Health Vision

Health Vision

SUBSCRIBE

Magazine

Click Here

ಭಾರತದ “ನಮಸ್ಕಾರ’ ವಿಶ್ವಕ್ಕೆ ಭರವಸೆ

ಭಾರತದ “ನಮಸ್ಕಾರ’ ವಿಶ್ವಕ್ಕೆ ಭರವಸೆ ತುಂಬುತ್ತಿದೆ. ಯೋಗದ ನಂತರ ನಮಸ್ಕಾರ ಸಂಪ್ರದಾಯವನ್ನು ಈಗ ವಿಶ್ವದ ಪ್ರತಿಯೊಂದು ದೇಶವೂ ಒಪ್ಪಿಕೊಂಡಿದೆ.

ಕೊರೊನಾದಿಂದ ತಪ್ಪಿಸಿಕೊಳ್ಳಲು  ಭಾರತದ “ನಮಸ್ಕಾರ’ ವಿಶ್ವಕ್ಕೆ ಭರವಸೆ ತುಂಬುತ್ತಿದೆ. ಜಗದ ಹಲವು ಭಾಗಗಳಲ್ಲಿ ರುವ ನಮಸ್ಕಾರ ಈಗ ಕೊರೊನಾ ಭೀತಿಗೂ ಮದ್ದಾಗುತ್ತಿದೆ. ಎದುರಿನ ವ್ಯಕ್ತಿ ಕೈ ಕುಲುಕಲು ಮುಂದಾದರೆ ಮುಜುಗರಪಡುವ ಅಗತ್ಯವಿಲ್ಲ. ಬದಲಾಗಿ ನಮಸ್ಕರಿಸಿ ಗೌರವ ಸೂಚಿಸಬಹುದು. ಎದುರಿನ ವ್ಯಕ್ತಿಯನ್ನು ದೈಹಿಕವಾಗಿ ಸಂಪರ್ಕಿಸದೆ ವೈರಾಣುಗಳಿಂದ ತಪ್ಪಿಸಿಕೊಳ್ಳಲು ಇದು ಅತ್ಯಂತ ಸುಲಭದ ಮಾರ್ಗ. ಅಲ್ಲದೆ ಈ ಮೂಲಕ ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯಬಹುದು.

ನಮಸ್ಕಾರ ಹಿಂದೂ ಸಂಪ್ರದಾಯ:

ನಮಸ್ಕಾರ ಹಿಂದೂ ಸಂಪ್ರದಾಯದಲ್ಲಿ ಶುಭಾಶಯದ ಒಂದು ಗೌರವಯುತ ರೂಪ, ಮತ್ತು ಭಾರತೀಯ ಉಪಖಂಡದಲ್ಲಿ, ಮುಖ್ಯವಾಗಿ ಭಾರತ ಹಾಗೂ ನೇಪಾಳದಲ್ಲಿ ಮತ್ತು ಭಾರತದಿಂದ ಚದುರಿದ ಭಾರತೀಯರಲ್ಲಿ ಕಂಡುಬರುತ್ತದೆ. ಅದನ್ನು ವಂದನೆ ಮತ್ತು ಬೀಳ್ಕೊಡುಗೆ ಎರಡಕ್ಕೂ ಬಳಸಲಾಗುತ್ತದೆ. ನಮಸ್ಕಾರ ಶಬ್ದಕ್ಕೆ ಅಭಿವಂದನೆ, ನಮನ, ಪ್ರಣಾಮ, ಶರಣು ಪರ್ಯಾಯ ಶಬ್ದಗಳು.  ನಮಸ್ಕಾರವನ್ನು ಸಾಮಾನ್ಯವಾಗಿ ಸ್ವಲ್ಪ ಬಗ್ಗಿ ಮತ್ತು ಕೈಗಳನ್ನು ಒಂದಕ್ಕೊಂದು ಒತ್ತಿ, ಅಂಗೈಗಳು ಸ್ಪರ್ಶಿಸಿ ಮತ್ತು ಬೆರಳುಗಳು ಮೇಲ್ಮುಖವಾಗಿ ಇದ್ದು, ಹೆಬ್ಬೆರಳುಗಳನ್ನು ಎದೆಗೆ ಹತ್ತಿರವಿರಿಸಿ ಹೇಳಲಾಗುತ್ತದೆ.ನಮಸ್ಕಾರದಲ್ಲಿ ಎರಡು ವಿಧ. ಒಂದು- ಹಸ್ತ ನಮಸ್ಕಾರ. ಇನ್ನೊಂದು ಸಾಷ್ಟಾಂಗ ನಮಸ್ಕಾರ. ಹಿರಿಯರನ್ನೂ, ಗೌರವಾನ್ವಿತರನ್ನೂ ಭೇಟಿ ಮಾಡಿದಾಗ ಸಾಮಾನ್ಯವಾಗಿ ಕೈ ಜೋಡಿಸಿ ನಮಸ್ಕಾರ ಮಾಡುತ್ತೇವೆ.

ಎರಡು ಕೈ ಮತ್ತು ಬೆರಳುಗಳನ್ನು ಸಮವಾಗಿ ಜೋಡಿಸಿ ಎದೆಗೆ ಒತ್ತಿದರೆ ಅದು ನಮಸ್ಕಾರ ಮುದ್ರೆಯಾಗುತ್ತದೆ. ಈ ಸನ್ನೆಯನ್ನು ಅಂಜಲಿ ಮುದ್ರೆ ಅಥವಾ ಪ್ರಣಾಮಾಸನ ಎಂದು ಕರೆಯಲಾಗುತ್ತದೆ. ಈ ಶುಭಾಶಯವನ್ನು ಸನ್ನೆಯಿಲ್ಲದೆಯೂ ಹೇಳಬಹುದು ಅಥವಾ ಸನ್ನೆಯನ್ನು ಮಾತಾಡದೆ ಮಾಡಬಹುದು, ಎಲ್ಲದರ ಅರ್ಥವೂ ಒಂದೇ. ಯಾರಾದರೂ ನಮಸ್ಕಾರ ಮಾಡಿದರೆ ಪ್ರತಿಯಾಗಿ ನಮಸ್ಕರಿಸುವುದು ನಮ್ಮ ಭಾರತೀಯರ ಸಂಸ್ಕಾರ. ನಮಸ್ಕಾರ ಎಂದರೆ ವಂದಿಸುವುದು. ಸ್ವಾಗತಿಸುವುದು. ನಾನು ಮತ್ತು ನೀನು ಇಬ್ಬರೂ ಒಂದೇ ಎಂದು ಹೇಳಲಾಗಿದೆ.

ಬಹಳ ಕಾಯಿಲೆಗಳು ಗುಣಮುಖವಾಗುತ್ತದೆ:

ಈ ಗೌರವ ಸೂಚಕ ಕ್ರಿಯೆಯ ಹಿಂದೆ ವಿಜ್ಞಾನವಿದೆ. ನಮಸ್ಕಾರ ಮುದ್ರೆಯನ್ನು ಹಿಡಿದರೆ ಸಾಕು, ಬಹಳ ಕಾಯಿಲೆಗಳು ಗುಣಮುಖವಾಗುತ್ತದೆ.ಈ ಬಗ್ಗೆ ಧ್ವನಿಯೆತ್ತಿರುವ ಪ್ರಧಾನಿ ಮೋದಿ, ಕೊರೊನಾ ಭಯದಿಂದ ಜಗತ್ತು ನಮಸ್ತೆ ಹೇಳುತ್ತಿದೆ. ನಾವು ನಮಸ್ಕಾರವನ್ನು ಕೈಬಿಟ್ಟಿದ್ದರೆ ಮತ್ತೆ ಚಾಲ್ತಿಗೆ ತರೋಣ. ನಮಸ್ಕಾರ ರೂಢಿಸಿಕೊಳ್ಳಲು ಇದು ಒಳ್ಳೆಯ ಸಮಯ ಎಂದು ನಾಗರಿಕರಿಗೆ ಕರೆಕೊಟ್ಟಿದ್ದಾರೆ.  ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಕೊರೊನಾ ನೆನೆದು ಭಯದಲ್ಲೇ ಕೈ ಕುಲುಕುವುದಕ್ಕಿಂತ ಭಾರತೀಯರಂತೆ ನಮಸ್ಕರಿಸುವುದು ಉತ್ತಮ ಎಂದಿದ್ದರು.ಎರಡೂ ಅಂಗೈ ಜೋಡಿಸಿ, ಹತ್ತು ಬೆರಳು ಗಳು ಕೂಡುವ ಕ್ರಿಯೆಯೇ ನಮಸ್ಕಾರ. 10 ಬೆರಳುಗಳು ಸಂಧಿಸಿದಾಗ ಕಣ್ಣು, ಕಿವಿ ಮತ್ತು ಮನಸ್ಸಿನ ಒತ್ತಡ ಕೇಂದ್ರಗಳು ಒಂದನ್ನೊಂದು ಸ್ಪರ್ಶಿಸುತ್ತವೆ. ಇದರಿಂದ ಪರಿಚಯಗೊಳ್ಳುವ ವ್ಯಕ್ತಿಯ ಹೆಸರನ್ನು ದೀರ್ಘ‌ಕಾಲ ನೆನಪಿರಿಸಿ ಕೊಳ್ಳಲು ಸಾಧ್ಯವಾಗುತ್ತದೆ.

ಭಾರತದ “ನಮಸ್ಕಾರ’ ವಿಶ್ವಕ್ಕೆ ಭರವಸೆ

ಈ ನಮಸ್ಕಾರ ಮುದ್ರೆಯನ್ನು ಆಧ್ಯಾತ್ಮಿಕವಾಗಿ ನೋಡಿದರೆ ದೇಹ, ಮನಸ್ಸು ಮತ್ತು ಆತ್ಮ ಎಲ್ಲ ಒಂದೇ ಎಂದು ಸೂಚಿಸುತ್ತದೆ. ನಮಸ್ಕಾರವು ಧನ್ಯತಾ ಭಾವವನ್ನು ಸೂಚಿಸುತ್ತದೆ. ವೈಜ್ಞಾನಿಕವಾಗಿ ಹೇಳಬೇಕಾದರೆ ನಮಸ್ಕಾರ ಮುದ್ರೆಯನ್ನು ಹಿಡಿದು ಸ್ವಲ್ಪ ಒತ್ತಿದರೆ ಅದು ಶ್ವಾಸಕೋಶದ ತೊಂದರೆಯನ್ನು ನಿವಾರಣೆ ಮಾಡುತ್ತದೆ ಮತ್ತು ತೋಳಿನ ಸ್ನಾಯುಗಳು ಬಲವಾಗುತ್ತದೆ. ಹಾಗಾಗಿ ನಾವು ಕೈ ಮುಗಿದು ನಮಸ್ಕಾರವನ್ನು ಮಾಡುತ್ತೇವೆ. ನಮಸ್ಕರಿಸಲು ಕೈಜೋಡಿಸಿದಾಗ ಮೆದುಳಿನ ಒತ್ತಡ ಭುಜದಿಂದ ಇಳಿಯುತ್ತದೆ. ತೋಳುಗಳಿಗೆ ಸಹಜವಾಗಿ ವ್ಯಾಯಾಮ ಸಿಗುತ್ತದೆ. ಕೈ ಮತ್ತು ಹೃದಯ ಶಕ್ತಿಯುತವಾದ ವೃತ್ತದಲ್ಲಿ ಸೇರುವುದರಿಂದ ಈ ವೇಳೆ ಉತ್ಪಾದನೆಯಾಗುವ ಹಾರ್ಮೋನು ಗಳು ಮನಸ್ಸಿನ ಒತ್ತಡವನ್ನು ದೂರ ಮಾಡುತ್ತವೆ.

ನಮಸ್ಕಾರದ ಭಂಗಿಗೆ “ಕರಾಂಜಲಿ ಮುದ್ರೆ’ ಎಂದೇ ಹೆಸರು. ಪಂಚಭೂತ ಗಳು ನಮ್ಮ ಬೆರಳುಗಳಲ್ಲಿದ್ದು, ಇವು ಪರಸ್ಪರ ಸಂಧಿಸಿದಾಗ ಧನಾತ್ಮಕ ಅಲೆ ಸೃಷ್ಟಿಯಾಗುತ್ತದೆ ಎನ್ನುವ ನಂಬಿಕೆ ಭಾರತೀಯ ಯೋಗ ಪರಂಪರೆಯಲ್ಲಿದೆ. ನಮಸ್ಕಾರಗಳಲ್ಲಿ ಸಾಷ್ಟಾಂಗ ನಮಸ್ಕಾರ ಕೂಡ ಒಂದಾಗಿದ್ದು, ಈ ಸಮಯದಲ್ಲಿ ದೇಹದ ಎಲ್ಲಾ ಅಂಗಗಳು ಭೂಮಿಯನ್ನು ಸ್ಪರ್ಶಿಸುತ್ತವೆ. ಇದನ್ನು ದಂಡಾಕಾರ ನಮಸ್ಕಾರ ಮತ್ತು ಉದ್ಧಂಡ ನಮಸ್ಕಾರ ಎಂದೂ ಕರೆಯಲಾಗುತ್ತದೆ.ಸಾಷ್ಟಾಂಗ ನಮಸ್ಕಾರ ಎಂದರೆ ಕಾಯಾ, ವಾಚಾ ಮತ್ತು ಮನಸಾ ದೇವತೆಗಳಲ್ಲಿ ಶರಣಾಗಿ ಆತ್ಮಶಕ್ತಿಯನ್ನು ಜಾಗೃತಗೊಳಿಸಿ, ಸ್ಥೂಲದೇಹ ಮತ್ತು ಸೂಕ್ಷ ದೇಹಗಳನ್ನು ಸಂಪೂರ್ಣವಾಗಿ ಶುದ್ಧ ಮಾಡುವುದು.

ನಾವು ನಿಂತುಕೊಂಡು ನಮಸ್ಕರಿಸುವಾಗ ಇಲ್ಲವೇ ಕುಳಿತು ನಮಸ್ಕರಿಸುವಾಗ ದೇಹಕ್ಕೆ ಗಾಯ ಇಲ್ಲವೇ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಆದರೆ ಸಾಷ್ಟಾಂಗ ನಮಸ್ಕಾರವನ್ನು ಮಾಡುವಾಗ ಯಾವುದೇ ಗಾಯಗಳು ದೇಹಕ್ಕೆ ಉಂಟಾಗುವ ಸಂಭವ ತುಂಬಾ ಕಡಿಮೆ ಇರುತ್ತದೆ. ಸಾಷ್ಟಾಂಗ ನಮಸ್ಕಾರದಲ್ಲಿ ನಮ್ಮ ಅಹಂಕಾರ ಹಿರಿತನವನ್ನು ಬದಿಗಿಟ್ಟು ಮಾನವೀಯತೆಯನ್ನು ಬೆಳೆಸಿಕೊಳ್ಳುವ ಸ್ಥಿತಿ ಏರ್ಪಡುತ್ತದೆ. ಈ ನಮಸ್ಕಾರವನ್ನು ಪುರುಷರು ಮಾಡುವಾಗ ಕೈಗಳು, ಹೊಟ್ಟೆ, ಮಂಡಿ, ಕಾಲುಗಳನ್ನು ಮಡಚಿಕೊಂಡು ಭೂಮಿಗೆ ಸ್ಪರ್ಶವಾಗುವಂತೆ ನಮಸ್ಕಾರ ಮಾಡುವುದಾಗಿದೆ. ಇನ್ನು ಸ್ತ್ರೀಯರು ಕೈ ಮತ್ತು ಮಂಡಿಯನ್ನು ಮಡಿಚಿಕೊಂಡು ಭೂಮಿಗೆ ಸ್ಪರ್ಶವಾಗುವಂತೆ ನಮಸ್ಕರಿಸುತ್ತಾರೆ.

ಹ್ಯಾಂಡ್‌ಶೇಕ್‌ ಬದಲು  ನಮಸ್ಕಾರ:

ನಮಸ್ಕಾರವು ಈಗಾಗಲೇ ಯೋಗದ ಬೆನ್ನೇರಿ ವಿಶ್ವದ ಮೂಲೆ ಮೂಲೆಗಳನ್ನು ತಲುಪಿದೆ. ಸೂರ್ಯ ನಮಸ್ಕಾರದ ಮೊದಲ ಆಸನವೇ “ಪ್ರಣಾಮಾಸನ’. ಏರ್‌ ಇಂಡಿಯಾ ಸೇರಿದಂತೆ ಏಷ್ಯಾದ ಭಾಗದ ಹಲವು ವಿಮಾನಗಳಲ್ಲಿ ಚಾಲ್ತಿಯಲ್ಲಿರುವುದು ಇದೇ “ನಮಸ್ಕಾರ’ ಸೇವೆ. ಥೈಲ್ಯಾಂಡ್‌ನ‌ಲ್ಲಿ ಜನರು ಎರಡೂ ಕೈಗಳಿಂದ ನಮಸ್ಕರಿಸುತ್ತಾರೆ. ಬಾಲಿ ದ್ವೀಪದಲ್ಲಿ ನಮಸ್ಕಾರಕ್ಕೆ “ಓಂ ಸ್ವಸಾöಸ್ತು’ ಎನ್ನುತ್ತಾರೆ. ಮಲೇಷ್ಯಾ ಸೇರಿದಂತೆ ಹಲವು ಇಸ್ಲಾಂ ರಾಷ್ಟ್ರಗಳಲ್ಲಿ ಒಂದೇ ಕೈಯಿಂದ ನಮಸ್ಕರಿಸುವ ಪದ್ಧತಿ ಇದೆ.

ಕೊರೊನಾ ಹಿನ್ನೆಲೆಯಲ್ಲಿ ಹ್ಯಾಂಡ್‌ ಶೇಕ್‌ ಬದಲು ಭಾರತೀಯ ಸಂಪ್ರದಾಯವಾದ ನಮಸ್ತೆಗೆ ಹೆಚ್ಚಿನ ಪ್ರಾಧ್ಯಾನತೆ ಬಂದದ್ದು ವಿಶೇಷ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೇರಿದಂತೆ ವಿಶ್ವದ ಗಣ್ಯಾತಿಗಣ್ಯರು ಅಪ್ಪುಗೆ ಮತ್ತು ಹಸ್ತಲಾಘವದ ಬದಲು ನಮಸ್ತೆ ಹೇಳುವಂತೆ ತಮ್ಮ ರಾಷ್ಟ್ರದ ಜನತೆಗೆ ಕರೆನೀಡಿರುವುದು ವಿಶೇಷ. ಸ್ವಚ್ಛತೆ ಕುರಿತಂತೆ ಭಾರತದ ಅನೇಕ ಸಂಪ್ರದಾಯಗಳು ಕೊರೊನಾ ವಿಷಯದಲ್ಲಿ ಪ್ರತಿಯೊಬ್ಬರೂ ಪಾಲಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಸಿರುವುದನ್ನು ಗಮನಿಸಬಹುದು.

 

Back To Top