ಕರೋನಾ ಎಚ್ಚರ ಜರೂರು, ಭೀತಿ ಬೇಡ. ಕೊವಿಡ್-19 ವೈರಾಣುಗಳು ಸೃಷ್ಟಿಸಿದ ಪಿಡುಗು ಜಗತ್ತಿನಾದ್ಯಂತ ಬಾಧಿಸಿ ಜಗತ್ತಿನ ಆರ್ಥಿಕತೆಯನ್ನೇ ಮಕಾಡೆ ಮಲಗಿಸುವ ಸ್ಥಿತಿಯನ್ನು ತಲುಪಿಸಿದೆ.ಸರಕಾರದ ಆರೋಗ್ಯ ಇಲಾಖೆ ಸೂಚಿಸಿದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಪ್ರಾಮಾಣಿಕವಾಗಿಯೂ, ತಪ್ಪದೇ ಅನುಸರಿಸೋಣ.
ಇಡಿಯ ವಿಶ್ವವನ್ನೇ ತಲ್ಲಣಗೊಳಿಸಿದ ಕರೋನಾ (ಕೊವಿಡ್-19) ಕುರಿತಾಗಿ ಹಗಲಿರುಳು ಅಧ್ಯಯನ, ಸಂಶೋಧನೆ, ಚರ್ಚೆಗಳು ನಡೆಯುತ್ತಿವೆಯಾದರೂ ನಿಖರವಾದ ಪರಿಹಾರ ದೊರಕದ ಹಿನ್ನೆಲೆಯಲ್ಲಿ ಬೇಡವೆಂದರೂ ವಿಶ್ವಶಾಂತಿ ಭಂಗವಾಗಿದೆ. ವೈಜ್ಞಾನಿಕವಾಗಿ ಏನೆಲ್ಲ ಸಾಧಿಸಹೊರಟ ಮಾನವ ಪ್ರಕೃತಿಯ (ಮನುಷ್ಯನ ವಿಕೃತಿಯ) ವಿಚಿತ್ರ, ವಿಧಿಯ ಆಟದಿಂದ ಕಂಗಾಲಾಗಿದ್ದಾನೆ. ನಿಸರ್ಗದ ಸಮತೋಲನಕ್ಕೆ ಭಂಗ ತಂದ ಪರಿಣಾಮವೋ ಎಂಬಂತೆ ಅಸಹಾಯಕತೆಯ ಹಂತವನ್ನು ತಲುಪಿದ ಭಾವ ತಳೆದಿದ್ದಾನೆ. ಬರಿಗಣ್ಣಿಗೆ ಗೋಚರಿಸದ ವೈರಾಣುಗಳ ಅಟ್ಟಹಾಸದಿಂದ ಅತ್ಯಂತ ಹೈರಾಣಾಗಿದ್ದಾನೆ.
ಹಲವು ವಿಧದ ವೈರಾಣುಗಳು ನಮ್ಮ ನಡುವೆ ಇದ್ದರೂ ಪ್ರಾಣಿಗಳಿಗೆ ಮತ್ತು ಆ ಮೂಲಕ ಮನುಕುಲಕ್ಕೆ ಬಾಧಿಸುವ ವೈರಾಣುಗಳು ಕೇವಲ 7 ವಿಧದವು ಎನ್ನಬಹುದು. ಅದರಲ್ಲೂ ನಮಗೆ ಅಪಾಯವನ್ನು ಮಾಡುವ ಪ್ರಕಾರಗಳು ಆ ಪೈಕಿ 3 ಮಾತ್ರ. ಸಾಮಾನ್ಯ ನೆಗಡಿಯಿಂದ ಎಚ್.ಐ.ವಿ ಸೋಂಕು ಮುಂತಾದವುಗಳ ತನಕ ಜೀವಹಾನಿಯನ್ನೂ ಉಂಟುಮಾಡುವ ಈ ವೈರಾಣುಗಳನ್ನು ನಾಶಪಡಿಸುವುದೇ ಇಂದಿನ ಬಹುದೊಡ್ಡ ಸವಾಲಾಗಿದೆ. ಸಸ್ಯಗಳಿಗೆ ಮತ್ತು ಪ್ರಾಣಿಗಳಿಗೆ ಈ ಸೋಂಕು ಸಾಮಾನ್ಯವಾದರೂ ಕೆಲವೊಂದು ವೈರಾಣುಗಳು ಪ್ರಾಣಿಗಳ ಮುಖಾಂತರ ಮನುಷ್ಯದೇಹವನ್ನು ಪ್ರವೇಶಿಸುತ್ತವೆ. ತಮ್ಮದೇ ಆದ ಜೀವಕೋಶಗಳನ್ನು ಹೊಂದಿರದ ಈ ವೈರಾಣುಗಳು ತಾವು ಸೇರಿಕೊಂಡ ಮನುಷ್ಯ ದೇಹದ ಜೀವಕೋಶಗಳ ಆಶ್ರಯದಿಂದಲೇ ಅಭಿವೃದ್ಧಿಗೊಳ್ಳುತ್ತವೆ. ಅತಿಥೇಯ ಕೋಶಗಳನ್ನೇ ನಾಶಪಡಿಸಿ ರೋಗವನ್ನುಂಟು ಮಾಡುತ್ತವೆ, ಮಾರಣಾಂತಿಕ ಸ್ಥಿತಿಯನ್ನು ತರುತ್ತವೆ.
ಈ ಹಿಂದೆ ಚೀನಾದಲ್ಲಿಯೇ ಪ್ರಾರಂಭವಾದ ಸಾರ್ಸ್ ಹಾಗೂ ಇತರ ದೇಶಗಳಿಂದ ಪ್ರಾರಂಭವಾದ ಮರ್ಸ್, ಎಚ್.ಐ.ವಿ ಮಾದರಿಯಲ್ಲೇ ಕಳೆದ ಕೆಲತಿಂಗಳುಗಳ ಹಿಂದೆ ಚೀನಾದಲ್ಲೇ ಪ್ರಾರಂಭಗೊಂಡ ಕೊವಿಡ್-19 ವೈರಾಣುಗಳು ಸೃಷ್ಟಿಸಿದ ಪಿಡುಗು ಈ ತನಕ ಜಗತ್ತಿನಾದ್ಯಂತ ಬಾಧಿಸಿ, ಜೀವಹಾನಿಗೆ ಕಾರಣವಾಗಿದೆ. ಜೀವಹಾನಿ ಕೇವಲ ಶೇಕಡಾ 2-3 ರಷ್ಟೇ ಆದರೂ (ರೋಗನಿರೋಧಕ ಶಕ್ತಿ ಕುಂದಿದ ವಯೋವೃದ್ಧರು ಇದಕ್ಕೆ ಬಲಿಯಾಗಿದ್ದು ಹೆಚ್ಚು) ಈ ಹಿಂದಿನ ವೈರಾಣುಗಳಿಗಿಂತ ಬಹುಬೇಗ ಪಸರಿಸುತ್ತಲಿವೆ ಎಂಬುದರಲ್ಲಿ ಅನುಮಾನವೇ ಇಲ್ಲ. ಆ ಕಾರಣದಿಂದಲೇ ವಿಶ್ವದ ಮಾರಿಯಾಗಿ ಪರಿಣಮಿಸಿದ್ದು ಜಗತ್ತಿನ ಆರ್ಥಿಕತೆಯನ್ನೇ ಮಕಾಡೆ ಮಲಗಿಸುವ ಸ್ಥಿತಿಯನ್ನು ತಲುಪಿಸಿದೆ. ಪ್ರಧಾನವಾಗಿ, ಚೀನಾ, ಇರಾನ್, ಇಟಲಿ ದೇಶಗಳನ್ನು ಬಾಧಿಸಿದ ಪಿಡುಗು ತನ್ನ ರಕ್ಕಸಬಾಹುಗಳನ್ನು ಎಲ್ಲೆಡೆ ವಿಸ್ತರಿಸುತ್ತಿದೆ, 199 ದೇಶಗಳ ಮೇಲೆ ಪರಿಣಾಮ ಬೀರಿದೆ. ನಿಧಾನವಾಗಿ ಸ್ಮಶಾನ ಮೌನ ಆವರಿಸಲಾರಂಭಿಸಿದೆ. ಒಬ್ಬ ವ್ಯಕ್ತಿಯ ಮೂಲಕವಾಗಿ ಆರಂಭಗೊಂಡ ಈ ಕರೋನಾ ಸಾಂಕ್ರಾಮಿಕ ಪಿಡುಗು ಇಂದು ದೇಶದೆಲ್ಲೆಡೆ ಕಾಡ್ಗಿಚ್ಚಿನಂತೆ ಹರಡಿದೆ, ಕ್ಷಣಕ್ಷಣಕ್ಕೂ ಹರಡುತ್ತಲೇ ಇದೆ.
ಈ ಹಿನ್ನೆಲೆಯಲ್ಲಿ ಸಮಸ್ಯೆಯ ಆರಂಭವನ್ನು ಕಂಡ ಚೀನಾದೇಶವೇ ಇದರ ನಿಯಂತ್ರಣಕ್ಕೂ ದಾರಿಯನ್ನು ಕೂಡ ಕಂಡು ಹಿಡಿದಿದೆ. ಅದನ್ನೇ ಮಾದರಿಯಾಗಿಟ್ಟುಕೊಂಡು ನಾವು ಮುನ್ನಡೆಯಬಹುದಾದರೂ ನಮ್ಮ ಭಾರತೀಯರ ಮಟ್ಟಿಗೆ ಅದು ಸುಲಭಸಾಧ್ಯವೂ ಅಲ್ಲ. ತಮ್ಮ ದೇಶದ ನೀತಿಯನ್ನು ಕಾಲಕಾಲಕ್ಕೆ ಸರಕಾರ ನೀಡುವ ಆದೇಶಗಳನ್ನು ಪ್ರೀತಿಯಿಂದಲೋ ಭೀತಿಯಿಂದಲೋ ಕರಾರುವಾಕ್ಕಾಗಿ ಚೀನಿಯರು ಪಾಲಿಸುತ್ತಾರೆ. ಆದ್ದರಿಂದಲೇ ದಿನದಿಂದ ದಿನಕ್ಕೆ ಅಲ್ಲಿನ ಕರೋನಾ ಸಮಸ್ಯೆ ಸಂಪೂರ್ಣ ನಿಯಂತ್ರಣದತ್ತ ಬರುತ್ತಿದೆ. ಸೋಂಕು ಪೀಡಿತರನ್ನು ಸಾಮಾನ್ಯ ಜನರೊಂದಿಗೆ ಬೇರ್ಪಡಿಸುವ ಅವರ ನೀತಿ ಫಲಿತಾಂಶ ನೀಡುತ್ತಿದೆ.
ಚೀನಾದಲ್ಲಿ ಆಧುನಿಕ ಪದ್ಧತಿಯ ಜೊತೆಗೆ ಗಿಡಮೂಲಿಕೆ ಮತ್ತು ವನಸ್ಪತಿ ಸೇವನೆ ಪರಿಣಾಮಕಾರಿ ಪ್ರಯೋಜನ ನೀಡಿದೆ. ಹುಬೈ ಪ್ರಾಂತ್ಯವನ್ನು ಹೊರತು ಪಡಿಸಿ ಚೀನಾದ ಉಳಿದೆಲ್ಲ ಕಡೆ ವೈಜ್ಞಾನಿಕ ಚಿಕಿತ್ಸೆಯ ಜೊತೆಜೊತೆಗೆ ವನಸ್ಪತಿಜನ್ಯ ಔಷಧ/ಕಷಾಯಗಳನ್ನು ಸೋಂಕಿತರಿಗೆ ನೀಡಿ ಪರಿಣಾಮವನ್ನು ತುಲನಾತ್ಮಕವಾಗಿ ಅಧ್ಯಯನ ಮಾಡಲಾಗಿ ಉಳಿದೆಲ್ಲೆಡೆ ಅತ್ಯುತ್ತಮ ಫಲಿತಾಂಶ ಕಂಡುಬಂತಾದರೂ ನಿಸರ್ಗ ಪದ್ಧತಿರಹಿತವಾದ ಆಧುನಿಕ ವಿಜ್ಞಾನವನ್ನು ಮಾತ್ರವೇ ಅಳವಡಿಸಿದ ಹುಬೈ ಪ್ರಾಂತ್ಯದಲ್ಲಿ ಪಿಡುಗು ಸಮಾಧಾನಕರ ಹಂತದ ನಿಯಂತ್ರಣವನ್ನು ಕಂಡಿಲ್ಲ. ಆದುದರಿಂದ ಚೀನಾ ಸರ್ಕಾರ ಹುಬೈ ಪ್ರಾಂತ್ಯದಲ್ಲಿ ಆಧುನಿಕ ವಿಧಾನಗಳ ಜೊತೆ, ಅಲ್ಲಿರುವ ಗಿಡಮೂಲಿಕೆ ಹಾಗೂ ವನಸ್ಪತಿಗಳನ್ನು ಕೂಡ ಉಪಯೋಗಿಸುವಂತೆ ನಿರ್ದೇಶನ ನೀಡಿದೆ.
ಇದರಿಂದ ನಾವು ಅರ್ಥಮಾಡಿಕೊಳ್ಳಬೇಕಾದುದೇನೆಂದರೆ ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಯನ್ವಯ ರೂಪಿಸಿ ಬಿತ್ತರಿಸಲಾದ ಎಲ್ಲ ಸೂಚನೆಗಳನ್ನು ಕರಾರುವಾಕ್ಕಾಗಿ ಪಾಲಿಸುವುದರ ಜೊತೆಯಲ್ಲಿ ಹೆಚ್ಚಿನ ಪ್ರಯೋಜನವನ್ನು ನೀಡಬಹುದಾದ, ವಿವಿಧ ಅಧ್ಯಯನಗಳಿಂದ ಸಾಬೀತುಗೊಂಡ ಈ ಕೆಳಗಿನ ಸಲಹೆಗಳನ್ನು ಕೂಡ ಜೊತೆಜೊತೆಯಾಗಿ ಪಾಲಿಸಿದರೆ ನಮ್ಮ ದೇಶದಲ್ಲೂ ಸೋಂಕು ಹರಡದಂತೆಯೂ, ಇಷ್ಟರಲ್ಲೇ ಬಾಧಿಸಿರುವವರೂ ಕ್ಷಿಪ್ರ ನಿಯಂತ್ರಣದೊಂದಿಗೆ ಸಂಪೂರ್ಣ ಆರೋಗ್ಯವನ್ನು ಮರಳಿ ಹೊಂದಬಹುದೆನ್ನುವುದು ನಮ್ಮ ದೃಢವಿಶ್ವಾಸ. ವೈದ್ಯಜಗತ್ತಿನಲ್ಲಿಯೇ ಅತ್ಯಂತ ವಿಶ್ವಸನೀಯ, ಪುರಾತನ ಹಾಗೂ ಪ್ರತಿಷ್ಟೆಯ ವೈದ್ಯಕೀಯ ಸಂಶೋಧನಾಧಾರಿತ ನಿಯತಕಾಲಿಕ (ಲಾನ್ಸೆಟ್ ಮತ್ತಿತರ ಜರ್ನಲ್) ಗಳ ಉಲ್ಲೇಖವನ್ನು ಕೂಡ ಕಂಸದಲ್ಲಿ ನೀಡಲಾಗಿದೆ. ಓದುಗರು ಕಂಸದಲ್ಲಿ ನೀಡಿರುವ ಇಂಗ್ಲೀಷ್ ಉಲ್ಲೇಖವನ್ನು ಇಂಟರ್‍ನೆಟ್‍ನಲ್ಲಿ ಹುಡುಕಿದಾಗ ಇದರ ಸಂಪೂರ್ಣ ವೈಜ್ಞಾನಿಕ ಬರಹವನ್ನು ಓದಬಹುದು.
• ಜೇಷ್ಟಮಧು: ಇದರಲ್ಲಿ ವಿಶೇಷವಾಗಿರುವ ಗ್ಲಿಸಿರಿಝಿನ್ ಸಾರಕ್ಕೆ ಈ ಹಿಂದಿನ ಸಾರ್ಸ್ ಪಿಡುಗನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ ಶ್ರೇಯಸ್ಸಿದೆ. ( ದ ಲ್ಯಾನ್ಸೆಟ್ ವಾಲ್ಯುಮ್ 361, ಇಶ್ಯೂ 9374, 14 ಜೂನ್ 2003 ಪುಟ 2045-2046) ಇದರಿಂದಾಗಿ ಈಗ ಬಂದಿರುವ ಕೊವಿಡ್-19 ವೈರಾಣು ನಿರ್ವಹಣೆಯಲ್ಲೂ ಪ್ರಮುಖ ಪಾತ್ರ ವಹಿಸಬಲ್ಲುದು ಎಂದು ಹೇಳಬಹುದು. ಜೇಷ್ಟಮಧು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
• ಕಿರುನೆಲ್ಲಿ/ನೆಲನೆಲ್ಲಿ/ಭೂಮಿ ಅಮಲಕ್ಕಿ: ವೈರಸ್‍ನ್ನು ನಿಸ್ತೇಜಗೊಳಿಸುವಲ್ಲಿ ಪರಿಣಾಮಕಾರಿ. ನೆಲನೆಲ್ಲಿಯ ಸಾರವನ್ನು ಸೇವಿಸಿ ಪ್ರಯೋಜನ ಹೊಂದಬಹುದು. (ಟ್ರೊಪಿಕಲ್ ಜರ್ನಲ್ ಆಫ್ ಫಾರ್ಮಾಸಿಟಿಕಲ್ ರಿಸರ್ಚ್ ವಾಲ್ಯೂಮ್ 16, ನಂ 8, 2017)
• ನೆಲಬೇವು (ಭೂನಿಂಬೆ/ ಕಾಲಮೇಘ) : ಡೆಂಗ್ಯೂ ವೈರಸ್‍ನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಸಾಮಥ್ರ್ಯ ಹೊಂದಿದೆ. (ಜರ್ನಲ್ ಆಫ್ ಎಂಟಿ ವೈರಲ್ ರಿಸರ್ಚ್, ವಾಲ್ಯೂಮ್ 139, ಮಾರ್ಚ 2017, ಪುಟ 69-78) ವೈರಸ್ ಹತೋಟಿಗೆ ಕಾಲಮೇಘ ಸಹಕಾರಿ.
• ದಾಳಿಂಬೆ: ದಾಳಿಂಬೆ ಸಿಪ್ಪೆಯಲ್ಲಿನ ಔಷಧೀಯ ಅಂಶದಿಂದ ಹರ್ಪಿಸ್ (ಸರ್ಪಸುತ್ತಿನ) ವೈರಸ್‍ಗಳನ್ನು ನಾಶಮಾಡಬಹುದು. (ಮೈಕ್ರೋಬಿಯಲ್ ಪ್ಯಾಥೊಜೆನಿಸಿಸ್, ವಾಲ್ಯೂಮ್ 118, ಮೇ 2018, ಪುಟ 301-309). ಅಂತೆಯೇ ಎಲ್ಲ ವೈರಸ್‍ಗಳನ್ನೂ ದಾಳಿಂಬೆ ಸಿಪ್ಪೆಯ ಕಷಾಯ ಸೇವನೆ ನಿಯಂತ್ರಿಸಲು ಸಹಕಾರಿಯಾಗಬಲ್ಲದು.
• ಅಮೃತಬಳ್ಳಿ : ಅಮೃತಬಳ್ಳಿಯು ಹರ್ಪಿಸ್ (ಎಚ್‍ಎಸ್‍ವಿ) ವೈರಸ್‍ನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸುತ್ತದೆ. (ಇಂಟರ್‍ನ್ಯಾಶನಲ್ ಜರ್ನಲ್ ಆಫ್ ಕರೆಂಟ್ ಮೈಕ್ರೋಬಯಾಲಜಿ ಎಂಡ್ ಅಪ್ಲೈಡ್ ಸೈನ್ಸ್‍ಸ್, ಐಎಸ್‍ಎಸ್‍ಎನ್:2319-7706, ವಾಲ್ಯೂಮ್ 7, ನಂ. 01(2018). ಇದರ ಆ್ಯಂಟಿ ವೈರಲ್ ಗುಣಧರ್ಮದಿಂದಾಗಿ ಇದರ ಕಷಾಯ ಬಹುಪಯೋಗಿಯಾಗಿದೆ. ಪ್ರಸಕ್ತ ಸಂದರ್ಭಕ್ಕೂ ಪ್ರಯೋಜನಕಾರಿ.
ಸೂಚನೆ : ಈಗಾಗಲೇ ಸರಕಾರದ ಆರೋಗ್ಯ ಇಲಾಖೆ ಸೂಚಿಸಿದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಪ್ರಾಮಾಣಿಕವಾಗಿಯೂ, ತಪ್ಪದೇ ಅನುಸರಿಸೋಣ. ಸೂಕ್ತ ಜಾಗೃತಿಯೊಂದಿಗೆ ಮೇಲ್ಕಾಣಿಸಿದಂತೆ ಸಾಧ್ಯವಿರುವ ವನಸ್ಪತಿಯನ್ನು ಬಳಸೋಣ. ಶುದ್ಧ ಭಾರತಿಯ ಸಂಪ್ರದಾಯದ ಮಹಿಮೆಯನ್ನು ಅರಿತು ಅಂತೆಯೇ ಬದುಕೋಣ. ಒಟ್ಟಾರೆಯಾಗಿ ನಾವು ಆರೋಗ್ಯವಂತರಾಗಿರುವುದರ ಜೊತೆಗೆ ಎಲ್ಲರ ಆರೋಗ್ಯವರ್ಧನೆಗೂ ಕಾರಣರಾಗೋಣ.