ಆಧುನಿಕ ಜೀವನ ಶೈಲಿ ಮತ್ತು ಆರೋಗ್ಯ

 ಜೀವನಶೈಲಿಯು ಆರೋಗ್ಯದ ಪ್ರಮುಖ ಅಂಶವೆಂಬುದು ವೈದ್ಯಲೋಕದ ಮಾತು. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ವೈಯಕ್ತಿಕ ಆರೋಗ್ಯ ಮತ್ತು ಜೀವನದ ಗುಣಮಟ್ಟಕ್ಕೆ ಸಂಬಂಧಿಸಿದ 60% ದಷ್ಟು ಅಂಶಗಳು ಜೀವನಶೈಲಿಗೆ ಸಂಬಂಧಿದವುಗಳಾಗಿವೆ ಎನ್ನಲಾಗಿದೆ. ಸಾಕಷ್ಟು ಜನರು ಅನಾರೋಗ್ಯಕರ ಜೀವನಶೈಲಿಯನ್ನು ಅನುಸರಿಸುತ್ತಿದ್ದಾರೆ. ಆದ್ದರಿಂದ, ಚಯಾಪಚಯ ರೋಗಗಳು, ಮೂಳೆಗಳ ಸಮಸ್ಯೆಗಳು, ಹೃದಯ ರಕ್ತನಾಳದ ಕಾಯಿಲೆಗಳು, ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಮೂತ್ರಪಿಂಡದ ಕಾಯಿಲೆಗಳು, ಕ್ಯಾನ್ಸರ್, ನಿದ್ರಾಹಿನತೆ, ಹಸಿವಾಗದಿರುವಿದೆ, ಉಸಿರಾಟದ ಸಮಸ್ಯೆ, ಅಧಿಕತೂಕ, ಮಾನಸಿಕ ಒತ್ತಡ-ಹಿಂಸೆ ಹೀಗೆ ಇನ್ನಿತರ ಹಲವು ಕಾಯಿಲೆಗಳು ಅನಾರೋಗ್ಯಕರ ಜೀವನಶೈಲಿಗಳಿಂದ ಉಂಟಾಗಬಹುದಾಗಿದೆ. ಇದರಿಂದಾಗಿ ಹೆಚ್ಚಿನ ಮರಣ ಪ್ರಮಾಣವನ್ನು ಕಾಣಬಹುದಾಗಿದೆ. ಇಂದಿನ ಪ್ರಸ್ತುತ ಬದುಕಿನಲ್ಲಿ ಜೀವನಶೈಲಿ ಮತ್ತು ಆರೋಗ್ಯದ ಸಂಬಂಧವನ್ನು ಹೆಚ್ಚು ಪರಿಗಣಿಸಬೇಕಾಗಿದೆ.
ಇಂದು, ಎಲ್ಲಾ ಜನರ ಜೀವನದಲ್ಲಿ ವ್ಯಾಪಕ ಬದಲಾವಣೆಗಳು ಸಂಭವಿಸಿವೆ. ಅಪೌಷ್ಟಿಕತೆ, ಅನಾರೋಗ್ಯಕರ ಆಹಾರ ಪದ್ಧತಿ, ಧೂಮಪಾನ, ಮಧ್ಯಪಾನ ಸೇವನೆ, ಮಾದಕ ವಸ್ತುವಿನ ಬಳಕೆ, ಒತ್ತಡ ಮತ್ತು ಇನ್ನಿತರವುಗಳು ಅನಾರೋಗ್ಯಕರ ಜೀವನ ಶೈಲಿಯ ಪ್ರಸ್ತುತಗಳಾಗಿವೆ. ಅವುಗಳು ಪ್ರಬಲವಾದ ಜೀವನಶೈಲಿಯನ್ನು ಹೊಂದಿವೆ ಜೊತೆಗೆ ಜೀವನದ ಹೊಸ ಅನಾರೋಗ್ಯಕರ ಸವಾಲುಗಳನ್ನು ಎದುರಿಸಬೇಕಾಗಿದೆ. ಅಂತರ್ಜಾಲ ಮತ್ತು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಜಟಾಪಟಿಯಲ್ಲಿ ನಾವು ನಮ್ಮ ಜಗತ್ತಿನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಅಸ್ಥವ್ಯಸ್ಥಗೊಳಿಸಿ ಸಾವಿಗೆ ಹತ್ತಿರವಾಗುತ್ತಿದ್ದೇವೆ.
ಅಧ್ಯಯನಗಳ ಪ್ರಕಾರ, ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಜೀವನಶೈಲಿ ಮಹತ್ವದ ಪ್ರಭಾವ ಬೀರುತ್ತದೆ. ಭಾರತದಂತಹ ದೇಶಗಳಲ್ಲಿ ಅಶುದ್ಧ ಮತ್ತು ಅಪೌಷ್ಠಿಕ ಆಹಾರ ಪದ್ಧತಿ ಹಾಗೂ ಔಷಧಿಗಳ ಅತಿಯಾದ ಬಳಕೆ ಪ್ರಮುಖ ಅನಾರೋಗ್ಯಕರ ಜೀವನಶೈಲಿಗಳಲ್ಲಿ ಒಂದಾಗಿವೆ ಎನ್ನುತ್ತವೆ ವರದಿಗಳು. ಹೆಚ್ಚಿನ ಪ್ರಮಾಣದ ಔಷಧಿಗಳನ್ನು ಬಳಸುವ 20 ರಾಷ್ಟ್ರಗಳಲ್ಲಿ ಭಾರತವು ಒಂದಾಗಿದೆ. ಇದಲ್ಲದೆ, 25% ದಿಂದ 40% ಪ್ರಕರಣಗಳಲ್ಲಿ ವೈದ್ಯರ ಲೀಖಿತ (ಪ್ರಿಸ್ಕ್ರಿಪ್ಷನ್) ಇಲ್ಲದೆ ಔಷಧಿಗಳನ್ನು ಬಳಸುತ್ತಿದ್ದಾರೆ ಎಂಬುದು ದುರಂತದ ಸಂಗತಿ. ಅವುಗಳಲ್ಲಿ ಹೆಚ್ಚಾಗಿ ನೋವು ನಿವಾರಕಗಳು, ಕಣ್ಣಿನ ಸಂಬಂಧಿಸಿದ ಹನಿಗಳು (ಐ ಡ್ರಾಪ್) ಮತ್ತು ಪ್ರತಿಜೀವಕಗಳು ಹೆಚ್ಚೆಚ್ಚು ಬಳಕೆಯಲ್ಲಿವೆ. ಪ್ರತಿ ಜೀವಕಗಳಂತಹ ಸ್ವಯಂ ಔಷಧಿಗಳನ್ನು ಪ್ರತಿ ರಕ್ಷಣಾ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆಯಾದರೂ, ಸೋಂಕಿನಿಂದ ವ್ಯಕ್ತಿಯೊಬ್ಬನು ಪ್ರಭಾವಿತರಾದರೆ, ಪ್ರತಿ ಜೀವಕಗಳು ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗುವುದಿಲ್ಲ. ಒಟ್ಟಾರೆಯಾಗಿ, ಸ್ವಯಂ ಔಷಧಿಯಲ್ಲಿ 10% ದಷ್ಟು ಜನರು ನಿರೋಧಕತೆಯಂಯಹ ತೀವ್ರ ತೊಡಕುಗಳನ್ನು ಅನುಭವಿಸುತ್ತಾರೆ. ಕೆಲವೊಮ್ಮೆ ಔಷಧಿಗಳ ಪ್ರಭಾವ ತುಂಬಾ ತೀವ್ರವಾಗಿದ್ದು ಅದು ಸಾವಿಗೂ ಕಾರಣವಾಗಬಹುದಾಗಿದೆ. ಅಂತಿಮವಾಗಿ ಆರೋಗ್ಯದ ಮೇಲೆ ಪ್ರಭಾವ ಬೀರುವ ಜೀವನಶೈಲಿಯ ಕೆಲವು ಅಂಶಗಳನ್ನು ಈ ಕೆಳಗಿನಂತೆ ವರ್ಗೀಕರಿಸಬಹುದು.

ಆಹಾರ ಪಥ್ಯ :

ಜೀವನ ಶೈಲಿಯಲ್ಲಿ ಆಹಾರ ಪಥ್ಯ ಪ್ರಮುಖ ಅಂಶವಾಗಿದೆ ಮತ್ತು ಆರೋಗ್ಯದೊಂದಿಗೆ ನೇರವಾದ ಮತ್ತು ಸಕಾರಾತ್ಮಕ ಸಂಬಂಧವನ್ನು ಹೊಂದಿದೆ. ನಗರ ಜೀವನಶೈಲಿಯು ಫಾಸ್ಟಪುಡದಂತಹ ಅನಾರೋಗ್ಯಕರ ಆಹಾರಗಳನ್ನು ಬಳಸುವುದು, ಬೊಜ್ಜು, ಹೃದಯನಾಳದ ಅಲ್ಲದೆ ಅನೇಕ ರೀತಿಯ ಸಮಸ್ಯೆಗಳನ್ನು ಹೆಚ್ಚಿಸಿ ಅನೇಕ ಖಾಯಲೆಗಳಿಗೆ ಕಾರಣವಾಗುತ್ತವೆ.
ದೈಹಿಕ ವ್ಯಾಯಾವ ಹಾಗೂ ಯೋಗ:
ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ವ್ಯಾಯಾಮವನ್ನು, ಯೋಗವನ್ನು ಅನುಸರಿಸಲಾಗುತ್ತದೆ. ಆರೋಗ್ಯಕರ ಆಹಾರ ಕ್ರಮದೊಂದಿಗೆ ನಿರಂತರ ವ್ಯಾಯಾಮ, ಯೋಗಾಸನವು ಆರೋಗ್ಯವನ್ನು ಕಾಪಾಡುವಲ್ಲಿ ತುಂಬಾ ಸಹಕಾರಿಯಾಗಿದೆ.

ಸುಖ ನಿದ್ರೆ :

ಆರೋಗ್ಯಕರ ಜೀವನದ ನೆಲೆಗಳಲ್ಲಿ ಸುಖಕರವಾದ ನಿದ್ರೆಯೂ ಒಂದು. ವ್ಯಕ್ತಿ ನಿದ್ರೆ ಜೀವನದಿಂದ ದೂರವಿರಬಾರದು, ಅದು ಅನಾರೋಗ್ಯದ ಲಕ್ಷಣಗಳಲ್ಲಿ ಒಂದಾಗಿದೆ. ಆದ್ದರಿಂದಲೇ, ನಿದ್ರಾಹೀನತೆ ಹಲವಾರು ರೀತಿಯ ಸಾಮಾಜಿಕ ಮತ್ತು ಮಾನಸಿಕ
ಅನಾರೋಗ್ಯಕರ ಪರಿಣಾಮಗಳನ್ನು ಏದುರಿಸಬೇಕಾಗುತ್ತದೆ. ಜೀವನಶೈಲಿ ನಿದ್ರೆಯ ಮೇಲೆ ಪರಿಣಾಮ ಬೀರಬಹುದು ಮತ್ತು ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ನಿದ್ರೆಯು ಸ್ಪಷ್ಟವಾದ ಪ್ರಭಾವ ಬೀರುತ್ತದೆ.

ಲೈಂಗಿಕ ಜೀವನ :

ಸಾಮಾನ್ಯ ಲೈಂಗಿಕವು ಆರೋಗ್ಯಕರ ಜೀವನದಲ್ಲಿ ಅಗತ್ಯ. ಲೈಂಗಿಕ ಸಂಬಂಧದ ಅಸಾಮಾನ್ಯ ಕ್ರೀಯೆ ಬಹುತೆಕ ಸಮಾಜಗಳ ಸಮಸ್ಯೆಯಾಗಿದೆ ಮತ್ತು ಇದು ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆಯೂ ಗಮನಾರ್ಹ ಪರಿಣಾಮ ಬೀರುತ್ತದೆ. ನಿಷ್ಕ್ರಿಯ ಲೈಂಗಿಕ ಸಂಬಂಧವು ವಿವಿಧ ಕುಟುಂಬ ಸಮಸ್ಯೆಗಳಿಗೆ ಅಥವಾ ಲಿಂಗ ಸಂಬಂಧಿ ಅನಾರೋಗ್ಯಕ್ಕೆ ಕಾರಣವಾಗಬಹುದು.

ವ್ಯಸನಗಳು :

ವ್ಯಸನವನ್ನು ಅನಾರೋಗ್ಯಕರ ಜೀವನಶೈಲಿ ಎಂದು ಪರಿಗಣಿಸಲಾಗುತ್ತದೆ. ಧೂಮಪಾನ, ಮಧ್ಯಪಾನ ಮತ್ತು ಇತರೆ ವಸ್ತುಗಳನ್ನು ಬಳಸುವುದು ಹೃದಯ ಕಾಯಿಲೆ, ಆಸ್ತಮಾ, ಕ್ಯಾನ್ಸರ್, ಮಿದುಳಿನ ಮೇಲೆ ಕೆಟ್ಟ ಪ್ರಭಾವದಂತಹ ವಿವಿಧ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಒಂದು ಅಧ್ಯಯನದ ಪ್ರಕಾರ 14 ರಿಂದ 65 ವಯಸ್ಸಿನ 22% ಹೆಣ್ಣು ಮತ್ತು 64% ದಷ್ಟು ಪುರುಷರು ಬೀಡಿ, ಸಿಗರೇಟು, ಗಾಂಜಾದಂತಹ ಧೂಮಪಾನ ಮತ್ತು ಮಧ್ಯಪಾನದಂತಹ ವ್ಯಸನಗಳ ಗುಲಾಮರಾಗಿ ಸಾವಿಗೀಡಾಗುತ್ತಿದ್ದಾರೆ.

ಸ್ವಯಂ ಚಿಕಿತ್ಸೆ ಮತ್ತು ಔಷದಿಗಳ ದುರುಪಯೋಗ :

ಸ್ವಯಂ ಚಿಕಿತ್ಸೆ ಮತ್ತು ಔಷಧಿಗಳ ದುರುಪಯೋಗವು ಒಂದು ಅನಾರೋಗ್ಯಕರ ಜೀವನಶೈಲಿ ಎಂದು ಪರಿಗಣಿಸಲಾಗುತ್ತದೆ. ಭಾರತದಂತಹ ರಾಷ್ಟ್ರಗಳು ಔಷಧಿಗಳನ್ನು ಬಳಸುವಲ್ಲಿ ಅನಾರೋಗ್ಯಕರ ನಡವಳಿಕೆಗಳು ಅನುಸರಿಸುತ್ತವೆ. ಸ್ವಯಂ ಚಿಕಿತ್ಸೆ, ವೈದ್ಯರ ಲೀಖಿತ (ಪ್ರಿಸ್ಕ್ರೀಪ್ಷನ್) ಇಲ್ಲದೆ ಔಷಧಿಗಳನ್ನು ಬಳಸುವುದು, ಹೆಚ್ಚಿನ ಔಷಧಿಗಳನ್ನು ಶಿಫಾರಸ್ಸು ಮಾಡುವುದು, ಅನಗತ್ಯ ಔಷಧಿಗಳ ಸೇವನೆ ಹಾನಿಕಾರಕ ಪರಿಣಾಮಗಳಾಗಿವೆ.

ಆಧುನಿಕ ತಂತ್ರಜ್ಞಾನಗಳ ಬಳಕೆ :

ಸುಧಾರಿತ ತಂತ್ರಜ್ಞಾನವು ಮಾನವನ ಜೀವನವನ್ನು ಸುಗಮಗೊಳಿಸುತ್ತದೆ. ಆದರೆ, ತಂತ್ರಜ್ಞಾನದ ದುರ್ಬಳಕೆ ಅಹಿತಕರ ಪರಿಣಾಮಗಳನ್ನು ಉಂಟುಮಾಡಬಹುದು. ಉದಾಹರಣೆಗೆ, ಕಂಪ್ಯೂಟರ ಮತ್ತು ಮೊಬೈಲ್ ಸಾಧನಗಳು ಅನಾವಶ್ಯಕವಿದ್ದಾಗ ಹಾಗೂ ಮಧ್ಯರಾತ್ರಿಯವರೆಗೆ ಬಳಸುವುದು. ಇದು ನಿದ್ರೆಯ ಮಾದರಿಯ ಮೇಲೆ ಕೆಟ್ಟ ಪರಿಣಾಮ ಬೀರಬಹುದಲ್ಲದೆ ದೈಹಿಕ ಹಾಗೂ ಮಾನಸಿಕದಂತಹ ಇನ್ನಿತರ ಅನಾರೋಗ್ಯಕ್ಕೆ ಎಡೆಮಾಡಿ ಕೊಡುತ್ತದೆಯಲ್ಲದೆ ನಿದ್ರಾಹೀನತೆಯನ್ನು ಉಂಟುಮಾಡುತ್ತದೆ.

ಮನರಂಜನೆ :

ಮನರಂಜನೆ ಜೀವನಶೈಲಿಯ ಒಂದು ಅಂಗವಾಗಿದೆ. ಬಿಡುವು ಮತ್ತು ಮನರಂಜನೆ ಇಲ್ಲದ ಜೀವನ ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಆದ್ದರಿಂದ, ದೈನಂದಿನ ಜೀವನದಲ್ಲಿ ಸ್ವಲ್ಪ ಸಮಯವಾದರು ಬಿಡುವು ಮಾಡಿಕೊಂಡು ಮಕ್ಕಳೊಂದಿಗೆ ಅಥವಾ ಇನ್ನಿತರರೊಂದಿಗೆ ಮನರಂಜನೆಯಲ್ಲಿ ಪಾಲ್ಗೊಳ್ಳುವುದು ಇಂದಿನ ಅವಶ್ಯಕಗಳಲ್ಲಿ ಒಂದು.
ನಾವು ಸಾಮಾನ್ಯವಾಗಿ ಆರೋಗ್ಯ ಮತ್ತು ಅನಾರೋಗ್ಯದ ಬಗ್ಗೆ ಸಾಕಷ್ಟು ಕೇಳಿರುತ್ತೇವೆ ಮತ್ತು ಸಮಯ ಸಿಕ್ಕಾಗಲೇಲ್ಲಾ ಅದರ ಬಗ್ಗೆ ಮಾತನಾಡುತ್ತಲೇ ಇರುತ್ತೇವೆ. ಈ ಆರೋಗ್ಯ ಮತು ಅನಾರೋಗ್ಯವು ಒಂದೇ ನಾಣ್ಯದ ಎರಡು ಮುಖಗಳಿದಂತೆ. ಇದನ್ನು ಕತ್ತಲು ಮತ್ತು ಬೆಳಕಿನೊಂದಿಗೆ ಹೊಲಿಸಬಹುದೇನೊ. ಎಲ್ಲಿ ಕತ್ತಲಿರುತ್ತದೆಯೊ ಅಲ್ಲಿ ಬೆಳಕು ಇರುವುದಿಲ್ಲ ಹಾಗೆಯೆ ಎಲ್ಲಿ ಬೆಳಕು ಇರುತ್ತದೆಯೊ ಅಲ್ಲಿ ಕತ್ತಲು ಸುಳಿಯುವುದಿಲ್ಲ. ಅದೇ ರೀತಿಯಾಗಿ ಅನಾರೋಗ್ಯವಿದ್ದಲ್ಲಿ ಆರೋಗ್ಯವಿರುವುದಿಲ್ಲ ಮತ್ತು ಆರೋಗ್ಯವಿದ್ದಲ್ಲಿ ಅದು ಅನಾರೋಗ್ಯವನ್ನು ಹತ್ತಿರ ಬರಲು ಬಿಡುವುದಿಲ್ಲ. ನಾವು ಆರೋಗ್ಯದ ಬಗ್ಗೆ ಸಾಕಷ್ಟು ತಿಳಿಕೊಂಡಿರುತ್ತೇವೆ ಮತ್ತು ತಿಳಿಕೊಳ್ಳಲು ಬಯಸುತ್ತಲೇ ಇರುತ್ತೇವೆ. ಆದರೆ, ಅನಾರೋಗ್ಯದ ಬಗ್ಗೆ ನಮಗೆ ಸದಾ ನಿರುತ್ಸಾಹ.
ಆರೋಗ್ಯದ ಬಗ್ಗೆ ಮಾಹಿತಿ ಇರುವಷ್ಟೇ ಅನಾರೋಗ್ಯದ ಬಗ್ಗೆಯೂ ಮಾಹಿತಿ ಪಡೆದುಕೊಳ್ಳುವುದು ತುಂಬಾ ಅವಶ್ಯಕವಾಗಿದೆ. ಬನ್ನಿ ಈ ಆರೋಗ್ಯ ಮತ್ತು ಅನಾರೋಗ್ಯದ ಬಗ್ಗೆ ಸ್ವಲ್ಪ ತಿಳಿದುಕೊಳ್ಳೊಣ.
ಆರೋಗ್ಯವಿಲ್ಲದ ಸ್ಥಿತಿಯನ್ನು ಅನಾರೋಗ್ಯ ಎನ್ನುತ್ತೇವೆ. ಅಂದರೆ, ಮನಸ್ಸು ಮತ್ತು ಅಂಗಾಂಗಗಳು ಅಡೆತಡೆಯಿಂದ ಕೂಡಿದ್ದು ವ್ಯವಸ್ಥಿತವಾಗಿ ಕಾರ್ಯವನ್ನು ನಿರ್ವಹಿಸದ ಸ್ಥಿತಿಯೇ ಅನಾರೋಗ್ಯವಾಗಿದೆ. ಅಥವಾ ದೈಹಿಕ ಮತ್ತು ಮಾನಸಿಕ ನ್ಯೂನತೆ ಅಥವಾ ಬಾಧೆ/ಗಾಯ ಅಥವಾ ರೋಗ ರುಜಿನಗಳಿಂದ ಕೂಡಿದ ವ್ಯವಸ್ಥೆಗೆ ಅನಾರೋಗ್ಯವೆನ್ನಬಹುದಾಗಿದೆ.

ಅನಾರೋಗ್ಯದ ಬಗೆಗಳು:

ವಸಿಷ್ಠರು ಅನಾರೋಗ್ಯ ಅಥವಾ ವ್ಯಾಧಿಗಳಲ್ಲಿ ಎರಡು ಬಗೆಯ ಅನಾರೋಗ್ಯ ಅಥವಾ ವ್ಯಾಧಿಗಳೆಂದು ತಮ್ಮ ಯೋಗವಾಷಿಷ್ಠದಲ್ಲಿ ತಿಳಿಸಿದ್ದಾರೆ. ಅವು ಈ ಕೆಳಗಿನಂತಿವೆ:
ಆಧಿಜಾ
ಅನಾಧಿಜಾ
ಆಧಿಜಾ
ಆಧಿ ಎಂದರೆ ಮನಸ್ಸು. ಈ ಮನಸ್ಸಿನಿಂದ ಹುಟ್ಟಿದ ವ್ಯಾಧಿಗಳಿಗೆ ಆಧಿಜಾ ಎಂದು ಕರೆಯಲ್ಪಡುತ್ತದೆ. ಅವುಗಳಲ್ಲಿ ಸಾರ ಆಧಿಜ ಮತ್ತು ಸಾಮಾನ್ಯ ಆಧಿಜ ಎಂಬ ಎರಡು ಬಗೆಯ ವ್ಯಾಧಿಗಳಿವೆ.
ಸಾರ ಆಧಿಜ ವ್ಯಾಧಿ ಎಂದರೆ ನಮ್ಮ ದೇಹದ ಹುಟ್ಟು ಮತ್ತು ಸಾವಿನ ನಿರಂತರ ಚಕ್ರ. ಇದು ಅಜ್ಞಾನದಿಂದುಂಟಾಗಿದ್ದು, ಇದೂ ಒಂದು ರೋಗವೇ ಆಗಿದೆ. ಈ ಹುಟ್ಟು ಮತ್ತು ಸಾವಿನ ಬಂಧನದಿಂದ ಬಿಡಿಸಿಕೊಳ್ಳಲು ಜ್ಞಾನವೇ ಪರಿಹಾರ.
ಸಾಮಾನ್ಯ ಆಧಿಜ ಇದು ಮನಸ್ಸಿನ ಅಸಮತೋಲನದಿಂದ ದೇಹಕ್ಕೆ ಬರುವಂತಹ ಮನೋದೈಹಿಕ ಕಾಯಿಲೆಯಾಗಿದೆ. ದುರಾಲೋಚನೆ, ದುರ್ಬುದ್ಧಿಗಳೇ ಇದರ ಮೂಲ. ಅವುಗಳನ್ನು ನಾಶಪಡಿಸಿದರೆ ಎಲ್ಲ ಮನೋದೈಹಿಕ ಕಾಯಿಲೆಗಳು ನಾಶವಾಗುತ್ತವೆ. ಯೋಗ ಚಿಕಿತ್ಸೆಯ ಮೂಲಕ ಇದನ್ನು ಪರಿಹರಿಸಿಕೊಳ್ಳಬಹುದು.
ಅನಾಧಿಜಾ
ಅನಾಧಿಜಾ ಎಂದರೆ ಆಧಿಯಿಂದ ಹುಟ್ಟದೇ ಇರುವುದು. ಇವು ಕೇವಲ ದೈಹಿಕ ಕಾಯಿಲೆಗಳು. ಅಂದರೆ ಈ ಮೇಲಿನ ವಾತಾವರಣದಿಂದ, ದೋಷಯುಕ್ತ ಆಹಾರ ಸೇವನೆಯಿಂದ ಅಥವಾ ಅಪಘಾತಗಳಿಂದ ಅಗುವಂತಹ ದೈಹಿಕ ವ್ಯತ್ಯಾಸಗಳು. ಇವುಗಳನ್ನು ಔಷಧಿಗಳಿಂದ ಗುಣಪಡಿಸಬಹುದಾಗಿದೆ.

ಆರೋಗ್ಯ :

ಮಾನವನು ಸಂಘ ಜೀವಿ. ಈ ಮಾನವ ಒಬ್ಬಂಟಿಗನಾಗಿ ಜೀವಿಸಲು ಬಯಸಲಾರ. ಆದ್ದರಿಂದಲೇ ಆತನು ತನ್ನ ಆನಂದಕ್ಕೋಸ್ಕರ ತಾನು ವಾಸಿಸುವ ಪ್ರಪಂಚದಲ್ಲಿ ಕುಟುಂಬ, ಮನೆಗಳು, ವಠಾರವೆನ್ನುವುದರ ಮೂಲಕ ಒಂದು ವ್ಯವಸ್ಥಿತ ಸಮಾಜಕ್ಕೆ ಮೂಲನಾಗಿದ್ದಾನೆ. ಮತ್ತು ಈ ಮಾನವ ಸದಾ ಆರೋಗ್ಯವಂತನಾಗಿ ಸಂತೋಷದಿಂದ ನೂರ್ಕಾಲ ಬಾಳಬೇಕು, ಮತು ತನ್ನವರು ಕೂಡಾ ಆರೋಗ್ಯವಂತರಾಗಿರಬೇಕು ಎಂದು ಹಂಬಲಿಸುತ್ತಾನೆ.

ಆರೋಗ್ಯದ ಅರ್ಥ :

ಸಾಮಾನ್ಯವಾಗಿ ಮನುಷ್ಯನಿಗೆ ಸರಿಯಾದ ಸಮಯಕ್ಕೆ ಹಸಿವೆಯಾಗಿ ಹೊಟ್ಟೆ ತುಂಬಾ ಊಟ ಮಾಡುವ, ಸರಿಯಾದ ಘಳಿಗೆಯಲ್ಲಿ ಚಿಂತೆಯಲ್ಲದೆ ನಿದ್ದೆ ಮಾಡುವ, ಉಳಿದೆಲ್ಲಾ ಸಮಯದಲ್ಲಿ ತಿರುಗಾಡಿ ಸಂತೋಷದಿಂದ ಕಾಯಕವನ್ನು ಮಾಡಿ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಂಡು ವೈದ್ಯರ ಕಡೆಗೆ ಹೋಗುವ ಪ್ರಸಂಗವನ್ನು ತಂದುಕೊಳ್ಳದ ಸ್ಥಿತಿಯೇ ಆರೋಗ್ಯವಾಗಿದೆ.
ವೈದ್ಯಕೀಯ ಪರಿಭಾಷೆಯಲ್ಲಿ ಹೇಳುವುದಾದರೆ ಕೇವಲ ರೋಗಗಳ ಅಭಾವ ಮಾತ್ರವೇ ಆರೋಗ್ಯದ ಸ್ಥಿತಿಯಲ್ಲ. ಅದು ಅದಕ್ಕೂ ಹೆಚ್ಚಿನದು. ಶಾರೀರಿಕ, ಮಾನಸಿಕ ಮತ್ತು ಸಾಮಾಜಿಕ ಸಮರ್ಥತೆಯನ್ನು ಅದು ಪ್ರತಿಬಿಂಬಿಸುತ್ತದೆ. ಇದನ್ನೇ ಧನಾತ್ಮಕ ಆರೋಗ್ಯ ಎಂದು ಕರೆಯುತ್ತೇವೆ.
ಆರೋಗ್ಯ ಮತ್ತು ಅನಾರೋಗ್ಯಗಳ ನಿರ್ಣಯವು ಅಷ್ಟು ಸರಳವಾಗಿ ವ್ಯಾಖ್ಯಾನಿಸಬಲ್ಲ ವಿಷಯವಲ್ಲ. ಆರೋಗ್ಯ ಇಲ್ಲದಿರುವುದೇ ಅನಾರೋಗ್ಯ ಮತ್ತು ಅನಾರೋಗ್ಯ ಇಲ್ಲದಿರುವ ಸ್ಥಿತಿಯೇ ಆರೋಗ್ಯ ಎಂದು ಹೇಳಿದರೆ ಅದು ಹಾರಿಕೆಯ ಉತ್ತರವಾಗಬಹುದಷ್ಟೆ. ಆದ್ದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ವ್ಯಾಖ್ಯಾನಗಳನ್ನು ಈ ಕೆಳಗಿನಂತೆ ಗಮನಿಸೋಣ.

ವ್ಯಾಖ್ಯೆಗಳು :

ಆಯುವೇದಾಚಾರ್ಯ ಚರಕರ ಪ್ರಕಾರ :
‘ಪ್ರಸನ್ನತ್ಮೆಂದ್ರಿಯ ಮನಃ ಸ್ವಸ್ಥ ಇತಿವಿದೀಯತೆ’
ಶರೀರದಲ್ಲಿ ಉತ್ಪನ್ನವಾಗುವ ಪ್ರಮಾಣ ಬದ್ಧವಾಗಿದ್ದು ಜೀರ್ಣಾಗ್ನಿ ಉತ್ತಮ ಸ್ಥಿತಿಯಲ್ಲಿದ್ದು ವಾತ, ಪಿತ್ತ ಮತ್ತು ಕಫಗಳೆಂಬ ತ್ರಿದೋಷಗಳ ಸಮತೋಲನ ಸರಿಯಾಗಿದ್ದಾಗ ಮಲಮೂತ್ರ ಸ್ಪೇದ ಇತ್ಯಾದಿಗೆ ಉತ್ಪತ್ತಿ ಮತ್ತು ವಿಸರ್ಜನೆ ಸುಸ್ಥಿತಿಯಲ್ಲಿರುವಾಗ ಇಂದ್ರಿಯ ಮತ್ತು ಪ್ರಸನ್ನವಾದ ಮನಸ್ಸನ್ನು ಸುವ್ಯವಸ್ಥಿತವಾದ ಸ್ಥಿತಿಯೇ ಆರೋಗ್ಯವಾಗಿದೆ ಎಂದಿದ್ದಾರೆ.
ವಿಶ್ವ ಆರೋಗ್ಯ ಸಂಘಟನೆ/ಸಂಸ್ಥೆ ಪ್ರಕಾರ :
ಆರೋಗ್ಯವು ಸಂಪೂರ್ಣ ದೈಹಿಕ, ಮಾನಸಿಕ ಮತ್ತು ಸಾಮಾಜಿ ಯೋಗಕ್ಷೇಮದ ಸ್ಥಿತಿಯಾಗಿದ್ದು, ಕೇವಲ ರೋಗ ಅಥವಾ ದೌರ್ಬಲ್ಯದ ಅನುಪಸ್ಥಿತಿಯಲ್ಲ.

ಸಾಮಾನ್ಯವಾಗಿ :
  • ಅನಾರೋಗ್ಯವಿಲ್ಲದ ಸ್ಥಿತಿಯನ್ನು ಆರೋಗ್ಯ ಎನ್ನುತ್ತೇವೆ.
  • ಮನಸ್ಸು ಮತ್ತು ಎಲ್ಲಾ ಅಂಗಾಂಗಗಳು ಯಾವುದೇ ಅಡೆತಡೆ ಇಲ್ಲದೆ ವ್ಯವಸ್ಥಿತವಾಗಿ ಕಾರ್ಯವನ್ನು ನಿರ್ವಹಿಸಬಲ್ಲ ಸ್ಥಿತಿಯೇ ಆರೋಗ್ಯ.
  • ಯಾವುದೇ ರೀತಿಯ ದೈಹಿಕ ಮತ್ತು ಮಾನಸಿಕ ನ್ಯೂನತೆ ಅಥವಾ ಬಾಧೆ/ಗಾಯ ಅಥವಾ ರೋಗ ರುಜಿನವಿಲ್ಲದ ವ್ಯವಸ್ಥೆಗೆ ಆರೋಗ್ಯವೆನ್ನಬಹುದಾಗಿದೆ.
  • ಆರೋಗ್ಯವೆಂದರೆ ನಿರೋಗಿಯಾದ ಶರೀರ ಮಾತ್ರವಲ್ಲ. ಅದರ ಜೊತೆಗೇ ದೇಹದಲ್ಲಿ ಉತ್ಸಾಹ, ಮಾನಸಿಕ ಸಮತೋಲನ ಅತಿ ಮುಖ್ಯವಾಗಿದೆ.
  • ದೈಹಿಕ, ಮಾನಸಿಕ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಸ್ತರಗಳ ನಡುವೆ ಸಂಯೋಗ ಸಾಮರಸ್ಯ ಹೊಂದಿರುವುದೇ ಆರೋಗ್ಯವಾಗಿದೆ.
  • ಆರೋಗ್ಯವು ದೈಹಿಕ ದೃಢತೆಯು ಅಥವಾ ಜೀವಿಯು ತನ್ನ ಕೆಲಸವನ್ನು ಚೆನ್ನಾಗಿ ನಡೆಸಿಕೊಂಡು ಹೋಗುವ ಸ್ಥಿತಿಯಾಗಿದೆ.
  • ಶುದ್ಧವಾದ ಶರೀರವು ಶುದ್ಧವಾದ ಮನಸ್ಸಿನಿಂದ ಯುಕ್ತವಾಗಿರುವುದೇ ಆರೋಗ್ಯ.
    ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ಇನ್ನೋಬ್ಬ ವ್ಯಕ್ತಿಯನ್ನು ಭೇಟಿಯಾದಾಗ ಮೊದಲ ಆಡುವ ಮಾತೇ ‘ಆರೋಗ್ಯವೇ’ ‘ಕ್ಷೇಮವೇ’ ಎಂಬುದಾಗಿರುತ್ತದೆ. ಆರೋಗ್ಯ ಇಲ್ಲದವನ ಬಾಳು ಏನಿದ್ದರೂ, ಎಷ್ಟಿದ್ದರೂ ಹಾಳು ಎಂಬ ನಾನ್ನುಡಿಯಂತೆ, ಮಾನವನಲ್ಲಿ ಎಷ್ಟೇ ಆಸ್ತಿ-ಅಂತಸ್ತು, ವಜ್ರ-ವೈಢೂರ್ಯದಂತಹ ಐಶ್ವರ್ಯ ಹಾಗೂ ಅಧಿಕಾರ ಇತ್ಯಾದಿಗಳಿದ್ದರೂ ಅವುಗಳನ್ನು ಅನುಭವಿಸಲು ದೈಹಿಕ ಮತ್ತು ಮಾನಸಿಕ ಆರೋಗ್ಯವೇ ಸುಸ್ಥಿರದಲ್ಲಿ ಇಲ್ಲದಿದ್ದಾಗ ಎಲ್ಲವೂ ವ್ಯರ್ಥವಷ್ಟೇ. ಆದ್ದರಿಂದಲೇ ತಿಳಿದವರು ಆರೋಗ್ಯಕ್ಕಿಂತ ಸಂಪತ್ತು ಅಥವಾ ಭಾಗ್ಯ ಮತ್ತೊಂದಿಲ್ಲವೆಂದಿದ್ದಾರೆ.

ನಾಗರಾಜ್ ಆರ್. ಸಾಲೋಳ್ಳಿ
ಭೂಮಿ ಯೋಗ ಫೌಂಡೇಶನ್ ಟ್ರಸ್ಟ್ (ರಿ.)
#57, ಗುರುಕುಲ ಶಾಲೆ ಸಮೀಪ, ಓಂ ನಗರ,
ಸೇಡಂ ರಸ್ತೆ, ಕಲಬುರಗಿ-585 105
ದೂ. : 9972776062
ಇಮೇಲ್ : bhoomiyogafoundation2016@gmail.com

https://www.facebook.com/pages/category/Local-Business/Bhoomi-Yoga-Foundation-Trust-120720688554451/

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!