ಕೊರೋನಾ ಜ್ವರ ಎನ್ನುವ ಸಾಂಕ್ರಾಮಿಕ ರೋಗವನ್ನು ತಿಳಿದುಕೊಳ್ಳುವಾಗ ಬಳಸುವ ಹಲವಾರು ಪದಪುಂಜಗಳ ಅರ್ಥ ತಿಳಿದುಕೊಳ್ಳದಿದ್ದಲ್ಲಿ ರೋಗದ ಬಗ್ಗೆ ಸರಿಯಾದ ಮಾಹಿತಿ ಓದುಗರಿಗೆ ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಸಾಂಕ್ರಾಮಿಕ ರೋಗವಾದ ಕೋವಿಡ್-19 ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಏಕೈಕ ಉದ್ದೇಶದಿಂದ ಈ ಲೇಖನದಲ್ಲಿ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಬಳಸುವ ಪದಪುಂಜಗಳ ಬಗ್ಗೆ ಪರಿಪೂರ್ಣ ಮಾಹಿತಿ ನೀಡಲಾಗಿದೆ.
ಕೊರೋನಾ ಜ್ವರ ಎನ್ನುವ ರೋಗ ಕೊರೋನಾ ವೈರಾಣುವಿನ ಗುಂಪಿಗೆ ಸೇರಿದ ವೈರಾಣುವಿನಿಂದ ಬರುತ್ತದೆ. ಸಂಕ್ಷಿಪ್ತವಾಗಿ ಈ ರೋಗವನ್ನು ಕೋವಿಡ್-19 ಎಂದು ಕರೆಯಲಾಗುತ್ತದೆ. ಈ ವೈರಾಣು RNA ಗುಂಪಿಗೆ ಸೇರಿರುತ್ತದೆ. ಈ ರೋಗಕ್ಕೆ ಕಾರಣವಾಗುವ ವೈರಾಣುವನ್ನು SARS-COV-2 ಅಂದರೆ ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್–ಕೊರೋನಾ ವೈರಸ್-2 ಎಂದು ಹೆಸರಿಸಲಾಗಿದೆ. ಆಂಗ್ಲಭಾಷೆಯಲ್ಲಿ ಕೊರೋನಾ ಜ್ವರವನ್ನು CORONA VIRUS DISEASE-2019 ಎಂದು ಕರೆಯಲಾಗುತ್ತದೆ. ಚೀನಾ ದೇಶದ ವುಹಾನ್ನಗರದಲ್ಲಿ 2019 ರಲ್ಲಿ ಆರಂಭವಾದ ಈ ಸೋಂಕು ಜಗತ್ತಿನೆಲ್ಲೆಡೆ ಪಸರಿಸಿದೆ.
1. ಕೊರೋನಾ ಶಂಕಿತರು ಎಂದರೆ ಯಾರು?
ಕೊರೋನಾ ರೋಗವಿರುವ ದೇಶಗಳಿಂದ ಬಂದಿರುವ ಮತ್ತು ಕೊರೋನಾ ಸೋಂಕಿತರ ಸಂಪರ್ಕದಲ್ಲಿರುವ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪನ್ನು ಕೊರೋನಾ ಶಂಕಿತರು ಎನ್ನಲಾಗುತ್ತದೆ.
2. ಕೊರೋನಾ ಸೋಂಕಿತರು ಎಂದರೆ ಯಾರು?
ಕೋವಿಡ್-19 ರೋಗದಿಂದ ಬಳಲುತ್ತಿರುವವರು ಹಾಗೂ ಕೋವಿಡ್-19 ಪರೀಕ್ಷೆಯಲ್ಲಿ ಧನಾತ್ಮಕ ವರದಿ ಬಂದಿರುವವರನ್ನು ಕೊರೋನಾ ಸೋಂಕಿತರು ಎಂದು ಕರೆಯುತ್ತಾರೆ.
3. ಕ್ವಾರಂಟೈನ್ ಎಂದರೇನು?
ಕೊರೋನಾ ರೋಗವಿರುವ ವಿದೇಶಗಳಿಂದ ಬಂದವರು ಮತ್ತು ಕೋವಿಡ್-19 ಸೋಂಕಿತರ ಸಂಪರ್ಕದಲ್ಲಿ ಇದ್ದವರಿಂದ ವೈರಾಣು ಹರಡದಂತೆ ತಡೆಯಲು ನಿರ್ದಿಷ್ಟ ದಿನಗಳ ಕಾಲ ಇತರರ ಸಂಪರ್ಕದಿಂದ ಬೇರ್ಪಡಿಸಿ ಅವರ ಮೇಲೆ ಸದಾ ನಿಗಾ ವಹಿಸಲು ಅನುಕೂಲವಾಗುವಂತೆ ಮನೆಯ ಪ್ರತ್ಯೇಕ ಕೊಠಡಿ, ವಸತಿಗೃಹ, ಸಮುದಾಯಭವನ, ಕಲ್ಯಾಣ ಮಂಟಪ ಅಥವಾ ಇನ್ನಾವುದೇ ನಾಲ್ಕು ಗೋಡೆಗಳ ನಡುವೆ ಪ್ರತ್ಯೇಕವಾಗಿಸುವ ವ್ಯವಸ್ಥೆಗೆ ಕ್ವಾರಂಟೈನ್ ಎನ್ನಲಾಗುತ್ತದೆ.
4. ಲಾಕ್ ಡೌನ್ ಎಂದರೇನು?
ಕೊರೋನಾ ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ಕಿರು ಹನಿಗಳ ಮುಖಾಂತರ ಮತ್ತು ಸ್ಪರ್ಶದ ಮುಖಾಂತರ ಹರಡುವುದನ್ನು ತಡೆಗಟ್ಟಲು ವ್ಯಕ್ತಿಯಿಂದ ವ್ಯಕ್ತಿಗೆ ಮತ್ತು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸೋಂಕು ಹರಡದಂತೆ ತಡೆಯಲು ಇಡೀ ದೇಶದ ನಾಗರೀಕರೆಲ್ಲರೂ ಸಮಸ್ತ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಮನೆಯಿಂದ ಹೊರಗೆ ಬರದಂತೆ ಲಘುವಾಗಿ ಪ್ರತಿಬಂದಿಸುವ ಆದೇಶವನ್ನು ಲಾಕ್ಡೌನ್ ಎನ್ನಲಾಗುತ್ತದೆ. Stay Home Stay Safe ಎಂಬ ತತ್ವದಂತೆ ಎಲ್ಲರೂ ಮನೆಯೊಳಗೆ ಸುರಕ್ಷಿತವಾಗಿದ್ದು, ರೋಗ ಪಸರಿಸದಂತೆ ಮಾಡುವ ಪ್ರಕ್ರಿಯೆ ಇದಾಗಿರುತ್ತದೆ.
5. ಸೀಲ್ಡೌನ್ ಎಂದರೇನು?
ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಸಮುದಾಯದಲ್ಲಿ ಸೋಂಕು ಕ್ಷಿಪ್ರವಾಗಿ ಹರಡಿ ಹೆಚ್ಚು ಅಪಾಯ ಉಂಟಾಗುವುದನ್ನು ತಪ್ಪಿಸಲು ಮನೆಯಿಂದ ಹೊರಬರದಂತೆ ಕಠಿಣ ನಿಯಮಗಳನ್ನು ವಿಧಿಸಿ ಪ್ರತಿಬಂಧಿಸುವ ಆದೇಶಕ್ಕೆ ಸೀಲ್ಡೌನ್ ಎನ್ನಲಾಗುತ್ತದೆ. ಸೀಲ್ಡೌನ್ ಮಾಡಿದ ಸಂದರ್ಭದಲ್ಲಿ ಆ ಭೌಗೋಳಿಕ ಪ್ರದೇಶದಿಂದ ಯಾರೂ ಹೊರಗೆ ಹೋಗುವಂತಿಲ್ಲ ಮತ್ತು ಹೊರಗಿನ ಪ್ರದೇಶದಿಂದ ಯಾರೂ ಒಳಗೆ ಬರುವಂತಿಲ್ಲ.
6. ಸ್ಯಾನಿಟೈಸರ್ ಎಂದರೇನು?
ಶಂಕಿತ ವ್ಯಕ್ತಿ ಅಥವಾ ಸೋಂಕಿತ ವ್ಯಕ್ತಿ ವಸ್ತು, ಯಂತ್ರ ಸಂಪರ್ಕದಿಂದ ಅಥವಾ ಇನ್ನಾವುದರ ಸ್ಪರ್ಶದ ಮುಖಾಂತರ ತನಗಾಗಲಿ ಅಥವಾ ಇನ್ನೊಬ್ಬರಿಗಾಗಲೀ ವೈರಾಣು ಹರಡುವುದನ್ನು ತಡೆಯಲು ಕೈಯಲ್ಲಿ ಅಥವಾ ವಸ್ತುವಿನ ಮೇಲೆ ಅಂಟಿರಬಹುದಾದ ವೈರಾಣುವನ್ನು ನಾಶಪಡಿಸಲು ಬಳಸುವ ಸ್ವಚ್ಛತಾ ದ್ರಾವಣವನ್ನು ಸ್ಯಾನಿಟೈಸ್ ಎನ್ನಲಾಗುತ್ತದೆ. ಶುದ್ಧ ಕನ್ನಡದಲ್ಲಿ ನಿರ್ಮಲೀಕಾರಕ ದ್ರಾವಣ ಎನ್ನಲಾಗುತ್ತದೆ. ಇದರಲ್ಲಿ ಎರಡು ವಿಧಗಳಿವೆ. ಇದು ಆಲ್ಕೋಹಾಲ್ ಹೊಂದಿರುವ ದ್ರಾವಣವಾಗಿರುತ್ತದೆ. ಮಿಥೆನಾಲ್, ಹೈಡ್ರೋಜನ್ ಪೆರಾಕ್ಸೆಡ್ 3%, ಗ್ಲಿಸರಾಲ್ 98%, ನೀರು ಹೊಂದಿರುವ ಮಿಥೆನಾಲ್ ಸ್ಯಾನಿಟೈಸರ್ ಎಂದು ಕರೆಯುತ್ತಾರೆ. ಇನ್ನೊಂದು ಐಸೋಪ್ರೊಪೈಲ್ ಆಲ್ಕೋಹಾಲ್ ಸ್ಯಾನಿಟೈಸರ್ ಆಗಿರುತ್ತದೆ. ಇದರಲ್ಲಿ ಐಸೋಪ್ರೊಪೈಲ್ ಆಲ್ಕೋಹಾಲ್, ಹೈಡ್ರೋಜನ್ ಪೆರಾಕ್ಸೈಡ್ 3%, ಗ್ಲಿಸರಾಲ್ 98% ಮತ್ತು ನೀರು ಇರುತ್ತದೆ.
7. ಮಾಸ್ಕ್ ಎಂದರೇನು?
ಪರಿಚಿತ-ಅಪರಿಚಿತರೊಂದಿಗೆ ಇಲ್ಲವೇ ಸಾರ್ವಜನಿಕ ಸ್ಥಳಗಳಲ್ಲಿ ವ್ಯವಹರಿಸುವಾಗ ವೈರಾಣು ತನಗಾಗಲೀ ಅಥವಾ ತನ್ನಿಂದ ಮತ್ತೊಬ್ಬರಿಗಾಗಲೀ ಮೂಗು, ಬಾಯಿ, ಮೂಲಕ ಹರಡದಂತೆ ತಡೆಯಲು ವ್ಯಕ್ತಿಯು ಧರಿಸಿ ಬಳಸಿ-ಒಂದೆಡೆ ಸುರಕ್ಷಿತವಾಗಿ ಬಿಸಾಡಬಹುದಾದ ಬಟ್ಟೆ ಅಥವಾ ಇತರ ವಸ್ತುಗಳಿಂದ ತಯಾರಿಸಿದ ಸುರಕ್ಷಿತಾ ಸಾಧನವನ್ನು ಮುಖಕವಚ ಅಥವಾ ಮಾಸ್ಕ್ ಎನ್ನಲಾಗುತ್ತದೆ. ಸಾಮಾನ್ಯವಾಗಿ ಇದು 9×7 ಇಂಚ್ನ ಅಳತೆಯಲ್ಲಿ ಇರುತ್ತದೆ. ವೈರಾಣುಗಳು ನಾವು ಸೀನಿದಾಗ ಕೆಮ್ಮಿದಾಗ ಅಥವಾ ಜೋರಾಗಿ ಮಾತನಾಡಿದಾಗ ಬಾಯಿ ಅಥವಾ ಮೂಗಿನಿಂದ ಕಿರುಹನಿಗಳ ಜೊತೆಯಲ್ಲಿ ವಾತಾವರಣಕ್ಕೆ ಸೋರುತ್ತಿದ್ದು, ತಡೆಯಲು ಈ ಮುಖಕವಚ ಉಪಯುಕ್ತ ಸಾಧನ ಎಂದು ಪರಿಗಣಿಸಲಾಗಿದೆ. ಸಾಂಕ್ರಾಮಿಕ ರೋಗ ತಡೆಯಲು ಬಹಳ ಪರಿಣಾಮಕಾರಿ ಎಂದೂ ಅಂದಾಜಿಸಲಾಗಿದೆ.
8. N-95 ರೆಸ್ಪಿರೇಟರ್ ಎಂದರೇನು?
ಕೋವಿಡ್-19 ವೈರಾಣು ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು, ದಾದಿಯರು, ಶುಶ್ರೂಷಕಿಯರು ಹಾಗೂ ಆರೋಗ್ಯ ಸಹಾಯಕರು ರೋಗಿಗಳ ಕೆಮ್ಮು, ದಮ್ಮು, ಸೀನು ಮತ್ತು ಮಾತಿನ ಮೂಲಕ ಹೊರಚಿಮ್ಮಲ್ಪಡುವ ಕಿರುಹನಿಗಳ ಜೊತೆಗಿರುವ ವೈರಾಣುವಿನಿಂದ ರಕ್ಷಿಸಿಕೊಳ್ಳಲು ಬಳಸುವ ಪರಿಣಾಮಕಾರಿ ಮುಖರಕ್ಷಕ ಸಾಧನವನ್ನು N-95 ರೆಸ್ಪಿರೇಟರ್ ಎನ್ನಲಾಗುತ್ತದೆ. ಶೇಕಡಾ 95 ರಷ್ಟು ವೈರಾಣುವನ್ನು ಇದು ಸೋಸುತ್ತದೆ ಮತ್ತು ರಕ್ಷಣೆ ನೀಡುತ್ತದೆ ಎಂದು ಭಾವಿಸಲಾಗಿದೆ. ಈ ಸಾಧನವನ್ನು ಒಮ್ಮೆ ಬಳಸಿದರೆ 6 ರಿಂದ 8 ಗಂಟೆಗಳ ಕಾಲ ಬಳಸಬಹುದು. ಇವರ ವೆಚ್ಚ ಜಾಸ್ತಿ ಇರುವುದರಿಂದ ಸ್ವಚ್ಛಗೊಳಿಸಿ ಮರು ಬಳಸಲು ಅವಕಾಶವಿದೆ. ಲಭ್ಯತೆಯ ಕೊರತೆಯಿಂದಲೂ ಈ ಮರುಬಳಕೆ ಅನಿವಾರ್ಯವಾಗಿದೆ.
9.ಸಾಮಾಜಿಕ ಅಂತರ ಎಂದರೇನು?
ಅಪರಿಚಿತರು ಮತ್ತು ಅಪರಿಚಿತರು ನಡುವೆ ವ್ಯವಹರಿಸುವಾಗ ಕನಿಷ್ಟ ಒಂದು ಮೀಟರ್ ಅಂತರವನ್ನು ಕಾಯ್ದುಕೊಳ್ಳುವ ಕ್ರಮವನ್ನು ‘ಸಾಮಾಜಿಕ ಅಂತರ’ ಎನ್ನಲಾಗುತ್ತದೆ. ಆಂಗ್ಲಭಾಷೆಯಲ್ಲಿ Social distansing ಎನ್ನಲಾಗುತ್ತದೆ. ಸಾಂಕ್ರಾಮಿಕ ರೋಗ ತೀವ್ರವಾಗಿ ಸಮುದಾಯದಲ್ಲಿ ಹರಡುವ ಸಂದರ್ಭಗಳಲ್ಲಿ ಈ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಅತೀ ಅಗತ್ಯ ಎಂದು ಸಾಂಕ್ರಾಮಿಕ ರೋಗ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
10. PPE ಕಿಟ್ ಎಂದರೇನು?
PPE ಕಿಟ್ ಎಂದರೆ ಪರ್ಸನಲ್ ಪ್ರೊಟೆಕ್ಷನ್ equipment ಎಕ್ವಿಪ್ಮೆಂಟ್ ಕಿಟ್ ಎಂಬುದಾಗಿದೆ. ವೈಯಕ್ತಿಕ ರಕ್ಷಣಾ ಸಾಧನ ಎಂದು ಕರೆಯಲಾಗುತ್ತದೆ. ಸಾಂಕ್ರಾಮಿಕ ರೋಗ ಇರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ವೈದ್ಯರು, ದಾದಿಯರು, ಶುಶ್ರೂಷಕಿಯರು, ಅರಿವಳಿಕೆ ತಜ್ಞರು ಈ ಸಾಧನವನ್ನು ಬಳಸುತ್ತಾರೆ. ಕೋವಿಡ್-19 ಹೆಪಟೈಟಿಸ್, ಹೆಚ್ಐವಿ, ಏಡ್ಸ್ ಮುಂತಾದ ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ರೋಗಿಗಳ ಚಿಕಿತ್ಸೆಯಲ್ಲಿ ಈ PPಇ ಕಿಟ್ನ್ನು ಬಳಸಲಾಗುತ್ತದೆ. ಸಾಧನದಲ್ಲಿ ಗೌನ್, N-95 ಮಾಸ್ಕ್, ತಲೆಗವಚ, ಕೈಚೀಲ (ಗ್ಲೌವ್ಸ್) ಮತ್ತು ಶೂ ಕವಚ ಇರುತ್ತದೆ. ಸೋಂಕಿತ ರೋಗಿಗಳ ಸ್ಪರ್ಶ, ಕೆಮ್ಮು, ಸೀನುಗಳ ಮುಖಾಂತರ ವೈದ್ಯರಿಗೆ ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ರೋಗ ಹರಡದಂತೆ ಈ PPE ಕಿಟ್ ರಕ್ಷಣೆ ನೀಡುತ್ತದೆ. ಇದು ಕೂಡಾ ಒಮ್ಮೆ ಬಳಸಿ-ಎಸೆಯಬೇಕಾದ ಸಾಧನ ಆಗಿರುತ್ತದೆ. ಮರು ಬಳಕೆ ಮಾಡುವುದು ಒಳ್ಳೆಯದಲ್ಲ.
11. ಬಫರ್ ಜೋನ್
ಸಾಂಕ್ರಾಮಿಕ ರೋಗ ತೀವ್ರವಾಗಿ ಹರಡುತ್ತಿರುವಾಗ ರೋಗಿಗಳ ಸಂಖ್ಯೆ ಜಾಸ್ತಿಯಾದಾಗ ರೋಗ ಹರಡುವುದನ್ನು ತಡೆಯಲು ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶವನ್ನು ಸೀಲ್ಡೌನ್ ಮಾಡಲಾಗುತ್ತದೆ. ಹೀಗೆ ಸೀಲ್ಡೌನ್ ಮಾಡಿದ ಭೌಗೋಳಿಕ ವಲಯದಲ್ಲಿ ಸೋಂಕು ಪೀಡಿತರ ಮನೆಯ 5 ಕಿ.ಮೀ. ವಲಯವನ್ನು ‘ಬಫರ್ ಜೋನ್’ ಎಂದು ಕರೆಯುತ್ತಾರೆ. ಇಲ್ಲಿನ ಎಲ್ಲಾ ಮನೆಗಳಿಗೆ ಆರೋಗ್ಯ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಆರೋಗ್ಯ ವಿಚಾರಣೆ ಮಾಡುತ್ತಾರೆ. ಈ ಪ್ರದೇಶಗಳು ಸೋಂಕು ಹರಡುವ ಸಾಧ್ಯತೆ ಹೆಚ್ಚು ಇರುವುದರಿಂದ ಲಾಕ್ಡೌನ್ ಸಂದರ್ಭದಲ್ಲಿರುವ ಎಲ್ಲ ನಿಬಂಧನೆಗಳು ಜಾರಿಯಲ್ಲಿರುತ್ತದೆ. ಸಾಮಾಜಿಕ ಅಂತರ, ಮುಖಕವಚ, ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿರುತ್ತದೆ. 28 ದಿನಗಳ ಕಾಲ ಈ ಆದೇಶ ಜಾರಿಯಲ್ಲಿರುತ್ತದೆ.
12. ಕಂಟೈನ್ಮೆಂಟ್ ಜೋನ್
ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗ ತೀವ್ರವಾಗಿ ಹರಡುತ್ತಿರುವಾಗ ಜಾಸ್ತಿ ಸೋಂಕಿತ ರೋಗಿ ಇರುವ ಮನೆಯ ಜಾಗದ ಸುತ್ತಲಿನ 100 ಮೀಟರ್ ಪರದೇಶವನ್ನು ಕಂಟೈನ್ಮೆಂಟ್ ಜೋನ್ ಎನ್ನಲಾಗುತ್ತದೆ. ಈ ವಲಯ ಮುಂದಿನ 28 ದಿನಗಳ ಕಾಲ ಸಂಪೂರ್ಣವಾಗಿ ಸೀಲ್ಡೌನ್ ಆಗಲಿದೆ. ಈ ಪ್ರದೇಶದ ಜನರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರುವಂತಿಲ್ಲ ಹಾಗೂ ಆ ಪ್ರದೇಶಕ್ಕೆ ಹೊರಗಿನ ಯಾರೂ ಪ್ರವೇಶಿಸುವಂತಿಲ್ಲ. ಈ ಪ್ರದೇಶದ ಪ್ರತಿ ಮನೆಗೂ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಪ್ರತಿಯೊಬ್ಬರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಇಲ್ಲಿನ ಜನರಿಗೆ ದಿನಸಿ ಔಷಧಿ ಸಹಿತ ದಿನಬಳಕೆಯ ಅಗತ್ಯ ಸಾಮಾಗ್ರಿಗಳನ್ನು ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡುತ್ತದೆ.
13. ರೆಡ್, ಆರೆಂಜ್, ಯೆಲ್ಲೋ ಮತ್ತು ಗ್ರೀನ್ ಜೋನ್
ಸಾಂಕ್ರಾಂಇಕ ರೋಗ ತೀವ್ರವಾಗಿ ಹರಡುತ್ತಿರುವ ಸಂದರ್ಭದಲ್ಲಿ ಒಂದು ಭೌಗೋಳಿಕ ಪ್ರದೇಶ (ಉದಾಹರಣೆಗೆ ಜಿಲ್ಲೆ ಅಥವಾ ತಾಲೂಕು)ದಲ್ಲಿ ಸಕ್ರಿಯವಾಗಿರುವ ಸೋಂಕು ರೋಗದಿಂದ ಸೋಂಕಿತರಾಗಿರುವ ಸಕ್ರಿಯು ರೋಗಿಗಳ (ಉದಾಹರಣೆ ಕೋವಿಡ್-19) ಸಂಖ್ಯೆಯನ್ನು ಆಧರಿಸಿ ಅಂತಹಾ ಭೌಗೋಳಿಕ ಪ್ರದೇಶವನ್ನು ರೆಡ್, ಆರೆಂಜ್, ಯೆಲ್ಲೋ ಮತ್ತು ಗ್ರೀನ್ ವಲಯ ಎಂದು ವಿಂಗಡಿಸಲಾಗುತ್ತದೆ. ಕೊರೋನಾ ಸಕ್ರಿಯ ಇಲ್ಲದ ಜಿಲ್ಲೆಯನ್ನು ಗ್ರೀನ್ ಅಥವಾ ಹಸಿರು ವಲಯ, 1 ರಿಂದ 5ರ ವರೆಗೆ ಸಕ್ರಿಯ ಇರುವ ಜಿಲ್ಲೆಯನ್ನು ಎಲ್ಲೋ ಅಥವಾ ಹಳದಿ ವಲಯ, 6 ರಿಂದ 14 ರ ವರೆಗೆ ಸಕ್ರಿಯ ರೋಗಿಗಳು ಇರುವ ಜಿಲ್ಲೆಗಳನ್ನು ಆರೆಂಜ್ ವಲಯ ಮತ್ತು 15 ಕ್ಕಿಂತ ಜಾಸ್ತಿ ಸಕ್ರಿಯ ರೋಗಿ ಇರುವ ವಲಯವನ್ನು ರೆಡ್ ಅಥವಾ ಕೆಂಪು ವಲಯ ಎಂದು ಸಂಭೋಧಿಸಲಾಗುತ್ತದೆ.
14. ಸೋಂಕು ನಾಶಕ (ಡಿಸ್ಇನ್ಪೆಕ್ವೆಂಟ್) ಎಂದರೇನು?
ದಿನನಿತ್ಯದ ಜೀವನದಲ್ಲಿ ಪ್ರತಿದಿನ ನಮ್ಮ ಸಂಪರ್ಕಕ್ಕೆ ಬರುವ ಹಲವು ವಸ್ತುಗಳ ಮೇಲ್ಮೈಯಲ್ಲಿ ರೋಗಕಾರಣ ರೋಗಾಣುಗಳು ಇರಬಹುದು. ಕೋವಿಡ್-19 ವೈರಾಣು ಇದಕ್ಕೆ ಒಂದು ಉದಾಹರಣೆ. ಇವುಗಳು ಲಿಫ್ಟಿನಗುಂಡಿ, ಎಟಿಎಂ ಪರದೆ, ಬಾಗಿಲಿನ ಹಿಡಿ, ಅಂಗಡಿಯ ಕಪಾಟು, ಮೇಜು ಕುರ್ಚಿಯ ಮೇಲ್ಭಾಗ ಇತ್ಯಾದಿ ಆಗಿರಬಹುದು. ಇಂತಹಾ ಜೀವರಹಿತ ವಸ್ತುಗಳ ಮೇಲ್ಭಾಗವನ್ನು ರೋಗಕಾರಕ ಜೀವಿಗಳಿಂದ ನಾಶಗೊಳಿಸಲು ಸೋಂಕು ನಾಶಕ ದ್ರಾವಣ ನಮಗೆ ಅತೀ ಅಗತ್ಯ. ಈ ಸೋಂಕುನಾಶಕಗಳು ಜೀವರಹಿತ ವಸ್ತುಗಳ ಮೇಲಿನ ವೈರಾಣುಗಳು, ಬ್ಯಾಕ್ಟೀರಿಯಾ, ಮುಂತಾದ ಸಾಂಕ್ರಾಮಿಕ ರೋಗ ಉಂಟುಮಾಡುವ ಕ್ರಿಮಿಗಳಿಂದ ಮುಕ್ತಿಗೊಳಿಸಿ ರೋಗ ಹರಡದಂತೆ ತಡೆಯುತ್ತದೆ. ಉದಾ: ನೆಲ ಒರೆಸಲು ಬಳಸುವ ಫಿನಾಯಿಲ್, ನೀರಿನ ಶುದ್ದೀಕರಣಕ್ಕೆ ಬಳಸುವ ಬ್ಲೀಚಿಂಗ್ ಪೌಡರ್ ಇತ್ಯಾದಿ. ಜೀವ ಇರುವ ವಸ್ತುಗಳ ಮೇಲೆ ಬಳಸಲು ಸೋಂಕುನಾಶಕ ದ್ರಾವಣಗಳ ಸಾಂದ್ರತೆ ಮತ್ತು ತೀವ್ರತೆ ಸ್ಯಾನಿಟೈಸರ್ಗಳಿಗಿಂತ ಬಹಳ ಹೆಚ್ಚು ಇರುವುದರಿಂದ ಅವುಗಳನ್ನು ಜೀವಂತ ವಸ್ತುಗಳ ಮೇಲೆ ಬಳಸುವಂತಿಲ್ಲ. ಅವುಗಳು ಚರ್ಮದ ಮೇಲೆ ಹಾನಿ ಉಂಟು ಮಾಡುತ್ತದೆ. ಒಟ್ಟಿನಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟುವಲ್ಲಿ ಸೋಂಕುನಾಶಕ ದ್ರಾವಣ ಜಡವಸ್ತುಗಳಲ್ಲಿ ಮತ್ತು ಸ್ಯಾನಿಟೈಸರ್ ಜೀವಂತ ವಸ್ತುಗಳಲ್ಲಿ ಬಹುಮುಖ್ಯ ಭೂಮಿಕೆ ವಹಿಸುತ್ತದೆ ಎಂದು ಅಂದಾಜಿಸಲಾಗಿದೆ. ಸ್ಯಾನಿಟೈಸರ್ಗಳನ್ನು ಜಡವಸ್ತುಗಳ ಮೇಲೆ ಬಳಸಬಹುದಾಗಿದೆ. ಆದರೆ ಪರಿಪೂರ್ಣ ಸುರಕ್ಷತೆ ದೊರಕದು ಎನ್ನಲಾಗಿದೆ.
ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ, ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111 ಮೊ.: 9845135787
www.surakshadental.com
Email: drmuraleemohan@gmail.com