ಆಸ್ಟಿಯೋ ಅರ್ಥ್ರೈಟಿಸ್ ಅಥವಾ ಮಂಡಿನೋವು : ಆಹಾರ, ವ್ಯಾಯಾಮ, ಚಿಕಿತ್ಸೆಗಳ ಮೂಲಕ ಶಾಶ್ವತ ಪರಿಹಾರ

ಆಸ್ಟಿಯೋ ಅರ್ಥ್ರೈಟಿಸ್ ಅಥವಾ ಮಂಡಿನೋವು ಸಾಮಾನ್ಯವಾಗಿ ಮಧ್ಯವಯಸ್ಸು ಅಥವಾ ಇಳಿವಯಸ್ಸಿನಲ್ಲಿ ಹೆಚ್ಚಾಗಿ ಕಾಡುತ್ತದೆ. ಪೌಷ್ಟಿಕವಲ್ಲದ ಜಂಕ್ ಫುಡ್ ಗಳ ಸೇವನೆ, ವ್ಯಾಯಾಮ ರಹಿತ ಜೀವನಶೈಲಿ ಇವೆಲ್ಲಾ ಮಂಡಿ ಸವಕಳಿ ಬೇಗ ಆಗಲು ಕಾರಣವಾಗುತ್ತವೆ.ಪುರುಷರಿಗಿಂತ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ.

Dr.-Venkatramana-Hegde

ಇಂದ್ರಿಯಗಳಲ್ಲಿ ಕಣ್ಣು ಶ್ರೇಷ್ಠವಾದಂತೆ ಸಂಧಿಗಳಲ್ಲಿ ಮೊಣಕಾಲು ಅಥವಾ ಮಂಡಿ ಶ್ರೇಷ್ಠ ಎನ್ನಬಹುದು. ಏಕೆಂದರೆ ಮೊಣಕಾಲುಗಳಿಗೆ ಏನಾದರೂ ತೊಂದರೆಯಾಯಿತು ಎಂದರೆ ಪ್ರತಿದಿನದ ಜೀವನ ಕಷ್ಟದಾಯಕವಾಗಿಬಿಡುತ್ತದೆ. ಮಂಡಿನೋವು ಒಂದಿದ್ದರೆ ಸಣ್ಣಪುಟ್ಟ ಕೆಲಸಗಳೂ ದೊಡ್ಡ ಹೊರೆಯಾಗಿಬಿಡುತ್ತವೆ. ಏಕೆಂದರೆ ನಮ್ಮ ಇಡೀ ದೇಹವನ್ನು ಹೊತ್ತುಕೊಳ್ಳುವುದು ಮಂಡಿಯೇ. ಹಲವಾರು ರೀತಿಯ ಸಮಸ್ಯೆಗಳು ಮಂಡಿನೋವಿಗೆ ಕಾರಣವಾಗುತ್ತವೆ. ನಾವು ಇಂದು ಮೂಳೆ ಸವಕಳಿ ಅಥವಾ ಸ್ಟಿಯೋ ಅರ್ಥ್ರೈಟಿಸ್ ನಿಂದಾಗಿ ಆಗುವ ಮಂಡಿನೋವಿನ ಕಾರಣಗಳು ಮತ್ತು ಪರಿಹಾರಳ ಬಗ್ಗೆ ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಮೂಳೆ ಸವಕಳಿಯೇ ಮಂಡಿನೋವಿಗೆ ಕಾರಣ

ಸಾಮಾನ್ಯವಾಗಿ ಮೂಳೆ ಸವಕಳಿಯೇ ಮಂಡಿನೋವಿಗೆ ಕಾರಣವಾಗಿರುತ್ತದೆ. ಮಂಡಿನೋವು ಸಾಮಾನ್ಯವಾಗಿ ಮಧ್ಯವಯಸ್ಸು ಅಥವಾ ಇಳಿವಯಸ್ಸಿನಲ್ಲಿ ಹೆಚ್ಚಾಗಿ ಕಾಡುತ್ತದೆ. ಇತ್ತೀಚೆಗೆ ಮೂವತ್ತರ ಒಳಗೆ ಕೂಡಾ ಈ ಸಮಸ್ಯೆ ಕಾಡಲು ಪ್ರಾರಂಭವಾಗಿದೆ. ಇದಕ್ಕೆ ಬಹುತೇಕ ಮುಖ್ಯ ಕಾರಣ ನಮ್ಮ ಜೀವನಶೈಲಿ. ಪೌಷ್ಟಿಕವಲ್ಲದ ಜಂಕ್ ಫುಡ್ ಗಳ ಸೇವನೆ, ವ್ಯಾಯಾಮ ರಹಿತ ಜೀವನಶೈಲಿ ಇವೆಲ್ಲಾ ಮಂಡಿ ಸವಕಳಿ ಬೇಗ ಆಗಲು ಕಾರಣವಾಗುತ್ತವೆ.

ಪುರುಷರಿಗಿಂತ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ವಿಶೇಷವಾಗಿ ಮುಟ್ಟು ನಿಲ್ಲುವ ಸಮಯ ಹತ್ತಿರ ಬರುತ್ತಿದ್ದಂತೇ ಅಥವಾ ಮುಟ್ಟು ನಿಂತ ನಂತರ ಹಾರ್ಮೋನ್ ವ್ಯತ್ಯಾಸದಿಂದಾಗಿ ಈ ತೊಂದರೆ ಕಾಡುವುದು ಸಾಮಾನ್ಯ. ಕೆಲವೊಮ್ಮೆ ಆನುವಂಶೀಯವಾಗಿಯೂ ಈ ಸಮಸ್ಯೆ ಬರುತ್ತದೆ. ಕಾರಣಗಳು ಹಲವಾದರೂ ಸಮಸ್ಯೆ ಪ್ರಾರಂಭವಾಗುವ ಮೊದಲೇ ನಾವು ಕೆಲವು ಕ್ರಮಗಳನ್ನು ವಹಿಸಿದರೆ ಇದನ್ನು ಸುಲಭವಾಗಿ ತಡೆಯಬಹುದು; ಬಂದ ನಂತರವೂ ಬೇಗ ಗುಣಪಡಿಸಿಕೊಳ್ಳಬಹುದು.

ಅತಿತೂಕವು ಮುಖ್ಯ ಕಾರಣಗಳಲ್ಲೊಂದು. ನಿಂತಿರುವಷ್ಟು ಸಮಯವೂ ಇಡೀ ದೇಹದ ಭಾರವನ್ನು ಮಂಡಿಗಳೇ ಹೊರಬೇಕಾದ ಕಾರಣ ಅವು ಬೇಗ ಸವೆಯುತ್ತವೆ. ಹಾಗಾಗಿ ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದು ಅಥವಾ ಹೆಚ್ಚಾದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಮಂಡಿಗಳ ಆರೊಗ್ಯಕ್ಕೆ ತುಂಬಾ ಒಳ್ಳೆಯದು. ವಿವಿಧ ಕಾರಣಗಳಿಂದ ಮೊಣಕಾಲಿಗೆ ಪೆಟ್ಟು ಬೀಳುವುದರಿಂದಲೂ ಸವಕಳಿಯಾಗುತ್ತದೆ. ಅತಿಯಾಗಿ ಮೆಟ್ಟಿಲುಗಳನ್ನು ಹತ್ತಿಳಿಯುವವರಿಗೆ, ಆಟಗಾರರಿಗೆ, ಮಂಡಿಗಳಿಗೆ ಒತ್ತಡ ಬೀಳುವಂತಹ ಕೆಲಸಗಳನ್ನು ಮಾಡುವವರಿಗೆ ಅಥವಾ ಅಪಘಾತಗಳಲ್ಲಿ ಮಂಡಿಗೆ ಪೆಟ್ಟು ಬಿದ್ದವರಿಗೆ ಮೊಣಕಾಲು ಸವೆಯುವ ಸಾಧ್ಯತೆ ಹೆಚ್ಚಿರುತ್ತದೆ.

osteo-arthritis ಆಸ್ಟಿಯೋ ಅರ್ಥ್ರೈಟಿಸ್ ಅಥವಾ ಮಂಡಿನೋವು : ಆಹಾರ, ವ್ಯಾಯಾಮ, ಚಿಕಿತ್ಸೆಗಳ ಮೂಲಕ ಶಾಶ್ವತ ಪರಿಹಾರ

ಮಂಡಿನೋವಿಗೆ ಆಹಾರ, ವ್ಯಾಯಾಮ, ಚಿಕಿತ್ಸೆ:

1. ಆಹಾರದಲ್ಲಿ ಕ್ಯಾಲ್ಸಿಯಂ, ಪೌಷ್ಟಿಕಾಂಶಗಳು : ಮೊದಲನೆಯದಾಗಿ ನಮ್ಮ ಆಹಾರದಲ್ಲಿ ಸಂಧಿಗಳ ಆರೋಗ್ಯವನ್ನು ಕಾಪಾಡುವಂತಹ ಪೌಷ್ಟಿಕಾಂಶಗಳು ಇರುವಂತೆ ನೋಡಿಕೊಳ್ಳಬೇಕು. ವಿಶೇಷವಾಗಿ ಒಳ್ಳೆಯ ಕೊಬ್ಬು ಅಂದರೆ ಮನೆಯಲ್ಲೇ ತಯಾರಿಸಿದ ತುಪ್ಪ, ಗಾಣದಲ್ಲಿ ತೆಗೆದ ಕೊಬ್ಬರಿ ಎಣ್ಣೆ, ಶೇಂಗಾ ಎಣ್ಣೆ, ಎಳ್ಳೆಣ್ಣೆಯಂಥವುಗಳನ್ನು ಆಹಾರದಲ್ಲಿ ಹೆಚ್ಚಾಗಿ ಬಳಸಬೇಕು. ಕ್ಯಾಲ್ಸಿಯಂ ಹೆಚ್ಚಿರುವ ಆಹಾರಗಳಾದ ಹಾಲು, ಎಳ್ಳು, ಹಸಿರು ಸೊಪ್ಪು ತರಕಾರಿಗಳು, ನಟ್ ಗಳು, ಕೊಬ್ಬರಿಗಳನ್ನು ಪ್ರತಿನಿತ್ಯ ಬಳಸಬೇಕು.

2. ಎಣ್ಣೆಯ ಮಸ್ಸಾಜ್ : ಮಂಡಿನೋವು ಬರದಂತೆ ತಡೆಯಲು ಮತ್ತು ಇರುವ ನೋವು ಹೆಚ್ಚಾಗದಂತೆ ನೋಡಿಕೊಳ್ಳಲು ನಿತ್ಯವೂ ಎಣ್ಣೆಯ ಮಸ್ಸಾಜ್ ಅನ್ನು ಮಾಡಲೇಬೇಕು. ಆಯುರ್ವೇದದಲ್ಲಿ ನಿತ್ಯವೂ ಎಣ್ಣೆಯ ಮಸ್ಸಾಜ್ ಮಾಡುವುದರಿಂದ ವಾತರೋಗಗಳು ಬರುವುದಿಲ್ಲ ಎಂದಿದ್ದಾರೆ. ಮೂಳೆ ಸವಕಳಿಯೂ ಕೂಡಾ ವಾತರೋಗವೇ. ಹಾಗಾಗಿ ಶುದ್ಧವಾದ ಎಣ್ಣೆಯಿಂದ ಮಸ್ಸಾಜ್ ಮಾಡಿಕೊಂಡು ಶಾಖ ತೆಗೆದುಕೊಳ್ಳಬೇಕು. ಶಾಖಕ್ಕೆ ಬಿಸಿನೀರನ್ನು ಸುರಿಯುವುದು, ಬಿಸಿನೀರಿನ ಪಟ್ಟಿ ಇಡುವುದು, ಉಪ್ಪಿನ ಶಾಖ ಹೀಗೆ ಯಾವುದದರೂ ಒಂದು ವಿಧಾನವನ್ನು ಬಳಸಬಹುದು.

3.ವ್ಯಾಯಾಮಗಳು ಸಹಕಾರಿ: ಪ್ರಾರಂಭಿಕ ಹಂತದ ಮಂಡಿನೋವಿಗೆ ಅದಕ್ಕೆಂದೇ ಇರುವ ಕೆಲವು ವ್ಯಾಯಾಮಗಳು ತುಂಬಾ ಸಹಕಾರಿ. ಮಂಡಿಯ ಸವಕಳಿ ಜಾಸ್ತಿಯಾದ ನಂತರ ವಾಕಿಂಗ್ ಮಾಡುವುದು ಅಥವಾ ವೈದ್ಯರ ಸಲಹೆ ಇಲ್ಲದೇ ವ್ಯಾಯಾಮ ಮಾಡುವುದರಿಂದ ಸಮಸ್ಯೆ ಇನ್ನೂ ಉಲ್ಬಣಗೊಳ್ಳುತ್ತದೆ.

4. ಸಂಧಿ ಮುದ್ರೆ  ಅಭ್ಯಾಸ : ಸಂಧಿ ಮುದ್ರೆ ಎಂಬ ಮುದ್ರೆಯನ್ನು ದಿನಕ್ಕೆ ಕನಿಷ್ಠ ಅರ್ಧ ಗಂಟೆ ಅಭ್ಯಾಸ ಮಾಡುವುದರಿಂದ ಅನುಕೂಲವಾಗುವುದನ್ನು ಹಲವು ರೋಗಿಗಳಲ್ಲಿ ಕಾಣಬಹುದು. ಬಲಗೈಯಲ್ಲಿ ಹೆಬ್ಬೆರಳು ಮತ್ತು ಉಂಗುರ ಬೆರಳುಗಳ ತುದಿಗಳನ್ನು ಮತ್ತು ಎಡಗೈಯಲ್ಲಿ ಹೆಬ್ಬೆರಳು ಮತ್ತು ತೋರುಬೆರಳುಗಳ ತುದಿಗಳನ್ನು ತಾಗಿಸಿ ಉಳಿದ ಬೆರಳುಗಳನ್ನು ನೇರವಾಗಿ ಇಟ್ಟುಕೊಂಡಾಗ ಅದು ಸಂಧಿಮುದ್ರೆಯಾಗುತ್ತದೆ. ಈ ರೀತಿ ಕನಿಷ್ಠ ಹದಿನೈದು ನಿಮಿಷ ಇಟ್ಟುಕೊಂಡು ಮತ್ತೆ ಹದಿನೈದು ನಿಮಿಷ ವಿರುದ್ದವಾಗಿ ಅಂದರೆ ಎಡಗೈಯಲ್ಲಿ ಹೇಳಿದಂತೆ ಬಲಗೈಯಲ್ಲಿ ಮತ್ತು ಬಲಗೈಲಿ ಹೇಳಿದಂತೆ ಎಡಗೈಲಿ ಮುದ್ರೆ ಮಾಡಬೇಕು.

5. ಎಕ್ಕೆ ಎಲೆ – ಲಕ್ಕಿಸೊಪ್ಪು : ಲಕ್ಕಿಸೊಪ್ಪನ್ನು ತಂದು ಉಗಿಯಲ್ಲಿ ಬೇಯಿಸಿ ಪೇಸ್ಟ್ ಮಾಡಿ ಅದನ್ನು ಬಿಸಿ ಮಾಡಿ ಮಸ್ಸಾಜ್ ಮಾಡಿದ ಮಂಡಿಗೆ ಹಚ್ಚುವುದರಿಂದ ಮೊಣಕಾಲಿನ ಶಕ್ತಿ ಹೆಚ್ಚುತ್ತದೆ. ನೋವು ಹೆಚ್ಚಿದ್ದಾಗ ಎಣ್ಣೆ ಹಚ್ಚಿದ ನಂತರ ಎಕ್ಕೆ ಎಲೆಯನ್ನು ಬಿಸಿ ಮಾಡಿ ಅದನ್ನು ಮಂಡಿಯ ಮೇಲೆ ಇಟ್ಟು ಶಾಖ ಕೊಡುವುದರಿಂದ ನೋವು ಬೇಗ ಕಡಿಮೆಯಾಗಲು ಸಹಾಯವಾಗುತ್ತದೆ.

ಆದರೂ ಒಂದು ಹಂತ ದಾಟಿದ ನಂತರ ಮನೆಮದ್ದುಗಳು, ವ್ಯಾಯಾಮಗಳಿಂದ ಮಂಡಿನೋವು ಕಡಿಮೆಯಾಗಲು ಸಾಧ್ಯವಿಲ್ಲ. ಜಾನುಬಸ್ತಿ, ಪ್ರಕೃತಿ ಚಿಕಿತ್ಸೆ, ಫಿಸಿಯೋಥೆರಪಿ, ಪಂಚಕರ್ಮ ಚಿಕಿತ್ಸೆಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಹೀಗೆ ಮಂಡಿನೋವಿಗೆ ನೋವಿನ ಮಾತ್ರೆಗಳ ಮೂಲಕ ನೋವನ್ನು ತಾತ್ಕಾಲಿಕ ಶಮನ ಮಾಡಿಕೊಳ್ಳದೇ ಆಹಾರ, ವ್ಯಾಯಾಮ, ಚಿಕಿತ್ಸೆಗಳ ಮೂಲಕ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು.

Dr-Venkatramana-Hegde-nisargamane
ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!