ವಿಶ್ವ ಮಲೇರಿಯಾ ದಿನ – ಎಪ್ರೀಲ್ 25: ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಅತೀ ಅವಶ್ಯಕ.

ವಿಶ್ವ ಮಲೇರಿಯಾ ದಿನ ಎಂದು ಪ್ರತಿ ವರ್ಷ ಎಪ್ರೀಲ್ 25ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಮಲೇರಿಯಾ ರೋಗದಿಂದಾಗುವ ಜಾಗತಿಕ ತೊಂದರೆಗಳು ಮತ್ತು ಪರಿಣಾಮಗಳ ಬಗ್ಗೆ ಹೆಚ್ಚಿಸಿ ಅರಿವು ಮೂಡಿಸಿ ರೋಗದ ಬಗ್ಗೆ ಜಾಗ್ರತಿ ಮೂಡಿಸುವ ಸದುದ್ದೇಶದಿಂದ ಈ ಆಚರಣೆಯನ್ನು ಜಾರಿಗೆತರಲಾಯಿತು.

world-maleria-day ವಿಶ್ವ ಮಲೇರಿಯಾ ದಿನ - ಎಪ್ರೀಲ್ 25: ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಅತೀ ಅವಶ್ಯಕ.

ವಿಶ್ವದಾದ್ಯಂತ ಸರಿಸುಮಾರು 3.3 ಬಿಲಿಯನ್ ಮಂದಿ ಈ ರೋಗಕ್ಕೆ ವರ್ಷವೊಂದರಲ್ಲಿ ತುತ್ತಾಗುತ್ತಿದ್ದು, 2012ರಲ್ಲಿ 6.5 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. 2013ರಲ್ಲಿ 5.8 ಲಕ್ಷ ಮಂದಿ ಜೀವತೆತ್ತಿದ್ದಾರೆ ಎಂದು ಅಂಕಿ ಅಂಶಗಳಿದ ತಿಳಿದುಬಂದಿದೆ. ವಿಶ್ವಸಂಸ್ಥೆಯ 60ನೇ ವಾರ್ಷಿಕ ಸಮ್ಮೇಳನ 2007ರ ಮೇನಲ್ಲಿ ಜರುಗಿದಾಗ ಈ “ವಿಶ್ವ ಮಲೇರಿಯಾ” ದಿನ ಆಚರಣೆಯನ್ನು ಪ್ರತಿ ವರ್ಷ ಎಪ್ರೀಲ್ 25ರಿಂದ ಜಾರಿಗೆ ತರಲಾಯಿತು. ಅದಕ್ಕೂ ಮೊದಲು 2001 ರಿಂದ ಪ್ರತಿವರ್ಷ ಎಪ್ರೀಲ್ 25ರಂದು ಎಂದು “ಆಪ್ರಿಕಾ ಮಲೇರಿಯಾದಿನ” ಆಚರಿಸಲಾಗುತ್ತಿತ್ತು.

2013 ರಲ್ಲಿ 198 ಮಿಲಿಯನ್ ರೋಗಿಗಳು ಮತ್ತು 5,84,000 ಸಾವು ಮಲೇರಿಯದಿಂದ ಸಂಭವಿಸುತ್ತಿತ್ತು. 2014ರಲ್ಲಿ 97 ದೇಶಗಳಲ್ಲಿ ಮಲೇರಿಯಾ ಕಂಡು ಬಂದಿತ್ತು 2011 ರಿಂದ 2014ರ ವರಗೆ “ಭವಿಷ್ಯದಲ್ಲಿ ಹೂಡಿಕೆಮಾಡಿ, ಮಲೇರಿಯಾವನ್ನು ಸೋಲಿಸಿ” ಎಂಬ ಘೋಷವಾಕ್ಯದೊಂದಿಗೆ ಮಲೇರಿಯಾ ವಿರುದ್ಧ ವಿಶ್ವ ಸಂಸ್ಥೆ ಆದೋಲನ ಆರಂಭಿಸಿತು. ಇದರ ಪರಿಣಾಮವಾಗಿ 2014-15ರಲ್ಲಿ ಮಲೇರಿಯಾ ರೋಗದ ಪ್ರಮಾಣ ಬಹಳಷ್ಟು ಇಳಿಕೆ ಕಂಡಿದೆ. ಲ್ಯಾಟಿನ್ ಅಮೇರಿಕಾ, ಆಪ್ರೀಕಾ, ಏಷ್ಯಾಖಂಡಗಳ ಉಷ್ಣವಲಯದ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುವ ಮಲೇರಿಯಾ, ಮಾರಾಣಾಂತಿಕ ಖಾಯಿಲೆ ಅಲ್ಲದಿದ್ದರೂ ಮನುಕುಲದ ಬಹುದೊಡ್ಡ ಶತ್ರು ಎಂದರೂ ತಪ್ಪಲ್ಲ.

ಭಾರತದಲ್ಲಿ, ವರ್ಷವೊಂದರಲ್ಲಿ 1 ಮಿಲಿಯನ್ ಮಂದಿ ಈ ರೋಗದಿಂದ ಸಾವನ್ನಪ್ಪುತ್ತಿದ್ದು ಹೆಚ್ಚಿನ ಮಂದಿಯನ್ನು ಕ್ಲೊರೋಕ್ಸಿನ್ ಎಂಬ ಔಷಧಿಯನ್ನು ಬಳಸಿ ನಿಯಂತ್ರಿಸಲಾಗುತ್ತಿದೆ. ಇತ್ತೀಚಿನ ದಿನಗಳು ಪ್ಲಾನ್ಮೋಡಿಯಂ ಫಾಲ್ಸಿಪೆರಮ ಎಂಬ ಮಲೇರಿಯಾ ಈ ಔಷಧಿಗೆ ಸ್ಪಂದಿಸುವುದಿಲ್ಲ ಮತ್ತು ಇತ್ತೀಚಿನ ದಿನಗಳಲ್ಲಿ ಮಲ್ಟಿ ಡ್ರಗ್ಸ್ ಥೆರಫಿ ಎಂದರೆ ಎರಡೆರಡು ಔಷಧಿಗಳನ್ನು ಜೊತೆಜೊತೆಯಾಗಿ ಉಪಯೋಗಿಸಿ ರೋಗವನ್ನು ಹತೋಟಿಗೆ ತರಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅಟ್ರಿ ಮಿಸಿನಿನ್ ಎಂಬ ಔಷಧಿಯನ್ನು ಹೆಚ್ಚಾಗಿ ಬಳಸುತ್ತಾರೆ. ಹಲವು ಔಷಧಿಗಳನ್ನು ಜೊತೆಜೊತೆಗೆ ಬಳಸುವುದರಿಂದ ರೋಗ ಮರಕಳಿಸುವ ಸಾಧ್ಯತೆ ಕಡಮೆಯಾಗುತ್ತದೆ ಮತ್ತು ವ್ಯಕ್ತಿಯ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ರೋಗ ಗುಣವಾದ ಬಳಿಕ ನಾಲ್ಕರಿಂದ ಐದು ದಿನ ಔಷಧಿ ತೆಗೆದುಕೊಂಡಲ್ಲಿ ರೋಗ ವಾಹಕ ಪರಾವಲಂಬಿ ಜೀವಿಗಳನ್ನು ಸಂಪೂರ್ಣವಾಗಿ ನಾಶ ಮಾಡಿ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಮತ್ತು ಮರುಕಳಿಸದಂತೆ ತಡೆಯಬಹುದು.

ಬೆಳೆಯುತ್ತಿರುವ ರಾಷ್ಟ್ರದ ಬಡ ಮತ್ತು ಮಧ್ಯಮ ವರ್ಗದಜನರಲ್ಲಿ ಕಾಣಸಿಗುವ ಮಲೇರಿಯಾ, ಮೂಲಭೂತ ಸೌಕರ್ಯದ ಕೊರತೆ, ಬಡತನ, ಅನಕ್ಷರತೆ ಇತ್ಯಾದಿ ಕಾರಣಗಳಿಂದಾಗಿ ಭಾರತದಂತಹ ರಾಷ್ಟ್ರಗಳನ್ನು ಬಹಳವಾಗಿ ಕಾಡುತ್ತಿದೆ. ಮಲೇರಿಯಾ ರೋಗದಿಂದ ಉಂಟಾಗುವ ಆರ್ಥಿಕ, ಸಾಮಾಜಿಕ ಪರಿಣಾಮಗಳಿಂದಾಗಿ ದೇಶದ ಪ್ರಗತಿಗೆ ಬಹಳ ದೊಡ್ದಕಂಟಕವಾಗಿ ಮಲೇರಿಯಾ ಬೆಳೆದು ನಿಂತಿದೆ ಎಂದರೂ ತಪ್ಪಲ್ಲ. ಈ ನಿಟ್ಟಿನಲ್ಲಿ ಮಲೇರಿಯಾ ದಿನ ಆಚರಣೆ ಹೆಚ್ಚು ಅರ್ಥಪೂರ್ಣವಾಗಬೇಕಾದರೆ ನಾವೆಲ್ಲರೂ ಮಲೇರಿಯಾ ವಿರುದ್ಧ ಸಮರಸಾರಿ, ರೋಗವನ್ನು ಗೆಲ್ಲಬೇಕಾದ ಅನಿವಾರ್ಯತೆಯೂ ಇದೆ.

ಮಲೇರಿಯಾ ಯಾಕೆ ಮತ್ತು ಹೇಗೆ?

ಮಲೇರಿಯಾ ಅತೀ ಸಾವiನ್ಯವಾದ ಸಾಂಕ್ರಾಮಿಕ ರೋಗವಾಗಿದ್ದು, ಉಷ್ಣವಲಯ ಮತ್ತು ಉಪ-ಉಷ್ಣವಲಯಗಳಲ್ಲಿ ಹೆಚ್ಚು ಕಂಡುಬರುತ್ತದೆ. ಮಲೇರಿಯಾ ರೋಗ ಒಂದು ಉಗ್ರ ಸ್ವರೂಪದ ಸಾರ್ವಜನಿಕ ಆರೋಗ್ಯ ಪಿಡುಗು ಆಗಿದ್ದು, ಬಡತನದ ರೇಖೆಗಿಂತ ಕೆಳಗಿರುವವರಲ್ಲಿ ಹೆಚ್ಚು ಕಂಡುಬರುತ್ತದೆ. ಮತ್ತು ಬಡತನಕ್ಕೆ ಇದು ಕೂಡಾ ಕಾರಣವಾಗಿದ್ದು, ಆರ್ಥಿಕ ಮುನ್ನಡೆಗೆ ಅಡ್ಡಿಆಗುತ್ತದೆ. ಪ್ಲಾಸ್ಮೋಡಿಯಂ ಜಾತಿಗೆ ಸೇರಿದ ಪ್ರೋಟೊಸೋವನ್ ಪರಾವಲಂಬಿಯ ಈ ರೋಗಕ್ಕೆ ಪ್ರಮುಖ ಕಾರಣ.ಈ ಪರಾವಲಂಬಿ ಜೀವಿಗಳಲ್ಲಿ ಐದುಜಾತಿಗಳು ಮಾನವರಿಗೆ ಮಲೇರಿಯಾ ಸೋಂಕು ತಗಲಿಸಬಹುದು. ಪ್ಲಾಸ್ಮೋಡಿಯಂ ವೈವಾಕ್ಸ್, ಫಾಲ್ಸಿಫೆರಮ್, ಓವಾಲೆ ಮತ್ತು ಮಲೇರಿಯಾ ಎಂಬ ಐದು ಜಾತಿಗಳಲ್ಲಿ ಫಾಲ್ಸಿಫೆರಂ ಜಾತಿಯ ರೋಗಾಣು ಅತ್ಯಂತ ಗುರುತರವಾದ ಮಲೇರಿಯಾ ರೋಗಕ್ಕೆ ಕಾರಣವಾಗುತ್ತದೆ. ಸುಮಾರು 80% ಮಲೇರಿಯಾ ಪ್ರಕರಣಗಳಿಗೆ ಫಾಲ್ಸಿಫೆರಂ ಕಾರಣವಾಗಿದ್ದು ಮಲೇರಿಯಾದಿಂದ ಸಂಬಂಧಿಸುವ ಸಾವುಗಳಲ್ಲಿ ಸುಮಾರು 90% ಪಾಲು ಇದರದ್ದೇ ಆಗಿರುತ್ತದೆ.

ಹೇಗೆ ಹರಡುತ್ತದೆ?

ಮಲೇರಿಯಾ ರೋಗ ಕೇವಲ ಹೆಣ್ಣು ಅನಾಫಿಲಸ್ ಸೊಳ್ಳೆಗಳಿಂದ ಮಾತ್ರ್ರ ಹರಡುತ್ತದೆ. ಮಲೇರಿಯಾ ಸೋಂಕಿತ ವ್ಯಕ್ತಿಯ ರಕ್ತವನ್ನು ಹೀರಿಕೊಂಡ ಸೊಳ್ಳೆಯು ಸೋಂಕಿತವಾಗುತ್ತವೆ. ಅನಾಫಿಲಿಸ್ ಹೆಣ್ಣುಸೊಳ್ಳೆ, ಸೋಂಕಿತ ವ್ಯಕ್ತಿಯನ್ನು ಚುಚ್ಚಿದಾಗ ಸಣ್ಣ ಪ್ರಮಾಣದಲ್ಲಿ ಹೀರಿಕೊಳ್ಳಲಾದ ರಕ್ತದಲ್ಲಿ ಸೂಕ್ಷ್ಮ ಮಲೇರಿಯಾ ಪರವಲಂಬಿಗಳಿರುತ್ತದೆ. ಒಂದು ವಾರಗಳ ಬಳಿಕ ಸೋಂಕಿತ ಸೊಳ್ಳೆಯು ಪುನಃ ವ್ಯಕ್ತಿಯರಕ್ತ ಹೀರಿಕೊಳ್ಳುವಾಗ ಈ ಪರಾವಲಂಬಿಗಳು ಸೊಳ್ಳೆಯ ಎಂಜಲಿನೊಂದಿಗೆ ಬೆರೆತು, ಕಡಿತಕ್ಕೊಳಗಾದ ವ್ಯಕ್ತಿಯರಕ್ತದಲ್ಲಿ ಸೇರಿಕೊಳ್ಳುತ್ತದೆ. ಹೀಗೆ ಸೋಂಕಿತ ಹೆಣ್ಣು ‘ಅನಾಫಿಲಿಸ್’ ಸೊಳ್ಳೆ ಆರೋಗ್ಯವಂತ ವ್ಯಕ್ತಿಗೆ ಕಚ್ಚುವುದರಿಂದ ಜನರು ಮಲೇರಿಯಾ ರೋಗಕ್ಕೆ ತುತ್ತಾಗುತ್ತಾರೆ. ಕೇವಲ ಹೆಣ್ಣು ಸೊಳ್ಳೆಗಳು ರಕ್ತವನ್ನು ಹೀರುತ್ತದೆ. ಹಾಗಾಗಿ ಗಂಡು ಸೊಳ್ಳೆಗಳು ರೋಗವನ್ನು ಹರಡಿಸುವುದಿಲ್ಲ.

ಅನಾಫಿಲಸ್ ಜಾತಿಯ ಹೆಣ್ಣು ಸೊಳ್ಳೆಗಳು ರಾತ್ರಿಯ ವೇಳೆ ರಕ್ತಹೀರಲು ಇಚ್ಚಿಸುತ್ತವೆ. ಅವು ಮುಸ್ಸಂಜೆಯ ವೇಳೆ ಆಹಾರಕ್ಕಾಗಿ ಸಂಚರಿಸಲಾರಂಭಿಸಿ ಆಹಾರ ಹೀರಿಕೊಳ್ಳುವ ವರೆಗೂರಾತ್ರಿ ಹೊತ್ತು ಅವುಗಳ ಸಂಚಾರವನ್ನು ಮುಂದುವರಿಸುತ್ತದೆ. ರಕ್ತದಾನದ ಮೂಲಕವೂ ಮಲೇರಿಯಾ ಪರಾವಲಂಬಿಗಳು ಹರಡಬಹುದು. ಆದರೆ ಈ ರೀತಿಯಿಂದ ಹರಡುವುದು ಬಹಳ ಅಪರೂಪ. ಮಲೇರಿಯಾ ರೋಗ ಹರಡುವ ‘ಆನಾಫಿಲಿಸ್’ ಸೊಳ್ಳೆ ತನ್ನ ವಂಶಾಭಿವೃದ್ಧಿ ನಡೆಸಲು ಮನುಷ್ಯನನ್ನು ಅವಲಂಭಿಸಿರುತ್ತದೆ. ಹೀಗೆ ಮನುಷ್ಯ ಸೋಂಕಿತ ಸೊಳ್ಳೆಯಿಂದ ಆರೋಗ್ಯವಂತ ಮನುಷ್ಯನ ರಕ್ತವನ್ನು ಸೇರಿದ ಬಳಿಕ, ಈ ಪರಾವಲಂಬಿಗಳು ಕೆಂಪು ರಕ್ತಕಣಗಳೊಳಗೆ ವೃದ್ಧಿಯಾಗುತ್ತದೆ ಮತ್ತು ಮಲೇರಿಯಾ ರೋಗದ  ಕಾಣಿಸತೊಡಗುತ್ತದೆ.

ಮಲೇರಿಯಾ ಸಾಂಕ್ರಮಿಕ ರೋಗಗಳನ್ನು ತಡೆಗಟ್ಟುವ ಕೆಲವು ಲಸಿಕೆಗಳು ಇನ್ನೂ ವಿಕಸನದ ಹಂತದಲ್ಲಿಯೇ ಇದೆ. ಉನ್ನತ ಸ್ಥರದರಕ್ಷಣೆ ನೀಡುವ ಮಲೇರಿಯಾ ಲಸಿಕೆ ಸಧ್ಯಕ್ಕೆ ಲಭ್ಯವಿಲ್ಲದ ಕಾರಣ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೊಳ್ಳೆ ನಿಯಂತ್ರಣ ಮತ್ತು ಸೊಳ್ಳೆಗಳ ನಿರ್ಮೂಲನಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಮಲೇರಿಯಾ ರೋಗದ ಹೆಚ್ಚಿರುವ ಜಾಗಗಳಲ್ಲಿ ‘ಮಲೇರಿಯಾ’ ಸೋಂಕಿನ ಸಾಧ್ಯತೆ ಕಡಿಮೆಗೊಳಿಸಲು ರೋಗ ನಿರೋಧಕ ಔಷಧಿಗಳನ್ನು ನಿರಂತರವಾಗಿ ಸೇವಿಸಬೇಕಾಗುತ್ತದೆ. ಆದರೂ, ಪರಾವಲಂಬಿ ಪ್ಲಾಸ್ಮೋಡಿಯಂ ಜೀವಿಗಳು, ಇಂತಹ ಹಲವಾರು ಔಷಧಿಗಳ ವಿರುದ್ಧ ಹೊರಾಡುವಷ್ಟರ ಮಟ್ಟಿಗೆ ವಿಕಸನಗೊಂಡಿದೆ. ಈ ಕಾರಣದಿಂದಲೇ ಮಲೇರಿಯಾ ರೋಗದ ಪರಿಣಾಮಕಾರಿ ನಿಯಂತ್ರಣಕ್ಕೆ ಹೆಚ್ಚಿನ ಮುತುವರ್ಜಿಯಿಂದ ಕೆಲಸ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ.

ರೋಗದ ಲಕ್ಷಣಗಳು

ವಿಪರೀತ ಜ್ವರ, ನಡುಗುವಿಕೆ, ಗಂಟು ಅಥವಾ ಕೀಲುನೋವು, ವಾಂತಿ, ರಕ್ತಹೀನತೆ, ತಲೆ ಸುತ್ತುವುದು, ಉಸಿರು ಕಟ್ಟುವಿಕೆ ಮತ್ತು ಹೃದಯ ಸ್ಪಂಧನಾಧಿಕ್ಯ ಮುಂತಾದುವುಗಳು ಕಾಣಿಸಿಕೊಳ್ಳುತ್ತದೆ. ರೋಗದತೀವ್ರತೆ ಜಾಸ್ತಿಯಾದಲ್ಲಿ ಅಕ್ಷಿಪಟಲದ ಹಾನಿ, ಸೆಳೆತ ಅಥವಾ ಅಪಸ್ಮಾರ ಮತ್ತು ಮೂತ್ರದಲ್ಲಿ ರಕ್ತ ಬರುವ ಸಾಧ್ಯತೆಯೂ ಇದೆ. ಮಲೇರಿಯ ರೋಗದಲ್ಲಿ ಬರುವ ಜ್ವರವೂ ಕೂಡಾ ಪ್ಲಾಸ್ರ್ಮೇಡಿಯ ಪರಾವಲಂಬಿಯ ಜಾತಿಯ ಪ್ರಬೆಧಕ್ಕೆ ಅನುಗುಣವಾಗಿ ಇರುತ್ತದೆ. ವೈವಾಕ್ಸ್ ಮತ್ತು ಓವಾಲೆ ಸೋಂಕು ತಗಲಿದ್ದಲ್ಲಿ, ಎರಡು ದಿನಗಳಿಗೊಮ್ಮೆ ನಾಲ್ಕರಿಂದ 6ಗಂಟೆಗಳ ಕಾಲ ಸಕ್ರೀಯವಾಗಿ ಸಂಭವಿಸುವ ಹಠಾತ್ ಚಳಿ ಮತ್ತು ನಡುಕ ಮತ್ತು ಬಳಿಕ ಜ್ವರ ಮತ್ತು ಬೆವರುವಿಕೆ ಸಂಭವಿಸುತ್ತದೆ.

ಪ್ಲಾಸ್ಮೋಡಿಯಂ ಮಲೇರಿಯೆ ಪ್ರಭೇಧಗಳಲ್ಲಿ ಮೂರು ದಿನಗಳಿಗೊಮ್ಮೆ ಜ್ವರ ಮತ್ತು ಬೆವರುವಿಕೆ ಕಾಣಿಸಿಕೊಳ್ಳುಬಹುದು. ಫಾಲ್ಸಿಪೆರಮ್ ಫ್ರಬೇಧದ ಮಲೇರಿಯಾ ಪ್ರತಿ 36-48 ಗಂಟೆಗಳಿಗೊಮ್ಮೆ ಮರುಕಳಿಸುವ ಜ್ವರವಾಗಿದ್ದು ಅಷ್ಟೇನೂ ತೀವ್ರವಾಗಿರುವುದಿಲ್ಲ. ಆದರೆ ಬಹುಮಟ್ಟಿಗೆ ಸತತ ಜ್ವರಕ್ಕೆ ಕಾರಣವಾಗಬಹುದು. ಅತೀ ತೀವ್ರ ಮಲೇರಿಯಾ ಸಾಮಾನ್ಯವಾಗಿ ಫಾಲ್ಸಿಫೆರಂ ಸೊಂಕಿನಿಂದ ಆಗುತ್ತದೆ. ಸೋಂಕು ತಗಲಿದ 6-14ದಿನಗಳ ನಂತರ ಕಾಣಿಸಿಕೊಳ್ಳುತ್ತದೆ. ಸೂಕ್ತ ಚಿಕಿತ್ಸೆ, ಸಕಾಲದಲ್ಲಿ ದೊರಕದಿದ್ದರೆ ತೀವ್ರ ಮಲೇರಿಯಾದ ಪರಿಣಾಮದಿಂದ ಕೋಮಾಸ್ಥಿತಿ ಮತ್ತು ಸಾವು ಸಂಭವಿಸಬಹುದು ಚಿಕ್ಕ ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರು ಇದಕ್ಕೆ ಸುಲಭವಾಗಿ ತುತ್ತಾಗುತ್ತಾರೆ. ಹಿಗ್ಗಿದಗುಲ್ಮಗ್ವಂಥಿ(ಸ್ಪೀನೋಮೆಗಾಲೆ) ತೀವ್ರ ತಲೆನೋವು, ಮೆದುಳಿನ ರಕ್ತಹೀನತೆ, ಹಿಗ್ಗಿದಯ ಕೃತ್ತು (ಹೆಪಾಟೊ ಮೆಗಾಲೆ), ಮೂತ್ರಪಿಂಡಗಳ ವೈಫಲ್ಯಗಳು ಸಂಭವಿಸಬಹುದು. ಮೂತ್ರಪಿಂಡಗಳ ವೈಫಲ್ಯದಿಂದ ಕರಿಮೂತ್ರ ಜ್ವರ ಕೂಡಾ ಉಂಟಾಗಬಹುದು.

ಮಕ್ಕಳಲ್ಲಿ ತೀವ್ರ ಮಲೇರಿಯಾ ಬಂದಲ್ಲಿ, ಅರಿವಿನ ಶಕ್ತಿ ಕುಂಟಿತಗೊಳಿಸಬಹುದು. ಮೆದುಳಿನ ಮಲೇರಿಯಾ ಜ್ವರದಿಂದ ನರ ಮಂಡಲಕ್ಕೂ ಹಾನಿಯಾಗುವ ಸಾಧ್ಯತೆ ಇದೆ. ಅಪಸ್ಮರ ಮತ್ತು ಅಕ್ಷಿಪಟಲ ಬಿಳಿಯಾಗುವುದು ಮೆದುಳಿನ ಜ್ವರದ ಸಂಕೇತವಾಗಿರುತ್ತದೆ. ತೀವ್ರತರ ಮಲೇರಿಯಾ ಫಾಲ್ಸಿಫೆರಂ ಪ್ರಭೇದಗಳಲ್ಲಿ ಕಾಣಸಿಗುತ್ತದೆ. ಯಕೃತಿನಲ್ಲಿ ಅವ್ಯಕ್ತ ಪರಾವಲಂಬಿಗಳ ಇರುವಿಕೆಯ ಕಾರಣದಿಂದಾಗಿ, ಸೋಂಕು ತಗಲಿದ ತಿಂಗಳುಗಳ ಅಥವಾ ವರ್ಷಗಳ ಬಳಿಕವೂ ರೋಗ ಮರುಕಳಿಸಬಹುದು. ಹಾಗಾಗಿ ರಕ್ತದಲ್ಲಿ ಪರಾವಲಂಬಿಗಳು ಇಲ್ಲದಿರುವುದನ್ನು ಕಂಡು, ಮಲೇರಿಯಾ ಇಲ್ಲ ಎಂಬ ತೀರ್ಮಾನಕ್ಕೆ ಬರಬಾರದು. ಈ ರೀತಿಯ ದೀರ್ಘಕಾಲದ ಮಲೇರಿಯಾ ವೈವಾಕ್ಸ್ ಮತ್ತು ಓವಾಲೆ ಪ್ರಭೇಧಗಳಲ್ಲಿ ಕಂಡುಬರುತ್ತದೆ ಮತ್ತು ಈ ರೀತಿಯ ರೋಗಾಣುವಿನಿಂದ ಮಲೇರಿಯಾ ಬಂದಿದ್ದಲ್ಲಿ ಸಂಪೂರ್ಣವಾಗಿ ಮಲೇರಿಯಾ ನಿರ್ಮೂಲನವಾಗುವಂತೆ ಸೂಕ್ತ ಔಷಧ ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳುವುದು ಅತೀ ಅವಶ್ಯಕ.

ತಡೆಗಟ್ಟುವುದು ಹೇಗೆ?

ಮಲೇರಿಯಾ ರೋಗವು ಮನುಷ್ಯನಿಂದ ಮನುಷ್ಯನಿಗೆ ಹರಡುವ ಸಾಂಕ್ರಮಿಕ ರೋಗವಾಗಿರುತ್ತದೆ. ಸಾಮಾನ್ಯವಾಗಿ ಎಲ್ಲಾ ಸಾಂಕ್ರಮಿಕ ರೋಗಗಳಲ್ಲಿ ಇರುವಂತೆ ರೋಗ ನಿಯಂತ್ರಣಕ್ಕೆ ಮತ್ತು ತಡೆಗಟ್ಟುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

1. ಸೊಳ್ಳೆಗಳ ನಿಯಂತ್ರಣಕ್ಕಾಗಿ, ಮನೆಯ ಸುತ್ತಮುತ್ತಲಿನ ಆವರಣಗಳಲ್ಲಿ ನೀರು ನಿಲ್ಲದಂತೆ ನಿಗಾ ವಹಿಸಬೇಕು. ನಿಂತ ನೀರಲ್ಲಿ ಅನಾಫೆಲಿಸ್ ಸೊಳ್ಳೆ ಮರಿಗಳು ಬೆಳೆದು ರೋಗ ವರ್ಧನೆ ಕಾರಣವಾಗಬಹುದು. ಎಳನೀರು ಚಿಪ್ಪುಗಳನ್ನು ಕವಚಿ ಹಾಕಬೇಕು ಅಥವಾ ನಾಶಪಡಿಸಬೇಕು. ಟಯರ್‍ಗಳಲ್ಲಿ ನೀರು ನಿಲ್ಲದಂತೆ ಮಾಡಬೇಕು. ನೀರಿನ ಟ್ಯಾಂಕು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛಗೊಳಿಸಬೇಕು. ಬಕೆಟುಗಳಲ್ಲಿ ವಾರಗಟ್ಟಲೆ ನೀರು ತುಂಬಿಸಿ ಇಡಬಾರದು.

2. ಹೂದಾನಿಗಳ ಕೆಳತಟ್ಟೆಗಳನ್ನು ಆಗಾಗ ಶುಚಿಗೊಳಿಸಬೇಕು. ಎ.ಸಿ. ಪ್ರಿಡ್ಜ್ ಮತ್ತುಏರ್ ಕೂಲರ್‍ಗಳಲ್ಲಿ ಸೇರಿಕೊಂಡ ನೀರನ್ನು ಕಾಲಕಾಲಕ್ಕೆ ಖಾಲಿ ಮಾಡಬೇಕು. ಹಳ್ಳಿ ಪ್ರದೇಶಗಳಲ್ಲಿ ಉಪಯೋಗಿಸದೇ ಇರುವ ಕಡೆಯುವ ಕಲ್ಲುಗಳು, ಖಾಲಿ ತಟ್ಟೆಗಳು ಕ್ಯಾನ್‍ಗಳನ್ನು ಮತ್ತು ಬಕೆಟ್‍ಗಳನ್ನು ಬೋರಲಾಗಿ ಹಾಕಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ನೀರಿನತೊಟ್ಟಿ, ಟ್ಯಾಂಕ್ ಮತ್ತು ಬಾವಿಗಳಿಗೆ ಸೊಳ್ಳೆ ವ್ಮರಿಗಳನ್ನು ತಿನ್ನುವಗಪ್ಪಿ ಮತ್ತು ಗಂಬೂಸಿಯ ಮೀನು ಮರಿಗಳನ್ನು ಹಾಕುವ ಮೂಲಕ ಸೊಳ್ಳೆ ಉತ್ಪಾದನೆಯಾಗದಂತೆ ಮಾಡಬೇಕು.

3. ರಾತ್ರಿ ಹೊತ್ತು ಮಲಗುವಾಗ ಕಡಾಯವಾಗಿ ಸೊಳ್ಳೆ ಪರದೆ ಉಪಯೋಗಿಸಬೇಕು. ಸಾಮಾನ್ಯವಾಗಿ ಮಲೇರಿಯಾ ಹರಡುವ ಹೆಣ್ಣು ಅನಾಫೆಲಿಸ್ ಸೊಳ್ಳೆ ರಾತ್ರಿ ವೇಳೆ ಕಚ್ಚುತ್ತದೆ. ಸೊಳ್ಳೆ ವಿಕರ್ಷಿತವಾಗುವ ಕೀಟನಾಟಕ ಅಥವಾ ಸೊಳ್ಳೆನಾಶಕ ದ್ರಾವಣಗಳನ್ನು ಬಳಸಬೇಕು.

4. ಮಲೇರಿಯಾ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರ ಮತ್ತು ಸಹಕಾರ ಅತೀ ಅವಶ್ಯಕ. ಸಾರ್ವಜನಿಕ ಸ್ಥಳಗಳಲ್ಲಿ ಸೊಳ್ಳೆಗಳು ಬೆಳೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸಾರ್ವಜಿನಿಕ ಸ್ಥಳಗಳ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸ, ಘನತ್ಯಾಜ್ಯಗಳನ್ನು ಎಸೆಯುವುದನ್ನು ನಿಲ್ಲಿಸಬೇಕು. ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದು ಅತೀ ಅವಶ್ಯಕ.

5. ಯಾರಿಗಾದರೂ ಜ್ವರ ಬಂದಲ್ಲಿ ತೀವ್ರ ನಡುಕ, ಚಳಿ ಜ್ವರವಿದ್ದಲ್ಲಿ ತಕ್ಷಣ ವೈದ್ಯರನ್ನು ಕಂಡು ‘ಮಲೇರಿಯಾ’ ರಕ್ತಪರೀಕ್ಷೆ ಮಾಡಿಸಬೇಕು. ಸಾಮಾನ್ಯ ವೈರಸ್‍ಜ್ವರವೆಂದು ನಿರ್ಲಕ್ಷಿಸಿದ್ದಲ್ಲಿ ಅಪಾಯಕಟ್ಟಿಟ್ಟ ಬುತ್ತಿ. ಆರಂಭಿಕ ಹಂತದಲ್ಲಿ ಮಲೇರಿಯಾ ರೋಗವನ್ನು ಗುರುತಿಸಿದ್ದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಬಹುದು. ಹೆಚ್ಚಿನ ಜನ ಸಾಂದ್ರತೆ ಇರುವ ಕೊಳಚೆಗೇರಿ ಪ್ರದೇಶಗಳಲ್ಲಿ ಸೊಳ್ಳೆಗಳ ಸಾಂದ್ರತೆಯೂ ಹೆಚ್ಚಿರುತ್ತದೆ. ಮತ್ತು ಹೆಚ್ಚಿನ ಪ್ರಮಾಣದಲ್ಲಿ ಮನುಷ್ಯರಿಂದ ಸೊಳ್ಳೆಗಳಿಗೆ ಮತ್ತು ಪ್ರತಿಕ್ರಮ ಇದ್ದಲ್ಲಿ ಮಲೇರಿಯಾ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂತಹ ಪ್ರದೇಶಗಳಲ್ಲಿ ಸ್ವಚ್ಛತೆ ಮತ್ತು ಸೊಳ್ಳೆಗಳ ನಿರ್ಮೂಲನಕ್ಕೆ ಹೆಚ್ಚಿನ ಅಧ್ಯತೆ ನೀಡಬೇಕು.

6. ಮಲೇರಿಯಾ ರೋಗದ ಸಾಂಧ್ರತೆ ಹೆಚ್ಚಿರುವ ಪ್ರದೇಶಗಳಿಗೆ ಪ್ರಮಾಣ ಮಾಡುವ ತುರ್ತು ಅವಶ್ಯಕತೆ ಇದ್ದಲ್ಲಿ, ಈ ಮೊದಲೇ ನಿಮಗೆ ಮಲೇರಿಯಾ ರೋಗ ಬಂದಿದ್ದಲ್ಲಿ ವೈದ್ಯರ ಸಲಹೆ ಮೇರೆಗೆ ಮಲೇರಿಯಾ ರೋಗ ನಿರೋಧಕ ಔಷಧಿ ಸೇವನೆ ಮಾಡುವುದು ಉತ್ತಮ. ಒಟ್ಟಿನಲ್ಲಿ ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ರಾಷ್ಟ್ರಗಳಲ್ಲಿ ದೀರ್ಘಾವಧಿಯ ಮಲೇರಿಯಾ ರೋಗಕ್ಕೆ ಚಿಕಿತ್ಸೆ ನೀಡುವುದಕ್ಕಿಂತ, ಆರಂಭದಲ್ಲೇ ಅದನ್ನು ತಡೆಗಟ್ಟುವುದು, ಆರ್ಥಿಕ ದೃಷ್ಟಿಯಿಂದ ಹೆಚ್ಚು ಪರಿಣಾಮಕಾರಿ ಮತ್ತು ಜಾಣತನ ಎನ್ನುವುದು ಸಂಶೋಧಕರ ಅಭಿಪ್ರಾಯವಾಗಿದೆ.

ನಿಮಗಿದು ಗೊತ್ತೆ?

  1. ಮಲೇರಿಯಾ, ಅನಾಫಿ ಎಂಬ ಹೆಣ್ಣು ಸೊಳ್ಳೆಗಳಿಂದ ಹರಡುವ, ಪ್ಲಾನ್ಮೋಡಿಯಂ ಎಂಬ ಪರಾವಲಂಬಿ ಜೀವ ಪ್ರಬೇಧಕ್ಕೆ ಸೇರಿದ, ಸಾಂಕ್ರಾಮಿಕ ರೋಗವಾಗಿದ್ದು ಉಷ್ಣ ವಲಯದ ತೇವ ಬರಿತ ಮತ್ತು ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಹೆಚ್ಚು ಕಾಣಸಿಗುತ್ತದೆ.
  2. 2015ರಲ್ಲಿ 215 ಮಿಲಿಯನ್ ಮಂದಿ ಈ ರೋಗದಿಂದ ಬಳಲಿ, 4,38,000 ಸಾವು ಮಲೇರಿಯಾದಿಂದ ಸಂಭವಿಸಿದೆ. ವಿಶ್ವದ 109 ರಾಷ್ಟ್ರಗಳಲ್ಲಿ ತನ್ನ ಕಮಲಬಾಹುವನ್ನು ವಿಸ್ತಿರಿಸುವ ಮಲೇರಿಯ, 3.3 ಬಿಲಿಯನ್ ಮಂದಿ (ವಿಶ್ವದ ಜನಸಂಖ್ಯೆಯ ಅರ್ಧದಷ್ಟು) ಈ ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ.
  3. ‘ಪ್ಲೂ’ ರೀತಿಯ ಲಕ್ಷಣಗಳಿಂದ ಆರಂಭಗೊಂಡು, ಅತಿಯಾದ ಚಳಿ ಮತ್ತು ಜ್ವರದಿಂದ ಕೂಡಿದ್ದು, ವಾಂತಿ, ವಾಕರಿಕೆ, ತಲೆನೋವು, ವಿಪರೀತ ಮೈಕೈ ನೋವು ಮತ್ತು ಸುಸ್ತಿನಿಂದ ಕೂಡಿದ ರೋಗವಾಗಿದೆ. ಚಿಕಿತ್ಸೆಗೆ ಸಂಪೂರ್ಣವಾಗಿ ಸ್ಪಂಧಿಸುವ ರೋಗ ಇದಾಗಿದ್ದು, ರೋಗಿಯ ವಯಸ್ಸು, ಮಲೇರಿಯಾ ರೋಗದ ಪ್ರಭೇದ ಮತ್ತು ವ್ಯಕ್ತಿಯ ದೇಹಸ್ಥಿತಿಗೆ ಅನುಗುಣವಾಗಿ ಔಷಧಿಯನ್ನು ಆಯ್ಕೆ ಮಾಡಲಾಗುತ್ತದೆ.
  4. ಅತೀ ಸುಲಭವಾಗಿ ಗುರುತಿಸಬಹುದಾದ ರೋಗ ಇದಾಗಿದ್ದು ಖಆಖಿ ಎಂಬ ಪರೀಕ್ಷೆ ಮುಖಾಂತರ ರಕ್ತದ ಪರೀಕ್ಷೆ ಮಾಡಿ ರೋಗವನ್ನು ಕೆಲವೇ ನಿಮಿಷಗಳಲ್ಲಿ ಪತ್ತೆ ಮಾಡಬಹುದು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ರೋಗ ಪತ್ತೆ ಮಾಡಲು ಸಾಧ್ಯವಿದೆ. ಅತ್ಯಂತ ಅತ್ಯಾಧುನಿಕ ಉಪಕರಣಗಳ ಅಗತ್ಯ ಈ ರೋಗದ ಪತ್ತೆಗೆ ಅಗತ್ಯವಿಲ್ಲ.
  5. ಮಲೇರಿಯಾ ರೋಗಕ್ಕೆ ಯಾವುದೇ ಲಸಿಕೆ ಲಭ್ಯವಿಲ್ಲ. ಸಾಕಷ್ಟು ಸಂಶೋಧನೆಗಳು ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಲಸಿಕೆ ಕಂಡುಹಿಡಿದ್ದಲ್ಲಿ ಮನುಕುಲವನ್ನು ಇನ್ನಿಲ್ಲದಂತೆ ಕಾಡುವ ಈ ರೋಗದಿಂದ ಮುಕ್ತಿ ಸಿಗಲೂಬಹುದು.
  6. ಅತೀ ಸುಲಭವಾಗಿ ತಡೆಗಟ್ಟಬಹುದಾದ ರೋಗ ಇದಾಗಿದ್ದು ಸಾಕಷ್ಟು ಸೊಳ್ಳೆ ವಿಕರ್ಷಕ ತಂತ್ರಗಳನ್ನು ಮತ್ತು ಸೊಳ್ಳೆ ನಿಯಂತ್ರಣ ಮಾಡಿದಲ್ಲಿ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು.
  7. ಮಲೇರಿಯಾ ಸಂಬಂಧಿ ಸಾವಿನ ಸಿಂಹಪಾಲು ಆಫ್ರಿಕಾ ದೇಶದಲ್ಲಿ ಆಗುತ್ತಿದ್ದು ಹೆಚ್ಚಿನವರು 5 ವರ್ಷಕ್ಕಿಂತ ಕೆಳಗಿನ ಮಕ್ಕಳು.
  8. ಸೊಳ್ಳೆಗಳಿಂದ ಕಡಿದ ಬಳಿಕ ಒಂದು ವಾರದಿಂದ ಒಂದು ತಿಂಗಳವರೆಗೆ ಮಲೇರಿಯಾ ಕಾಣಿಸಿಕೊಳ್ಳಬಹುದು. ಅತಿ ವಿರಳ ಸಂದರ್ಭಗಳಲ್ಲಿ 4 ವರ್ಷ ಬಳಿಕ ಕಾಣಿಸಿದ್ದೂ ಇದೆ.
  9. ಗರ್ಭಿಣಿ ಹೆಂಗಸರು ಮಲೇರಿಯಾಕ್ಕೆ ತುತ್ತಾದಲ್ಲಿ ತಾಯಿಂದ ಮಗುವಿಗೆ ಮಲೇರಿಯಾ ಬರುವ ಸಾಧ್ಯತೆ ಮತ್ತು ಹುಟ್ಟಿದ ಮಗುವಿನ ತೂಕವನ್ನು ಕಡಮೆ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
  10. ಪ್ಲಾಸ್ಮೋಡಿಯಂ ಫಾಲ್ಸಿಪೆರಮ್ ಅತ್ಯಂತ ಗಂಭೀರ ಮಲೇರಿಯಾ ರೋಗಕ್ಕೆ ಕಾರಣವಾಗುತ್ತದೆ. ಮೆದುಳು ಮತ್ತು ನರವ್ಯಹಕ್ಕೆ ವ್ಯಾಪಿಸಿ, ಸಾವಿಗೆ ಮುನ್ನುಡಿ ಬರೆಯುತ್ತದೆ. ಶಾಸ್ತ್ರೀಯವಾದ ಮಲೇರಿಯಾ ಚಿಕಿತ್ಸೆಗೆ ಇದು ಸುಲಭದಲ್ಲಿ ಬಗ್ಗುವುದಿಲ್ಲ. ಪ್ಲಾಸ್ಮೋಡಿಯಂ ಮಲೇರಿಯ (ಶೇಕಡಾ1) ಎಂಬ ರೋಗ ಅತಿ ವಿರಳ ಮತ್ತು ದೇಹದ ರಕ್ತಣಾ ವ್ಯವಸ್ಥೆಯನ್ನು ಹದಗೆಡಿಸುತ್ತದೆ. ಪ್ಲಾಸ್ಮೋಡಿಯಂ ಒವಾಲೇ ಕೂಡಾ ಭಾರತದಲ್ಲಿ ಅತಿ ವಿರಳ. ಆದರೆ ಆಫ್ರಿಕಾ ದೇಶದಲ್ಲಿ ಅತಿಯಾಗಿ ಕಾಣಿಸುತ್ತದೆ. ಪ್ಲಾಸ್ಮೋಡಿಯಂ ವೈವಾಕ್ಸ್ ಭಾರತದಲ್ಲಿ ಅತಿ ಹೆಚ್ಚು (ಶೇಕಡಾ 60) ಕಾಣಸಿಗುತ್ತದೆ. ಮಾರಣಾಂತಿಕವಲ್ಲದಿದ್ದರೂ, ಯಕೃತ ಮತ್ತು ಕಿಡ್ನಿಯ ವೈಫಲ್ಯಕ್ಕೆ ದಾರಿ ಮಾಡಿ ಕಾಡುತ್ತದೆ ಮತ್ತು ಪದೇ ಪದೇ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಒಟ್ಟಿನಲ್ಲಿ ಮಲೇರಿಯಾರೋಗವು ಕೇವಲ ಬಡತನದ ಜೊತೆಗೆ ಇರುವ ಕಾಯಿಲೆಯಷ್ಟೇ ಅಲ್ಲ. ಇದು ಬಡತನದ ಮೂಲವು ಹೌದು. ಮತ್ಯು ದೇಶದ ಆರ್ಥಿಕ ಬೆಳವಣಿಗೆ ಬಹಳ ದೊಡ್ಡ ತೊಡಕಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ನಾವೆಲ್ಲ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆಧ್ಯತೆ ನೀಡಿದ್ದಲ್ಲಿ, ಸೊಳ್ಳೆಗಳ ಬೆಳವಣಿಗೆ ಕಡಿಮೆಯಾಗಿ ಮಲೇರಿಯಾ ರೋಗದ ಸಾಧ್ಯತೆಯೂ ಕಡಿಮೆಯಾಗಿ ದೇಶದ, ನಾಡಿನ ಸರ್ವತೋಮುಖ ಬೆಳವಣಿಗೆಗೆ ನಾಂಧಿಯಾಗಬಹುದು. ಅದರಲ್ಲೇ ನಮ್ಮೆಲ್ಲರ ಹಿತ ಅಡಗಿದೆ.

Dr.-Murali-Mohana-Chuntaru.

ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ
ಹೊಸಂಗಡಿ, ಮಂಜೇಶ್ವರ- 671 323
ದೂ.: 04998-273544, 235111  ಮೊ.: 98451 35787
www.surakshadental.com
email: drmuraleemohan@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!