ಆರೋಗ್ಯ ವರ್ಧನೆಗಾಗಿ ವೈವಾಹಿಕ ಬಾಂಧವ್ಯ, ದಾಂಪತ್ಯ ಜೀವನ

 
ವೈವಾಹಿಕ ಸಂಬಂಧ ಸುಮಧುರವಾಗಿದ್ದಷ್ಟೂ ಹಾಗೂ ದಾಂಪತ್ಯ ಜೀವನದ ಮಟ್ಟ ಉತ್ತಮವಾಗಿದ್ದಷ್ಟೂ ಪರಸ್ಪರ ಆರೋಗ್ಯ ಮತ್ತು ಸೌಖ್ಯತೆ ಉತ್ತಮವಾಗಿರುತ್ತದೆ. ವೈವಾಹಿಕ ಜೀವನದಲ್ಲಿ ಬಾಳ ಸಂಗಾತಿಯೊಂದಿಗೆ ಪ್ರೀತಿ, ಮತ್ತು ಹೊಂದಾಣಿಕೆಯು ದೈಹಿಕ ಮತ್ತು ಮಾನಸಿಕ ಆರೋಗ್ಯ ವರ್ಧನೆಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಆರೋಗ್ಯವರ್ಧನೆಗಾಗಿ ವೈವಾಹಿಕ ಬಾಂಧವ್ಯ ಪೋಷಣೆ ಅತ್ಯಗತ್ಯ. ಸ್ವಾಸ್ಥ್ಯ ಆರೈಕೆಯಲ್ಲಿ ಇದನ್ನು ಹೊಸ ದೃಷ್ಟಿಕೋನ ಎಂದು ಪರಿಗಣಿಸಲಾಗಿದೆ. ವೈವಾಹಿಕ ಜೀವನದ ಗುಣಮಟ್ಟವು ಸಂಗಾತಿಗಳ ಆರೋಗ್ಯ ಮತ್ತು ಸೌಖ್ಯತೆಯನ್ನು ನಿರ್ಧರಿಸುತ್ತದೆ ಎಂಬುದೂ ದೃಢಪಟ್ಟಿದೆ.
“ಪತಿ ಮತ್ತು ಪತ್ನಿ ಬದುಕಿನ ಬಂಡಿಯ ಜೋಡಿ ಚಕ್ರಗಳು”
“ನೀವು ಯಾರನ್ನಾದರೂ ಪ್ರೀತಿಸಿದರೆ ಅದನ್ನು ಅಭಿವ್ಯಕ್ತಪಡಿಸಿ”
“ನಾನು ನೀನು ಜೋಡಿ ಒಲುಮೆಯೇ ನಮ್ಮ ಒಡನಾಡಿ”
ಮಾನವ ಸಂಘ ಜೀವಿ. ಪರಸ್ಪರ ಸಂಪರ್ಕ-ಒಡನಾಟವಿಲ್ಲದೇ ಆತ ಜೀವಿಸಲಾರ. ಪ್ರತಿಯೊಬ್ಬರೂ ಒಬ್ಬರಿಗೊಬ್ಬರು ಒಡನಾಟ ಹೊಂದಿರುತ್ತಾರೆ. ನಮ್ಮನ್ನು ಪ್ರೀತಿಸುವ ಹೆತ್ತವರು, ಪೋಷಕರು, ಸಹೋದರ-ಸಹೋದರಿಯರು, ಬಂಧು-ಮಿತ್ರರು, ಮಾರ್ಗದರ್ಶಕರು, ಹಿತೈಷಿಗಳು, ನೆರೆಹೊರೆಯವರು, ಮತ್ತು ಸಂಗಾತಿಯನ್ನು ಹೊಂದಿದಾಗ ನಮಲ್ಲಿ ಸಂತೋಷ ಮತ್ತು ಆತ್ಮೀಯ ಒಡನಾಟದ ಭಾವನೆ ಮೂಡಿಸುತ್ತದೆ. ಅವರ ಪ್ರೀತಿ-ವಿಶ್ವಾಸ-ಮಮತೆ ಮತು ಆರೈಕೆಗಳಿಂದ ನಮಗೆ ನೈತಿಕ ಬೆಂಬಲ ಲಭಿಸುತ್ತದೆ.
ಮಾನವ ತನ್ನ ಜೀವನದಲ್ಲಿ ವಿವಿಧ ಹಂತಗಳಲ್ಲಿ ಸಂಬಂಧಗಳನ್ನು ಹೊಂದಿರುತ್ತಾನೆ. ಬಾಲ್ಯದಲ್ಲಿ ಹೆತ್ತವರ ಆರೈಕೆ, ಬೆಳೆಯುತ್ತಿರುವಾಗ ಸಹೋದರ-ಸಹೋದರಿಯರು ಮತ್ತು ಸ್ನೇಹಿತರ ಒಡನಾಟ, ಯೌವ್ವನದ ದಿನಗಳಲ್ಲಿ ಗೆಳೆಯ-ಗೆಳತಿಯರ ಪ್ರೀತಿ, ಮದುವೆಯಾದ ನಂತರ ಸಂಗಾತಿ (ಪತಿ ಅಥವಾ ಪತ್ನಿ) ಒಲುಮೆ, ಮತ್ತು ಮುಪ್ಪಿನಲ್ಲಿ ಮಕ್ಕಳ ಆರೈಕೆ-ಪೋಷಣೆ. ಈ ನಡುವೆ ವೈವಾಹಿಕ ಜೀವನದಲ್ಲಿ ಬಾಳ ಸಂಗಾತಿಯೊಂದಿಗೆ ಪ್ರೀತಿ, ಮತ್ತು ಹೊಂದಾಣಿಕೆಯು ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯ ವರ್ಧನೆಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಆರೋಗ್ಯವರ್ಧನೆಗಾಗಿ ವೈವಾಹಿಕ ಬಾಂಧವ್ಯ ದಾಂಪತ್ಯ ಜೀವನದ ಪೋಷಣೆ ಅತ್ಯಗತ್ಯ. ಸ್ವಾಸ್ಥ್ಯ ಆರೈಕೆಯಲ್ಲಿ ಇದನ್ನು ಹೊಸ ದೃಷ್ಟಿಕೋನ ಎಂದು ಪರಿಗಣಿಸಲಾಗಿದೆ. ವೈವಾಹಿಕ ಜೀವನದ ಗುಣಮಟ್ಟವು ಸಂಗಾತಿಗಳ ಆರೋಗ್ಯ ಮತ್ತು ಸೌಖ್ಯತೆಯನ್ನು ಕೆಲವೊಮ್ಮೆ ನಿರ್ಧರಿಸುತ್ತದೆ ಎಂದು ಬಾಂಧವ್ಯ ಪರಿಣಿತರು ಮತ್ತು ವೈವಾಹಿಕ ಸಂಬಂಧ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬದಲಾಗುತ್ತಿರುವ ಸಮಾಜದಲ್ಲಿ ಸಂಬಂಧದ ಸಮಸ್ಯೆಗಳು ಹಾಗೂ ವಿಚ್ಚೇದನಗಳು ತೀರಾ ಸಾಮಾನ್ಯವಾಗಿದೆ. ಸಂಶೋಧನೆ ಮತ್ತು ಕ್ಲಿನಿಕಲ್ ಪ್ರಯೋಗಾಲಯದ ಆಧಾರದ ಅಂಕಿ-ಸಂಖ್ಯೆ ಮಾಹಿತಿಯು, ಭಗ್ನಗೊಂಡ ವೈವಾಹಿಕ ಸಂಬಂಧಗಳು ನೇರವಾಗಿ ಅಥವಾ ಪರೋಕ್ಷವಾಗಿ ಸಂಗಾತಿಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ, ಬಾಳ ಸಂಗಾತಿಗಳು / ಪತಿ-ಪತ್ನಿ ತಮ್ಮ ಆರೋಗ್ಯ ಸುಧಾರಣೆಗಾಗಿ ಸಂಬಂಧಗಳನ್ನು ವೃದ್ದಿಸುವ ಕೌಶಲಗಳು ಮತ್ತು ಬಾಂಧವ್ಯವನ್ನು ಸಮೃದ್ದಿಗೊಳಿಸುವ ಕಲೆಗಳನ್ನು ಕಲಿಯುವ ಅಗತ್ಯವಿದೆ.
ನಾನು ಈ ಮೇಲೆ ತಿಳಿಸಲಾದ ವಿವರಣಾತ್ಮಕ ಹೋಲಿಕೆಯೊಂದಿಗೆ ನನ್ನ ಬಳಿ ಬರುವ ಮಂದಿಗೆ ವೈವಾಹಿಕ ಸಂಬಂಧ ಸುಧಾರಣೆ ಚಿಕಿತ್ಸೆಯನ್ನು ಆರಂಭಿಸುತ್ತೇನೆ. ಪತಿ ಮತ್ತು ಪತ್ನಿ ಬದುಕಿನ ಬಂಡಿಯ ಜೋಡಿ ಚಕ್ರಗಳಿದ್ದಂತೆ. ಬಹುತೇಕ ವೈವಾಹಿಕ ಸಂಬಂಧಗಳು ಹಳಸಲು ಮತ್ತು ಗಂಡ-ಹೆಂಡತಿ ಬಾಂಧವ್ಯ ಕಿತ್ತು ಹೋಗಲು ಮುಖ್ಯವಾಗಿ ಈ ಕೆಳಕಂಡ ಅಂಶಗಳು ಕಾರಣವಾಗುತ್ತವೆ.
ದೋಷಪೂರಿತ, ನಿಂದನೆಯ ಹಾಗೂ ಮಾನವೀಯತೆ ಇಲ್ಲದೇ ಸಂವಹನ
ಪ್ರಾಬಲ್ಯ ಹೋರಾಟ : ಆತ/ಆಕೆಯ ಮೌಲ್ಯವನ್ನು ಕಡೆಗಣಿಸುವ ಮೂಲಕ ತನ್ನ ಸಂಗಾತಿಯ ಮೇಲೆ ಪ್ರಾಬಲ್ಯ ಸ್ಥಾಪಿಸಲು ಸಂಗಾತಿಗಳಲ್ಲಿ ಯಾರೊಬ್ಬರು ಪ್ರಯತ್ನಿಸಿದಾಗ ಅಪನಂಬಿಕೆ, ತಾತ್ಸಾರ ಮತ್ತು ಹೊಂದಾಣಿಕೆ ಕೊರತೆಯಿಂದ ಸಂಬಂಧ ಹಳಸುತ್ತದೆ.
ವೈವಾಹಿಕ ಸಂಬಂಧ ಬಲವರ್ಧನೆಗೆ ಟಿಪ್ಸ್
ಆಪ್ತ ಮಿತ್ರರಾಗಿರಿ : ಸತಿ-ಪತಿ ಅಥವಾ ಸಂಗಾತಿಗಳು ತಮ್ಮನ್ನು ಪರಸ್ಪರ “ಬೆಸ್ಟ್ ಫ್ರೆಂಡ್ ಅಥವಾ ಆಪ್ತಮಿತ್ರ”ರಂತೆ ಪರಿಗಣಿಸಿರಿ. ಗಂಡ-ಹೆಂಡತಿಯಲ್ಲಿ ಯಾರೊಬ್ಬರು ಕೀಳ ಅಥವಾ ಮೇಲು ಅಲ್ಲ.
ಸಕರಾತ್ಮಕ ಭಾವನೆಗಳನ್ನು ಅಭಿವ್ಯಕ್ತಗೊಳಿಸಿರಿ : ವೈವಾಹಿಕ ಬಾಂಧವ್ಯಗಳನ್ನು ಬಲಗೊಳಿಸಲು ನಿಮ್ಮ ಸಂಗಾತಿಗಾಗಿ ಸಕರಾತ್ಮಕ ಭಾವನೆಗಳನ್ನು ಅಭಿವ್ಯಕ್ತಗೊಳಿಸಬೇಕು. “ಐ ಲವ್ ಡಿಯರ್, ನೀನು(ನೀವು) ತುಂಬಾ ಒಳ್ಳೆಯವಳು(ಒಳ್ಳೆಯವರು), ಇಂದು ಅದ್ಭುತವಾಗಿ ಕಾಣುತ್ತಿರುವೆ(ಕಾಣುತ್ತಿದ್ದೀರಿ)” ಎಂದು ನಿಮ್ಮ ಸಂಗಾತಿಗೆ ಪ್ರೀತಿಯಿಂದ ತಿಳಿಸಿದಾಗ ನಿಮ್ಮ ಸಂಬಂಧ ಮತ್ತಷ್ಟು ಸದೃಢಗೊಳ್ಳುತ್ತದೆ. ಕೆಲಸಕ್ಕೆ ತೆರಳುವಾಗ ಮತ್ತು ಕೆಲಸದಿಂದ ಹಿಂದಿರುಗಿದಾಗ ನಿಮ್ಮ ಸಂಗಾತಿಗೆ ಚುಂಬಿಸುವಂಥ ದೈಹಿಕ ಭಾವನೆಗಳಿಂದ ನಿಮ್ಮ ಪ್ರೀತಿ ಮತ್ತು ಆರೈಕೆಯನ್ನು ಅಭಿವ್ಯಕ್ತಿಗೊಳಿಸದಾಗ ಅದು ನಿಮ್ಮ ಸಂಬಂಧ ಬಲವರ್ಧನೆಯಾಗಲು ಸಹಕಾರಿ.
ಕೆಲಸ ಹಂಚಿಕೊಳ್ಳುವಿಕೆ : ದಂಪತಿಗಳು ಮನೆಗೆಲಸವನ್ನು ಪರಸ್ಪರ ಹಂಚಿಕೊಂಡರೆ ಇಬ್ಬರಿಗೂ ಹೊರೆಯಾಗುವುದಿಲ್ಲ. ಮೇಲಾಗಿ ವೈವಾಹಿಕ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳಲು ಹಾಗೂ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಕಾರಣವಾಗುತ್ತದೆ. ಇದೂ ಕೂಡ ಸತಿ-ಪತಿ ಸಂಬಂಧ ಸುಧಾರಣೆಗೆ ಒಂದು ಮಹತ್ವದ ವಿಧಾನವಾಗಿದೆ. ನಾನು ನಿನಗಿಂತ ಹೆಚ್ಚಿನ ಕೆಲಸ ಮಾಡುತ್ತೇನೆ. ನನಗೆ ನಿನಗಿಂತ ಹೆಚ್ಚಿನ ಜವಾಬ್ದಾರಿ ಇದೆ ಎಂಬ ಜಗಳ ದಂಪತಿಗಳಲ್ಲಿ ಸಾಮಾನ್ಯವಾಗಿದ್ದರೆ ಅದು ಮುಂದೆ ಸಂಬಂಧ ಹದಗೆಡಲು ಕಾರಣವಾಗಬಹುದು. ಅಂಥ ಸಂದರ್ಭದಲ್ಲಿ ಪರಸ್ಪರ ಕೆಲಸವನ್ನು ಹಂಚಿಕೊಂಡರೆ ಮೂಲದಲ್ಲೇ ಸಮಸ್ಯೆ ನಿವಾರಣೆಯಾಗುತ್ತದೆ.
ಹೊರ ಹೋಗಲು ಸಮಯವನ್ನು ಮೀಸಲಿಡಿ : 30 ನಿಮಿಷಗಳ ಕಾಲ ಹೊರಗೆ ಹೋಗಲು ಸಮಯವನ್ನು ನಿಗದಿಗೊಳಿಸುವುದರಿಂದ ಬಾಳಸಂಗಾತಿ ನಡುವಣ ಸಂಬಂಧ ಸುಧಾರಣೆಯಾಗಲು ಮತ್ತಷ್ಟು ನೆರವಾಗುತ್ತದೆ. ಹೋಟೆಲ್‍ನಲ್ಲಿ ಕಾಫಿ/ಚಹಾ ಸೇವನೆ ಅಥವಾ ಸೂಕ್ತ ಸ್ಥಳದಲ್ಲಿ ಕೆಲ ಕಾಲ ಕಳೆಯುವಿಕೆಯು ದೊಡ್ಡ ಮಟ್ಟದಲ್ಲಿ ಸಂಗಾತಿಗಳ ಆತ್ಮೀಯತೆಗೆ ಸಹಕಾರಿ. ಹಣ ಖರ್ಚು ಮಾಡುವುದರ ಆಧಾರ ಮೇಲೆ ಸಂಬಂಧಗಳು ಯಾವಾಗಲೂ ಅವಲಂಬಿಸಿರುವುದಿಲ್ಲ; ಬದಲಿಗೆ ನಿಮ್ಮ ಸಂಗಾತಿಗೆ ಆರೈಕೆ ಮತ್ತು ಪ್ರೀತಿಯನ್ನು ಅಭಿವ್ಯಕ್ತಿಗೊಳಿಸಲು ಆಕೆಯೊಂದಿಗೆ ಕೆಲಹೊತ್ತು ಹೊರಗೆ ಕಳೆಯುವುದರಿಂದ ಇಬ್ಬರಿಗೂ ಲಭಿಸುವ ಸಮಾಧಾನವನ್ನು ಇದು ಆಧರಿಸಿರುತ್ತದೆ ಎಂಬುದನ್ನು ಮರೆಯಬೇಡಿ.
ಕೊಡುಗೆ/ಉಡುಗೊರೆಗಳನ್ನು ನೀಡುವಿಕೆ : ಸಣ್ಣಪುಟ್ಟ ಕೊಡುಗೆ/ಉಡುಗೊರೆಗಳನ್ನು ನೀಡುವುದರಿಂದ ಅದು ಪರಸ್ಪರ ಸಂಗಾತಿಗಳ ನಡುವೆ ಬಾಂಧವ್ಯ ಬಲವರ್ಧನೆಗಾಗಿ ದೊಡ್ಡ ಮಟ್ಟದಲ್ಲಿ ನೆರವಾಗುತ್ತದೆ. ಉದಾಹರಣೆಗೆ ಸಂಗಾತಿಗೆ ಇಷ್ಟವಾದ ಚಾಕೋಲೆಟ್, ಅಥವಾ ವಸ್ತುವನ್ನು ಪ್ರೀತಿಯಿಂದ ನೀಡುವುದು.
ನಿಮ್ಮ ಸಂಗಾತಿಯನ್ನು ಸದಾ ಗೌರವಿಸಿರಿ : ನಿಮ್ಮ ಸಂಗಾತಿಯನ್ನು ಸದಾ ಗೌರವಿಸುವುದರಿಂದ ನಿಮ್ಮ ನಡುವೆ ಆತ್ಮೀಯ ಒಡನಾಟ ವೃದ್ಧಿಯಾಗುತ್ತದೆ. ನಿಮ್ಮ ಸಂಗಾತಿಯ (ಸತಿ-ಪತಿ) ಸಾಮಥ್ರ್ಯ ಮತ್ತು ಸಕರಾತ್ಮಕ ಭಾವನೆಗಳನ್ನು ಸದಾ ನೆನೆಪಿಸಿ ಹಾಗೂ ಪರಸ್ಪರ ಗೌರವದಿಂದ ಕಾಣರಿ. ನಿಮ್ಮ ಸಂಗಾತಿಯ ಬೇಕು-ಬೇಡಗಳನ್ನು ಅರಿತು ಅದಕ್ಕೆ ಅನುಸಾರವಾಗಿ ಹೊಂದಾಣಿಕೆಯಿಂದ ನಡೆದರೆ ಸಂಸಾರ ನಿಭಾಯಿಸುವುದು ಬಹಳ ಸುಲಭ.
ನಿಮ್ಮ ಸಂಗಾತಿಯ ಅಭಿಪ್ರಾಯ-ಅಭಿಮತ, ನಂಬಿಕೆಗಳನ್ನು ಗೌರವಿಸಿರಿ ಹಾಗೂ ಆಕೆ/ಆತ ಆ ಬಗ್ಗೆ ಸ್ವತಂತ್ರವಾಗಿ ಚಿಂತಿಸಲು ಅವಕಾಶ ನೀಡಿ: ಮನುಷ್ಯನ ಕೆಲವು ಗುಣಗಳು ಮತ್ತು ಸ್ವಭಾವಗಳು ಕೆಲವೊಮ್ಮೆ ವೈವಾಹಿಕ ಸಂಬಂಧಗಳು ಹದಗೆಡಲು ಕಾರಣವಾಗುತ್ತದೆ. ನಿಮ್ಮ ಸಂಗಾತಿಯ ಭಾವನೆಗಳು, ಅಭಿಪ್ರಾಯಗಳು ಮತ್ತು ನಂಬಿಕೆಗಳನ್ನು ಗೌರವಿಸುವುದರಿಂದ ಹಾಗೂ ಆಕೆ/ಆತ ತನ್ನ ನಿಲುವಿನ ಬಗ್ಗೆ ಸ್ವತಂತ್ರವಾಗಿ ಚಿಂತಿಸಲು ಅವಕಾಶ ನೀಡುವುದರಿಂದ ವೈವಾಹಿಕ ಸಂಬಂಧ ಗಟ್ಟಿಯಾಗುತ್ತದೆ. ನೆನಪಿಡಿ, ಸ್ವತಂತ್ರ ಮತ್ತು ಪರಸ್ಪರ ಅವಲಂಬನೆಯು ವೈವಾಹಿಕ ಬಾಂಧವ್ಯ ಬಲವರ್ಧನೆಗೆ ಪ್ರಮುಖ ಕಾರಣಗಳಲ್ಲಿ ಒಂದು.
ಕೆಲವೊಂದು ವಿಷಯಗಳು ಸಂಗಾತಿಗಳ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿ ಬಿಕ್ಕಟ್ಟಿಗೂ ಎಡೆ ಮಾಡಿಕೊಡುತ್ತದೆ. ಇಂಥ ಸನ್ನಿವೇಶದಲ್ಲಿ ವಾಸ್ತವಿಕ ನಿರೀಕ್ಷೆಗಳು ಬಹು ಮುಖ್ಯವಾಗುತ್ತದೆ. ಇಂಥ ಸಮಸ್ಯೆಗಳು ಉದ್ಭವಿಸಿದಾಗ ಆರಂಭದಲ್ಲೇ ಇದನ್ನು ನಿವಾರಿಸಲು ತೊಂದರೆ ಬಗೆಹರಿಸುವ ವಿಧಾನ ಬಳಸುವುದನ್ನು ಯತ್ನಿಸಿರಿ.
ನಿಮ್ಮ ಸಂಗಾತಿಯೊಂದಿಗೆ ಕೆಲವು ವಿಷಯಗಳಲ್ಲಿ ಬಲವಂತಪಡಿಸುವಿಕೆ, ನಿಂದಿಸುವಿಕೆ ಹಾಗೂ ಅಪಮಾನ ಮಾಡುವಿಕೆಯನ್ನು ತಪ್ಪಿಸಿ: ನಿಮ್ಮ ಸಂಗಾತಿಯೊಂದಿಗೆ ಕೆಲವು ವಿಷಯಗಳಲ್ಲಿ ನಿಮಗೆ ಭಿನ್ನಾಭಿಪ್ರಾಯಗಳಿದ್ದು, ಅದರಿಂದ ನಿಮಗೆ ಕಿರಿಕಿರಿಯಾಗುತ್ತಿದ್ದರೆ, ಆಕೆ/ಆತನೊಂದಿಗೆ (ಇತರರ ಮುಂದೆ ಬೇಡ) ಆ ವಿಷಯದ ಬಗ್ಗೆ ಸಹನೆ-ಸಂಯಮದಿಂದ ಚರ್ಚಿಸಿ ಸಮಸ್ಯೆ ಬಗೆಹರಿಸಕೊಳ್ಳುವುದು ಸೂಕ್ತ.
ನಿಮ್ಮ ಸಂಗಾತಿಯೊಂದಿಗೆ ಸದಾ ಪರಾನುಭೂತಿಯಾಗಿರಿ : ಪ್ರೀತಿ ಮತ್ತು ಆರೈಕೆ ತುಂಬಿದ ಅನುಕಂಪ ವೈವಾಹಿಕ ಜೀವನದ ಯಶಸ್ವಿಗೆ ತುಂಬಾ ಮುಖ್ಯ. ಒಲುವೆ, ಕರುಣೆ ಮತ್ತು ಕ್ಷಮೆ ಈ ಮೂರು ಒಳ್ಳೆಯ ಗುಣಗಳು. ನಿಮ್ಮ ಸಂಗಾತಿಯ ಭಾವನೆಗಳು ಮತ್ತು ನಂಬಿಕೆಗಳ ದೃಷ್ಟಿಕೋನದಲ್ಲಿ ಪ್ರಪಂಚವನ್ನು ನೋಡಲು ಯತ್ನಿಸಿ. ಇದರಿಂದ ಒಬ್ಬರನ್ನೊಬ್ಬರು ಮತ್ತಷ್ಟು ಬೆಸೆದುಕೊಳ್ಳಲು ನೆರವಾಗುತ್ತದೆ.
ಭಾವನಾತ್ಮಕ ಸಮ್ಮತಿ : ಕೆಲವೊಂದು ವಿಷಯಗಳಲ್ಲಿ ನಿಮ್ಮ ಸಂಗಾತಿ ಚಿಂತೆಗೀಡಾದ, ಆಕೆ/ಅತ ತನ್ನ ಸಮಸ್ಯೆ/ಅನಾನುಕೂಲತೆಯನ್ನು ಅಭಿವ್ಯಕ್ತಿಗೊಳಿಸಲು ಅವಕಾಶ ನೀಡಿ ಹಾಗೂ ಆ ಬಗ್ಗೆ ನೀವು ಕಾಳಜಿ ತೋರುವುದರಿಂದ ಆತ/ಆಕೆಗೂ ನಿಮ್ಮ ಮೇಲೆ ನಂಬಿಕೆ-ವಿಶ್ವಾಸ ಹೆಚ್ಚಾಗುತ್ತದೆ.
ಹಾಸ್ಯಪ್ರಜ್ಞೆ : ಸತಿ-ಪತಿ ನಡುವೆ ಪರಸ್ಪರ ಹಾಸ್ಯ ಪ್ರಜ್ಞೆ ಮತ್ತು ಹಾಸ್ಯ ಚಟಾಕಿಯು ಇಬ್ಬರಲ್ಲೂ ಸಂತೋಷ ಉಂಟು ಮಾಡಿ ವೈವಾಹಿಕ ಸಂಬಂಧ ಸದೃಢಗೊಳ್ಳುತ್ತದೆ.
ಪ್ರೀತಿಯಿಂದ ಅಡ್ಡಹೆಸರು(ನಿಕ್ ನೇಮ್) : ನಿಮ್ಮ ಸಂಗಾತಿಗೆ ಪ್ರೀತಿಯಿಂದ ಸುಂದರವಾದ ಅಡ್ಡ ಹೆಸರು (ನಿಕ್ ನೇಮ್) ಇಟ್ಟು, ತಮಾಷೆಯಾಗಿ ಕರೆಯುವುದರಿಂದ ನಿಮ್ಮಲ್ಲಿ ಆಪ್ತ ಭಾವನೆ ಮೂಡುತ್ತದೆ. ಇದು ಕೂಡ ವೈವಾಹಿಕ ಸಂಬಂಧ ಸುಧಾರಣೆಗೆ ಸಹಕಾರಿ.
ಕಾಲಾವಕಾಶ ಲಭಿಸಿದಾಗಲೆಲ್ಲಾ ನಿಮ್ಮ ವಿವಾಹ ಸಮಾರಂಭದ ಆಲ್ಬಮ್/ವೀಡಿಯೋ ವೀಕ್ಷಿಸಿ : ಪ್ರತಿ ತಿಂಗಳು ಅಥವಾ ಸಮಯ ಲಭಿಸಿದಾಗಲೆಲ್ಲಾ ನಿಮ್ಮ ವಿವಾಹ ಸಮಾರಂಭದ ಫೋಟೊಗಳು ಮತ್ತು ವೀಡಿಯೋವನ್ನು ನೋಡುವುದರಿಂದ ಇಬ್ಬರಿಗೂ ಒಂದು ರೀತಿಯ ಸಂತೋಷವಾಗುತ್ತದೆ. ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವುದರಿಂದ ಹಾಗೂ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವುದರಿಂದ ಇಬ್ಬರಲ್ಲೂ ಆಪ್ತ ಭಾವನೆ ಮೂಡುತ್ತದೆ.
ಜನ್ಮ ದಿನದ ಶುಭಾಶಯ/ಉಡುಗೊರೆ :  ಸಂಗಾತಿಯ ಜನ್ಮದಿನವನ್ನು ನೆನೆಪಿನಲ್ಲಿಟ್ಟುಕೊಂಡು ಮುಂಚಿತವಾಗಿಯೇ ಶುಭಾಶಯ ತಿಳಿಸುವುದು ಹಾಗೂ ಆ ದಿನ ಸಂಗಾತಿಗೆ ಉಡುಗೊರೆ ನೀಡಿ ಸಂತೋಷಗೊಳಿಸುವುದರಿಂದ ಸಂಬಂಧ ಮತ್ತಷ್ಟು ಹತ್ತಿರವಾಗಲು ಸಹಕಾರಿ.
ಸಂಗಾತಿಯ ತಪ್ಪುಗಳು-ಲೋಪದೋಷಗಳನ್ನು ಇತರರ ಮುಂದೆ ಚರ್ಚಿಸುವುದನ್ನು ತಪ್ಪಿಸಿ : ಸತಿ-ಪತಿ ಸಂಬಂಧದಲ್ಲಿ ಸರಸ-ವಿರಸ ಸಹಜ. ಸಣ್ಣಪುಟ್ಟ ಸಮಸ್ಯೆಗಳೂ ಸಾಧಾರಣ. ಅದರೆ ಅದನ್ನು ಆರಂಭದಲ್ಲೇ ಸರಿಪಡಿಸಿಕೊಳ್ಳುವುದು ಜಾಣತನ. ಹೀಗಾಗಿ ಸಂಗಾತಿಯ ತಪ್ಪುಗಳು ಮತ್ತು ದೋಷಗಳನ್ನು ಇತರರ ಮುಂದೆ ಚರ್ಚಿಸುವುದನ್ನು ತಪ್ಪಿಸಿ. ಇದು ಕೂಡ ವೈವಾಹಿಕ ಸಂಬಂಧ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಕೊನೆ ಮಾತು
ಸಂಬಂಧಗಳ ನಿರ್ಮಾಣ, ನಿರ್ವಹಣೆ ಮತ್ತು ರಕ್ಷಣೆ ಒಂದು ಜಾಣತನದ ಕೌಶಲ್ಯ. ಈ ಲೇಖನದಲ್ಲಿ ಮೇಲೆ ತಿಳಿಸಲಾದ ಪ್ರಮುಖ ಮೂಲ ಮಾನಸಿಕ ಕೌಶಲ್ಯಗಳನ್ನು ಅನುಸರಿಸಿ ವೈವಾಹಿಕ ಸಂಬಂಧಗಳು ಮತ್ತು ಜೀವನದ ಮೌಲ್ಯವನ್ನು ಸುಧಾರಿಸಿಕೊಳ್ಳಬಹುದು.
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!