ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವ ಉಪಾಯಗಳು ಅತ್ಯಂತ ಸಹಾಯಕ. ಬೇಸಿಗೆಯ ಬೇಗೆಯನ್ನು ನಿವಾರಿಸಲು ಸಾಧ್ಯವಾದಷ್ಟೂ ತಂಪು ಗುಣ ಹೊಂದಿದ ಆಹಾರದ್ರವ್ಯಗಳು ಮತ್ತು ದ್ರವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು.
ಕಾಲಕ್ಕೆ ತಕ್ಕಂತೆ ಆಹಾರ ಸೇವಿಸಿದರೆ ನಮ್ಮ ಆರೋಗ್ಯವು ಚೆನ್ನಾಗಿರುತ್ತದೆ. ಎಷ್ಟೋ ಜನ ಸೆಖೆಯ ಕಾರಣದಿಂದ ಉಷ್ಣತೆ, ಸುಸ್ತು, ದೌರ್ಬಲ್ಯಗಳನ್ನು ಅನುಭವಿಸುತ್ತಾರೆ. ಆದರೆ ಕಾಲಕ್ಕೆ ತಕ್ಕಂತೆ ನಮ್ಮ ಆಹಾರ, ದಿನಚರಿಗಳನ್ನು ಇಟ್ಟುಕೊಂಡರೆ ತೊಂದರೆಗಳನ್ನು ಎದುರಿಸಬೇಕಿಲ್ಲ.
1. ಬೇಸಿಗೆಯ ಈ ಕಾಲದಲ್ಲಿ ಸಾಧ್ಯವಾದಷ್ಟೂ ತಂಪು ಗುಣ ಹೊಂದಿದ ಆಹಾರದ್ರವ್ಯಗಳು ಮತ್ತು ದ್ರವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಅಂದರೆ ಹಾಲು, ಬೆಣ್ಣೆ, ತುಪ್ಪ, ಬೂದುಗುಂಬಳಕಾಯಿ, ಹಾಲುಗುಂಬಳಕಾಯಿ, ಒಣದ್ರಾಕ್ಷಿ, ಮೆಂತೆಸೊಪ್ಪು, ಖರ್ಜೂರ, ಚಿಕ್ಕು (ಸಪೋಟ), ಸೀತಾಫಲ, ಖರಬೂಜ, ಬಸಳೆಸೊಪ್ಪಿನಂತಹ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುತ್ತಾ ಬಂದರೆ ಬೇಸಿಗೆ ಬೇಗೆ ಅನ್ನಿಸುವುದಿಲ್ಲ.
2. ತುಂಬಾ ತಂಪು ಗುಣ ಹೊಂದಿರುವ ಮತ್ತು ರಾಸಾಯನಿಕ ರಹಿತವಾದ ಎಳನೀರನ್ನು ಬೇಸಿಗೆಯಲ್ಲಿ ಹೆಚ್ಚಾಗಿ ಸೇವಿಸಬಹುದು. ಇದರಿಂದ ದೇಹದ ಶಕ್ತಿಯೂ ಹೆಚ್ಚುತ್ತದೆ. ಆಬಾಲವೃದ್ಧರಾದಿಯಾಗಿ ಎಲ್ಲರೂ ಎಳನೀರನ್ನು ಸೇವಿಸಬಹುದು. ಇದರಿಂದ ಕೇವಲ ತಂಪಾಗುವುದಷ್ಟೇ ಅಲ್ಲ; ದೇಹದ ಶಕ್ತಿ ಕೂಡಾ ಹೆಚ್ಚುತ್ತದೆ. ಸುಸ್ತು, ಬಾಯಾರಿಕೆ ಇದ್ದಾಗ ತಕ್ಷಣ ಪರಿಹಾರವೂ ಆಗುತ್ತದೆ.
3. ಬೂದುಗುಂಬಳಕಾಯಿ ಈ ಕಾಲದಲ್ಲಿ ಅತ್ಯಂತ ಪ್ರಶಸ್ತವಾದ ಆಹಾರದ್ರವ್ಯ. ಏಕೆಂದರೆ ಬೂದುಗುಂಬಳಕಾಯಿಯು ತಂಪುಗುಣವನ್ನು ಹೊಂದಿದ್ದು ನಿಶ್ಶಕ್ತಿ, ದೇಹದಲ್ಲಿ ಉರಿ, ಮಾನಸಿಕ ಒತ್ತಡ, ನಿದ್ರಾಹೀನತೆಗಳನ್ನು ಕಡಿಮೆ ಮಾಡಲು ಅತ್ಯಂತ ಸಹಾಯಕ. ಹಾಗಾಗಿ ನಿತ್ಯವೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೂದುಗುಂಬಳದ ಜ್ಯೂಸ್ ಅನ್ನು ಸೇವಿಸಿದರೆ ಅನುಕೂಲವಾಗುತ್ತದೆ.
4. ಮಣ್ಣಿನ ಮಡಕೆಯಲ್ಲಿ ಇರಿಸಿದ, ಪ್ರಾಕೃತಿಕವಾಗಿ ತಂಪಾದ ನೀರನ್ನು ಬೇಸಿಗೆಯಲ್ಲಿ ಸೇವಿಸಬೇಕೆಂದು ಆಯುರ್ವೇದ ಹೇಳುತ್ತದೆ.
5. ಅದ್ಭುತವಾಗಿ ತಂಪು ಗುಣವನ್ನು ಹೊಂದಿರುವ ಗರಿಕೆಯನ್ನು ಒಂದು ಮುಷ್ಟಿಯಷ್ಟು ತಂದು ಹೆಚ್ಚಿ ನೀರಿನ ಜೊತೆ ರುಬ್ಬಿ ಸೋಸಿ ಅದಕ್ಕೆ ಒಂದು ಚಮಚದಷ್ಟು ತೇಯ್ದ ಶ್ರೀಗಂಧವನ್ನು ಹಾಕಿ, ಬೇಕೆನಿಸಿದರೆ ರುಚಿಗೆ ಸ್ವಲ್ಪ ಜೋನಿಬೆಲ್ಲ ಸೇರಿಸಿ ಕುಡಿದರೆ ಕಣ್ಣುರಿ, ತಲೆ ಬಿಸಿ, ಪಾದದ ಉರಿ, ಹೊಟ್ಟೆ ಉರಿ, ಮಾನಸಿಕ ಕಿರಿಕಿರಿಗಳು ಕಡಿಮೆಯಾಗುತ್ತವೆ.
6. 10 ಗ್ರಾಂನಷ್ಟು ಕೊತ್ತಂಬರಿ ಬೀಜವನ್ನು ತೆಗೆದುಕೊಂಡು ಬಿಸಿನೀರಿನಲ್ಲಿ ರಾತ್ರಿ ಇಟ್ಟು ಬೆಳಿಗ್ಗೆ ಆ ನೀರನ್ನು ಸೇವಿಸುವುದರಿಂದ ಬೇಸಿಗೆಯಲ್ಲಿ ಕಾಣುವ ಉರಿ, ಬಾಯಿಹುಣ್ಣು ಮುಂತಾದ ಸಮಸ್ಯೆಗಳು ಹತೋಟಿಗೆ ಬರುತ್ತವೆ.
7. ಖರ್ಜೂರ, ದ್ರಾಕ್ಷಿ, ಪರುಷಕ (ಪಾಲಸ ಹಣ್ಣು) ಗಳನ್ನು ಸಮಪ್ರಮಾಣದಲ್ಲಿ ಸೇರಿಸಿ ನೀರಿನಲ್ಲಿ ಕಲಸಿ ಜ್ಯೂಸ್ನಂತೆ ಮಾಡಿಕೊಂಡು ಅದಕ್ಕೆ ಸ್ವಲ್ಪ ಏಲಕ್ಕಿ ಪುಡಿ ಮತ್ತು ಚಕ್ಕೆ ಪುಡಿಗಳನ್ನು ಹಾಕಿ ಸೇವಿಸಲು ಆಯುರ್ವೇದ ಹೇಳುತ್ತದೆ. ಇದರಿಂದ ಬೇಸಿಗೆಯಲ್ಲಿನ ಉಷ್ಣತೆಯಿಂದ ಉಂಟಾಗುವ ರಕ್ತಸ್ರಾವ, ಕಣ್ಣುರಿ, ಸುಸ್ತು, ಚರ್ಮದಲ್ಲಾಗುವ ಉರಿ – ತುರಿಕೆಗಳು ಉಂಟಾಗುವುದಿಲ್ಲ ಅಥವಾ ಗುಣವಾಗುತ್ತವೆ.
8. ಚೆನ್ನಾಗಿ ಬಲಿತ ಹುಳಿಯಿಲ್ಲದ ಮಾವಿನಹಣ್ಣನ್ನು ಸೇವಿಸುವುದರಿಂದ ಶಕ್ತಿ ವೃದ್ಧಿಯ ಜೊತೆಗೆ ಬೇಸಿಗೆಯಲ್ಲಿ ಉಂಟಾಗುವ ವಾತ-ಪಿತ್ತ ಸಮಸ್ಯೆಗಳು ಹತೋಟಿಗೆ ಬರುತ್ತವೆ.
9. ಲಾವಂಚ ಹಾಕಿ ಕುದಿಸಿದ ನೀರಿಗೆ ಸ್ವಲ್ಪ ಸೊಗದೇ ಬೇರಿನ ಪುಡಿ ಹಾಕಿ ಮಡಿಕೆಯಲ್ಲಿ ಇಟ್ಟ ತಣ್ಣನೆಯ ನೀರನ್ನು ಕುಡಿಯಬೇಕು. ಬೇಸಿಗೆಯಲ್ಲಿ ತಂಪಾಗಿಡುವ, ಶಕ್ತಿ ನೀಡುವ ಮತ್ತು ಉಷ್ಣತೆಯ ಕಾರಣದಿಂದ ಉಂಟಾಗುವ ಹೊಟ್ಟೆ ಉರಿ, ಮಲಬದ್ಧತೆ, ಮಲದ್ವಾರದಲ್ಲಿ ಉರಿ, ಅತಿಯಾಗಿ ಹಸಿವಾದಂತೆನಿಸುವ ಸಮಸ್ಯೆಗಳಲ್ಲಿ ಬೆಣ್ಣೆ ಅತ್ಯಂತ ಉಪಯುಕ್ತವಾದದ್ದು. ಹಾಗಾಗಿ ಬೆಣ್ಣೆಯನ್ನು ಈ ಕಾಲದಲ್ಲಿ ಬಳಸಬಹುದು.
10. ಅನುಲೋಮ ವಿಲೋಮ, ಚಂದ್ರನಾಡಿ, ದೀರ್ಘ ಉಸಿರಾಟ, ಭ್ರಾಮರಿಯಂತಹ ಪ್ರಾಣಾಯಾಮಗಳು ಮತ್ತು ವರುಣ ಮುದ್ರೆ, ಪ್ರಾಣಮುದ್ರೆಯಂತಹ ಮುದ್ರೆಗಳು ಬೇಸಿಗೆಯಲ್ಲಿ ಹೆಚ್ಚು ಉಪಯುಕ್ತ.
ಒಟ್ಟಿನಲ್ಲಿ ನಾವು ಮನಸ್ಸು ಮಾಡಿದರೆ ಉರಿ ಬೇಸಿಗೆಯಲ್ಲೂ ನೈಸರ್ಗಿಕವಾಗಿ ತಂಪಾಗಿರಲು ಸಾಧ್ಯವಿದೆ.