ಕೋರೋನಾಘಾತ :ಮಾನಸಿಕ ಆರೋಗ್ಯ ರಕ್ಷಣೆ ಕ್ರಮ ವಿಧಾನ

ಜಾಗತಿಕ ಸಾಂಕ್ರಾಮಿಕ ರೋಗಗಳು ಪ್ರಾಣಹಾನಿ ಜೊತೆ ಅರ್ಥವ್ಯವಸ್ಥೆಯನ್ನೂ ಅಲ್ಲೋಲ್ಲಕಲ್ಲೋಲಗೊಳಿಸಿದೆ. ಇವೆಲ್ಲಕ್ಕೆ ಸಾಕ್ಷಿಯಾದವರ ಮಾನಸಿಕ ಅರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಿದೆ. ಇಡೀ ದೇಶವೇ ಒಂದಾಗಿ ಸಾಂಕ್ರಾಮಿಕದ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ತೆಗೆದುಕೊಳ್ಳುವ ಕ್ರಮಗಳು ಜನರ ವರ್ತನೆ, ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಅನುಷ್ಠಾನಗೊಳಿಸಬೇಕಾಗುತ್ತದೆ. ಹಿಂದೆಂದು ಪಾಲಿಸದ ಕ್ರಮಗಳು  ಜನರಲ್ಲಿ  ಗೊಂದಲ, ಕುತೂಹಲ, ಆಘಾತಗಳನ್ನು ಉಂಟುಮಾಡಬಹುದು. ಸದ್ಯದ ಪರಿಸ್ಥಿತಿ  ಎಲ್ಲ ವರ್ಗದ ಜನರಲ್ಲಿ ಆಘಾತ ಉಂಟು ಮಾಡಿದೆ. ಸಾಂಕ್ರಾಮಿಕ ರೋಗಗಳ ತಡಯುವಿಕೆಯ ಕಾನೂನು ಪ್ರಕಾರ (ನಮ್ಮ ದೇಶದಲ್ಲಿ ಆಂಗ್ಲರು ಮಾಡಿದ ಕಾನೂನು ಇನ್ನೂ ಜಾರಿಯಲ್ಲಿದೆ, ಇದರ ಪರಿಷ್ಕರಣೆ ಕಾಲಕ್ಕೆ ತಕ್ಕಂತೆ ಆಗಿಲ್ಲ). ನಡೆಯಬೇಕಾದ ಎಲ್ಲ ಕ್ರಮಗಳಲ್ಲಿ ಮಾನಸಿಕ ಅರೋಗ್ಯದ ಕ್ರಮಗಳ ಬಗ್ಗೆ ದುರದೃಷ್ಟವಶಾತ್‌ ಯಾರೂ ಯೋಚಿಸಿಲ್ಲ. ಇದೇ ಘಟನೆಯಲ್ಲಿ ನಮ್ಮ ಕಣ್ಣ ಮುಂದೆ ಹಲವಾರು  ಘಟನೆಗಳು ನಡೆದು ಹೋದವು. ಭಯ, ಗಾಬರಿ, ಆತಂಕಗಳು ಬೇರೆಬೇರೆ ರೂಪದಲ್ಲಿ ಕಾಣಿಸಿ ಕೊಳ್ಳಬಹುದು. ಇಡೀ ದೇಶವೇ ಇಂತಹ ಸಮೂಹ ಭಯಕ್ಕೆ ಒಳಗಾಗುವದರಿಂದ ಸಾರ್ವಜನಿಕ ಮಾನಸಿಕ ಆರೋಗ್ಯದ ಕಾರ್ಯಕ್ರಮಗಳ ಚಿಂತನೆ, ಅನುಷ್ಠಾನ ನಡೆಯಬೇಕು.

ಮಾನಸಿಕ‌ ಕ್ಷೋಭೆಗೆ ಸುಲಭವಾಗಿ ಗುರಿಯಾಗುವವರು :

  ಅಪಾರ ಸಾವು-ನೋವುಗಳು, ಸಾಮೂಹಿಕ ವಲಸೆಗಳು, ಅಪಾರ ಪ್ರಮಾಣದ ವ್ಯತಿರಿಕ್ತ ಪರಿಣಾಮಗಳನ್ನುಂಟು ಮಾಡುತ್ತದೆ. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳುವ ಮೊದಲು ಮಾನಸಿಕ ದುರ್ಬಲರ ಸರಿಯಾದ ವರ್ಗೀಕರಣ ಹಾಗೂ ಸುಲಭವಾಗಿ ಗುರುತಿಸುವ ಕೆಲಸವಾಗಬೇಕು. ಮುಖ್ಯವಾಗಿ ಲಿಂಗ, ವಯಸ್ಸು, ಸಾಮಾಜಿಕ ಹಾಗೂ ಆರ್ಥಿಕಮಟ್ಟಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

 ಮಾನಸಿಕ ಕ್ಷೋಭೆಗೆ ಒಳಪಡುವ,  ದುರ್ಬಲರೆನಿಸಿಕೊಳ್ಳುವ ವ್ಯಕ್ತಿ, ಪಂಗಡಗಳು :

  • ವಯಸ್ಸು: ಮಕ್ಕಳು, ವೃದ್ಧರು, ಮಹಿಳೆಯರು, ಹದಿವಯಸ್ಸಿನವರು
  • ಜನಾಂಗ: ಆದಿವಾಸಿ, ಬುಡಕಟ್ಟು, ಅಲ್ಪಸಂಖ್ಯಾತರು
  • ಮಾನಸಿಕ,ದೈಹಿಕ ತೊಂದರೆ, ಕಾಯಿಲೆಯ ಇತಿಹಾಸ ಉಳ್ಳವರು : ಅಂಗವಿಕಲರು, ಮಾನಸಿಕ, ಧೀರ್ಘಕಾಲದ ಕಾಯಿಲೆಯ ರೋಗಿಗಳು,
  • ಆರ್ಥಿಕ, ಸಾಮಾಜಿಕ ಅಂಶಗಳು : ಬಡವರು, ಕಡುಬಡವರು, ಬಡತನದ ರೇಖೆಗಿಂತ ಕೆಳಗಿರುವವರು, ಹಳ್ಳಿಗಳಿಂದ ನಗರಕ್ಕೆ ವಲಸೆ ಬಂದ ಕಾರ್ಮಿಕರು, ನಿರಾಶ್ರಿತರು.
  • ಆಘಾತಕಾರಿ ಘಟನೆಗಳ ಅನುಭವಿಸಿದ ಹಿನ್ನಲೆಯುಳ್ಳವರು: ಹಿಂಸೆ ಹಾಗೂ ನೈಸರ್ಗಿಕ‌ ವಿಕೋಪಗಳನ್ನು ಅನುಭವಿಸಿದವರು.
  • ಕರ್ತವ್ಯಪರರು, ವೃತ್ತಿಪರರು: ಅಪಾರ ಪ್ರಮಾಣದ ರೋಗಿಗಳನ್ನು ಪರೀಕ್ಷಿಸುವ ವೈದ್ಯಕೀಯ ಸಿಬ್ಬಂದಿಗಳು, ಅಪಾರ ಸಂಖ್ಯೆಯ ಮೃತದೇಹ ವಿಲೇವಾರಿ ಮಾಡುವ ಸಿಬ್ಬಂದಿಗಳು, ದುಃಖಕರ ಸನ್ನಿವೇಶಗಳಿಗೆ ಸಾಕ್ಷಿಯಾಗುವವರು. ಇವರಲ್ಲಿ ಮುಖ್ಯವಾಗಿ ವೈದ್ಯಕೀಯ, ಸ್ವಯಂಸೇವಾ ಸಂಘಟನೆ ಹಾಗೂ ಗಂಡಾಂತರ ನಿರ್ವಹಣಾ ಸಿಬ್ಬಂದಿಗಳು .

 ಜೀವ, ಆರ್ಥಿಕ ನಷ್ಟಗಳಿಗೆ ಮಹಿಳೆಯರು ಪುರುಷರು ಬೇರೆಬೇರೆ ವಿಧಧಲ್ಲಿ ಪ್ರತಿಕ್ರಿಯಿಸುತ್ತಾರೆ. ಪುರಷರು ತಮ್ಮ ಭಾವನೆ ದುಃಖಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡಿ ತಮ್ಮ ದುರ್ಬಲತೆಯನ್ನು ಮರೆಮಾಚಲು ಮಾದಕ ವಸ್ತುಗಳ ಸೇವನೆಮಾಡಿ, ವ್ಯಗ್ರರಾಗಬಹುದು. ಮಹಿಳೆಯರು ತಮ್ಮ ದುಗುಡ ದುಃಖಗಳನ್ನು ಒಬ್ಬರಿಗೊಬ್ಬರು ಹಂಚಿಕೊಂಡು ಸಹಾಯ ಹಾಗೂ ನೆಮ್ಮದಿ‌ ಹುಡುಕುವ ಪ್ರಯತ್ನ ಮಾಡುತ್ತಾರೆ. ಅನೇಕ ಸಲ ವೃದ್ಧರು ತಮ್ಮ ಹಳೆಯ ಅನುಭವಗಳನ್ನು ಹಂಚಿಕೊಂಡು, ಸಂದರ್ಭವನ್ನು ಎದುರಿಸುವ ಧೈರ್ಯ ತುಂಬಬಹುದು.

 ಮಕ್ಕಳಿಗೆ ಸಾವುನೋವುಗಳು, ತಂದೆತಾಯಿಯರ ಭಯಗಾಬರಿಗಳು, ತೀವ್ರತರಹದ ಮಾನಸಿಕ‌ ಒತ್ತಡವನ್ನು ಉಂಟುಮಾಡಬಹುದು‌. ತಮ್ಮ‌ ಭಾವನೆ, ಭಯಗಳನ್ನು ಹೇಳಲು ಸಾಧ್ಯವಾಗದೆ ಮಗು ತೊಳಲಾಡಬಹುದು ಅಥವಾ ಮೌನಕ್ಕೆ ‌ಜಾರಬಹುದು. ಭಯದ ಮೇಲೆ ಜಯಸಾಧಿಸಿದಾಗ ಹಳೆಯ ಅನುಭವವನ್ನು ನೆನಪಿಸಿಕೊಂಡು ತಮಗುಂಟಾದ  ಕ್ಷೋಭೆಯನ್ನು ಬಹಿರಂಗಗೊಳಿಸಬಹುದು. ದೊಡ್ಡ ಪ್ರಮಾಣದ ವಿಕೋಪ‌, ಗಂಡಾಂತರದ ಸಮಯದಲ್ಲಿ ಮಕ್ಕಳು  ಮೂಲಭೂತಹಕ್ಕುಗಳಿಂದ  ವಂಚಿತರಾಗಬಹುದು. ಉದಾ: ಅರೋಗ್ಯ, ಶಿಕ್ಷಣ, ಆಹಾರ, ಆಟ, ಮನರಂಜನೆ, ಸುರಕ್ಷತೆ, ತಂದೆತಾಯಿಗಳ ಪ್ರೀತಿಯಿಂದ ವಂಚಿತರಾಗಬಹುದು.

ಮಕ್ಕಳ ಸರ್ವತೋಮುಖ ಬೆಳವಣಿಗೆಯ ಮೇಲೆ‌ ಪ್ರತಿಕೂಲಪರಿಣಾಮ‌ ಬೀರಬಹುದು. ತುಂಬಾ‌ಸನ್ನಿವೇಶಗಳಲ್ಲಿ ಮಕ್ಕಳ ದೈಹಿಕ ತೊಂದರೆಗಳಿಗೆ ಸಹಾಯ ದೊರೆತು ಮಾನಸಿಕ‌ ಆತಂಕ, ಭಯ, ಗಾಬರಿಗಳನ್ನು ಕಡೆಗಣಿಸಲಾಗುತ್ತದೆ .

ಮಾನಸಿಕ ಅರೋಗ್ಯದ ಮೇಲಿನ  ದುಷ್ಪರಿಣಾಮಗಳು : 

  ಜಾಗತಿಕ ಸಾಂಕ್ರಾಮಿಕ ರೋಗಗಳ ಸಮಯದಲ್ಲಿ ಅಪಾರ ಸಾವು ನೋವುಗಳಿಂದ ಸೀಮಿತ ಸಂಪನ್ಮೂಲಗಳ ಮೇಲೆ ಒತ್ತಡ ಹೆಚ್ಚಬಹುದು. ಸಂಪನ್ಮೂಲಗಳು ತ್ವರಿತವಾಗಿ ಮುಗಿದು ಹೋಗಬಹುದು. ಸಾಂಕ್ರಾಮಿಕ‌ ರೋಗಳಿಂದ ಅಪಾರ  ಜೀವಹಾನಿಯಾಗಿ ಉಂಟಾಗುವ ವಿಪರೀತ ಮಾನಸಿಕ ಪರಿಣಾಮಗಳತ್ತ ವಿಶೇಷ ಗಮನ ವಹಿಸಬೇಕು. ದೊಡ್ಡ ಸಾಂಕ್ರಾಮಿಕ ರೋಗದಿಂದ ಉಂಟಾಗುವ  ಮನಸ್ಸು-ಸಾಮಾಜಿಕ ಅತೀರೇಕವು, ಆ ಸಮುದಾಯದ ಪ್ರತಿಕ್ರಿಯೆಯನ್ನೆ ಬದಲಾಯಿಸಬಹುದು. ದುರ್ಬಲ ವ್ಯಕ್ತಿಗಳು ಅಪಾರ ಕ್ಷೋಭೆಗೆ ಒಳಗಾಗಬಹುದು. ವಿಶೇಷವಾಗಿ ಸೀಮಿತ ಸಂಪನ್ಮೂಲಗಳು ಹಾಗೂ ವೈದ್ಯಕೀಯ ಸೇವೆಗಳಿಂದ ವಂಚಿತರಲ್ಲಿ ಮಾನಸಿಕ ವ್ಯಥೆಗಳು ಕಂಡುಬರುತ್ತವೆ.

ಗಂಡಾಂತರದಲ್ಲಿ ಉಳಿದವರ ಮಾನಸಿಕ ಸಮಸ್ಯೆಗಳು :

ಮಿತಿಮೀರಿದ ಮಾನಸಿಕ ಒತ್ತಡಗಳು ತೀವ್ರ ಬಿಕ್ಕಟ್ಟನ್ನು ಉಂಟು ಮಾಡಬಹುದು. ಹೊಂದಾಣಿಕೆಯ ಕೊರತೆಯಿಂದ ಮಾನಸಿಕ ಏರುಪೇರು ಉಂಟಾಗಬಹುದು. ಕುಟುಂಬ ಸದಸ್ಯರ ಸಾವು-ನೋವು, ವ್ಯಥೆಗಳು ಮರೆಯಲಾಗದ ಅನುಭವಗಳಾಗಬಹುದು. ಕೆಲವು ತೊಂದರೆಗಳು ತಾತ್ಕಾಲಿಕವಾದರೆ, ಕೆಲವು ಮಾರಕ ಮಾನಸಿಕ ಕಾಯಿಲೆಯ ರೂಪ ಪಡೆದುಕೊಳ್ಳಬಹುದು.

  • ಧೀರ್ಘಕಾಲದ ಯಾತನೆ, ನರಳಾಟ
  • ಅತಿಯಾದ ನರಳಾಟ, ಯಾತನೆ

ಮಾನಸಿಕ‌ ರೋಗದ ಇತಿಹಾಸ, ಅತ್ಮಹತ್ಯಾ ಪೃವೃತ್ತಿಯವರು :

  • ವಿಪತ್ತುಗಳಲ್ಲಿ ಬದುಕುಳಿದವರಲ್ಲಿ ಖಿನ್ನತೆ ಹಾಗೂ ಅಗಾಗ ಬಂದು ಹೋಗುವ ಆಘಾತದ ಲಕ್ಷಣಗಳು ಕಂಡುಬರುತ್ತವೆ. ಕೆಲವರಲ್ಲಿ ಕ್ರೂರವರ್ತನೆ ಹಾಗೂ ಮಾದಕ ವ್ಯಸನಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು.
  • ಮನಃಶಾರೀರಿಕ ಸಮಸ್ಯೆಗಳು, ತೀವ್ರ ಕ್ಷೋಭೆ, ಮರುಕಳಿಸುವ ನೆನಪುಗಳಿಂದ ಗಂಡಾಂತರ ನಂತರದ ಆಘಾತಗಳು, ಅಂಜಿಕೆ, ಆತಂಕಗಳು ಉಂಟಾಗಬಹುದು.

ಹೊಂದಾಣಿಕೆಯ ತೊಂದರೆಗಳು:

ಭಾವನಾತ್ಮಕ ಬದಲಾವಣೆಗಳು, ನಮ್ಮ ಪರಿಸರದ ಜೊತೆ ಮರುಹೊಂದಾಣಿಕೆಯ ತೊಂದರೆಗಳು. ದುಃಖ ಆಳವಾದಾಗ ಶಬ್ದಗಳು ಕಡಿಮೆ. ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಜನರ ಸಾವಿನಿಂದ ಅಪಾರ ದುಃಖ ಉಂಟಾಗಬಹುದು. ದುಃಖವು ಬೇರೆಬೇರೆ ರೂಪದಲ್ಲಿ ಬಹಿರಂಗವಾಗಬಹುದು. ಉದಾ : ಖಿನ್ನತೆ, ಭಯ, ಕೋಪ, ವ್ಯಥೆ. ನಂತರ ನಿಧಾನವಾದ ಸಮಾಧಾನ ದೊರೆತು ಹೊಸ ಆತ್ಮವಿಶ್ವಾಸ ಹಾಗೂ ಭರವಸೆಯೊಂದಿಗೆ ಮತ್ತೆ ಜೀವನದ ಮುಂದುವರಿಯುವಿಕೆ.

ದುಃಖದ ಪ್ರಕ್ರಿಯೆ :

  • ಮೃತ ಸಂಬಂಧಿಯ ಸಂಬಂಧ ಮರೆತು, ಬಾಂಧವ್ಯದಿಂದ‌ ಬಿಡುಗಡೆ ಹೊಂದುವುದು
  • ಬೇರೆ ಅಥವಾ ನವೀನ ಪರಿಸ್ಥಿತಿ, ವ್ಯಕ್ತಿಗಳೊಂದಿಗೆ ಹೊಂದಾಣಿಕೆ
  • ಹೊಸ ಸಂಭಂಧ ಬೆಳೆಸಿಕೊಳ್ಳುವ ಪ್ರಯತ್ನ

ನಷ್ಟ ಹಾಗೂ ದುಃಖಗಳನ್ನು ಸಹಿಸುವುದು ಈ ಕೆಳಗಿನ ವಿಷಯಗಳ ಮೇಲೆ ಅವಲಂಬಿತ: 

  • ಬದುಕುಳಿದವರ ವ್ಯಕ್ತಿತ್ವ ಸರಿದೂಗಿಸಿಕೊಳ್ಳುವ ಸಾಮರ್ಥ್ಯ
  • ಮೃತ ವ್ಯಕ್ತಿಗಳೊಂದಿಗಿನ ಸಂಬಂಧ
  • ಸಾವಿನ ಕಾರಣ ಹಾಗೂ ಸನ್ನಿವೇಶಗಳು
  • ಸಮಾಜದ ಹಾಗೂ ಉಳಿದ ಸಂಬಂಧಿಗಳಿಂದ ದೊರೆತ ಸಹಾನುಭೂತಿ .
  • ಶೋಕದ ಪ್ರಕ್ರಿಯೆ: ಮೃತರ, ಘಟನೆಯ, ನರಳಾಟದ ನೆನಪುಗಳು. ಭಯ, ಖಿನ್ನತೆ, ಅಳುವುದು, ಸಾಯುವ ಇಚ್ಛೆ, ಹಸಿವಾಗದಿರುವಿಕೆ, ಚಂಚಲತೆ. ದೈನಂದಿನ ಜೀವನಕ್ಕೆ ಮರಳಲಾಗದ ಸ್ಥಿತಿ .

ಮಾನಸಿಕ ಅರೋಗ್ಯ ಸೇವೆ:

ಮಾನಸಿಕ ಅರೋಗ್ಯ ಸಹಾಯ ಹಾಗೂ ಅದರ ಜೊತೆಗೆ ಕೆಲಸಗಳನ್ನು ಒದಗಿಸಬೇಕು

  • ಜನಹಿತಕಾರಿ ಹಾಗೂ ಸಮಾಜಿಕ ಸಹಾಯ ಸೇವೆಗಳು
  • ದುರ್ಬಲ ಹಾಗೂ ಅಪಾಯದಲ್ಲಿರುವ ಜನರಿಗೆ ಆಪ್ತಸಮಾಲೋಚನೆ .
  • ಸಮೂಹ ಮಾಧ್ಯಮಗಳ ಬಳಕೆ .

 ಗಂಭಿರ ವಿಪತ್ತುಗಳಲ್ಲಿ ಬದುಕುಳಿದವರಿಗೆ ಧೀರ್ಘಕಾಲದ ಮಾನಸಿಕ ಸಹಾಯ‌ ಬೇಕಾಗಬಹುದು. ಸಹಾಯ ಮಾಡುವ ಮುಖ್ಯಸಂದರ್ಭಗಳು, ವಿಪತ್ತಿನ ಮುಂಚೆ, ವಿಪತ್ತಿನಲ್ಲಿ, ನಂತರ. ನಾಲ್ಕು ಗುಂಪುಗಳಿಗೆ ಸಹಾಯಬೇಕಾಗಬಹುದು .

  1. ರೋಗಿಗಳು
  2. ರೋಗದಿಂದ ಬದುಕುಳಿದವರು
  3. ಸೊಂಕು ತಗುಲದೆ ಇದ್ದು ತಗುಲುವ ಸಂಭವವಿರುವ ವ್ಯಕ್ತಿಗಳು
  4. ವಿಪತ್ತು ನಿರ್ವಹಣಾ ತಂಡದ ಸದಸ್ಯರು

ಮಾನಸಿಕ ಅರೋಗ್ಯದ ತೊಂದರೆ ಕಂಡುಬರುವ ಸಮಯ

೧. ಗಂಡಾಂತರದ ಮುಂಚಿನ ಸಮಸ್ಯೆಗಳು :

  • ಮುಂಬರುವ ಗಂಡಾಂತರದಿಂದ ಉಂಟಾದ ಒತ್ತಡ
  • ಗಂಡಾಂತರದ ಕಡೆಗಣನೆ ಅಥವಾ ತೀವ್ರಗಣನೆ
  • ಇರುವ ಮಾನಸಿಕ ತೊಂದರೆಗಳು ಉಲ್ಬಣಿಸುವಿಕೆ
  • ಅತಂಕ, ಭಯ, ಅಭದ್ರತೆ, ಅತಿಶಯ ಮನ್ನೆಚ್ಚರಿಕೆವಹಿಸುವುದು

ಕ್ರಮಗಳು :

ಬರಬಹುದಾದ ತೊಂದರೆಗಳ ಬಗ್ಗೆ ಮನವರಿಕೆ ಮಾಡುವುದು, ದುರ್ಬಲರಿಗೆ ವಿಶೇಷವಾಗಿ

  • ಮಾನಸಿಕ ಸಮಾಲೋಚಕರ, ಗಸ್ತು, ಸಂಚಾರಿ ದಳಗಳ ನಿಯೋಜನೆ
  • ದುರ್ಬಲ ವರ್ಗದ ಗುರುತಿಸುವಿಕೆ 
  • ಮುನ್ನೆಚ್ಚರಿಕಾ ಕ್ರಮಗಳ ಅಧಿಕಾರಾತ್ಮಕ ನಿಯೋಜನೆ.

೨: ಗಂಡಾಂತರ ಸಮಯದ ಸಮಸ್ಯೆಗಳು : ಗಂಡಾಂತರದಲ್ಲಿ ಸಿಕ್ಕಿಹಾಕಿಕೊಳ್ಳುವ, ಮರಣ ಹೊಂದುವ ಭಯ, ಧನಾತ್ಮಕ ಅಥವಾ ಋಣಾತ್ಮಕ ನಾಯಕತ್ವದ ವರ್ತನೆ, ಉಗ್ರ, ಹಿಂಸಾಚಾರದ ವರ್ತನೆ.

ಹೊಸ ಬದಲಾವಣೆಗಳಿಗೆ ಹೊಂದಾಣಿಕೆಯ ಸಮಸ್ಯೆಗಳು : ದಿಗ್ಬಂಧನ, ಸಾಮಾಜಿಕ ಅಂತರ, ಮುಖ ಗವಸು ಧರಿಸುವುದು, ತಾತ್ಕಾಲಿಕ ಬಂದ್‌ಗಳು ಅತಂಕ, ಖಿನ್ನತೆ, ದುಃಖ, ಭಯ, ಒತ್ತಡ, ನಿದ್ರಾಹೀನತೆ, ಮಾನಸಿಕ ರೋಗದ ಉಲ್ಬಣವಾಗುವಿಕೆ.

ಕ್ರಮಗಳು: ಮಾನಸಿಕ ಸಮಸ್ಯೆಗಳ ತಕ್ಷಣ ಗುರುತಿಸುವಿಕೆ, ಸಮೂಹ ಮಾಧ್ಯಮಗಳ ಸದ್ಬಳಕೆ, ನಡಯುತ್ತಿರುವ ಘಟನೆಯ ಸರಿಯಾದ ಮಾಹಿತಿ ಹಾಗೂ ಪರಿಹಾರ ಕಾರ್ಯದ ವಿವರಣೆ. ಜನರ ಕರ್ತವ್ಯಗಳ ಅರಿವು ಮೂಡಿಸುವಿಕೆ, ಸುರಕ್ಷತೆ, ಅಭಯ, ನೈತಿಕತೆ, ಭದ್ರತೆಯ ಭರವಸೆ.

ಕೌಟುಂಬಿಕ ಹಾಗೂ ಗುಂಪು ಸಮಾಲೋಚನೆ:

ಪರಸ್ಪರ ಸಹಾಯ ಹಾಗೂ ಸಲಹೆಗಳ ಬಗ್ಗೆ ಚರ್ಚೆ, ದುಃಖಿತ, ಶೋಕಿತ ಕುಟುಂಬಗಳಿಗೆ ಮಾನಸಿಕ ಪ್ರಥಮ‌ ಚಿಕಿತ್ಸೆ.

ಮಾನಸಿಕ ಜಾಗೃತದಳ, ಸಂಚಾರಿ ದಳಗಳ ನಿಯೋಜನೆ.

೩: ಗಂಡಾಂತರದ ನಂತರದ ಸಮಸ್ಯೆಗಳು:

ಹೊಸ ಗಂಡಾಂತರದ ಭಯ, ಅಧಿಕಾರಿ, ಇಲಾಖೆಗಳ ವಿರುದ್ಧ ಪ್ರತಿಭಟನೆ, ಖಿನ್ನತೆ, ಮಾರಕ ದುಃಖಕರ ಪರಿಸ್ಥಿತಿ, ಆಘಾತ, ಮದ್ಯಪಾನ, ಮಾದಕ ವಸ್ತುಗಳ ಸೇವನೆ.

ಕ್ರಮಗಳು:

ಮಾದ್ಯಮಗಳಲ್ಲಿ ಮಾನಸಿಕ ಪುನಃಶ್ಚೇತನ ಕಾರ್ಯಗಳು. ಮನಃಸಾಮಾಜಿಕ ಕಾರ್ಯಕ್ರಮಗಳು. ಅನುಭವಗಳು, ಕಲಿತ ಪಾಠಗಳ ಚರ್ಚೆ-ವಿಶ್ಲೇಷಣೆ

ಮೂರು ಮುಖ್ಯ ಸಂದೇಶಗಳು :

  1. ಕೇವಲ ಮಾನಸಿಕ ತೊಂದರೆಗೆ ಸೀಮಿತವಾಗಿರದೆ ಸರ್ವತೋಮುಖ ಸಮಸ್ಯೆಗಳತ್ತ ಗಮನವಹಿಸಬೇಕು
  2. ಮಾನಸಿಕ ತಜ್ಞರ ಕೆಲಸದ ಪರಿಧಿ ಹೆಚ್ಚಿಸಬೇಕು.
  3. ಹೆಚ್ಚಿನ  ಸಮಸ್ಯೆಗಳನ್ನು ತಜ್ಞರ ಅವಶ್ಯಕತೆಯಿಲ್ಲದೆ ಪರಿಹರಿಸಬಹುದು.

ಮುಂದುವರಿದ ಮಾನಸಿಕ ಚಿಕಿತ್ಸೆ :

  • ಪ್ರಾಥಮಿಕ ಚಿಕಿತ್ಸೆಯಿಂದ ಸರಿಹೋಗದ ಸಮಸ್ಯೆಗಳು
  • ಕೌಟುಂಬಿಕ, ವೃತ್ತಿಪರ, ಹಾಗೂ ಸಾಮಾಜಿಕ ಜೀವನದ ಹೊಂದಾಣಿಕೆಯ ಸಮಸ್ಯೆಗಳು
  • ಮದ್ಯಪಾನ ಹಾಗೂ ಮಾದಕವಸ್ತುಗಳ ಬಳಕೆ
  • ಮಾರಕ ಖಿನ್ನತೆ, ದುರ್ಘಟನಾ ನಂತರದ ತೀವ್ರ ಆಘಾತ ಹಾಗೂ ತೀವ್ರತರಹದ ಮಾನಸಿಕ ಕಾಯಿಲೆಗಳಿಗೆ ಮಾನಸಿಕ ತಜ್ಞರು, ಸಮಾಲೋಚನೆಯ ಜೊತೆಗೆ ಔಷಧಿಗಳೂ ಬೇಕಾಗಬಹುದು .

ವಿಪತ್ತಿನಲ್ಲಿ ಬದುಕುಳಿದ ಮಕ್ಕಳ ಮಾನಸಿಕ ಸಹಾಯ .

  1. ಶಾಲೆ, ಸಮುದಾಯ, ಕುಟುಂಬಗಳನ್ನು ಮಾನಸಿಕ ಸಹಾಯದ ಮೂಲವಾಗಿ ಬಳಸಿಕೊಳ್ಳುವ ಉಪಾಯ
  2. ಶಿಕ್ಷಕರು, ಮಹಿಳಾ ಸ್ವಸಹಾಯ ಗುಂಪುಗಳು, ಸಮಾಜ ಸೇವಕರು, ಯುವಜನರ ಗುಂಪುಗಳ ಸಹಾಯ ಪಡೆಯುವುದು
  3. ಗುಂಪು ಚಟುವಟಿಕೆ, ಮನೋರಂಜನೆಯ ಮೂಲಕ ಮಾನಸಿಕ ಸಹಾಯ
  4. ಶಾಲೆಗೆ ಆದಷ್ಟು ಬೇಗ ಮರಳುವ ವ್ಯವಸ್ಥೆ ಆಗಬೇಕು
 ಕಾರ್ಯ ಯೋಜನೆಯ ಮುಖ್ಯ ಕ್ರಮವಿಧಾನ :
  1. ಸಮುದಾಯದ ಮಾನಸಿಕ‌ ಹಾಗೂ ಸಾಮಾಜಿಕ‌ ಅವಶ್ಯಕತೆಗಳ ತ್ವರಿತ ಗುರುತಿಸುವಿಕೆ
  2. ನುರಿತ ವ್ಯಕ್ತಿಗಳಿಂದ ಸಹಾಯ
  3. ಕ್ಲಿಷ್ಟ ಮಾನಸಿಕ ಸಮಸ್ಯೆಗಳಿಗೆ ತಜ್ಞವೈದ್ಯರಿಂದ ಚಿಕಿತ್ಸೆ
  4. ದುರ್ಬಲರಿಗೆ ಚಿಕಿತ್ಸೆಯಲ್ಲಿ ಆದ್ಯತೆ
  5. ಅರೋಗ್ಯಶಿಕ್ಷಣ, ಮಾಹಿತಿ
  6. ಸಮುದಾಯ ಸಹಭಾಗಿತ್ವ, ಸ್ವಾವಲಂಬನೆ
  7. ಸಮೂಹ ಮಾಧ್ಯಗಳ ಸದ್ಬಳಕೆ
  8. ಅಂತರ ಇಲಾಖಾ ಸಹಕಾರ .

ಜೀವ ಹಾನಿಯ ಜೊತೆ ಆಸ್ತಿಪಾಸ್ತಿ, ಬೆಳೆಗಳನ್ನು ಕಳೆದುಕೊಂಡು ತೀವ್ರ ಮಾನಸಿಕ ತೊಂದರೆಗೆ ಒಳಗಾದವರಿಗೆ ಮಾನಸಿಕ ಅರೋಗ್ಯದ ಜೊತೆಗೆ ಪುನರ್ವಸತಿ ಕಾರ್ಯಕ್ರಮಗಳ ಅನುಷ್ಠಾನವಾಗಬೇಕು.

Dr-Salim-Nadaf ಡಾ. ಸಲೀಮ್ ನದಾಫ್‌ ಆರ್ ಪಿ ಮ್ಯಾನ್ಶನ್, ಕಾಡುಗೋಡಿ, ಬೆಂಗಳೂರು

ಡಾ. ಸಲೀಮ್ ನದಾಫ್‌
ಆರ್ ಪಿ ಮ್ಯಾನ್ಶನ್, ಕಾಡುಗೋಡಿ, ಬೆಂಗಳೂರು
ಮೊ.: 8073048415

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!