ಬೇಸಿಗೆಯ ಜೀವನಶೈಲಿ ಹೇಗಿರಬೇಕು – ಹಾಲು ಹಾಕದ ಮಿಲ್ಕ್ ಶೇಕ್

ಬೇಸಿಗೆಯ ಜೀವನಶೈಲಿ ಹೇಗಿರಬೇಕು: ಬೇಸಿಗೆ ತಂಪಾಗಿರಲು ಹಾಲು ಹಾಕದ ಮಿಲ್ಕ್ ಶೇಕ್. ಬೇಸಿಗೆ ಬಂತೆಂದರೆ ನಿಶಕ್ತಿ, ನಿದ್ರಾಹೀನತೆ, ಅಸಿಡಿಟಿ, ತಲೆನೋವಿನಂತಹ ತೊಂದರೆಗಳು ತುಂಬಾ ಜನರನ್ನು ಕಾಡುತ್ತವೆ. ಆದರೆ ನಮ್ಮ ದಿನಚರಿಯನ್ನು ಚೆನ್ನಾಗಿ ಇಟ್ಟುಕೊಂಡು ಇದ್ಯಾವ ತೊಂದರೆಗಳೂ ಆಗದಂತೆ ನೋಡಿಕೊಳ್ಳಬಹುದು.

Bēsigeya jeevanaśhaili hēgirabēku - hālu hākada milk śheak

ಉಷಃಪಾನ: ರಾತ್ರಿಯ ಸಮಯದಲ್ಲಿ ಒಂದು ತಂಬಿಗೆ ನೀರನ್ನು ಕುದಿಸಲು ಇಟ್ಟು ಅದು ಕುದಿಯುತ್ತಿದ್ದಂತೆ ಎರಡು ಚಮಚ ಕೊತ್ತಂಬರಿ ಬೀಜದ ಪುಡಿ, ಒಂದು ಚಮಚ ಸೊಗದೆ ಬೇರಿನ ಪುಡಿ ಹಾಕಿ ಬೆಂಕಿಯನ್ನು ಆರಿಸಿ ಮುಚ್ಚಡಬೇಕು. ಬೆಳಿಗ್ಗೆ ಬೇಗ ಎದ್ದು ಒಂದು ಲೋಟದಷ್ಟು ಈ ನೀರನ್ನು ಸೇವಿಸಬೇಕು. ಇದರಿಂದ ಇಡೀ ದಿನ ತಂಪಾಗಿರಲು ಸಹಾಯವಾಗುತ್ತದೆ.
ಅಭ್ಯಂಗ: ಬೇಸಿಗೆಯಲ್ಲಿ ಕಣ್ಣುರಿ, ಗಂಟಲು – ಹೊಟ್ಟೆಗಳಲ್ಲಿ ಉರಿ, ಪಾದ – ಹಸ್ತಗಳಲ್ಲಿ ಬಿಸಿ ಮತ್ತು ಉರಿಯಾಗಲು ಪ್ರಾರಂಭವಾಗುತ್ತದೆಯೆಂದು ಹಲವರು ದೂರಲು ಪ್ರಾರಂಭಿಸುತ್ತಾರೆ. ಅದಕ್ಕೆ ಬೆಳಿಗ್ಗೆ ಬೇಗ ಎದ್ದು ತಂಪುಗುಣ ಹೊಂದಿರುವ ಎಣ್ಣೆಯಾದ ಕೊಬ್ಬರಿ ಎಣ್ಣೆಯಿಂದ ಮಸ್ಸಾಜ್ ಮಾಡಿಕೊಳ್ಳಬೇಕು. ಇದರಿಂದ ಮೈಕೈನೋವು, ಸುಸ್ತು ಬರುವ ಸಾಧ್ಯತೆಗಳು ಕೂಡಾ ಕಡಿಮೆಯಾಗುತ್ತವೆ.
ಪ್ರಾಣಾಯಾಮ / ಮುದ್ರೆ: ಶೀತಲಿ, ಶೀತ್ಕಾರಿ, ಅನುಲೋಮ ವಿಲೋಮ ಮುಂತಾದ ಪ್ರಾಣಾಯಾಮಗಳನ್ನು ಮಾಡುವುದರಿಂದ ತುಂಬಾ ಅನುಕೂಲವಾಗುತ್ತದೆ. ಹೆಬ್ಬೆರಳು ಮತ್ತು ಕಿರುಬೆರಳುಗಳ ತುದಿಗಳನ್ನು ಸೇರಿಸಿ ಮಾಡುವ ವರುಣ ಮುದ್ರೆಯನ್ನು ಮಾಡುವುದರಿಂದ ದೇಹದಲ್ಲಿ ಉಷ್ಣತೆ ತುಂಬಾ ಚೆನ್ನಾಗಿ ಕಡಿಮೆಯಾಗುತ್ತದೆ.
ಆಹಾರ: ಈ ಕಾಲದಲ್ಲಿ ಸಾಧ್ಯವಾದಷ್ಟೂ ತಂಪು ಗುಣ ಹೊಂದಿದ ಆಹಾರದ್ರವ್ಯಗಳು ಮತ್ತು ದ್ರವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಅಂದರೆ ಹಾಲು, ಬೆಣ್ಣೆ, ಬಸಳೆಸೊಪ್ಪು, ಬೂದುಗುಂಬಳಕಾಯಿ, ಹಾಲುಗುಂಬಳಕಾಯಿ, ಒಂದೆಲಗ, ನೆಲ್ಲಿಕಾಯಿ, ಒಣದ್ರಾಕ್ಷಿ, ಮೆಂತೆಸೊಪ್ಪು, ಖರ್ಜೂರ, ಚಿಕ್ಕು (ಸಪೋಟ), ಸೀತಾಫಲ, ಖರಬೂಜದಂತಹ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುತ್ತಾ ಹೋದರೆ ದೇಹ ತಂಪಾಗಿ ಉರಿ, ನಿಶ್ಶಕ್ತಿಯಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ.
ಅಪಥ್ಯ: ಉಪ್ಪು, ಹುಳಿ, ಖಾರಗಳನ್ನು ಸ್ವಲ್ಪ ಕಡಿಮೆ ಸೇವಿಸಬೇಕು. ಬಿಸಿಲಿಗೆ ಮೈಯೊಡ್ಡುವುದು ಒಳ್ಳೆಯದಾದರೂ ಉರಿ ಬಿಸಿಲಿನ ಸೇವನೆಯನ್ನು ಆದಷ್ಟೂ ಕಡಿಮೆ ಮಾಡಬೇಕು. ಮದ್ಯಪಾನ, ಗುಟಖಾ, ಸಿಗರೇಟ್ ಸೇವನೆ ಯಾವ ಕಾಲಕ್ಕೂ ಸರಿಯಲ್ಲ. ಬೇಸಿಗೆಯಲ್ಲಂತೂ ಇವುಗಳಿಂದಾಗಿ ಆರೋಗ್ಯ ಇನ್ನೂ ಹಾಳಾಗುತ್ತದೆ.
ಹಿರಿಕಿರಿಯರಿಗೆ ಟಾನಿಕ್: ಬೇಸಿಗೆಯಲ್ಲಿ ಉಷ್ಣವಾಗುವುದರ ಜೊತೆಗೆ ನಿಶ್ಶಕ್ತಿಯೂ ಕಾಡುತ್ತದೆ. ಹಾಗಾಗಿ, ಖರ್ಜೂರದ ಮಿಲ್ಕ್ ಶೇಕ್ ಮಾಡಿಕೊಂಡು ಅಂದರೆ ಮೆತ್ತನೆಯ, ಕಪ್ಪು ಬಣ್ಣದ ಖರ್ಜೂರಗಳ ಬೀಜ ತೆಗೆದು ಹಾಲಿನ ಜೊತೆ ರುಬ್ಬಿ ಹಸಿವಿರುವ ಸಮಯದಲ್ಲಿ ಅಂದರೆ ಮಧ್ಯಾಹ್ನ 12 ಘಂಟೆಯ ಹೊತ್ತಿಗೆ ಸೇವಿಸಿದರೆ ವೃದ್ಧರು ಮತ್ತು ಚಿಕ್ಕಮಕ್ಕಳಿಗೆ ತುಂಬಾ ಅನುಕೂಲವಾಗುತ್ತದೆ.
ಹೊಟ್ಟೆ ಉರಿಗೆ ಕಷಾಯ: ಒಂದು ಚಮಚದಷ್ಟು ಜೇಷ್ಠಮಧುವಿನ ಪುಡಿಗೆ ಒಂದು ಲೋಟ ಹಾಲು ಮತ್ತು ಮೂರು ಲೋಟ ನೀರು ಹಾಕಿ ಸಣ್ಣ ಉರಿಯಲ್ಲಿ ಒಂದು ಲೋಟಕ್ಕೆ ಬತ್ತಿಸಿ ಸೋಸಿ ಬೆಳಿಗ್ಗೆ ಅಥವಾ ಮಧ್ಯಾಹ್ನ ಆಹಾರ ಸೇವಿಸುವ ಒಂದು ಘಂಟೆ ಮೊದಲು ಸೇವಿಸಿದರೆ ಜೇಷ್ಠಮಧುವಿನ ತಂಪುಗುಣದ ಮತ್ತು ಗಾಯ ಗುಣಪಡಿಸುವ ಗುಣಗಳ ಕಾರಣದಿಂದ ಹೊಟ್ಟೆ ಉರಿ, ಅಲ್ಸರ್, ನಿದ್ರಾಹೀನತೆ, ಗಂಟಲು ಉರಿಗಳಲ್ಲಿ ತುಂಬಾ ಅನುಕೂಲವಾಗುತ್ತದೆ.
ತ್ವಚೆಯ ರಕ್ಷಣೆಗೆ ಜ್ಯೂಸ್: ಚರ್ಮವೆಲ್ಲಾ ಉರಿಯಾದಂತೆ, ಸುಟ್ಟಗಾಯದಂತೆ ಭಾಸವಾಗುತ್ತದೆ ಎಂಬುದು ಹಲವರ ಸಮಸ್ಯೆ. ಅದಕ್ಕೆ ಗರಿಕೆ ಹುಲ್ಲಿನ ಜ್ಯೂಸ್ ಮಾಡಿಕೊಂಡು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸುವುದು ಅತ್ಯಂತ ಸಹಾಯಕ. ಇದರಿಂದ ಚರ್ಮದ ಉರಿಯಷ್ಟೇ ಅಲ್ಲದೇ ಬೇಸಿಗೆಯಲ್ಲಿ ಸಹಜವಾಗಿ ಕಾಡುವ ಚರ್ಮರೋಗಗಳು, ತ್ವಚೆ ಕಪ್ಪಾಗುವ ಸಮಸ್ಯೆಗಳು ಕಡಿಮೆಯಾಗುತ್ತವೆ.
ಬೆಳದಿಂಗಳ ಸೇವನೆ: ರಾತ್ರಿ ಮಲಗುವ ಮೊದಲು ಸ್ವಲ್ಪ ಹೊತ್ತು ಮನೆಮಂದಿಯೆಲ್ಲಾ ಕುಳಿತು ಬೆಳದಿಂಗಳ ಸೇವನೆ ಮಾಡಬೇಕು. ಇದರಿಂದ ದೇಹ ಮತ್ತು ಮನಸ್ಸು ತಂಪಾಗಿ ಚೆನ್ನಾಗಿ ನಿದ್ರೆ ಬರಲು ಸಹಾಯವಾಗುತ್ತದೆ.
ನಿದ್ರೆ: ರಾತ್ರಿ ಮಲಗುವ ಮೊದಲು ಕೊಬ್ಬರಿ ಎಣ್ಣೆಯನ್ನು ನೆತ್ತಿ ಮತ್ತು ಪಾದಗಳಿಗೆ ಹಚ್ಚಿ ಮಲಗಬೇಕು. ರಾತ್ರಿ ಬೇಗ ಮಲಗಿ ನಿದ್ರೆ ಮಾಡುವುದು ಒಳ್ಳೆಯದು. ಕೃಶದೇಹಿಗಳು, ಚಿಕ್ಕ ಮಕ್ಕಳು, ಹಿರಿಯರು, ದೈಹಿಕ ಶ್ರಮ ತುಂಬಾ ಹೆಚ್ಚಿರುವವರು ಮತ್ತು ರಾತ್ರಿ ಸರಿಯಾಗಿ ನಿದ್ದ್ರೆಯಾಗದವರು ಬೇಸಿಗೆಯಲ್ಲಿ ಹಗಲುನಿದ್ದೆ ಮಾಡಬಹುದು.
ಚಿಕಿತ್ಸೆ: ಮಣ್ಣಿನ ಚಿಕಿತ್ಸೆ, ನೀರಿನ ಚಿಕಿತ್ಸೆ, ಫಲೋಪವಾಸದಂತಹ ಪ್ರಕೃತಿ ಚಿಕಿತ್ಸೆಗಳನ್ನು ಮತ್ತು ವಮನ, ವಿರೇಚನದಂತಹ ಪಂಚಕರ್ಮ ಚಿಕಿತ್ಸೆಗಳನ್ನು ತೆಗೆದೆಕೊಳ್ಳಲು ಇದು ಅತ್ಯಂತ ಸೂಕ್ತ ಸಮಯ. ಬೇಸಿಗೆ ರಜೆಯಲ್ಲಿ ಈ ಚಿಕಿತ್ಸೆಗಳ ಮೂಲಕ ದೇಹ ಶುದ್ಧಿ ಮಾಡಿಕೊಂಡರೆ ಇಡೀ ವರ್ಷ ಉಲ್ಲಾಸದಿಂದಿರಲು ಸಾಧ್ಯ.

Dr Venkatramana-Hegde

ಡಾ ವೆಂಕಟ್ರಮಣ ಹೆಗಡೆ
ವೇದ ವೆಲ್ನೆಸ್ ಸೆಂಟರ್, ನಿಸರ್ಗಮನೆ, ಶಿರಸಿ, ಉ.ಕ.
Ph:9448729434, 9731460353
www.vedawellnesscenter.com www.nisargamane.com
email: drvhegde@yahoo.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!