ಅರಿಶಿಣ ನೀರು ಕುಡಿಯಿರಿ ರೋಗ ಮುಕ್ತರಾಗಿ.ರೋಗ ಪ್ರತಿರೋಧಕ ವ್ಯವಸ್ಥೆಯನ್ನು ಸದೃಢಗೊಳಿಸುವುದೂ ಸೇರಿದಂತೆ ದೇಹದ ಆಂತರಿಕ ಶುದ್ದತೆಗಾಗಿ ಇದನ್ನು ಬಳಸುವುದು ಇಂದಿನ ಮಾಲಿನ್ಯಯುಕ್ತ ಪರಿಸರದಲ್ಲಿ ಅತ್ಯಂತ ಅನಿವಾರ್ಯವಾಗಿದೆ.
ಬಹುತೇಕ ಭಾರತೀಯರಿಗೆ ಅರಿಶಿಣ ಚಿರಪರಿಚಿತ. ನಮಗೆ ಚಿಕ್ಕ ವಯಸ್ಸಿನಲ್ಲಿ ಗಾಯಗಳಿಗೆ ಅಜ್ಜಿಯಂದಿರು ಅರಿಶಿಣ ಲೇಪಿಸಿ ಗುಣಪಡಿಸುತ್ತಿದ್ದ ಹಾಗೂ ಶೀತವಾದಾಗ ಅರಿಶಿಣ ಬೆರೆಸಿದ ಹಾಲು ಕುಡಿಸುತ್ತಿದ್ದರು. ನಾವೆಲ್ಲರೂ ಅರಿಶಿಣ ಬಳಕೆಯೊಂದಿಗೆ ಬೆಳೆದವರು. ಇದು ನಮ್ಮ ಬದುಕಿನ ಭಾಗವೂ ಹೌದು. ಪೂಜೆ ಮಾಡುವುದಕ್ಕೆ ಮುನ್ನ ನಮ್ಮ ಅಜ್ಜಿಯಂದಿರು ದೇವರ ಸಾಮಗ್ರಿಗಳನ್ನು ಅರಿಶಿಣ ನೀರಿನಲ್ಲಿ ಸ್ಭಚ್ಚಗೊಳಿಸುತ್ತಿದ್ದರು.
ಅರಿಶಿಣ ಆನಾದಿ ಕಾಲದಿಂದಲೂ ಬಳಸುತ್ತಿದ್ದ ಪರಂಪರಾಗತ ಔಷಧಿಯುಕ್ತ ಗಿಡಮೂಲಿಕೆ. ಇದು ಆದಿವಾಸಿಗಳು ತಲೆತಲಾಂತರದಿಂದ ಬಳಸುತ್ತಿದ್ದ ಅಮೂಲ್ಯ ಟಾನಿಕ್ ಸಹ ಆಗಿದೆ. ಅರಿಶಿಣದ ನೀರು ವಿಶ್ವದಲ್ಲಿ ಎಲ್ಲಕ್ಕಿಂತ ಅತ್ಯುತ್ತಮ ಮಾತೃದ್ರವ ಎಂದೇ ಪರಿಗಣಿಸಲ್ಪಟ್ಟಿದೆ.ಇದನ್ನು ಭಾರತದ ಚಿನ್ನದ ದ್ರವವೆಂದು ಕರೆಯುತ್ತಾರೆ. ಇದನ್ನು ಹಲವಾರು ವರ್ಷಗಳಿಂದಲೂ ಚರ್ಮದ ಒಳ್ಳೆಯ ಆರೋಗ್ಯಕ್ಕೆ ಉಪಯೋಗಿಸುತ್ತಿದ್ದಾರೆ. ಹರಿಶಿನವನ್ನು ನಾವು ಅಹಾರದಲ್ಲಿ ಸ್ವೀಕರಿಸುವುದರಿಂದ ಕೇವಲ ಚರ್ಮವಲ್ಲದೇ ದೇಹದ ಒಳಗಿರುವ ಅಂಗಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವುದರಲ್ಲಿಯೂ ಶಕ್ತಿಯುತವಾಗಿದೆ.
ಭಾರತೀಯ ಸಂಪ್ರದಾಯದಲ್ಲಂತೂ ಇದು ಸೌಭಾಗ್ಯದ ಪತ್ರೀಕವಾಗಿದೆ.ಇನ್ನು ಅರಿಶಿಣವಿಲ್ಲದ ಅಡುಗೆಯೇ ನಮ್ಮ ಭಾರತದಲ್ಲಿ ಇಲ್ಲ ಎನ್ನುವಷ್ಟರ ಮಟ್ಟಿಗೆ ಇದು ಜನಪ್ರಿಯವಾಗಿದೆ. ಅಲ್ಲದೇ ಇದರಲ್ಲಿ ಉತ್ತಮ ಔಷಧೀಯ ಗುಣಗಳಿವೆ. ಇದರಲ್ಲಿರುವ ಕರಕ್ಯೂಮಿನ್ ಎಂಬ ರಾಸಾಯನಿಕ ಅನೇಕ ರೋಗಗಳಿಗೆ ದಿವ್ಯ ಔಷಧವಾಗಿ ಕೆಲಸ ಮಾಡುತ್ತದೆ. ಇದು ದೇಹದಲ್ಲಿ ದೈನಂದಿನ ಕಷ್ಮಲಗಳನ್ನು ಹೊರಹಾಕಲು ಸಹಕಾರಿ.ದೇಹದ ಕಷ್ಮಲಗಳಿಂದ ಉಂಟಾಗುವ ಉರಿ ಮತ್ತು ನಂಜು ದುಷ್ಪರಿಣಾಮಗಳನ್ನು ಇದು ನಿಯಂತ್ರಿಸುತ್ತದೆ. ಇದು ಜನತೆಯ ಆರೋಗ್ಯ ಮತ್ತು ಸೌಖ್ಯತೆ ವರ್ಧನೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ.
ಅರ್ಧ ಚಮಚ ಅರಿಶಿಣ ಪುಡಿಯನ್ನು ನೀರಿನಲ್ಲಿ ಬೆರೆಸಿ ಪ್ರತಿ ನಿತ್ಯ ಎರಡು ಬಾರಿ ಸೇವಿಸುವುದರಿಂದ ಅನೇಕ ಆರೋಗ್ಯಕಾರಿ ಪ್ರಯೋಜನ ಇದೆ ಎಂಬುದು ಹಲವಾರು ಸಂಶೋಧನೆಗಳಿಂದ ದೃಢಪಟ್ಟಿದೆ. ವಿದೇಶಗಳಲ್ಲೂ ಸಹ ಈ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆದಿದೆ, ನಡೆಯುತ್ತಿವೆ. ಅರಿಶಿಣದ ನೀರು ಅತ್ಯುತ್ತಮ ಟಾನಿಕ್. ಹೃದಯ, ಲಿವರ್, ಶ್ವಾಸಕೋಶ ರೋಗಗಳ ನಿಯಂತ್ರಣಕ್ಕೆ ಅರಿಶಿಣ ನೀರಿಗಿಂತ ಉತ್ತಮವಾದ ಟಾನಿಕ್ ಇನ್ನೊಂದಿಲ್ಲ. ರೋಗ ಪ್ರತಿರೋಧಕ ವ್ಯವಸ್ಥೆಯನ್ನು ಸದೃಢಗೊಳಿಸುವುದೂ ಸೇರಿದಂತೆ ದೇಹದ ಆಂತರಿಕ ಶುದ್ದತೆಗಾಗಿ ಇದನ್ನು ಬಳಸುವುದು ಇಂದಿನ ಮಾಲಿನ್ಯಯುಕ್ತ ಪರಿಸರದಲ್ಲಿ ಅತ್ಯಂತ ಅನಿವಾರ್ಯವಾಗಿದೆ. ಪ್ರತಿ ನಿತ್ಯ ಎರಡು ಬಾರಿ ಅರಿಶಿಣ ನೀರು ಕುಡಿಯಿರಿ ರೋಗ ಮುಕ್ತರಾಗಿ.
ಡಾ. ಸಿದ್ದುಕುಮಾರ್ ಘಂಟಿ
ಬಸವಶ್ರೀ ಆಯುರ್ವೇದ ಸೇವಾ ಕೇಂದ್ರ
ಇಎಸ್‍ಐ ಆಸ್ಪತ್ರೆ ಮುಖ್ಯರಸ್ತೆ, 2ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-10
ದೂ.: 9845042755