ಬೇಸಿಗೆ ಬಿಸಿಲಿನ ತಾಪ ಹಾಗೂ ದೇಹ ಶಾಂತ ಮಾಡುವ ಪಾನಕ. ಆ್ಯಕ್ಟರ್‍ನ ಲೇಖನಿಯಿಂದ ಕೋಸಂಬರಿ ಹಾಗೂ ಪಚಡಿಗಳು.
ಏಪ್ರಿಲ್ 2 ರಂದು ಶ್ರೀರಾಮ ನವಮಿ. ಈ ಕಾಲದಲ್ಲಿ ಬೇಸಿಗೆಯ ಬಿಸಿಲಿನ ತಾಪದಿಂದ ರಕ್ಷಣೆಗಾಗಿ ಬೇಲದ ಹಣ್ಣಿನ ಪಾನಕ ಕುಡಿಯಬೇಕು. ಮೈಯೊಳಗಿನ ನೀರು ಬತ್ತಿ, ನಿರ್ಜಲೀಕರಣವಾಗದಂತೆ ಈ ಪಾನಕ ಅಥವಾ ನಿಂಬೆಹಣ್ಣಿನ ಪಾನಕ ನಮ್ಮನ್ನು ಕಾಯುತ್ತದೆ.
ಬೇಸಿಗೆ – ಶಾಂತ ಮಾಡುವ ಪಾನಕ
1. ಬೇಲದ ಹಣ್ಣಿನ ಪಾನಕ
ಬೇಕಾದ ಪದಾರ್ಥಗಳು:- ಒಂದು ಬೇಲದ ಹಣ್ಣು, 4 ಟೇಬಲ್ ಚಮಚ ಬೆಲ್ಲದ ಪುಡಿ, 1/4 ಚಮಚ ಮೆಣಸು ಹಾಗೂ 1/4 ಚಮಚ ಏಲಕ್ಕಿ ಪುಡಿ
1 ಬೇಲದ ಹಣ್ಣು ತೆಗೆದುಕೊಂಡು ಜೋರಾಗಿ ಹೊಡೆದು ಒಡೆದು ಇಟ್ಟುಕೊಳ್ಳಿ. ಅದನ್ನು 4 ಕಪ್ ನೀರಿನಲ್ಲಿ ಸೇರಿಸಿ ಚೆನ್ನಾಗಿ ಹಿಸುಕಿರಿ. ಜರಡಿಯಲ್ಲಿ ಸೋಸಿ ನಂತರ ಪುಡಿ ಮಾಡಿದ ಬೆಲ್ಲ, ಪುಡಿ ಮಾಡಿದ ಕಾಳುಮೆಣಸು ಮತ್ತು ಏಲಕ್ಕಿ ಪುಡಿ ಹಾಕಿ ಬೆರಸಿದರೆ ಕುಡಿಯಲು ಸಿದ್ಧ ಬೇಲದ ಹಣ್ಣಿನ ಪಾನಕ.
2. ನೀರು ಮಜ್ಜಿಗೆ :- ಬಿಸಿಲಿನ ತಾಪಕ್ಕೆ ಜೀರ್ಣತೆಗೆ ಇದು ಉತ್ತಮ. ಗಟ್ಟಿ ಮೊಸರಿಗೆ, ನಮಗೆ ಬೇಕಾದ ದಪ್ಪ ಅಥವಾ ತೆಳುತನಕ್ಕೆ ಸರಿಯಾಗಿ ತಣ್ಣೀರು ಬೆರೆಸಿರಿ. ಹದವಾಗಿ ನಿಮ್ಮ ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. ಚೂರು ಚೂರಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ತುರಿದ ಹಸಿಶುಂಠಿಯನ್ನು ಜಜ್ಜಿ ಸೇರಿಸಿರಿ.
3. ಹೆಸರುಬೇಳೆ ಕೋಸಂಬರಿ:- 2ರಿಂದ 3 ಗಂಟೆ ಹೆಸರುಬೇಳೆ ನೀರಿನಲ್ಲಿ ನೆನಸಿಡಿ. ನಂತರ ನೀರು ಬಸಿಯಿರಿ.ಹೆಸರುಬೇಳೆಗೆ ಹದವಾಗಿ ಉಪ್ಪು ಬೆರಸಿ. ಇಂಗು, ಕೊಂಚ ಅರಿಶಿನಪುಡಿ, ಸಾಸಿವೆ ಹಾಕಿ ಒಗ್ಗರಣೆ ಮಾಡಿ. ಚಟಪಟ ಎಂದಾಗ ಹೆಸರುಬೇಳೆ ಮೇಲೆ ಹಾಕಿ. ತುರಿದ ತೆಂಗಿನಕಾಯಿ ಹಾಕಿ. ಲಿಂಬೆಹಣ್ಣಿನ ರಸ ಹಿಂಡಿ ಚೆನ್ನಾಗಿ ಕಲಸಿ ಇದಕ್ಕೆ ಕಹಿ ಇರದ ಎಳೆಸೌತೆಕಾಯಿಯ ಚಿಕ್ಕ ಚಿಕ್ಕ ಚೂರುಗಳನ್ನು ಹಾಕಿರಿ.ಇದಕ್ಕೆ ಸೌತೆಕಾಯಿ ಚೂರು ಬದಲು ಗಜ್ಜರಿ ತುರಿ ಹಾಕಿದರೆ ಪ್ರತಿದಿನದ ಸಲಾಡ್ ಆಗುತ್ತದೆ. ಇದೇ ರೀತಿ ಮೂಲಂಗಿ ತುರಿ ಹಾಕಿ ಸಲಾಡ್ ಮಾಡಿ. ಮಧುಮೇಹವಿದ್ದವರು ನವಿಲುಕೋಸಿನ ತುರಿ ಹಾಕಿ ಸಲಾಡ್ ಮಾಡಿ
4. ಕಡಲೇಬೇಳೆ ಕೊಸಂಬರಿ:- 2ರಿಂದ 3 ಗಂಟೆ ಕಡಲೇಬೇಳೆ ನೀರಿನಲ್ಲಿ ನೆನಸಿಡಿ. ನಂತರ ನೀರು ಬಸಿಯಿರಿ. ಕಡಲೇಬೇಳೆಗೆ ಹದವಾಗಿ ಉಪ್ಪು ಬೆರಸಿ. ಇಂಗು, ಕೊಂಚ ಅರಿಶಿನಪುಡಿ, ಸಾಸಿವೆ ಹಾಕಿ ಒಗ್ಗರಣೆ ಮಾಡಿ. ಚಟಪಟ ಎಂದಾಗ ಕಡಲೇಬೇಳೆ É ಮೇಲೆ ಹಾಕಿ. ತುರಿದ ತೆಂಗಿನಕಾಯಿ ಹಾಕಿ. ಲಿಂಬೆಹಣ್ಣಿನ ರಸ ಹಿಂಡಿ ಚೆನ್ನಾಗಿ ಕಲಸಿ ಇದಕ್ಕೆ ದಾಳಿಂಬೆ ಹಣ್ಣಿನ ಬೀಜಗಳನ್ನು ಹಾಕಿರಿ.
5. ದೊಣ್ಣ ಮೆಣಸಿನಕಾಯಿ ಪಚಡಿ:- ದೊಣ್ಣ ಮೆಣಸಿನಕಾಯಿ ಚೂರುಗಳನ್ನು ಎಣ್ಣೆ ಒಗ್ಗರಣೆಯಲಿ ಬಾಡಿಸಿ. ಒಗ್ಗರಣೆಗೆ ಎಣ್ಣೆ, ಸಾಸಿವೆ, ಇಂಗು ಹಾಕಿ ಒಗ್ಗರಣೆ ಚಟ ಚಟ ಎನ್ನಲಿ. ನಂತರ ಇದಕ್ಕೆ ಚೂರು ಚೂರು ಮಾಡಿದ ಕೊತ್ತಂಬರಿ ಸೊಪ್ಪು ಹಾಕಿ, ಮೊಸರು ಹಾಕಿದರೆ ಅದೇ ಪಚಡಿಯಾಗುತ್ತದೆ.
6. ಐಮೋಟೋ ಈರುಳ್ಳಿ ಪಚಡಿ:- ಟಮೋಟೋ ಹಾಗೂ ಈರುಳ್ಳಿ ಎಣ್ಣೆ ಒಗ್ಗರಣೆಯಲ್ಲಿ ಚೆನ್ನಾಗಿ ಬಾಡಿಸಿ ಅಥವಾ ಹಸಿಯಾಗಿ ಒಗ್ಗರಣೆಗೆ ಹಾಕಿ. ಮೊಸರು ಬೆರಸಿದರೆ ಇದು ಉತ್ತಮ ಪಚಡಿ ಆಗುತ್ತದೆ ಇದು ಹಾಗೆಯೇ ತಿನ್ನಲು ನಂಚಿಕೊಳ್ಳಲು ಚೆನ್ನ. ಅದರಲ್ಲೂ ಅನ್ನ ಕಲಸಿಕೊಂಡು.
ಎನ್.ವ್ಹಿ ರಮೇಶ್, ಮೈಸೂರು
ಮೊ:-9845565238