ಕಾಂಡೋಮ್ – ಹಲವು ಕಾಯಿಲೆಗಳನ್ನು ದೂರಮಾಡಲು ಸಹಕಾರಿ

ಕಾಂಡೋಮ್ ಉಪಯೋಗಿಸುವುದು ಹಲವು ಕಾಯಿಲೆಗಳನ್ನು ದೂರಮಾಡಲು ಸಹಕಾರಿಯಾಗುತ್ತದೆ. ಅದರಲ್ಲೂ ಏಡ್ಸ್ನಂತಹ ಭೀಕರ ಕಾಯಿಲೆಯಿಂದ ದೂರವಿರಬಹುದು. ಜೊತೆಗೆ ಗರ್ಭಧಾರಣೆಯನ್ನು ಸಹ ತಡೆಯಬಹುದು.

ಕಾಂಡೋಮ್ - ಹಲವು ಕಾಯಿಲೆಗಳನ್ನು ದೂರಮಾಡಲು ಸಹಕಾರಿ

ಇತ್ತೀಚೆಗೆ ಏಡ್ಸ್ ಕಾಯಿಲೆ ನಮ್ಮ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಲೈಂಗಿಕ ಸಂಬಂಧವನ್ನು ತೊರೆಯುವುದು ಒಂದು ದಾರಿಯಾದರೂ ಅದರಿಂದ ಸಾಮಾನ್ಯರು ದೂರವಿರಲಾರರು. ಅದರಲ್ಲೂ ಪರಸ್ತ್ರೀ ಸಂಗ ಹಲವು ರೀತಿಯ ಅನಾಹುತಗಳಿಗೆ ಕಾರಣಾಗುತ್ತದೆ. ಏನೇ ಅದರೂ ಯಾವುದೇ ಪರಿಸ್ಥಿತಿಯಲ್ಲೂ ಸಹ ಲೈಂಗಿಕವಾಗಿ ಜಾಗರೂಕತೆಯಿಂದ ಇರುವುದು ಜಾಣತನದ ಲಕ್ಷಣ. ಆ ದೃಷ್ಟಿಯಲ್ಲಿ ಕಾಂಡೋಮ್ ಉಪಯೋಗಿಸುವುದು ಹಲವು ಕಾಯಿಲೆಗಳನ್ನು ದೂರಮಾಡಲು ಸಹಕಾರಿಯಾಗುತ್ತದೆ. ಅದರಲ್ಲೂ ಏಡ್ಸ್ನಂತಹ ಭೀಕರ ಕಾಯಿಲೆಯಿಂದ ದೂರವಿರಬಹುದು. ಜೊತೆಗೆ ಗರ್ಭಧಾರಣೆಯನ್ನು ಸಹ ತಡೆಯಬಹುದು.

ಕಾಂಡೋಮ್ ಎಂದರೇನು? 

ಕಾಂಡೋಮ್ ಅಥವಾ ಶಿಶ್ನಚೀಲ ಸಾಮಾನ್ಯವಾಗಿ ತೆಳುವಾದ ರಬ್ಬರ್‍ನಿಂದ ಮಾಡಿದ ಒಂದು ಹೊದಿಕೆ. ಮಾರುಕಟ್ಟೆಯಲ್ಲಿ ಹಲವಾರು ಹೆಸರುಗಳಲ್ಲಿ ಮಾರಲಾಗುತ್ತಿದೆ. ಭಾರತ ಸರ್ಕಾರದಿಂದ ಕಡಿಮೆ ಬೆಲೆಯಲ್ಲಿ ಸಂತಾನ ನಿಯಂತ್ರಣಕ್ಕಾಗಿ ಎಲ್ಲೆಡೆ ದೊರಕುವ “ನಿರೋಧ್ʼʼ ಎಲ್ಲರಿಗೂ ಸುಪರಿಚಿತ. ಅಲ್ಲದೆ ಕಾಮಸೂತ್ರ, ಮೂಡ್ ಮುಂತಾದವು ಲಭ್ಯವಿದೆ. ಏಡ್ಸ್ ಕಾಯಿಲೆಯ ನಿಯಂತ್ರಣಕ್ಕೆ ಇದೊಂದು ಅವಶ್ಯಕ ಸಾಧನವಾಗಿ ಉಪಯೋಗಿಸಲು ಎಲ್ಲರಿಗೂ ಸೂಚಿಸಲಾಗುತ್ತಿದೆ. ಹಾಗೆಯೇ ಹಲವು ರೀತಿಯ ಲೈಂಗಿಕ ಕಾಯಿಲೆಗಳನ್ನು ಇದರಿಂದ ತಡೆಯಲು ಸಾಧ್ಯ. ಆದರೆ ವಿಪರ್ಯಾಸವೆಂದರೆ ಯಾರಿಗೆ ಇದರ ಅತ್ಯವಶ್ಯಕವಿದೆಯೋ ಅವರು ಉಪಯೋಗಿಸದಿರುವುದು.

ಮೊದ ಮೊದಲು ತಯಾರಾಗುತ್ತಿದ್ದ ಕಾಂಡೋಮ್‍ಗಳು ತೆಳುವಾಗಿರಲಿಲ್ಲ. ಆದರೆ ಈಗ ಅತಿ ತೆಳುವಾದ ಮತ್ತು ಅತಿ ಪಾರದರ್ಶಕವಾದ ಕಾಂಡೋಮ್‍ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ರಬ್ಬರ್ ಅಷ್ಟೇ ಅಲ್ಲದೆ ಪಾಲಿಯರೆಥೇನ್ ವಸ್ತುವಿನಿಂದಲೂ ಅತಿ ತೆಳುವಾದ ಕಾಂಡೋಮ್‍ಗಳು ಹೊರದೇಶಗಳಲ್ಲಿ ತಯಾರಾಗುತ್ತಿವೆ. ಅಮೇರಿಕಾದಲ್ಲಿ ಆವಂತಿ ಬ್ರಾಂಡ್‍ಗಳಲ್ಲಿ ದೊರೆಯುತ್ತವೆ ಆದರೆ ಇವು ಅತಿ ದುಬಾರಿಯಾಗಿರುತ್ತವೆ. ಅಲ್ಲದೆ ಸುವಾಸನೆಯಿಂದ ಕೂಡಿದ ಕಾಂಡೋಮ್‍ಗಳೂ ಸಿಗುತ್ತವೆ. ಮತ್ತೆ ವೀರ್ಯಾಣು ಘಾತಕ ಲೇಪನವನ್ನು ಸವರಲಾಗುತ್ತದೆ. ರಬ್ಬರ್ ಅಥವಾ ಲೇಟಿಕ್ಸ್‍ಗೆ ಅಲರ್ಜಿಯಿದ್ದವರಿಗೆ ಇದು ಬಹಳ ಉಪಯೋಗಕಾರಿಯೂ ಹೌದು.

ಕಾಂಡೋಮ್ ಎಲ್ಲರೂ ಬಳಸಬಹುದಾದ ಸುಲಭ ಸಾಧನ. ಇದು ಅತಿ ಕಡಿಮೆ ಬೆಲೆಯ ಸಂತಾನ ನಿಯಂತ್ರಣ ವಿಧಾನವೂ ಹೌದು. ಕೆಲವರಿಗೆ ಇದು ರಬ್ಬರ್ ಅಥವಾ ಲೇಟೆಕ್ಸ್‍ಗೆ ಅಲರ್ಜಿಯಿಂದಾಗಿ ಒಗ್ಗದೇ ಇರಬಹುದು. ಅದನ್ನು ಬಿಟ್ಟರೆ ಬೇರೆ ಯಾವುದೇ ಬಳಕೆಗೆ ಬೇರಾವುದೇ ವೈದ್ಯಕೀಯ ಅಡ್ಡಪರಿಣಾಮಗಳಿರುವುದಿಲ್ಲ. ಸ್ತ್ರೀಯರಲ್ಲೂ ಕೆಲವರು ಯೋನಿಯುರಿತವೆನ್ನಬಹುದಾದರೂ ಅದನ್ನು ಸರಿಯಾಗಿ ಬಳಸಿದರೆ ಆ ಕಷ್ಟ ಇರಲಾರದು. ಕೆ.ವೈ.ಜೆಲ್ ಅಥವಾ ಅಂತಹ ಬೇರಾವುದೇ ಮೆದು ಚಾಲಕವನ್ನು ಬಳಸುವುದರಿಂದ ಯೋನಿಯುರಿತವನ್ನು ಕಡಿಮೆ ಮಾಡಬಹುದು. ಇದರ ಉಪಯೋಗಕ್ಕೆ ವೈದ್ಯಕೀಯ ಪರೀಕ್ಷೆಯ ಅವಶ್ಯಕತೆಯಿಲ್ಲ. ಹಲವು ಕಾಯಿಲೆಗಳನ್ನು ಇದರಿಂದ ತಡೆಯಬಹುದು. ಇದನ್ನು ಉಪಯೋಗಿಸಲು ದಂಪತಿಗಳಿಬ್ಬರೂ ಒಪ್ಪಿಕೊಂಡಿದ್ದರೆ ಮಾತ್ರ ಸಂತೋಷದಿಂದ ಇರಲು ಸಾಧ್ಯ. ಇದನ್ನು ಉಪಯೋಗಿಸುವ ನಮೂನೆಯನ್ನು ಅರಿತಿರಬೇಕು.

ಕಾಂಡೋಮ್ - ಹಲವು ಕಾಯಿಲೆಗಳನ್ನು ದೂರಮಾಡಲು ಸಹಕಾರಿ

ಕಾಂಡೋಮ್ ಅನ್ನು ಉಪಯೋಗಿಸುವ ಬಗೆ ಹೇಗೆ?

ಸಂಭೋಗಕ್ಕೆ ಮೊದಲು ನಿಮಿರಿದ ಶಿಶ್ನವಿನ ಮೇಲೆ ಚೀಲವನ್ನು ಹೊದಿಸಬೇಕು. ನಿರೋಧ್ ಆಗಲಿ ಇಲ್ಲವೇ ಬೇರೆ ಯಾವುದೋ ಕಾಂಡೋಮ್‍ಗಳು ಪೊಟ್ಟಣಗಳಲ್ಲಿ ಸುರುಳಿಯಾಗಿ ಲಭ್ಯ. ಶಿಶ್ನದ ತುದಿಯಲ್ಲಿ ಅದನ್ನಿಟ್ಟು ಸುರುಳಿ ಬಿಚ್ಚುತ್ತಾ ಹೋದರೆ ಅದು ತಂತಾನೆ ಶಿಶ್ನವನ್ನು ಪೂರ್ಣವಾಗಿ ಸುತ್ತುವರಿಯುತ್ತದೆ. ಬಹಳಷ್ಟು ಕಾಂಡೋಮ್‍ಗಳಲ್ಲಿ ತುದಿಯಲ್ಲಿ ತೊಟ್ಟಿರುತ್ತದೆ. ಅದನ್ನು ಒತ್ತಿ ಗಾಳಿಯನ್ನು ಹೊರತೆಗೆಯುವುದು ಅವಶ್ಯಕ. ಅದಿಲ್ಲದಿದ್ದರೂ ತುದಿಯನ್ನು ಒತ್ತಿ ಸ್ವಲ್ಪ ಖಾಲಿ ಜಾಗ ಇರುವಂತೆ ನೋಡಿಕೊಳ್ಳುವುದು ಮುಖ್ಯ.

ತೊಟ್ಟಿನಲ್ಲಿ ಇಲ್ಲವೆ ಬಿಟ್ಟ ಖಾಲಿ ತುದಿಯಲ್ಲಿ ವೀರ್ಯ ಶೇಖರಣೆಯಾಗುತ್ತದೆ. ಇಲ್ಲದಿದ್ದರೆ ಸ್ಥಳದ ಅಭಾವದಿಂದ ವೀರ್ಯ ಲಿಂಗವನ್ನು ಸವರಿ ಮೇಲೆ ಬರುವ ಸಾಧ್ಯತೆ ಜಾಸ್ತಿ. ಗಂಡು ನಿಮಿರಿದ ಶಿಶ್ನಕ್ಕೆ ಕಾಂಡೋಮ್‍ನ್ನು ಯೋನಿಯೊಳಗೆ ಪ್ರವೇಶಿಸುವ ಮೊದಲು ಧರಿಸಬೇಕು. ಸಂಗಾತಿಯೂ ಇದನ್ನು ತೊಡಿಸಲು ಸಹಾಯ ಮಾಡಬಹುದು. ಏನೇ ಆದರೂ ನಿಮಿರಿದ ಶಿಶ್ನದ ಮೇಲೆ ಇದನ್ನು ತೊಡಿಸುವುದು ಮುಖ್ಯ. ಸುನ್ನತಿ ಮಾಡಿದ ಶಿಶ್ನದ ಮೇಲೆ ತೊಡಿಸಲು ಯಾವುದೇ ನಿರ್ಬಂಧವಿಲ್ಲ. ಸುನ್ನತಿಯಿಲ್ಲದಿದ್ದರೆ ಮುಂದೊಗಲನ್ನು ಹಿಂದಕ್ಕೆ ಸರಿಸಿ ತೊಡಿಸುವುದರಿಂದ ಸಂಭೋಗ ಕ್ರಿಯೆ ಸುಲಭವೆನಿಸುತ್ತದೆ. ಒಮ್ಮೆ ಸ್ಖಲಿಸಿದ ನಂತರ ಕಾಂಡೋಮ್ ಅನ್ನು ತಳ ಅಥವಾ ಅಡಿಯಿಂದ ಕೈಯಲ್ಲಿ ಹಿಡಿದುಕೊಂಡು ಶಿಶ್ನವನ್ನು ಯೋನಿಯಿಂದ ಹೊರತೆಗೆಯಬೇಕು.

ಸ್ಖಲಿಸಿದ ನಂತರ ಕಾಂಡೋಮ್ ಧರಿಸಿದ್ದರೆ, ಪುನಃ ನೂಕುವುದರಿಂದ ಇಲ್ಲವೇ ಜಡಿಯುವುದರಿಂದ ವೀರ್ಯ ಯೋನಿಯಲ್ಲಿ ಚೆಲ್ಲುವ ಸಾಧ್ಯತೆಯಿರುತ್ತದೆ. ಅಲ್ಲದೆ ನಿಮಿರುವಿಕೆ ಕಳೆದುಕೊಳ್ಳುವುದರಿಂದ ಕಾಂಡೋಮ್ ಶಿಶ್ನದಿಂದ ತಪ್ಪಿಸಿಕೊಂಡು ಯೋನಿಯಲ್ಲಿಯೇ ಉಳಿಯುವ ಸಾಧ್ಯತೆಯುಂಟು. ಆದುದರಿಂದ ಕೂಡಲೇ ಶಿಶ್ನ ಹಾಗೂ ಕಾಂಡೋಮ್ ಅನ್ನು ಹೊರ ತೆಗೆಯುವುದು ಅವಶ್ಯಕ. ಹೊರತೆಗೆದ ಕಾಂಡೋಮ್ ಅನ್ನು ಸರಿಯಾಗಿ ಎಸೆಯುವುದು ಅಥವಾ ಬಿಸಾಕುವುದು ಮುಖ್ಯ. ಎಸೆಯುವ ಮುನ್ನ ಕಾಂಡೋಮ್ ಹರಿದಿಲ್ಲವೆಂದು ಖಾತ್ರಿ ಮಾಡಿಕೊಳ್ಳುವುದು ಅತಿ ಮುಖ್ಯ.

ಕಾಂಡೋಮ್ ಅನ್ನು ಉಪಯೋಗಿಸದಿರಲು ಕಾರಣಗಳು

ಕಾಂಡೋಮ್ ಬಹಳ ಸುಲಭ ಸಾಧನ ಎಂದು ತಿಳಿದುಕೊಂಡರೂ ಸಹ ಅದನ್ನು ಬಹಳ ಜನರು ಉಪಯೋಗಿಸುವುದಿಲ್ಲ. ಅದಕ್ಕೆ ಹಲವಾರು ಕಾರಣಗಳು ಇವೆ. ಅವುಗಳೆಂದರೆ.
1. ಶಿಶ್ನಚೀಲವಿದ್ದರೆ ಶಿಶ್ನ ಹಾಗೂ ಯೋನಿಯ ನಡುವೆ ಸ್ಪರ್ಶ ಸಂವೇದನೆ ಕಡಿಮೆಯಾಗುತ್ತದೆ. ಹಲವು ಪುರುಷರು ಹಾಗೂ ಇತ್ತೀಚೆಗೆ ಸ್ತ್ರೀಯರು ಈ ಕಾರಣದಿಂದ ಕಾಂಡೋಮ್ ಅನ್ನು ಬಳಸಲು ಹಿಂಜರಿಯುವುದುಂಟು.
2. ಸ್ಖಲಿಸಿದ ನಂತರ ಜಡಿಯುವಿಕೆಯನ್ನು ಪುರುಷ ನಿಲ್ಲಿಸಬೇಕಾಗುತ್ತದೆ. ಇಲ್ಲದಿದ್ದರೆ ಕಾಂಡೋಮ್ ಶಿಶ್ನದಿಂದ ಜಾರಬಹುದಾದ ಸಾಧ್ಯತೆ ಹೆಚ್ಚಾಗಿರುತ್ತದೆ. ಗರ್ಭಧಾರಣೆ ಇಲ್ಲವೇ ಲೈಂಗಿಕ ಕಾಯಿಲೆಗಳು ಇದರಿಂದ ಉಂಟಾಗಬಹುದು.
3. ಹಲವು ಪುರುಷರು ಸಂಭೋಗವನ್ನು ಈ ಕಾರಣಕ್ಕಾಗಿ ನಿಲ್ಲಿಸಲು ಇಷ್ಟಪಡದಿರುವುದು.
4. ಕಾಂಡೋಮ್ ಜಾರಬಹುದೆಂಬ ಭಯ ಲೈಂಗಿಕ ಕ್ರಿಯೆಗೆ ತಡೆಯಾಗಬಹುದು. ಕಾಂಡೋಮ್ ಇದೆಯೆಂಬ ಭಾವನೆ ಲೈಂಗಿಕ ಕ್ರಿಯೆಯಿಂದ ಮನಸ್ಸು ಬೇರೆಡೆಗೆ ತಿರುಗಿಸಲು ಕಾರಣವಾಗಬಹುದು.
5. ಅತಿಯಾದ ಲೈಂಗಿಕ ಒತ್ತಡ, ತೀವ್ರವಾಗಿ ಜಡಿಯುವಿಕೆ, ಕಾಂಡೋಮ್ ಹರಿಯಬಹುದೆಂಬ ಭಯಕ್ಕೆ ಕಾರಣವಾಗಿ ಲೈಂಗಿಕ ಕ್ರಿಯೆಗೆ ತಡೆಯಾಗಬಹುದು.
6. ಕಾಂಡೋಮ್‍ನ ಧಾರಣೆ ಲೈಂಗಿಕತೆಯಲ್ಲಿ ಕೃತಕತೆಗೆ ಕಾರಣವಾಗುತ್ತದೆ ಎಂಬುದು ಹಲವರ ಅಭಿಪ್ರಾಯ.
7. ಹಲವರಲ್ಲಿ ಕಾಂಡೋಮ್‍ನ ಧಾರಣೆ ಕಷ್ಟದ ಕೆಲಸವಾಗಬಹುದು. ಅದರಿಂದ ಆಗುವ ಮುಜುಗರ ಹಾಗೆಯೇ ಲೈಂಗಿಕ ತಡೆಯಿಂದ ತೊಂದರೆಯೆನಿಸುವುದು.
8. ಯಾವಾಗಲೂ, ಎಲ್ಲೆಂದರಲ್ಲಿ ಅದನ್ನು ಶೇಖರಿಸಿಕೊಳ್ಳಬೇಕು ಎಂಬ ಭಾವನೆ.
9. ರಬ್ಬರ್ ಅಥವಾ ಲೇಟೆಕ್ಸ್‍ನಿಂದ ಆಗಬಹುದಾದ ಅಲರ್ಜಿ, ಮೆದುಚಾಲಕ (ಲುಬ್ರಿಕೆಂಟ್ಸ್)ದಿಂದಲೂ ಕೆಲವರಿಗೆ ಅಲರ್ಜಿಯಾಗಬಹುದು. ಅಂತಹ ಕಾಂಡೋಮ್ ಹಾಕಿಕೊಳ್ಳುವುದನ್ನು ತಡೆಯಬೇಕಾಗುತ್ತದೆ.
10. ಕಾಂಡೋಮ್ ಇದ್ದರೆ ಸಂತೋಷಕ್ಕೆ ವಂಚನೆಯಾಗುತ್ತದೆಂಬ ಮನೋಭಾವ.
11. ಧಾರ್ಮಿಕವಾಗಿ ಕಾಂಡೋಮ್ ಧಾರಣೆ ಸ್ಪಷ್ಟ ನಿಯಮಗಳಿಗೆ ವ್ಯತಿರಿಕ್ತವಾಗುತÀ್ತದೆ ಎಂದು ಅದನ್ನು ಉಪಯೋಗಿಸದಿರಬಹುದು.

ಕಾಂಡೋಮ್‍ನಿಂದ ಗರ್ಭಧಾರಣೆಯನ್ನು ತಡೆಯುವ ಶಕ್ತಿ ಎಷ್ಟು?

ಕಾಂಡೋಮ್ ಅನ್ನು ಸರಿಯಾಗಿ ಉಪಯೋಗಿಸಿದರೆ ನೂರರಲ್ಲಿ ಶೇ. 97 ರಷ್ಟು ಗರ್ಭಧಾರಣೆಯನ್ನು ತಡೆಗಟ್ಟಬಹುದು. ಇತರ ಗರ್ಭನಿರೋಧಕಗಳಂತೆಯೇ ಇದು ಸಹ ಉಪಯೋಗಿ. ಇದರ ಜೊತೆಗೆ ವೀರ್ಯಾಣು ಘಾತಕ ನೊರೆ ಅಥವಾ ಜೆಲ್ಲಿಯ ಉಪಯೋಗದಿಂದ ಶೇಕಡ 97-98 ಭಾಗ ನಿಯಂತ್ರಣವನ್ನು ಸಾಧಿಸಬಹುದು.

ಕಾಂಡೋಮ್‍ಗೆ ಮೆದು ಚಾಲಕ(ಲುಬ್ರಿಕೆಂಟ್ಸ್) ಅವಶ್ಯಕತೆ

ಕಾಂಡೋಮ್ ಮೇಲೆ ಮೆದುಚಾಲಕವನ್ನು ಉಪಯೋಗಿಸುವುದರಿಂದ ಕಾಂಡೋಮ್ ಸುಲಭವಾಗಿ ಹರಿಯುವುದಿಲ್ಲ. ಹಾಗೆಯೇ ಯೋನಿಯ ಉರಿಯೂ ಸ್ತ್ರೀಗೆ ಆಗುವುದು ಬಹಳ ಕಡಿಮೆ. ಉಚಿತವಾಗಿ ಸಿಗುವ ನಿರೋಧ್‍ಗೆ ಮೆದುಚಾಲಕವನ್ನು ಲೇಪಿಸಿರುವುದಿಲ್ಲ. ಇಂತಹ ನಿರೋಧ್‍ಗೆ ನೀವೇ ಸ್ವತಃ ಮೆದುಚಾಲಕವನ್ನು ಹಚ್ಚಿಕೊಳ್ಳಬೇಕು. ಕಾಂಡೋಮ್ ಅನ್ನು ಧರಿಸಿದ ನಂತರ ನೀರಲ್ಲಿ ಕರಗುವ ಮೆದುಚಾಲಕವನ್ನು (ಉದಾ: ಕೆ.ವೈ. ಜೆಲ್ ಅನ್ನು ನಿಧಾನವಾಗಿ ಸವರಿ. ಇಲ್ಲವೇ ಬೆರಳಿನಿಂದ ಯೋನಿ, ಯೋನಿದ್ವಾರಕ್ಕೆ ಕೆ.ವೈ.ಜೆಲ್ ಹಚ್ಚಿರಿ. ಆದರೆ ಸಾಮಾನ್ಯವಾಗಿ ಲೂಬ್ರಿಕೇಂಟೆಡ್ ನಿರೋಧ್ (ಡಿಲಕ್ಸ್ ನಿರೋಧ್) ಇಲ್ಲವೇ ಇತರೇ ಕಾಂಡೋಮ್‍ಗಳು ಮೆದುಚಾಲಕದೊಂದಿಗೆ ನೇರವಾಗಿ ಲಭ್ಯ. ಮತ್ತೆ ಹಚ್ಚುವ ಕೆಲಸ ಇರುವುದಿಲ್ಲ. ಅಲ್ಲದೆ ಸ್ತ್ರೀಯರ ಗರ್ಭ ನಿರೋಧಕ ನೊರೆ, ಜೆಲ್ಲಿಗಳೂ ಸಹ ಮೆದುಚಾಲಕದಂತೆ ಕಾರ್ಯನಿರ್ವಹಿಸುತ್ತವೆ.

ಕಾಂಡೋಮ್ - ಹಲವು ಕಾಯಿಲೆಗಳನ್ನು ದೂರಮಾಡಲು ಸಹಕಾರಿ

ಕಾಂಡೋಮ್‍ಗಳ ಅಳತೆ ಮತ್ತು ಗಾತ್ರಗಳು

ಬಹುತೇಕ ಕಾಂಡೋಮ್‍ಗಳಲ್ಲಿ ಒಂದೇ ಅಳತೆಯಿರುತ್ತದೆ. ಶಿಶ್ನ ಗಾತ್ರದಲ್ಲಿ ಹಲವು ವ್ಯತ್ಯಾಸಗಳಿದ್ದರೂ, ರಬ್ಬರ್ ಸುಲಭವಾಗಿ ಗಾತ್ರಕ್ಕೆ ಹೊಂದಿಕೊಳ್ಳುವುದರಿಂದ ಯಾವುದೇ ಕಾಂಡೋಮ್ ಯಾವುದೇ ಶಿಶ್ನಕ್ಕೂ ಸರಿಹೊಂದಬಲ್ಲುದು. ಕಾಮಸೂತ್ರ ಹಾಗೂ ಮೊದಲಾದ ಕಾಂಡೋಮ್‍ಗಳು ಹಲವು ರೂಪರೇಷೆಗಳಲ್ಲಿ, ಬಣ್ಣಗಳಲ್ಲಿ, ಸುವಾಸನೆಗಳಲ್ಲಿ ಲಭ್ಯವಿದೆ. ಗೀರಿರುವುದು, ನಯವಾಗಿ, ಒರಟಾಗಿ ಹೀಗೆ ಹಲವು ರೀತಿಯಲ್ಲಿ ದೊರೆಯುತ್ತದೆ. ಅವುಗಳಿಂದ ಕೆಲವರಿಗೆ ಖುಷಿಯೆನಿಸಬಹುದು. ಅದು ಅವರವರ ಮನಸ್ಸಿಗೆ ಸಂಬಂಧಿಸಿದ್ದು, ಹೊಸದನ್ನು ಉಪಯೋಗಿಸುತ್ತಿರುವ ಭಾವನೆಯೇ ಮನಸ್ಸಿಗೆ ಅತಿಯಾದ ಸಂತೋಷವನ್ನು ನೀಡುತ್ತವೆ. ಇತರೆ ಸಂಭೋಗ ಕ್ರಿಯೆಗಳಲ್ಲಿ ಕಾಂಡೋಮ್‍ಗಳ ಉಪಯೋಗ: ಶಿಶ್ನವನ್ನು ಬಾಯಿಯಿಂದ ಚೀಪುವಾಗಲೂ ಕಾಂಡೋಮ್ ಉಪಯೋಗಿಸಬಹುದು. ಇದಕ್ಕೆಂದೇ ಬೇರೆ ಬೇರೆ ರೀತಿಯ ಸುವಾಸನೆಭರಿತ, ರುಚಿಕರವಾದ ಲೇಪನಗಳನ್ನು ಮಾಡಿರುವ ಕಾಂಡೋಮ್‍ಗಳು ಸಿಗುತ್ತವೆ. ಗುದ ಸಂಭೋಗದಲ್ಲೂ ಕಾಂಡೋಮ್‍ಗಳನ್ನು ಉಪಯೋಗಿಸಬಹುದು. ಇವುಗಳಿಂದ ಏಡ್ಸ್, ಲೈಂಗಿಕ ರೋಗಗಳು ಹಬ್ಬದಂತೆ ತಡೆಗಟ್ಟಬಹುದು.

ಸ್ತ್ರೀಯರ ಕಾಂಡೋಮ್‍ಗಳು

ಕಾಂಡೋಮ್ ಎಂದಾಕ್ಷಣ ಮನಸ್ಸಿಗೆ ಬರುವುದು ಪುರುಷರಿಗೆ ಮಾತ್ರವಷ್ಟೆ ಎಂದು. ಪುರುಷರಿಗೆ ಮಾತ್ರವಲ್ಲದೆ ಸ್ತ್ರೀಯರಿಗೂ ಕಾಂಡೋಮ್‍ಗಳು ಲಭ್ಯವಿದೆ. ಆದರೆ ಅವು ಎಲ್ಲಾ ಕಡೆಯಲ್ಲೂ ಲಭ್ಯವಿರುವುದಿಲ್ಲ. ಏಕೆಂದರೆ ಸ್ತ್ರೀಯರ ಕಾಂಡೋಮ್‍ಗಳ ಬಗ್ಗೆ ಹೆಚ್ಚಿನ ವಿದ್ಯಾವಂತರಲ್ಲಿ ಮಾತ್ರ ಉಪಯೋಗವಿದೆ. ಎಲ್ಲರಿಗೂ ಇದರ ತಿಳಿವಳಿಕೆ ಇರುವುದಿಲ್ಲ. ಕಾಂಡೋಮ್‍ನಲ್ಲಿ ಶೇಖರಿಸಿದ ವೀರ್ಯವನ್ನು ಉಪಯೋಗಿಸುವುದರಿಂದ ಸ್ತ್ರೀಗೆ ಗರ್ಭಧಾರಣೆಯ ಸಾಧ್ಯತೆ ಕಡಿಮೆ. ಹಲವು ಕಾಂಡೋಮ್‍ಗಳಲ್ಲಿ ವೀರ್ಯಾಣುಗಳು ಉಳಿಯದಂತೆ ಮಾಡಬಲ್ಲ ಔಷಧಿಗಳನ್ನು ಉಪಯೋಗಿಸಿರುತ್ತಾರೆ. ಆದುದರಿಂದ ಅಂತಹ ವೀರ್ಯವನ್ನು ಯೋನಿಯಲ್ಲಿ ಹಾಕಿಕೊಳ್ಳುವುದರಿಂದ ಫಲವಂತಿಕೆ ಸಾಧ್ಯತೆ ಅತ್ಯಂತ ಕಡಿಮೆ ಇರುತ್ತದೆ. ಅಲ್ಲದೆ ರಬ್ಬರ್ ವೀರ್ಯ ಶೇಖರಣೆಗೆ ಯೋಗ್ಯವಾಗಿರುವುದಿಲ್ಲ. ಆದುದರಿಂದ ಸ್ತ್ರೀ ಗರ್ಭಿಣಿಯಾಗುತ್ತಾಳೆ ಎಂಬುದನ್ನು ಖಚಿತವಾಗಿ ಹೇಳಲಾಗುವುದಿಲ್ಲ.

ಡಾ|| ಸಿ. ಶರತ್ ಕುಮಾರ್
ನಿರ್ದೇಶಕರು ಮತ್ತು ಖ್ಯಾತ ಗರ್ಭಧಾರಣಾ ತಜ್ಞವೈದ್ಯರು, ಮೆಡಿವೇವ್ ಗರ್ಭಧಾರಣಾ ಮತ್ತು ಸಂಶೋಧನಾ ಆಸ್ಪತ್ರೆ,
ಸಿಟಿ ಎಕ್ಸ್-ರೇ ಕಾಂಪ್ಲೆಕ್ಸ್, ಸಯ್ಯಾಜಿ ರಾವ್ ರಸ್ತೆ, ಮೈಸೂರು-570 001
ದೂ. 0821-2444441, 4255019 www.mediwave.net

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!