ಕೊರೋನಾ ಲಾಕ್ ಡೌನ್ ಮುಂದೇನು?

ಕೊರೋನಾ ಲಾಕ್ ಡೌನ್ ಮುಂದೇನು? ಇನ್ನೀಗ ಮಗದೊಮ್ಮೆ ರೋಗ ಬಂದರೂ ಸಾಂಕ್ರಾಮಿಕ ರೋಗವನ್ನು ಎದುರಿಸುವ ಸಾಮಥ್ರ್ಯ ಮತ್ತು ಮನೋಸ್ಥಿತಿ ಜನರಿಗೆ ಬೆಳೆದಿದೆ. ಈ ಕಾರಣದಿಂದ ಲಾಕ್‍ಡೌನ್ ಮುಗಿದ ಬಳಿಕ ರೋಗದ ತೀವ್ರತೆ ಕುಂಠಿತವಾಗುವ ಎಲ್ಲ ಸಾಧ್ಯತೆಗಳೂ ಇದೆ.

Lockdown-indiaಇಡೀ ಜಗತ್ತು ಹಿಂದೆಂದೂ ಕಂಡು ಕೇಳದ ರೀತಿಯಲ್ಲಿ ಒಂದು ಕಣ್ಣಿಗೆ ಕಾಣದ ವೈರಾಣು ಕೋವಿಡ್-19 ಇದರ ಕಪಿಮುಷ್ಟಿಯಲ್ಲಿ ಸಿಕ್ಕಿ ವಿಲವಿಲನೆ ಒದ್ದಾಡುತ್ತಿದೆ.  ಈ ಸಾವುನೋವಿನ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ರೋಗ ನಿಯಂತ್ರಣಕ್ಕೆ ಬರುತ್ತಿಲ್ಲದಿರುವುದೇ ಬಹಳ ಆತಂಕಕಾರಿ ವಿಚಾರ. ಜಗತ್ತೇ ಒಂದು ರೀತಿಯಲ್ಲಿ ಸ್ತಬ್ದವಾಗಿದೆ. ವಿಶ್ವದ ಹೆಚ್ಚಿನ ಎಲ್ಲಾ ರಾಷ್ಟ್ರಗಳು ಲಾಕ್ ಡೌನ್‍ನಲ್ಲಿ ಸಿಲುಕಿದೆ. ಜನ ಗೃಹಬಂಧನದಲ್ಲಿ ಕಾಲ ಕಳೆಯುತ್ತಿದ್ದಾರೆ. ಸಾರಿಗೆ ಸಂಪರ್ಕ, ಕೈಗಾರಿಕೆ ವಾಣಿಜ್ಯ, ಆಡಳಿತ ಹೀಗೆ ಎಲ್ಲ ಕ್ಷೇತ್ರಗಳೂ ಬಲವಂತವಾಗಿ ಮುಚ್ಚಲ್ಪಟ್ಟಿದೆ. ಮನುಷ್ಯನಿಂದ ಮನುಷ್ಯನಿಗೆ ನೇರವಾಗಿ ಸಂಪರ್ಕದಿಂದ ಹರಡುವ ಸಾಂಕ್ರಾಮಿಕ ರೋಗ ಇದಾಗಿರುವುದರಿಂದ ರೋಗ ಹರಡದಂತೆ ಮಾಡಲು ಇರುವ ಒಂದೇ ಉಪಾಯ ಎಂದರೆ ಜನರ ಸಂಪರ್ಕಕ್ಕೆ ಬರದಂತೆ ಮಾಡುವುದು. ಅದರ ಪರಿಣಾಮವೇ ದೇಶವಿಡೀ ಸಂಪೂರ್ಣ ಲಾಕ್‍ಡೌನ್ ಆಗಿರುತ್ತದೆ.

 ಭಾರತವೂ ಮಾರ್ಚ್ 23 ರಿಂದ ಸಂಪೂರ್ಣವಾಗಿ ಕೆಲಸ ನಿಲ್ಲಿಸಿದೆ. ಜನರು ಮನೆಯೊಳಗೆ ಬಂದಿಯಾಗಿದ್ದಾರೆ. ಅತೀ ಅಗತ್ಯ ತುರ್ತು ಕಾರ್ಯಗಳಿಗೆ ಮಾತ್ರ ಜನರು ಹೊರ ಬರಲು ಅನುಮತಿ ನೀಡಲಾಗಿದೆ. ಏಪ್ರಿಲ್ 14 ರ ವರೆಗೆ ಈ ಲಾಕ್‍ಡೌನ್ ಎಂಬ ಆದೇಶ ಸರ್ಕಾರ ಈಗಾಗಲೇ ನೀಡಿದೆ. ಆದರೆ ಈ ಆದೇಶ ಮತ್ತೆರಡು ವಾರಕ್ಕೆ ಮುಂದುವರೆಯುವ ಎಲ್ಲ ಲಕ್ಷಣಗಳೂ ಕಂಡು ಬಂದಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ, ರೋಗಿಗಳ ಸಂಖ್ಯೆ, ಸಾವಿನ ಸಂಖ್ಯೆ ದೇಶದೆಲ್ಲೆಡೆ ಹೆಚ್ಚುತ್ತಲೇ ಇದೆ. ಎಷ್ಟು ದಿನಗಳು ಈ ಗೃಹಬಂಧನ ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ವಿಶ್ವದೆಲ್ಲೆಡೆ ವಿಜ್ಞಾನಿಗಳು, ವೈದ್ಯರು ಮತ್ತು ರೋಗ ಶಾಸ್ತ್ರಜ್ಞರು ಈ ವಿಚಾರ ಬಗ್ಗೆ ಹೆಚ್ಚು ಹೆಚ್ಚು ಚಿಂತನ ಮತ್ತು ಮಂಥನ ನಡೆಸುತ್ತಲೇ ಇದ್ದಾರೆ. ಗೃಹಬಂಧನ ಅಥವಾ ಲಾಕ್ ಡೌನ್ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಪರಿಣಿತ ತಜ್ಞರ ಅಭಿಪ್ರಾಯಗಳನ್ನು ಕಲೆ ಹಾಕಿ ಈ ವಿಚಾರದ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲುವ ಪ್ರಾಮಾಣಿಕ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

ಖ್ಯಾತ ಸಾಂಕ್ರಾಮಿಕ ರೋಗ ತಜ್ಞರೂ, ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ವೆಲ್ಲೂರು ಇದರ ಮಾಜಿ ಪ್ರಾಂಶುಪಾಲರೂ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ICMR) ಇದರ ಮಾಜಿ ಸಲಹೆಗಾರರೂ ಆದಂತಹ ಡಾ|| ಜಯಪ್ರಕಾಶ್ ಮುಳಿಯಿಲ್ ಇವರ ಅಭಿಪ್ರಾಯದಂತೆ ನಾವೀಗ ರೋಗವನ್ನು ನಿರ್ಮೂಲನ ಮಾಡುವ ಹಂತವನ್ನು ದಾಟಿ ಬಹುದೂರ ಸಾಗಿದ್ದೇವೆ. ರೋಗವನ್ನು ಎದುರಿಸಿ ಆರೋಗ್ಯವಂತ ಯುವಕರು ಮತ್ತು ಮಕ್ಕಳು ರೋಗವನ್ನು ಪಡೆದು “ಹಿಂಡು ಪ್ರತಿಬಂಧಕತೆ ಪಡೆಯುವತ್ತ ಗಮನಹರಿಸಬೇಕು. ಅಶಕ್ತರು, ಇಳಿವಯಸ್ಸಿನವರು ಮತ್ತು ವೈದ್ಯಕೀಯವಾಗಿ ದುರ್ಬಲರಾದವನನ್ನು ಮಾತ್ರ ರಕ್ಷಿಸಿಕೊಂಡು, ಆರೋಗ್ಯವಂತರು ರೋಗವನ್ನು ಧೈರ್ಯದಿಂದ ಎದುರಿಸಬೇಕು. ರೋಗಕ್ಕೆ ಹೆದರಿ ಮನೆಯೊಳಗೆ ಅಡಗಿ ಕುಳಿತುಕೊಳ್ಳುವ ಕಾಲ ಇದಲ್ಲ. ಚಂದ್ರ ಲೋಕಕ್ಕೂ, ಮಂಗಳ ಗೃಹಕ್ಕೂ ಹೋಗಿ ಅಡಗಿ ಕುಳಿತುಕೊಳ್ಳುವುದು ಸಮಂಜಸವಲ್ಲ. ಧೈರ್ಯದಿಂದ ರೋಗವನ್ನು ಎದುರಿಸಿ “ಹಿಂಡು ಪ್ರತಿಬಂಧಕತೆ” ಬೆಳೆಸಿಕೊಂಡು ಅಶಕ್ತರನ್ನು ರಕ್ಷಿಸಿಕೊಳ್ಳಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಹಿಂಡು ಪ್ರತಿಬಂಧಕತೆ:

ಈ 21 ದಿನಗಳ ಲಾಕ್ ಡೌನ್ ಇದರ ಉದ್ದೇಶ ಏನೆಂದರೆviral-epidemic ಕೊರೋನಾ ಲಾಕ್ ಡೌನ್ ಮುಂದೇನು? ಶಂಕಿತರನ್ನು ಮತ್ತು ಸೋಂಕಿತರನ್ನು ಗುರುತಿಸಿ, ಬೇರೆ ಮಾಡಿ ಇತರರಿಗೆ ರೋಗ ಹರಡದಂತೆ ಮಾಡುವುದು. ಜನರನ್ನು ಇತರರ ಸಂಪರ್ಕಕ್ಕಕೆ ಬರದಂತೆ ಮಾಡಿ ರೋಗ ಹರಡದಂತೆ ಮಾಡುವ ಕೆಲಸ ಮಾಡುವುದು. ರೋಗಿಗಳ ಸಂಖ್ಯೆಯನ್ನು ನಿಯಂತ್ರಿಸಿ ರೋಗದ ತೀವ್ರತೆ ಮತ್ತು ಪ್ರಮಾಣವನ್ನು ನಿಯಂತ್ರಣದಲ್ಲಿರಿಸುವುದೇ ಲಾಕ್‍ಡೌನ್ ಇದರ ಮುಖ್ಯ ಉದ್ದೇಶವಾಗಿದೆ. ಆದರೆ ಈ ಮೂರು ವಾರಗಳ ಸಮಯದಲ್ಲಿ ಬೇಕಾದಷ್ಟು ವೈದ್ಯಕೀಯ ಸಲಕರಣೆಗಳನ್ನು ಸಂಗ್ರಹಿಸಿ, ರೋಗಗಳನ್ನು ಎದುರಿಸಲು ಬೇಕಾದ ಮಾನವ ಸಂಪನ್ಮೂಲ ಮತ್ತು ಇತರ ಸಂಪನ್ಮೂಲಗಳನ್ನು ಕ್ರೂಢೀಕರಿಸಿ ರೋಗವನ್ನು ನಿಯಂತ್ರಿಸಲು ಬೇಕಾದ ಕ್ರಮವನ್ನು ಕೈಗೊಳ್ಳಲು ಸರಕಾರ ಮುಂದಾಗಿದೆ. ಇದಕ್ಕೆ ಜನರ ಸಹಕಾರ ಅತೀ ಅಗತ್ಯ. ಹಾಗಂತ ಎಷ್ಟು ದಿನಗಳ ಕಾಲ ಈ ಲಾಕ್ ಡೌನ್ ಮುಂದುವರೆಸಬಹುದು ಎಂಬ ಜಿಜ್ಞಾಸೆ ಎಲ್ಲರಲ್ಲೂ ಇದೆ. ಒಮ್ಮೆ ಲಾಕ್ ಡೌನ್ ನಿಲ್ಲಿಸಿದ ಕೂಡಲೇ ರೋಗದ ತೀವ್ರತೆ ಮತ್ತು ಪ್ರಮಾಣ ಹೆಚ್ಚಾಗುವ ಸಾಧ್ಯತೆಯೂ ಇದೆ. ಈ ನಿಟ್ಟಿನಲ್ಲಿ ವಯಸ್ಕರನ್ನು, ಅಶಕ್ತರನ್ನು, ಬೇರೆಯಾಗಿಸಿ ಅವರಿಗೆ ವಿಶೇಷವಾದ ಕಾಳಜಿ ವಹಿಸಿ ರೋಗ ಬರದಂತೆ ನೋಡಿಕೊಳ್ಳಬೇಕು. ಆರೋಗ್ಯವಂತರು ರೋಗ ಬಂದರೂ ಗುಣಮುಖರಾಗುವ ಸಾದ್ಯತೆ ಇದೆ. ಆ ಮೂಲಕ ಸಮುದಾಯದ ಹೆಚ್ಚಿನ ಜನರು ರೋಗ ಪ್ರತಿಬಂಧಕತೆ ಪಡೆದು, ಹಿಂಡು ಪ್ರತಿಬಂಧಕತೆಯಿಂದ ಮಾತ್ರ ರೋಗವನ್ನು ಜಯಿಸಬೇಕಾಗುತ್ತದೆ.
ಈ ಹಿಂದೆ 2009ರಲ್ಲಿ H1N1 ಎಂಬ ವೈರಾಣು ಜ್ವರ ಬಂದಗಲೂ ಬಹಳಷ್ಟು ಸಾವು ನೋವು ಉಂಟಾಗಿತ್ತು. ಆದರೆ 2-3 ತಿಂಗಳುಗಳ ಬಳಿಕ ರೋಗ ತನ್ನಿಂತಾನೇ ಮರೆಯಾಗಿತ್ತು. ಇಲ್ಲಿಯೂ ಕೂಡಾ ‘ಹಿಂಡು ಪ್ರತಿಬಂಧಕತೆ’ ಬಹಳ ಮುಖ್ಯ ಭೂಮಿಕೆ ವಹಿಸಿದೆ ಎಂಬುದು ಗಮನಾರ್ಹ ಅಂಶವಾಗಿದೆ. ಸಾಮಾನ್ಯವಾಗಿ ಒಂದು ಸಮುದಾಯ ಅಥವಾ ಭೌಗೋಳಿಕ ಪ್ರದೇಶದ 60ರಿಂದ 70 ಶೇಕಡಾ ಮಂದಿಗೆ ರೋಗ ತಗುಲಿ, ಪ್ರತಿಬಂಧಕತೆ ಬೆಳೆಸಿಕೊಂಡಲ್ಲಿ ಪರೋಕ್ಷವಾಗಿ ಇತರ ಅಶಕ್ತರಿಗೆ, ವೃದ್ದರಿಗೆ ಕೂಡ ಹಿಂಡು ಪ್ರತಿಬಂಧಕತೆ ಬರಬಹುದು ಎಂದು ಅಂದಾಜಿಸಲಾಗಿದೆ. ನಮ್ಮ ಭಾರತ ದೇಶವನ್ನೇ ಉದಾಹರಣೆಗೆ ತೆಗೆದುಕೊಂಡಲ್ಲಿ ನಮ್ಮ ಜನಸಂಖ್ಯೆಯ 12.5% ಮಂದಿ 55 ವಯಸ್ಸಿಗಿಂತ ಜಾಸ್ತಿ ವಯಸ್ಸಿನವರು. ಇದರರ್ಥ ಸುಮಾರು 87.5% ಶೇಕಡಾ ಮಂದಿ ಯುವಕರು, ಇದು ನಿಜವಾಗಿಯೂ ನಮ್ಮ ದೇಶಕ್ಕೆ ಸಿಕ್ಕಿದ ವರದಾನ ಎಂದರೂ ತಪ್ಪಾಗಲಾರದು. ಈ 87.5% ಶೇಕಡಾ ಮಂದಿಯಲ್ಲಿ 70 ಶೇಕಡಾ ಮಂದಿ ರೋಗ ಪಡೆದರೂ, ಅವರು ರೋಗ ಪ್ರತಿಬಂಧಕತೆ ಪಡೆಯುವುದರ ಜೊತೆಗೆ ಇಡೀ ಸಮುದಾಯವನ್ನು ರಕ್ಷಿಸುವ ‘ಹಿಂಡು ಪ್ರತಿಬಂಧಕತೆ’ ಪಡೆಯುತ್ತಾರೆ. ಹಾಗಾಗಿ ನಮಗೆ ಕೇವಲ 12.5 ಶೇಕಡಾ ಅಶಕ್ತರು ಮತ್ತು ವೃದ್ಧರನ್ನು ಬೇರೆಯಾಗಿಸಿ ರೋಗ ಬರದಂತೆ ತಡೆಯುವ ಹೊಣೆಗಾರಿಕೆ ಮಾತ್ರ ಇರುತ್ತದೆ. ಆದರೆ ಉಳಿದ 87.5% ಶೇಕಡಾ ಮಂದಿ ಒಮ್ಮೆಲೆ ರೋಗಕ್ಕೆ ತುತ್ತಾದರೂ ಅಪಾಯಕಾರಿ. ಅವರಿಗೆಲ್ಲರಿಗೂ ಏಕಕಾಲದಲ್ಲಿ ವೈದ್ಯಕೀಯ ಸೌಲಭ್ಯ ನೀಡಲು ಕಷ್ಟವಾಗಬಹುದು.

ಹೀಗಿರುವಾಗ ಲಾಕ್‍ಡೌನ್ ಮಾಡಿದಾಗ ಈ ಆರೋಗ್ಯವಂತರು ಹಂತಹಂತವಾಗಿ ಕೋವಿಡ್-19 ವೈರಾಣುವಿಗೆ ತೆರೆದುಕೊಂಡಲ್ಲಿ, ಅವರೆಲ್ಲರಿಗೂ ಸೂಕ್ತ ವೈದ್ಯಕೀಯ ಸೌಲಭ್ಯ ಸಕಾಲದಲ್ಲಿ ದೊರಕಿ, ಅವರೆಲ್ಲರೂ ಗುಣಮುಖರಾಗಿ ಇಡೀ ಸಮುದಾಯಕ್ಕೂ ರಕ್ಷಣೆ ದೊರೆಯುವುದು. ಈ ಲಾಕ್ ಡೌನ್ ಮಾಡುವುದುರ ಹಿಂದಿನ ಮರ್ಮ ಈ ಲೆಕ್ಕಾಚಾರದಲ್ಲಿ ಅಡಗಿದೆ ಎಂದರೂ ತಪ್ಪಾಗಲಾರದು. ಆದರೆ ನೆನಪಿರಲಿ, ವೈರಾಣುಗಳು ಬಹಳ ವೇಗವಾಗಿ ಬದಲಾಗುವ ಈ ಸನ್ನಿವೇಶಕ್ಕೆ ಒಗ್ಗಿಕೊಂಡು ರೂಪಾಂತರಗೊಂಡ ಹೊಸ ಹೊಸ ವೇಷದಲ್ಲಿ ಬರುವ ಸಾದ್ಯತೆಯೂ ಇದೆ. ಅದಕ್ಕೆ ಏನಿಲ್ಲವೆಂದರೂ ಒಂದು ವರ್ಷ ತಗಲಬಹುದು. ಆ ಸಮಯದಲ್ಲಿ ಸೂಕ್ತವಾದ ಲಸಿಕೆ ಸಿದ್ಧವಾಗಿ ರೋಗದಿಂದ ಶಾಶ್ವತ ಮುಕ್ತಿ ಸಿಗುವ ದಿನಗಳು ಬಂದರೂ ಆಶ್ಚರ್ಯವೇನಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಒಂದು ಕೊರೋನಾ ಪರೀಕ್ಷೆಗೆ 4000 ರೂಪಾಯಿ ತಗಲುವುದರಿಂದ ಎಲ್ಲರಿಗೂ ಪರೀಕ್ಷೆ ಮಾಡಲು ಸಾಧ್ಯವಿಲ್ಲ ಮತ್ತು ಅಷ್ಟು ಕಿಟ್‍ಗಳೂ ನಮ್ಮಲ್ಲಿ ಲಭ್ಯವಿಲ್ಲ. ದಕ್ಷಿಣ ಕೊರಿಯಾ ಹೆಚ್ಚಿನ ಎಲ್ಲರಿಗೂ ಈ ಪರೀಕ್ಷೆ ನಡೆಸಿ ಯಶಸ್ವಿಯಾಗಿದೆ ಎಂದೂ ಕೆಲವರು ವಾದಿಸುತ್ತಾರೆ.

ಆದರೆ ನಮ್ಮ ದೇಶದ ಜನಸಂಖ್ಯೆಯಾದ 130 ಕೋಟಿಯ ಒಂದು ಶೇಕಡಾ ಮಂದಿಗೆ ಈ ರೋಗ ಬಂದರೂ ಏನಿಲ್ಲವೆಂದರೂ 1.3 ಕೋಟಿ ಮಂದಿಗೆ ಪರೀಕ್ಷೆ ಮಾಡಬೇಕಾಗುತ್ತದೆ. ಇದು ಈಗಿನ ಪರಿಸ್ಥಿತಿಯಲ್ಲಿ ಸಾಧ್ಯವಾಗದ ಮಾತು. ಈ ನಿಟ್ಟಿನಲ್ಲಿ ಅತೀ ಅಗತ್ಯವಾದ ಸಂದರ್ಭಗಳಲ್ಲಿ ಮಾತ್ರ ಪರೀಕ್ಷೆ ಮಾಡಬೇಕಷ್ಟೆ. ಪರೀಕ್ಷೆ ಮಾಡಿದರೂ ಚಿಕಿತ್ಸೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹಾಗಾಗಿ ಅನಗತ್ಯ ಪರೀಕ್ಷೆಯ ಅಗತ್ಯವೂ ಇಲ್ಲ. ಚಿಕಿತ್ಸೆಯೂ ಇಲ್ಲದ, ಲಸಿಕೆಯೂ, ಇಲ್ಲದ ರೋಗಕ್ಕೆ ಮೇಲೆ ತಿಳಿಸಿದ ಎಲ್ಲಾ ಕಾರಣಗಳನ್ನು ಗಮನದಲ್ಲಿರಿಸಿಕೊಂಡು, “ಹಿಂಡು ಪ್ರತಿಬಂಧಕತೆ” ಬಳಸಿಕೊಳ್ಳುವುದು ಸದ್ಯದ ಆಯ್ಕೆ ಎಂದರೂ ತಪ್ಪಾಗಲಾರದು ಎಂಬುದೇ ತಜ್ಞರ ಒಕ್ಕೊರಲಿನ ಅಭಿಮತವಾಗಿರುತ್ತದೆ. ಆದರೆ ಯುನೈಟೆಡ್ ಕಿಂಗ್‍ಡಮ್‍ನಲ್ಲಿ ಈ ಹಿಂಡು ಪ್ರತಿಬಂಧಕತೆಯ ಪ್ರಯೋಗ ಯಶಸ್ವಿಯಾಗಿಲ್ಲ. ಆರಂಭದಲ್ಲಿ ರೋಗದ ತೀವ್ರತೆ ಮತ್ತು ಹರಡುವಿಕೆ ಜೋರಾಗಿರುತ್ತದೆ. ಹೊಸದೊಂದು ಸಾಂಕ್ರಾಮಿಕ ರೋಗ ಬಂದಾಗ ಯಾವಾಗಲೂ ಆರಂಭದಲ್ಲಿ ಆರ್ಭಟ ಜೋರಾಗಿರುತ್ತದೆ. ಆದರೆ ಅಂತಹ ರೋಗಿಗಳಿಗೆ ಬೇಕಾದ ಸಾಕಷ್ಟು ವೈದ್ಯಕೀಯ ಸೌಲಭ್ಯ ನೀಡುವ ಸಾಮಥ್ರ್ಯ ಆ ದೇಶಕ್ಕೆ ಬೇಕಾಗುತ್ತದೆ.

6.5 ಕೋಟಿ ಜನಸಂಖ್ಯೆಯ ಯುನೈಟೆಡ್ ಕಿಂಗ್‍ಡಮ್‍ನಲ್ಲಿ ಕೇವಲ 6500 ವೆಂಟಿಲೇಟರ್ ಸೌಲಭ್ಯ ಮಾತ್ರ ಇದೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗಿದೆ. ಒಂದು ಹಂತ ತಲುಪಿದ ಬಳಿಕ ರೋಗದ ಪ್ರಮಾಣ ತನ್ನಿಂತಾನೇ ಕಡಿಮೆಯಾಗುತ್ತದೆ. ಯಾಕೆಂದರೆ ರೋಗ ಹರಡಲು ಬೇಕಾದ ಪರಾವಲಂಬಿ ‘ಮನುಷ್ಯ’ ದೊರಕದಿದ್ದಾಗ ವೈರಾಣು ಹರಡುವ ಸಾಧ್ಯತೆ ಕ್ಷೀಣಿಸುತ್ತದೆ. ಹಿಂಡು ಪ್ರತಿಬಂಧಕತೆ ಬರಲು ಎಷ್ಟು ಶೇಕಡಾ ಮಂದಿಗೆ ರೋಗ ಬರಬೇಕು ಎಂದು ಊಹಿಸುವುದು ಸಾಧ್ಯವಾಗದ ಮಾತು. ಯಾಕೆಂದರೆ ದಡಾರ ರೋಗ ನಿಯಂತ್ರಣಕ್ಕೆ ಬರಲು 90 ಶೇಕಡಾ ಮಂದಿಗೆ ರೋಗ ಬಂದ ಬಳಿಕವೇ ಹಿಂಡು  ಪ್ರತಿಬಂಧಕತೆ ಬಂದಿತ್ತು. ಆದರೆ ಇನ್ಲುಪ್ಲುಯೆಂಜಾ ರೋಗಕ್ಕೆ ಕೇವಲ 40 ಶೇಕಡಾ ರೋಗಿಗಳಲ್ಲಿ ರೋಗ ಕಂಡು ಬಂದಾಗಲೇ ಪ್ರತಿಬಂದಕತೆ ಬಂದು ರೋಗ ನಿಯಂತ್ರಣಕ್ಕೆ ಬಂದಿತ್ತು. ಒಟ್ಟಿನಲ್ಲಿ ‘ಹಿಂಡು ಪ್ರತಿಬಂಧಕತೆ’ ಬೆಳೆಸುವ ಸಮಯದಲ್ಲಿ ರೋಗಿಗಳಿಗೆ ಸಾಕಷ್ಟು ನೆರವು, ವೈದ್ಯಕೀಯ ಸೌಲಭ್ಯ ದೊರಕದೇ ಇದ್ದಾಗ ಸಾವು ನೋವಿನ ಪ್ರಮಾಣ ಹೆಚ್ಚುತ್ತದೆ. ಯುನೈಟೆಡ್ ಕಿಂಗ್ ಡಮ್ಸ್ ಎಡವಿದ್ದು ಅಲ್ಲಿಯೇ.

ಜನರಲ್ಲಿ ರೋಗದ ತೀವ್ರತೆ ಬಗ್ಗೆ  ಅರಿವು:
ಲಾಕ್ ಡೌನ್ ಮಾಡುವುದರಿಂದ ಜನರಲ್ಲಿ ರೋಗದ ತೀವ್ರತೆ ಬಗ್ಗೆ ಹೆಚ್ಚಿನ ಅರಿವು ಮೂಡಿರುವುದಂತೂ ನಿಜ. ಸಾಂಕ್ರಾಮಿಕ ರೋಗ ಬಂದಾಗ ಯಾವ ರೀತಿ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆಯೂ ಜನರಲ್ಲಿ ಹೆಚ್ಚಿನ ಅರಿವು ಮೂಡಿದೆ. ವೈಯಕ್ತಿಕವಾಗಿ ದೈಹಿಕ ಸ್ವಚ್ಛತೆ, ಸಾಮಾಜಿಕ ಸ್ವಚ್ಛತೆ ಮತ್ತು ಸಮುದಾಯವನ್ನು ರಕ್ಷಿಸಿಕೊಳ್ಳಬೇಕು ಎಂಬುದರ ಬಗ್ಗೆಯೂ ಅರಿವು ಮೂಡಿರುವುದಂತೂ ನಿಜವಾದ ಮಾತು. ಇಡೀ ದೇಶವೇ ಎಚ್ಚೆತ್ತುಕೊಂಡಿದೆ. ಜನರು ಜಾಗೃತರಾಗಿದ್ದಾರೆ. ಈ ಮೂರು ವಾರಗಳಿಂದ ಜನರು ಕಲಿತ ಪಾಠವಂತೂ ಅಮೂಲ್ಯ. ಇನ್ನೀಗ ಮಗದೊಮ್ಮೆ ರೋಗ ಬಂದರೂ ಸಾಂಕ್ರಾಮಿಕ ರೋಗವನ್ನು ಎದುರಿಸುವ ಸಾಮಥ್ರ್ಯ ಮತ್ತು ಮನೋಸ್ಥಿತಿ ಜನರಿಗೆ ಬೆಳೆದಿದೆ. ಈ ಕಾರಣದಿಂದ ಲಾಕ್‍ಡೌನ್ ಮುಗಿದ ಬಳಿಕ ರೋಗದ ತೀವ್ರತೆ ಕುಂಠಿತವಾಗುವ ಎಲ್ಲ ಸಾಧ್ಯತೆಗಳೂ ಇದೆ.

ನಮ್ಮವರನ್ನು ರಕ್ಷಿಸಿಕೊಂಡು ಸಮಾಜವನ್ನು ರಕ್ಷಿಸಬೇಕು. ಅಶಕ್ತರು ಮತ್ತು ವೃದ್ದರನ್ನು ರಕ್ಷಿಸಬೇಕು ಎಂಬ ಸುಪ್ತ ಪ್ರಜ್ಞೆ ಎಲ್ಲರಿಗೂ ಜಾಗೃತವಾಗಿದೆ. ಇನ್ನೀಗ ಲಾಕ್‍ಡೌನ್ ಮುಗಿದ ಬಳಿಕ ರೋಗಿಗಳ ಸಂಖ್ಯೆ ಹೆಚ್ಚಾದರೂ ಜನರೇ ಅವರನ್ನು ಕಾಪಾಡಿಕೊಳ್ಳುವ ಹಂತಕ್ಕೆ ತಲುಪಿರುವುದು ಆಶಾದಾಯಕ ಬೆಳವಣಿಗೆ. ಈ ಸಂದಿಗ್ಧ ಕಾಲದಲ್ಲಿ ನಾವೆಲ್ಲರೂ ಜವಾಬ್ದಾರಿಯುತವಾಗಿ ವರ್ತಿಸಿ ಎಲ್ಲರ ಹಿತವನ್ನು ಕಾಯ್ದುಕೊಳ್ಳಬೇಕು. ಮನೆಯಲ್ಲಿರುವ ಹಿರಿಯರು ಮತ್ತು ರೋಗ ಪೀಡಿತ, ರೋಗ ನಿರೋಧಕ ಶಕ್ತಿ ಕುಂಠಿತ ವ್ಯಕ್ತಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕಾದ ಅನಿವಾರ್ಯತೆ ಇದೆ. ಒಟ್ಟಿನಲ್ಲಿ ಲಾಕ್‍ಡೌನ್ ಎನ್ನುವುದು ಒಂದು ಅಗ್ನಿಪರೀಕ್ಷೆಯಾಗಿದ್ದು, ನಾವೆಲ್ಲರೂ ಅದನ್ನು ಎದುರಿಸಿ ಹೆಚ್ಚು ಜವಾಬ್ದಾರಿಯುತ ಪ್ರಜ್ಞೆಗಳಾಗಿ ಪರಿವರ್ತನೆಯಾಗಿರುವುದು ಧನಾತ್ಮಕ ಬೆಳವಣಿಗೆ ಎಂದರೂ ತಪ್ಪಾಗಲಾರದು. ಎಲ್ಲವನ್ನು ಸರಕಾರವೇ ಮಾಡಬೇಕು ಎನ್ನುವ ಮನೋಧರ್ಮವನ್ನು ಬದಿಗಿಟ್ಟು ಪ್ರತಿಯೊಬ್ಬರೂ ತಮಗೆ ನೀಡಲ್ಪಟ್ಟ ಹೊಣೆಗಾರಿಕೆಯನ್ನು ಸರಿಯಾಗಿ ನಿಭಾಯಿಸಿದಲ್ಲಿ ಸಮುದಾಯದಲ್ಲಿ ಆದಷ್ಟು ಬೇಗ ಹಿಂಡು ಪ್ರತಿಬಂಧಕತೆ ಬೆಳೆದು, ರೋಗ ಅಳಿಸಿಹೋಗುವ ದಿನಗಳು ದೂರವಿಲ್ಲ ಮತ್ತು ಆ ದಿನಗಳು ಆದಷ್ಟು ಬೇಗ ಬರಲಿ.

ರೋಗ ಬರದಂತೆ  ಕಾಯಬೇಕಾದ ಅನಿವಾರ್ಯತೆ:

ಅಮೇರಿಕಾದ ಖ್ಯಾತ ಸಾಂಕ್ರಾಮಿಕ ರೋಗ ತಜ್ಞ ಡಾ|| ಕರ್ಟ್ ವಿಟಿಕೋವಸ್ಕಿ, ರಾಕ್‍ಫೆಲ್ಲರ್ ಯುನಿರ್ವಸಿಟಿ, ನ್ಯೂಯಾರ್ಕ್ ಇವರ ಪ್ರಕಾರ ತಕ್ಷಣವೇ ಲಾಕ್‍ಡೌನ್ ತೆಗೆದು ಜನರು ತಮ್ಮ ದೈನಂದಿನ ಚಟುವಟಿಕೆಗಳನ್ನು ಆರಂಭಿಸಬೇಕು. ರೋಗದ ತೀವ್ರತೆ ಮತ್ತು ಪ್ರಮಾಣ ತಗ್ಗಿಸಲು ಮನೆಯೊಳಗೆ ಗೃಹಬಂಧನ ಮಾಡುವುದರಿಂದ ಸರಕಾರಕ್ಕೆ ಒಂದಷ್ಟು ವೈದ್ಯಕೀಯ ಸೌಲಭ್ಯ ಮತ್ತು ಮಾನವ ಸಂಪನ್ಮೂಲ ಕ್ರೋಢೀಕರಿಸುವ ಸಮಯ ಸಿಗಬಹುದು, ಆದರೆ ರೋಗ ಸಮುದಾಯದಲ್ಲಿ ಇದ್ದೇ ಇರುತ್ತದೆ. ಹಲವಾರು ಮಂದಿಯಲ್ಲಿ ರೋಗವನ್ನು ಗುರುತಿಸಲು ಸಾಧ್ಯವಾಗದೇ ಇರಲೂ ಬಹುದು. ಆರೋಗ್ಯವಂತ ವ್ಯಕ್ತಿಗಳು ತಮ್ಮ ಸ್ವಚ್ಛ ಜೀವನ ಶೈಲಿಯನ್ನು ಮುಂದುವರಿಸಿಕೊಂಡು ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು. ಮಕ್ಕಳು ಶಾಲೆಗೆ ಹೋಗಬೇಕು. ಮತ್ತು ಸಮುದಾಯದ 80 ಶೇಕಡಾ ಮಂದಿ ಆದಷ್ಟು ಬೇಗ ರೋಗ ಪಡೆದು ರೋಗ ನಿರೋಧಕತೆ ಪಡೆಯಬೇಕು. ಹಾಗಾದಲ್ಲಿ ಮಾತ್ರ ‘ಹಿಂಡು ಪ್ರತಿ ಬಂಧಕತೆ’ ಬಂದು ಅಶಕ್ತರು ಮತ್ತು ವೃದ್ಧರಿಗೆ ರಕ್ಷಣೆ ಸಿಗುತ್ತದೆ.

ರೋಗ ನಿರೋಧಕ ಶಕ್ತಿ ಕುಂದಿದ್ದ ವಯಸ್ಕರು, ಮಧುಮೇಹಿಗಳು, ಹೃದಯರೋಗಿಗಳು, ಕ್ಯಾನ್ಸರ್ ರೋಗಿಗಳು, ಗರ್ಭಿಣಿಯರು ಮುಂತಾದವರನ್ನು ಮಾತ್ರ ವಿಶೇಷ ನಿಗಾ ವಹಿಸಿ ವೈರಾಣು ರೋಗ ಬರದಂತೆ ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕಾದ ಅನಿವಾರ್ಯತೆ ಇರುತ್ತದೆ. ಕನಿಷ್ಟ ನಾಲ್ಕು ವಾರಗಳಲ್ಲಿ ಈ ವೈರಾಣುವಿನ ಆರ್ಭಟ ತನ್ನಿಂತಾನೇ ಕಡಿಮೆಯಾಗುತ್ತದೆ ಎಂದು ಹೆಚ್ಚಿನ ಸಾಂಕ್ರಾಮಿಕ ರೋಗ ತಜ್ಞರುಗಳ ಒಕ್ಕೊರಲಿನ ಅಭಿಮತವಾಗಿದೆ. ಈ ಹಿಂದೆಯೂ ಹಲವಾರು ಸಾಂಕ್ರಾಮಿಕ ರೋಗಗಳು ಮೂರು ತಿಂಗಳುಗಳಲ್ಲಿ ನಿಯಂತ್ರಣಕ್ಕೆ ಬಂದ ನಿದರ್ಶನಗಳು ಇದೆ. ಅತಿಯಾದ ಅಂತರ್ಜಾಲ ಬಳಕೆ, ವಿಪರೀತವಾದ ಮಾಹಿತಿಗಳ ಸೋರಿಕೆ ಮತ್ತು ಜನರಲ್ಲಿನ ಭಯ ಇವೆಲ್ಲವೂ ಒಟ್ಟು ಸೇರಿ ಈ ಕೊರೋನಾ ಜ್ವರ ಹೆಚ್ಚು ಕುಖ್ಯಾತಿ ಗಳಿಸಿದೆ. ಗುಣಪಡಿಸಲಾಗದ ಭಯಾನಕ ರೋಗ ಎಂಬ ಹಣೆಪಟ್ಟಿಯನ್ನು ಪಡೆದಿದೆ. ಅದೇನೇ ಇರಲಿ, ನಾವೆಲ್ಲರೂ ನಮ್ಮ ನಮ್ಮ ಜಾಗೃತೆಯನ್ನು ಮಾಡಿಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವಯಸ್ಕರನ್ನು ಅಶಕ್ತರನ್ನು ರೋಗದಿಂದ ಕಾಪಾಡಿಕೊಂಡು ಈ ಮಾರಕ ವೈರಾಣು ರೋಗವನ್ನು ಜಯಿಸೋಣ.

Dr.-Murali-Mohana-Chuntaru.ಡಾ| ಮುರಲೀ ಮೋಹನ್ ಚೂಂತಾರು ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ, ಮಂಜೇಶ್ವರ- 671 323 ದೂ.: 04998-273544, 235111  ಮೊ.: 9845135787 www.surakshadental.com email: drmuraleemohan@gmail.com

ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787
www.surakshadental.com
email: drmuraleemohan@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!