ಕೆಮಿಕಲ್ ಐ ಬರ್ನ್: ನೀವೇನು ಮಾಡಬೇಕು?

ಕೆಮಿಕಲ್ ಐ ಬರ್ನ್ ಅಂದರೆ ರಾಸಾಯನಿಕ ವಸ್ತುಗಳಿಂದ ಉಂಟಾಗುವ ಗಾಯ.ರಾಸಾಯನಿಕ ಸುಟ್ಟ ಗಾಯಗಳನ್ನು ಗಂಭೀರವಾಗಿ ಪರಿಗಣಿಸಬೇಕು. ರಾಸಾಯನಿಕಗಳಿಂದ ಕಣ್ಣಿಗೆ ಶಾಶ್ವತ ಹಾನಿಯಾಗಬಹುದು ಹಾಗೂ ಇದರಿಂದ ಜೀವಕ್ಕೆ ಸಂಚಕಾರ ಬರಬಹುದು.

ಕೆಮಿಕಲ್ ಐ ಬರ್ನ್: ನೀವೇನು ಮಾಡಬೇಕು?ಕಣ್ಣು ಅಥವಾ ಕಣ್ಣು ಗುಡ್ಡೆಯ ಯಾವುದೇ ಭಾಗಕ್ಕೆ ರಾಸಾಯನಿಕ ವಸ್ತುಗಳಿಂದ ಉಂಟಾಗುವ ಗಾಯವೇ ಕೆಮಿಕಲ್ ಐ ಬರ್ನ್. ಕಣ್ಣಿಗೆ ಉಂಟಾಗುವ ಗಾಯಗಳಲ್ಲಿ ಶೇಕಡ 7 ರಿಂದ 10ರಷ್ಟು ರಾಸಾಯನಿಕಗಳಿಂದ ಸಂಭವಿಸಿರುತ್ತದೆ. ಮುಖಕ್ಕೆ ಉಂಟಾಗುವ ಶೇಕಡ 15ರಿಂದ 20ರಷ್ಟು ಸುಟ್ಟ ಗಾಯಗಳಲ್ಲಿ ಕನಿಷ್ಠ ಒಂದು ಕಣ್ಣಿಗೆ ಗಾಯವಾಗಿರುತ್ತದೆ. ಅನೇಕ ಸುಟ್ಟ ಗಾಯಗಳು ಸಣ್ಣ ಪ್ರಮಾಣದ ಹಾನಿಗೆ ಕಾರಣವಾದರೂ, ಪ್ರತಿ ರಾಸಾಯನಿಕ ವಸ್ತುಗಳಿಂದ ಆಗುವ ಹಾನಿ ಅಥವಾ ರಾಸಾಯನಿಕ ಸುಟ್ಟ ಗಾಯಗಳನ್ನು ಗಂಭೀರವಾಗಿ ಪರಿಗಣಿಸಬೇಕು. ರಾಸಾಯನಿಕಗಳಿಂದ ಕಣ್ಣಿಗೆ ಶಾಶ್ವತ ಹಾನಿಯಾಗಬಹುದು ಹಾಗೂ ಇದರಿಂದ ಜೀವಕ್ಕೆ ಸಂಚಕಾರ ಬರಬಹುದು.

ಸುಟ್ಟಗಾಯದ ತೀವ್ರತೆಯು ಯಾವ ರಾಸಾಯನಿಕ ವಸ್ತುವಿನಿಂದ ಉಂಟಾಗಿದೆ ಮತ್ತು ಆ ರಾಸಾಯನಿಕ ಕಣ್ಣಿನೊಂದಿಗೆ ಎಷ್ಟು ಸಮಯ ಸಂಪರ್ಕದಲ್ಲಿರುತ್ತದೆ ಎಂಬುದರ ಮೇಲೆ ಅದು ಅವಲಂಬಿತವಾಗಿದೆ. ಸಾಮಾನ್ಯವಾಗಿ ರಾಸಾಯನಿಕ ಸುಟ್ಟ ಗಾಯಗಳು ಕೆಲಸ ಮಾಡುವ ಸ್ಥಳದಲ್ಲಿ ಸಂಭವಿಸುತ್ತದೆ. ಕೈಗಾರಿಕೆಗಳು ಪ್ರತಿದಿನ ವಿವಿಧ ರಾಸಾಯನಿಕಗಳನ್ನು ಉಪಯೋಗಿಸುತ್ತವೆ. ಆದಾಗ್ಯೂ, ಮನೆ ಬಳಕೆಯ ರಾಸಾಯನಿಕಗಳೂ ಕೂಡ ಅಷ್ಟೇ ಅಪಾಯಕಾರಿ. ಆದ್ದರಿಂದ ಮುನ್ನೆಚ್ಚರಿಕೆಯ ಸೂಕ್ತ ಚಿಕಿತ್ಸೆ ನೀಡಬೇಕು. ಕಣ್ಣಿಗೆ ಅಪಾಯ ತಂದೊಡ್ಡುವ ರಾಸಾಯನಿಕವನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಬಹುದು.

ಕ್ಷಾರ ಸುಟ್ಟಗಾಯ, ಆಮ್ಲ ಸುಟ್ಟಗಾಯ ಮತ್ತು ನೇತ್ರ ಉರಿಯುವಿಕೆ

ಆಮ್ಲತೆ ನಿವಾರಿಸುವ ಕ್ಷಾರ ರಾಸಾಯನಿಕಗಳು ತುಂಬಾ ಅಪಾಯಕಾರಿ. ಇದು ಕಣ್ಣಿನ ಮೇಲ್ಮೈ ಮೂಲಕ ಒಳಪ್ರವೇಶಿಸಿ ತೀವ್ರ ಹಾನಿ ಉಂಟು ಮಾಡುತ್ತದೆ. ಕ್ಷಾರದ ಪ್ರಮಾಣ ಹೆಚ್ಚಾದಷ್ಟು ಹಾನಿಯು ಅಧಿಕವಾಗಿರುತ್ತದೆ. ಸಾಮಾನ್ಯ ಕ್ಷಾರ ರಾಸಾಯನಿಕಗಳು, ಅಮೋನಿಯ, ಪೋಟಾಷಿಯಂ, ಸೋಡಿಯಂ, ಕ್ಯಾಲ್ಸಿಯಂ ಮತ್ತು ಮೆಗ್ನಿಸಿಯಂ ಹೈಡ್ರಾಕ್ಸೈಡ್‍ಗಳನ್ನು ಒಳಗೊಂಡಿರುತ್ತದೆ. ಸಿಮೆಂಟ್, ಸುಣ್ಣದ ಕಲ್ಲು, ಸುಣ್ಣ ಮತ್ತು ಅಮೋನಿಯಾ ಸೇರಿದಂತೆ ಇಂಥ ರಾಸಾಯನಿಕಗಳು ನಿಮ್ಮ ಮನೆಯಲ್ಲೂ ಕಂಡುಬರುತ್ತದೆ.ಕಡಿಮೆ ಅಪಾಯಕಾರಿಯ ಆಮ್ಲ ಸುಟ್ಟ ಗಾಯಗಳು ಕ್ಷಾರ ಸುಟ್ಟಗಾಯಗಳಿಗಿಂತ ಕಡಿಮೆ ತೀವ್ರತೆ ಹೊಂದಿರುತ್ತವೆ. ಆದರೆ ಹೈಡ್ರೋಫ್ಲೋರಿಕ್ ಆಸಿಡ್‍ನಿಂದ ಆದ ಸುಟ್ಟಗಾಯವು, ಕ್ಷಾರದಷ್ಟೇ ಅಪಾಯಕಾರಿ. ಆಮ್ಲಗಳಿಂದಾಗಿ ಸಾಮಾನ್ಯವಾಗಿ ಕಣ್ಣಿನ ಮುಂಭಾಗಕ್ಕೆ ತುಂಬಾ ಅಪಾಯವಾಗುತ್ತದೆ.

ಸಲ್ಫ್ಯೂರಿಕ್ ಆಮ್ಲ, ಸಲ್ಫ್ಯೂರಸ್ ಆಮ್ಲ, ಹೈಡ್ರೋಕ್ಲೋರಿಕ್ ಆಸಿಡ್, ನೈಟ್ರಿಕ್ ಆಸಿಡ್, ಆಸಿಟಿಕ್ ಆಸಿಡ್, ಕ್ರೊಮಿಕ್ ಆಸಿಡ್ ಮತ್ತು ಹೈಡ್ರೋಫ್ಲೋರಿಕ್ ಆಸಿಡ್ ಸೇರಿದಂತೆ ಆನೇಕ ಸಾಮಾನ್ಯ ಆಮ್ಲಗಳಿಂದ ಕಣ್ಣಿಗೆ ಸುಟ್ಟಗಾಯವಾಗುತ್ತದೆ. ಆಟೋಮೊಬೈಲ್ ಬ್ಯಾಟರಿ ಸ್ಫೋಟಗೊಂಡಾಗ ಅದರಲ್ಲಿನ ಸಲ್ಫ್ಯೂರಿಕ್ ಆಸಿಡ್‍ನಿಂದ ಕಣ್ಣಿಗೆ ಸುಟ್ಟ ಗಾಯವಾಗಬಹುದು. ಇದು ಕಣ್ಣಿಗೆ ಅಪಾಯ ತಂದೊಡ್ಡುವ ತೀರಾ ಸಾಮಾನ್ಯ ಆಸಿಡ್ ಬರ್ನ್‍ಗಳಲ್ಲಿ ಒಂದು. ಮನೆಯಲ್ಲಿ ಬಳಸುವ ಡಿಟರ್ಜೆಂಟ್‍ಗಳು, ಮೆಣಸಿನ ಪುಡಿ ಕೂಡ ಕಣ್ಣುಗಳಿಗೆ ತೀವ್ರ ತೊಂದರೆ ಆಗದಂಥ ರೀತಿಯಲ್ಲಿ ಅನಾನುಕೂಲ ಉಂಟು ಮಾಡುತ್ತದೆ. ಮೆಣಸಿನ ಪುಡಿ ಅಥವಾ ಖಾರದ ಪುಡಿಯಿಂದ ಕಣ್ಣುಗಳಿಗೆ ಕಿರಿಕಿರಿಯಾಗುತ್ತದೆ. ಇವುಗಳಿಂದ ಗಮನಾರ್ಹ ಉರಿ-ನೋವು ಉಂಟಾದರೂ, ದೃಷ್ಟಿಗೆ ತೊಂದರೆಯಾಗುವುದಿಲ್ಲ. ಕಣ್ಣುಗಳಿಗೆ ಇದರಿಂದ ಹಾನಿಯುಂಟಾಗುವುದು ತೀರಾ ವಿರಳ.

ನಿಮ್ಮ ಕಣ್ಣಿನ ಮೇಲೆ ರಾಸಾಯನಿಕ ಬಿದ್ದರೆ ನೀವೇನು ಮಾಡಬೇಕು?

Chemical-Eye-Burnsಕಣ್ಣುಗಳಿಗೆ ಸುಟ್ಟಗಾಯವಾದಾಗ ಕಂಡುಬರುವ ಚಿಹ್ನೆ ಮತ್ತು ಲಕ್ಷಣಗಳು ಹೀಗಿರುತ್ತವೆ : ನೋವು, ಉರಿ, ಕಣ್ಣುಗಳು ಕೆಂಪಾಗುವಿಕೆ, ಕಿರಿಕಿರಿ, ಕಣ್ಣೀರು, ಕಣ್ಣುಗಳು ತೆರೆಯಲು ಆಗದಿರುವಿಕೆ, ಕಣ್ಣಿನಲ್ಲಿ ಒಂದು ರೀತಿಯ ಸಂವೇದನೆ, ಕಣ್ಣುಗುಡ್ಡೆಗಳ ಊತ, ನೋವು, ಉರಿ ಮತ್ತು ಕಣ್ಣೀರಿನಿಂದ ಸಾಮಾನ್ಯವಾಗಿ ದೃಷ್ಟಿ ಮಾಂದ್ಯತೆ ಕಂಡುಬರುತ್ತದೆ.

1. ನಿಮ್ಮ ಕಣ್ಣುಗಳು ರಾಸಾಯನಿಕ ವಸ್ತುವಿನೊಂದಿಗೆ ಸಂಪರ್ಕಕ್ಕೆ ಬಂದರೆ, ತಕ್ಷಣ ಕಣ್ಣುಗಳನ್ನು ತೊಳೆಯಬೇಕು. ಯಾವುದೇ ಕ್ರಮ ಕೈಗೊಳ್ಳುವುದಕ್ಕೂ ಮೊದಲು ಸತತವಾಗಿ ಕನಿಷ್ಠ 10 ನಿಮಿಷಗಳ ಕಾಲ ನಿಮ್ಮ ಕಣ್ಣನ್ನು ತೊಳೆಯುತ್ತಲೇ ಇರಬೇಕು. ರಾಸಾಯನಿಕ ನಿಮ್ಮ ಕಣ್ಣಿನಲ್ಲಿ ಇರುವಷ್ಟು ಕಾಲ ಅದು ಅಧಿಕ ಪ್ರಮಾಣದಲ್ಲಿ ಹಾನಿಯುಂಟು ಮಾಡುತ್ತದೆ ಎಂಬುದನ್ನು ಮರೆಯಬೇಡಿ. ರಾಸಾಯನಿಕವನ್ನು ತಿಳಿಗೊಳಿಸುವುದು ತುಂಬಾ ಮುಖ್ಯ ಮತ್ತು ಯಾವುದೇ ರಾಸಾಯನಿಕ ಕಣ್ಣುಗಳಿಂದ ಹೊರಹೋಗುವಂತೆ ಮಾಡಬೇಕಾಗುತ್ತದೆ.

2. ನೀವು ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಕಣ್ಣುಗಳಿಗೆ ರಾಸಾಯನಿಕದಿಂದ ಹಾನಿಯಾದರೆ ನಿಮ್ಮನ್ನು ತುರ್ತು ನೇತ್ರ ಸ್ವಚ್ಚತೆ ಅಥವಾ ಶವರ್ ಸ್ಟೇಷನ್‍ನಲ್ಲಿ ಇರಿಸಿ ಐಸೋಟಾನಿಕ್ ಸೆಲೈನ್ ದ್ರಾವಣದಿಂದ ಕಣ್ಣುಗಳನ್ನು ತೊಳೆಯಲಾಗುತ್ತದೆ. ಈ ದ್ರಾವಣ ಲಭ್ಯವಿಲ್ಲದಿದ್ದರೆ, ಶುದ್ಧವಾದ ತಣ್ಣೀರನ್ನು ಬಳಸಬಹುದು. ನೀವು ಮನೆಯಲ್ಲಿದ್ದರೆ, ನಿಮ್ಮ ಕಣ್ಣುಗಳನ್ನು ತೊಳೆದುಕೊಳ್ಳಲು ಸ್ನಾನ ಗೃಹಕ್ಕೆ ತಕ್ಷಣ ತೆರಳಬೇಕು.

3. ನಿಮ್ಮ ಕಾರಿನ ಬ್ಯಾಟರಿ ಸ್ಫೋಟಗೊಂಡರೆ, ಆಮ್ಲವನ್ನು ತಿಳಿಗೊಳಿಸಲು ಮತ್ತು ಆಮ್ಲವನ್ನು ಕಣ್ಣಿನಿಂದ ಹೋಗಲಾಡಿಸಲು ಕೈಗೆ ಸಿಗುವ ಯಾವುದೇ ಕುಡಿಯುವ ದ್ರವವನ್ನು ನಿಮ್ಮ ಕಣ್ಣಿಗೆ ಹಾಕಬೇಕು. ನೀರು ಬಳಕೆಗೆ ಉತ್ತಮ. ನಿಮ್ಮ ಕಣ್ಣುಗುಡ್ಡೆಗಳನ್ನು ಸಾಧ್ಯವಾದಷ್ಟೂ ತೆರೆದರೆ ತೊಳೆಯುವುದು ಸುಲಭ.

4. ಕ್ಷಾರ, ಪ್ರತ್ಯಾಮ್ಲ ಅಥವಾ ಹೈಡ್ರೋಪ್ಲೊರಿಕ್ ಆಸಿಡ್‍ನಿಂದ ಕಣ್ಣುಗಳಿಗೆ ಸುಟ್ಟಗಾಯಗಳಾದರೆ, ವೈದ್ಯರು ಆಗಮಿಸುವವರೆಗೆ ಅಥವಾ ನಿಮ್ಮನ್ನು ಆಸ್ಪತ್ರೆಯ ತುರ್ತು ನೇತ್ರ ಚಿಕಿತ್ಸಾ ಘಟಕಕ್ಕೆ ಕೊಂಡೊಯ್ಯುವ ತನ ಕಣ್ಣುಗಳನ್ನು ನೀರಿನಿಂದ ತೊಳೆಯುತ್ತಲೇ ಇರಬೇಕು.

5. ರಾಸಾಯನಿಕ ಲಘು ಸ್ವರೂಪದ್ದು ಎಂದು ನೀವು ಭಾವಿಸಿದರೂ, ನೋವು, ಉರಿ, ಕಣ್ಣೀರು, ಕಣ್ಣು ಕೆಂಪಾಗುವಿಕೆ, ಕಿರಿಕಿರಿ ಅನುಭವ ಅಥವಾ ದೃಷ್ಟಿ ನಷ್ಟದ ಅನುಭವವಾದರೆ, ತಕ್ಷಣ ನೇತ್ರ ಮೌಲ್ಯಮಾಪನಕ್ಕಾಗಿ ಆಸ್ಪತ್ರೆಯ ತುರ್ತು ವಿಭಾಗಕ್ಕೆ ತೆರಳಬೇಕು.

6. ಎಲ್ಲ ರೀತಿಯ ಆಮ್ಲ ಅಥವಾ ಕ್ಷಾರದಿಂದ ಉಂಟಾಗುವ ಕಣ್ಣಿನ ಸುಟ್ಟಗಾಯಗಳಿಗೆ ತಕ್ಷಣ ಚಿಕಿತ್ಸೆ ಮತ್ತು ನೇತ್ರ ತಜ್ಞರಿಂದ ಮೌಲ್ಯಮಾಪನ ಅಗತ್ಯ. ಈ ಸಂದರ್ಭದಲ್ಲಿ ನಿಮ್ಮನ್ನು ಹತ್ತಿರದ ತುರ್ತು ಸೇವಾ ವಿಭಾಗಕ್ಕೆ ಕರೆದೊಯ್ಯಬೇಕು.

7. ನಿಮಗೆ ಕ್ಷಾರ ಅಥವಾ ಹೈಡ್ರೋಪ್ಲೋರಿಕ್ ಆಸಿಡ್‍ನಿಂದ ಸುಟ್ಟಗಾಯಗಳಾಗಿದ್ದರೆ, ಪ್ರಯಾಣ ಸಮಯವನ್ನು ಕಡಿಮೆ ಮಾಡಲು ಆಂಬ್ಯುಲೆನ್ಸ್‍ಗೆ ಕರೆ ನೀಡಬೇಕು. ಎಲ್ಲ ಕಾರ್ಖಾನೆಗಳು, ತಾನು ಬಳಸುವ ಯಾವುಧೆ ರಾಸಾಯನಿಕ ಸಾಮಗ್ರಿ ಸುರಕ್ಷತೆ ಹಾಳೆ (ಮೆಟಿರಿಯಲ್ ಸೆಫ್ಟಿ ಡಾಟಾ ಶೀಟ್-ಎಂಎಸ್ ಡಿಎಸ್) ಹೊಂದಿರಬೇಕು. ಈ ಮಾಹಿತಿಗೆ ಅನುಗುಣವಾಗಿ ಮುಂದಿನ ಚಿಕಿತ್ಸೆ ನೀಡಬಹುದು.

ನೇತ್ರ ರಕ್ಷಣೆ ಸಾಧನಗಳನ್ನು ಬಳಸಬೇಕು:

ನಿರ್ಮಾಣ ಚಟುವಟಿಕೆಗಳು ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಕಣ್ಣುಗಳಿಗೆ ಗಾಯಗಳಾಗುವುದು ಸಾಮಾನ್ಯ. ಈ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಸೂಕ್ತ ಸುರಕ್ಷತಾ ರಕ್ಷಣೆಯ ಬಳಕೆಯಿಂದ ಇಂತಹ ಅನೇಕ ಗಾಯಗಳನ್ನು ತಡೆಗಟ್ಟಬಹುದು. ಮನೆಯಲ್ಲಾಗಲಿ ಅಥವಾ ಕೆಲಸ ಮಾಡುವ ಸ್ಥಳದಲ್ಲಾಗಲಿ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿರುವ ಪ್ರತಿಯೊಬ್ಬರೂ ಎಲ್ಲ ಸಮಯದಲ್ಲಿ ನೇತ್ರ ರಕ್ಷಣೆ ಸಾಧನಗಳನ್ನು ಬಳಸಬೇಕು. ಕ್ರೀಡಾ ಚಟುವಟಿಕೆಗಳ ವೇಳೆಯಲ್ಲಿ ಹಲವರ ಕಣ್ಣುಗಳಿಗೆ ಪೆಟ್ಟು ಬೀಳುವ ಪ್ರಕರಣಗಳು ಸಂಭವಿಸುತ್ತಲೇ ಇರುತ್ತವೆ. ಅನೇಕ ಮಕ್ಕಳು ಆಟವಾಡುವಾಗ ಕಣ್ಣಿಗೆ ಗಾಯ ಮಾಡಿಕೊಳ್ಳುವುದು ಸಾಮಾನ್ಯ ಸಂಗತಿ. ಆದ್ದರಿಂದ ಇಂಥ ಚಟುವಟಿಕೆಗಳಲ್ಲಿ ತೊಡಗುವಾಗ ನೇತ್ರ ರಕ್ಷಣಾ ಸಾಧನಗಳನ್ನು ತಪ್ಪದೇ ಬಳಸಬೇಕು.

ಯಾವುದೇ ರೀತಿಯ ಗಾಯಗಳಿಗೆ ನೇತ್ರ ತಜ್ಞರಿಂದ ಸರಿಯಾದ ಮತ್ತು ಸಂಪೂರ್ಣ ಮೌಲ್ಯಮಾಪನ ಅಗತ್ಯ. ಮೊಂಡಾದ ವಸ್ತುಗಳೂ ಸೇರಿದಂತೆ ಕಣ್ಣಿಗೆ ಯಾವುದೇ ರೀತಿಯಿಂದ ಗಂಭೀರ ಗಾಯವಾದರೆ ಸಾಧ್ಯವಾದಷ್ಟೂ ಶೀಘ್ರ ನೇತ್ರ ತಜ್ಞರನ್ನು ಭೇಟಿ ಮಾಡಬೇಕು. ಕಣ್ಣಿಗೆ ತೀವ್ರ ಸ್ವರೂಪದ ಪೆಟ್ಟಾಗಿದ್ದರೆ, ಗಾಯವಾದ ಕಣ್ಣನ್ನು ರಕ್ಷಣಾ ಕವಚದಿಂದ ಮುಚ್ಚಬೇಕು. ಚಿಕಿತ್ಸೆ ಪೂರ್ಣವಾಗುವ ತನಕ ರೋಗಿಗೆ ಯಾವುದೇ ರೀತಿಯ ಆಹಾರ ಅಥವಾ ದ್ರವರೂಪದ ಪಾನೀಯಗಳನ್ನು ನೀಡಬಾರದು. ತುರ್ತು ಚಿಕಿತ್ಸಾ ಘಟಕದಲ್ಲಿರುವ ನೇತ್ರತಜ್ಞರಲ್ಲದ ವೈದ್ಯರು, ನುರಿತ ನೇತ್ರವೈದ್ಯರು ನಡೆಸುವ ಸಂಪೂರ್ಣ ಮೌಲ್ಯಮಾಪನಕ್ಕೆ ಪರ್ಯಾಯವಲ್ಲ. ಸೀಳಿದ ಬೆಳಕಿನ ಪರೀಕ್ಷೆ ಮತ್ತು ಕಣ್ಣು ಗುಡ್ಡೆಯ ದ್ರವ ತೆಳುಪದರ ಪರೀಕ್ಷೆಯೂ ಸೇರಿದಂತೆ ಗಾಯದ ನಂತರ ಕಣ್ಣುಗಳ ಸಂಪೂರ್ಣ ತಪಾಸಣೆ ನಡೆಸಬೇಕಾಗುತ್ತದೆ. ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡುವುದರಿಂದ ಇಂಥ ಗಾಯಗಳಿಂದಾಗಿ ವ್ಯಕ್ತಿಗೆ ಭವಿಷ್ಯದಲ್ಲಿ ಉಂಟಾಗಬಹುದಾದ ದೃಷ್ಟಿದೋಷ ಸಮಸ್ಯೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಮಾಡಬಹುದು.

ಡಾ.ಕೆ.ಭುಜಂಗ ಶೆಟ್ಟಿ ವ್ಯವಸ್ಥಾಪಕ ನಿರ್ದೇಶಕರು, ನಾರಾಯಣ ನೇತ್ರಾಲಯ 121/ಸಿ, ಪಶ್ಚಿಮ ಕಾರ್ಡ್‍ರಸ್ತೆ, ರಾಜಾಜೀನಗರ ಆರ್ ಬ್ಲಾಕ್, ಬೆಂಗಳೂರು

ಡಾ.ಕೆ.ಭುಜಂಗ ಶೆಟ್ಟಿ
ವ್ಯವಸ್ಥಾಪಕ ನಿರ್ದೇಶಕರು, ನಾರಾಯಣ ನೇತ್ರಾಲಯ
121/ಸಿ, ಪಶ್ಚಿಮ ಕಾರ್ಡ್‍ರಸ್ತೆ, ರಾಜಾಜೀನಗರ ಆರ್ ಬ್ಲಾಕ್, ಬೆಂಗಳೂರು-10, ದೂ: 080-23373311/66121300
Email : info@narayananethralaya.com ; info@nnmail.org

Website : www.narayananethralaya.org

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!