Health Vision

Health Vision

SUBSCRIBE

Magazine

Click Here

ಏಪ್ರಿಲ್ ಬಿಸಿಲಿನಲ್ಲಿ ನಾವು ಯೋಚಿಸಲೇಬೇಕಾದ ಆರೋಗ್ಯ ರಕ್ಷಣಾ ದಿನಗಳು

ಅಂಧತ್ವ ತಡೆ ಸಪ್ತಾಹ

ಏಪ್ರಿಲ್ ಬಿಸಿಲು ಏರುತ್ತಿದೆ. ಬೆವರುತ್ತಾ ಕುಳಿತು ಯೋಚಿಸುತ್ತ ಹುಡುಕಿದಾಗ, ಏಪ್ರಿಲ್ ತಿಂಗಳಿನಲ್ಲಿ ವಿಶ್ವದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಆಚರಿಸಲಾಗುವ ಅನೇಕ ದಿನಾಚರಣೆಗಳ ಬಗ್ಗೆ ತಿಳಿದು ಬಂತು. ಈ ದಿನಾಚರಣೆಗಳಲ್ಲಿ ಜನರ ಆರೋಗ್ಯ, ಪ್ರಕೃತಿ- ಪರಿಸರ, ಪ್ರಾಣಿಗಳು ಹೀಗೆ ವಿಂಗಡಣೆ ಮಾಡಬಹುದು. ಏಪ್ರಿಲ್ 1 ರಿಂದ ಅಂಧತ್ವ ತಡೆಯುವ ವಿಶ್ವ ಸಪ್ತಾಹವಿದೆ. ಕಣ್ಣುಗಳ ಮೂಲಕವೇ ಅತಿ ಬೇಗ ವಿವರವಾದ ಪ್ರಪಂಚ ಜ್ಞಾನ ನಮಗೆ ದೊರಕುತ್ತದೆ. ವಸ್ತುಗಳನ್ನು ಹಾಗೂ ಜೀವಿಗಳನ್ನು ನೋಡಲು, ಅನುಭವಿಸಲು, ನೆನಪಿಸಿಕೊಳ್ಳಲು, ದೃಷ್ಟಿ ಬಹಳ ಮುಖ್ಯ. ತಮ್ಮ ಕಣ್ಣುಗಳಿಂದ ನೋಡಿಲ್ಲದೇ ಇರುವವರಿಗೆ, ಕಲ್ಪನೆಯ ಪರಿಧಿಯೂ ಚಿಕ್ಕದು. ಸ್ಮರಣಶಕ್ತಿ, ಗಮನ ಕೇಂದ್ರೀಕರಣ, ಒಳ್ಳೆಯ ಯೋಜನೆ, ಚಟುವಟಿಕೆಗಳಲ್ಲಿ ಭಾಗವಹಿಸಲು, ಪ್ರತಿಕ್ರಿಯಿಸಲು, ತಮ್ಮ ಕೆಲಸ ಮುಗಿಸಲು, ಗುರಿಗಳನ್ನು ಮುಟ್ಟಲು, ಪ್ರಕೃತಿ ಸೌಂದರ್ಯ ಅನುಭವಿಸಲು, ಜನರು ಹಾಗೂ ವಸ್ತುಗಳ ಸರಿಯಾದ ಚಿತ್ರ ಮೂಡಿಸಿಕೊಳ್ಳಲು, ಕಣ್ಣುಗಳು ಬೇಕೇ ಬೇಕು. ಕಣ್ಣಿದ್ದವರು, ಕಣ್ಣಿಲ್ಲದವರ ಬವಣೆ ಎಂದೂ ಅನುಭವಿಸಲಾರರು. ದೃಷ್ಟಿ ಚೆನ್ನಾಗಿರುವವರೆಗೆ ನಾವು ಕಾಳಜಿ ವಹಿಸದಿದ್ದರೆ ಇದು ಉಚಿತ ಶಾಶ್ವತ ಕಾಣಿಕೆಯಲ್ಲ ಎಂದು ಎಂದೂ ನಾವು  ಯೋಚಿಸುವುದಿಲ್ಲ. ಇಂದು ನಮ್ಮ ದೃಷ್ಟಿ ಬಹಳ ಚೆನ್ನಾಗಿದ್ದರೂ ವಯಸ್ಸಾದಂತೆ, ಆಧುನಿಕ ಜೀವನ ಶೈಲಿ ಹಾಗೂ ನಮ್ಮ ಸುತ್ತಲಿನ ಉಪಕರಣಗಳಿಂದ, ನಾವು ನಮ್ಮ ದೃಷ್ಟಿ ಯಾವಾಗ ಬೇಕಾದರೂ ಕಳೆದುಕೊಳ್ಳಬಹುದು.

ಹುಟ್ಟಿನಿಂದ ಅಂಧತ್ವ ಪಡೆದವರಿಗೆ ಹೋಲಿಸಿದರೆ, ಉತ್ತಮ ದೃಷ್ಟಿಯಿಟ್ಟುಕೊಂಡು ಹುಟ್ಟಿ, ಬೆಳೆದು, ಜೀವನದ ಮಧ್ಯ ಭಾಗದಲ್ಲಿ ಅಥವಾ ವಯಸ್ಸಾದ ಕಾಲದಲ್ಲಿ, ಕಣ್ಣು ಕಳೆದುಕೊಂಡವರು ಹೆಚ್ಚು ತೊಂದರೆ ಅನುಭವಿಸುತ್ತಾರೆ.ಮೈಸೂರಿನ ಸರಸ್ವತಿಪುರಂನಲ್ಲಿರುವ 87 ವರ್ಷದ ನನ್ನ ಮಾಮಿ ರಾಜಲಕ್ಷ್ಮಿ ರಾಮಚಂದ್ರನ್ ಅವರನ್ನು ಕಂಡಾಗಲೆಲ್ಲಾ, ನನ್ನ ಕಣ್ಣುಗಳಲ್ಲಿ ಕಣ್ಣೀರು ಚಿಮ್ಮುತ್ತದೆ. ಬಡಿಗತನ, ಕಮ್ಮಾರಿಕೆ,  ವಿದ್ಯುಚ್ಛಕ್ತಿ ಕೆಲಸ, ಬೆಸುಗೆ ಮುಂತಾದ ಅಪಾಯಕಾರಿ ಕೆಲಸಗಳಲ್ಲಿ, ರಕ್ಷಣಾ ಕನ್ನಡಕ ಹಾಕಿಕೊಳ್ಳಬೇಕು. ಸೂರ್ಯನ ಪ್ರಖರ ಬೆಳಕಿನಲ್ಲಿ ಓಡಾಡುವಾಗ ಸೂರ್ಯನ ನೇರಳಾತೀತ ಕಿರಣಗಳ ಅಪಾಯದಿಂದ ರಕ್ಷಿಸಿಕೊಳ್ಳಲು ಕಪ್ಪು ಕನ್ನಡಕ ಹಾಕಿಕೊಳ್ಳಿ. ಧೂಮಪಾನ ಮಾಡುವವರಿಗೆ ಕಣ್ಣಿನ ಪೊರೆ, ಕಣ್ಣುಗಳ ಕೀಲುಗಳಲ್ಲಿ ಊತ ಅಕ್ಷಿಪಟಲದ ಅವನತಿ ಆಗುವ ಸಂಭವ ಹೆಚ್ಚು. ಲ್ಯಾಪ್‍ಟಾಪ್ ಹಾಗೂ ಡೆಸ್ಕ್‍ಟಾಪ್‍ಗಳ ಪರದೆಗಳನ್ನು ಕಣ್ಣುಗಳಿಂದ ದೂರವಿಡಿ. ಸತತ ಕಂಪ್ಯೂಟರ್ ಮುಂದೆ ಕೆಲಸ ಮಾಡುವವರಿಗೆ, ಕಂಪ್ಯೂಟರ್ ದೃಷ್ಟಿ ಸಮಸ್ಯೆಯ ಲಕ್ಷಣಗಳು ಕಂಡು ಬರುತ್ತವೆ. ತಜ್ಞರು ಹೇಳುವಂತೆ  ಕಣ್ಣು ಕಂಪ್ಯೂಟರ್ ಪರದೆಯಿಂದ ಬಾಹುವಿನಷ್ಟು ದೂರ ಹಾಗೂ ಕೈಲಿ ಹಿಡಿದ ಉಪಕರಣದಿಂದ 16 ಇಂಚು ದೂರ ಇರಬೇಕು.

ಗಜ್ಜರಿಯೊಂದಿಗೆ ಎ. ಜೀವಸತ್ವವಿರುವ ದಟ್ಟ ಹಸಿರು ವರ್ಣದ ಸೊಪ್ಪು, ಕೋಸುಗಡ್ಡೆ, ಹಸಿರು ಬಟಾಣಿ, ಝಿಯಾಕ್ಸಾನ್‍ಥಿನ್ ಇರುವ ಗೋವಿನ ಜೋಳ, ಕೇಸರಿ, ಮೊಟ್ಟೆಯ ಹಳದಿಲೋಳೆ, ಕುಂಬಳಕಾಯಿ, ಮರಕೋಸು,  ಅವರೆಕಾಳು  ಇವೆಲ್ಲವುಗಳನ್ನು ಹೆಚ್ಚು ಬಳಸಿ.ನೇತ್ರದಾನ ಮಾಡುವುದು ಎಷ್ಟೋ ದೇವಸ್ಥಾನಗಳಿಗೆ ಹೋಗಿ ದೇವರಿಗೆ ಮಾಡುವ ಎಲ್ಲ ಸೇವೆಗಳು ಅಥವಾ ಧಾರ್ಮಿಕ ವಿಧಿಗಳಲ್ಲಿ ನಾವು ಗಳಿಸುವ ಅಗೋಚರ ಪುಣ್ಯಕ್ಕಿಂತ, ಕಣ್ಣಿಗೆ ಕಾಣಿಸುವ ಜೀವಂತ ಪುಣ್ಯ ನಮ್ಮದಾಗುತ್ತದೆ. ಇತರರಿಗೆ ಹೇಳುವ ಮೊದಲು ನಾವು ಮಾಡಿ ತೋರಿಸಬೇಕು ಎಂದು ದೃಢವಾಗಿ ನಂಬಿರುವ ನಾನು ನನ್ನ ಒಬ್ಬನೇ ಮಗ ಆಸ್ಪತ್ರೆಯಲ್ಲಿ ತೀರಿಕೊಂಡಾಗ ಆ ಆಘಾತ ನೋವು, ದುಃಖ ಸಂಕಟಗಳ ಮಧ್ಯದಲ್ಲೂ ಆತನ ಮರಣದ ಒಂದು ಗಂಟೆಯೊಳಗೆ ನೇತ್ರ ಬ್ಯಾಂಕಿಗೆ ತಿಳಿಸಿ ಆತನ ನೇತ್ರದಾನ ಮಾಡಿದ್ದೆನೆಂಬ ಧನ್ಯತಾ ಭಾವ ನನ್ನಲ್ಲಿದೆ.

ಆಟಿಸಂ – ಮಕ್ಕಳ ಮಾನಸಿಕ ಸಮಸ್ಯೆ:

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಧಾರದಂತೆ 18-12-2007ರಿಂದ ನಿರ್ಧರಿಸಿದಂತೆ ಪ್ರತೀವರ್ಷ ಏಪ್ರಿಲ್ 2ರಂದು ಆಟಿಸಂ ಅರಿವು ದಿನಾಚರಣೆಯಿದೆ. ಇಂಥ ಮಗು ತನ್ನ ಚಟುವಟಿಕೆಯಲ್ಲೇ, ತಲ್ಲೀನವಾಗಿ ಲೀನವಾಗಿರುತ್ತದೆ. ತನ್ನಷ್ಟಕ್ಕೆ ತಾನೇ ಇದ್ದು ಇತರರನ್ನು ಗಮನಿಸುವುದಿಲ್ಲ. ಆಟಿಸಂ ಬಗ್ಗೆ ಸೇರಿಕೊಂಡಿರುವ ಋಣಾತ್ಮಕ ಕೆಟ್ಟ ಹೆಸರು ದೂರ ಮಾಡುವ ಪ್ರಯತ್ನಗಳ ಕಡೆ, ಈ ಆಚರಣೆ ಗಮನ ನೀಡಿದೆ.ವಿಶೇಷ ಚೇತನವ್ಯಕ್ತಿಗಳ ಶಿಕ್ಷಣಾ ಕಾಯಿದೆಯ ವ್ಯಾಖ್ಯೆಯಂತೆ, ಅಭಿವೃದ್ಧಿ ವೈಕಲ್ಯತೆ, ಮಾತು ಹಾಗೂ ಮಾತಿಲ್ಲದ ಸಂವಹನ ಹಾಗೂ ಸಾಮಾಜಿಕ ವರ್ತನೆ  (ಮೌಖಿಕ) ಮೇಲೆ ಪರಿಣಾಮ ಬೀರುತ್ತದೆ.  3ನೇ ವರ್ಷಕ್ಕೆ ಮೊದಲು ಎದ್ದು ಕಾಣುವ ಈ ಸ್ಥಿತಿ ಮಗುವಿನ ಶೈಕ್ಷಣಿಕ ಸಾಧನೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಸ್ವಲೀನತೆ ಅಲೆಗೊಂಚಲು ಅವ್ಯವಸ್ಥೆಯಲ್ಲಿ ವ್ಯತ್ಯಾಸ, ಸಾಮಾಜಿಕ ಕೌಶಲ್ಯತೆಗಳಿಗೆ ಆಹ್ವಾನ, ಪುನರಾವೃತ್ತಿಯಾಗುವ ಸ್ವಭಾವ, ಮಾತಿನ ಹಾಗೂ ಮಾತಿರದ ಸಂವಹನ, ಅನನ್ಯ ಶಕ್ತಿಗಳು ಹಾಗೂ ವ್ಯತ್ಯಾಸಗಳನ್ನು ಕಾಣಬಹುದು.ಅಮೇರಿಕಾದಲ್ಲಿ 68 ಮಕ್ಕಳಲ್ಲಿ ಒಂದು ಮಗು ಈ ಸಮಸ್ಯೆ ಹೊಂದಿದ್ದರೆ, ಭಾರತದಲ್ಲಿ 18 ದಶಲಕ್ಷ ಜನ ಆಟಿಸಮ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಇವರಿಗೆ ಕೆಲವು ವೈದ್ಯಕೀಯ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳಿವೆ. ಅವು ಕರುಳಿಗೆ ಸಂಬಂಧಿಸಿದ ಅವ್ಯವಸ್ಥೆ, ರೋಗಗ್ರಸ್ತವಾಗುವಿಕೆ, ನಿದ್ರಾಭಂಗ, ಗಮನದ ಕೊರತೆ ಅತಿ ಹೆಚ್ಚು ಚಟುವಟಿಕೆಯ ಅವ್ಯವಸ್ಥೆ ಆತಂಕ ಹಾಗೂ ಹೆದರಿಕೆಗಳು.ಇವರಲ್ಲಿ ನಗುವಿಗೆ ಕಾರಣವಿಲ್ಲ. ಅಳುವಿಗೆ ನೆಪವಿಲ್ಲ. ಯಾವುದೋ ಬೇಡ. ಇನ್ಯಾವುದೋ ಬೇಕು. ಎಲ್ಲ ಮಕ್ಕಳಂತೆ ಅವರಿರುವುದಿಲ್ಲ ಹಾಗಂತ ಅವರಲ್ಲಿ ಸಾಮಥ್ರ್ಯವೇ ಇರುವುದಿಲ್ಲ ಅಂತಲ್ಲ, ಆದರೆ ವಿಶೇಷ ಆರೈಕೆ ಬಯಸುವ ಮಕ್ಕಳು ಆಟಿಸಂ ಸಮಸ್ಯೆಗೆ ಒಳಗಾದವರಾಗಿ ಒಂದು ಸೀಮಿತ ಗುಂಪಿನಲ್ಲಿ ಗುರುತಿಸಿಕೊಳ್ಳುತ್ತಾರೆ. ಮಾನಸಿಕ ಬೆಳವಣಿಗೆಯ  ಸಮಸ್ಯೆ ಒಂದು ರೀತಿಯ ನರವೈಜ್ಞಾನಿಕ ಸಮಸ್ಯೆ. ಅಂದಾಜು ಮೂರು ವರ್ಷ ವಯಸ್ಸಿನ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಸಮಸ್ಯೆಯೂ, ಮಕ್ಕಳ ಬುದ್ಧಿ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ. ಇಂತಹ ಸಮಸ್ಯೆಯಿಂದ ಬಳಲುವ ಮಕ್ಕಳೂ ಸಾಮಾಜಿಕವಾಗಿ ಹೆಚ್ಚು ಬೆರೆಯುವುದು ಹಾಗೂ ವಿವಿಧ ಚಟುವಟಿಕೆಗಳಲ್ಲಿ ನಿರುತ್ಸಾಹ ತೋರುತ್ತಾರೆ.

ಒಂದು ವೇಳೆ ಚಿಕಿತ್ಸೆ ತಡ ಮಾಡಿದಲ್ಲಿ ಮಾತನಾಡಲು ಸಾಧ್ಯವಾಗದೇ ಇರುವುದು ಅಲ್ಲದೆ ಮಾತನಾಡಲು ಪ್ರಯತ್ನಿಸದೇ ಇರುವುದು ಪದೇಪದೆ ಹೇಳಿದ ಮಾತುಗಳನ್ನು ಪುನರಾವರ್ತಿಸುವುದು, ವಿಚಿತ್ರ ರೀತಿಯ ಹಾವಭಾವಗಳು ಹಾಗೂ ಕಲಿಕೆಯಲ್ಲಿ ಹಿಂದುಳಿಯುವಿಕೆ ಮೊದಲಾದ ಗಂಭೀರ ಸ್ವರೂಪದ ಸಮಸ್ಯೆಗಳನ್ನು ಎದುರಿಸುವಂತಾಗುತ್ತದೆ.ತಾಯಂದಿರು ಪೋಷಕಾಂಶದ ಕೊರತೆ ಅನುಭವಿಸಿದಲ್ಲಿ ಹಾಗೂ ರಾಸಾಯನಿಕ ವಸ್ತುಗಳಿಗೆ ಎದುರಾದಲ್ಲಿಯೂ ಕೂಡ ಹುಟ್ಟುವ ಮಕ್ಕಳಲ್ಲಿ ಈ ರೀತಿಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಗರ್ಭಾವಸ್ಥೆಯಲ್ಲಿ ಎದುರಾಗುವಂತಹ ಸೋಂಕು ಹಾಗೂ ಆಂಟಿ ಡಿಪ್ರೆಸೆಂಟ್ಸ್ ಕೂಡ ಆಟಿಸಮ್‍ಗೆ ಕಾರಣವಾಗುತ್ತದೆ.

ಆಟಿಸಮ್ ಸಮಸ್ಯೆ ಗುಣಪಡಿಸಲಾಗದಂತಹ ನರವೈಜ್ಞಾನಿಕ ಸಮಸ್ಯೆಯಾಗಿ ಉಳಿದಿತ್ತು. ಆಟಿಸಮ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಇಂದು ವೃತ್ತಿ ಚಿಕಿತ್ಸೆ, ಸ್ವಭಾವ ಚಿಕಿತ್ಸೆ, ಮಾತಿನ ಚಿಕಿತ್ಸೆ, ನೆರವಾಗಲಿದೆ. ಇನ್ನು ಕೆಲ ಪ್ರಕರಣಗಳಲ್ಲಿ ಉದ್ವೇಗ ಹಾಗೂ ಆತಂಕ ಸೇರಿದಂತಹ ಹಾವಭಾವಗಳ ಗಂಭಿರ ಸ್ವರೂಪವನ್ನು ತಗ್ಗಿಸಲು ಜೌಷದೋಪಚಾರ ನಡೆಸುವ ಅಗತ್ಯ ಇರುತ್ತದೆ. ಎರಡು ದಶಕಗಳ ಅವಧಿಯಲ್ಲಿ ಸ್ಟೆಮ್ ಸೆಲ್ ಥೆರಪಿ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಲಾಗಿದೆ.  ಈ ಸ್ಟೆಮ್ ಸೆಲ್‍ಗಳನ್ನು ಎಂಬ್ರಿಯೋ ಹಾಗೂ ಕರುಳ ಬಳ್ಳಿಯ ಮೂಲಕ ಅಥವಾ ವ್ಯಕ್ತಿಯ ಅಸ್ತಿರುಜುವಿನಲ್ಲಿ ಪಡೆದುಕೊಳ್ಳಲಾಗುತ್ತದೆ. ಸ್ಟೆಮ್ ಸೆಲ್ ಗಳನ್ನು ರೋಗಿಯ ಮಿದುಳಿಗೆ ಕಸಿ ಮಾಡಲಾಗುತ್ತದೆ. ಬಳಿಕ ಈ ಸ್ಟೆಮ್ ಸೆಲ್‍ಗಳು ಮೆದುಳಿನಲ್ಲಿ ಬೆರೆತು ಸದರ ಬೆಳವಣಿಗೆಯನ್ನು ಸಾಧ್ಯವನ್ನಾಗಿಸುತ್ತದೆ ಹಾನಿಗೊಳಗಾದ ಸೆಲ್ ಗಳನ್ನು ಈ ಸ್ಟೆಮ್ ಸೆಲ್‍ಗಳು ಸರಿಪಡಿಸುತ್ತವೆ. ಆರೋಗ್ಯ ಪೂರ್ಣ ಸೆಲ್ ಗಳ ಅಭಿವೃದ್ಧಿಗೆ ನೆರವಾಗುತ್ತದೆ.

ಪುಟ್ಟ ಮಕ್ಕಳಿಗೆ ಆದಷ್ಟು ಬೇಗ ಮಾತು ಹಾಗೂ ಸ್ವಭಾವದ ತರಬೇತಿ ಕೊಟ್ಟರೆ ಸ್ವಕಾಳಜಿ, ಸಾಮಾಜಿಕ ಹಾಗೂ ಸಂವಹನ ಕೌಶಲ್ಯಗಳನ್ನು ಅವರು ಗಳಿಸುತ್ತಾರೆ. 2015ರಲ್ಲಿ ವಿಶ್ವದಲ್ಲಿ 24.8 ದಶಲಕ್ಷ ಜನ ಆಟಿಸಂ ಹೊಂದಿದ್ದರು. ಆಟಿಸಂ ಇರುವವರು ಸ್ನೇಹ ಮಾಡಿಕೊಳ್ಳುವುದು ಹಾಗೂ ಅವುಗಳನ್ನು ಉಳಿಸಿಕೊಳ್ಳುವುದು ಇವರಿಗೆ ಕಷ್ಟ. ಕೆಲವು ಮಕ್ಕಳಲ್ಲಿ ಬೌದ್ಧಿಕ ವಿಕಲತೆಯ ಜೊತೆಗೆ ಆಕ್ರಮಣಶೀಲತೆ, ವಸ್ತುಗಳನ್ನು ಹಾಳು ಮಾಡುವ ಗುಣ ಹಾಗೂ ಸಿಡಿಮಿಡಿ ಗುಣ ಇರುತ್ತದೆ. ಪ್ರತಿನಿತ್ಯ ಇವರು ದಿನನಿತ್ಯ ಆವಶ್ಯಕತೆಗೆ ಅನುಗುಣವಾಗಿ ಸ್ವಾಭಾವಿಕವಾಗಿ ಮಾತನಾಡಲಾರರು. ಅಸ್ವಾಭಾವಿಕ ಅಂಗಚಲನೆ ಮಾಡುತ್ತಾರೆ. ಕಡಿಮೆ ಪ್ರತಿಕ್ರಿಯಿಸುತ್ತಾರೆ. ಅನುವಂಶೀಯತೆ, ಬಸರಿಯಾಗಿದ್ದಾಗ ಗಾಳಿಯ ಮಾಲಿನ್ಯತೆಯಿಂದ ಹುಟ್ಟುವ ಮಗುವಿಗೆ ಆಟಿಸಂ ಬರಬಹುದು.

ಮಕ್ಕಳಿಗೆ ಸಹಾಯ ಮಾಡಿ ಎಂಬ ರಾಷ್ಟ್ರೀಯ ಹಾರೈಕೆ ದಿನ ಏಪ್ರಿಲ್ 2ರಂದೇ ಆಚರಿಸುತ್ತಾರೆ. ಪ್ರತಿಯೊಬ್ಬರೂ ತಾವು ಜೀವನಪೂರ್ತಿ ಮಕ್ಕಳ ದುರ್ಬಳಕೆ ಹಾಗೂ ನಿಷ್ಕಾಳಜಿ ಮಾಡುವುದಿಲ್ಲ ಎಂಬ ಹೋರಾಟದ ಪ್ರಮಾಣ ಮಾಡಲು ಈ ಸಂದರ್ಭ ಹೇಳುತ್ತಾರೆ. ಪ್ರತಿದಿನ ಈ ಕಾರಣಗಳಿಂದ ಸಾಯುವ ಸುಮಾರು 5 ಮಕ್ಕಳ ನೆನಪಿನಲಿ,್ಲ 5 ಮೇಣಬತ್ತಿ ಹಚ್ಚಿ 5 ನಿಮಿಷ ಮೌನಾಚರಣೆ ಮಾಡುತ್ತಾರೆ.

ಪ್ರತಿವರ್ಷ ಏಪ್ರಿಲ್ 4ರಂದು ಅಂತರ್ ರಾಷ್ಟ್ರೀಯ ಗಜ್ಜರಿ ದಿನ :– ಇದೊಂದು ಕಿತ್ತಳೆ ಬಣ್ಣದ ಬೇರು ತರಕಾರಿ. ಪರ್ಶಿಯಾದಿಂದ ಇದು ಆರಂಭವಾಯಿತಂತೆ. ಇದರಲ್ಲಿ ಆಲ್ಫಾ ಹಾಗೂ ಬೀಟಾ ಕೆರೋಟಿನ್, ಹೆಚ್ಚಿನಂಶದ ಕೆ ಹಾಗೂ ಬಿ6 ಜೀವಸತ್ವಗಳಿವೆ. ತೂಕ ಇಳಿಕೆ, ದೃಷ್ಟಿ ಸುಧಾರಣೆ, ಕ್ಯಾನ್ಸರ್‍ಗೆ ತಡೆ, ಆರೋಗ್ಯಕರ ಚರ್ಮ ಇವುಗಳಿಗಾಗಿ ಗಜ್ಜರಿ ಬಳಸಬೇಕು. ಇದನ್ನು ಹಸಿ ಸಲಾಡ್, ಸೂಪ್, ಹಲ್ವಾ, ಕೇಕ್, ಪುಡ್ಡಿಂಗ್ಗಳಲ್ಲಿ ಬಳಸುತ್ತಾರೆ.

ರಾಷ್ಟ್ರೀಯ ನಡಿಗೆ ದಿನ ಏಪ್ರಿಲ್ 4ರಂದೇ. ಇದರಲ್ಲಿ ಎರಡು ಉದ್ದೇಶಗಳಿವೆ. ಅಡ್ಡವಿರುವ ವಸ್ತುಗಳಾದ ಉದ್ಯಾನದ ಕುರ್ಚಿ ಅಥವಾ ಮಣ್ಣಿ ಕೊಳಗಳ ಮೂಲಕ ನಡೆಯದೇ, ಅವುಗಳನ್ನು ಸುತ್ತು ಹಾಕಿ ನಡೆಯವುದರಿಂದ, ಹೆಚ್ಚು ನಡಿಗೆಯಾಗಿ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ. ಇದರ ಆಂತರ್ಯದ ಅರ್ಥ, ನಮಗೆ ಅಡ್ಡವಾಗಿ ನಿಂತಿರುವ ಸಮಸ್ಯೆಗಳನ್ನು ನಿವಾರಿಸುವುದು. ಶಾಂತಿ, ಹಾಗೂ ಸಂತಸಕ್ಕಾಗಿ ಕೆಲವು ವಿಷಯಗಳ ಬಗ್ಗೆ ಅಲಕ್ಷ್ಯ ಒಳ್ಳೆಯದು. ಅನಾವಶ್ಯಕವಾದ ಅಸಮಾಧಾನಕರ ಸಂದರ್ಭಗಳು, ನಿಮ್ಮ ನಿಯಂತ್ರಣದಲ್ಲಿಲ್ಲದ ಸ್ಥಿತಿಗಳು, ಇವುಗಳನ್ನು ಹಾಗೇ ಬಿಟ್ಟು ಬಿಡಿ. ಹೋರಾಡಲು ಮುಖ್ಯವಲ್ಲದ ಜೀವನದ ಸಮಸ್ಯೆಗಳನ್ನು ನಿರ್ಲಕ್ಷಿಸಿ. ಪ್ರತಿ ಮಾನವ ಸುತ್ತ ನಡೆಯಬೇಕಾದರೆ, ಯಾವುದಾದರೂ ದುಃಖ ಅವನಲ್ಲಿರುತ್ತದೆ. ಅವರ ತೋಳುಗಳಲ್ಲಿ ಅವರು ಇದನ್ನು ಧರಿಸಿದಿರುವುದಿಲ್ಲ ನೀವು ಆಳವಾಗಿ ಗಮನಿಸಿದರೆ ಅದು ಗೋಚರವಾಗುತ್ತದೆ.

ಅಂದೇ ಸಿ ಜೀವಸತ್ವ ದಿನ.

ಮಾನವ ದೇಹಕ್ಕೆ ಇದೊಂದು ಅಮೂಲ್ಯ ಸತ್ವ. ನೆಗಡಿ ತಡೆಯಲು ಹಾಗೂ ಅದರ ಉಪಚಾರಕ್ಕೆ, ಸ್ಕರ್ವಿ ತಡೆಯಲು, ಅಧಿಕರಕ್ತ ಒತ್ತಡ ನಿವಾರಿಸಲು, ಕಣ್ಣಿನ ಪೊರೆ ಒಣಗಲು, ಕ್ಯಾನ್ಸರ್ ಪ್ರತಿಬಂಧಿಸಲು, ಮನಸ್ಸಿನ ಒಳ್ಳೆಯ ಭಾವ ಕಾಪಾಡಲು, ವಯಸ್ಸಾಗುವ ಕ್ರಿಯೆ ನಿಧಾನ ಮಾಡಲು, ಆರೋಗ್ಯಕರ ಹೃದಯ ಹಾಗೂ ರಕ್ತನಾಳಗಳನ್ನು ಬೆಂಬಲಿಸಲು, ಕೊಲೆಸ್ಟರಾಲ್ ಮಟ್ಟ ಕಡಿಮೆ ಮಾಡಲು, ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿಸಲು ಖುತುಮಾನದ ಹಾಗೂ ಆಹಾರದ ಅಲರ್ಜಿಗಳಿಂದ ರಕ್ಷಿಸಲು ಸಿ ಜೀವಸತ್ವ ಬೇಕೇ ಬೇಕು. ಅದು ಅತ್ಯಂತ ಶಕ್ತಿಯುತ ಉತ್ಕರ್ಷಣ ನಿರೋಧಕ. ಅಯೋಡಿನ್ ಕೊರತೆ ಇರುವ ಹೈಪೋ ಥೈರಾಯಿಡಿಸಂ, ಕ್ಯಾನ್ಸರ್ ಹಾಗೂ ಮಧುಮೇಹ ಬರದಂತೆ ತಡೆಯಲು, ಆರೋಗ್ಯಕರ ಜೀವನ ಶೈಲಿ ಹಾಗೂ ಉತ್ಕರ್ಷಣ ನಿರೋಧಕ ಆಹಾರ ಅತ್ಯಂತ ಅವಶ್ಯ. ದೇಹದಲ್ಲಿ ಸಿ ಜೀವಸತ್ವ ಸಂಗ್ರಹವಾಗಿರುವುದಿಲ್ಲ ಹೀಗಾಗಿ ಪ್ರತಿದಿನ ಈ ಜೀವಸತ್ವದಿಂದ ಶ್ರೀಮಂತವಾಗಿರುವ ಆಹಾರ  ತಿನ್ನಬೇಕು. ದೇಹದ ಪ್ರತಿರೋಧಕ ಶಕ್ತಿ ಬಲಪಡಿಸಲು, ಒತ್ತಡ ಮುಕ್ತವಾಗಿಸಲು ಇದು ಬೇಕೇ ಬೇಕು.

ಪ್ರಾಣಿಜನ್ಯ  ಸಸಾರಜನಕವನ್ನು ಸಂಶ್ಲೇಷಿಸಲು ಇದು ಬೇಕು. ಇದು ನೀರಿನಲ್ಲಿ ಕರಗುವ ಜೀವಸತ್ವವಾಗಿದ್ದು, ವಿಟಮಿನ್ ಸಿ ಕೊರತೆಯಿಂದ ಸ್ನಾಯುಗಳ ದೌರ್ಬಲ್ಯ, ಅತಿಯಾದ ಜಡತ್ವ, ಸಂದುಗಳ ನೋವು, ಒಸಡುಗಳಲ್ಲಿ ರಕ್ತಸ್ರಾವ, ಕಾಲುಗಳ ಮೇಲೆ ದದ್ದುಗಳು ಕಂಡು ಬರುತ್ತವೆ. ಪ್ರತಿ ದಿನ ವಯಸ್ಕ ಪುರುಷ 90 ಮಿಲಿಗ್ರ್ಯಾಂ ವಿಟಮಿನ್ ಸಿ ಸ್ವೀಕರಿಸಬೇಕು. ಹಾಗೂ ಮಹಿಳೆ 75 ಮಿಲಿಗ್ರ್ಯಾಂ ಸ್ವೀಕರಿಸಬೇಕು. ಗರ್ಭಿಣಿ 85ಮಿಲಿಗ್ರ್ಯಾಂ ಹಾಗೂ ಹಾಲೂಡಿಸುವ ತಾಯಿ 120 ಮಿಲಿಗ್ರ್ಯಾಂ ಸ್ವೀಕರಿಸಬೇಕು. ಧೂಮ್ರಪಾನಿUಳು ಪ್ರತಿದಿನ 135 ಮಿಲಿಗ್ರ್ಯಾಂ ತೆಗೆದುಕೊಳ್ಳಲೇಬೇಕು. ತಾಜಾ ಹಣ್ಣು ಹಾಗೂ ತರಕಾರಿಗಳಲ್ಲಿ ಇದಿದೆ.  ಟಮೋಟೋ, ಕೆಂಪು ಹಾಗೂ ಹಸಿರು ಮೆಣಸು, ಕಿವಿಹಣ್ಣು, ದ್ರಾಕ್ಷಿ, ಲಿಂಬೆ, ಕಿತಳೆ, ಸ್ಟ್ರಾಬೆರ್ರಿ, ಕ್ಯಾಬೀಜ್, ಆಲೂ, ಹಸಿರು ಬಟಾಣಿ, ಪಾಲಕ್ ಅನಾನಸ್, ಪಪ್ಪಾಯಿಗಳಲ್ಲಿ ವಿಟಮಿನ್ ಸಿ ಇದೆ.  ಮಾನವ ದೇಹದಲ್ಲಿ ಕೊಲ್ಲಾಜೆನ್ ಎಂಬ ಸಸಾರಜನಕದ ನಿರ್ಮಾಣವಾಗಲು ಇದು ಕಾರಣ.

ಕೊಲ್ಲಾಜೆನ್ ವಯಸ್ಸಾದಾಗಲೂ ಚರ್ಮ ಹಾಗೂ ಸ್ನಾಯುಗಳಿಗೆ ಮೃದುತ್ವ ಹಾಗೂ ಕೋಮಲತ್ವ ಹಾಗೂ ಸ್ಥಿತಿಸ್ಥ್ಥಾಪಕತ್ವ ಗುಣ ಕೊಡುತ್ತದೆ. ಹೃದಯದ ಆರೋಗ್ಯ ಉತ್ತಮಪಡಿಸುವ ಪ್ಲಾಸಾಗೆ ಹೆಚ್ಚು ಸಿ ಜೀವಸತ್ವ  ಬೇಕು. ಒತ್ತಡದ ಮಧ್ಯೆ ಅಪಧಮನಿಗಳಿಗೆ ಸಾಂತ್ವನಗೊಳಿಸಿ ರಕ್ತ ಹರಿಯಲು ನೆgವು ನೀಡಿ ಹೃದಯಾಘಾತದ ಅಪಾಯ ತಗ್ಗಿಸುತ್ತದೆ.  ಕೆಟ್ಟ ಕೊಲೆಸ್ಟರಾಲ್, ಹೃದಯ ಬೇನೆ ಹಾಗೂ ಮಧುಮೇಹಕ್ಕೆ ನೇರ ಸಂಬಂಧಿಸಿದೆ. ರಕ್ತದಲ್ಲಿ ಕೊಲೆಸ್ಟರಾಲ್ ಪ್ರಮಾಣ ನಿಯಂತ್ರಿಸಿ, ದೇಹದಿಂದ ಇದರ ವಿಸರ್ಜನೆಗೆ ಪ್ರೇರಣೆ ನೀಡುತ್ತದೆ. ದೇಹದಲ್ಲಿ ಕೊಲೆಸ್ಟರಾಲ್ ಹಾಗೂ ಕೊಬ್ಬು ಸಂಗ್ರಹಣೆ ತಡೆಯುತ್ತದೆ. ಪ್ರತಿರೋಧಕ ಶಕ್ತಿ ಹೆಚ್ಚಿಸಿ ಹಾನಿಕಾರಕ ರೋಗಾಣುಗಳನ್ನು, ಸೋಂಕುಗಳು ಹಾಗೂ ಸೂಕ್ಷ್ಮ ರೋಗಾಣುಗಳನ್ನೂ ತಡೆಯುತ್ತದೆ. ಅಲರ್ಜಿ ಅಥವಾ ಮೈನೂರತೆ ಉಂಟುಮಾಡುವ ಹಿಸ್ಟಾಮೈನ್ ಉತ್ಪಾದನೆ ಕಡಿಮೆ ಮಾಡಿಸುತ್ತದೆ ವಿಟಮಿನ್ ಸಿ. ಅಂಗಾಂಶಗಳ ಸುಧಾರಣೆ ಮಾಡಲು ಹಾಗೂ ಪುನರುತ್ಪಾದಿಸಲು ವಿಟವಿನ್ ಸಿ ಬೇಕು.

ಏಪ್ರಿಲ್ 6ರಂದು ಕೆಲಸಕ್ಕೆ ನಡೆಯುವ ದಿನ. ಆರಾಮ ನೀಡುವ ನಡಿಗೆ ಪಾದರಕ್ಷೆ ಹಾಕಿ, ಕೆಲಸದ ಸ್ಥಳಕ್ಕೆ ನಡೆಯಬೇಕೆಂಬುದು ಈ ದಿನದ ಉದ್ದೇಶ. ನಡೆಯಲಾಗದಿದ್ದರೆ ಸಾರ್ವಜನಿಕ ಸಾರಿಗೆಯಲ್ಲಿ ಹೋಗಿ, ಬಸ್‍ಸ್ಟಾಪ್‍ನಿಂದ ನಡೆಯಿರಿ. ಹಾಗೆಯೇ ಊಟ, ತಿಂಡಿಗಳಿಗೂ ನಡೆದೇ ಹೋಗಿ. ನಿಮ್ಮ ಸಹೋದ್ಯೋಗಿಗಳನ್ನೂ ನಿಮ್ಮೊಂದಿಗೆ ಹೆಜ್ಜೆ ಹಾಕಲು ಪ್ರೇರೇಪಣೆ ನೀಡಿ. ದಿನ ನಿಮ್ಮ ಆರೋಗ್ಯಕರ ಹೆಜ್ಜೆಗಳನ್ನು 30ರಿಂದ 60 ನಿಮಿಷ ಹಾಕಿದರೆ,  ಹೃದಯ ಬೇನೆ- ಕ್ಯಾನ್ಸರ್-ಪಾಶ್ರ್ವವಾಯು-ಮಧುಮೇಹಗಳ ಅಪಾಯ ಕಡಿಮೆ ಮಾಡುತ್ತದೆ.

ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನ. ಇಡೀ ವಿಶ್ವದ ಜನರ ಆರೋಗ್ಯ ರಕ್ಷಣೆಗಾಗಿ ಪ್ರಯತ್ನಿಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆಯ ಯೋಜನೆಗಳಿಗೆ ಪ್ರತಿ ವ್ಯಕ್ತಿಯೂ ಬೆಂಬಲ ಕೊಡಬೇಕು. ನಾನು, ನನ್ನ ಹಾಗೂ ನನ್ನ ಕುಟುಂಬದ ಎಲ್ಲ ಸದಸ್ಯರ ಆರೋಗ್ಯ ಕಾಪಾಡಲು, ಮುಂಜಾಗರೂಕತೆ ವಹಿಸುತ್ತೇನೆ ಎಂಬ ಪ್ರಮಾಣ ಎಲ್ಲರೂ ಮಾಡಬೇಕಾಗಿದೆ.

8ನೇ ತಾರೀಖು ರಾಷ್ಟ್ರೀಯ ಮೃಗಾಲಯ ಪ್ರಿಯರ ದಿನ. ನಾವೆಲ್ಲ ಮನುಷ್ಯರು, ಪ್ರಾಣಿಗಳು, ಪಕ್ಷಿಗಳು ಹಾಗೂ ಮರಗಳೊಂದಿಗೆ ಕೂಡಿ ಬಾಳಬೇಕಾಗಿದೆ. ನಮ್ಮ ಹತ್ತಿರದ ಮೃಗಾಲಯಕ್ಕೆ ಹೋಗಿ, ಪ್ರಾಣಿಗಳು ಪಕ್ಷಿಗಳನ್ನು ಅಂದು ಕಂಡು ಸಂತಸ ಪಡೋಣ. ಇದೇ 15ರಿಂದ ವಿಶ್ವ ಕ್ರಿಯಾತ್ಮಕತೆ ಹಾಗೂ ಸಂಶೋಧನಾ ಸಪ್ತಾಹ. ನಮ್ಮ ಒಂದು ಸಂಪನ್ಮೂಲವೇ ಸೃಜನಾತ್ಮಕತೆ, ಸೃಷ್ಟಿಶೀಲತೆ. ಇದನ್ನು ಸರಿಯಾಗಿ ಬಳಸಿದರೆ ನಮ್ಮ ಭಾವನಾತ್ಮಕ ಹಾಗೂ ಕ್ರಿಯಾತ್ಮಕ ಆರೋಗ್ಯ ಹೆಚ್ಚುತ್ತದೆ.

ಆನೆ ಉಳಿಸಿ ದಿನ 15ರಂದೇ. ವಿಶ್ವ ಆನೆ ದಿನದಂದು ನಮ್ಮ ಪ್ರೀತಿ ಹಾಗೂ ಬೆಂಬಲವನ್ನು ತೋರಿಸಿ, ಆನೆಯಂತಹ ಪ್ರಾಣಿಗಳ ಭವಿಷ್ಯಕ್ಕಿರುವ ಭಯಗಳನ್ನು ನಿವಾರಿಸಲು ಅರಿವು ಹಬ್ಬಿಸಬೇಕಾಗಿದೆ. ದಂತಚೋರರು, ಕಳ್ಳಸಾಗಣೆದಾರರ ಹಾವಳಿ ತಡೆದರೆ ಮಾತ್ರ ಇವು ಮುಂದೆ ಉಳಿಯಬಲ್ಲವು.

17 ಏಪ್ರಿಲ್‍ ವಿಶ್ವ ಹೆಮೋಫಿಲಿಯಾ ದಿನ. ಈ ಸಲೆ ನೆತ್ತರು ಸೋರಿಕೆ ಕಾಹಿಲೆಯಲ್ಲಿ ಗಾಯವಾದಾಗ ರಕ್ತ ಹೆಪ್ಪುಗಟ್ಟದೇ ಹಾಗೇ ಹರಿದು ಹೋಗುವ ಅಪಾಯವಿದೆ. ಇದೊಂದು ಅನುವಂಶಿಕ ಅಸ್ವಸ್ಥತೆ. ನಮ್ಮ ದೇಶದಲ್ಲಿ ಸುಮಾರು 50 ಸಾವಿರ ಇಂಥಾ ರೋಗಿಗಳಿದ್ದಾರೆ.  ಇವರಲ್ಲಿ ರಕ್ತ ಹೆಪ್ಪುಗಟ್ಟಿಸುವ ಅಂಶಗಳಾದ ವಿಶೇಷ ಸಸಾರಜನಕ ಕಡಿಮೆ ಪ್ರಮಾಣದಲ್ಲಿದ್ದು, ರಕ್ತಸ್ರಾವ ಹೆಚ್ಚಾಗುತ್ತದೆ.

ವಿಶ್ವ ಬಾಳೆಹಣ್ಣು ದಿನಾಚರಣೆ 18ರಂದು:– ಆರೋಗ್ಯಕರ ತಿನ್ನುವಿಕೆ, ಸರಳ ಊಟದ ಡಬ್ಬಿ, ಹಂಚಿಕೊಂಡು ತಿನ್ನುವಿಕೆ ಎಲ್ಲಾ ಸೇರಿವೆ. ಹಣ್ಣು ಆಧರಿಸಿದ ಮೋಜಿನಲ್ಲಿ ವಿದ್ಯಾರ್ಥಿಗಳು ಬಾಳೆಹಣ್ಣಿನಂತೆ ವೇಷ ಧರಿಸುತ್ತಾರೆ.

ವಿಶ್ವ ಬೆಳ್ಳುಳ್ಳಿ ದಿನಾಚರಣೆ 19ರಂದು. ಇದೊಂದು ಪೊದೆಯ ಉತ್ಪಾದನೆ. ಇದು ಘಾಟು ವಾಸನೆಗೆ ಹೆಸರಾಗಿದೆ. ಅನೇಕ ರೋಗಗಳನ್ನು ತಡೆಯಲು ಹಾಗೂ ರೋಗದ ಚಿಕಿತ್ಸೆಯಲ್ಲಿ ಬೆಳ್ಳುಳ್ಳಿ ಬಳಸುತ್ತಾರೆ. ಇದಕ್ಕೆ ಪ್ರಕೃತಿಯ ಅದ್ಭುತ ಔಷಧಿ ಎನ್ನುತ್ತಾರೆ. ನೆಗಡಿಗೆ ಒಳ್ಳೆಯ ಔಷಧಿ. ರಕ್ತದ ಒತ್ತಡ ಹಾಗೂ ಕೊಲೆಸ್ಟರಾಲ್ ಇಳಿಸುತ್ತದೆ ಇದು.

22ರಂದು ವಿಶ್ವಭೂಮಿ ದಿನಾಚರಣೆ. ಭೂಮಿಯ ಸುರಕ್ಷತೆ, ವಾತಾವರಣದ ರಕ್ಷಣೆ, ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ಯೋಗ್ಯ ಕ್ರಮ ಕೈಗೊಳ್ಳುವುದು ಈ ದಿನಾಚರಣೆಯ ಉದ್ದೇಶ. ಈ ಭೂಮಿ ದಿನಾಚರಣೆಯಲ್ಲಿ 175 ದೇಶಗಳ ಒಂದು ಶತಕೋಟಿ ಜನ ಭಾಗವಹಿಸುತ್ತಾರೆ. ಇಡೀ ವಿಶ್ವ ಹಸಿರಾಗಿ ಬೆಳೆಯಬೇಕು ಎಂಬುದೇ ಇಲ್ಲಿಯ ಉದ್ದೇಶ. ಹವಾಮಾನ ಪರಿಹಾರಗಳು, ವಾತಾವರಣ ಸಾಧನೆಗಳ ಬಗ್ಗೆ ಈ ದಿನ ಚರ್ಚಿಸಲಾಗುತ್ತಿದೆ.

ಏಪ್ರಿಲ್ 25ರಂದು ವಿಶ್ವ ಮಲೇರಿಯಾ ದಿನ:– ಸೋಂಕಾಗಿರುವ ಅನಾಫಿಲಿಸ್ ಸೊಳ್ಳೆಯ ಕಡಿತದಿಂದ ಈ ಭಯಾನಕ ರೋಗ ವೇಗದಿಂದ ಹರಡುತ್ತದೆ. ಪ್ರತೀವರ್ಷ 500 ದಶಲಕ್ಷ ಜನರಿಗೆ ಸೋಂಕು ಹರಡಿ, 1 ದಶಲಕ್ಷ ಜನರನು ಕೊಲ್ಲುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.. 1998ರಿಂದ 2003ರವರೆಗೆ, ನಾನು ಆಕಾಶವಾಣಿ ರಾಯಚೂರಿನಲ್ಲಿದ್ದಾಗ, ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಶಿಕ್ಷಣ ನೀಡಲು ಸಂಕಲ್ಪಿಸಿ, ರಾಯಚೂರು ಜಿಲ್ಲ್ಲಾ ಲಿಂಗಸೂಗೂರು ತಾಲೂಕಿನಲ್ಲಿ, ಭಾರತೀಯ ವೈದ್ಯಕೀಯ ಸಂಘ ಹಾಗೂ ಡಾ ಗುರುರಾಜ ದೇಶಪಾಂಡೆ ಅವರ ಸಹಕಾರದೊಂದಿಗೆ, ಆಪರೇಷನ್ ಎಂ ಎಂಬ ನಾಟಕದ ಹಲವಾರು ಪ್ರದರ್ಶನಗಳನ್ನು ಮಾಡಿದ್ದೆ. ಸೂತ್ರಧಾರನಾಗಿ ಸೊಳ್ಳೆಯ ಲೋಕಕ್ಕೆ ಹೋಗಿ, ಸೊಳ್ಳೆ ಲೋಕದಲ್ಲಿ ಅವು ಮನುಷ್ಯನ ತಪ್ಪುಗಳನ್ನುಹಿಯಾಳಿಸುವುದನ್ನುಕಂಡು, ತಿಳಿದು ಬಂದು ಇಡೀ ಲೋಕಕ್ಕೆ ಚಲೇಜಾವ್ ಚಳಿಜ್ವರ ಎಂಬ ಜನಾಂದೋಳನದ ಮೂಲಕ ಆರೋಗ್ಯ ಶಿಕ್ಷಣ ನೀಡುವ ಪ್ರಯತ್ನ ಮಾಡಿದ್ದೆ. ಸಿಕ್ಕಲ್ಲಿ ನೀರು ಚೆಲ್ಲದೇ. ಕೈಪಂಪಿನ ಸುತ್ತ ನೀರು ಮಲೆಯದಂತೆ, ಮನೆಯ ನೀರು ಸಂಗ್ರಹ ಸ್ವಚ್ವಾವಾಗಿಟ್ಟು, ಎಲ್ಲೂ ಸೊಳ್ಳೆ ಸಂತತಿ ಬೆಳೆಯದಂತೆ, ಸೊಳ್ಳೆಯಿಂದ ಕಚ್ಚಿಸಿಕೊಳ್ಳದೇ, ಚಳಿಜ್ವರ ಹರಡದಂತೆ ಎಚ್ಚರವಹಿಸುವ ಸಂದೇಶ ಸಾರಿದೆ.

28ರಂದು ವಿಶ್ವ ಪಶುವೈದ್ಯಕೀಯ ದಿನ:– ಪ್ರಾಣಿ ಕಾಳಜಿಯ ವಿವಿಧ ದಿಕ್ಕುಗಳಲ್ಲಿ ನಿಮ್ಮ ಮುದ್ದು ಪ್ರಾಣಿಗಳ ಲಸಿಕೆಯಲ್ಲಿ ಇವರ ಪಾತ್ರ ದೊಡ್ಡದು.ಮನೆಯಲ್ಲಿ ನಾಯಿ, ಬೆಕ್ಕು, ಮುಂತಾದ ಮುದ್ದು ಪ್ರಾಣಿಗಳನ್ನು ಸಾಕಿದವರು ಅದನ್ನು ಮುದ್ದಾಡಿದರಷ್ಟೇ ಸಾಲದು. ಅದಕ್ಕೆ ಬೇರೆ ಪ್ರಾಣಿಗಳು ಕಚ್ಚಿ ರೇಬಿಸ್ ಸೋಂಕು ಬರದಂತೆ ಕಾಲಕಾಲಕ್ಕೆ ಚುಚ್ಚು ಮದ್ದು ಹಾಕಿಸಿ, ಮುಂಜಾಗರೂಕತೆ ತೆಗೆದುಕೊಳ್ಳಬೇಕು. ಇವುಗಳ ಜೊತೆಗೆ ದನ, ಕರು ಎಮ್ಮೆಗಳಿಗೆ ಕಾಹಿಲೆ ಬಂದಾಗ ಪಶು ವೈದ್ಯರ ಬಳಿ ಸಕಾಲಿಕ ಚಿಕಿತ್ಸೆ ಪಡೆಯಬೇಕು.

28ರಂದೇ ರಾಷ್ಟ್ರೀಯ ವಾಸನೆಯ ಪ್ರಜ್ಞಾದಿನ. ನಮ್ಮ ದಿನನಿತ್ಯದ ಜೀವನದಲ್ಲಿ ವಾಸನೆ ಎಷ್ಟು ಮಹತ್ವದ್ದು ಎಂದು ಗಮನಿಸಿ. ರುಚಿಯ ಇತರ ಇಂದ್ರಿಯಗಳ ಜೊತೆ, ಇದರ ಕೊಂಡಿ ಬಗ್ಗೆ ತಿಳಿಯಿರಿ. ನಮ್ಮ ಪ್ರೀತಿಯ ಆಹಾರ ಪದಾರ್ಥವನ್ನು ಅತ್ತ ನೋಡದೆಯೇ ವಾಸನೆಯಿಂದಲೇ ಗ್ರಹಿಸಬಹುದು. ನಮ್ಮ ಪ್ರೀತಿಪಾತ್ರರನ್ನೂ ಅವರು ಹಾಕಿಕೊಳ್ಳುವ ಪರಿಮಳ -ಸುಗಂಧದಿಂದಲೇ ಗುರುತಿಸುತ್ತೇವೆ. ವಾಸನೆಯ ಪ್ರಜ್ಞೆ ಅಸಾಮಾನ್ಯ ಆಹ್ವಾನ ನೀಡುತ್ತದೆ. ಜಾಗೃತ ಮನದಲಿ, ಇದು ಹಿಂದಿನ ದೃಶ್ಯಗಳನ್ನು, ದೃಶ್ಯಗಳ ಛಾಯಾಚಿತ್ರಗಳಂತೆಯೇ ನಿಖರವಾಗಿ ಸ್ಮರಿಸಲು ಅನುವಾಗುತ್ತದೆ.

29ರಂದು ಅಂತರ್ ರಾಷ್ಟ್ರೀಯ ನೃತ್ಯದಿನ:– ಕುಣಿತ ದೇಹದ ತೂಕ ಇಳಿಸುತ್ತದೆ. ದೇಹದ ಸಮತೋಲನ ನೃತ್ಯದಿಂದ ಸಾಧ್ಯ ದೇಹಕ್ಕೆ ಸರಿಯಾದ ಭಂಗಿ -ನಿಲುವು ಕೊಡುವುದೇ ನೃತ್ಯ .ಕುಣಿತದಿಂದ ಕಾಲು ಹಾಗೂ ಸ್ನಾಯುಗಳು ಹಾಗೂ  ನಿತಂಬಗಳ ಹಿಡಿತ ನಿಮ್ಮ ಪೃಷ್ಠ, ಬೆನ್ನಿನ ಕೆಳಭಾಗ, ಹೊಟ್ಟೆ ಸ್ನಾಯುಗಳ ಹಿಡಿತ ಸಾಧ್ಯ. ಕುಣಿತದ ವಿವಿಧ ಹೆಜ್ಜೆಗಳು ತಲೆಯಿಂದ ಪಾದದವರೆಗೆ ಇಡೀ ದೇಹವನ್ನು ಚಲನೆಗೆ, ವೇಗದ ಚಲನೆಗೆ ಈಡು ಮಾಡಿ ಬೆವರು ಸುರಿಸಿ ದೇಹದ ತೂಕ ಇಳಿಸುತ್ತದೆ. ಮನಸ್ಸಿನ ಖುಷಿ ದೇಹದ ಶ್ರಮ ಎರಡೂ ಸೇರಿ ಆರೋಗ್ಯ ವೃದ್ಧಿಸುತ್ತದೆ.

30ರಂದು ಕಪ್ಪೆಗಳನ್ನು ರಕ್ಷಿಸುವ ದಿನ:- ಕಪ್ಪೆಗಳ ಮಹತ್ವ ತಿಳಿಸಿ, ವಾತಾವರಣ ರಕ್ಷಣೆಯಲ್ಲಿ ಹಾನಿಕಾರಕ ಎಂಡೋಕ್ರೈನ್ ಮುಂತಾದ ಕೀಟನಾಶಕಗಳನ್ನು ವಿರೋಧಿಸುವ ಹೋರಾಟ ಈ ದಿನಾಚರಣೆಯ ಹಿಂದಿದೆ.

ಏಪ್ರಿಲ್ 30 ಅಂತರ್ ರಾಷ್ಟ್ರೀಯ ನಾಯಿಗಳ ದಿನ:– ನಾಯಿಗಳು ನಮಗೆ ಸಂಗಾತಿತನ, ರಕ್ಷಣೆ ನೀಡುತ್ತದೆ. ಪ್ರತೀ ವರ್ಷ 10 ಸಾವಿರ ನಾಯಿಗಳನ್ನು ರಕ್ಷಿಸುವ ಗುರಿ, ಎಲ್ಲ ನಾಯಿಗಳಿಗೆ ಮನೆ ದೊರಕಿಸುವುದೇ ರಾಷ್ಟ್ರೀಯ ನಾಯಿ ದಿನಾಚರಣೆ ಉದ್ದೇಶ.ಮನೆಯಲ್ಲಿ ಹಾಗೂ ಬೀದಿಗಳಲ್ಲಿ ಊಟ ಹಾಕಿ ಸಾಕುವ ನಾಯಿಗಳನ್ನು ಎಷ್ಟೇ ಪ್ರೀತಿಸಿದರೂ ಅವುಗಳ ಪರಚುವಿಕೆ ಹಾಗೂ ಕಡಿತದಿಂದ ನಾವು ದೂರವಿರಬೇಕು ಅವುಗಳಿಂದ ನಮಗೆ ರೇಬಿಸ್ ಸೋಂಕು ಬರಬಹುದು.

ಎನ್.ವ್ಹಿ ರಮೇಶ್, ಮೈಸೂರು

ಮೊ: 9845565238

Back To Top