ಜೀವಕೋಶಗಳ ಸ್ವಯಂ ಭಕ್ಷಣೆ : ಆಹಾರಕ್ರಮ ಮತ್ತು ಆಹಾರದ ಅಂಶಗಳು

  ಜೀವಕೋಶಗಳ ಸ್ವಯಂಭಕ್ಷಣೆ ಎನ್ನುವುದು ಸ್ವಯಂ-ವಿಘಟನೀಯ ಪ್ರಕ್ರಿಯೆಯಾಗಿದ್ದು ತುರ್ತು ಸಮಯದಲ್ಲಿ ಇದು ಪೋಷಕಾಂಶಗಳ ಒತ್ತಡಕ್ಕೆ ಸರಿಯಾಗಿ ಶಕ್ತಿಯ ಮೂಲಗಳನ್ನು ಸಮತೋಲನಗೊಳಿಸಿ ಜೀವಕೋಶಗಳ ಬೆಳವಣಿಗೆಗೆ ಸಹಾಯಮಾಡುತ್ತದೆ. ಇದಲ್ಲದೆ ಹಾನಿಗೊಳಗಾದ ಮೈಟೋಕಾಂಡ್ರಿಯಾ, ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್ ಮತ್ತು ಪರಾಕ್ಸಿಸೋಮ್ಗಳನ್ನು ತೆರವುಗೊಳಿಸಿ, ಅಂತರ್ಜೀವಕೋಶದ ರೋಗಕಾರಕಗಳನ್ನು ತೆಗೆದು ಹಾಕುತ್ತದೆ. ಆದ್ದರಿಂದ ಜೀವಕೋಶಗಳ ಸ್ವಯಂಭಕ್ಷಣೆ ಪ್ರಕ್ರಿಯೆಯನ್ನು ರಕ್ಷಣಾ ಮತ್ತು ಬದುಕುಳಿಯುವ ಕಾರ್ಯವಿಧಾನವೆಂದು ಪರಿಗಣಿಸಲಾಗಿದೆ. ಜೀವಕೋಶಗಳ ಸ್ವಯಂಭಕ್ಷಣೆಯು ಜೀವಕೋಶಗಳ ವೃದ್ದಾಪ್ಯ ಮತ್ತು ಅದರ ಮೇಲ್ಮೈ ಪ್ರತಿಜನಕವನ್ನು ಉತ್ತೇಜಿಸುತ್ತದೆ. ಇದರಿಂದ ಅನುವಂಶಿಗಳ ಅಸ್ಥಿರತೆ ಮತ್ತು ನೆಕ್ರೋಸಿಸ್ ಪ್ರಕ್ರಿಯೆಗಳು ಕಡಿಮೆಯಾಗಿ ಕ್ಯಾನ್ಸರ್, ನರ ವಿಘಟನೆ, ಕಾರ್ಡಿಯೊಮಿಯೊಪತಿ, ಮಧುಮೇಹ (ಮಧುಮೇಹ ಪ್ರೇರಿತ ಉತ್ಕರ್ಷಣಶೀಲಾ ಒತ್ತಡದಿಂದ ಸಸಾರಜನಕ ಪದಾರ್ಥಗಳು (ಪ್ರೋಟೀನ್ಸ್) ಬೀಟಾ-ಜೀವಕೋಶಗಳಲ್ಲಿ ಸಂಗ್ರಹಗೊಳ್ಳುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಜೀವಕೋಶದ ಹಾನಿಗೆ ವಿರುದ್ಧವಾಗಿ ರಕ್ಷಣಾ ಕಾರ್ಯವಿಧಾನವಾಗಿ ಸ್ವಯಂಭಕ್ಷಣೆ ಕಾರ್ಯನಿರ್ವಹಿಸುತ್ತದೆ), ಯಕೃತ್ತು ರೋಗ, ಸ್ವ-ನಿರೋಧಕ ರೋಗಗಳು ಮತ್ತು ಸೋಂಕುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
ಆದರೆ, ಇತ್ತೀಚಿನ ದಿನಗಳಲ್ಲಿ ಮಾನವನ ಆರೋಗ್ಯ ಕೇಂದ್ರವಾಗಿರುವುದರಿಂದ, ಆಹಾರ ಅಂಶಗಳ ಮುಖಾಂತರ ಸ್ವಯಂಭಕ್ಷಣೆ ಸಮನ್ವಯತೆ ಮತ್ತು ಅದರ ಪರಿಣಾಮದ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ. ಮುಖ್ಯವಾಗಿ ಈ ಸ್ವಯಂಭಕ್ಷಣೆ ಪ್ರಕ್ರಿಯೆ ಎಲ್ಲಿ ಮತ್ತು ಯಾವ ಸಮಯದಲ್ಲಿ ಚಾಲನೆ ಹೊಂದಬೇಕು ಹಾಗು ನಿಷ್ಕ್ರಿಯಗೊಳ್ಳಬೇಕು ಎಂಬುದು ಪ್ರಯೋಜನಕಾರಿ. ಉದಾಹರಣೆಗೆ, ಜೀವಕೋಶಗಳ ಉಳಿವಿಕೆ ಅಥವಾ ಪ್ರಸರಣ ಪ್ರಕ್ರಿಯೆಗಳು ಜೀವಕೋಶಗಳ ಪ್ರಕಾರ ಮತ್ತು ರೋಗಕಾರಕ ಸ್ಥಿತಿಯನ್ನು ಅವಲಂಭಿಸಿರುತ್ತದೆ ಅಥವಾ ಅತಿಯಾದ ಸ್ವಯಂಭಕ್ಷಣೆ ಕಾರಣದಿಂದಾಗಿ ಅಸ್ವಸ್ಥತೆಗಳನ್ನು ತಪ್ಪಿಸಲು ಸಮರ್ಥವಾದ ಆಟೊಫಾಗೊಸೊಮ್ ತೆರವು ಅಗತ್ಯವಾಗಿರುತ್ತದೆ. ಸ್ವಯಂಭಕ್ಷಣೆ ಪ್ರಕ್ರಿಯೆಯು ಪ್ರಯೋಜನಕಾರಿ ಅಥವಾ ರೋಗಶಾಸ್ತ್ರೀಯ ಎಂದು ಸ್ಪಷ್ಟಪಡಿಸಲು ನಿರ್ದಿಷ್ಟ ರೋಗದ ಸಂದರ್ಭಗಳಲ್ಲಿ ಇದರ ಪಾತ್ರವನ್ನು ಸಂಶೋಧನಾ ಅಧ್ಯಯನದಿಂದ ತಿಳಿಯಬೇಕಾಗಿದೆ.
ಜೀವಕೋಶಗಳ ಸ್ವಯಂ ಭಕ್ಷಣೆಯು ಹಸಿವು, ಸೋಂಕು, ಕ್ಯಾನ್ಸರ್ ಖಾಯಿಲೆ ಮತ್ತು ಇತರ ರೋಗಗಳಿಗೆ ಉಪಯೋಗಿಸುವ ಔಷಧಿಗಳು, ಹೈಪೊಕ್ಸಿಯಾ ಮತ್ತು ಆಹಾರದ ಕೆಲವು ಸಂಯುಕ್ತಗಳಿಂದ ಪ್ರೇರೇಪಿಸಲ್ಪಡುತ್ತದೆ. ಜೀವಕೋಶಗಳ ವಯಸ್ಸು ಹೆಚ್ಚಾದಂತೆ ಅವುಗಳ ಸ್ವಯಂ ಭಕ್ಷಣೆಯ ಮಟ್ಟಗಳು ಕ್ಷೀಣಿಸುತ್ತವೆ. ಉದಾಹರಣೆಗೆ ಮೈಟೊಕಾಂಡ್ರಿಯದಲ್ಲಿನ ಜೀನೋಮ್ಗಳ ರೂಪಾಂತರಗಳು ವಯಸ್ಸಿನಮೇಲೆ ಅವಲಂಬಿತವಾಗಿರುತ್ತವೆ. ಆಹಾರದ ಕ್ಯಾಲೋರಿ ನಿರ್ಬಂಧ ಮತ್ತು ಅದರಿಂದ ಜೀಕಾಕೋಶಗಳ ಮೇಲೆ ಆಗುವ ಪರಿಣಾಮಗಳು ಈ ಸ್ವಯಂ ಭಕ್ಷಣೆಯ ಪ್ರಕ್ರಿಯೆ ಮೇಲೆ ಅವಲಂಬಿತವಾಗಿದೆ. ಇತ್ತೀಚಿನ ಅಧ್ಯಯನಗಳು ನಿರ್ಧಿಷ್ಟ ಆಹಾರ ಪದಾರ್ಥಗಳನ್ನು ಉಪಯೋಗಿಸಿ ಜೀವಕೋಶಗಳ ಸ್ವಯಂಭಕ್ಷಣೆಯನ್ನು ಸಮನ್ವಯತೆಪಡಿಸುವ ಬೆಗ್ಗೆ ಹೆಚ್ಚು ಕೇಂದ್ರೀಕರಿಸಲಾಗುತ್ತಿದೆ. ನಾವು ದಿನನಿತ್ಯ ಉಪಯೋಗಿಸುವ ಆಹಾರದಲ್ಲಿನ ಘಟಕಗಳು ವಿವಿಧ ಪ್ರಕ್ರಿಯೆಗಳ ಮುಖಾಂತರ ಕ್ಯಾನ್ಸರ್ ನಂತಹ ಕಾಯಿಲೆಗಳ ಬೆಳವಣಿಗೆ ಮೇಲೆ ಪ್ರಭಾವ ಬೀರಬಹುದು. ಟ್ರೈಟರ್ಪೆನೋಯ್ಡ್ಸ್, ಐಸೋಥಿಯೋಸೈನೇಟ್ಗಳು, ವಿಟಮಿನ್ಗಳು, ಫ್ಲವೊನಾಯಿಡ್ಗಳು ಮತ್ತು ಇತರ ಫಿನಾಲಿಕ್ಸ್ ಘಟಕಗಳು ವಿವಿಧ ಪ್ರಕಾರಗಳಲ್ಲಿ ಸ್ವಯಂ ಭಕ್ಷಣೆಯನ್ನು ಪ್ರೇರೇಪಿಸುತ್ತದೆ. ಬಹುಶಃ ಇವುಗಳಲ್ಲಿ ಹೆಚ್ಚು ಜನಪ್ರಿಯವಾಗಿದ್ದು ರೆಸ್ವೆರಾಟ್ರೊಲ್. ರೆಸ್ವೆರಾಟ್ರೊಲ್ ಎಂಬುದು ದ್ರಾಕ್ಷಿ ರಸ, ವೈನ್, ಮತ್ತು ಇತರ ಸಸ್ಯ-ಮೂಲದ ಆಹಾರ ಪದಾರ್ಥಗಳಲ್ಲಿ ಕಂಡುಬರುವ ಸ್ಟಿಲ್ಬೀನ್. ಇದು ಹಿಸ್ಟೋನ್ ಅಸಿಟಿಲೇಷನ್ ಮೇಲೆ ಪರಿಣಾಮ ಬೀರುವ ಮುಖಾಂತರ ಜೀವಕೋಶಗಳ ದೀರ್ಘಾಯುಷ್ಯವನ್ನು ಹೆಚ್ಚಿಸುತ್ತದೆ ಎಂದು ಭಾವಿಸಲಾಗಿದೆ. ಶರ್ಕರ ಮತ್ತು ಮೇದಸ್ಸಿನ ಆಹಾರದ ಅಂಶಗಳು ಸ್ವಯಂಭಕ್ಷಣೆ ಮೇಲೆ ನೇರ ಪರಿಣಾಮವನ್ನು ಬೀರುವುದಿಲ್ಲ, ಆದರೆ, ಪರೋಕ್ಷವಾಗಿ ಇನ್ಸುಲಿನ್ನನ್ನು ನಿಯಂತಿಸುತ್ತದೆ. ಉದಾಹರಣೆಗೆ, ಶರ್ಕರ ಅಂಶದ ಉಪಸ್ಥಿತಿಯು ಇನ್ಸುಲಿನ್ ಸ್ರವಿಕೆಯನ್ನು ಉಂಟುಮಾಡುತ್ತದೆ, ಇದು ಎಂಟೋರ್ (mTOR) ಸಕ್ರಿಯಗೊಳಿಸಿ ಸ್ವಯಂಭಕ್ಷಣೆಯನ್ನು ನಿಗ್ರಹಗೊಳಿಸುತ್ತದೆ
ಉಪವಾಸ ಮತ್ತು ಕ್ಯಾಲೋರಿಕ್ ನಿರ್ಬಂಧಗಳು ಸ್ವಯಂಭಕ್ಷಣೆಯನ್ನು ಸಕ್ರಿಯಗೊಳಿಸುತ್ತದೆ. ಪೋಷಕಾಂಶದ ಒಳಹರಿವಿನ ಕೊರತೆಯು ಸೆಲ್ಯುಲರ್ ಘಟಕಗಳು ಮರುಬಳಕೆಯನ್ನು ಹೆಚ್ಚಿಸಿ ಸ್ವಯಂಭಕ್ಷಣೆಯನ್ನು ಸಕ್ರಿಯಗೊಳಿಸಿ ಬಾಹ್ಯ ಸಂಪನ್ಮೂಲಗಳಿಂದ ಕಡಿಮೆ ಅವಶ್ಯಕತೆಗಳನ್ನು ಹೊಂದಿರುವ ಜೀವಕೋಶಗಳು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ಖಾತ್ರಿಪಡಿಸುತ್ತದೆ. ಕೀಟೋಜೆನಿಕ್ ಆಹಾರ ಕ್ರಮ, ಶರ್ಕರ ಸೇವನೆಯನ್ನು ಕಡಿಮೆ ಮಾಡಿ ಜೀವಕೋಶಗಳ ಶಕ್ತಿಯ ಬಳಕೆಯ ಬದಲಾಯಿಸುತ್ತದೆ. ಈ ಬದಲಾವಣೆಯು ಉಪವಾಸದ ಸಮಯದಲ್ಲಿ ಸಂಭವಿಸುವ ಪ್ರಕ್ರಿಯೆಯನ್ನು ಅನುಕರಿಸುತ್ತದೆ ಮತ್ತು ಸ್ವಯಂಭ್ಕ್ಶಣೆಯ ಹೆಚ್ಚಳಕ್ಕೆ ಕಾರಣವಾಗಬಹುದು..
ಸ್ವಯಂಭಕ್ಷಣೆಯನ್ನು ಪ್ರಚೋದಿಸುವ ಕೆಲವು ಪ್ರಮುಖವಾದ ಆಹಾರ ಅಂಶಗಳು ಕೆಳಗಿನಂತಿವೆ.
ಎಪಿಜೆನಿನ್ (Apigenin): ಈ ಸಂಯುಕ್ತಗಳು ಸಸ್ಯಗಾಲ ದ್ವಿತೀಯ ಮೆಟಬೊಲೈಟ್ಸ್ಗಳಾಗಿದ್ದು, ಪುದಿನ ಮತ್ತು ಅಜವಾನ ಸಸ್ಯಗಳಲ್ಲಿ ಕಂಡುಬರುತ್ತದೆ.
ಕೆಫೀನ್ (Caffien): ಕೆಫೀನ್ ನೈಸರ್ಗಿಕವಾಗಿ ಕಾಫಿ, ಚಹಾ ಮತ್ತು ಕೋಕೋದಲ್ಲಿ ಕಂಡುಬರುತ್ತದೆ. ಕಾಫಿಯ ಆರೋಗ್ಯ ಪ್ರಯೋಜನಗಳು ಕೆಲವು ವಿಭಿನ್ನ ಫಲಿತಾಂಶಗಳನ್ನು ಒದಗಿಸಿವೆ. ಒಟ್ಟಾರೆ ಸಾವಿನ ಪ್ರಮಾಣವನ್ನು ಕಡಿಮೆಗೊಳಿಸುವುದರ ಬಗ್ಗೆ ಕೆಲವು ಅಧ್ಯಯನಗಳ ವರದಿಗಳು ಸೂಚಿಸುತ್ತವೆ.
ಪಾಲಿಫಿನೋಲ್ (Polypehnol): ಹಸಿರು ಚಹಾದಲ್ಲಿನ ಪಾಲಿಫಿನೋಲ್ (epigallocatechin-3-gallate) ಸ್ವಯಂಭಕ್ಷಣ ಪ್ರಕ್ರಿಯೆಯನ್ನು ಹೊಂದಿರುತ್ತವೆ.
ತೆಂಗಿನಕಾಯಿಯ ಎಣ್ಣೆ: ತೆಂಗಿನ ಎಣ್ಣೆ ಸೇವನೆಯು ಕೆಟೋನ್ ಮಟ್ಟವನ್ನು ಹೆಚ್ಚಿಸುವ ಮೂಲಕ ಸ್ವಯಂಭಕ್ಷಣೆಯನ್ನು ಉತ್ತೇಜಿಸುತ್ತದೆ.
ಶುಂಠಿ: ಶುಂಠಿಯ 6 -ಶಾಗೋಲ್ ಎಂಬ ಘಟಕ mTOR ಅನ್ನು ತಡೆಗಟ್ಟಿ ಸ್ವಯಂಭಕ್ಷಣೆಯನ್ನು ಸಕ್ರಿಯಗೊಳಿಸುತ್ತದೆ.
ಕಕ್ರ್ಯುಮಿನ್ (Curcumin): ಕಕ್ರ್ಯುಮಿನ್ ಅರಿಶಿನದಲ್ಲಿನ ಅತ್ಯಂತ ಕ್ರಿಯಾಶೀಲ ಫೈಟೋಕೆಮಿಕಲ್ ಮತ್ತು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಸ್ವಯಂಭಕ್ಷಣೆಯನ್ನು ಕಕ್ರ್ಯುಮಿನ್ (ಎಎಮ್ಪಿಕೆ ಸಿಗ್ನಲಿಂಗ್ ಪಥ್ವೇ ಮೂಲಕ ) ಸಕ್ರಿಯಗೊಳಿಸುತ್ತದೆ.
ಡಿ-ಜೀವಸತ್ವ: ಡಿ-ಜೀವಸತ್ವ ಅನ್ನು ಆಹಾರ, ಪೂರಕಗಳು ಮತ್ತು ಸೂರ್ಯನ ಬೆಳಕನ್ನು ಒಡ್ಡಿಕೊಳ್ಳುವುದರ ಮೂಲಕ ಚರ್ಮದಲ್ಲಿ ಸಂಶ್ಲೇಷಿಸಲಾಗುತ್ತದೆ. ಡಿ-ಜೀವಸತ್ವ ಸ್ವಯಂಭಕ್ಷಣೆಯನ್ನು ಉಂಟುಮಾಡುತ್ತದೆ ಮತ್ತು ಪ್ಯಾಂಕ್ರಿಯಾಟಿಕ್ – ಜೀವಕೋಶಗಳನ್ನು ರಕ್ಷಿಸುವಲ್ಲಿ ಸಮರ್ಥವಾಗಿ ಪಾತ್ರವಹಿಸುತ್ತದೆ ಎಂದು ಸಂಶೋಧನೆಯು ತೋರಿಸಿದೆ.
ಒಮೆಗಾ 6 ಮತ್ತು ಒಮೆಗಾ 3 ಪಾಲಿಅನ್ಸ್ಯಾಚುರೇಟೆಡ್ ಕೊಬ್ಬಿನ ಆಮ್ಲಗಳು: ನೆಮೆಟೋಡ್ ಸಿ ಎಲಿಗನ್ಸ್ ಆಹಾರದಲ್ಲಿ ಒಮೇಗಾ 6 ಪಾಲಿಅನ್ಸ್ಯಾಚುರೇಟೆಡ್ ಕೊಬ್ಬಿನ ಆಮ್ಲಗಳ ಸೇರ್ಪಡೆ ಅದರ ಜೀವಿತಾವಧಿ ಅನ್ನು ಹೆಚ್ಚಿಸುತ್ತದೆ. ಈ ಕೊಬ್ಬಿನ ಅಂಶಗಳು ಪ್ರಮುಖವಾಗಿ ಮೀನಿನ ಎಣ್ಣೆ ಮತ್ತು ಅಗಸೆಯ ಎಣ್ಣೆಯಲ್ಲಿ ಕಂಡುಬರುತ್ತದೆ.
ಸ್ಪೆರ್ಮೈಡೈನ್ (Speroidene):  ಸ್ಪೆರ್ಮೈಡೈನ್ ವ್ಯಾಪಕವಾಗಿ ಸೋಯಾಬೀನ್ ಮತ್ತು ಚೆಡ್ಡಾರ್ ಚೀಸ್ ಆಹಾರಗಳಲ್ಲಿ ಕಂಡುಬರುವ ಪಾಲಿಯಮೈನ್ ಸಂಯುಕ್ತ.
ಸಲ್ಫರಾಫೇನ್ (Sulforaphane): ಇದು ಬ್ರೋಕೋಲಿ, ಎಲೆಕೋಸು, ಹೂಕೋಸು, ಬ್ರಸೆಲ್ಸ್ ಮೊಗ್ಗುಗಳು ಮುಂತಾದ ತರಕಾರಿಗಳಲ್ಲಿ ಕಂಡುಬರುವ ಸಲ್ಫರ್ ಹೊಂದಿರುವ ಜೈವಿಕ ಸಂಯುಕ್ತವಾಗಿದೆ. ಸುಲ್ಫೊರಾಫೆನ್ ನರಕೋಶದ ಕೋಶಗಳಲ್ಲಿ ಸ್ವಯಂಭಕ್ಷಣೆ ಯನ್ನು ಪ್ರಚೋದಿಸುತ್ತದೆ ಮತ್ತು ಪ್ರಿಯಾನ್ ಪ್ರೋಟೀನ್ ಮಧ್ಯವರ್ತಿ ನ್ಯೂರೋಟಾಕ್ಸಿಸಿಟಿಯನ್ನು ತಡೆಗಟ್ಟುತದೆ.
ಇತ್ತೀಚಿನ ದಿನಗಳಲ್ಲಿ ಜೀವಕೋಶಗಳ ಸ್ವಯಂಭಕ್ಷಣೆ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ ಹಾಗು ಇದರ ಮೇಲಿನ ಅಧ್ಯಯನಕ್ಕೆ ಯೋಷಿನೋರಿ ಒಸುಮಿ (Yoshinori osumi) ಎಂಬ ವಿಜ್ಞಾನಿಗೆ 2016 ರಲ್ಲಿ ನೊಬೆಲ್ ಪಾರಿತೋಷಕವನ್ನು ನೀಡಿ ಸನ್ಮಾನಿಸಲಾಗಿದೆ.

ಲೋಹಿತ್ ಕುಮಾರ್ ಡಿ. ಹೆಚ್.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ರೌರ್ಕೇಲ
ಮೊ. : +91 7064655392

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!