೀಂದ್ರ ಸೋಂಕು ಮತ್ತು ವೈರಾಣು ಸೋಂಕುಗಳು ಇಂತಹಾ ಸನ್ನಿವೇಶಕ್ಕಾಗಿ ಕಾದುಕೊಂಡಿರುತ್ತದೆ. ತಕ್ಷಣವೇ ರೋಗಿಯ ದೇಹದ ಮೇಲೆ ದಾಳಿ ಬಹಳ ವ್ಯಗ್ರವಾಗಿ ದಾಳಿ ಮಾಡಿ ಸೋಂಕು ಉಲ್ಬಣವಾಗುವಂತೆ ಮಾಡುತ್ತದೆ. ಇನ್ನು ಕಿಮೋಥೆರಪಿ ಔಷಧಿ ಕೊಟ್ಟರಂತೂ ದೇಹದ ರಕ್ಷಣಾ ವ್ಯವಸ್ಥೆಯ ಯೋಧರಾದ ಬಿಳಿ ರಕ್ತಕಣಗಳನ್ನು ಕುಗ್ಗಿಸಿ ಅವುಗಳ ಸಾಮಥ್ರ್ಯವನ್ನು ಕುಂದಿಸುತ್ತದೆ. ಒಟ್ಟಿನಲ್ಲಿ ಕಿಮೋಥೆರಪಿ ಔಷಧಿ ಬಳಸುವಾಗ ಬಹಳಷ್ಟು ಜಾಗರೂಕರಾಗಿ ಇರಬೇಕಾದ ಅನಿವಾರ್ಯತೆ ಇರುತ್ತದೆ.

2. ಎರಡನೆಯದಾಗಿ ಕ್ಯಾನ್ಸರ್ ರೋಗಿಗಳಲ್ಲಿ ಕಿಮೋಥೆರಪಿ ಸ್ಟಿರಾಯ್ಡುಥೆರಪಿ ಜೊತೆಗೆ ಕೆಲವೊಮ್ಮೆ ರೆಡಿಯೋ ಥೆರಪಿ ಅಥವಾ ವಿಕಿರಣ ಚಿಕಿತ್ಸೆ ಕೂಡಾ ನೀಡಬೇಕಾಗುತ್ತದೆ. ಈ ರೀತಿಯ ವಿಕಿರಣ ಚಿಕಿತ್ಸೆ ನೀಡಿದಾಗ ಬಾಯಿಯಿಂದ ಜೊಲ್ಲುರಸ ಸ್ರವಿಸುವಿಕೆ ಕಡಿಮೆಯಾಗುತ್ತದೆ. ಹೆಚ್ಚಿನ ಮುಖ, ಬಾಯಿ ಮತ್ತು ಕುತ್ತಿಗೆ ಭಾಗದ ಕ್ಯಾನ್ಸರ್‍ಗಳಿಗೆ ವಿಕಿರಣ ಚಿಕಿತ್ಸೆ ಅವಶ್ಯವಿರುತ್ತದೆ. ಹಾಗಾದಾಗ ಬಾಯಿಯಲ್ಲಿ ಬಹುಬೇಗನೆ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ. ಬಾಯಿಯಲ್ಲಿ ಲಕ್ಷಾಂತರ ನಿರುಪ್ರದವಿ ಬ್ಯಾಕ್ಟಿರೀಯಾಗಳು ಮತ್ತು ವೈರಾಣುಗಳು ಜೀವಿಸಿಕೊಂಡಿರುತ್ತದೆ. ದೇಹದ ರಕ್ಷಣಾ ವ್ಯವಸ್ಥೆ ಹದಗೆಟ್ಟಾಗ ಈ ನಿರುಪ್ರದವಿ ಜೀವಿಗಳೇ ಹೆಚ್ಚು ಅಪಾಯಕಾರಿಯಾಗಿ ಕಾಡಿ ಮಾರಣಾಂತಿಕವಾಗಿ ಕಾಡುತ್ತದೆ. ಈ ನಿಟ್ಟಿನಲ್ಲಿ ಬಾಯಿ ಆರೋಗ್ಯವನ್ನು ಕಟ್ಟುನಿಟ್ಟಾಗಿ ಕಾಪಾಡಿಕೊಳ್ಳಬೇಕಾದ ಅವಶ್ಯಕತೆ ಇರುತ್ತದೆ.
3. ಕ್ಯಾನ್ಸರ್ ರೋಗದ ಚಿಕಿತ್ಸೆ ಪಡೆಯುತ್ತಿರುವವರಿಗೆ ಕೋವಿಡ್-19 ಸೋಂಕು ತಗಲಿದಾಗ ಸಮಸ್ಯೆಗಳು ದ್ವಿಗುಣವಾಗುತ್ತದೆ. ಸಾಮಾನ್ಯ ರೋಗಿಗಳಂತೆ ಅವರನ್ನು ಉಪಚರಿಸಲು ಕಷ್ಟವಾಗಬಹುದು ಅಂತಹವರಿಗೆ ಐಸೋಲೇಷನ್, ತೀವ್ರ ನಿಗಾಘಟಕ, ವೆಂಟಿಲೇಟರ್ ಬಳಕೆ ಮುಂತಾದ ಸೌಲಭ್ಯಗಳು ಇತರರಿಗಿಂತ ಹೆಚ್ಚು ಆದ್ಯತೆಯ ಮೇರೆಗೆ ನೀಡಬೇಕಾದ ಅನಿವಾರ್ಯತೆ ಇರುತ್ತದೆ. ಮರಣದ ಪ್ರಮಾಣವೂ ಇಂತಹಾ ರೋಗಿಗಳಲ್ಲಿ ಜಾಸ್ತಿ ಇರುತ್ತದೆ. ಕೋವಿಡ್-19 ರೋಗದ ಔಷಧಿ ಜೊತೆಗೆ ಕ್ಯಾನ್ಸರ್ ಔಷಧಿಗಳನ್ನು ಜೊತೆಜೊತೆಯಾಗಿ ನೀಡಬೇಕಾಗಬಹುದು. ಇಂತಹಾ ಸಂದರ್ಭಗಳಲ್ಲಿ ಕೋವಿಡ್-19 ರೋಗ ಮತ್ತಷ್ಟು ಉಲ್ಬಣಿಸುವ ಎಲ್ಲಾ ಅವಕಾಶಗಳೂ ಇರುತ್ತದೆ. ಯಾವ ರೀತಿ ಚಿಕಿತ್ಸೆ, ಎಲ್ಲಿ ಚಿಕಿತ್ಸೆ ನೀಡಬೇಕು ಎಂಬುದನ್ನು ನುರಿತ ವೈದ್ಯರು ರೋಗಿಯ ದೇಹಸ್ಥಿತಿಯನ್ನು ಆಧರಿಸಿ ನಿರ್ಧಾರ ಮಾಡುತ್ತಾರೆ.

4. ಕೆಲವೊಂದು ಕ್ಯಾನ್ಸರ್ ರೋಗಿಗಳಿಗೆ ಕ್ಯಾನ್ಸರ್ ಚಿಕಿತ್ಸೆಯ ಜೊತೆಗೆ ಇಮ್ಯುನೋಥೆರಪಿ ಕೂಡಾ ನೀಡಲಾಗುತ್ತದೆ. ರೋಗಿಯ ದೇಹದ ರಕ್ಷಣಾ ವ್ಯವಸ್ಥೆಯನ್ನು ಹದ್ದುಬಸ್ತಿನಲ್ಲಿ ಇಡಲು ಬೇಕಾಗಿ ಇಮ್ಯುನೋಥೆರಪಿ ಔಷಧಿ ನೀಡುತ್ತಾರೆ. ಇಂತಹಾ ಔಷಧಿಗಳು ಕೂಡಾ ರೋಗಿಯ ರಕ್ಷಣಾ ವ್ಯವಸ್ಥೆಯನ್ನು ಕುಗ್ಗಿಸುವ ಸಾಧ್ಯತೆ ಇರುತ್ತದೆ. ಒಟ್ಟಿನಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಎಲ್ಲಾ ಔಷಧಿಗಳೂ ರೋಗಿಯ ವ್ಯಾದಿಕ್ಷಮತೆಯನ್ನು ಕುಗ್ಗಿಸಿ ಅವಕಾಶವಾದಿ ಸೋಂಕುಗಳಿಗೆ ಮುಕ್ತ ರಹದಾರಿ ನೀಡುವುದಂತೂ ಸತ್ಯವಾದ ಮಾತು.

ಕೊನೆಮಾತು:

ಕ್ಯಾನ್ಸರ್ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಕ್ಯಾನ್ಸರ್ ರೋಗದ ಪ್ರಕೃತಿ ಲಕ್ಷಣಗಳು, ರೋಗಿಯ ವಯಸ್ಸು, ದೇಹ ಪ್ರಕೃತಿ ಇವೆಲ್ಲದರ ಮೇಲೆ ರೋಗಿಗೆ ನೀಡುವ ಚಿಕಿತ್ಸೆ ನಿರ್ಣಯವಾಗುತ್ತದೆ. ಕ್ಯಾನ್ಸರ್ ಚಿಕಿತ್ಸೆ ಎನ್ನುವುದು ಬಹುದೊಡ್ಡ ಸವಾಲೇ ಆಗಿರುತ್ತದೆ. ರೋಗಿಯ ಮನೋ ಧೈರ್ಯವನ್ನು ಕುಗ್ಗಿಸುವ ಕ್ಯಾನ್ಸರ್ ರೋಗ ಬಂದಾಗ ಎಂತಹಾ ಬಲಾಢ್ಯ ವ್ಯಕ್ತಿಯೂ ಮಾನಸಿಕವಾಗಿ ಕುಗ್ಗುತ್ತಾನೆ ಎಂಬುದು ಚರಿತ್ರೆಗಳಿಂದ ನಮಗೆ ತಿಳಿದೇ ಇದೆ. ಇಂತಹಾ ಕ್ಯಾನ್ಸರ್ ಚಿಕಿತ್ಸೆ ಸಂದರ್ಭಗಳಲ್ಲಿ ಕೋವಿಡ್-19 ಸೋಂಕು ತಗುಲಿದಾಗ ಸಮಸ್ಯೆಗಳು ಮತ್ತಷ್ಟು ಜಟಿಲವಾಗುತ್ತದೆ. ಈ ಕಾರಣದಿಂದ ಕ್ಯಾನ್ಸರ್ ರೋಗಿಗಳನ್ನು ಅತ್ಯಂತ ಜತನದಿಂದ ಕಾಯ್ದುಕೊಳ್ಳಬೇಕು. ಒಂದು ವೇಳೆ ಕ್ಯಾನ್ಸರ್ ರೋಗಿಗಳಿಗೆ ಕೋವಿಡ್-19 ಸೋಂಕು ತಗುಲಿದಲ್ಲಿ ವಿಕಿರಣ ಚಿಕಿತ್ಸೆ ಅಥವಾ ಕಿಮೋಥೆರಪಿ ಮುಂದುವರಿಸಬೇಕೋ ಅಥವಾ ನಾಲ್ಕೈದು ವಾರ ಮುಂದೂಡಬೇಕೋ ಎಂಬುದನ್ನು ಕ್ಯಾನ್ಸರ್ ರೋಗ ತಜ್ಞರು ರೋಗಿಗಳು ಮತ್ತು ರೋಗಿಗಳ ಹಿತೈಷಿಗಳ ಜೊತೆ ವಿಮರ್ಷಿಸಿ ಸೂಕ್ತ ನಿರ್ಧಾರ ಮಾಡುತ್ತಾರೆ. ಒಟ್ಟಿನಲ್ಲಿ ಕ್ಯಾನ್ಸರ್ ರೋಗ ಚಿಕಿತ್ಸೆ ಸಂದರ್ಭದಲ್ಲಿ ಕೋವಿಡ್-19 ಸೋಂಕು ಬರದಂತೆ ತಡೆಯುವುದರಲ್ಲಿಯೇ ಜಾಣತನ ಅಡಗಿದೆ .

Dr.-Murali-Mohana-Chuntaru.

ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787

www.surakshadental.com
Email: drmuraleemohan@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!