ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರ ದಿನ ಎಂದು ಫೆಬ್ರವರಿ 13 ರಂದು ಆಚರಿಸಿ ಜನರಲ್ಲಿ ಈ ದಂತ ವೈದ್ಯಕೀಯ ಶಸ್ತ್ರ ಚಿಕಿತ್ಸಾ ವಿಭಾಗದ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಅರಿವು ಮೂಡಿಸುವ ಕಾರ್ಯ ದೇಶದಾದ್ಯಂತ ಮಾಡಲಾಗುತ್ತದೆ. ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸೆ ಎನ್ನುವುದು ಅತ್ಯಂತ ಮುಂದುವರಿದ ಶಸ್ತ್ರ ಚಿಕಿತ್ಸಾ ವಿಭಾಗವಾಗಿದ್ದು ಮುಖದ ಅಂದವನ್ನು ಹೆಚ್ಚಿಸುವಲ್ಲಿ ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು ಬಹು ಮುಖ್ಯ ಭೂಮಿಕೆ ವಹಿಸುತ್ತಾರೆ.
ದಂತ ವೈದ್ಯಕೀಯ ಕ್ಷೇತ್ರ ಎನ್ನುವುದು ವೈದ್ಯಕೀಯ ಶಾಸ್ತ್ರದ ಒಂದು ಅವಿಭಾಜ್ಯ ಅಂಗ. ಪ್ರಾಥಮಿಕವಾಗಿ ದಂತ ವೈದ್ಯಕೀಯ ಪದವಿ ಅಥವಾ ಬಿ.ಡಿ,ಎಸ್ ಪದವಿ ಪಡೆದ ಬಳಿಕ ಸುಮಾರು ಒಬತ್ತು ವಿವಿಧ ವಿಭಾಗಗಳಲ್ಲಿ ಉನ್ನತ ವ್ಯಾಸಂಗ ಅಥವಾ ಸ್ನಾತ್ಸಕೋತ್ತರ ಪದವಿ ಪಡೆಯುವ ಅವಕಾಶವಿದೆ. ಇದರಲ್ಲಿ ದಂತ ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದ ಸ್ನಾತ್ತಕೋತ್ತರ ಪದವಿಯನ್ನು ಬಾಯಿ, ಮುಖ ಮತ್ತು ದವಡೆ ಶಾಸ್ತ್ರ ಎಂದು ಕರೆಯಲಾಗುತ್ತದೆ. ಆಂಗ್ಲ ಭಾಷೆಯಲ್ಲಿ ಓರಲ್ ಮತ್ತು ಮಾಕ್ಸಿಲೋ ಫೇಷಿಯಲ್ ಸರ್ಜರಿ ಎಂದು ಕರೆಯುತ್ತಾರೆ. ಜನರಲ್ಲಿ ಈ ದಂತ ವೈದ್ಯಕೀಯ ಶಾಸ್ತ್ರದ ಶಸ್ತ್ರ ಚಿಕಿತ್ಸಾ ವಿಭಾಗದ ಬಗ್ಗೆ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಯಾವುದಾದರೊಂದು ಧ್ಯೇಯ ವಾಕ್ಯ ಇಟ್ಟುಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಫೆಬ್ರವರಿ 13ರಂದು ನಡೆಸಲಾಗುತ್ತದೆ.
1969ರ ಫೆಬ್ರವರಿ 13ರಂದು ಭಾರತೀಯ ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರ ಸಂಘ ಅಸ್ಥಿತ್ವಕ್ಕೆ ಬಂದಿತ್ತು. ಇದರ ನೆನಪಿಗಾಗಿ ಫೆಬ್ರವರಿ 13ರಂದು ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರ ದಿನ ಎಂದು ಆಚರಿಸಿ ಜನರಲ್ಲಿ ಈ ದಂತ ವೈದ್ಯಕೀಯ ಶಸ್ತ್ರ ಚಿಕಿತ್ಸಾ ವಿಭಾಗದ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಅರಿವು ಮೂಡಿಸುವ ಕಾರ್ಯ ದೇಶದಾದ್ಯಂತ ಮಾಡಲಾಗುತ್ತದೆ. 2020ರ ಈ ಆಚರಣೆಯ ಧ್ಯೇಯ ವಾಕ್ಯ “ಮುಖದ ವಿಕಲಾಂಗತೆ ನಿವಾರಣೆ” ಎಂಬುದಾಗಿದೆ. ಯಾವ ಯಾವ ಕಾರಣಗಳಿಂದ ಮುಖದ ವಿಕಲಾಂಗತೆ ಉಂಟಾಗುತ್ತದೆ ಮತ್ತು ಈ ವಿಕಲಾಂಗತೆಯನ್ನು ಯಾವ ರೀತಿ ಸರಿಪಡಿಸಬಹುದು ಎಂಬುದನ್ನು ಜನರಿಗೆ ತಿಳಿಸಿಕೊಡುವ ಸದುದ್ದೇಶವನ್ನು ಈ ಆಚರಣೆÉ ಹೊಂದಿದೆ. 2022 ರ ಆಚರಣೆಯ ಧ್ಯೇಯವಾಕ್ಯ “ಮುಖದ ಬದಲಾವಣೆ ಹಂತಗಳು ಹಾಗೂ ಕಪ್ಪು ಶಿಲೀಂದ್ರ ರೋಗವನ್ನು ಎದುರಿಸೋಣ, ಜೀವನದ ದೃಷ್ಟಿಕೋನವನ್ನು ಬದಲಾಯಿಸೋಣ” ಎಂಬುದಾಗಿದೆ. ಭಾರತ ದೇಶದಾದ್ಯಂತ ಸುಮಾರು 25 ಸಾವಿರದಷ್ಟು ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು ಇದ್ದು, ಇವೆಲ್ಲರೂ ಇದೇ ದಿನ ಈ ಆಚರಣೆ ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ಬಾಯಿ ಮುಖದ ವಿಕಲಾಂಗತೆ ಎಂದರೇನು?
ಬಾಯಿ ಮತ್ತು ಮುಖ ತನ್ನ ರೂಪವನ್ನು ಕಳೆದುಕೊಂಡು ವಿಕಾರವಾಗುವುನ್ನು ವಿಕಲಾಂಗತೆ ಎನ್ನಲಾಗುತ್ತದೆ. ಇದು ಹಲವಾರು ಕಾರಣಗಳಿಂದ ಉಂಟಾಗಬಹುದು, ಹುಟ್ಟುವಾಗಲೇ ಉಂಟಾಗುವ ವಿಕಲತೆಯನ್ನು ಜನ್ಮಜಾತ ವಿಕಲತೆ ಎನ್ನಲಾಗುತ್ತದೆ. ಇನ್ನು ಹುಟ್ಟಿದ ಬಳಿಕ ಬೇರೆ ಬೇರೆ ಕಾರಣಗಳಿಂದ ಉಂಟಾಗುವ ವಿಕಲತೆಯನ್ನು ಕೃತಕ ವಿಕಲಾಂಗತೆ ಎನ್ನಲಾಗುತ್ತದೆ.
1. ಜನ್ಮಜಾತ ವಿಕಲಾಂಗತೆ : ಸೀಳು ತುಟಿ, ಸಿಳಂಗಳ ಮತ್ತು ಇನ್ನಾವುದೇ ಮುಖದ ವಿಕಾರತೆ ಹುಟ್ಟುವಾಗಲೇ ಇರುತ್ತದೆ. ಇದನ್ನು ಜನ್ಮಜಾತ ವಿಕಲಾಂಗತೆ ಎನ್ನಲಾಗುತ್ತದೆ
2. ಕೃತಕ ವಿಕಲಾಂಗತೆ : ಕೆಲವೊಮ್ಮೆ ಅಪಘಾತಗಳ ಕಾರಣದಿಂದಲೂ ಮುಖದ ಎಲುಬು ಮತ್ತು ದವಡೆ ಮುರಿದು ಎಲುಬು ನಷ್ಟವಾದಾಗ ಮುಖದ ವಿಕಲಾಂಗತೆ ಉಂಟಾಗುತ್ತದೆ.
3. ದವಡೆ ಕೀಲು ಸೋಂಕಿನಿಂದಾಗಿ ಕೆಳಗಿನ ದವಡೆ ಮತ್ತು ಮೇಲ್ಭಾಗದ ಎಲುಬುಗಳು ಒಂದಾಗಿ ಬಾಯಿ ತೆರೆಯದಂತಾಗಿ ಮುಖದ ದವಡೆ ಮತ್ತು ಎಲುಬುಗಳ ಬೆಳವಣಿಗೆ ಕುಂಠಿತವಾಗಿ ಮುಖದ ವಿಕಲಾಂಗತೆ ಉಂಟಾಗುತ್ತದೆ. ಅಪಘಾತಗಳಿಂದಲೂ ಕೆಳಗಿನ ದವಡೆ ಕುತ್ತಿಗೆ ಭಾಗ ತುಂಡಾಗಿ ಮೇಲಿನ ಎಲುಬಿನ ಜೊತೆ ಒಂದಾಗಿ ಮುಖದ ಬೆಳವಣಿಗೆ ಕುಂಠಿತವಾಗಿ ವಿಕಲಾಂಗತೆ ಕಾರಣವಾಗುತ್ತದೆ. ಇದನ್ನು ಶಸ್ತ್ರ ಚಿಕಿತ್ಸ ಮುಖಾಂತರ ಸರಿಪಡಿಸಬಹುದಾಗಿದೆ.
4. ಇನ್ನು ಮೇಲಿನ ಮತ್ತು ಕೆಳಗಿನ ದವಡೆಯ ಬೆಳವಣಿಗೆಯ ವ್ಯತ್ಯಾಸದಿಂದಾಗಿ ಮುಖದ ಅಂದ ಕೆಡುತ್ತದೆ. ಈ ಸಂದರ್ಭದಲ್ಲಿ ಶಸ್ತ್ರ ಚಿಕಿತ್ಸೆ ಮುಖಾಂತರ ಮೇಲಿನ ಮತ್ತು ಕೆಳಗಿನ ದವಡೆಗಳನ್ನು ಕತ್ತರಿಸಿ, ಮರುಜೋಡಣೆ ಮಾಡಿ ಮುಖದ ಅಂದವನ್ನು ಹೆಚ್ಚಿಸಲಾಗುತ್ತದೆ.
5. ಕೆಲವೊಮ್ಮೆ ಬಾಯಿ, ಮುಖ ಮತ್ತು ದವಡೆಗಳಲ್ಲಿ ಗೆಡ್ಡೆ ಬೆಳೆದಾಗ ಶಸ್ತ್ರ ಚಿಕಿತ್ಸೆ ಮುಖಾಂತರ ಈ ಗೆಡ್ಡೆÀಗಳನ್ನು ಕತ್ತರಿಸಿ ತೆಗೆಯಲಾಗುತ್ತದೆ. ಆಗ ಮುಖದ ರೂಪ ಹಾಳಾಗಿ ವಿಕಲಾಂಗತೆ ಉಂಟಾಗಬಹುದು. ಇದನ್ನು ಕೂಡಾ ನಂತರದ ದಿನಗಳಲ್ಲಿ ಶಸ್ತ್ರ ಚಿಕಿತ್ಸೆ ಮುಖಾಂತರ ಸರಿಪಡಿಸಬಹುದಾಗಿದೆ.
6. ಕೋವಿಡ್-19 ರೋಗವಿರುವ ರೋಗಿಗಳಲ್ಲಿ, ಬ್ಲಾಕ್ ಫಂಗಸ್ ಅಥವಾ ಕಪ್ಪು ಶಿಲೀಂದ್ರ ರೋಗದಿಂದ ಮುಖದ ಮೇಲಿನ ದವಡೆ ಸಂಪೂರ್ಣವಾಗಿ ಕೊಳೆತು ಹೋಗಿ, ಮಾರಣಾಂತಿಕವಾಗಿ ಕಾಡಬಹುದು. ಈ ಸಂದರ್ಭದಲ್ಲಿ ಕೊಳೆತು ಹೋದ ದವಡೆ ಭಾಗವನ್ನು ಸರ್ಜರಿ ಮುಖಾಂತರ ಕಿತ್ತು ಹಾಕಲಾಗುತ್ತದೆ. ಇದು ಮುಖದ ವಿಕಲಾಂಗತೆಗೆ ಕಾರಣವಾಗಬಹುದು.
ಕಪ್ಪು ಶಿಲೀಂದ್ರ ರೋಗದ ಅಂಕಿ ಅಂಶಗಳು:
ಕೋವಿಡ್-19 ರೋಗ 2020, 2021 ರಲ್ಲಿ ಮನುಕುಲವನ್ನು ಇನ್ನಿಲ್ಲದಂತೆ ಕಾಡಿದೆ ಮತ್ತು ಈಗಲೂ ಕಾಡುತ್ತಿದೆ. ಅದರಲ್ಲಿಯೂ ದೇಹದ ರಕ್ಷಣಾ ವ್ಯವಸ್ಥೆ ಕುಂದಿ ಹೋದ ರೋಗಿಗಳಲ್ಲಿ ಕಪ್ಪು ಶಿಲೀಂದ್ರ ರೋಗ ಮಾರಣಾಂತಿಕವಾಗಿ ಸಂಭವಿಸಿದೆ. ನಮ್ಮ ಭಾರತ ದೇಶದಲ್ಲಿ ಸುಮಾರು 40,845 ಕಪ್ಪು ಶಿಲೀಂದ್ರ ರೋಗ ದಾಖಲಾಗಿದೆ, ಇದರಲ್ಲಿ 31,455 ರೋಗಿಗಳಲ್ಲಿ ಸೈನಸ್, ಮೂಗು, ಬಾಯಿ, ದವಡೆ ಮತ್ತು ಮೆದುಳಿಗೂ ವ್ಯಾಪಿಸಿದೆ. ಸುಮಾರು 3129 ಮಂದಿ ಸಾವಿಗೀಡಾಗಿದ್ದಾರೆ. ಇನ್ನು 25,000 ಮಂದಿ ಮುಖದ ವಿಕಲಂಗತೆಯಿಂದ ಬಳಲುತ್ತಿದ್ದಾರೆ. ಅವರಿಗೆ ಸೂಕ್ತ ಚಿಕಿತ್ಸೆಯ ಅಗತ್ಯವಿದೆ.
ಈ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಬಾಯಿ, ಮುಖ, ದವಡೆ ಶಸ್ತ್ರ ಚಿಕಿತ್ಸಕರು ಬಹು ಮುಖ್ಯ ಭೂಮಿಕೆ ವಹಿಸುತ್ತಾರೆ. ಕಪ್ಪು ಶಿಲೀಂದ್ರ, ರೋಗ ಭಾದಿಸಿ ಮುಖದ ವಿಕಲಾಂಗತೆ ಹೊಂದಿರುವ ಎಲ್ಲಾ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಅವರ ಮುಖವನ್ನು ಮೊದಲಿನಂತೆ ಮಾಡಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಸೇರಿಸಿಕೊಳ್ಳುವ ಮಹದಾಶೆಯನ್ನು ಈ ಬಾಯಿ ಮುಖ ದವಡೆ ಚಿಕಿತ್ಸಕರ ದಿನಾಚರಣೆ ಹೊಂದಿದೆ. ಈ ನಿಟ್ಟಿನಲ್ಲಿ ದೇಶದಾದ್ಯಂತ ಇಂತಹ ರೋಗಿಗಳನ್ನು ಗುರುತಿಸಿ, ಮಾನಸಿಕ ಧೈರ್ಯ ನೀಡಿ ಅವರಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿ ಅವರನ್ನು ಮೊದಲಿನಂತೆ ಮಾಡುವ ಗುರುತರ ಹೊಣೆಗಾರಿಕೆ ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರಿಗೆ ಇದೆ.
ಕೊನೆಮಾತು :-
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸೆ ಎನ್ನುವುದು ಅತ್ಯಂತ ಮುಂದುವರಿದ ಶಸ್ತ್ರ ಚಿಕಿತ್ಸಾ ವಿಭಾಗವಾಗಿದ್ದು ಮುಖದ ಅಂದವನ್ನು ಹೆಚ್ಚಿಸುವಲ್ಲಿ ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು ಬಹು ಮುಖ್ಯ ಭೂಮಿಕೆ ವಹಿಸುತ್ತಾರೆ. 2015ರಲ್ಲಿ “ರಸ್ತೆ ಸುರಕ್ಷಾ ನಿಯಮಗಳನ್ನು ಪಾಲಿಸಿ ಮುಂಬರುವ ಅಪಘಾತ ತಪ್ಪಿಸಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಮೂರು ವರ್ಷಗಳ ಕಾಲ ಆಚರಣೆ ಮಾಡಲಾಗಿತ್ತು. 2018 ಮತ್ತು 2019ರಲ್ಲಿ ‘ಹಸಿರು ಉಳಿಸಿ ಬೆಳೆಸಿ’ ಎಂಬ ಸಂದೇಶ ನೀಡಿ ಆಚರಣೆ ಮಾಡಲಾಗಿತ್ತು. 2020ರಲ್ಲಿ ‘ಮುಖದ ವಿಕಲಾಂಗತೆ ವಿವಾರಿಸಿ’ ಎಂಬ ಧ್ಯೇಯ ವಾಕ್ಯದೊಂದಿಗೆ ದೇಶದಾದ್ಯಂತ ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರ ದಿನವನ್ನು ಆಚರಿಸಲಾಗುತ್ತದೆ. 2022 ರ ಆಚರಣೆಯ ಧ್ಯೇಯ ವಾಕ್ಯ “ಮುಖದ ಬದಲಾವಣೆ, ಹಂತಗಳು, ಕಪ್ಪು ಶಿಲೀಂದ್ರ ರೋಗವನ್ನು ಎದುರಿಸೋಣ, ಜೀವನವನ್ನು ಬದಲಾಯಿಸೋಣ“ ಎಂಬುದಾಗಿದೆ. ಒಟ್ಟಿನಲ್ಲಿ ತಮಗೂ ಸಾಮಾಜಿಕ ಹೊಣೆಗಾರಿಕೆ ಇದೆ ಮತ್ತು ಸಾಮಾಜಿಕ ಬದ್ಧತೆ ಇದೆ ಎಂದು ಜನರಿಗೆ ಈ ವೈದ್ಯರು ಈ ಮೂಲಕ ಸಂದೇಶ ನೀಡುತ್ತಿದ್ದಾರೆ ಎಂದರೂ ತಪ್ಪಾಗಲಾರದು.
ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತಚಿಕಿತ್ಸಾಲಯ, ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111 ಮೊ.: 9845135787
www.surakshadental.com
email: drmuraleemohan@gmail.com