ಬೆಲ್ಸ್‍ಪಾಲ್ಸಿ: ಮುಖದ ಪಾರ್ಶ್ವವಾಯು

 
ಡಾ. ಸಂತೋಷ ನೀ. ಬೆಳವಡಿ
ಡಾ. ಪ್ರಶಾಂತ ಎ.ಎಸ್.
ಡಿ.ಜಿ.ಎಂ.ಆಯುರ್ವೇದ ಮೆಡಿಕಲ್ ಕಾಲೇಜ್, ಮತ್ತು ಆಸ್ಪತ್ರೆ,
ಸ್ನಾತಕೋತ್ತರ ಸಂಶೋಧನಾ ಕೇಂದ್ರ, ಗದಗ-03
ಮೊ.: 9886916367
ಇತ್ತೀಚಿನ ದಿನಮಾನಗಳಲ್ಲಿ ಜನರ ಆಹಾರ, ವಿಹಾರ, ಆಚಾರಗಳಲ್ಲಿ ಮತ್ತು ಕೆಲಸದ ಒತ್ತಡದಿಂದಾಗಿ, ವ್ಯಾಯಾಮದ ಅಭಾವ, ಮಾನಸಿಕ ಖಿನ್ನತೆ, ಅತಿ ವಿಶ್ರಾಂತಿ ಅಥವಾ ವಿಶ್ರಾಂತಿ ರಹಿತ ಬದುಕಿನಿಂದ ಅನೇಕ ರೋಗಗಳಿಂದ ಬಳಲುತ್ತಿದ್ದಾರೆ, ಇವುಗಳಲ್ಲಿ ಮುಖದ ಪಾರ್ಶ್ವವಾಯುರೋಗವೂ (ಅರ್ಧಿತ)ಒಂದು.
ಮುಖದ ಪಾರ್ಶ್ವವಾಯು, ವಾತದೋಷ ಪ್ರಕೋಪಗೊಳ್ಳುವುದರಿಂದ ಮುಖದ ಅರ್ಧಭಾಗ ಕ್ರೀಯಾಹೀನಗೊಳ್ಳುವುದು.
80 ಪ್ರಕಾರದ ವಾತವ್ಯಾಧಿಗಳಲ್ಲಿ ಅರ್ದಿತರೋಗವು ಒಂದು ಪ್ರಧಾನ ವ್ಯಾಧಿಯಾಗಿದೆ. ಇದು ಮಧ್ಯಮರೋಗ ಮಾರ್ಗದ ರೋಗವಾಗಿದ್ದು ಎಲ್ಲವಯಸ್ಸಿನವರಲ್ಲಿ ಮತ್ತು ಉಭಯ ಲಿಂಗಗಳಲ್ಲಿ ಕಾಣಿಸಿಕೊಳ್ಳುವಂತಹದ್ದಾಗಿದೆ.
ಏಳನೇಯ ಕ್ರೇನಿಯಲ್‍ನರ್ವ್ ಅಂದರೆ ಫೇಸಿಯಲ್ ನರ್ವ್ ವಿಕೃತಿಗೊಂಡು ಇದಕ್ಕೆ ಸಂಬಧಿಸಿದಂತೆ ಲಕ್ಷಣಗಳು ರೋಗಿಯಲ್ಲಿ ವ್ಯಕ್ತವಾಗುವವು. ಮುಖದ ಅರ್ಧಭಾಗ ಅಥವಾ ಕೆಲವೊಮ್ಮೆ ಶರೀರದ ಅರ್ಧಭಾಗವುಕೂಡಾ ವಿಕೃತಿಗೊಂಡಿರುವುದು ಅಥವಾ ಕ್ರೀಯಾಹೀನವಾಗುವುದನ್ನು ಮುಖದ ಪಾರ್ಶ್ವವಾತ ಎಂದು ಕರೆಯಲಾಗುವುದು.
ಇತರೆ ಹೆಸರುಗಳು :
ಇದನ್ನು “ಎಕಾಯಾಮ” ಅರ್ದಿತವಾತ, ಫೇಸಿಯಲ್ ಪ್ಯಾರಲೈಸಿಸ್, ಬೆಲ್ಸ್‍ಪ್ಯಾಲ್ಸಿ ಎಂಬ ಹೆಸರಿನಿಂದ ಕೂಡಾ ಕರೆಯಲಾಗುವುದು. ಮುಖದ ಒಂದು ಪಾರ್ಶ್ವದಲ್ಲಿ (ಎಡಭಾಗ ಅಥವಾ ಬಲಭಾಗ) ನೋವು ಮತ್ತು ವಿಕೃತಿಯನ್ನುಂಟು ಮಾಡುವದನ್ನು ಎಕಾಯಾಮ ಎಂದು ಕರೆಯಲಾಗುವುದು. ಸಾಮಾನ್ಯವಾಗಿ ಮುಖದ ಒಂದು ಭಾಗವನ್ನು ಒಂದು ಭಾಗಕ್ಕೆ ಹೂರಳಿಸಿ ವಿಕೃತಿ ಅಥವಾ ಕ್ರೀಯಾಹೀನತೆ ಗೊಳಿಸುವದೆಂಬರ್ಥವನ್ನು ಕೊಡುವುದು.

ಮುಖದ ಪಾರ್ಶ್ವವಾತಕ್ಕೆ ಕಾರಣಗಳು :
  • ವಾತವನ್ನು ಹೆಚ್ಚಿಸುವಂಥ ಆಹಾರ ಪದಾರ್ಥಗಳ ಅಧಿಕ ಸೇವನೆಯಿಂದ.
  • ಶಸ್ತ್ರ, ದಂಡದಿಂದ ಹೊಡೆತ ಬೀಳುವುದರಿಂದ.
  • ತಲೆಗೆ ಆಘಾತವಾಗುವುದರಿಂದ.
  • ಅಧಿಕ ಮದ್ಯಪಾನ ಸೇವನೆಯಿಂದ ಮತ್ತು ಅಧಿಕ ವ್ಯಾಯಮದಿಂದ.
  • ಸೀನುವುದು, ಆಕಳಿಕೆಯನ್ನು ಮತ್ತು ಕಣ್ಣೀರನ್ನು ತಡೆಯುವುದರಿಂದ.
  • ರಕ್ತಸ್ರಾವವಾಗುವುದರಿಂದ.
  • ಆಧಿಕ ಉಪವಾಸದಿಂದ, ಅಧಿಕ ತಂಪಾದನೀರು ಮತ್ತು ಇತರ ಆಹಾರ ಪದಾರ್ಥ ಸೇವಿಸುವುದರಿಂದ, ಚಳಿಗಾಲದ ತಂಪನೆಗಾಳಿ ಸೇವಿಸುವದರಿಂದ.
  • ಮನಸ್ಸಿಗೆ ಸಂಬಂಧಿಸಿದ ಕಾರಣಗಳಾದ ಅಧಿಕ ಚಿಂತೆ ಮಾಡುವುದು, ಭಯಪಡುವುದು, ಶೋಕ ಮತ್ತು ಉದ್ವೇಗ.
ಇವುಗಳ ಜೊತೆಗೆ ಹರ್ಪಿಸ್ ಸಿಂಪ್ಲೆಕ್ಷ ವೈರಸ್ಸಿನಿಂದ, ಒಟಾಟಿಸ್ ಮಿಡಿಯಾ, 7- 9 ತಿಂಗಳ ಗರ್ಭಾವಸ್ಥೆ ಇವುಗಳು ಅರ್ದಿತರೋಗಕ್ಕೆ ಸಹಾಯಕ ಕಾರಣಗಳಾಗಿವೆ.
ಮುಖದ ಪಾರ್ಶ್ವವಾತ ಬೇಧಗಳು
ವಾತಜ: ಅಧಿಕಜೊಲ್ಲು ಸುರಿಯುವುದು, ನಡುಕಬರುವುದು, ಬಾವು, ನೋವುಕಾಣಿಸಿಕೊಳ್ಳುವುದು ಮತ್ತು ಮಾತುಗಳು ಕಷ್ಠದಿಂದ ಹೊರಡುವವು.
ಪಿತ್ತಜ: ಜ್ವರ, ಅಧಿಕ ನೀರಡಿಕೆ, ಮೂರ್ಚೆಹೋಗುವುದು ಶರೀರದಲ್ಲಿಉರಿ ಮತ್ತುಶರೀರ ಕ್ಷಯಿಸುವುದು.
ಕಫಜ: ಶಿರಸ್ಸು, ಗಲ್ಲ, ಕತ್ತುಗಳಲ್ಲಿ ಬಾವುಕಾಣಿಸಿಕೊಳ್ಳುವುದು, ಉಸಿರಾಟಕ್ಕೆ ತೊಂದರೆಯಾಗುವುದು.
ಮಿಶ್ರಜ: ವಾತ, ಪಿತ್ತ ಮತ್ತು ಕಫಮಿಶ್ರಿತ ಲಕ್ಷಣಗಳು ಕಂಡುಬರುವುದು.
ಮುಖದ ಪಾರ್ಶ್ವವಾಯುರೋಗ ಉಂಟಾಗುವ ಕ್ರಮ :
ಈ ಪೂರ್ವದಲ್ಲಿ ಹೇಳಿದಂತಹ ಕಾರಣಗಳನ್ನು ಪಾಲಿಸುವದರಿಂದ ಶರೀರದಲ್ಲಿ ವಾತಪ್ರಕೋಪಗೊಂಡು ಸರ್ವ ಶರೀರದಲ್ಲಿ ಸಂಚರಿಸುತ್ತಾ ಸ್ರೋತಸನ್ನು ವಿಕೃತಿಗೋಳಿಸಿ ತಲೆಯಲ್ಲಿ ಆಶ್ರಯ ಪಡೆದು ಮೂಗು, ತುಟಿ, ಗಲ್ಲ, ಹಣೆ, ನೇತ್ರ ಅದಿಗಳನ್ನು ವಕ್ರಗೊಳಿಸುವುದು ಮತ್ತು ಅವುಗಳ ಕಾರ್ಯಕ್ಷಮತೆಯನ್ನು ವಿಕೃತಿಗೂಳಿಸಿ ಅರ್ದಿತರೋಗವನ್ನುಂಟುಮಾಡುವುದು.
ಪೂರ್ವದಲ್ಲಿಕಾಣುವ ಸಾಮಾನ್ಯ ಲಕ್ಷಣಗಳು :
  • ಶರೀರದಲ್ಲಿ ರೋಮಾಂಚನವಾಗುವುದು
  • ನಡುಕ ಅಥವಾ ಕಂಪನ ಉಂಟುಮಾಡುವುದು
  • ಕಣ್ಣು ಮುಚ್ಚಲಿಕ್ಕೆತೊಂದರೆಯಾಗುವುದು
  • ಚರ್ಮದಲ್ಲಿ ಸುಪ್ತತೆ ಅಥವಾ ಚುಚ್ಚಿದಂತೆ ನೋವಾಗುವುದು
  • ಕತ್ತಿನಭಾಗದಲ್ಲಿ ಮತ್ತು ದವಡೆ ಭಾಗದಲ್ಲಿ ಹಿಡಿದುಕೊಂಡತಾಗುವುದು
ಅರ್ಧಿತರೋಗದ ನಿಶ್ಚಿತ ಲಕ್ಷಣಗಳು:
ಮುಖದ ಪಾರ್ಶ್ವವಾಯುರೋಗ ಶಿರಸ್ಸಿನಲ್ಲಿನ ಪಂಚೇಂದ್ರಿಯ ಅವಯವಗಳನಾಧರಿಸಿ ಅನೇಕ ಲಕ್ಷಣಗಳು ಉಂಟಾಗುವವು ಅವುಗಳನ್ನು ಈ ಕೆಳಗಿನಂತೆ ತಿಳಿಯಕೂಳ್ಳಬಹುದು-
ತಲೆ ಮತ್ತು ಮುಖದಲ್ಲಿ ಉಂಟಾಗುವ ಲಕ್ಷಣಗಳು:
  • ತೊಂದರೆಗೊಳಗಾದ ಮುಖದ ಅರ್ಧಭಾಗ ವಕ್ರವಾಗುವುದು ಮತ್ತು ಮುಖದ ಮಾಂಸಪೇಶಿಗಳು ಸಂಕೋಚಗೂಳ್ಳುವವು ಜೊತೆಗೆ ಹಣೆಭಾಗದ ಚರ್ಮದ ನಿರಿಗೆಗಳು ಬೀಳದಿರುವುದು. ಕೆಲವೂಮ್ಮೆ ತಲೆನೋವು ಬರುವುದು.
  • ಮಾತುಗಳು ನಿಲ್ಲುವುದು ಅಥವಾ ತೊದಲುಮಾತು ಅಥವಾ ಅಸ್ಪಷ್ಟಮಾತುಗಳು
  • ನಾಲಿಗೆ ವಕ್ರವಾಗುವುದು, ಹಲ್ಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು
  • ಮುಖದ ಭಾಗ ಒಂದು ಪಾರ್ಶ್ವಕ್ಕೆ ತಿರುಗುವುದು ಅಥವಾ ವಕ್ರವಾಗುವುದು
  • ರಸದ ಜ್ಞಾನಗೊತ್ತಾಗದಿರುವುದು
  • ಬಾಯಲ್ಲಿ ಅಧಿಕವಾಗಿಜೊಲ್ಲು ಸುರಿವುದು
  • ಗಲ್ಲ ಮತ್ತು ಮುಖದಲ್ಲಿ ನೋವುಕಾಣಿಸಿಕೊಳ್ಳುವುದು ಮತ್ತು ಮುಖದಿಂದ ಆಹಾರ-ಪಧಾರ್ಥ ಹೊರಬರುವುದು
ನೇತ್ರದಲ್ಲಿ ಉಂಟಾಗುವ ಲಕ್ಷಣಗಳು:
  • ವಿಕೃತಿಗೊಂಡ ಕಣ್ಣಿನಲ್ಲಿ ಕಣ್ಣೀರು ಸುರಿಯುವುದು, ಕಣ್ಣು ಮುಚ್ಚಲಿಕೆ ಆಗದಿರುವುದು
  • ಕಣ್ಣಿನಲ್ಲಿ ನೋವುಕಾಣಿಸಿಕೊಳ್ಳುವುದು, ಹುಬ್ಬು ವಕ್ರವಾಗುವುದು
ಮೂಗಿಗೆ ಸಂಬಂಧಿಸಿ ಉಂಟಾಗುವ ಲಕ್ಷಣಗಳು:
  • ಮೂಗು ವಕ್ರವಾಗುವುದು, ಮೂಗಿನ ಮೇಲೆ ನಿರಿಗೆಗಳು ಬೀಳದಿರುವುದು ಮತ್ತು ಮೂಗಿಗೆ ವಾಸನೆ ಗೊತ್ತಾಗದಿರುವುದು.
ಕಿವಿಗೆ ಸಂಬಂಧಿಸಿ ಉಂಟಾಗುವ ಲಕ್ಷಣಗಳು: ಕಿವಿಯಲ್ಲಿ ಒಂದು ವಿಧವಾದ ಶಬ್ಧಬರುವುದು, ಕಿವಿ ಕೇಳದಿರುವುದು ಮತ್ತು ಕಿವಿಯಲ್ಲಿ ನೋವು ಕಾಣಿಸಿಕೊಳ್ಳುವುದು. ಇವುಗಳ ಜೊತೆಗೆ ಜ್ವರಬರುವುದು, ಸುಸ್ತಾಗುವುದು, ಕತ್ತಿನಲ್ಲಿ ಬಾವುಬರುವುದು, ಧ್ವನಿಯಲ್ಲಿ ಬದಲಾವಣೆಯಾಗುವುದು ಮತ್ತು ತಲೆಯಲ್ಲಿ ನಡುಕವುಂಟಾಗುವುದು.
ನಿಖರವಾದ ಲಕ್ಷಣಗಳು – ವಾತಾವ್ಯಾಧಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಬಲಿಷ್ಠ ಲಕ್ಷಣಗಳು ಪಾರ್ಶ್ವವಾಯು, ನಾಲಿಗೆ ಬಿರಸಾಗುವುದು, ಕತ್ತು ಹಿಡಿದುಕೊಳ್ಳುವುದು, ಮಾಂಸಕ್ಷಯವಾಗುವುದು, ಜ್ವರ, ಬೇಧಿ, ಬಿಕ್ಕಳಿಕೆ, ನೀರಡಿಕೆ, ವಾಂತಿಯಾಗುವುದು ಮತ್ತು ಕೊನೆಗೆ ಪ್ರಾಣನಾಶವಾಗುವುದು.
ಚಿಕಿತ್ಸೆ: ಅಭ್ಯಂತರಸ್ನೇಹ: ಈ ಕೆಳಗೆ ತಿಳಿಸಿರುವ ವಿವಿಧ ಘೃತಗಳನ್ನು ಮುಖದ ಪಾರ್ಶ್ವವಾಯುರೋಗದಲ್ಲಿ ಪ್ರಯೋಗಿಸಲಾಗುವುದು
ಮಯೂರಘೃತ, ಮಹಾ ಮಯೂರಘೃತ, ತಿಲ್ವಕಘೃತ, ಬಿಂಧುಕಘೃತ, ಶತಾವರಿಘೃತ, ಚಾಗಲಾದ್ಯಘೃತ, ಸರ್ವಯಾಮಯಾಂತಕ ಘೃತ ಇತ್ಯಾದಿ.
ಬಾಹ್ಯಸ್ನೇಹ: ಇಲ್ಲಿ ತಿಳಿಸಿರುವಂತಹ ವಿವಿಧ ಔಷಧಗಳಿಂದ ತಯಾರಿಸಿದ ತೈಲಗಳಿಂದ ಮುಖ ಮತ್ತು ಗ್ರೀವಾ ಭಾಗಕ್ಕೆ ಅಭ್ಯಂಗ ಮಾಡಲಾಗುವುದು. ಕ್ಷೀರಬಲಾ ತೈಲ, ಧನ್ವಂತರ ತೈಲ, ಮಹಾನಾರಾಯಣ ತೈಲ ಇತ್ಯಾದಿ.
ಸ್ವೇದಚಿಕಿತ್ಸೆ: ಇಲ್ಲಿ ತಿಳಿಸಿರುವಂತಹ ವಿವಿಧ ಔಷಧಗಳಿಂದ ನಾಡೀಸ್ವೇದ, ಉಪನಾಹ ಸ್ವೇದ, ಕ್ಷೀರಧೂಮ, ಫನಸಪತ್ರ ಸ್ವೇದ, ಕುಕ್ಕುಟಾಂಡ ಸ್ವೇದ ಇತ್ಯಾದಿ.
ನಸ್ಯಚಿಕಿತ್ಸೆ: ಇಲ್ಲಿ ತಿಳಿಸಿರುವಂತಹ ವಿವಿಧ ಔಷಧಗಳಿಂದ ತಯಾರಿಸಿದ ತೈಲಗಳಿಂದ ಮೂಗಿನ ಮುಖಾಂತರ ಹಾಕಾಲಾಗುವುದು. ಕ್ಷೀರಬಲಾ ತೈಲ 101, ಧನ್ವಂತರತೈಲ 101, ಅಣು ತೈಲ, ಷಡ್ಢ:ಬಿಂದು ತೈಲ ಇತ್ಯಾದಿ.
ಮಸ್ತಿಷ್ಕ ಚಿಕಿತ್ಸೆ: ತಲೆಯ ಮೇಲೆ ವಿವಿಧ ಚಿಕಿತ್ಸಾ ಕ್ರಮಗಳು ಶಿರೋ ಅಭ್ಯಂಗ, ಶಿರೋಸೇಕ, ಶಿರೋಪಿಚು ಮತ್ತು ಶಿರೋಬಸ್ತಿ ಚಿಕಿತ್ಸೆಗಳನ್ನು ಮಾಡಲಾಗುವುದು.
ವಿವಿಧ ಶಮನ ಔಷಧಿಗಳ ಪ್ರಯೋಗ: ಕ್ವಾಥಗಳು/ಆಸವ ಅರಿಷ್ಠಗಳು: ದಶಮೂಲ ಕ್ವಾಥ, ಮಹಾರಾಸ್ನಾದಿ ಕ್ವಾಥ, ಮಂಜಿಷ್ಥಾದಿ ಕ್ವಾಥ, ಮಹಾ ಮಂಜಿಷ್ಥಾದಿ ಕ್ವಾಥ, ಅರ್ಧಿತವಾತಹರಕಷಾಯ ಇತ್ಯಾದಿ.
ರಸಯೋಗಗಳು: ಎಕಾಂಗವೀರರಸ, ವಾತಾಗಂಜಾಕುಂಶರಸ, ಸಮೀರಪನ್ನಗರಸ, ರಸರಾಜರಸ, ಅರ್ದಿತಹರ ರಸ ಇತ್ಯಾದಿ.
ಫಿಜಿಯೊಥೆರಪಿ ಚಿಕಿತ್ಸೆ: ವಿವಿಧ ವ್ಯಾಯಾಮ ಚಿಕಿತ್ಸಾ ಕ್ರಮಗಳಿಂದ ಮುಖದ ಮಾಂಸಪೇಶಿಗಳಿಗೆ, ನರನಾಡಿಗಳಿಗೆ ಶಕ್ತಿಯನ್ನು ಹೆಚ್ಚಿಸುವಂಥಹ ಫಿಜಿಯೊಥೇರಪಿ ಚಿಕಿತ್ಸೆ ಮಾಡುವುದೂ ಸೂಕ್ತ.
ತೆಗೆದುಕೊಳ್ಳಬೇಕಾದ ಆಹಾರ ಮತ್ತು ವಿಹಾರಗಳು:
ಪಾಲಿಸಬೇಕಾದವುಗಳು: ಮಧುರ, ಆಮ್ಲ, ಲವಣರಸ ಪ್ರಧಾನ ಆಹಾರ, ಉಷ್ಣಜಲ, ಹಾಲು, ಆಸವ ಅರಿಷ್ಟ, ಪಟೋಲ, ದಾಡಿಮ, ಲಶುಣ, ಶುಂಠಿ, ಉದ್ದು, ಮಾಂಸರಸ, ಬೆಳುಳ್ಳಿ, ಹಾಲು, ತುಪ್ಪ, ಜೇನುತುಪ್ಪ, ಅಭ್ಯಂಗ, ಸ್ನೇಹನ, ಸ್ವೇದನ ಇತ್ಯಾದಿಗಳು ಶರೀರಕ್ಕೆ ಉಪಯೋಗವಾಗುವಂತಹವು.
ತೆಗೆದುಕೊಳ್ಳಬಾರದು: ಕಟುರಸ ಆಹಾರ, ತಿಕ್ತರಸ ಆಹಾರ, ಕಷಾಯರಸ ಆಹಾರ, ಕಡಲೆ, ಹೆಸರು, ವಠಾಣಿ ಅಡಿಕೆ, ಬೆಲ್ಲ ಇತ್ಯಾದಿ, ಅಧಿಕವಾದ ವ್ಯಾಯಾಮ, ಮೈಥುನ, ನಡೆದಾಡುವುದು, ಆಕಳಿಕೆ, ಸೀನುವುದು ಆದಿವೇಗಗಳನ್ನು ತಡೆಯುವುದು, ಅಧಿಕವಾಗಿ ಚಿಂತಿಸುವುದು ಇವುಗಳನ್ನು ಮಾಡಬಾರದು.
ರೋಗಿಗಳಿಗೆ ಪಾಲಿಸಬೇಕಾದ ಮುಂಜಾಗ್ರತೆಯ ಕ್ರಮಗಳು:
  • ತಂಪಾದ ನೀರಿನಿಂದ ತಲೆಸ್ನಾನ, ಚಳಿತಂಪುಗಾಳಿಯಲ್ಲಿ ಪ್ರಯಾಣ ಮತ್ತುತಂಪು ಪಾನಿಯಗಳು ಸೇವಿಸಬಾರದು.
  • ತಲೆಯ ಮೇಲೆ ಭಾರ ಹೊರುವುದು ಮಾಡಬಾರದು
  • ಜ್ವರ ನೆಗಡಿ, ಕೀವಿನೋವು ಬಂದಾಗ ಕೂಡಲೆ ವೈದ್ಯರನ್ನು ಸಂಪರ್ಕಿಸಿ ಸೂಕ್ತಚಿಕಿತ್ಸೆ ಪಡೆಯಬೇಕು.
  • ಸೀನು, ಆಕಳಿಕೆ, ಕಣ್ಣೀರನ್ನು ತಡೆಯುವುದು, ಬಿರುಸಾದ, ಗಟ್ಟಿಯಾದ ಪದಾರ್ಥ ಸೇವನೆ ಬೇಡ.
  • ಮಿತಿಮೀರಿ ವ್ಯಾಯಮ, ಅಧಿಕ ಮೈಥುನ ಮತ್ತು ಶ್ರಮ ಬೇಡ.
  • ಅಧಿಕ ಮದ್ಯಪಾನ, ದೂಮಪಾನ, ಆತಿಯಾಗಿ ಉಪಾವಾಸ ಮಾಡುವುದು ನಿಲ್ಲಿಸಬೇಕು.
  • ಅಧಿಕವಾದ ಬೇಕರಿ ಪದಾರ್ಥ, ಪಾಸ್ಟ್‍ಪುಡ್, ಮಾಂಸಾಹಾರ, ಮಧ್ಯಪಾನ, ಧೂಮ್ರಪಾನ, ತಂಪುಪಾನೀಯಗಳು ಇತ್ಯಾದಿಗಳು ಶರೀರಕ್ಕೆ ಹಾನಿಕಾರಕಗಳು ಇವುಗಳನ್ನು ತ್ಯೆಜಿಸಬೇಕು.
  • ವಯಸ್ಸಿಗಣುಗುಣವಾಗಿ ಆಧಿಕ ರಕ್ತದ ಒತ್ತಡ, ಅಧಿಕ ಕೊಬ್ಬಿನಂಶ, ಸಕ್ಕರೆರೋಗ, ಅಧಿಕಬೊಜ್ಜು, ಹೃದಯರೋಗ ಸಂಬಂಧಿರೋಗಿಗಳು ಸೂಕ್ತ ವೈದ್ಯರಿಂದ ಪರೀಕ್ಷಿಸಿಕೊಂಡು ಈ ರೋಗದಿಂದ ಬಳಲುತ್ತಿರುವವರು ಸರಿಯಾದ ಔಷಧ ಉಪಚಾರ ಪಡೆಯಬೇಕು
  • ವೈದ್ಯರು ಹೇಳಿದಂತಹ ಔಷಧಗಳನ್ನು ಸರಿಯಾಗಿ ತೆಗದುಕೊಳ್ಳಬೇಕು ಯಾವುದೇ ಕಾರಣಕ್ಕೂ ಔಷಧಗಳನ್ನು ಸ್ವಯಂ ನಿಲ್ಲಿಸಬಾರದು.
  • ಚಿಕಿತ್ಸಾ ಪೂರ್ವದಲ್ಲಿ ರೋಗಿಯ ವಿವರವಾದ ಪರೀಕ್ಷಾ ಮತ್ತು ಅವಶ್ಯವಾದ ಪ್ರಯೋಗಶಾಲಾ ಪರೀಕ್ಷೆಗಳನ್ನು ಮಾಡಿಸುವುದು ಅತಿ ಅವಶ್ಯ ನಂತರ ರೋಗದ ನಿರ್ಧಾರ.
ಎಲ್ಲ ಚಿಕಿತ್ಸೆಗಳು ಎಲ್ಲರಿಗೂ ಸರಿಹೊಂದುವುದಿಲ್ಲಾ, ಆ ರೋಗಿಯ ಕಾರಣ ವಯಸ್ಸು, ಬಲಕ್ಕೆ ಅನುಗುಣವಾಗಿ ಬೇರೆ ಬೇರೆ ಚಿಕಿತ್ಸೆ ಮಾಡಲಾಗುವುದು.
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!