ಅಪೆಂಡಿಸೈಟಿಸ್ ಎಂಬುದು ಕರುಳಿನ ನಶಿಸುತ್ತಿರುವ ಒಂದು ಭಾಗ. ಮನುಷ್ಯನಿಗೆ ಇದರಿಂದ ಯಾವ ಉಪಯೋಗ ಇಲ್ಲದಿದ್ದರೂ ಕೂಡ ಇದಕ್ಕೆ ತಗುಲುವ ಸೋಂಕಿನಿಂದ ಉಂಟಾಗುವ ತೊಂದರೆ ಎಷ್ಟೆಂದರೆ ತಕ್ಷಣ ಶಸ್ತ್ರಚಿಕಿತ್ಸೆ ನಡೆಸಿ ಅಪೆಂಡಿಕ್ಸ್ ಹೊರತೆಗೆಯದಿದ್ದರೆ ಉಂಟಾಗುವ ದುಷ್ಪರಿಣಾಮಗಳು ಜೀವಕ್ಕೆ ಕುತ್ತು ತರುವುದು ಖಂಡಿತ. ಅಪೆಂಡಿಕ್ಸ್ಗೆ ತಗುಲುವ ರೋಗಗಳೆಂದರೆ ಸೋಂಕು ಅಪೆಂಡಿಸೈಟಿಸ್, ಕ್ಯಾನ್ಸರ್, ಕಾರ್ಸಿನಾಯ್ಡ್, ಅಡಿನೋಮ, ಪಾಲಿಪ್ (ಇವೆಲ್ಲ ಗೆಡ್ಡೆಗಳು)
- ಕಾರಣಗಳೇನು?
ಅಪೆಂಡಿಕ್ಸ್ಗೆ ತಗುಲುವ ಕಾಯಿಲೆಗಳಲ್ಲಿ ಸೋಂಕಿನ ಭಾದೆ (ಅಪೆಂಡಿಸೈಟಿಸ್) ಬಹಳ ಮುಖ್ಯ. ಕೊಳವೆಯಂತಿರುವ ಅಪೆಂಡಿಕ್ಸ್ ಕರುಳಿನ ನೇರ ಸಂಪರ್ಕ ಹೊಂದಿದ್ದು, ಕರುಳಿನಲ್ಲಿನ ಎಲ್ಲ ರೀತಿಯ ಪದಾರ್ಥಗಳೂ ಉತ್ಪತ್ತಿಯಾಗುವ ದ್ರವ ಹಾಗೂ ಮಲ ಎಲ್ಲವೂ ಅಪೆಂಡಿಕ್ಸ್ ಒಳಗೂ ಹೋಗುವುದುಂಟು. ಕರುಳಿನ ಕೊಳವೆಯಲ್ಲಿ ಆಡಚಣೆಯಾದಾಗ ಅಪೆಂಡಿಕ್ಸ್ನಲ್ಲಿರುವ ಮಲ ಅಲ್ಲಿಯೇ ಉಳಿದು ಅದರಲ್ಲಿ ಬ್ಯಾಕ್ಟೀರಿಯಗಳು ವೃದ್ಧಿಗೆ ಕಾರಣವಾಗುತ್ತದೆ.
ಸುಮಾರು ಶೇ.೫೦ರಷ್ಟು ಜನರಲ್ಲಿ ಅಡಚಣೆಗೆ ಕಾರಣ, ಮಲವು ಗಟ್ಟಿಯಾದ ಕಲ್ಲಿನಂತಾಗಿ ಅಲ್ಲೇ ಉಳಿಯುವುದು. ಕೆಲವೊಮ್ಮೆ ಗಾಲ್ಸ್ಟೋನ್ ಹಾಗೂ ಜಂತುಗಳು (ಪಿನ್ವರ್ಮ್) ಸಹ ಅಡಚಣೆಯನ್ನುಂಟು ಮಾಡಬಹುದು. ಅಪೆಂಡಿಕ್ಸ್ನಲ್ಲಿ ಬೆಳೆಯುವಂತಹ ಗಡ್ಡೆಗಳೂ ಸಹ ಕಾರಣವೆಂದು ಹೇಳಲಾಗುವುದಾದರೂ ಇವು ಅತಿ ವಿರಳ. ಆಹಾರದಲ್ಲಿನ ನಾರಿನ ಅಂಶದ ಕೊರತೆ, ಅತಿಯಾದ ಕೊಬ್ಬು ಹಾಗೂ ಪಿಷ್ಟ ಪದಾರ್ಥಗಳ ಸೇವನೆ ಸಹ ಒಂದು ಕಾರಣ ಎನ್ನಬಹುದು.
- ಲಕ್ಷಣಗಳೇನು?
ಹೊಟ್ಟೆನೋವು, ವಾಂತಿ, ಜ್ವರ ಇವು ಮುಖ್ಯವಾದ ಚಿಹ್ನೆಗಳು. ಹೊಕ್ಕಳ ಸುತ್ತ ಪ್ರಾರಂಭವಾಗುವ ನೋವು, ನಂತರ ಕೆಳಹೊಟ್ಟೆಯ ಬಲಭಾಗಕ್ಕೆ ಹರಿಯುವುದು, ಊಟ ಸೇರದಿರುವುದು, ವಾಕರಿಕೆ, ಹೊಟ್ಟೆ ಹಿಂಡುವಂತಹ ಅಥವಾ ಒಮ್ಮೆಮ್ಮೆ ಚುಚ್ಚುವಂತಾಗುವುದು. ಅಪೆಂಡಿಸೈಟಿಸ್ ಲಿಂಗಭೇದವಿಲ್ಲದೆ ಯಾವುದೇ ವಯಸ್ಸಿನವರಲ್ಲಿ ಕಾಣಬಹುದು. ಆದರೆ, ವಯಸ್ಸಾದಂತೆ ಹಾಗೂ ವಯಸ್ಸಾದವರಲ್ಲಿ ಇದು ಕಡಿಮೆ. ಚಿಕ್ಕಮಕ್ಕಳು ಹಾಗೂ ಹದಿಹರೆಯದವರನ್ನು ವಿಪರೀತವಾಗಿ ಕಾಡುವ ಈ ಸಮಸ್ಯೆ ಕೆಲವೊಮ್ಮೆ ಹದಿಹರೆಯದ ಹುಡುಗರಲ್ಲಿ ಸ್ವಲ್ಪ ಹೆಚ್ಚಾಗಿ ಕಂಡುಬರುತ್ತದೆ. ಸ್ಥೂಲ ಕಾಯದವರು, ಬೊಜ್ಜುಳ್ಳವರಲ್ಲಿ ಅಪೆಂಡಿಸೈಟಿಸ್ ಲಕ್ಷಣಗಳನ್ನು ಗುರುತಿಸುವುದು ಸ್ವಲ್ಪ ಕಷ್ಟ.
- ದುಷ್ಪರಿಣಾಮಗಳು
ಅಪೆಂಡಿಕ್ಸ್ನಲ್ಲಿ ತುಂಬಿಕೊಳ್ಳುತ್ತಿರುವ ಕೀವಿನ ಒತ್ತಡದಿಂದ ಅಪೆಂಡಿಕ್ಸ್ ತೂತಾಗಬಹುದು. ಇಲ್ಲದಿದ್ದರೆ ಒಡೆದು ಹೋಗಲೂಬಹುದು. ಇದರಿಂದ ಹೊರಬಂದಂತಹ ಕೀವು ಸುತ್ತಮುತ್ತಲಿನ ಅಂಗಗಳ ಸೋಂಕಿಗೆ ಕಾರಣವಾಗುವುದು. ಸೋಂಕು ತಗುಲಿದ ಅಪೆಂಡಿಕ್ಸ್ ನೋಡಲು ಕೆಂಪಗಿದ್ದು, ಅದರ ಹೊರಪದರದಲ್ಲಿರುವ ರಕ್ತನಾಳಗಳು ಉಬ್ಬಿರುತ್ತವೆ. ಒಳಭಾಗದಲ್ಲಿ ಕೀವು, ಅಡಚಣೆಯ ಕಾರಣಗಳಾದ ಜಂತುಗಳು, ಕಲ್ಲಿನಂತಾಗಿರುವ ಮಲದ ಚೂರು ಅಥವಾ ಯಾವುದಾದರೂ ಗಡ್ಡೆ ಕಾಣಿಸಬಹುದು. ಲಿವರ್ನಲ್ಲಿ ಕೀವು ತುಂಬುವುದು ರಕ್ತನಾಳಗಳಿಂದ ಸೋಂಕು ದೇಹದ ಇತರೆಡೆ ಹರಡುವುದು. ಅಪೆಂಡಿಕ್ಸ್ ಗ್ಯಾಂಗ್ರಿನ್ಗೆ ತುತ್ತಾಗಬಹುದು.
ಮುನ್ನೆಚ್ಚರಿಕೆ
- ಸೇವಿಸುವ ಆಹಾರದಲ್ಲಿ ಸಾಕಷ್ಟು ನಾರಿನ ಅಂಶವಿರಲಿ.
- ಹಣ್ಣು-ಹಂಪಲು, ಹಸಿರು ತರಕಾರಿಗಳನ್ನು ಯಥೇಚ್ಛವಾಗಿ ಸೇವಿಸುವುದರಿಂದ ಮಲಬದ್ದತೆ ನಿವಾರಣೆ ಸಾಧ್ಯ ಮತ್ತು ಮಂದ ಕಲ್ಲುಗಳು ಅಪೆಂಡಿಕ್ಸ್ನಲ್ಲಿ ಅಡಚಣೆಯಾಗದಂತೆ ತಡೆಯಬಹುದು.
- ಕೊಬ್ಬು ಮತ್ತು ಪಿಷ್ಟ ಅಂಶಗಳಿರುವ ಆಹಾರ ಪಧಾರ್ಥಗಳನ್ನು ವರ್ಜಿಸುವುದು ಸೂಕ್ತ.
- ಹೆಚ್ಚು ನೀರು ಕುಡಿಯಬೇಕು.
- ವ್ಯಾಯಾಮ, ಮಿತ ಆಹಾರ ಒಳ್ಳೆಯದು.
- ಅಪೆಂಡಿಸೈಟಿಸ್ ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯರನ್ನು ಕಾಣುವುದು ಅವಶ್ಯಕ.
ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಆಂಟಿ ಬಯೋಟಿಕ್ಸ್, ಜ್ವರ ಮತ್ತು ನೋವಿನ ಉಪಶಮನಕ್ಕೆ ಔಷಧ ಮತ್ತು ಮಾತ್ರೆಗಳಿದ್ದು, ಆದರೆ ಶಸ್ತ್ರಚಿಕಿತ್ಸೆಯೇ ಅಪೆಂಡಿಸೈಟಿಸ್ ಶಮನಕ್ಕೆ ಮದ್ದು.
ಡಾ.ಚಲಪತಿ
ಪ್ರೊಫೆಸರ್ ಅಫ್ ಜನರಲ್ ಸರ್ಜರಿ
ವೈದೇಹಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್
#82, ಇಪಿಐಪಿ, ವೈಟ್ಫೀಲ್ಡ್, ಬೆಂಗಳೂರು -560066
ಫೋನ್ : 080-4906 9000 Extn: 1147/1366